ತಾರೆ ತೇಲಿ ಬರುವ ರೀತಿ
ತೀರ ಇರದ ಬಾನಿಗೆ
ತೇಲಿ ಬಂದೆ ನೀನು ನನ್ನ
ಮೇರೆ ಇರದ ಪ್ರೀತಿಗೆ

ನಲ್ಲೆ ನಿನ್ನ ಬೆಳಕಿನಲ್ಲಿ
ಬಿಚ್ಚಿ ತನ್ನ ದಳಗಳ
ನಲಿಯಿತಲ್ಲೆ ಜೀವ ಹೇಗೆ
ಸುತ್ತ ಚೆಲ್ಲಿ ಪರಿಮಳ!

ಒಲಿದರೇನು ಜೀವ ಎರಡು
ಮುನಿಯಿತಲ್ಲೆ ಲೋಕವೇ!
ಕುಲುಮೆಯಾಯ್ತು ಉರಿವ ಬಾಳು
ಪ್ರೇಮ ಎಂಥ ಶಾಪವೆ?

ನಾನು ಇಲ್ಲಿ ನೀ ಅದೆಲ್ಲಿ?
ನಡುವೆ ಕುದಿವ ಸಾಗರ,
ನಮ್ಮ ಬಾಳ ಸೀಳಿ ಎಸೆದ
ಲೋಕ ಏನು ಭೀಕರ!
*****

ಪುಸ್ತಕ: ನಿನಗಾಗೇ ಈ ಹಾಡುಗಳು

Latest posts by ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್ (see all)