ಅದೋ!
ಅಲ್ಲಿಹುದು ಹೂವು
ಅಂತಿಂತಹ ಹೂವಲ್ಲವದು, ತಾವರೆ ಹೂವು.
ತನ್ನಂದದಿಂದೆಲ್ಲರ ಸೆಳೆವುದಿದು
ಸಹಸ್ರ ಪತ್ರದ ಸುರಮ್ಯ ಹೂವು.
ದೂರದಿಂದ ನೋಡಿದರೆ ಬಲು ರಮ್ಯ
ಅಲ್ಲಿಂದಲೇ ಚೆಲುವಿನ ಸ್ವಾಗತವೀಯುವುದು
ಬಳಿಗೆ ಹೋದರೆ ಮುಖವ ಮುಚ್ಚುವುದು!
ಅದರಂದ ಕಂಡು ಓಡೋಡಿ ಬರುವುದು
ದುಂಬಿಗಳ ಹಿಂಡು.
ಮಧು ರಸ ಹೀರುತ್ತಾ ಮೈ ಮರೆತಿದೆ ದುಂಬಿ
ಹೂ ಮೊಗವ ಮುಚ್ಚಿದರೂ ತಿಳಿಯದಾ ದುಂಬಿ.
ಅರೆ! ಏನಿದು ಉಸಿರು ಕಟ್ಟುತ್ತಿದೆ?
ಪ್ರಾಣ ಹೋದರೂ ಸರಿಯೇ ಹೂವಿನಾ ಮಡಿಲಿನಲಿ.
ಇಂತಹ ದುಂಬಿಗಳೆಷ್ಟೋ?!
ಹೂವಿಗಿದು ಆಟ ಚೆಲ್ಲಾಟ
ದುಂಬಿಗೆ ಪ್ರಾಣ ಸಂಕಟ
ಆದರೂ ಆಸೆ, ಚಪಲ!
ಇದರಲ್ಲಿ ಬಿದ್ದು ಸತ್ತ ದುಂಬಿಗಳೆಷ್ಟೋ?
ದೂರದಿಂದ ಚೆಲುವ ಕಂಡು
ಓಡಿ ಬಂದು ಕೈಲಿ ಹಿಡಿದರೆ,
ಥೂ ಎಂಥ ಕೊಳಕು
ಒಳಗೆಲ್ಲಾ ಬರಿಯ ಹುಳುಕು
ಇದಿರುವುದೋ ಕೊಚ್ಚೆಯಲಿ
ಛೇ, ನಾನೇಕೆ ಬಂದೆ ಈ ಹೂವ ನೋಡಿ.
ಇದರಿಂದ ದೂರಕ್ಕೆ ಹೋಗುವೆನು ಓಡಿ.
*****
೧೦-೦೪-೧೯೭೫