ಪತ್ರ ೩

ಪತ್ರ ೩

ಪ್ರೀತಿಯ ಗೆಳೆಯಾ,

ಈ ದಿನ ನಾಗರಪಂಚಮಿ. ನಮ್ಮೂರ ಎಲ್ಲಾ ಬೇವಿನ ಮರದ ಬಡ್ಡಿಗೆ ದಪ್ಪದ ಹುರಿಹಗ್ಗ ಕಟ್ಟಿ ಜೋಕಾಲಿ ಕಟ್ಟಿದ್ದಾರೆ. ರಸ್ತೆಯ ಉದ್ದ ಅಗಲಕ್ಕೂ ಹೆಂಗಸರು ಸೀರೆಯನ್ನು ಕಚ್ಚೆ ಹಾಕಿ ಬಿಗಿದು, ಜುರ್ ಬುರ್ ಅಂತ ಜೋಕಾಲಿ ಜೀಕುವಾಗ ಅವರ ನಿರಾಳತೆ, ಕಸು ಕಂಡು ನನಗೆ ಹೊಟ್ಟೆ ಉರಿದರೆ, ನಮ್ಮೂರಿನ ಆರ್ಯವೇದ ಕಲಿಯಲು ಬಂದ ಯು. ಪಿ. ಎಮ್. ಪಿ. ಹುಡುಗರು ಕರ್ನಾಟಕ ಮಹಿಳಾ ಬಹುತ ಸ್ಟ್ರಾಂಗ್ ಹೈಂ ಅಂತ ಮಾತನಾಡುತ್ತಿದ್ದರು. ಈ ಮಣ್ಣಿನ ಕಸುವೇ ಅಂತಹದು. ಬರೀ ಬ್ರೆಡ್ ಜಾಮ್ ತಿಂದು ಕುಕ್ಕರ ಬಡಿದು ಟಿ. ವಿ. ಮುಂದೆ ಕುಳಿತ ಹೆಣ್ಣು ಮಕ್ಕಳಿಗೆ ಅದರಲ್ಲೂ ನಿಮ್ಮ ಬೆಂಗಳೂರು ಹೆಣ್ಣು ಮಕ್ಕಳಿಗೆ ಈ ಶ್ರಾವಣದ ರಂಗಿನ ಗುಂಗು ಹೇಗೆ ತಿಳಿದೀತು ಗೆಳೆಯಾ? ನನಗೆ ನನ್ನ ಬಾಲ್ಯ ನಾನು ಆಡಿದ ಆಟ, ಓಡಿದ ಓಟ, ಲಾಂಗ ಜಂಪ್ ಹೈಜಂಪ್ ಎಲ್ಲವೂ ಒಮ್ಮೆಲೇ ಎದೆಮೇಲೆ ಕುಳಿತು ಗುದ್ದು ಕೊಟ್ಟ ಹಾಗೆ ಆಗುತ್ತದೆ. ನೀನು ಈಗ ನನ್ನ ಆಮೆಯ ನಡುಗೆ ಕಂಡು ಖಂಡಿತ ನಂಬಲಾರೆ. ನಾನು ಪ್ರಾಥಮಿಕ ಮಾಧ್ಯಮಿಕ ಶಾಲೆಗಳಲ್ಲಿ, ಎಲ್ಲಾ ಓಟ, ಎಲ್ಲಾ ಜಂಪ್ಗಳು ಖೋಖೋ ಕಬಡ್ಡಿ ಎಲ್ಲದರಲ್ಲೂ ಜಿಲ್ಲೆ ಮಟ್ಟದ ಪ್ರಶಸ್ತಿಗಳಿಸಿದವಳು. ಸತತ ಆರು ವರ್ಷ ನಾನು ಹೈಜಂಪ್ನಲ್ಲಿ ಲಾಂಗ ಜಂಪ್ನಲ್ಲಿ ಜಿಲ್ಲೆಗೆ ಪ್ರಥಮ. ತೀರ ಬಡತನದಲ್ಲೂ ನನಗೆ ಓಡುವ ಆಡುವ ಚಟ. ಅದು ಬದುಕಿಗೆ ಉಲ್ಲಾಸ, ಉಮೇದ ಕೊಡುತ್ತಿತ್ತು. ಹೊಟ್ಟೆ ಹಸಿದು ಕಳವಳವಾದರೂ ಬೆಳ್ಳಿ ಬಣ್ಣದ ಕಪ್ಪುಗಳನ್ನು ಎದೆಗೆ ಅವಚಿಕೊಂಡಾಗ ಇಡೀ ಜಗತನ್ನೇ ಗೆದ್ದ ಹಾಗೆ ಅನಿಸುತ್ತಿತ್ತು. ಒಂದು ಚಿಕ್ಕ ಕೋಣೆಯ ಜಂತಿಯ ಮೇಲೆ ನಾನು ದಿಗ್ ವಿಜಯದ ಹೊಳೆಯುವ ಕಪ್ಪುಗಳನ್ನು ಇರಿಸಿ ಕನಸುಗಳ ಮೂಟೆ ಕಟ್ಟುತ್ತಿದೆ. ಈ ದಿನ ಆ ಜೋಕಾಲಿ ಜೀಕುವರನ್ನು ಅವರ ಉಲ್ಲಾಸವನ್ನು, ಒಂದರ್ಧ ಗಂಟೆ ನಿಂತು ನೋಡುವ ಶಕ್ತಿಯು ನನ್ನ ಕಾಲುಗಳಿಗಿಲ್ಲ. ಯಾಕೆ ಹೀಗೆ ಕಾಲುಗಳು, ಬದುಕುಗಳು, ಒಜ್ಜೆಯಾದವೋ ತಿಳಿಯದು.

ಶ್ರಾವಣದ ದಿನಗಳಲ್ಲಿ ನೀನು ಸಂಪ್ರದಾಯದ ಅಡುಗೆ ಮನೆ ನೋಡಬೇಕು, ಎಷ್ಟೊಂದು ಹಿತ. ಎಂತಹ ಪರಿಮಳ, ಸಾರಿಸಿದ ಒಲೆಯ ಮುಂದೆ ಸಣ್ಣ ರಂಗೋಲಿ, ಅಡುಗೆ ಮನೆಯ ಜಂತಿಯ ಮೇಲೆ ತೂಗು ಹಾಕಿದ ಕೋಲುಗಳಿಗೆ ಹಾಸಿದ ಮಡಿ ಸೀರೆ ವಸ್ತ್ರಗಳು, ‘ಫಳಫಳ ಹೊಳೆಯುವ ಕಂಚು ತಾಮ್ರದ ತಂಬಿಗೆ, ನೀಲಾಂಜನಗಳು, ಪಂಚಮಯಿಂದ ಶುರುವಾದ ಹಬ್ಬಗಳು ಚೌತಿ ಗಣಪತಿ, ನವರಾತ್ರಿ ಘಟ್ಟ, ದೀಪಾವಳಿ ಸರಮಾಲೆ ಪ್ರಾರಂಭವಾಗುತ್ತದೆ. ನನಗೇಕೋ ಹಬ್ಬಗಳೆಂದರೆ ಬಹಳ ಪ್ರೀತಿ. ಅಲ್ಲಿ ಒಂದುಗೂಡುವಿಕೆ ಇದೆ. ಅಮ್ಮನ ಕೈಬಳೆಗಳ ಸದ್ದು ರಿಂಗಣಿಸುತ್ತದೆ. ಹಬ್ಬಗಳು ಚೈತನ್ಯ ಹುಟ್ಟಿಸುತ್ತದೆ. ಮತ್ತೆ ಹೊಸ ಊಟ, ಹೊಸ ಕೂಟ, ಹೊಸ ನೋಟ. ಈ ಬದುಕಿನಲ್ಲಿ, ಮತ್ತೆ ಬಯಲೊಳಗೆ, ಜಗದ ಪರಿವರ್ತನೆಯ ನಿಯಮಗಳು, ನಮ್ಮ ರೂಢಿ ಸಂಪ್ರದಾಯಗಳಲ್ಲಿ, ಹೇಗೆ ಒಂದಾಗುವ ನಮ್ಮ ಪೂರ್ವಜರು ಹಬ್ಬಗಳ ಆಚರಣೆ ಅನುಷ್ಠಾನಕ್ಕೆ ತಂದರಲ್ಲ! ಈಗಿನವರಿಗೆ ಹಬ್ಬಗಳ ಆಚರಣೆ ಬೇಡವೇ ಬೇಡ. ಯಾವುದಾದರೂ ಫೈವಸ್ಟಾರ್ ಹೋಟೆಲಲ್ಲಿ ಒಂದಿಷ್ಟು ತಿಂದು ಬಂದರಾಯ್ತು. ದೋಸ್ತ ನನಗೆ ಆರತಿ ಮಾಡಿಸಿಕೊಳ್ಳಲು ಬಹಳ ಇಷ್ಟ. ಈ ಐವತ್ತು ವರ್ಷ ಒಂದೂ ಆರತಿ ಇಲ್ಲದೇ ಬದುಕು ಬರಡಾಯ್ತು. ತಾಯಿ ಸತ್ತ ಮಕ್ಕಳ ಒಡಲಲ್ಲಿ ಸಂಭ್ರಮ ಹಣಕಿ ಹಾಕುವದಿಲ್ಲ ಏನೋ. ಎಣ್ಣೆ ಸ್ನಾನ ಅರಸಿನ ಚಂದನ ಪೂತಿಸಿ, ಜಡೆತುಂಬ ಮುಡಿತುಂಬ ಹೂವು ಏರಿಸಿಕೊಂಡು ಆಭರಣಗಳ ಅಲಂಕರಿಸಿಕೊಂಡು ಒಳ್ಳೆಯ ಜರಿಸೀರೆ ಉಟ್ಟು ಗಂಭೀರವಾಗಿ ಹಾಡುವರ ಮಧ್ಯೆ ಆರತಿ! ಹಬ್ಬಗಳು! ಯಾವುದೂ ಇಲ್ಲದೇ ಹಾಗೆ ಗೂಟುಗಲ್ಲುಗಳಂತೆ ನಿರ್ಭಾವುಕ, ನಿಶ್ಚಿಂತೆಯಿಂದ ಸರಿದು ಹೋಗುತ್ತವೆ, ನೀನು ಹೆಣ್ಣಾಗಿ ಇರಬೇಕಿತ್ತು. ಆಗ ನಿನಗೆ ತಿಳಿಯುತ್ತಿತ್ತು. ನನ್ನ ಈ ಸುಕೋಮಲ ಭಾವನೆಗಳ ಕಂಪು!

ಮನುಷ್ಯನ ಆರೋಗ್ಯವನ್ನು ಕಾಪಾಡುವ, ಆರಾಮವನ್ನು ಹೆಚ್ಚಿಸುವ, ಬೌದ್ದಿಕತೆ ವಿಸ್ತರಿಸುವ ಪರಂಪರೆ, ಭಾಷೆ, ಶಿಕ್ಷಣ, ಸಾಹಿತ್ಯ ಹೆಚ್ಚು ಅಮೂಲ್ಯವಾದದ್ದು ಎಂಬುದು ನನ್ನ ವಿಚಾರ. ಇದಕ್ಕಾಗಿ ನಮ್ಮ ಸಂಪ್ರದಾಯದಲ್ಲಿ ಬೇರೂರಿರುವ ನಮ್ಮತನದ ಆದ್ರತೆ ಉಳಿಸಿಕೊಳ್ಳಬೇಕು. ಮತ್ತೆ ನಮ್ಮ ಆಧುನಿಕತೆಯ ವರ್ತನೆ, ಹವ್ಯಾಸ, ಉದ್ಯೋಗಗಳಿಂದ ನಮ್ಮ ಮೂಲ ಬೇರುಗಳಿಗೆ, ದಕ್ಕೆ ಬರಬಾರದು. ನಮ್ಮ ಹಿಂದಿನವರ ಕಾಲ ಘಟ್ಟ ನನಗೆ ಅದ್ಭುತ ಎನಿಸುತ್ತದೆ. ಯಾವ ಸವಲತ್ತುಗಳಿಲ್ಲದೇ ಕೈ ತುಂಬ ಹಣ ಇಲ್ಲದೇ ಎಷ್ಟೊಂದು ಹಿತವಾಗಿದ್ದರು ಅವರು. ಎಷ್ಟೊಂದು ಉಲ್ಲಾಸ ನಗೆಗಳು ಮನೆಯ ಪಡಸಾಲೆಯಲ್ಲಿ ಅರಳುತ್ತಿದ್ದವು. ಶಾಲೆಬಿಟ್ಟು ಮನೆಗೆ ಮರಳಿ ಬಂದಾಗ ಎಷ್ಟೊಂದು ತಿಂಡಿ ತಿನಿಸುಗಳು. ಬಯಲಲ್ಲಿ ಮನೆಯ ಪಡಸಾಲೆಯಲ್ಲಿ ಅರಳುತ್ತಿದ್ದವು. ಬಯಲಲ್ಲಿ ಎಂತಹ ಆಟಗಳು. ಈಗಿನವರಿಗೆ ಕೈ ತುಂಬ ಸಂಬಳ ಟಿ.ವಿ. ಮೊಬೈಲ್ ಕಾರು ಬಂಗಲೆಗಳಿದ್ದು ದಿನಕ್ಕೊಂದು ಉಡುಗೆ ತೊಡುಗೆ, ಬೇಕಾದಾಗ ಹೋಟೆಲ್ಗಳ ರೆಡಿಮೇಡ ತಿಂಡಿಗಳು ಎಲ್ಲವೂ ಇದ್ದು, ವನವಾಸದಲ್ಲಿದ್ದ ಮಂಗಗಳಂತೆ ಮೋರೆ ಹ್ಯಾಪ ಹಾಕಿ ಮುಖಗಂಟು ಹಾಕಿ ಕೊಂಡೇ ಇರುತ್ತಾರೆ. ಬದುಕಿನ ಘಟ್ಟ ವೃತ್ತಿ ಪ್ರವೃತ್ತಿ ಹಿಡಿದುಕೊಂಡು ಮನೆಯ ಮುಂದಿನ ತೆಂಗಿನ ತೋಟದಲ್ಲಿ ಸುತ್ತಾಡುವ ತಂಪುಹಿತ ಈಗಿನ ಮಕ್ಕಳಿಗೆ ಇಲ್ಲ. ಮೇಲಾಗಿ ದೊಡ್ಡವರಿಗೂ
ಇಲ್ಲ ಎಂದು ಅನಿಸುತ್ತದೆ.

ಈದಿನ ಶ್ರಾವಣದ ಗೌರಿ ಕುಡಿಸಿದವರ ಒಬ್ಬರ ಮನೆಗೆ ಹೋಗಿದ್ದ. ಚೆಂದದ ಸೀರೆಗಳ ಮಂಟಪದಲ್ಲಿ ಕುಳಿತಗೌರಿ, ಹೊಸದಾಗಿ ಮದುವೆ ಆಗಿ ಇನ್ನೂ ಕಚುಗುಳಿಯ ಮೂಡಿನಲ್ಲಿರುವ ಆ ಓಣಿಯ ಎಲ್ಲಾ ಮದುವಣಗಿತ್ತಿಯರು, ಸಂಭ್ರಮದಿಂದ ಪೂಜೆ ಮಾಡಿ ಒಗಟು ಹೇಳಿ ಗಂಡನ ಹೆಸರು ಹೇಳಿ ಆರತಿ ಮಾಡಿ, ಬಾಳೆ ಎಲೆ ಮುಂದೆ ರಂಗೋಲಿ ಹೊಯ್ದು ಪೋಗಸ್ತಾಗಿ ಕಡುಬು, ಪೂರಿ, ಹೋಳಿಗೆ ಉಂಡರೀತಿ ನೋಡಿ ಖುಷಿಯಾದರೂ, ಈ ನಿರಾಳ ಮನಸ್ಸು ನನಗೇಕೆ ಇಲ್ಲ ಎಂಬ ಸಂಕಟ ಮೆಲ್ಲಗೆ ಒಳಗೊಳಗೆ ಕಾಡಿತು. ನಾನು ಹೀಗೊ ಬರೆದೆನೆಂದು ನೀನು ನನ್ನನ್ನು ತೀರ ಸಂಪ್ರದಾಯದವಳು ಅಂತ ತಿಳಿಯಬೇಡ. ಕಾಮೂಸಾರ್ತೆ, ಕಾಫ್ಕಾ, ಫ್ರೈಡ್‍ನನ್ನು ಡಿಗ್ರಿ ಓದುವಾಗಲೇ ಓದಿ ಆಧುನಿಕ ಯೋಚನೆ ಲಹರಿಯನ್ನು ರೂಢಿಸಿಕೊಂಡವಳು. ಒಮ್ಮೆ ತರ್ಕಕ್ಕೆ ಭಾವಕ್ಕೆ ತಾಳಮೇಳವೇ ಕೂಡುವುದಿಲ್ಲ. ಇದು ಮನಸ್ಸಿನ ಪ್ರಕ್ರಿಯೆ. ಬೆಳಿಗ್ಗೆ, ಎದ್ದಾಗಿನ ಮೂಡು ಸಂಜೆಯೊಳಗೆ ಬೇರೆಯದೇ ಲಹರಿಯಲ್ಲಿ ತೇಲುತ್ತದೆ. ಇಂದ್ರೀಯ, ಬಾಹ್ಯ ಸೌಂದರ್ಯಕ್ಕಿಂತ ಆತ್ಮದ ಸೌಂದರ್ಯ ಹೆಚ್ಚು. ಅದು ನಮ್ಮ ನಿಷ್ಕಪಟ ಪ್ರೀತಿ ಹಾಗೂ ಸ್ನೇಹದಲ್ಲಿ ಇರುತ್ತದೆ. ಇದೇನು ಪತ್ರ ಓದಿ ತಲೆ ಕರಕರ ಕೆರೆದು ಕೊಳ್ಳುವ ಹಾಗೆ ಆಯ್ತಾ? ನನ್ನ ಮನಸ್ಸಿನಲ್ಲಿ ಜೇಡನ ಬಲೆ ಹುಟ್ಟಿಕೊಂಡಿದೆ ಗೆಳೆಯಾ, ಅದು ಕಲಾತ್ಮಕವೂ ಹೌದು, ಕಿರಿಕಿರಿಯೂ ಹೌದು ಸಹಿಸಿಕೋ.

ಒಮ್ಮೊಮ್ಮೆ ತಂಗಿ ಹೇಳುತ್ತಾಳೆ. ಹೆಚ್ಚು ಕುದಿಯ ಬೇಡ, ನಿರ್ಲಿಪ್ತತೆಯನ್ನು ರೂಡಿಸಿಕೋ. ಐವತ್ತಾದ ನಂತರ ಪ್ರಜ್ಞೆಯನ್ನು ಹೆಚ್ಚಿಸಿಕೊಳ್ಳದಿದ್ದರೆ ನಾವು ಅರವತ್ತರ ಅಂಚು ಮುಟ್ಟುವುದು ಹೇಗೆ, ಚಿಂತನೆಗೆ ತೊಡಗಿಸಿಕೊಂಡು ಸೃಜನಶೀಲತೆ ಅಳವಡಿಸಿಕೊಳ್ಳದಿದ್ದರೆ, ಎಣಿಸಲು ಜಂತಿ ಇಲ್ಲದ, ಆರ್.ಸಿ.ಸಿ. ಮನೆಯ ಕೌನೆರಳು ದೆವ್ವವಾಗಿ ಕಾಡುತ್ತದೆ. ಒಲೆ ಸಾರಿಸಬೇಕು. ಅಂಗಳ ಸಾರಿಸಿ ರಂಗೋಲಿ ಇಡಬೇಕು, ಹಂಡೇತಿಕ್ಕಿ ನೀರು ತುಂಬಬೇಕು. ನಾಳೆಯ ನೀರೊಲೆಗೆ ಕಟ್ಟಿಗೆ ಕೂಡಬೇಕು, ರಾತ್ರಿ ಎಲ್ಲರಿಗೂ ಅಡುಗೆ ಮಾಡಬೇಕು. ಎಲ್ಲವೂ ಅಸಾಧ್ಯ ಈ ಕಾಂಕ್ರೀಟಿನ ಮನೆಯಲ್ಲಿ ಎಷ್ಟು ಚೂರು ಅಡುಗೆ ಮಾಡಿದರೂ ಪಾತ್ರೆಯಲ್ಲಿ ಉಳಿದೇ ಉಳಿಯುತ್ತದೆ. ಮತ್ತೆ ಪಾಯಸ ಸಿಹಿ ತಿಂಡಿ ಪಂಚಮಿಯ ಉಂಡಿ ಈ ಜನ್ಮದಲ್ಲಿ ತಿನ್ನಲು ಸಾಧ್ಯವಿಲ್ಲ. ಇದೆಂತಹ ಜೀವನ ಗೆಳೆಯಾ, ಕಂಪ್ಯೂಟರಿನ ಪರದೆ ಮೇಲೆ ಮೂಡಿಸಿದ ಅಕ್ಷರಗಳಲ್ಲಿ ಬರೀ ಭಯ ತುಂಬಿದ ಸುದ್ದಿಗಳು ತುಂಬಿರುತ್ತದೆ. ನಾನು ಹೊರಗಿನಿಂದ ಮನೆಯ ಒಳಗೆ ಬಂದ ಕ್ಷಣ ಈ ದಿನ ಅಂಚೆಯವನು ಒಂದು ಕಾಗದ ತಂದು ಹಾಕಿದ್ದನಾ ಎಂದು ನೋಡುತ್ತೇನೆ. ದೇಶಿ ಸಂಸ್ಕೃತಿಯನ್ನು ನಾಶಮಾಡುವ ಆಧುನಿಕತೆ, ಯಾವ ಉನ್ನತ ಬದುಕಿಗೆ ಅಧ್ಯನಕ್ಕೆ ಪ್ರೇರೇಪಿಸುವದಿಲ್ಲ. ಸಂಪ್ರದಾಯದ ಕಲಿಕೆಯ ಕ್ರಮಗಳನ್ನು ಜ್ಞಾನ ಮಾದರಿಯನ್ನು ನಾವು ನಾಶಮಾಡಿದರೆ, ನಮ್ಮ ಬದುಕು ಎಲ್ಲಾ ರೀತಿಯಲ್ಲೂ ವಿನಾಶಕಾರಿ ಆಗುತ್ತದೆ. ಸಂಪ್ರದಾಯಗಳನ್ನು ನಾವು ಗೌರವಿಸದಿದ್ದರೆ, ಒಂದು ನಾಗರೀಕತೆಯ ಆತ್ಮ ಶಕ್ತಿಸ್ಥೆರ್ಯವನ್ನು ನಾಶಮಾಡಿದಾಗ, ಅದರ ಜನ ಸಮುದಾಯ ಯಾವುದನ್ನೂ ಸಾಧಿಸದ ಯಾವುದಕ್ಕೂ ಬೇಡವಾಗಿ ನಿರ್ಜಿವಗಳಾಗುತ್ತಾರೆ ಎಂಬ ಸೂಕ್ಷ್ಮ ತಿಳುವಳಿಕೆ ಇಂದಿನ ಜನಾಂಗಕ್ಕೆ ಬೇಕು. ಸೃಜನಶೀಲ ಬದುಕಿಗೆ, ಚಿಂತನೆಗೆ, ಸಮೃದ್ಧ ಸಂಸ್ಕೃತಿಗೆ, ಸಂಕ್ರಮಣದ ವಿಚಾರಗಳು ನಮ್ಮಲ್ಲಿರಬೇಕು. ಯಾಕೆಂದರೆ ದ್ವಂದ್ವ ಮತ್ತು ವಿಪರ್ಯಾಸಗಳು ಆಧುನಿಕ ಜೀವನದ ಅವಿಭಾಜ್ಯ ಅಂಗಗಳಾಗಿವೆ.

ಯಾಕೋ ಗೆಳೆಯಾ ಬಂಡವಾಳಶಾಹಿಯ ಉಪಭೋಗವಾದ ನಮ್ಮ ಶಿಕ್ಷಣ ಕ್ಷೇತ್ರದಲ್ಲಿ ಸಾಮಾಜಿಕ ನ್ಯಾಯದಲ್ಲಿ ದೊಡ್ಡ ಕಂದಕಗಳನ್ನೇ ಹುಟ್ಟು ಹಾಕಿದೆ. ಜನರ ಮನಸ್ಸುಗಳು ಮಧ್ಯೆ, ಜೀವನಗಳ ಮಧ್ಯೆ, ವಿಪರೀತ ತಾರತಮ್ಯ ಬೆಳೆದಿದೆ. ಯಾಕೆಂದರೆ ಮನುಕುಲದ ಪ್ರಗತಿಗೆ ಬೇಕಾದ ಸಾಹಿತ್ಯ ವಿಜ್ಞಾನ, ಮಾನವಶಾಸ್ತ್ರ, ತತ್ವಶಾಸ್ತ್ರ ಜಾಗತಿಕ ಮಾರುಕಟ್ಟೆಗೆ ಬೇಕಾಗಿಲ್ಲ. ಜಾಗತೀಕರಣದ ನೆಪದಲ್ಲಿ ಮತ್ತೆ ವಸಹಾತುಶಾಹಿ ನಮ್ಮ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುತ್ತದೆ ಎಂಬ ಆತಂಕ. ಇಲ್ಲಿ ಬಡವರ, ರೈತರ, ಆದಿವಾಸಿಗಳು, ಪರಿಸರವಾದಿಗಳ, ಬದುಕುವ ಪ್ರಯತ್ನ ಒಂದು ದಿನ ಬಹಳ ದೊಡ್ಡ ಹೋರಾಟವಾಗಬಹುದು. ಗಣಿಸದೇ ಇದ್ದ ಜನಾಂಗ ಒಂದಲ್ಲ ಒಂದು ದಿನ ದಂಗೆಕೋರರಾಗಬಹುದು.

ವಿರೋಧಾಭ್ಯಾಸ ವಿಪರ್ಯಾಸಗಳು ಹುಟ್ಟು ಹಾಕುವ ದ್ವಂದ್ವ ಎಲ್ಲಾ ಪ್ರಜ್ಞಾವಂತರನ್ನು ಕಾಡುತ್ತದೆ. ಕಾಡಿಲ್ಲದೇ ನಾಡನನ್ನು ಹೇಗೆ ಕಲ್ಪಿಸುವದು. ಪ್ರಕೃತಿ ಕೊಟ್ಟ ಸಹಿತವನ್ನು ಬದುಕಿನ ಸುರಕ್ಷೆಯನ್ನು ಕಾಪಿಟ್ಟು ಕೊಳ್ಳುವುದು ಹೇಗೆ ದೋಸ್ತ? ನನ್ನ ತಲೆ ತಿನ್ನಬೇಡಿ ಅಂತ ಮಾತ್ರ ಹೇಳಬೇಡ, ಮತ್ತೊಬ್ಬರ ತಲೆಕೆಡಿಸುವುದೇ ಆಧುನಿಕ ಜಗತ್ತಿನಹೊಸತಂತ್ರ.

ಒಂದು ಶಕ್ತಿ ಹುಟ್ಟು ಬೇಕಾದರೆ ಧನಾತ್ಮಕ ಋಣಾತ್ಮಕ ಎಂಬ ಎರಡು ಶಕ್ತಿಗಳು ಬೇಕು. ಹಾಗೆ ಪ್ರೀತಿ ದ್ವೇಷದಲ್ಲಿ ಮತ್ತೆ ಏನಾದರೊಂದು ಹುಟ್ಟಿತು ನೋಡೋಣ. ಅದು ನಮ್ಮ ಅಸ್ತಿತ್ವವನ್ನು ಪರಿಗಣಿಸಿತ್ತು. ಏನೆಲ್ಲಾ ಕೊರೆದನೆಂದು ನೊಂದು ಕೊಳ್ಳಬೇಡ. ಮಗು ತಾಯಿಯ ಹತ್ತಿರ ಜಾಸ್ತಿ ಹಠ ಮಾಡುತ್ತದೆ ನಿನಗೆ ಗೊತ್ತಲ್ಲ.

ನಿನ್ನ,
ಕಸ್ತೂರಿ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ದೇವತೆಗಳನ್ನು ಕುರಿತು ಒಂದು ಹೋಂವರ್‍ಕ್ ಪದ್ಯ
Next post ಬರೆಯದ ಕವಿತೆಗಳು

ಸಣ್ಣ ಕತೆ

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…

  • ಸಿಹಿಸುದ್ದಿ

    ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…

  • ವ್ಯವಸ್ಥೆ

    ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು.… Read more…

  • ನಿಂಗನ ನಂಬಿಗೆ

    ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…