ವಡ್ಡರ್ಸೆ ರಘುರಾಮಶೆಟ್ಟಿ ಅವರ ‘ಬಹುರೂಪಿ ಅರಸು’-ನೇರ ಅನುಸಂಧಾನ

ವಡ್ಡರ್ಸೆ ರಘುರಾಮಶೆಟ್ಟಿ ಅವರ ‘ಬಹುರೂಪಿ ಅರಸು’-ನೇರ ಅನುಸಂಧಾನ

ಒತ್ತಾಸೆ : ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮತ್ತು ಬಳ್ಳಾರಿಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಇದೇ ವರ್ಷ ಆಗಸ್ಟ್ ತಿಂಗಳಿನಲ್ಲಿ ಹೂವಿನ ಹಡಗಲಿಯಲ್ಲಿ ವ್ಯವಸ್ಥೆ ಮಾಡಿದ್ದ ‘ಜನತೆಯತ್ತ ಕನ್ನಡ’ ಕಾರ್ಯಕ್ರಮದ ಭಾಗವಾಗಿ ಇದ್ದ ವಿಚಾರಗೋಷ್ಠಿಯೊಂದರಲ್ಲಿ ಮಂಡಿಸಿದ ವಿಚಾರಗಳನ್ನೊಳಗೊಂಡ ಲೇಖನವಿದು.

ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಡಿ. ದೇವರಾಜು ಅರಸು ಅವರದು ಅನೇಕ ಕಾರಣಗಳಿಂದ ಮರೆಯಲಾಗದ ಹೆಸರಾಗಿದೆ. ಅವುಗಳಲ್ಲಿ ಮುಖ್ಯವಾದ ಎರಡು ಕಾರಣಗಳೆಂದರೆ: ಮೊದಲನೆಯದು, ಭೂಸುಧಾರಣ ಕಾಯಿದೆಯನ್ನು ಇಡೀ ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ಕರ್ನಾಟಕದಲ್ಲಿ ಸಮರ್ಥವಾಗಿ ಜಾರಿ ಮಾಡುವ ಮೂಲಕ ಸಾವಿರಾರು ವರ್ಷಗಳಿಂದ ಬೆವರಿನ ಮೂಲಕ ಮಾತ್ರ ಭೂಮಿಯೊಂದಿಗೆ ಸಂಬಂಧವನ್ನಿರಿಸಿಕೊಂಡಿದ್ದ ಬೃಹತ್ ರೈತ ಸಮುದಾಯಕ್ಕೆ ಅದೇ ಭೂಮಿಯೊಂದಿಗೆ ಗೇಣಿಯ ಹಕ್ಕನ್ನು ಕಲ್ಪಿಸಿಕೊಟ್ಟದ್ದು. ಎರಡನೆಯದು, ರಾಜಕೀಯ ಮತ್ತು ಔದ್ಯೋಗಿಕ ವಲಯಗಳಲ್ಲಿ ಪ್ರಧಾನ ಸ್ತರದಿಂದ ದೂರವೇ ಉಳಿದಿದ್ದ ದೊಡ್ಡ ಸಂಖ್ಯೆಯ ಹಿಂದುಳಿದ ವರ್ಗವನ್ನು ಸಾಮಾಜಿಕ ನ್ಯಾಯ ಕಲ್ಪನೆಯ ಮೂಲಕ ಗುರುತರವಾಗಿಸುವ ಹಾವನೂರ್ ಆಯೋಗವನ್ನು ರಚಿಸಿ, ಅದರ ವರದಿಯನ್ನು ಜಾರಿ ಮಾಡಿದ್ದು. ಇವುಗಳಲ್ಲಿ ಮೊದಲನೆಯದು ಉಳುವವನೇ ಭೂಮಿಯ ಒಡೆಯ ಎಂಬ ಗಾಂಧಿ ಕಂಡ ಕನಸಿನ ಸಾಕಾರವಾದರೆ, ಮತ್ತೊಂದು ಸಹ ಅವರದ್ದೇ ಆದ ಸರ್ವೋದಯ ಮತ್ತು ಸಮನ್ವಯ ತತ್ವಕ್ಕೆ ಒಡ್ಡಿದ ಕ್ರಿಯಾ ರೂಪವಾಗುತ್ತದೆ. ಹೀಗೆ ಗಾಂಧಿಜಿಯವರ ಎರಡು ತಾತ್ವಿಕ ಸಂಗತಿಗಳು ಕರ್ನಾಟಕದ ಸಂದರ್ಭದಲ್ಲಿ ಅರಸು ರೂಪದಲ್ಲಿ ಕಾರ್ಯೋನ್ಮುಖಗೊಂಡವು ಎಂಬುದು ನನ್ನ ಭಾವನೆ. ಇವು ಜಾರಿಯಾದ ೭೦ರ ದಶಕವು ಕರ್ನಾಟಕದ ಇತಿಹಾಸದಲ್ಲಿ ಸಂಕ್ರಮಣ ಕಾಲ ಎಂಬುದನ್ನು ಇಲ್ಲಿ ಜ್ಞೆಪಿಸಿಕೊಳ್ಳಬೇಕು.

ಅರಸು ಅವರು ಮೂಲಭೂತವಾಗಿ ಚಿಂತನಶೀಲ ಮನಸ್ಸನ್ನುಳ್ಳವರು. ಇದಕ್ಕೆ ಹಿನ್ನೆಲೆಯಾಗಿ ಅವರ ನಿರಂತರವಾದ ಓದಿನ ಪರಿಶ್ರಮ ಮತ್ತು ಅದರಿಂದ ಕುಡಿಯೊಡೆದ ದರ್ಶನ ಪ್ರಜ್ಞೆ ಇದೆ. ಇದರಿಂದ ಭಾರತದ ಅದರಲ್ಲೂ ಮುಖ್ಯವಾಗಿ ಕರ್ನಾಟಕದ ಸಮಾಜಿಕ, ರಾಜಕೀಯ, ಆರ್ಥಿಕ ಸನ್ನಿವೇಶಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಯಿತು. ಇದರ ಮೂಲದಲ್ಲಿ ಮೂಡಿದ ಕನಸುಗಳು ವಾಸ್ತವದಲ್ಲಿ ನನಸಾಗುವುದು ಸುಲಭ ಸಾಧ್ಯವಲ್ಲ ಎಂಬ ಗ್ರಹಿಕೆಯೂ ಅವರಿಗಿದ್ದಿತು. ಅದ್ದರಿಂದಲೇ ಅವರ ಮುಖ್ಯ ಕನಸುಗಳು ಸಾಕಾರಗೊಳ್ಳಲು ಕನಿಷ್ಠ ಮುಖ್ಯಮಂತ್ರಿಯ ಸ್ಥಾನದ ಬಲವನ್ನು ಅಪೇಕ್ಷಿಸಿದವು. ಕಾಂಗ್ರೆಸ್ಸಿನ ಹೈಕಮಾಂಡ್ ರಾಜಕೀಯದಿಂದ ಮಾತ್ರ ಅದು ಸಾಧ್ಯವಾಯಿತು. ಆನಂತರದಲ್ಲಿ ಭ್ರಷ್ಟಾಚಾರ ಮೊದಲಾದ ಹಲವು ಸಾಮಾನ್ಯ ಆರೋಪಗಳ ನಡುವೆಯೂ ಅರಸು ಮಹತ್ತರ ಸಾಧನೆಯನ್ನು ಮಾಡಿದರು. ಅದು ಅವರ ಮಿತಿಗಳನ್ನು ಗೌಣಗೊಳಿಸಿತು. ಇದು ಅರಸು ಬದುಕಿನ ಸೂಜಿಗಲ್ಲು. ಈ ಕೇಂದ್ರ ಪ್ರಜ್ಞೆಯೇ ವಡ್ಡರ್ಸೆ ರಘುರಾಮಶೆಟ್ಟರಿಂದ ‘ಬಹುರೂಪಿ ಅರಸು’ ಎಂಬ ವಿವರಣಾತ್ಮಕ ಹಾಗೂ ವಿಶ್ಲೇಷಣಾತ್ಮಕ ಕೃತಿಯನ್ನಾಗಿಸಿದೆ.

ವಡ್ಡರ್ಸೆ ಅವರು ತತ್ವನಿಷ್ಠ ಪತ್ರಕರ್ತರಾಗಿದ್ದಾರೆ. ಆದ್ದರಿಂದಲೇ ಅವರ ಜೀವನದಲ್ಲಿ ಸಲ್ಲದ ವಿಚಾರಗಳಿಗೆ ರಾಜಿ ದೂರವಾಗಿ ಹಲವು ಏಳುಬೀಳುಗಳು ಸಂಭವಿಸಿರುವುದು. ಈ ನಡುವೆಯೂ ಅವರ ಲೇಖನಿಯ ಉತ್ಸಾಹ ಕುಗ್ಗಿಲ್ಲವೆಂಬುದನ್ನು ಗಮನಿಸಬೇಕಾಗಿದೆ. ಈ ನಿಟ್ಟಿನಲ್ಲಿ ಚಲನಶೀಲವಾಗಿ ಸಾಗಿರುವ ವಡ್ಡರ್ಸೆ ಅವರಿಂದ ಈಗಾಗಲೇ ಜಾಫರ್ ಶರೀಫರಿಗೆ ಸಂಬಂಧಿಸಿದ ಕೃತಿಯೂ ಜನ್ಮ ತಾಳಿದೆ.

ಸಾಮಾನ್ಯವಾಗಿ ಹಿರಿಯ ವ್ಯಕ್ತಿಗಳನ್ನು ಕುರಿತು ಮಾತನಾಡುವಾಗ ‘ಗುಣಗಾನ’ದ ಎಲ್ಲೆಯನ್ನು ಮುಟ್ಟುವ ಸಂಭವವಿರುತ್ತದೆ. ಆದರೆ ಅದರ ಬಗೆಗಿನ ಸಂಯಮ ಇಲ್ಲಿ ಜಾಗೃತವಾಗಿದೆ. ಇದು ವಡ್ಡರ್ಸೆ ಅವರ ಶೈಲಿಯೂ ಹೌದು. ಇದಕ್ಕೆ ಪೂರಕವಾಗಿಯೇ ಅರಸು ಅವರ ‘ಇತಿ’ಗಳನ್ನು ಗಮನಾರ್ಹವಾಗಿ ಚರ್ಚಿಸುತ್ತಲೇ ‘ಮಿತಿ’ಗಳನ್ನು ಸಹ ನಿಷ್ಠುರವಾಗಿ ವಿಶ್ಲೇಷಿಸುತ್ತಾರೆ. ಆದ್ದರಿಂದಲೇ ಸಹೃದಯರ ಆರೋಗ್ಯಕರ ಓದು ಇಲ್ಲಿ ಬದುಕುಳಿಯುತ್ತದೆ.

ವಾಸ್ತವವಾಗಿ ಇದು ಅರಸು ಅವರನ್ನು ಕುರಿತ ಹಲವು ಲೇಖನಗಳ ಗುಚ್ಫ. ಇವುಗಳಲ್ಲಿ ಕೆಲವು ಲೇಖನಗಳು ವಿಭಿನ್ನ ಸಂದರ್ಭಗಳಲ್ಲಿ ಪ್ರತ್ಯೇಕವಾಗಿ ರೂಪುಗೊಂಡು ಆನಂತರದಲ್ಲಿ ಕ್ರಮವಾದ ನಿರೂಪಣಾ ಕ್ರಮಕ್ಕೆ ಸೇರಿವೆ. ಇದಕ್ಕೆ ಪೋಷಕವಾಗಿ ಅರಸು ಅವರಿಗೆ ಸಮೀಪದವರಾದ ಚದುರಂಗ ಮತ್ತು ಆರ್.ಎಂ. ದೇಸಾಯಿ ಅವರ ಸಂದರ್ಶನಗಳು ಚೆನ್ನಾಗಿ ದುಡಿದಿವೆ. ಉಳಿದಂತೆ ಲೇಖಕರ ಕಣ್ಣಿನ ಕ್ಯಾಮರಾವೇ ಅರಸು ಅವರನ್ನು ಚಿಕಿತ್ಸಕವಾಗಿ ದಿಗ್ದರ್ಶಿಸುತ್ತಾ ಸಾಗುತ್ತದೆ.

ಈ ಹಿನ್ನೆಲೆಯಲ್ಲಿ ಮೂಡಿರುವ ಪ್ರಸ್ತುತ ಕೃತಿಯ ಕೇಂದ್ರ ಅರಸು ಅವರು; ನಿಜ. ಆದರೆ ಅದೇ ಅಂತಿಮವಲ್ಲ. ವಾಸ್ತವವಾಗಿ ಹಾಗೆ ಆಗುವುದೂ ಸಾಧ್ಯವಿಲ್ಲ. ಆದ್ದರಿಂದಲೆ ಅವರ ಜೀವನ ವೃತ್ತಾಂತದ ನೆಪದಲ್ಲಿ ಕರ್ನಾಟಕದ ಮೂವತ್ತು ವರ್ಷಗಳ ರಾಜಕೀಯ ಇತಿಹಾಸ, ಅದರ ಒಳಗೆ ನಿಜಲಿಂಗಪ್ಪ, ವೀರೇಂದ್ರ ಪಾಟೀಲ್, ಗುಂಡೂರಾವ್ ಅವರೇ ಅಲ್ಲದೆ ಸಂಸ್ಥಾ ಕಾಂಗ್ರೆಸ್, ಇಂದಿರಾ ಕಾಂಗ್ರೆಸ್, ಪ್ರಜಾ ಸೋಷಲಿಸ್ಟ್ ಪಾರ್ಟಿ ಮೊದಲಾದ ಅನೇಕ ರಾಜಕೀಯ ಘಟನೆ-ವಿಘಟನೆಗಳ ಗಂಭಿರ ಚರ್ಚೆ ಸುದೀರ್ಘವಾಗಿ ಇಲ್ಲಿ ತಳುಕು ಹಾಕಿಕೊಳ್ಳುವುದು. ಈ ಮೂಲಕ ಪ್ರಸ್ತುತ ಕೃತಿಗೆ ಕರ್ನಾಟಕದ ಸಾಮಾಜಿಕ, ರಾಜಕೀಯ, ಆರ್ಥಿಕ ಮೊದಲಾದ ಬಹುಶಿಸ್ತೀಯ ಆಯಾಮಗಳು ಪ್ರಾಪ್ತವಾಗುತ್ತವೆ.

ಹೀಗೆ ಪ್ರತೀ ಹಂತದಲ್ಲಿ ಕುತೂಹಲವನ್ನು ಉಳಿಸಿಕೊಂಡು ಕಾದಂಬರಿಯಂತೆ ಓದಿಸಿಕೊಂಡು ಹೋಗುವ ‘ಬಹುರೂಪಿ ಅರಸು’ ಕರ್ನಾಟಕದ ಒಂದು ನಿರ್ದಿಷ್ಟ ಕಾಲದ ಜೊತೆಗೆ ಗಂಭಿರವಾದ ಸಂಧಾನವನ್ನು ಏರ್ಪಡಿಸುತ್ತದೆ. ಇದರ ನಡುವೆಯೇ ಚರಿತ್ರೆ ಮತ್ತು ವರ್ತಮಾನವನ್ನು ಓದಿನ ಅಕ್ಷರವನ್ನಾಗಿಸುವಲ್ಲಿ ಯಶಸ್ಸನ್ನು ಪಡೆಯುತ್ತದೆ.
*****
ಬಹುಜನ ಕನ್ನಡಿಗರು, ೧೬-೨೮ ಫೆಬ್ರವರಿ ೨೦೦೧

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕಂಡೆ
Next post ಬಾಯಾರಿದೆ ಹೃದಯ

ಸಣ್ಣ ಕತೆ

 • ಸಾವಿಗೊಂದು ಸ್ಮಾರಕ

  ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

 • ಹೃದಯ ವೀಣೆ ಮಿಡಿಯೆ….

  ಒಂದು ವಾರದಿಂದಲೇ ಮನೆಯಲ್ಲಿ ತಯಾರಿ ನಡೆದಿತ್ತು. ತಂಗಿಯನ್ನು ನೋಡಲು ಬೆಂಗಳೂರಿನಿಂದ ವರ ಬರುವವನಿದ್ದ. ಗೋಪಿ ಅವಳನ್ನು ಆ ವರನ ಹೆಸರೆತ್ತಿ ಚುಡಾಯಿಸುತ್ತಿದ್ದ, ರೇಗಿಸುತ್ತಿದ್ದ. ಅವಳ ಕೆನ್ನೆ ಕೆಂಪಗೆ… Read more…

 • ಅಪರೂಪದ ಬಾಂಧವ್ಯ

  ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…

 • ಲೋಕೋಪಕಾರ!

  ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

 • ಕರಿಗಾಲಿನ ಗಿರಿರಾಯರು

  ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…