ಅಪ್ಪ ಅಪ್ಪ ನಿನ್ನ ನಾನು
ಡ್ಯಾಡಿ ಅನ್ನೋಲ್ಲ,
ಅಪ್ಪ ಅಂತ್ಲೇ ನಿನ್ನ ಕರೆದರೆ
ಚೆನ್ನಾಗಿರೊಲ್ವ?
ಮಮ್ಮಿ ಅಂದ್ರೆ ಏನೋ ಕಮ್ಮಿ
ಅಮ್ಮಾ ಅನ್ಲಾಮ್ಮ?
ಅಮ್ಮ ಅಂದ್ರೆ ಜಾಮೂನ್ ತಿಂದ್ಹಾಂಗ್
ಇರತ್ತೆ ಕಣಮ್ಮಾ!
ಅಜ್ಜೀ ಅಂದ್ರೆ ಅಜ್ಜೀಗ್ ಖುಷಿ
ಪುಟ್ಟಾ! ಅಂತಾಳೆ
ಗ್ರ್ಯಾನೀ ಅಂದ್ರೆ ಸೌಟನ್ ಎತ್ಕೊಂಡ್
ಹೊಡಿಯೋಕ್ ಬರ್ತಾಳೆ!
ಅಪ್ಪ ಅಮ್ಮ ಅಜ್ಜೀ ತಾತ
ಮಾಮ, ಚಿಕ್ಕಮ್ಮ
ಕನ್ನಡ ಹೆಸರು ಎಷ್ಟೊಂದ್ ಚಂದ!
ಎಷ್ಟೊಂದ್ ರುಚಿಯಮ್ಮ!
*****
ಲಕ್ಷ್ಮೀನಾರಾಯಣ ಭಟ್ಟರು ಕನ್ನಡ ಕಾವ್ಯದ ಜೀವಂತಿಕೆಯನ್ನು ಹೆಚ್ಚಿಸುತ್ತ ಆಧುನಿಕ ಕನ್ನಡ ಕಾವ್ಯವನ್ನು ಬೆಳೆಸುತ್ತ ಬಂದಿರುವ ಪ್ರಮುಖ ಕವಿಗಳಲ್ಲಿ ಒಬ್ಬರು. ಅವರ ಅನುವಾದಗಳು ಕನ್ನಡ ಕಾವ್ಯಕ್ಕೆ ಕೊಟ್ಟ ಬೆಲೆಬಾಳುವ ಉಡುಗೊರೆಗಳು ಮಾತ್ರವಾಗಿರದೆ ಸ್ವಂತಕ್ಕೆ ಪಡೆದ ರಕ್ತದಾನವೂ ಆಗಿದೆ. ಸ್ವಂತ ಪ್ರತಿಭೆ, ಶ್ರೇಷ್ಠಕವಿಗಳ ಆಪ್ತ ಅಧ್ಯಯನ ಎರಡೂ ಅವರನ್ನೂ ಎತ್ತರಕ್ಕೆ ಹತ್ತಿಸಿವೆ. ಅಧ್ಯಯನ, ಚಿಂತನೆ ಇವು ಅವರಲ್ಲಿ ಹಾಸು ಹೊಕ್ಕಾಗಿ ಒಂದನ್ನು ಮತ್ತೊಂದು ಬಲಗೊಳಿಸುತ್ತ ಬಂದಿವೆ.