Home / ಲೇಖನ / ಸಾಹಿತ್ಯ / ಎಮಿಲಿ ಡಿಕಿನ್ಸಸನ್ ಕವಿತೆಗಳು ಭಾಗ – ೨

ಎಮಿಲಿ ಡಿಕಿನ್ಸಸನ್ ಕವಿತೆಗಳು ಭಾಗ – ೨

ಅದೊಂದು ಸಾವಿನ ಮನೆ. ಜೀವವೊಂದು ಎದುಸಿರು ಬಿಡುತ್ತ ಕೊನೆಯ ಕ್ಷಣದ ಗಣನೆಯಲ್ಲಿದೆ. ಕೊನೆ ಕ್ಷಣದವರೆಗೂ ಬದುಕಿಗಾಗಿ ಆತ್ಮದ ಹೋರಾಟ ನಡೆದಿದೆ ಸಾವಿನ ಕೊನೆಯ ದೃಶ್ಯ ನೋಡಲು ಜನ ಸುತ್ತುವರೆದಿದ್ದಾರೆ. ಅಕ್ಷರಶಃ ಸ್ಥಂಭಿತರಾಗಿದ್ದಾರೆ. ಅಲ್ಲಿ ಹತಾಶೆ ಇದೆ. ಕ್ರಮೇಣ ಆತ್ಮ ಬಿಡುಗಡೆಗೆ ಸಿದ್ಧವಾಗಿದೆ. ಆದರೆ ಅದೇ ಕ್ಷಣ ನೊಣವೊಂದರ ಗುಂಯ್ಗುಡುವಿಕೆ ಸಾವನ್ನು ಅಂಗೀಕರಿಸಿದ ಆತ್ಮವನ್ನು ಗಲಿಬಿಲಿಗೊಳಿಸಿದೆ. ಮರಣ ಮಾರ್ಗದಲ್ಲಿ ಭಂಗ ಎಂದೆನ್ನಿಸಿದೆ. ಆದರದು ಸಾವಿನ ಮುನ್ನುಡಿ ಎಂದು ಅರಿಯಲಾಗಲಿಲ್ಲ. ಸಾವಿನ ದರ್ಶನಕ್ಕೆ ಆ ಜೀವ ಹಂಬಲಿಸಿತು. ಆದರೆ ಸಾವು ಬಂದಾಗ ಗ್ರಹಿಸಲಾಗಲಿಲ್ಲ. ಇದು ಸಾವಿನ ಚಮತ್ಕಾರ. ಅಗೋಚರ, ಅನಿರೀಕ್ಷಿತ ಆಗಂತುಕನೆಂದರೆ ಸಾವು. “ಐ ಹರ್ಡ್ ಎ ಫ್ಲಾಯ್ ಬಜ್ಜ್ ವ್ಹೆನ್ ಐ ಡೈಡ್” ಕವಿತೆಯಲ್ಲಿ ಸಾವಿನ ನೈಜ ಸಂಭವನೀಯತೆಗಳ ನಡುವೆಯೂ ಜೀವದ ನಿರೀಕ್ಷೆಗಳನ್ನು ಎಮಿಲಿ ವ್ಯಕ್ತಪಡಿಸಿದ್ದು ಹೀಗೆ.

ಸಾವಿನ ಬಾಗಿಲನ್ನು ತನ್ನ ಕವನಗಳ ಮೂಲಕ ತಟ್ಟಿ ತಟ್ಟಿ ಬಡಿದವಳು ಎಮಿಲಿ ಡಿಕಿನ್ಸಸನ್. ಸಾವು ಆಕೆಯನ್ನು ಕಾಡಿದಷ್ಟೂ ಬೇರಾವ ಸಂಗತಿಗಳು ಕಾಡಲಿಲ್ಲ. ಮರಣ ಶಯ್ಯೆಯಲ್ಲಿ ಆತ್ಮ ಹನಿ ಉಸಿರವರೆಗೂ ಬಡಿದಾಡುತ್ತದೆ. ಜೀವಂತವಿರೂವರೆಗೂ ಸಂಧಿಸಲಾಗದ ಸರದಾರ ಅವನು. ಸಂಧಿಸಿದಾಗ ನಾವೇ ಇರುವುದಿಲ್ಲ. ಸಾವು ಹತಾಶೆಯ ಸಂಕೇತ. ಒಂದರ್ಥದಲ್ಲಿ ಎಮಿಲಿಯ ಈ ಕವಿತೆ ಸಾವು ಬದುಕಿನ ಎಲ್ಲ ಒತ್ತಡಗಳಿಂದ ಮುಕ್ತಗೊಳಿಸಿ, ದಿವ್ಯ ಅಮರತ್ವದೆಡೆಗೆ, ಶಾಶ್ವತ ಆನಂದದೆಡೆಗೆ ಕೊಂಡೊಯ್ಯುತ್ತದೆ ಎಂಬ ಸಂಪ್ರದಾಯಸ್ಥ ಕ್ರೈಸ್ಥ ನಂಬಿಕೆಯನ್ನು, ಕಲ್ಪನೆಯನ್ನು ಅಣಕಿಸಿ ನಗುತ್ತವೆ.

ಸಾವನ್ನು ಎರಡು ಭಿನ್ನ ರೂಪಕಗಳಲ್ಲಿ ಹಿಡಿದಿಡುತ್ತಾಳೆ ಎಮಿಲಿ. ಒಂದು- ವಾಸ್ತವಿಕ ಸಂಗತಿಯಾಗಿ, ಬದುಕೇ ಸಾವಾಗಿ. ಇನ್ನೊಂದು- ಕಾಲ್ಪನಿಕ ಅನುಭವವಾಗಿ, ಬದುಕಿನ ಬಗ್ಗೆ ನಿರಾಕರಣದ ಸಂಕೇತವಾಗಿ. ಆಕೆಯ “ಬಿಕಾಜ್ ಐ ಕುಡ್ ನಾಟ್ ಸ್ಟಾಪ್ ಫಾರ್ ಡೆತ್” ಕವಿತೆ ಈ ಎರಡು ಕಲ್ಪನೆಗಳಿಗೆ ಸಾಕಾರವಾಗಿ ನಿಲ್ಲುತ್ತದೆ.

“ದಿ ಸೋಲ್ ಸೆಲೆಕ್ಟ್ಸ್ ಹರ್ ವೋನ್ ಸೋಸಾಯಿಟಿ”ಯಲ್ಲೂ ಎಮಿಲಿ ತಾನೆ ಕವನದ ಪಾತ್ರವಾಗುತ್ತಾಳೆ. ಆಕೆಯ ಜೀವನ ಚಿತ್ರಣ ಹೂರಣಗೊಂಡಿದೆ ಇಲ್ಲಿ. ಆಕೆಗೆ ಬದುಕು ಕೊಟ್ಟಿದ್ದಕ್ಕಿಂತ ಕಿತ್ತುಕೊಂಡಿದ್ದೇ ಹೆಚ್ಚು. ಪ್ರೇಮ ವೈಪಲ್ಯ, ಸಾಹಿತ್ಯ ಲೋಕದಲ್ಲಿ ಗುರುತಿಸಿಕೊಳ್ಳಲಾಗದ ವಿಫಲತೆ, ಸಂಪ್ರದಾಯಶೀಲ ಬದುಕಿನತ್ತ ತೋರಿದ ವಿಮುಖತೆಯ ಕಾರಣ ಧಾರ್‍ಮಿಕ ನಂಬಿಕೆಯ ನಾಶ. ಇವೆಲ್ಲವೂ ಆಕೆಯ ಬದುಕಿನಲ್ಲಿ ವಿಷಣ್ಣತೆಯನ್ನು ತೇಪೆ ಹಚ್ಚಿದವು. ಸಾವನ್ನು ಈಕೆ ಬಣ್ಣಿಸಿದಷ್ಟು ಪರಿಣಾಮಕಾರಿಯಾಗಿ ಯಾರಿಂದಲೂ ಬಣ್ಣಿಸಲಾಗದು. ತನ್ನ ಕವನಗಳಲ್ಲಿ ಸಾವಿಗಾಗಿ ಆಕೆ ಬದುಕನ್ನು ತ್ಯಾಗ ಮಾಡುತ್ತಾಳೆ. ವಿಸ್ತೃತ ಕಲ್ಪನೆಗಳು, ಸಾವಿಗೆ ಉಪಮೆಗಳಾಗಿ ರೂಪಕಗಳಾಗಿ ನಿಲ್ಲುತ್ತವೆ. ಸಾವನ್ನು ಆರಾಧಿಸಿದಳು. ಬದುಕನ್ನು ತಿರಸ್ಕರಿಸಿ, ಅದನ್ನು ಗೆದ್ದಳು. ಪ್ರೀತಿಯನ್ನು ತ್ಯಾಗಮಾಡಿ ಪಡೆದಳು. ಕ್ಷುಲಕ ಬಾಹ್ಯ ಜಗತ್ತಿನ ಬಾಗಿಲನ್ನು ಮುಚ್ಚಿ ತನ್ನೊಳಗಿನ ಜಗತ್ತಿಗೆ ತೆರೆದುಕೊಂಡಳು.

“ಮೈ ಲೈಫ್ ಕ್ಲೋಸ್ಡ್ ಟ್ವೈಸ್ ಬಿಫೋರ್ ಇಟ್ಸ್ ಕ್ಲೋಸ್” ಕವಿತೆಯಲ್ಲೂ ಕೂಡ ಬದುಕಿನ ಬಗ್ಗೆ ಗಟ್ಟಿಯಾದ ನಿರಾಕರಣ ಎದ್ದು ಕಾಣುತ್ತದೆ. ತನ್ನ ಹತ್ತಿರದ ಆತ್ಮೀಯರ ಸಾವು, ಅಗಲಿಕೆ ಆಕೆಗೆ ತನ್ನದೇ ಸಾವಾದಂತಾಗಿದೆ.

ಕೊನೆಯವರೆಗೂ ಅವಿವಾಹಿತೆಯಾಗೇ ಉಳಿದ ಏಮಿಲಿ ರಾಲ್ಫ್ ವಾಲ್ಡೋ ಎಮರಸನ್‍ನ ನೈತಿಕತೆಯ ಉತ್ಕೃಷ್ಠ ಪ್ರಜ್ಞೆ, ಸ್ವಾವಲಂಬಿ ಬದುಕು ಸಿದ್ಧಾಂತಗಳಿಂದ ಪ್ರಭಾವಿತಗೊಂಡಿದ್ದಳು. ತನ್ನ ಕವಿತೆಗಳ ಮೂಲಕ ಅಳಿಸಲಾಗದ ಗುರುತನ್ನು ಬಿಟ್ಟುಹೋದ ಎಮಿಲಿ ಅಮೇರಿಕಾದ ಸಾಹಿತ್ಯ ಲೋಕದ ಪ್ರಥಮ ಮಹಿಳಾ ಸಾಹಿತಿ ಎಂಬ ಖ್ಯಾತಿಗೆ ಪಾತ್ರಳು. ಆಕೆಯೊಬ್ಬ ಖಾಸಗಿ ಕವಿ. ತನ್ನೊಳಗಿನ ತುಡಿತ ಮಿಡಿತಗಳ ಅಭಿವ್ಯಕ್ತಿಗೆ ಆಕೆ ಕವನಗಳ ಮೊರೆಹೋದಳು. ಸಾರ್ವಜನಿಕ ಬದುಕಿನ ಯಾವ ಶೋಕಗಳು ಆಕೆಗೆ ತಟ್ಟಲೇ ಇಲ್ಲ. ಹೀಗಾಗೇ ಎಮಿಲಿಯ ಕಾವ್ಯದ ಅಂತಃಸತ್ವ ಎಂದರೆ ಮರಣ ಮತ್ತು ಅಮರತ್ವ. ೧೫ ಮೇ ೧೮೮೬ರಲ್ಲಿ ಎಮಿಲಿಯ ಕೊನೆದಿನ. ಹುಟ್ಟಿದ ಅದೇ ಆಮ್ಹರ್‍‍ಸ್ಟ್ ನಗರದಲ್ಲಿ ತೀರಿಕೊಂಡಳು.
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...