ಕೃತಯುಗದಲ್ಲಿ ಶ್ರೀಗುರು ಶಿಷ್ಯಂಗೆ ಬಡಿದು ಬುದ್ಧಿಯ ಕಲಿಸಿದರೆ
ಆಗಲಿ ಮಹಾಪ್ರಸಾದವೆಂದೆನಯ್ಯಾ
ತ್ರೇತಾಯುಗದಲ್ಲಿ ಶ್ರೀಗುರು ಶಿಷ್ಯಂಗೆ ಬೈದು ಬುದ್ಧಿಯ ಕಲಿಸಿದರೆ
ಆಗಲಿ ಮಹಾಪ್ರಸಾದವೆಂದೆನಯ್ಯಾ
ದ್ವಾಪರದಲ್ಲಿ ಶ್ರೀಗುರು ಶಿಷ್ಯಂಗೆ ಝಂಕಿಸಿ ಬುದ್ಧಿಯ ಕಲಿಸಿದರೆ
ಆಗಲಿ ಮಹಾಪ್ರಸಾದವೆಂದೆನಯ್ಯಾ
ಕಲಿಯುಗದಲ್ಲಿ ಶ್ರೀಗುರು ಶಿಷ್ಯಂಗೆ ವಂದಿಸಿ ಬುದ್ಧಿಯ ಕಲಿಸಿದರೆ
ಆಗಲಿ ಮಹಾಪ್ರಸಾದವೆಂದೆನಯ್ಯಾ
ಗುಹೇಶ್ವರ
ನಿಮ್ಮ ಕಾಲದ ಕಟ್ಟಳೆಯ ಕಲಿತನಕ್ಕೆ ನಾ ಬೆರಗಾದೆನು
ಅಲ್ಲಮನ ವಚನ. ಕೆಲವು ವರ್ಷಗಳ ಹಿಂದೆ ಈ ವಚನದ ಅರ್ಥದ ಬಗ್ಗೆ ದೊಡ್ಡ ಚರ್ಚೆಯೇ ನಡೆದಿತ್ತು. ನಮ್ಮಲ್ಲಿ ನಾಲ್ಕು ಯುಗಗಳ ಕಲ್ಪನೆ ಇದೆಯಲ್ಲವೇ? ಮೊದಲನೆಯ ಕೃತ ಯುಗದಲ್ಲಿ ಗುರುವು ಶಿಷ್ಯನನ್ನು ಬಡಿದು, ನಂತರ ತ್ರೇತಾಯುಗದಲ್ಲಿ ಬೈದು, ದ್ವಾಪರದಲ್ಲಿ ಛೇಡಿಸಿ ಬುದ್ಧಿ ಕಲಿಸುತ್ತಿದ್ದ. ಕಲಿಯುಗದಲ್ಲಿ ಗುರುವು ಶಿಷ್ಯನಿಗೆ ವಂದಿಸಿ ಬುದ್ಧಿ ಕಲಿಸಬೇಕಾಗಿದೆ ಅನ್ನುವ ಮಾತನ್ನು ಅರ್ಥಮಾಡಿಕೊಳ್ಳುವುದು ಹೇಗೆ? ಗುರುವಿನ ಸ್ಥಾನ ತಗ್ಗುತ್ತ ಬಂದಿದೆ ಎಂದೂ ಅಥವಾ ಶಿಷ್ಯ ಸಮರ್ಥನಾಗುತ್ತಾ, ಸೂಕ್ಷ್ಮಜ್ಞನಾಗುತ್ತ ಬಂದಿದ್ದಾನೆ ಎಂದೋ? ಈ ಬಗ್ಗೆ ಪರ ವಿರೋಧ ಚರ್ಚೆ ಸುದೀರ್ಘವಾಗಿ ನಡೆದಿತ್ತು. ನಿಮಗೆ ಏನನ್ನಿಸುತ್ತದೆ?
*****