Home / ಕವನ / ಕವಿತೆ / ಗುಬ್ಬಚ್ಚಿ ಅಂದರೇನಮ್ಮ

ಗುಬ್ಬಚ್ಚಿ ಅಂದರೇನಮ್ಮ

ಪಾಪ ! ಅವು ಸುಸ್ತಾಗಿಯೇ ಹಾರುತ್ತಿದ್ದರೂ
ಮುದ್ದಾಗಿಯೇ ಕಾಣುವ ಹಕ್ಕಿಗಳು
ತೀರ ಇತ್ತೀಚೆಗೆ ಒಮ್ಮಿಂದೊಮ್ಮೆಲೆ
ಎಲ್ಲಿಯೋ ಹೋಗಿಬಿಟ್ಟವು.

ಎಲ್ಲೆಲ್ಲೂ ಬೋರು ಹೊಡೆದ ಪುರಾವೆಗಳು
ನೆಲದೊಡಲಾಳಕ್ಕಿಳಿದವು ಕೆರೆ ಒರತೆಗಳ ನೀರು
ಪ್ರೀತಿ ಸ್ಪರ್ಷಿವಿಲ್ಲದ ಮೋಡ
ತುಂಬ ಮೌನ, ಜಡ ಹೆಳವನವತಾರ
ಎಲ್ಲಿಗೋ ಹೋಗಿಬಿಡಬೇಕೆನ್ನುವ
ನಿರಾಸೆಯಿರಬೇಕವಕೆ ನೋಡು ನೋಡುತ್ತಿದ್ದಂತೆಯೇ
ಪಾಪ ! ಅವು ಎಲ್ಲಿಯೋ ಹೋಗಿಬಿಟ್ಟವು

ಹುಲ್ಲಿನೆಸಳಿಲ್ಲ ಗೂಡಿಗೆ
ಗಿಡಪೊಟರೆ ಏನೆಲ್ಲ ಬುಲ್‌ಡೋಜರಿಸಿದ್ದಾಯಿತು
ಮುಗಿಲೆತ್ತರೆತ್ತರಕೆ ಏರುವ ಮನೆಗಳು
ರೆಕ್ಕೆ ಮುದುರಿ ಉಲಿ‌ಅಡಗಿತೇನೊ
ಹಿತ್ತಲಿಗೆ ಕೇರಿ ತೂರಿದ ಕಾಳುಗಳೂ ಕಾಣಿಸದೆ
ಪಾಪ ! ಅವು ಎಲ್ಲಿಗೋ ಹೋಗಿಬಿಟ್ಟವು

ಗುಬ್ಬಚ್ಚಿ ಅಂದರೇನಮ್ಮ ಹಾರುತ್ತವೆ ಹೇಗೆ –
ಬಾ ಕಂದ ತೋರಿಸುವೆನು –
ಕೆಂಪನೆಯ ಆಕಾಶದಂಚಿನಲಿ
ಸೂರ್ಯ ಇಳಿಯುವ ಹೊತ್ತು
ಹಕ್ಕಿ ಮರಳಿ ಮನೆಗೆ ಹೋಗಲೇಬೇಕು

ಸೂರ್ಯ ಮುಳುಗಿದ ಹಕ್ಕಿಗಳು ಕಾಣಲಿಲ್ಲ
ಪಾಪ ! ಅವು ಎಲ್ಲಿಯೋ ಹೋಗಿಬಿಟ್ಟವು
ಏನೆಂದು ಹೇಳುವುದು ಕಂದನಿಗೆ
ಅದು ಹೇಗೆಂದು ತಿಳಿಸುವುದು

ತಂದಿದ್ದೇವೆ
ರಸೆಲ್ ಮಾರುಕಟ್ಟೆಯ
ರೆಕ್ಕೆ ಕಿತ್ತಿಸಿಕೊಂಡ ಗುಬ್ಬಚ್ಚಿಗಳ
ಆಕಾಶದಲ್ಲಿ ಹಾರಲೂ ಇಲ್ಲ
ನೆಲದೆದೆಗೆ ಕುಣಿದು ಕುಪ್ಪಳಿಸಲೂ ಇಲ್ಲ
ಪಾಪ ! ಇವು ಎಲ್ಲಿ ಹೋಗಬೇಕಿನ್ನು
ಕಾಪಾಡುವುದೊಂದೇ ಕೊನೆ ಹಾವು ಬೆಕ್ಕಿನಿಂದ

ಪಂಜರ ಹಾಕದೆ ಮನೆಯೊಳಗೆ ಬಿಟ್ಟಿದೆ
ಪುಟ್ಟನೊಡನೆ ಪುಟಾಣಿಗಳಾಗಿ
ಮನೆತುಂಬ ಮನತುಂಬ ಅಷ್ಟಿಷ್ಟು
ಹಾರಾಡಿ ಕುಪ್ಪಳಿಸಿ ಆಗೀಗ
ಏನೇನೋ ಹೇಳುತಿವೆ
*****
ಪುಸ್ತಕ: ಇರುವಿಕೆ

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...