“ಮನೆಗೆ ಮಾತ್ರ ಕಿಟಕಿ ಇದೆ
ನಮಗೆ ಕಿಟಕಿ ಇಲ್ಲ”
“ನಮಗೂ ಕೂಡ ಕಿಟಕಿ ಇದೆ
ನಿನಗದು ತಿಳಿದಿಲ್ಲ”
“ನಮಗೆ ಕಿಟಕಿ ಎಲ್ಲಿ ಇದೆ?”
“ಮನಸಿನಾಳದಲ್ಲಿ,
ನೋಡಲಿಕ್ಕೆ ಬರದ ಹಾಗೆ
ಎದೆಯ ಗೂಡಿನಲ್ಲಿ”
“ಮನೆಗೆ ಕಿಟಕಿ ಯಾಕೆ ಬೇಕು”?
“ಗಾಳಿ ಬೆಳಕು ಬರಲು
ಕತ್ತಲೆಲ್ಲ ಹೋಗಿ ಒಳಗೆ
ಒಳ್ಳೆ ಗಾಳಿ ತರಲು”
“ನಮಗೆ ಕಿಟಕಿ ಯಾಕೆ ಬೇಕು?”
“ಸ್ನೇಹ ಪ್ರೀತಿ ಬರಲು.
ಕೆಟ್ಟ ಆಸೆ ಸೇರಿ ಮನಸು
ಕೊಳೆಯದಂತೆ ಇರಲು”.
*****
ಲಕ್ಷ್ಮೀನಾರಾಯಣ ಭಟ್ಟರು ಕನ್ನಡ ಕಾವ್ಯದ ಜೀವಂತಿಕೆಯನ್ನು ಹೆಚ್ಚಿಸುತ್ತ ಆಧುನಿಕ ಕನ್ನಡ ಕಾವ್ಯವನ್ನು ಬೆಳೆಸುತ್ತ ಬಂದಿರುವ ಪ್ರಮುಖ ಕವಿಗಳಲ್ಲಿ ಒಬ್ಬರು. ಅವರ ಅನುವಾದಗಳು ಕನ್ನಡ ಕಾವ್ಯಕ್ಕೆ ಕೊಟ್ಟ ಬೆಲೆಬಾಳುವ ಉಡುಗೊರೆಗಳು ಮಾತ್ರವಾಗಿರದೆ ಸ್ವಂತಕ್ಕೆ ಪಡೆದ ರಕ್ತದಾನವೂ ಆಗಿದೆ. ಸ್ವಂತ ಪ್ರತಿಭೆ, ಶ್ರೇಷ್ಠಕವಿಗಳ ಆಪ್ತ ಅಧ್ಯಯನ ಎರಡೂ ಅವರನ್ನೂ ಎತ್ತರಕ್ಕೆ ಹತ್ತಿಸಿವೆ. ಅಧ್ಯಯನ, ಚಿಂತನೆ ಇವು ಅವರಲ್ಲಿ ಹಾಸು ಹೊಕ್ಕಾಗಿ ಒಂದನ್ನು ಮತ್ತೊಂದು ಬಲಗೊಳಿಸುತ್ತ ಬಂದಿವೆ.