ಖೇಣಿಯ ನೈಸ್ ರಸ್ತೆ ಅಂಬೋದು ಅದೇಟು ನ್ನೆಸಾಗೈತೆ ಅಂದ್ರೆ ಅದ್ರಾಗೆ ನಡ್ಡಾಡಿದ್ರೆ ಜಾರಿ ಬೀಳ್ತಿವೇನೋ ಅನ್ನಂಗಾಗೇತ್ರಿ. ಖುದ್ ಗೋಡ್ರೇ ಡೀಲಿಗೆ ನಿಂತು ಶುರು ಹಚ್ಕಂಡ ನೈಸ್ ಯಾಪಾರ. ಬಡ ರೈತರ ಭೂಮಿ ಅನ್ಯಾಯವಾಗಿ ಲೂಟಿ ಆಗ್ಲಿಕ್ಕೆ ನಾ ಬಿಡಾಕಿಲ್ಲ. ಸರ್ಕಾರ ಬಲಿಕೂಡಲಿಕ್ಕೂ ರೆಡಿ ಅಂತ ಅದೇ ಗೋಡ್ರೆ ಗುಟುರು ಹಾಕ್ಲಿಕತ್ತಾರೆ. ಹದಿನೈದು ದಿನದಾಗೆ ಮಿಕ್ಸೆಡ್ ಸರ್ಕಾರಕ್ಕೆ ಆಪತ್ತು ಬಂದು ಚಾಪೆ ಸುತ್ಕೊಂಡು ಹೋತದೆ ಅಂತ ಸ್ವಯಂ ಸಿ‌ಎಂ ಕುಮಾರಸ್ವಾಮಿಯೇ ಸಿಂಬ್ಳ ಸೀಟ್ಲಿ ಕತ್ತಾರೆ. ಕೊಮಾರನೆಂಬ ಹುಂಬ ನೈಸ್ ಕಂಪ್ನಿತಾವ ರಫ್ ಅಂಡ್ ಟಫ್ ಅಗಿ, ಯೋಜನೇನ ವಶಕ್ಕೆ ತಗಾತೀನಿ ಅಂತಾನೆ. ಅಡಿಶನಲ್ ಜಮೀನು ಕಸ್ಕೊಂಡು
ಹರಾಜ್ ಹಾಕ್ಲಿಕ್ಕೆ ತಯಾರಾಗಿ ಕೋಟಿ ಕೋಟಿಗಳ ಡ್ರೀಮ್ ಕಾಣೋವಾಗ್ಲೆ ಜಿಗರಿ ದೋಸ್ತು ಯಡೂರಿ ಸೆಂಟ್ರಲ್ ನಾಯಕರ ಪ್ರೆಶರ್ಗೆ ಬಲಿಯಾಗಿ ದನಿ ಬದಲಿಸಿ ಯೋಜನೆ ವಶಕ್ಕೆ ತಗೊಂಬಾದು ಬ್ಯಾಡ ಕುಮ್ಮಿ. ಜಮೀನು ಕಸ್ಕೊಂಡು ಹರಾಜ್ ಹಾಕೋದು ಬ್ಯಾಡ ರೈತಾಪಿಗಳಿಗೇ ವಾಪಸ್ ಕೊಟ್ಟು ಬಿಡೋಂವಾ ಅಂತ ಉಲ್ಟಾ ಹೋಡಿಬೇಕೆ! ಮಧ್ಯೆ ನಂದೆಲ್ಲಿ ಇಡ್ಲಿ ಅಂತ ಬಿಜೆಪಿ ಹೆಡ್ ಸದಾನಂದಗೋಡ ‘ಈ ಗೌಡಪ್ಪಂಗೆ ಹೆಡ್ಡೇಯಿಲ್ಲ. ಹೆಡ್ ಇಲ್ದೋರ ಮಾತಿಗೆ ನಂತಾವ ಬೆಲೇನೇ ಇಲ್ಲ’ ಅಂತ ಗುಡುಗಿದ್ಲರಿಂದಾಗಿ ಯಡೂರಿಗೀಗ ಯೂರಿನರಿ ಟ್ರಾಕ್ ಇನ್‍ಫೆಕ್ಶನ್ ಆದಂಗಾಗೇತಿ. ಗೋಡ್ರಿಗೋ ಗ್ಯಾಸ್ಟ್ರಿಕ್ಕು. ಮೆಡಿಸನ್‍ಗಾಗಿ ಡೆಲ್ಲಿಗೆ ದೌಡಿದರೂ ದಮ್ಡಿ ಉಪೇಗಾಗಿಲ್ಲ. ಇದೆಲ್ಲದರ ನಡುವೆ ನವೀಕರಣಗೊಂಡ ‘ಅನುಗ್ರಹ’ಕ್ಕೆ ಗೋಸಾಮಿ ರಾಗವೇಸ್ವರನ ಜೊತೆ ಗುಜರಾತ್ ಮೂಲದ ಗೀರ್ ಗೋವಿನ ಸಮೇತ ರೈಟ್‍ಲೆಗ್ ಇಟ್ಟ ಕುಮಾರ, ‘ಇನ್ನಾರ ಶನೇಶ್ವರನನ್ನ ಬಿಟ್ಟು ಬಿಡಣ್ಣ’ ಅಂತ ಬ್ರಾಂಬ್ರಾತಾವ ಹೋಮ ಮಾಡ್ಸಿ ಏನೆಲ್ಲಾ ಬೆಂಕಿಗ್ಹಾಕಿ ಸುಟ್ಟರೂ ಬಿಡದೆ ಬಿ‌ಎಂಐಸಿ ಯೋಜನೆ ಕುಮಾರನ್ನ ಸುಡ್ಲಿಕತ್ತದೆ. ಸುಪ್ರೀಮ್ ಕೋಲ್ಟು ಯಾವಾಗ ಸರ್ಕಾರದ ಕೆನ್ನೆಗೆ ಬಾರಿಸಿ ಪರಪಸ್ ಫುಲ್ಲಾಗಿ ಯೋಜನೆಗೆ ಅಡ್ಡಗಾಲು ಹಾಕಿದ್ರೆ ಕಾಲೆಕಟ್ ಮಾಡ್ತೀವ್ನಿ ಅಂತ ಅವಾಜ್ ಹಾಕ್ತೋ ಗೋಡ್ರು ಬ್ಯಾರೆನೇ ಸ್ಕೆಚ್ ಹಾಕ್ತಾ ಅವರೆ. ಮಗನ ೪೬ ಎಕರೆ ಭೂಮಿ ಉಳಿಸೋ ಕಸರತ್ತು ಮಾಡ್ಲಿಕತ್ತಾರೆ. ಸಾಕಲದ್ದಕ್ಕೆ ಸರ್ಕಾರ ನೀಡಿದ ಜುಜುಬಿ ಐದು ಲಕ್ಷ ರೂಪಾಯಿನ ಚೆಕ್ ಬೌನ್ಸ್ ಆಗಿ ಹಾರಿ ಬಂದು ಖೇಣಿ ಜೇಬ್ನಾಗೆ ಬಿದ್ದದೆ. ‘ಅಯ್ಯಾ ಡಿಡಿನೇ ತಗೋ, ಅದು ಬ್ಯಾಂಕಿನೋರ ಪೊರ ಪಾಟು’ ಅಂತ ಪಿಡಬ್ಲ್ಯುನೋರು ಬಾಯಿ ಬಡ್ಕೊಂಡ್ರೂ ಚೆಕ್ ಮರು ಪಾವತಿಸದ ಖೇಣಿ ಒಳಗೇ ನಗಲಿಕತ್ಯಾನೆ. ನೈಸ್ ರಸ್ತೆಯ ಉದ್ಘಾಟನೆಗೆ ಸರ್ಕಾರ ಅನುಮತಿ ನಿರಾಕರಿಸಿದರೂ ಅಂದುಕೊಂಡ ದಿನ, ಅದೇ ಟೇಮಿಗೇ ವೆರಿ ವೆರಿ ನೈಸಾಗಿ ನೈಸ್ ರಸ್ತೆನಾ ಪುಟಾಣಿ ಮಕ್ಕಳಿಗೆ ಐಸ್ ಕೊಡ್ಸಿ ಉದ್ಘಾಟನೆ ಮಾಡಿದ ಖೇಣಿಗೆ ಅದಿನ್ನಷ್ಟು ಕೊಲಾಸ್ಟ್ರಲ್ ಇದ್ದೀತೆಂದು ಸ್ಯಾಸಕರೇ ದಿಗ್ಭ್ರಾಂತರಾಗವರೆ. ಜನಪರ ಜಾತ್ರೆ ನೆಡ್ಸಿ ಬಂದೋರಿಗೆ ಪ್ಯಾಕೇಟ್ ಮೀಲ್ ಕೊಟ್ಟ ಬಡ ರೈತಾಪಿ ಮಂದಿಗೆ ಬೇಕಾದಂಗೆ ರಸ್ತೆ ಈಸ್ಕೂಲು ನೋಕ್ರಿ ಎಲ್ಲಾ ಕೊಡಿಸ್ತೀನಿ ಅಂತ ಅಸ್ವಾಸ್ನೇನೂ ಕೊಟ್ಟವ್ನೆ. ಈ ಡರ್ಟಿ ಸಮಾರಂಭಕ್ಕೆ ಯವಾನ್ರಿ ಹೋಗ್ತಾನೆ? ತಲೆ ಕೆಟ್ಟೋರು ಹೋಗಬೇಕಷ್ಟೆಯಾ ಎಂದು ಯಡ್ಡಿ ಸಿಡಿಮಿಡಿಗೊಂಡಾಗಲೆ ಹೋಗಿದ್ದು ಕಾಂಗೈನ ಡಿಕೆಶಿ. ಆತನ ತಲೆ ಸರಿಯಿಲ್ಲವೆಂತ ಭಾವಿಸಬೇಕೋ? ಅಥವಾ ಮಾಬೆರ್ಕಿತನ ಮಾಡಿ ರೈತರ ಮತ್ತು ಖೇಣಿ ನಡುವೆ ಫ್ರೆಂಡ್ಲಿ ಫೆವಿಕಾಲ್ ಹಾಕಿ ತನ್ನ ಈ ಸ್ಕೂಲು ಮಕ್ಕಳ್ತಾವೆ ಟೇಪ್ ಕಟ್ ಮಾಡ್ಸಿ ರಸ್ತೆ ಓಪನಿಂಗ್ ಸರ್ಮನಿ ಮಾಡಿಸಿದ ಡಿಕೆಶಿನ ಮಾತೆಲಿವಾನ ಅನ್ನಬೇಕೋ ತಿಳೀವಲ್ದಂಗಾಗೇತ್ರಿ.

ದೋಸ್ತಿ ಸರ್ಕಾರದ ಸೊಂಟ ಮುರಿಲಿಕ್ಕೆ ಸುಪ್ರೀಂ ಕೋಲ್ಟದು ಮೊದಲ ಪೆಟ್ಟಾದ್ರೆ ಉಲ್ಟಾ ಹೊಡಿತಿರೋ ಬಿಜೆಪಿದು ಎಲ್ಡನೇ ಪೆಟ್ಟು. ಚೆಕ್ ಬೌನ್ಸ್ ಆಗಿದ್ದು ಮೂರನೇ ಪೆಟ್ಟು, ಜೊತೆಗೆ ಡಿಕೆಶಿ ಉದ್ದಾಟನೆಗೆ ಕೈ ಇಕ್ಕಿ ಖೇಣಿ ಮುಖದ ಮ್ಯಾಗೆ ಜಯದ ನಗೆ ಮೂಡಿಸಿದ್ದು ಮತ್ತೊಂದು ಪೆಟ್ಟು. ಲಾಸ್ಟು ಪೆಟ್ಟು ನಂದೇ ಅಂತ ಖುದ್ ಗೋಡ್ರೆ ಸರ್ಕಾರ ಬೊಡ್ಡೆಗೇ ಕೈ ಹಾಕೋವಾಗ ‘ಹರ ಕೊಲ್ಲಲ್ ಪರ ಕಾಯ್ವನೆ ಹರಹರ ಹರದನಳ್ಳಿ ಗೋಡೇಸ್ವರ’ ಅಂಬಂಗಾಗೇತ್ರಿ. ಪುಟಗೋಸಿ ಒಂಬತ್ತು ಕಿಲೋಮೀಟರ್ ರೋಡ್ಗೆ ಈಪಾಟಿ ರಂಪಾಟ ಮಾಡಿಕ್ಯಂಡ್ರೆ ಕಂಪ್ಲೀಟ್ ರೋಡ್ ಆಗೋದ್ರಾಗೆ ಯಾರ ತೆಲಿ ಯಾರ ಕೈನಾಗೋ ಹೇಳಲಿಕ್ಕೆ ಬರಂಗಿಲ್ರಿ.

ಇಂಥ ಟೀಮಿನಾಗೆ ಸಿಡಿಲಾಗಬೇಕಿದ್ದ ಕಾಂಗೈ ಧಡಿಯ ಖರ್ಗೆ ದಬರಿ ಮೋರೆ ಧರ್ಮು ಸಮ ಫೈಟ್ ಕೊಡ್ಡೆ ಅಡ್ಡಾದಿಡ್ಡಿ ಮಾತಾಡ್ತಾ ಅಬ್ಬೆಪಾರಿಗಳಂತೆ ನಟಸಲಿ ಕತ್ತಾರೆ. ಕಾಂಗೈ ಸೀನಿಯಾರಿಟಿಗೆ ಸೂಟಬಲ್ ಆದ ನಾಯಕತ್ವ ಇಲ್ಲವೇ ಇಲ್ಲ ಅಂಬೋದೀಗ ಬಟಾ ಬಯಲಾಗೇತಿ. ಸಿ‌ಎಂ ಕೊಮಾರನೋ ಬಿಗಿನಿಂಗ್ ನಾಗೆ ಡೀಸೆಂಟಾಗಿ ಮಾತಾಡ್ತಿದ್ದೋನು ಒಂದೇ ದಪ ರೇಗಿಕೊಳ್ಳಲಿಕತ್ತಾನೆ. ‘ನನಗೇ ಲಂಚ ಕೂಡ್ಲಿಕ್ ಬಂದಿದ್ದರು ಕಣ್ರಿ. ನಾನೋ ಸತ್ಯ ಹರಿಶ್ಚಂದ್ರನ ತುಕ್ಡಾ. ಲೆಫ್ಟ್ ಹ್ಯಾಂಡ್ನಾಗೂ ‘ಟಚ್’ ಮಾಡಲಿಲ್ಲ ಅಂತೆಲ್ಲಾ ಎಡಬನಂಗೆ ಆಡಿದ ಮಾತಿನ ಎಳೆ ಹಿಡ್ಕೊಂಡು ಗದ್ದಲ ಮಾಡಿ ಅಧಿವೇಶನಕ್ಕೆ ಅಡ್ಡಗಾಲು ಹಾಕವ್ರೆ ಕಾಂಗೈ ಧಡಿಯರು. ‘ಲಂಚದ ಆಸೆ ತೋರಿಸ್ದೋನು ಯಾರು ಹೆಸರಾರ ಹೇಳ್ರಲಾ? ನಿಮ್ಮ ಟ್ರಾಕ್ ರಿಕಾರ್ಡ್ ನೆಟ್ಟಗೆ ಇದ್ದಿದ್ರೆ ಅಂವಾರಾ ಯಾಕ್ರಿ ಈ ಪಾಟಿ ಧೈರ್ಯ ಮಾಡ್ಯಾನು? ಮೆಟ್ರೋ ಯೋಚ್ನೆಗೂ ಮೂತಿ ಸೊಟ್ಟ ಮಾಡಿದ ನಿಮ್ಮ ಗೌಡಪ್ಪ  ಯಾವ ಡೆವಲಪ್ಮೆಂಟಿಗೊವೆ ಬಿಡವಲ್ಲನಲ್ರಿ. ಈಗೋರಿ ಕುಮಾರ್ಸಾಮಿ, ಬಿಜೆಪಿನೋರು ನೈಸ್ ಕಂಪ್ನಿ ಸಫೋಲ್ಪಿಗೆ ನಿಂತಾರೆ ಅಂದ್ರೆ ಅದಕ್ಕೆ ಇತರೆ ಕಾರಣಗಳವೆ ಅಂದಾರೆ ನಿಮ್ಮ ಫಾದರ್ರು.

ಅದ್ಯಾವ ಕಾರಣ ಅದ್ನಾರ ಬಾಯಿಬಿಡ್ರಲಾ ಎಂದು ದಬರಿ ಧರ್ಮು ಅಧೀದೇಶನ್ದಾಗೆ ಕೊಮಾರನ ‘ನಡ’ ಮುರಿಲಿಕತ್ತಾರೆ. ಎಕ್ಸಾಟ್ರಾ ಭೂಮಿನೆಲ್ಲಾ ಈಗ ವಶಕ್ಕೆ ತಗೊಂಡ್ರೆ ಲಕ್ಷ ಭಾಳ್ತಿದ್ದ ಅದೇ ನೆಲ ಕೋಟಿಗೆ ಬಾಳ್ತದೆ ಮುಂದಿನ ಯಲಕ್ಷನ್ಗೆ ಹಿಡಿಗಂಟಾಯ್ತದೆ ಅನ್ನೋ ಗೋಡ್ರ ಪಿಲಾನ್ ಅರಿ ದೋಟು ಗುಲ್ಡಗಳಲ್ರಿ ನಾವು ಅಂತ ಕಾಂಗೈನೋರು ಸೇರಿ ಗುರಾಯಿಸ್ಲಿಕತ್ತಾರೆ. ‘ಸರ್ಕಾರ ಬಿದ್ರೆ ಬಿದ್ದು ಹೋತು, ಯಲಕ್ಷನ್ ಎದುರ್ಸೋಣ. ಈ ಗೋಡ ಅಂಡ್ ಹಿಸ್ ಸನ್ ಎಲ್ಲಿಗಯ್ಯ ಹೋಯ್ತಾರೆ ಯಡೊರಿ? ಕತ್ತೆ ಸತ್ತರೆ ಹಾಳು ಗೋಡೆ ನಮ್ತಾವೆ ಗಿರ್ಕಿ ಹೊಡಿಬೇಕು. ಕಾಂಗ್ರೆಸ್ನೋರು ಇವರನ್ನ ಕಡೆಗಣ್ಣಾಗೂ ನೋಡಾಕಿಲ್ಲ. ಇನ್ನು ಎಬಿಪಿಜೆಡಿ ಸಿದ್ದು ಪಾಲಿಗೆ ಇವರು ಅನ್ ಟಚಬಲ್ಸು ಎಂದು ಗಂಡಸಿನಂತೆ ಪ್ರಥಮ ಬಾರಿಗೆ ಬಿಜೆಪಿ ಮುದುಕರೂ ಗುರಾಯಿಸ್ತಾ ಅವರೆ! ಗೋಡ್ರ ಸ್ಕೆಚ್‍ಗೇ ಕೇರೇ ಮಾಡದೆ ಬಿಜೆಪಿನೇ ಉಲ್ಟಾಪಟ್ಲಾ ಸಿತಾರಾಮ್ ಅಗಿದ್ದು ಕಂಡು ಮಿಕ್ಸಡ್ ಸರ್ಕಾರ ಎಲ್ಲಿ ಅವಧಿ ಮಧ್ಯೆನೇ ಗೋತಾ ಹೊಡಿತದೋ ಅಂಬೋ ಎದೆಗುದಿ ಸ್ಯಾಸಕರೆಲ್ಲರ ಎದೆಯ ತಿದಿ ಒತ್ತಲಿಕತ್ತದೆ. ನೀವು ನಂಬಿ ಬಿಡಿ ಸ್ವಾಮಿ.

ಈ ಗೌಡಪ್ಪ ಒಂತರಾ ಮದ್ದುಹಾಕೋ ಹೆಂಗಸ್ರಿದಹಂಗೆ. ಯಾರೂ ಸಿಗ್ದೆ ಹೋದ್ರೆ ತಮ್ಮ ಮಕ್ಕಳಿಗೂ ಹಾಕೋಕೂ ಸೈ. ಸುಮ್ಮಗೆ ಕುಂಡ್ರಗಿಲ. ತಾನೇ ಹಠಕ್ಕೆ ಬಿದ್ದು ಮಗನ ಸಿ‌ಎಂ ಪಟ್ಟಕ್ಕೆ ತಂದ ಗೋಡ್ರೇ ಎಲ್ಲೀಗ ಸ್ಟೋರಿ ಎಂಡ್ ಮಾಡಿ ಗೋರಿ ತೋಡ್ತಾರೋ ಸರ್ಕಾರದ ಉಳಿವಿಗಾಗಿ ರಾಜಿ ಆಗ್ತಾರೋ ಕಾದು ನೋಡಿದ್ರಾತು ಬಿಡ್ರಿ.
*****
( ದಿ. ೦೬-೦೭-೨೦೦೬)