ಗಂಟೆ ಸರಿಯುವುದು, ಬೆಳಗಿದ ಹಗಲು ಇಳಿಯುವುದು
ಕರಿಗಪ್ಪು ಇರುಳಲ್ಲಿ, ಮುಪ್ಪು ನೇರಿಳೆ ಹೊಗೆ,
ಕಪ್ಪು ಗುಂಗುರುಳು ನೆರೆ ಬಣ್ಣಕ್ಕೆ ಹೊರಳುವುದು;
ಉರಿಬಿಸಿಲ ಹೀರಿ ಹಿಂದೆಲ್ಲ ಕುರಿಮಂದೆಗೆ
ತಂಪೆರೆದ ಭಾರಿ ಮರಗಳ ಹಸಿರು ಛಾವಣಿ
ಎಲೆಗಳಚಿ ಒಣಗಿ ಬತ್ತಲೆಯಾಗಿ ನಿಲ್ಲುವುದು;
ಋತು ವಸಂತದ ಪಯಿರು ಬಿಗಿದ ಕಂತೆಗಳಾಗಿ
ಬಿಳುಪಾಗಿ, ಸಿದಿಗೆಯನ್ನೇರಿ ನಡೆಯುವುದು.
ಇದನೆಲ್ಲ ಕಂಡು ನಾ ಪ್ರಶ್ನೆಯನ್ನೆತ್ತುವೆನು
ನಿನ್ನ ಚೆಲುವನು ಕುರಿತು. ಎಲ್ಲ ಬಗೆ ಸವಿ, ಚೆಲುವು
ಬೆಳೆದಷ್ಟೆ ವೇಗದಲಿ ಮುಗಿಯುವುದು, ಈ ನೀನೂ
ಸಾಗಲೇಬೇಕು ಕಾಲನ ಕಸದ ಜೊತೆ ಎಲ್ಲವೂ
ಜವನ ಕುಡುಗೋಲೆದುರು ಯಾವ ರಕ್ಷಣೆಯುಂಟು
ನಿನ್ನನೊಯ್ವಾಗ, ನೀ ಪಡೆದ ಸಂತತಿ ಹೊರತು ?
*****
ಮೂಲ: ವಿಲಿಯಂ ಷೇಕ್ಸ್‌ಪಿಯರ್
Sonnet 12
When do i count the clock that tells the time