ಸ್ವಪ್ನ ಮಂಟಪ – ೪

ಸ್ವಪ್ನ ಮಂಟಪ – ೪

ಮಂಟಪವನ್ನು ನೋಡಿ ಹೊರಡುವ ವೇಳೆಗೆ ಸಂಜೆಗತ್ತಲಾಗಿತ್ತು. ಎಲ್ಲರೂ ಮೌನವಾಗಿ ಹೋಗುತ್ತಿದ್ದರು. ಮಂಜುಳಾಗೆ ಮೌನವನ್ನು ಮುರಿಯುವ ಆಸೆ. ಆದರೆ ಯಾಕೊ ಅಳುಕು. ಕರಿಯಮ್ಮ ತಪ್ಪಾಗಿ ತಿಳಿಯಬಾರದು, ತನಗೆ ಮಾತಿನ ಚಪಲ ಎಂಬ ಅಭಿಪ್ರಾಯಕ್ಕೆ ಬರಬಾರದು. ನಾಚಿಕೆ ಇಲ್ಲದವಳು ಎಂದು ತಪ್ಪು ತೀರ್ಮಾನ ತಳೆಯಬಾರದು. ಕಡೆಗೆ ಕರಿಯಮ್ಮನೆ ಬಾಯಿ ತೆಗೆದಳು.

‘ಈ ಕೋಟೆತಾವ್ ಬಂದ್ರೆ ನಮ್ಮ ಶಿವಕುಮಾರನ್ಗೆ ಎಲ್ಲಾ ಮರ್‍ತೆ ಹೋಗ್ತೈತೆ. ನೋಡು ಆ ಮಂಟಪದ ವಿಷ್ಯ ಮೊದ್ಲೇ ಹೇಳಾಬದ್ಲು ಸುಮ್ಕೆ ಒಳೀಕ್ ಹೋಗಿ ನಿಂತೇಬಿಟ್ಟ.’

ತಾಯಿಯ ಪ್ರೀತಿಯ ಟೀಕೆಯನ್ನು ಶಿವಕುಮಾರ್ ನಗುತ್ತಲೇ ಸ್ವೀಕರಿಸಿದ.

‘ಒಂದೊಂದು ಸಾರಿ ಹೀಗಾಗುತ್ತಮ್ಮ. ಏನ್ಮಾಡೋದು?’

‘ಏನ್ಮಾಡೋದು ಅಂದ್ರೆ? ಮದ್ವೆ ಆಗ್ದಿರೋ ಹುಡುಗ-ಹುಡುಗಿ ಇದ್ದಾಗ ಎಚ್ಚರ ವಹಿಸ್ ಬೇಕು.’

‘ಮದ್ವೆ ಆಗಿರೋ ಹುಡುಗ-ಹುಡುಗಿ ಇದ್ದೀವಿ ಅಂತ್ಲೆ ಎಚ್ಚರ ತಪ್ಪಿದ್ರೆ?’ – ತುಂಟತನದಿಂದ ಕೇಳಿದ.

‘ಥೂ ನಿನ್ನ! ನಿಂಗಂತು ಮಾನ ಮರ್‍ವಾದೆ ಒಂದೂ ಇದ್ದಂಗಿಲ್ಲ.’

‘ಎಷ್ಟಾದ್ರೂ ನಿನ್ ಮಗ ಅಲ್ವೇನಮ್ಮ?’ – ಮತ್ತೆ ಅದೇ ತುಂಟತನ.

‘ನಿನ್ ಬಾಯಿಗಷ್ಟು ಮಣ್ ಬೀಳ, ಸುಮ್ಕೆ ನಡಿ ಕಂಡಿದ್ದೀನಿ.’ – ಕರಿಯಮ್ಮ, ಹುಸಿಮುನಿಸಿನಿಂದ ರಾಚಿದಾಗ ಶಿವಕುಮಾರ್ ನಗುತ್ತಾ ಸುಮ್ಮನಾದ.

ತಾಯಿ-ಮಗನ ನಡುವೆ ನಡೆದ ಮಾತುಕತೆಯ ನಂತರವಂತೂ ಮಂಜುಳಾಗೆ ಮಾತೇ ಹೊರಡಲಿಲ್ಲ. ಮಾತಾಡಿ ಅಪಾರ್ಥಕ್ಕೆ ಕಾರಣವಾಗುವುದು ಬೇಡವೆಂದು ಮೌನವಹಿಸಿದಳು.

ಎಲ್ಲರೂ ಮನೆ ತಲುಪಿದ ಮೇಲೆ ಕರಿಯಮ್ಮ ಅಡಿಗೆ ಮನೆಗೆ ಹೋದಳು. ಸಿದ್ದಣ್ಣ ಕೋಟೆಯ ಭೇಟಿ ಬಗ್ಗೆ ಮಂಜುಳಾಳನ್ನು ವಿಚಾರಿಸಿಕೊಂಡ. ಮಂಜುಳಾ ‘ಚನ್ನಾಗಿತ್ತು’ ಅಂತ ಹೇಳಿದ್ದಲ್ಲದೆ ಅತ್ತಿತ್ತ ನೋಡಿ ಕರಿಯಮ್ಮ ಇಲ್ಲದ್ದನ್ನು ಗಮನಿಸಿ, ಆನಂತರ ಆ ಸ್ವಪ್ನ ಮಂಟಪದ ಒಳಗಡೆ ಮದ್ಯೆ ಆಗಿರೋ ಗಂಡು-ಹೆಣ್ಣು ಒಟ್ಟಿಗೆ ಹೋಗಬಾರಂತಲ್ಲ. ಯಾಕೆ ಸಿದ್ದಣ್ಣೋರೆ’ ಎಂದು ಕೇಳಿದಳು.

‘ಓ! ಅದಾ! ಅದೊಂದು ದೊಡ್ಡ ಕತೆ! ಇದನ್ನೆಲ್ಲ ನಮ್ಮ ಶಿವಕುಮಾರ ಚನ್ನಾಗ್ ಹೇಳ್ತಾನೆ. ಅವನ್ನೇ ಕೇಳಮ್ಮ’ ಎಂದು ಹೇಳಿದ ಸಿದ್ದಣ್ಣ ಟವಲ್ ಅನ್ನು ಕೊಡವಿ ಎದ್ದು ಬಿಟ್ಟ.

ಮಂಜುಳ ಸುಮ್ಮನೆ ನಿಂತಿದ್ದಾಗ ಶಿವಕುಮಾರ್ ನಗೆನೋಟ ಬೀರಿ ತಾನೂ ಹೊರಗೆ ಹೋದ. ಈಕೆ ವಿವರಣೆಗಾಗಿ ತುದಿಗಾಲಲ್ಲಿ ನಿಂತು ಕಾಯಬೇಕಾಯಿತು. ಲಕ್ಷ್ಮಿಯನ್ನು ಕೇಳೋಣವೇ ಎಂದುಕೊಂಡಳು. ಆನಂತರ ‘ನೋಡೋಣ ಕುಮಾರ್‌ ತಾನಾಗಿ ಹೇಳಬಹುದು’ ಎಂದು ಕೊಂಡು ಸುಮ್ಮನಾದಳು. ಅಷ್ಟರಲ್ಲಿ ಕರಿಯಮ್ಮ ‘ಲಕ್ಷ್ಮಿ’ ಎಂದು ಕರೆದದ್ದು ಕೇಳಿಸಿತು.

ಲಕ್ಷ್ಮಿ ಅಲ್ಲಿರಲಿಲ್ಲ. ಮಂಜುಳ ಎಲ್ಲಿ ಎಂದು ನೋಡುವ ವೇಳೆಗೆ ಮತ್ತೆ ಕರಿಯಮ್ಮನ ಮಾತು ಕೇಳಿಸಿತು: ‘ಏನೇ ಆ ಮೇಡಮ್ಮನ್ ಥರಾ ದಿನಕ್ಕೆ ಮೂರ್‍ಸಾರಿ ಮಕತೊಳ್ಳಂಬ್ತೀಯಾ? ಬಾ ಇಲ್ಲಿ ಕೆಲ್ಸ ಐತೆ.’

ಯಾಕೊ ಲಕ್ಷ್ಮಿಗೆ ಕಸಿವಿಸಿಯಾಯಿತು; ನೋವು ನರಗಳನ್ನು ಕೀಳಲಾರಂಭಿಸಿತು. ಕರಿಯಮ್ಮ ತನ್ನ ಬಗ್ಗೆ ಅಪಾರ್ಥ ಮಾಡಿಕೊಂಡಿರ ಬಹುದೆಂದು ಆತಂಕವೂ ಆಯಿತು. ಆದರೆ ಅಷ್ಟರಲ್ಲಿ ಸಿದ್ದಣ್ಣನ ಮಾತು ಕೇಳಿಸಿ ಸಮಾಧಾನವಾಯಿತು.

‘ಅದ್ಯಾಕೆ ಮೇಡಮ್ಮ ಅದೂ ಇದೂ ಅಂಬ್ತ ಮಾತಾಡ್ತೀಯ? ನಿಂಗಾಗ್ದಿದ್ರೆ ನಿನ್ ಮಗಳಾನ ಮಕ ನೆಟ್ಟಗ್ ತೊಳ್ಕಂಬ್ಲಿ ಬಿಡು. ಆ ಮೇಡಮ್ನೋರು ಮನ್ಯಾಗೇ ಇರ್‍ವಾಗಾದ್ರು ನಿನ್ ನಾಲ್ಗೆ ನೆಟ್ಟಗಿಟ್ಕ?’

‘ನನ್ ನಾಲ್ಗೇಗೇನೂ ಆಗಿಲ್ಲ ಬಿಡ್ರಿ. ಅಲ್ಲ, ಆಯಮ್ಮ ಅದೇನೊ ಅವ್ನಿಂದೇನೆ ಆ ಮಂಟಪದಾಕೆ ಓಡ್‍ವೋಗಾದು?’

‘ಯಾವ ಮಂಟಪ? ಸ್ವಪ್ನ ಮಂಟಪಾನ?’

‘ಹೂ ಮತ್ತೆ, ಇನ್ಯಾವ್ದಾನ ಮಂಟಪ ಆಗಿದ್ರೆ ನಾನ್ ಯೋಚ್ನೆ ಮಾಡ್ತಿರ್‍ಲಿಲ್ಲ. ಆ ನನ್ ಮಗ್ನಿಗೂ ಗ್ಯಾನ ಮತಿ ಇಲ್ಲ. ಈ ಯಮ್ಮಂಗೂ ಒಸಿ ಹಿಡ್ತಾ ಇಲ್ಲ.’

‘ಹಂಗೆಲ್ಲ ಅನ್ ಬ್ಯಾಡ ಕಣೇ. ಏನೊ ಗೊತ್ತಿಲ್ದೆ ಆಗಿರ್ ಬವ್ದು, ಆ ಮೇಡಮ್ಮ ಅದೇಷ್ಟ್ ಒಳ್ಳೆ ಹೆಂಗ್ಸು ಏನ್ಕತೆ!’

‘ಅದ್ಸರಿ, ಅದ್ ನಂಗೂ ಗೊತ್ತೈತೆ ಆದ್ರೂ ಅದ್ಯಾಕೊ ಅದೇನೇನೊ ಅನ್ನುಸ್ತು ಮಾತಾಡ್ದೆ’ ಎಂದು ಹೇಳುತ್ತಾ – ಸಮಾಧಾನ ಮಾಡಿಕೊಂಡಳು.

ಅಲ್ಲಿ ಕರಿಯಮ್ಮನಿಗೆ ಸಮಾಧಾನವಾಗುತ್ತಿದ್ದಂತೆ ಇಲ್ಲಿ ಮಂಜುಳಾಗೂ ಸಮಾಧಾನವಾಯಿತು. ಆದರೂ ತಳಮಳ ಪೂರ್ಣ ತಣ್ಣಗಾಗಲಿಲ್ಲ. ಇಷ್ಟೆಲ್ಲ ಅನುಮಾನ-ಆತಂಕಗಳಿಗೆ ಅವಕಾಶ ಮಾಡಿದ ಆ ಸ್ವಪ್ನ ಮಂಟಪ ಮತ್ತಷ್ಟು ಒಗಟಾಗಿ ಕಾಡಿಸತೊಡಗಿತು.

ಎಲ್ಲರ ಊಟವಾದ ಮೇಲೆ ಹಟ್ಟಿ ಮುಂದೆ ಕೂತರು. ಚೆಲ್ಲಿದ ಬೆಳದಿಂಗಳಲ್ಲಿ ಮುತ್ತಿದ ಮೌನ ಮಂಜುಳಾಗೆ ಮುಜುಗರವುಂಟು ಮಾಡುತ್ತಿತ್ತು. ಅಷ್ಟರಲ್ಲಿ ಕಂಡಕ್ಟರ್ ಕೆಂಚಪ್ಪ ಬಂದ. ಅವನ ಆಗಮನದಿಂದ ಒಂದು ಹೊಸ ವಾತಾವರಣ ಮೂಡತೊಡಗಿತು. ಅವನ ಸ್ವಭಾವವೇ ಆ ರೀತಿಯದು. ಹೋದಲ್ಲೆಲ್ಲ ಆತ್ಮೀಯತೆ ಆವರಿಸುವಂತೆ ಮಾಡುವ ಮನಸ್ಥಿತಿ; ನಿಷ್ಕಪಟ ನಡವಳಿಕೆ; ವಿಷಾದದಲ್ಲೂ ಹೂ ಅರಳಿಸುವ ಮಾತುಗಾರಿಕೆ.

ಕೆಂಚಪ್ಪ ಬಂದವನೇ ‘ಮಂಜುಳಾ ಮೇಡಂನೋರೆ, ಚನ್ನಾಗಿದ್ದೀರ?’ ಎಂದು ಕೇಳಿ, ಜೊತೆಗೆ ‘ಅವತ್ತು ಮಳೆ ಬೇರೆ ಬಂತು. ಏನಾಯ್ತೊ ಏನ್ಕತೆಯೊ ಅಂತ ನಂಗೆ ಯೋಚ್ನೆ ಆಗಿತ್ತು. ಒಂದ್ಸಾರಿ ನಿಮ್ಮನ್ನ ಮಾತಾಡುಸ್ದೆ ಇದ್ರೆ ಸಮಾಧಾನ ಆಗಲ್ಲ ಅಂತ ಇವತ್ತು ಬಂದೇ ಬಿಟ್ಟೆ. ನಮ್ ಬಸ್ಸು ಹೆಂಗಿದ್ರು ಇಲ್ಲೇ ಹಾಲ್ಟು ನೋಡಿ. ಬಸ್ ಸ್ಟಾಂಡಲ್ಲಿ ನಿಲ್ಸಿದ್ದೇ ತಡ; ಸೀದಾ ಬಂದ್ ಬಿಟ್ಟೆ’ ಎಂದು ತನ್ನ ಬ್ಯಾಗನ್ನು ತೆರೆದಿಟ್ಟ.

ಆಗ ಸಿದ್ದಣ್ಣ ಹೇಳಿದ- ‘ಈ ಕಂಡಕ್ಟರ್ ಕೆಂಚಪ್ಪ ಯಾವಾಗ್ಲು ಹಿಂಗೇ ಕಣ್ರಮ್ಮ. ಎಲ್ಲಾ ಸಾಫ್ ಸೀದಾ. ಒಂದೂ ಮುಚ್ಚುಮರೆ ಇರಾಕಿಲ್ಲ’ ಎಂದು ಹೊಗಳಿ ‘ಇನ್ನೂ ಉಂಡಿದ್ದಿಯೊ ಇಲ್ಲೊ ಕೆಂಚಪ್ಪ’ ಎಂದು ಕೇಳಿದ. ಕೆಂಚಪ್ಪ ಪಕ್ಕನೆ ನಕ್ಕ. ಅಲ್ಲಾ ಸ್ವಾಮಿ, ಬರಡುಸಂದ್ರದ ಸಿದ್ದಣ್ಣೂರ್ ಮನೇಗ್ ಬಾರ್‍ವಾಗ ಬೇರೆ ಕಡೆ ಉಂಡ್ ಬರಾಕಾಗ್ತೈತ?’ ಎಂದ. ‘ಸರ್‌ಸರಿ, ಗೊತ್ತಾಯ್ತು ಬಿಡು. ಲೇ ಉಂಬಾಕಿಕ್ಕು ಕೆಂಚಪ್ಪನಿಗೆ’ ಎಂದ ಸಿದ್ದಣ್ಣ.

ಕೆಂಚಪ್ಪನ ಊಟವಾದ ಮೇಲೆ ಆತನೂ ಇವರೊಂದಿಗೆ ಬಂದು ಕೂತ. ಇಲ್ಲಿವರೆಗೆ ಮಾತನಾಡದೆ ಇದ್ದ ಶಿವಕುಮಾರ್ ತಾನೂ ಬಂದು ಇವರನ್ನು ಸೇರಿಕೊಂಡ. ಈತನನ್ನು ನೋಡಿದ್ದೇ ತಡ ಕೆಂಚಪ್ಪನ ಮಾತು ಶುರುವಾಯಿತು.

‘ಇಂಥ ಮಗನ್ ಪಡಿಯೋಕೆ ಅದೃಷ್ಟ ಮಾಡಿದ್ರಿ ಸಿದ್ದಣ್ಣೊರೆ. ಇವತ್ತು ಬಸ್ನಗೆ ನಿಮ್ಮಗಂದೇ ಮಾತು. ಅದೇನೊ ಈ ಊರ್ ಬಗ್ಗೆ ಚನ್ನಾಗ್ ಕತೆಕಟ್ಟಿ ಎಲ್ರಿಗೂ ಕಣ್ಣಿಗೆ ಕಟ್ಟಂಗ್ ಹೇಳ್ತಾರಂತೆ. ನಾನೂ ಒಸಿ ಕೇಳಾನ ಅಂತ ಇದ್ದೆ. ಎಲ್ಲಿ ನಮಿಗ್ ಟೈಮೇ ಇರಲ್ಲವಲ್ಲ’

ಕೆಂಚಪ್ಪ ಹೊಗಳಿದ್ದು ಶಿವಕುಮಾರನಿಗಷ್ಟೇ ಅಲ್ಲ, ಸಿದ್ದಣ್ಣನಿಗೂ ಎದೆಮುಟ್ಟುವಂತೆ ಮಾಡಿತ್ತು. ‘ಅವ್ನು ಕತೆ ಕಟ್ಟಿ ಹೇಳ್ತಾ ಇದ್ರೆ ಆ ಕೋಟೆ ಬೆಟ್ಟ ಎಲ್ಲಾ ಕಣ್‌ಕಣ್ ಬಿಟ್ಕಂಡ್ ನೋಡ್ತಾವೆ ಕೆಂಚಪ್ಪ. ಆಟಂದ್ ಚಂದಾಗೇಳ್ತಾನೆ’ ಎಂದು ಹೆಮ್ಮೆಯಿಂದ ಬೀಗಿದ ಸಿದ್ದಣ್ಣ ಶಿವಕುಮಾರನಿಗೆ ‘ಏ ಕುಮಾರ, ಅದೇನೊ ಒಸಿ ಸ್ವಪ್ನ ಮಂಟಪದ್ದು ಕತೆ ಐತಲ್ಲ. ಒಸಿ ಬಣ್ಣಗಿಣ್ಣ ಕಟ್ಟಿ ಚಂದಾಗೆ ಹೇಳ್ಬಿಡು’ ಎಂದ.

ಮಂಜುಳಾಗೆ ತಡೆಯಲಾಗಲಿಲ್ಲ. ‘ಇರೋದನ್ನ ಇದ್ದಂತೆ ಹೇಳಿದ್ರೆ ಸಾಕು. ಅಲ್ವಾ ಕುಮಾರ್?’ ಎಂದಳು. ಶಿವಕುಮಾರ್‌ ಉತ್ತರಿಸುವ ಮೊದಲೇ ಸಿದ್ದಣ್ಣ ‘ಅದೆಲ್ಲ ನಿಮ್ಮಂಥ ತಿಳ್ದೋರ್‍ಗೆ ಕಣಮ್ಮ. ಹಳ್ಳಿ ಜನಕ್ಕೆ ಬಣ್ಣಗಿಣ್ಣ ಕಟ್ಟಿ ಹೇಳ್ದಿದ್ರೆ ಅದೆಂಗೆ ಕೇಳ್ತಾರೆ’ ಎಂದ. ‘ಹಾಗಲ್ಲ ಸಿದ್ದಣ್ಣೋರೆ, ಚರಿತ್ರೆ ವಿಷಯಕ್ಕೆ ಅದರದೇ ಒಂದು ಬಣ್ಣ ಇರುತ್ತೆ. ಬೇರೆ ಬಣ್ಣ ಕಟ್ಟಿದ್ರೆ ಹಾದಿ ತಪ್ಪಿಸ್ದಂತಾಗುತ್ತೆ’ ಎಂದು ಪ್ರತಿಕ್ರಿಯಿಸಿದ ಮಂಜುಳಾ ಶಿವಕುಮಾರನ ಕಡೆ ನೋಡಿದಳು. ಶಿವಕುಮಾರ್ ತಕ್ಷಣ ‘ನಾನು ಯಾವತ್ತು ಸುಳ್ಳು ಹೇಳೊಲ್ಲ. ಹಳ್ಳಿ ಚರಿತ್ರೆ ನಿಮ್ಮಂಥೋರ್‍ಗೆಲ್ಲ ತಾತ್ಸಾರ. ನಮ್ಮಲ್ಲೂ ಗತವೈಭವ ಇದೆ, ಶ್ರೀಮಂತ ಚರಿತ್ರೆ ಇದೆ. ಗೊತ್ತಾ’ ಎಂದು ಬಿರುಸಾಗಿ ಪ್ರತಿಕ್ರಿಯಿಸಿದ. ಮಂಜುಳಾ ‘ನಾನು ಇಲ್ಲ ಅಂತ ಹೇಳಿಲ್ಲ. ಚರಿತ್ರೆ ಶ್ರೀಮಂತವೂ ಆಗಿರಬಹುದು; ಬಡತನವೂ ಆಗಿರಬಹುದು. ಯಾಕೇಂದ್ರೆ ಶ್ರೀಮಂತಿಕೇದೂ ಒಂದು ಚರಿತ್ರೆ ಇದೆ. ಬಡತನದ್ದೂ ಒಂದು ಚರಿತ್ರೆ ಇದೆ. ಒಂದು ಮೇಲು ಒಂದು ಕೀಳು ಅಂತ ಹೇಳೋದು ಸರಿಯಲ್ಲ. ಚರಿತ್ರೆ ಹೆಸರಿನಲ್ಲಿ ಭ್ರಮೆ ಮೂಡ್ಸೋದೂ ಸರಿಯಲ್ಲ. ನಿಮಗೆ ಗೊತ್ತಿರ್‍ಬೇಕು ಕುಮಾರ್, ಭ್ರಮೆ ಮತ್ತು ವಾಸ್ತವಗಳ ಹೋರಾಟವೇ ಒಂದು ಚರಿತ್ರೆ’ ಎಂದು ಹೇಳುತ್ತಿರುವಾಗ ಕುಮಾರ್ ಚಡಪಡಿಸಿದ; ತಾಳ್ಮೆ ಕಳೆದುಕೊಂಡ. ‘ಈಗ ನಾನು ಹೇಳ್ಬೇಕೊ ಬೇಡವೊ ಅದನ್ನ ಹೇಳಿ, ನಿಮಗೆ ನಂಬಿಕೆ ಇದ್ರೆ ಕೇಳಬಹುದು; ಇಲ್ಲೇ ಇದ್ರೆ ಸುಮ್ಮೆ ಇರಬಹುದು’ ಎಂದ. ಮಂಜುಳಾ ತಬ್ಬಿಬ್ಬಾದಳು. ‘ಏನ್ ಕುಮಾರ್ ಹೀಗೆ ಹೇಳ್ತಿರಿ? ನೀವು ಸ್ವಪ್ನ ಮಂಟಪದ ವಿಷಯ ಹೇಳಲಿ ಅಂತ ಸಂಜೆಯಿಂದ ತುದಿಗಾಲಲ್ಲಿ ನಿಂತಿದ್ದೀನಿ ನಾನು ಅದನ್ನ ಕೇಳಲೇಬೇಕು’ ಎಂದಳು. ಆಗ ಕರಿಯಮ್ಮ ‘ಹೂಂಕಣೋ ಕುಮಾರ್, ಈ ಮೇಡಮ್ಮ ಅದನ್ನ ಕೇಳಲೇಬೇಕು. ಊರಿಗೆ ಹೊಸದಾಗ್ ಬಂದೋರ್‍ಗೆ ಗೊತ್ತಿರ್‍ಬೇಕು. ಎಲ್ಲಾ ಸರ್‍ಯಾಗ್ ಬಿಡಿಸೇಳು’ ಎಂದದ್ದೇ ತಡ ಲಕ್ಷ್ಮಿ ಉತ್ಸಾಹಿತಳಾಗಿ ಅಕ್ಕಪಕ್ಕದ ಮನೆಯವರಿಗೆಲ್ಲ ಕೂಗಿ ಹೇಳಿದಳು:

‘ನಮ್ಮಣ್ಣಯ್ಯ ಇವಾಗ ಸ್ವಪ್ನ ಮಂಟಪದ ಕತೆ ಹೇಳ್ತಾನೆ. ಬರಾರೆಲ್ಲ ಬರ್‌ಬಹುದು.’

ಲಕ್ಷ್ಮಿಯ ಕೂಗು ಕೇಳಿಸಿದ್ದೇ ತಡ, ಅಕ್ಕಪಕ್ಕದ ಮನೆಯ ಮಕ್ಕಳು ದೌಡಿ ಬಂದರು. ಕೆಲವರು ಹೆಂಗಸರೂ ಬಂದರು. ಎಲ್ಲರೂ ಬಂದು ಕೂತುಕೊಂಡ ಮೇಲೆ ಶಿವಕುಮಾರ್ ಹೇಳಲೇ ಬೇಕಾಯಿತು. ಕೂತಿದ್ದ ಕರಿಯಮ್ಮ ‘ಎಲ್ರಿಗೂ ಕಾಪಿ ಮಾಡ್ತೀನಿ. ಕತೆ ಕೇಳ್ತಾ ಇರಿ’ ಎನ್ನುತ್ತ ಎದ್ದಳು.

ಶಿವಕುಮಾರ್ ಮಂಜುಳಾ ಕಡೆ ನೋಡುತ್ತ ‘ಎಲ್ಲಾ ವಿಷ್ಯ ಒಂದೇ ಸಾರಿ ಹೇಳೋದು ಕಷ್ಟ. ಆದ್ರೂ ಸ್ವಪ್ನ ಮಂಟಪ ಗಮನದಲ್ಲಿಟ್ಕೊಂಡು ಹೇಳ್ಬೇಕಾದ್ದನ್ನೆಲ್ಲ ಹೇಳ್ತೀನಿ’ ಎಂದು ಪ್ರಾರಂಭಿಸಿದ.

ಚಂಡೇರಾಯ ಒಬ್ಬ ಪರಾಕ್ರಮಿ. ತನ್ನ ಪರಾಕ್ರಮದಿಂದ ಅನೇಕ ಪಾಳೇಪಟ್ಟುಗಳನ್ನು ಜಯಿಸಿ ಸಾಮ್ರಾಜ್ಯವನ್ನು ವಿಸ್ತರಣೆ ಮಾಡಿದ್ದ. ಆತನ ರಾಜಧಾನಿಯೇ ಈ ಬರಡುಸಂದ್ರ. ರಾಜಧಾನಿಯಲ್ಲಿ ಆತ ಇದ್ದಾಗಲೆಲ್ಲ ಸ್ವಪ್ನ ಮಂಟಪದ ಬಳಿಗೆ ತನ್ನ ರಾಣಿಯರ ಜೊತೆ ಬರುವ ಹವ್ಯಾಸ ಇಟ್ಟುಕೊಂಡಿದ್ದ. ಅದರಲ್ಲೂ ಕಿರಿಯ ರಾಣಿ ಮದನಿಕೆಯ ಜೊತೆ ಇಲ್ಲಿಗೆ ಬಂದು, ವಿಶ್ರಮಿಸಿಕೊಳ್ಳುತ್ತ ಸುತ್ತಲ ನಿಸರ್ಗವನ್ನು ನೋಡುವುದೆಂದರೆ ಆತನಿಗೆ ಎಲ್ಲಿಲ್ಲದ ಉತ್ಸಾಹ.

ಕಿರಿಯರಾಣಿ ಮದನಿಕೆಯನ್ನು ಚಂಡೇರಾಯ ಮದುವೆಯಾದದ್ದೇ ಒಂದು ವಿಶೇಷ ಸಂದರ್ಭದಲ್ಲಿ. ಪಕ್ಕದ ಪಾಳೇಪಟ್ಟಿನ ವಿಕ್ರಮರಾಜನನ್ನು ಯುದ್ಧದಲ್ಲಿ ಸೋಲಿಸಿದಾಗ ಆತ ಶರಣಾದುದಲ್ಲದೆ ತನ್ನ ಮಗಳಾದ ಮದನಿಕೆಯನ್ನು ವಿವಾಹ ಮಾಡಿಕೊಡಲು ಒಪ್ಪಿದ. ಈಕೆಯ ಮೇಲೆ ಮೋಹಿತನಾದ ಚಂಡೇರಾಯ ಮೊದಲೇ ಸಂದೇಶ ಕಳಿಸಿದ್ದರೂ ವಿಕ್ರಮರಾಜ ಒಪ್ಪಿರಲಿಲ್ಲ. ಈಗಾಗಲೇ ಮಧ್ಯವಯಸ್ಸಿಗೆ ಬಂದಿರುವ ಚಂಡೇರಾಯನಿಗೆ ತನ್ನ ಮಗಳನ್ನು ಕೊಡಲಾರೆ ಎಂದಿದ್ದ. ಇದರಿಂದ ಸಿಟ್ಟಿಗೆದ್ದು ಚಂಡೇರಾಯ ಯುದ್ಧಸಾರಿದ್ದ. ಆ ಸಂದರ್ಭದಲ್ಲಿ ಮಂತ್ರಿಗಳು ದುಡುಕದಂತೆ ಕೇಳಿಕೊಂಡಿದ್ದರು.

‘ಹೆಣ್ಣಿಗಾಗಿ ಯುದ್ಧ ಮಾಡಿದ ಅಪವಾದ ಬರುತ್ತದೆ ಮಹಾಪ್ರಭು’ ಎಂದಿದ್ದರು.

‘ಎಷ್ಟು ಜನ ರಾಜರು ಹೀಗೆ ಮಾಡಿಲ್ಲ?’ ಎಂದು ಚಂಡೇರಾಯ ಪ್ರಶ್ನಿಸಿದ್ದ.

‘ಹಾಗೆಂದು ತಾವೂ ಆ ದಾರಿ ತುಳಿಯುವುದು ಸರಿಯೇ ಪ್ರಭು?’

-ಮತ್ತೆ ಮಂತ್ರಿಯ ತಕರಾರು.

‘ನಾನು ಆಕೆಯನ್ನು ವಿವಾಹವಾಗಬೇಕು. ಸುತ್ತಮುತ್ತಲ ಸಾಮ್ರಾಜ್ಯಗಳಲ್ಲೆಲ್ಲ ಆಪ್ರತಿಮ ಸುಂದರಿಯಾದ ಆಕೆ ನನ್ನ ಅಂತಃಪುರದ ಆಸ್ತಿಯಾಗಬೇಕು’ – ಚಂಡೇರಾಯ ಹಟ ಮಾಡಿದ.

‘ಅಂತಃಪುರದ ಆಸ್ತಿಯಾಗಿಸಲು ಯುದ್ಧ ಮಾಡುವುದೆಂದರೆ…’

‘ಮಂತ್ರಿಗಳೇ ಮಾತು ಹೆಚ್ಚಾಯಿತು.’

‘ಕ್ಷಮಿಸಬೇಕು. ಸಲಹೆ ಕೊಡುವುದು ನನ್ನ ಕರ್ತವ್ಯ ಸ್ವೀಕರಿಸುವುದು ನಿರಾಕರಿಸುವುದು ನಿಮ್ಮ ಅಧಿಕಾರ.’

‘ಅಧಿಕಾರದ ಹದ್ದುಬಸ್ತಿನಲ್ಲೇ ನಿಮ್ಮ ಸಲಹೆ ಇರಲಿ.’

‘ಆದರೂ ನಿಮಗೆ ವಯಸ್ಸಿಗೆ ಬರುತ್ತಿರುವ ಮಗಳಿರುವಾಗ ಮತ್ತೆ ಮದುವೆಗಾಗಿ ಯುದ್ಧವೆಂದರೆ ಜನ ಏನೆಂದುಕೊಂಡಾರೆಂದು ನನ್ನ ಅಳುಕು.’

‘ಅಧಿಕಾರಕ್ಕೆ ಅಳುಕಿನ ಪ್ರಶ್ನೆಯೇ ಇಲ್ಲ.’

‘ಹಾಗಿದ್ದರೆ ಮುಂದೆ ಮಾತಿಲ್ಲ.’

ಯುದ್ಧದ ಕಹಳೆ ಮೊಳಗಿತು. ಯುದ್ಧವಾಯಿತು; ಜಯವೂ ಆಯಿತು. ಆಗ ವಿಕ್ರಮರಾಜ ಹೇಳಿದ:

‘ಮಗಳನ್ನು ಒಪ್ಪಿಸುತ್ತೇನೆ. ಸಾಮ್ರಾಜ್ಯವಾದರೂ ನನಗಿರಲಿ.’

ಚಂಡೇರಾಯ ದೊಡ್ಡಮನಸ್ಸು ಮಾಡಿದ.

‘ಮದನಿಕೆಯೊಂದಿಗೆ ಮದುವೆಯಾದ ಮೇಲೆ ನಿಮ್ಮ ಸಾಮ್ರಾಜ್ಯ ಯಾಕೆ ಬೇಕು? ನೀವೇ ರಾಜ್ಯವಾಳಿ. ಆದರೆ ಅಧಿಕ ಪ್ರಸಂಗತನ ಮಾಡಬೇಡಿ’ ವಿಕ್ರಮರಾಜ ಒಪ್ಪಿಕೊಂಡ.

ಆಗ ಮಂತ್ರಿಗೆ ಅನ್ನಿಸಿತು: ‘ಈ ವಿಕ್ರಮರಾಜನಾದರೂ ಮೊದಲೇ ಶರಣಾಗಿದ್ದರೆ ಸಾವು ನೋವಾದರೂ ತಪ್ಪುತ್ತಿತ್ತು.’

ಒಟ್ಟಿನಲ್ಲಿ ಹೀಗೆ ಯುದ್ಧ ಮಾಡಿ ಗೆದ್ದ ಮದನಿಕೆಯೆಂದರೆ ಚಂಡೇರಾಯನಿಗೆ ಪ್ರಾಣ ಪ್ರೀತಿ. ಆದರೆ ಆಕೆಗೆ ಅಷ್ಟೇ ಪ್ರಮಾಣದ ಪ್ರೇಮ ವಿದೆಯೆಂದು ಹೇಳಲಾಗದು. ಅದನ್ನು ಆಕೆ ವ್ಯಕ್ತಪಡಿಸಿಯೂ ಇದ್ದಳು.

‘ಯುದ್ಧದಲ್ಲಿ ಗೆದ್ದ ಹೆಣ್ಣಿಗೆ ನಿಜವಾದ ಪ್ರೇಮ ಇರಲು ಹೇಗೆ ಸಾಧ್ಯ?’ ಚಂಡೇರಾಯ ಸಮಾಧಾನಿಸಿದ್ದ.

‘ಯಾಕೆ ಇರಬಾರದು ರಾಣಿ? ನಾನು ಯುದ್ಧ ಮಾಡಿದ್ದೇ ನಿನಗಾಗಿ. ಪ್ರಾಣದ ಹಂಗು ತೊರೆದು ಹೋರಾಡಿದ ವೀರನ ಬಗ್ಗೆ ಯಾವ ಹೆಣ್ಣಿಗಾದರೂ ಪ್ರೇಮ ಉಕ್ಕಬೇಕಲ್ಲವೆ?’

‘ಆದರೆ ನಾನು ಎಲ್ಲ ಹೆಣ್ಣಿನಂತಲ್ಲ.’

‘ಅದಕ್ಕೇ ನಾನು ಇಷ್ಟಪಟ್ಟದ್ದು.’

‘ಇಷ್ಟ ಪಡಲು ಸ್ವಲ್ಪ ಮುಂಚೆ ಹುಟ್ಟಬೇಕಿತ್ತು. ಆಗ ವಯಸ್ಸು ಚಿಕ್ಕದಿರುತ್ತಿತ್ತು.’

ಚಂಡೇರಾಯನಿಗೆ ಸ್ವಲ್ಪ ಬಂತು. ವಯಸ್ಸನ್ನು ಎಣಿಸಿ ಕಟಕಿಯಾಡುವುದನ್ನು ಆತನಿಗೆ ಸಹಿಸಲಾಗಲಿಲ್ಲ. ಆದರೂ ತಡೆದುಕೊಂಡು ಹೇಳಿದ.

‘ವಯಸ್ಸಾಗಿರುವುದು ದೇಹಕ್ಕೆ. ಮನಸ್ಸಿಗಲ್ಲ, ಮನಸ್ಸಿನಂತೆ ಮೈ ಎನ್ನುವುದು ನನ್ನ ಸಿದ್ಧಾಂತ.’

‘ಇರಲಿ ಬಿಡಿ, ಮದುವೆಯಾದ ಮೇಲೆ ಮುನಿಸಿಕೊಂಡು ಪ್ರಯೋಜನವಿಲ್ಲ.’

ಮದನಿಕೆ ತನಗೆ ತಾನೇ ಸಮಾಧಾನ ಮಾಡಿಕೊಂಡಳು. ದಿನಕಳೆದಂತೆ ಹೊಂದಿಕೊಂಡಳು. ಆದರೂ ಅವಳ ಮನದಾಳದಲ್ಲಿ ಏನೋ ಕೊರತೆ ಕೊರೆಯುತ್ತಿತ್ತು.

ಸ್ವಪ್ನ ಮಂಟಪಕ್ಕೆ ಆಕೆ ಬಂದು ನಿಂತಳೆಂದರೆ ಮೈ ಮರೆಯುತ್ತಿದ್ದಳು. ಚಂಡೇರಾಯನ ಇರವನ್ನೂ ಮರೆತಂತೆ ಸುತ್ತಮುತ್ತಲ ವಾತಾವರಣದಲ್ಲಿ ಲೀನವಾಗುತ್ತಲೇ ಎಚ್ಚರಗೊಳ್ಳುವ ಉರಿಯಲ್ಲಿ ಹೊಯ್ದಾಡುತ್ತಿದ್ದಳು. ಆನಂತರ ಅರಮನೆಗೆ ಬಂದಾಗ ಅವಳ ಮನಸ್ಸು ಅವಳಲ್ಲಿರುತ್ತಿರಲಿಲ್ಲ. ಎತ್ತೆತ್ತಲೋ ಓಡಾಡುತ್ತಿತ್ತು. ಇದನ್ನು ಗಮನಿಸಿದ ಚಂಡೇರಾಯ ಕೇಳಿದ್ದ.

‘ಮಂಟಪಕ್ಕೆ ಹೋಗಿ ಬಂದ ಕೂಡಲೇ ಯಾಕೆ ಬೇರೆ ರೀತಿ ಆಗ ಆಗ್ತೀಯಾ?’

‘ನನಗೆ ಆ ಮಂಟಪವೇ ಒಂದು ಸ್ವಪ್ನವಾಗುತ್ತೆ. ಅಲ್ಲಿದ್ದಾಗ ಏನೇನೊ ಸ್ವಪ್ನಗಳು ತೇಲಿ ಬರುತ್ತೆ. ನಾನೇನು ಮಾಡಲಿ?’

‘ಇನ್ನು ಮೇಲೆ ಅಲ್ಲಿಗೆ ಹೋಗುವುದೇ ಬೇಡ.’

‘ಅದು ಮಾತ್ರ ಸಾಧ್ಯವಿಲ್ಲ.’

‘ರಾಜಾಜ್ಞೆಯನ್ನು ಮೀರುವುದು ಸಾಧ್ಯವಿಲ್ಲ.’

‘ಸಂಸಾರದಲ್ಲಿ ಅಧಿಕಾರದ ಪ್ರವೇಶ ಸರಿಯಲ್ಲ.’

‘ಅಧಿಕಾರ ಬಿಟ್ಟು ಯಾವುದೂ ಇಲ್ಲ.’

‘ಹಾಗಿದ್ದರೆ ನನ್ನ-ನಿಮ್ಮ ಸಂಬಂಧ ಉಳಿಯೋಲ್ಲ.’

‘ಅದು ಯಾಕೆ ಉಳಿಯೋಲ್ಲ ನಾನು ರಾಜ. ನೀನು ರಾಣಿ. ರಾಜನ ಮಾತನ್ನ ಯಾರೂ ಮೀರುವಂತೆ ಇಲ್ಲ.’

‘ನಾನು ಆಗಲೇ ಹೇಳಿದೆ. ಸಂಸಾರ-ಸಂಬಂಧ ಇರೋ ಕಡೆ ರಾಜಾಧಿಕಾರ ಇರಬಾರದು.’

‘ನನ್ನ ಎದುರು ಯಾರೂ ಮಾತಾಡಬಾರದು.’

‘ಮಾತು-ಮೌನ ಎಲ್ಲವನ್ನೂ ಕಾಲ ಹೇಳುತ್ತೆ.’

-ಎಂದು ಹೇಳಿದ ಮದನಿಕೆ ಅಲ್ಲಿಂದ ನಿರ್ಗಮಿಸಿದಳು.

ಈ ಘಟನೆಯಾದಾಗಿನಿಂದ ರಾಜ ಮತ್ತು ರಾಣಿಯ ಮಂಟಪ ಭೇಟಿ ನಿಂತಿತು. ಒಮ್ಮೆ ಚಂಡೇರಾಯ ಬೇಟೆಗೆ ಹೋಗಿದ್ದ.

ಮದನಿಕೆಯು ರಾಜಕುಮಾರಿ ಮದಾಲಸೆಯ ಬಳಿಗೆ ಬಂದಳು. ಮದಾಲಸೆಯು ರಾಜನ ಮೊದಲ ಹೆಂಡತಿಯ ಮಗಳು, ಮದನಿಕೆಯ ಆಗಮನವನ್ನು ನೋಡಿ ಮದಾಲಸೆಗೆ ಆಶ್ಚರ್ಯವಾಯಿತು.

‘ಬನ್ನಿ ಚಿಕ್ಕಮ್ಮ.’

ಮದನಿಕೆ ಕೂತುಕೊಳ್ಳುತ್ತ ಹೇಳಿದಳು.

‘ಹೆಚ್ಚು ಕಡಿಮೆ ವಾರಿಗೆಯವರಾಗಬೇಕಿದ್ದ ನಾವು ಚಿಕ್ಕಮ್ಮ-ಮಗಳು ಆಗೋದು ಎಂಥ ವಿಪರ್ಯಾಸ!’

‘ಇದು ಅರಮನೆ ಚಿಕ್ಕಮ್ಮ, ಅರಸನ ಆಸೆಗನುಗುಣವಾಗಿ ಎಲ್ಲವೂ ಆಗಬಹುದು.’

‘ಅರಸ ನಿಮ್ಮ ತಂದೆ ತಾನೆ?’

‘ಹೌದು. ಆದರೆ ಅಪ್ಪ ಆಗೋದು ಯಾವಾಗ, ಅರಸ ಯಾವಾಗ ಅಂತ ವಿಂಗಡಿಸೋದೇ ಕಷ್ಟ. ನನಗಂತೂ ಸದಾ ಅರಸರನ್ನು ನೋಡಿದಂತೆಯೇ ಆಗುತ್ತೆ.’

‘ನನಗೂ ಅಷ್ಟೇ ಮದಾಲಸೆ. ಈ ಅರಮನೆಯ ಬದುಕೇ ಒಂದು ಬಂಧನ ಇದ್ದಂತೆ ಅನಿಸುತ್ತೆ. ಆದ್ದರಿಂದಲೇ ನನಗೆ ಆ ಮಂಟಪಕ್ಕೆ ಹೋದಾಗ ಏನೋ ಒಂದು ರೀತಿಯ ರೋಮಾಂಚನ! ಬಂಧನದಿಂದ ಬಿಡುಗಡೆಗೊಂಡ ಅನುಭವ!’

‘ನನಗಂತೂ ಆ ಮಂಟಪದ ಅನುಭವ ಆಗಿಯೇ ಇಲ್ಲ.’

‘ಇವತ್ತು ಹೋಗೋಣವಾ? ಹೇಗಿದ್ದರೂ ರಾಜರು ಬೇಟೆಗೆ ಹೋಗಿದ್ದಾರೆ.’

‘ಬೇಟೆಯಿಂದ ಬಂದ ಮೇಲೆ ನಮ್ಮ ಬೇಟೆ ಆಡೊಲ್ಲ ತಾನೆ?’

‘ನಾನು ಇದ್ದೇನೆ. ಚಿಂತೆ ಯಾಕೆ?’

– ಎಂದು ಹೇಳಿದ ಮದನಿಕೆ ಮಂತ್ರಿಗಳನ್ನು ಕರೆದು ತಾನು ಮತ್ತು ರಾಜಕುಮಾರಿ ಮಂಟಪಕ್ಕೆ ಹೋಗುವ ವಿಚಾರವನ್ನು ತಿಳಿಸಿದಳು. ಮಂತ್ರಿಯು ರಾಜನ ಮೆಚ್ಚಿನ ರಾಣಿಯ ಮಾತನ್ನು ಮೀರುವುದಾದರೂ ಹೇಗೆ? ಭದ್ರತೆಗಾಗಿ ಕೆಲವರು ಯೋಧರನ್ನು ಕಳಿಸಿಕೊಡುವುದಾಗಿ ಹೇಳಿದ.

‘ನಾವಿಬ್ಬರೇ ಹೋಗೋದು ಸಾಧ್ಯ ಇಲ್ಲವಾ ಮಂತ್ರಿಗಳೆ?’
-ಮದನಿಕೆ ಕೇಳಿದಳು.

‘ಎಲ್ಲಾದರೂ ಉಂಟೆ ರಾಣಿಯವರೆ! ಅದೂ ಮಹಾರಾಜರು ಬೇರೆ ಇಲ್ಲ. ಇಂಥ ಸಂದರ್ಭದಲ್ಲಿ ನಾನು ತೀರ್ಮಾನ ತೆಗೆದುಕೊಳ್ಳುವುದೇ ಸರಿಯಲ್ಲ. ಆದರೆ ರಾಣಿಯವರ ಮಾತನ್ನೂ ಮೀರುವಂತಿಲ್ಲ. ಹಾಗೆಂದು ನಿಮ್ಮನ್ನು ಮಾತ್ರವೇ ಕಳಿಸುವುದು ಕರ್ತವ್ಯಲೋಪವಾಗುತ್ತದೆ. ರಕ್ಷಣೆಗಾಗಿ ಯೋಧರನ್ನು ಕಳಿಸಲೇಬೇಕು’ ಎಂದು ಮಂತ್ರಿಗಳು ಸ್ಪಷ್ಟಪಡಿಸಿದ ಮೇಲೆ ಮದನಿಕೆ ಸುಮ್ಮನಾದಳು. ಮದಾಲಸೆಗೆ ಬೇಗ ಸಿದ್ಧವಾಗುವಂತೆ ಹೇಳಿದಳು.
* * *

ಈ ಘಟ್ಟದಲ್ಲಿ ಮಂಜುಳಾ ಮೇಡಂ ತನಗರಿವಿಲ್ಲದಂತೆಯೇ ಪ್ರತಿಕ್ರಿಯಿಸಿದಳು.

‘ಮದನಿಕೇನ ಆ ರಾಜ ಮದುವೆ ಆಗಬಾರದಿತ್ತು.’

ತಕ್ಷಣವೇ ಕುಮಾರ್‌ ಹೇಳಿದ :

‘ನಾನೂ ಅದನ್ನೇ ಹೇಳೋದು. ಏನೇ ಆದ್ರು ಇಂಥ ಹೆಂಗ್ಸನ್ನ ಆ ರಾಜ ಮದ್ವೆ ಆಗ್ಬಾರ್‍ದಿತ್ತು.’

‘ಎಂಥ ಹೆಂಗಸು ಅಂತ ನಿಮ್ಮ ಅಭಿಪ್ರಾಯ?’

– ಮಂಜುಳಾ ಪ್ರಶ್ನಿಸಿದಳು.

‘ಕಟ್ಟಿಕೊಂಡ ಗಂಡನ ಬಗ್ಗೆ ಗೌರವ ಇಲ್ದೆ ಆಕೆ ಏನೇನೋ ಆಗ್ತಾಳೆ. ಇಡೀ ರಾಜ ಮನೆತನಕ್ಕೆ ಕೆಟ್ಟ ಹೆಸರು ತರ್‍ತಾಳೆ.’

‘ಮುಂದೆ ಆಕೆ ಏನಾಗ್ತಾಳೋ ಗೊತ್ತಿಲ್ಲ ಕುಮಾರ್. ಆದ್ರೆ ಆಕೆ ಅರಮನೇನ ಬಂಧನ ಅಂತ ಕರೆದದ್ದು, ಅದರಿಂದ ಬಿಡುಗಡೆ ಆಗೋ ಕನಸನ್ನ ಆ ಮಂಟಪ ಹುಟ್ಟು ಹಾಕಿದ್ದು ಮಾತ್ರ ಖಂಡಿತ ಸರಿಯಾಗಿದೆ. ಚಿಕ್ಕವಯಸ್ನಿವಳನ್ನ ಮದ್ದೆ ಆಗ್ಬೇಕು ಅಂತ ಆಸೆ ಪಟ್ಟದ್ದೇ ರಾಜನಿಗೆ ಗೌರವ ತರೋ ವಿಷಯವಲ್ಲ. ಜೊತೆಗೆ ಈಕೇನ ಮದ್ವೇ ಆಗೋದಿಕ್ಕೆ ಅಂತ ಯುದ್ಧ ಮಾಡಿ ರಕ್ತಪಾತಕ್ಕೆ ಕಾರಣವಾಗಿದ್ದು ಮತ್ತೂ ಸರಿಯಲ್ಲ. ಆದ್ರಿಂದ ರಾಜಮನೆತನಕ್ಕೆ ಕೆಟ್ಟ ಹೆಸರು ತಂದದ್ದು ರಾಜನೇ ಹೊರತು ಈಕೆ ಅಲ್ಲ.’

– ಮಂಜುಳಾ ವಿವರವಾಗಿ ವಿಚಾರವನ್ನು ಮುಂದಿಟ್ಟಳು.

‘ಏನೇ ಆದ್ರು ನೀವು ರಾಜನನ್ನು ಹೀಗಳೆಯೋದು ನನಗೆ ಸರಿಬರಲ್ಲ.’

– ಕುಮಾರ್‌ ಮತ್ತೆ ಅದೇ ಧಾಟಿಯಲ್ಲಿ ಹೇಳಿದ.

‘ಇದು ಯಾರನ್ನೂ ಹೀಗಳೆಯೋ ಪ್ರಶ್ನೆ ಅಲ್ಲ ಕುಮಾರ್. ಚರಿತ್ರೆ ಮತ್ತು ಮನಸ್ಸಿನ ಪ್ರಶ್ನೆ.’

‘ಹಾಗಂತ ನಮ್ಮ ಸಂಸ್ಕೃತಿಗೆ, ಚರಿತ್ರೆಗೆ ಅವ್ಮಾನ ಮಾಡೋಥರಾ ಆ ಮದನಿಕೆ ನಡ್ಕೊಬಹುದಾ?’

‘ಮನುಷ್ಯತ್ವದ ಕಲ್ಪನೆಗೆ ಮನಸ್ಸಿನ ಪ್ರಾಮಾಣಿಕತೆಗೆ ವಿರುದ್ಧವಾಗಿ ಆ ರಾಜ ನಡ್ಕೊಬಹುದಾ?’

ಯಾಕೊ ಮಾತು ಬಿಸಿಯೇರುವುದನ್ನು ಗಮನಿಸಿದ ಸಿದ್ದಣ್ಣ ಚಟಾಕಿ ಹಾರಿಸಿದ.

‘ಬುದ್ಧಿವಂತ್ರು ಸೇರಿದ್ರೆ ಹಿಂಗೆ ನೋಡ್ರಿ. ಅದು ಸರಿಯಲ್ಲ ಇದು ಸರಿಯಲ್ಲ ಅಂಬ್ತ ವಾದ ಹೂಡಿದ್ದೇ ಹೂಡಿದ್ದು. ನಮ್ಮಂಥ ದಡ್ಡರಿಗೆ ದಾರಿ ತಪ್ಸಿದ್ದೇ ತಪ್ಸಿದ್ದು.’

ಮಂಜುಳಾ ಫಕ್ಕನೆ ನಕ್ಕಳು. ಜೊತೆಗೆ ‘ನಾನು ಕಡೇವರ್‍ಗೂ ಬಾಯ್ ಬಿಡೊಲ್ಲ. ದಯವಿಟ್ಟು ಮುಂದುವರಿಸಿ ಕುಮಾರ್ ಎಂದು ಕೇಳಿಕೊಂಡಳು. ‘ಮಧ್ಯೆ ಬಾಯಿ ಹಾಕಿದ್ರೆ ನಾನು ನಿಲ್ಸೇಬಿಡ್ತೀನಿ’ ಎಂದು ಕುಮಾರ್ ಷರತ್ತು ಹಾಕಿದ.

‘ಖಂಡಿತ ನಾನು ಬಾಯ್ ಹಾಕೊಲ್ಲ. ನೀವು ಹೇಳೋದನ್ನ ಚಿಕ್ಕಮಗು ಥರಾ ಕೇಳ್ತೀನಿ, ಆಯ್ತಾ?’ ಎಂದಳು ಮಂಜುಳ.

‘ಚಿಕ್ಕ ಮಗು ಥರಾ ಪ್ರಶ್ನೆನೂ ಕೇಳಿದ್ರೆ?’ – ಎಂದು ಕಂಡಕ್ಟರ್ ಕೆಂಚಪ್ಪ ತಲೆಹಾಕಿದ.

‘ಚಿಕ್ಕಮಗು ಕೆನ್ನೇಗೆ ಎರಡು ಕೊಡ್ದಿದ್ರೆ ಸಾಕು’ – ಎಂದು ಮಂಜುಳಾ ನಸುನಕ್ಕಳು.

‘ಕೆನ್ನೆಗ್ ಕೊಡಾದು ಅಂದ್ರೆ ಏನನ್ನ ಮೇಡಂ’ – ಲಕ್ಷ್ಮಿಯೂ ಒಂದು ಮಾತು ಸೇರಿಸಿದಳು. ಕೂಡಲೇ ಕೆಂಚಪ್ಪ ಫಕ್ಕನೆ ನಕ್ಕ.

ಅಲ್ಲೀವರೆಗೆ ಒಳಗೆ ಕಾಫಿ ಮಾಡುತ್ತಿದ್ದ ಕರಿಯಮ್ಮ ‘ಅದೇನದು ಮಾತು. ಬಾರೇ ಇಲ್ಲಿ ಲಕ್ಷ್ಮಿ, ಕಾಫಿ ತಗಂಡು ಎಲ್ರಿಗೂ ಕೊಡು’ ಎಂದು ಕೂಗಿದಳು. ಕುಮಾರನ ಮುಖದಲ್ಲಿ ಬಿಗಿ ಮೂಡುತ್ತಿದ್ದುದನ್ನು ಗಮನಿಸಿದ ಮಂಜುಳ ‘ನಾನೇ ಹೋಗ್ ತರ್‍ತೀನಿ. ನೀನಿಲ್ಲೇ ಇರು ಲಕ್ಷ್ಮಿ’ ಎಂದು ಎದ್ದಳು.

ಆದರೆ ಲಕ್ಷ್ಮಿ ಕೇಳಲಿಲ್ಲ. ‘ನಾನೂ ಬರ್‍ತೀನಿ’ ಎಂದಳು. ಮಂಜುಳಾ ಜೊತೆ ಹೋದಳು.

ಅವರಿಬ್ಬರೂ ಒಳಹೋದ ಮೇಲೆ ಪುಟ್ಟಕ್ಕ ತನ್ನ ಮಾತಿನ ವರಸೆ ಶುರು ಮಾಡಿದಳು.

‘ನೀನು ಏನೇ ಹೇಳು ಸಿದ್ದಪ್ಪಣ್ಣ ನಮ್ಮ ಕುಮಾರ ಭಾಳ ಬುದ್ಧಿವಂತ. ಈ ಬುದ್ಧಿವಂತನ ಜತೆ ಒಬ್ಬರು ಬುದ್ಧಿವಂತೆ ಬಂದಂಗಾತು ಬಿಡು.’

ಸಿದ್ದಣ್ಣನಿಗೆ ಏನನ್ನಿಸಿತೊ ಕುಮಾರನಿಗಂತೂ ಒಳಗೇ ಸಂತೋಷವಾಯಿತು. ಇದನ್ನು ಗಮನಿಸಿದ ಪುಟ್ಟಕ್ಕ ಮಾತು ಮುಂದುವರೆಸಿದಳು.

‘ಬುದ್ಧಿವಂತ್ರು ಮೇಲೆ ಮೇಲೆ ಜಗಳ ಆಡಂಗೆ ಕಾಣುಸ್ತಾರೆ ಸಿದ್ದಪ್ಪಣ್ಣ. ಆದ್ರೆ ಒಳಗೊಳಗೆ ಒಂದೇ ಥರಾ ಇರ್‍ತಾರೆ. ನಾವು ನೋಡೋರು, ಏನಪ್ಪ ಹಿಂಗ್ ವಾದ ಗೀದ ಮಾಡ್ತಾರೆ ಒಂದೋಗಿ ಇನ್ನೊಂದಾದ್ರೆ ಏನಪ್ಪ ಗತಿ ಅಂಬ್ತ ಕಡ್ಗೆ ಅಬ್ಬೇಪಾರಿ ಆಗ್ಬಿಡ್ತೀವಿ. ಬುದ್ಧಿ ಇಲ್ಲದ್ ಬಡ್ಡೈಕಳು ಅನ್ನಿಸ್ಕಂಬ್ತೀವಿ. ಬುದ್ಧಿವಂತ್ರು ಯಾವಾಗ್ಲೂ ಒಂದೇ ಬಿಡು…’ ಎಂದು ಕೆಂಚಪ್ಪನ ಕಡೆ ತಿರುಗಿ ‘ನೀನಂಬ್ತೀಯ ಕಂಡಕ್ಟರಣ್ಣ?’ ಎಂದು ಕೇಳಿದಳು.

‘ನೀನ್ ಬಲ್ ಬುದ್ದಿವಂತೆ ಬಿಡಮ್ಮ’ ಎಂದ ಕೆಂಚಪ್ಪ.

ಕುಮಾರನಿಗೆ ನಗು ಉಕ್ಕಿಬಂತು.

‘ಇಷ್ಟೆಲ್ಲ ಮಾತಾಡ್ಬೇಕಾದ್ರೆ ನಮ್ಮ ಪುಟ್ಟಕ್ಕ ಬುದ್ಧಿವಂತೆ ಅಲ್ದೆ ಇನ್ನೇನ್ ಆಗಾಕ್ ಸಾಧ್ಯ?’ ಎಂದು ಹೊಗಳಿದ.

ಪುಟ್ಟಕ್ಕನಿಗೆ ನಿಜಕ್ಕೂ ಸಂತೋಷವಾಯಿತು. ನಾಚಿಕೆಯನ್ನು ತೋರುತ್ತ ಆಕೆ ‘ಏನಂದ್ರೂ ನಿನ್ನಥರಾ ಬುದ್ಧಿವಂತ್ರಾಗಕ್ ಆಗ್ತೈತಾ? ನೀನ್ ಬಿಡು ಕುಮಾರ, ಸುತ್ತೇಳ್ ಹಳ್ಳೀಗೆ ಬುದ್ಧಿವಂತ. ಈ ಕೋಟೆ ಮೇಲೆ ಕತೆ ಕಟ್ಟಿ ನಿನ್ತರಾ ಯಾರ್ ಹೇಳ್ತಾರೆ? ಬೆಳ್ಳ್ ಮುಡುಚ್ಲಿ ಮತ್ತೆ ನೋಡಾನ?’

ಕುಮಾರನಿಗೆ ಎಲ್ಲಿಲ್ಲದ ಸಂತೋಷ, ಹೆಮ್ಮೆ.

‘ಇಷ್ಟೆಲ್ಲ ತಿಳ್ಕೊಳ್ಳೋಕೆ ನಾನ್ ಎಷ್ಟು ಕಷ್ಟ ಪಟ್ಟಿದ್ದೀನಿ ಗೊತ್ತಾ?’ ಎಂದ.

‘ಅಲ್ಲದೆ ಮತ್ತೆ’ ಎಂದಳು ಪುಟ್ಟಕ್ಕ.

ಅಷ್ಟರಲ್ಲಿ ಕರಿಯಮ್ಮ, ಲಕ್ಷ್ಮಿ, ಮಂಜುಳಾ ಮೂವರೂ ಕಾಫಿ ತಂದರು. ಎಲ್ಲರಿಗೂ ಲೋಟಗಳಿಗೆ ಹಾಕಿಕೊಟ್ಟರು.

‘ಕರಿಯಕ್ಕಯ್ಯನ ಕೈ ಕಾಫಿ ಕುಡ್ದು ಭಾಳ ದಿನ ಆಗಿತ್ತು’ ಎನ್ನುತ್ತಾ ಕಂಡಕ್ಟರ್ ಕೆಂಚಪ್ಪ ಹೀರತೊಡಗಿದ.

ಕುಮಾರ್ ಹೆಮ್ಮೆಯ ಭಾವದಲ್ಲೇ ಕಾಫಿ ಕುಡಿದು ‘ಈಗ ಎಲ್ಲ ಸರ್‍ಯಾಗ್ ಕೇಳಿ. ಮುಂದೆ ಒಳ್ಳೊಳ್ಳೆ ಘಟನೆಗಳಿವೆ. ಚಿಕ್ಕಮ್ಮ ರಾಜಕುಮಾರಿ ಒಳಗೆ, ರಾಜಕುಮಾರಿ ಚಿಕ್ಕಮ್ಮನ ಒಳಗೆ ಸೇರ್‍ಕಂಡ್ ಥರಾ ಆಡ್ತಾರೆ. ಕಿಮಕ್ ಅನ್ದಂಗ್ ಕೇಳ್ಬೇಕು’ ಎನ್ನುತ್ತಾ ಮಂಜುಳಾ ಕಡೆಗೆ ನೋಡಿದ.

ಮಂಜುಳಾ ತುಟಿಯಂಚಲ್ಲಿ ನಗೆ ಅರಳಿಸಿದಳು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವ್ಯಕ್ತಿಗತ
Next post ಗಂಟೆ ಸರಿಯುವುದು, ಬೆಳಗಿದ ಹಗಲು ಇಳಿಯುವುದು

ಸಣ್ಣ ಕತೆ

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

  • ಅವಳೇ ಅವಳು

    ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

  • ಆಮಿಷ

    ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…

cheap jordans|wholesale air max|wholesale jordans|wholesale jewelry|wholesale jerseys