ಈ ಬಾರಿಯ ತಿರುವುಗಳಾ ಬಯಲಿನ ಹರಹುಗ-
ಳೀ ಹುಡುಗಿಯ ಹುಬ್ಬುಗಳಾ ಸಂಜೆಯ ಮಬ್ಬುಗ-
ಳಷ್ಟೆತ್ತರ ಬೆಟ್ವಗಳೀ ತೀರದ ತಗ್ಗುಗ-
ಳಿನ್ನಿಲ್ಲ ಸಂಜೆಗಳು

ಮತ್ತೀ ಬೆಳಕಿನ ಸುತ್ತಲ ಬೆತ್ತಲು
ಆ ಕಣಿವೆಯ ಕೆಳಗಿನ ಕತ್ತಲು
ಯಾವುದೊ ಕೋಟೆಯ ಸುತ್ತಲು
ಇನ್ನಾವುದೊ ಪ್ರತಿಮೆಯ ಕೆತ್ತಲು

ಯಾರಿಗು ಕೇಳದ ಧ್ವನಿಗಳ
ಯಾರಿಗು ಹೇಳದ ಭಯಗಳ
ಪ್ರೀತಿಗಳ-ಯಾರಿಗು ತಲುಪದ
ಮಾತಿಗು ಬರದ

ನನಗನಿಸಿತ್ತು
ಈ ಕ್ಷಣಗಳ ಹಿಡಿಯುವೆ
ನುಡಿಯೊಳಗಾರೂ ನುಡಿಯದ ತರ
ಪಡೆಯುವೆ-ಆದರೆ

ಓ ದೇವರೆ!
ಈ ಮಗ್ಗುಲ ಮೈಬಿಸಿ
ನೆಲ ಜಲ ಉಸಿರಾಟದ ಹೋರಾಟದ ಧಗೆ
ಬದುಕಿನ ಹಸಿ ಹಸಿ

ಕೇವಲ ಖುಷಿ
ಹಿಡಿಯಲಿ ಹೇಗೆ ?
ಸಂತಯಲಿದ್ದೇ ಖುಷಿಯಾಗುವ ಬಗೆ
ತಿಳಿಯಲಿ ಹೇಗೆ?
*****