ಬಕಾಸುರ ಸಂಹಾರ

-ಅರಗಿನಮನೆಯ ಅವಘಡದಿಂದ ಪಾರಾಗಿ ಕಾಡಿಗೆ ಬಂದ ಪಾಂಡವರು ಹಿಡಿಂಬವನವನು ತಲುಪಿದರು. ಅಲ್ಲಿ ಭೀಮನು ಹಿಡಿಂಬನನ್ನು ವಧಿಸಿ ರಾಕ್ಷಸಕನ್ಯೆಯಾದ ಹಿಡಿಂಬೆಯನ್ನು ಮದುವೆಯಾದ. ಒಂದು ವರ್ಷ ಕಾಲ ಕಳೆಯುವಷ್ಟರಲ್ಲಿ ಭೀಮನಿಗೆ ಪುತ್ರೋತ್ಸವವಾಗಲು, ಅವನಿಗೆ ಘಟೋತ್ಕಚನೆಂದು ನಾಮಕರಣ ಮಾಡಿ ಅಲ್ಲಿಂದ ಹೊರಡಲು ತೀರ್ಮಾನಿಸಿದರು. ಭೀಮನು ಮಡದಿ ಮಗನನ್ನು ಅಲ್ಲಿಯೇ ಬಿಟ್ಟು ತಾನು ಮತ್ತೆ ಬರುವುದಾಗಿ ತಿಳಿಸಿ ಅಲ್ಲಿಂದ ಹೊರಟನು. ಎಲ್ಲರೂ ತಮ್ಮ ತಮ್ಮ ವೇಷಗಳನ್ನು ಬದಲಿಸಿಕೊಂಡು ಬ್ರಾಹ್ಮಣವೇಷಧಾರಿಗಳಾಗಿ ಅಲ್ಲಿಂದ ದಕ್ಷಿಣಾಭಿಮುಖವಾಗಿ ನಡೆದು ಏಕಚಕ್ರನಗರವನ್ನು ತಲುಪಿದರು-

ಅರಗಿನಮನೆಯ ಅವಘಡದಿಂದ ಪಾರಾದಂತಹ ಪಾಂಡವರು
ಯಾರೂ ಅರಿಯದ ತೆರದಲಿ ನಡೆಯುತ ದಟ್ಟಾರಣ್ಯವ ತಲುಪಿದರು
ಹಿಡಿಂಬವನದಲಿ ವರುಷವಿದ್ದವರು ನಂತರ ನಡೆದರು ನಾಡಿನೆಡೆ
ವೇಷವ ಮರೆಸುತ ಮುನ್ನಡೆದಿದ್ದರು ಏಕಚಕ್ರಪುರ ಊರಿನೆಡೆ!
ಏಕಚಕ್ರಪುರ ಅಗ್ರಹಾರದಲ್ಲಿ ಭೂಸುರ ಕುಟುಂಬ ನೂರಾರು
ಪಾಂಡವರೆಲ್ಲರು ಬ್ರಾಹ್ಮಣವೇಷದಿ ಬಂದು ಅಲ್ಲಿ ನೆಲೆಯೂರಿದರು
ಅವರುಗಳುಳಿದರು ಊರಿನ ಬ್ರಾಹ್ಮಣ ಮನೆಯೊಂದರ ಪಡಸಾಲೆಯಲಿ
ಅನುದಿನ ಊರಲಿ ಅಲೆದಾಡುತ್ತಲಿ ನಿಂತರು ಭಿಕ್ಷಾವೃತ್ತಿಯಲಿ!

ಪಾಂಡುಕುಮಾರರು ಭಿಕ್ಷೆಗೆ ಹೋದರೆ ಊರಿನ ಜನ ರೇಗಾಡುವರು
‘ದುಡಿಮೆಯ ಮಾಡಲು ನಿಮಗೇನಾಗಿದೆ?’ ಎನ್ನುತ ಅವರೆಗರಾಡುವರು
ಭೀಮನು ಭಿಕ್ಷೆಯ ಬೇಡಲು ಬಂದರೆ ನೀಡದೆ ಅವನನು ಬಯ್ಯುವರು
‘ಕೊಬ್ಬಿದ ಕೋಣದ ತೆರದಲಿ ಬೆಳೆದಿಹೆ’ ಎನ್ನುತ ಸುಮ್ಮನೆ ಜರೆಯುವರು
ಆದರೆಲ್ಲರೂ ಹೊಟ್ಟೆಯಪಾಡಿಗೆ ಭಿಕ್ಷೆ ಬೇಡಲೇಬೇಕಿತ್ತು
ಪಾಂಡವರೆನ್ನುವ ಗುರುತು ಸಿಕ್ಕದೆಲೆ ಇರಬೇಕೆನ್ನುವ ಮನಸಿತ್ತು!
ಕುಂತಿಯು, ಮಕ್ಕಳು ಭಿಕ್ಷೆಯ ಬೇಡಿದ ಅಕ್ಕಿ ಬೇಳೆಗಳ ಬೇಯಿಸುತ
ಮಾಡಿದ ಅಡುಗೆಯ ಅರ್ಧಭಾಗವನ್ನು ಭೀಮನಿಗೇ ತೆಗೆದಿರಿಸುತ್ತ
ಅಕ್ಕರೆಯಿಂದಲಿ ಉಣಿಸುತ್ತಿದ್ದಳು ನೋವನು ತಾನೇ ನುಂಗುತ್ತ
ಕಷ್ಟಕಾಲ ತಮ್ಮೊಂದಿಗೆ ಉಳಿಯದು ಎಂಬ ಭರವಸೆಯ ಹೊಂದುತ್ತ!

ದಿನಗಳು ಹೀಗೆಯೆ ಉರುಳುತ್ತಿದ್ದವು, ಒಂದಿನ ವಿಪ್ರನ ಮನೆಯಲ್ಲಿ
ಅತಿಗೋಳಾಟವು ಕೇಳಿಸಿತವರಿಗೆ ಅಂದಿನ ತಣ್ಣನೆ ರಾತ್ರಿಯಲಿ
ಬ್ರಾಹ್ಮಣ ದಂಪತಿ ವಾದವ ಮಾಡುತ ರೋಧಿಸುತಿದ್ದರು ಜೊತೆಯಾಗಿ
ಚಿಕ್ಕವಯಸ್ಸಿನ ಪುತ್ರನು ಓರ್ವನು ನೋಡುತಲಿದ್ದನು ಬೆರಗಾಗಿ
ಮನೆಯೊಳಗಿನ ಆ ರೋಧನ ಕೇಳಿದ ಕುಂತಿಯ ಮನದಲಿ ಸಂಕಟವು
ಕಾರಣವೇನೋ ಅರಿವ ಕುತೂಹಲ ಮೂಡಿತು ಮನದಲಿ ಆ ದಿನವು
ಕುಂತಿಯು ಬ್ರಾಹ್ಮಣ ದಂಪತಿಯಿಬ್ಬರ ಸಂಧಿಸಿ ಕಾರಣ ಕೇಳಿದಳು
ದಂಪತಿ ಹೇಳಿದ ಕತೆಯನು ಕೇಳಿದ ಕುಂತಿಯು ತಾ ಹೌಹಾರಿದಳು!

ಅಮ್ಮಾ, ಆಲಿಸು ನಮ್ಮಿ ನಾಡಿನ ತೀರದ ಗೋಳಿನ ಕಥೆಯನ್ನು
ನಮ್ಮಿ ನಾಡಿನ ನೆಮ್ಮದಿ ಕದಡಿದ ನಮ್ಮೂರಿನ ಈ ವ್ಯಥೆಯನ್ನು
ನಾಡಿನ ಜನತೆಯ ರಕ್ಷಿಸಲಾಗದ ನಾಯಕನಿರುವನು ನಾಡಿನಲಿ
ಕಾಡಿನ ಬದುಕನು ನಾಡಿಗೆ ನೀಡಿದ ಕೈಲಾಗದ ದೊರೆ ನಮಗಿಲ್ಲಿ

ಬ್ರಾಹ್ಮಣ ಹೇಳಿದ- “ತಾಯಿಯೆ, ಆಲಿಸು ಊರಿನ ಉತ್ತರಭಾಗದಲಿ
ಉಬ್ಬಿದ ಹೊಟ್ಟೆಯ ರಕ್ಕಸನಿರುವನು ಬೆಟ್ಟಗುಡ್ಡಗಳ ನಡುವಿನಲಿ
ಅಲ್ಲಿಯ ಗುಹೆಯಲಿ ವಾಸಿಸುತಿರುವನು ತನ್ನ ಕುಟುಂಬದ ಜೊತೆಯಲ್ಲಿ
‘ಬಕ’ನೆಂದವನನ್ನು ಕರೆವರು ಮಂದಿಯು, ನಿಲ್ಲರು ಯಾರೂ ಎದುರಲ್ಲಿ
ಮೊದಲಿಗೆ ರಕ್ಕಸ ಊರಿಗೆ ನುಗ್ಗುತ ನಿತ್ಯವೂ ದಾಳಿ ಮಾಡುತ್ತ
ದನಗಳ ಜನಗಳ ಕೊಲ್ಲುತಲಿದ್ದನು ಬೆಟ್ಟದ ಗುಹೆಯೆಡೆ ಒಯ್ಯುತ್ತ
ಊರಿನ ಜನಗಳು ರಾಜನ ಬಳಿಯಲಿ ದೂರನು ಒಯ್ದರು ಭಯದಲ್ಲಿ
ರಕ್ಕಸ ದಾಳಿಯ ವಿವರವ ನೀಡುತ ‘ರಕ್ಷಿಸು’ ಎಂದರು ವಿನಯದಲಿ
ರಾಜನು ಅಂದೇ ಸೈನ್ಯದ ಸಮೇತ ನಡೆದನು ರಕ್ಕಸ ಗುಹೆಯತ್ತ
ರಕ್ಕಸ ಮಾಡಿದ ಘರ್ಜನೆ ಕೇಳಿದ ರಾಜನು ನಿಂತನು ನಡುಗುತ್ತ!

ರಾಜನು ಬೇಡಿದ ರಕ್ಕಸ ಬಕನನು- “ದಿನವೂ ದಾಳಿಯ ಮಾಡದಿರು
ಸಿಕ್ಕಸಿಕ್ಕವರ ಕೊಲ್ಲುತ ನಿತ್ಯವು ನನ್ನ ಪ್ರಜೆಗಳನ್ನು ಕಾಡದಿರು
ನಾನೇ ಕಳಿಸುವೆ ನಿತ್ಯಾಹಾರವ ನೀನಿರುವಂತಹ ಗುಹೆಯ ಬಳಿ
ಎಂದೂ ಆಡಿದ ಮಾತಿಗೆ ತಪ್ಪೆನು ಎಂಬುವ ಸತ್ಯವ ನೀನು ತಿಳಿ”
ರಾಜನು ಹೇಳಿದ ಮಾತನು ಕೇಳಿದ ಬಕನಿಗೆ ಸಂತಸವಾಗಿತ್ತು
ಶ್ರಮವಿಲ್ಲದೆಯೇ ಊಟವು ದೊರೆವುದು, ಅದುವೇ ಅವನಿಗೆ ಬೇಕಿತ್ತು
ರಕ್ಕಸ ಹೇಳಿದ- “ರಾಜನೆ, ಆಲಿಸು ಮೆಚ್ಚಿದೆ ನಿನ್ನ ವಿವೇಕವನು
ಜೋಡಿಕೋಣಗಳ ಹೂಡಿದ ಗಾಡಿಯ ಭರ್ತಿಯಾಗಿ ಆಹಾರವನು
ಗಾಡಿಯ ಜೊತೆಯಲಿ ಕಳುಹಿಸಿಕೊಡುತಿರು ತಪ್ಪದೆ ಒಬ್ಬನು ನರನನ್ನು
ನೀಡಿದ ಮಾತಿಗೆ ತಪ್ಪಿದೆಯಾದರೆ ಮೊದಲಿಗೆ ನಿನ್ನನು ತಿನ್ನುವೆನು”
ರಾಜನು ಒಪ್ಪುತ ಆ ಕ್ಷಣದಿಂದಲೆ ಜಾರಿಗೆ ತಂದನು ಕಾನೂನು
ನಿತ್ಯವು ಒಬ್ಬೊಬ್ಬರ ಮನೆಯಿಂದಲಿ ಕಳುಹಲೊಬ್ಬ ಮಾನವನನ್ನು

ಅಂದಿನಿಂದಲೂ ಇಂದಿನವರೆಗೂ ಪಾಲಿಸಿ ರಾಜ ನಿರೂಪವನು
ಸರದಿಯ ತೆರದಲಿ ಕಳುಹುತಲಿರುವೆವು ಮನೆಮನೆಯಿಂದೊಬ್ಬೊಬ್ಬರನು
ಇಂದಿನ ಸರದಿಯು ನಮ್ಮಯ ಪಾಲಿಗೆ ಅನಿಷ್ಟದಂತೆಯೆ ಈ ಮನೆಗೆ
ನಮಗಿರುವವನಿವನೊಬ್ಬನೇ ಪುತ್ರ ಅವನನು ಕಳುಹುವ ಬಗೆ ಹೇಗೆ?
ಹಣವಿರುವವರೋ ಬಡವರ ಮನೆಯಲಿ ಆಳು ಖರೀದಿಸಿ ಕಳುಹುವರು
ಧನವಿಲ್ಲದ ನಮ್ಮಂತಹ ಬಡವರು ಕಣ್ಣೀರಲಿ ಕೈ ತೊಳೆಯುವರು
ಪ್ರಜೆಗಳ ರಕ್ಷಣೆ ಮಾಡಲು ಆಗದ ಹೇಡಿಯು ನಾಡಿನ ದೊರೆಯಿಲ್ಲಿ
ಜನತೆಯ ಕಷ್ಟವ ನೀಗದ ಅವನಿಗೆ ದೊರೆತನವೇತಕೆ? ಅದು ಸುಡಲಿ
ಮಗನನ್ನು ಕಳಿಸದೆ ನಾನೇ ಹೋಗುವೆ ಎಂದರೆ ಹೆಂಡತಿ ತಡೆಯುವಳು
ತಾನೇ ಹೋಗುವೆ ಎನ್ನುತಲಿರುವಳು ನನ್ನನು ಸಾಯಲು ಬಿಡದವಳು”
ಬ್ರಾಹ್ಮಣ ಹೇಳಿದ ವ್ಯಥೆಯನ್ನು ಕೇಳಿದ ಕುಂತಿಯು ಚಿಂತೆಯ ಮಾಡಿದಳು
ಬಕಾಸುರನ ಆ ಸಂಗತಿಯೆಲ್ಲವ ಮಕ್ಕಳ ಬಳಿ ಮಾತಾಡಿದಳು
ಕುಂತಿಯು ನುಡಿದಳು- “ಆಶ್ರಯ ನೀಡಿದ ಬ್ರಾಹ್ಮಣ ದಂಪತಿಗಳು ಇವರು
ಅವರ ಸಂಕಟವು ನಮ್ಮ ಸಂಕಟವು ಅವರು ನೋವನುಣುತಿರುವವರು
ಅಲ್ಲದೆ ರಕ್ಕಸ ಕಾಟಕೆ ನಾಡೇ ನಲುಗಿದೆ ಹೇಡಿಯಾಡಳಿತದಲಿ
ಇಂತಹ ರಾಜರು ಇರುವವರೆವಿಗೂ ನೆಮ್ಮದಿ ಇರುವುದೆ ನಾಡಿನಲಿ?
ಊರಿಗೆ ಒಳಿತನ್ನು ಮಾಡುವುದೇನೇ ನಮ್ಮಗಳೆಲ್ಲರ ಕರ್ತವ್ಯ
ಆದುದರಿಂದಲಿ ಕಾಟ ನಿವಾರಿಸಿ ಊರಿಗೆ ನೀಡುವ ಭವಿತವ್ಯ”
ಪಾಂಡವರೆಲ್ಲರು ತಾಯಿಯ ಮಾತಿಗೆ ತಮ್ಮ ಒಪ್ಪಿಗೆಯ ನೀಡಿದರು
ಮುಂದೆ ತಾವೇನು ಮಾಡಬೇಕೆಂದು ಕುಳಿತು ಚರ್ಚೆಯನು ಮಾಡಿದರು
ಕುಂತಿಯು ನುಡಿದಳು ನಂತರ ಬ್ರಾಹ್ಮಣ ದಂಪತಿಯೊಂದಿಗೆ ಹೀಗೆಂದು-
“ಮಕ್ಕಳು ಐವರು ಇರುವರು ನನ್ನಲಿ ಅವರಲಿ ಒಬ್ಬನ ನಾನಿಂದು
ಕಳಿಸುವೆ ರಕ್ಕಸ ಹೊಟ್ಟೆಯ ಸೇರಲು, ಅಳುವನು ನಿಲ್ಲಿಸಿ ನೀವುಗಳು
ಆಶ್ರಯ ನೀಡಿದ ಋಣಭಾರವನ್ನು ತೀರಿಸಿಕೊಳುವೆವು ನಾವುಗಳು”
ಬ್ರಾಹ್ಮಣ ದಂಪತಿ ಮೊದಲಿಗೆ ಕುಂತಿಯ ಸಲಹೆಗೆ ಒಪ್ಪಿಗೆ ಕೊಡಲಿಲ್ಲ
‘ನಮ್ಮ ಸಂಕಟವು ನಮ್ಮದು’ ಎಂದರೆ ಕುಂತಿಯು ಹಠವನು ಬಿಡಲಿಲ್ಲ
‘ಕಷ್ಟ ಕಾಲದಲಿ ಒಬ್ಬರಿಗೊಬ್ಬರು’ ಎನ್ನಲು ಅವರೂ ಒಪ್ಪಿದರು
ಕುಂತಿಯು ಹೇಳಿದ ಹಾಗೆಯೆ ನಡೆಯಲು ಒಪ್ಪಿ ಅವರು ಸಹಕರಿಸಿದರು!

ದೀನರ ಪಾಲಿಗೆ ದೈವಸಹಾಯವು ದೊರಕದೆ ಇರುವುದೆ ಲೋಕದಲಿ
ದೀನದರಿದ್ರರ ಬಾಳಲಿ ಬೆಳಕನು ಮೂಡಿಸದಿರುವುದೆ ಪ್ರೀತಿಯಲಿ
ಹೀನನಾದವನು ಏನೂ ಮಾಡನು ಭೂತಾಯಿಗೆ ಹೊರೆಯಾಗುವನು
ದೀನರ ರಕ್ಷಣೆ ಮಾಡುವ ಮಾನವ ಮಹಾದೇವ ತಾನಾಗುವನು

ಮರುದಿನ ಎಲ್ಲವು ಸಿದ್ಧತೆಯಾಯಿತು ಬ್ರಾಹ್ಮಣ ದಂಪತಿ ಮನೆಯಲ್ಲಿ
ಭೀಮನು ಹೊರಟನು ರಕ್ಕಸ ಗುಹೆಯೆಡೆ ಅನ್ನವ ತುಂಬಿದ ಗಾಡಿಯಲಿ
ಬಗೆಬಗೆ ತಿಂಡಿಯು ಬಂಡಿಯ ತುಂಬಾ ವಿವಿಧಾಕಾರದ ಪಾತ್ರೆಯಲಿ
ಭರದಲಿ ಬಂಡಿಯ ಸಾಗಿಸಿ ಹೊರಟನು ನೆರೆದಿಹ ಜನಗಳ ಜಾತ್ರೆಯಲಿ
ಆಜಾನುಬಾಹು ಭೀಮನ ನೋಡುತ ಅಚ್ಚರಿಗೊಂಡರು ಊರ ಜನ
ಮಾತಾಡಿಕೊಂಡರು ‘ರಕ್ಕಸನೆಂದೂ ತಿಂದಿರಲಾರನು ಇಂಥವನ’!

ಸಾವಿರ ಸಾವಿರ ಸಂಖ್ಯೆಯ ಜನಗಳು ನೆರೆದಿದ್ದರು ಆ ಬೀದಿಯಲಿ
ರಕ್ಕಸ ಹೊಟ್ಟೆಯ ಸೇರಲು ಹೊರಟಿಹ ಜಟ್ಟಿ ಭೀಮನನು ನೋಡುತಲಿ
ಆಟವ ನೋಡುವ ತೆರದಲ್ಲಿ ನೆರೆದಿಹ ಜನರನು ಭೀಮನು ನೋಡಿದನು
ಹೇಡಿಗಳಂತೆಯೆ ಕಂಡರು ಎಲ್ಲರು ತನ್ನಲ್ಲಿಯೆ ಗೊಣಗಾಡಿದನು
ಭೀಮನು ತಾಯಿಗೆ ಮೆಲ್ಲಗೆ ಹೇಳಿದ- “ನೋಡಮ್ಮಾ, ಈ ಜನಗಳನು
ಎಲ್ಲರು ಒಟ್ಟಿಗೆ ಹೂಂಕರಿಸಿದ್ದರೆ ನಿಲ್ಲುತ್ತಿದ್ದನೆ ರಕ್ಕಸನು?
ಜನರಲಿ ಒಗ್ಗಟ್ಟಿಲ್ಲದ ಕಾಲಕೆ ಬಕನಂತಹವರು ಮೆರೆಯುವರು
ತಮ್ಮಯ ಬೇಳೆಯ ಬೇಯಿಸಿಕೊಳ್ಳುತ ಜನಗಳ ರಕುತನ ಹೀರುವರು”
ಕುಂತಿಯು ನುಡಿದಳು, “ಅಪ್ಪಾ ಮಗನೇ, ಸ್ವಾರ್ಥಿಗಳಲ್ಲಿನ ಮಾನವರು
ಪರರಿಗೆ ಏನಾದರೆ ತಮಗೇನು, ತಮಗೊಳಿತಾಗಲಿ ಎನ್ನುವರು
ಕೋರುವೆ ಈ ದಿನ ನಿನಗೊಳಿತಾಗಲಿ ಜನಗಳ ಚಿಂತೆಯ ಬಿಟ್ಟುಬಿಡು
ಮುಂದಿನ ಕಾರ್ಯವ ಬೇಗನೆ ಮುಗಿಸುತ ಕೂಡಲೆ ಹಿಂದಕೆ ಬಂದುಬಿಡು”
ತುಂಬಿದ ಗಾಡಿಯ ಎಳೆಯುತಲಿದ್ದವು ಕೊಬ್ಬಿದ ಜೋಡಿ ಕೋಣಗಳು
ಗಾಡಿಯ ತುಂಬಾ ತುಳುಕುತ್ತಿದ್ದವು ಬಗೆಬಗೆ ತಿಂಡಿ, ತಿನಿಸುಗಳು
ಗಾಡಿಯು ಹೊರಟಿರೆ ಬೆಟ್ಟದ ದಿಕ್ಕಿಗೆ ಭೀಮನ ಗಮನವು ಗಾಡಿಯಲಿ
ತಿಂಡಿಯನೆಲ್ಲವ ಮೆಲ್ಲಿದ ಮೆಲ್ಲಗೆ ಸಾಗುತ ಬೆಟ್ಟದ ದಾರಿಯಲಿ!

ಓಹೋ! ಮಷ್ಕಳ ಭೋಜನ ದೊರಕಿತು ಮಹಾಮಲ್ಲನಿಗೆ ಈ ದಿನವು
ಆಹಾ! ಬಹುದಿನಕೆಂತಹ ಭಾಗ್ಯವು ಬಂದೊದಗಿತು ಸುಖಿಸಲು ಮನವು
ಮಹಾಮಹಿಮ ಭಗವಂತನು ಕರುಣಿಸಿ ಒದಗಿಸಿದಂತಹ ಶುಭದಿನವು
ಮಹಾಸಂತಸವ ಮನದಲಿ ತಾಳುತ ಸವಿಯುವಂತಹುದು ಭೋಜನವು

ಎಷ್ಟೋ ದಿನಗಳ ನಂತರ ಭೀಮನ ತೋಳದ ಹೊಟ್ಟೆಯು ತುಂಬಿತ್ತು
ಹೊಟ್ಟೆಯು ತುಂಬಿದ ಸಂತಸದಿಂದಲಿ ಢರನೆ ತೇಗನು ತಂದಿತ್ತು
ಭೀಮನು ತಿನ್ನುವ ಸಂಭ್ರಮದಲ್ಲಿ ನಡೆದುವು ಕೋಣ ನಿಧಾನದಲಿ
ಹೆಜ್ಜೆಯ ಮೇಲೆ ಹೆಜ್ಜೆಯನಿಡುತಿಹ ಮದುವಣಗಿತ್ತಿ ವಿಧಾನದಲಿ
ಭೀಮನಿಗೂ ತಡವಾದರೆ ಒಳ್ಳೆಯದೆನ್ನುವ ಭಾವನೆ ಬಲಿದಿತ್ತು
ಬಕನಿಗೆ ಹಸಿವನ್ನು ತಡೆಯಲು ಆಗದೆ ಪಿತ್ತವು ನೆತ್ತಿಯ ತಲುಪಿತ್ತು
ಊರಿನ ಎಲ್ಲಾ ಜನರನ್ನೊಮ್ಮೆಗೆ ತಿನ್ನುವ ಕೋಪವು ಬಂದಿತ್ತು
ಕೈ ಕೈ ಹಿಚುಕುತ ಹಲ್ಲನು ಮಸೆಯುತಲಿರುತಿರೆ ಗಾಡಿಯು ಕಂಡಿತ್ತು!

ಹಸಿದಿಹ ಹೊಟ್ಟೆಯ ಮೆಲ್ಲಗೆ ಸವರುತ ಮುಂದಕೆ ಬಂದನು ರಕ್ಕಸನು
ಗೊರಗೊರ ಸದ್ದನು ಮಾಡುತಲಿದ್ದನು ಬಾಯಾರಿದ ನರಭಕ್ಷಕನು
ನಿಧಾನವಾಗಿಯೆ ಗಾಡಿಯು ಬಂದಿತು ರಕ್ಕಸನಿಹ ಗುಹೆ ಬಳಿಯಲ್ಲಿ
ಭೀಮ ಸುತ್ತಲೂ ದಿಟ್ಟಿಸಿ ನೋಡಿದ ಮೂಳೆಯ ರಾಶಿಯ ಬಯಲಲ್ಲಿ
ಕಪಿಲೆಯ ಬಾನಿನ ಹೊಟ್ಟೆಯ ಹೊಂದಿದ ರಕ್ಕಸನಿದ್ದನು ಮುಂದುಗಡೆ
ತಿನ್ನುವ ತವಕವ ಹೊಂದಿದ ಹಲವರು ಮರಿರಕ್ಕಸ ಪಡೆ ಹಿಂದುಗಡೆ
ಜೊಲ್ಲನು ಸುರಿಸುತ ನಾಯಿಗಳಂತೆಯೆ ಕಾಯುತ್ತಿದ್ದರು ಭೋಜನಕೆ
ಅರಿಯದ ಮೂಢರು ತಮ್ಮಗಳಿಂದಲಿ ತೊಂದರೆಯೆಂಬುದು ಬಹುಜನಕೆ
ಖಾಲಿಯಾಗಿರುವ ಪಾತ್ರೆಯ ಸಂಗಡ ಬಂದಿಹ ಗಾಡಿಯ ನೋಡುತಲಿ
ಕರ್ಕಶ ದನಿಯಲಿ ಬೊಬ್ಬೆಯ ಹಾಕಿದರಾಹಾಕಾರವ ಮಾಡುತಲಿ!
ಹೊಟ್ಟೆಯ ಸಂಕಟ ಹೆಚ್ಚಿಸಿಕೊಂಡವು ಹಸಿದಿದ್ದಂತಹ ಕುನ್ನಿಗಳು
ಲಟ್ಟೆಯ ಹೊಡೆಯುತ ತಿಂದಂತಹ ದಿನ ನೆನಪಾಗಿದ್ದವು ನಿನ್ನೆಗಳು
ಬಕನೋ ತನ್ನಯ ಕಣ್ಣನು ನಂಬದೆ ನೋಡುತಲಿದ್ದನು ಎಲ್ಲವನು
ಗಾಡಿಯ ಒಳಗಡೆ ನಡುಗದೆ ನಗುತಲಿ ಕುಳಿತಿದ್ದಂತಹ ಮಲ್ಲನನು!

ಬಕನಿಗೆ ಏಕೋ ಮೊದಲನೆ ಬಾರಿಗೆ ನಡುಕವು ಹುಟ್ಟಿತು ಮೈಯಲ್ಲಿ
ಕೂಡಲೆ ಕಲ್ಲಿನ ಬಡಿಗೆಯ ಹಿಡಿದನು ನಡುಗುವ ತನ್ನಯ ಕೈಯಲ್ಲಿ
ಒಂದೇ ಏಟಿಗೆ ಭೀಮಸೇನನನು ಕೊಲ್ಲಲು ರಭಸದಿ ಎರಗಿದನು
ರಕ್ಕಸ ಹೊಡೆತಕೆ ಸಿಕ್ಕದೆ ಭೀಮನು ಚಕ್ಕನೆ ಪಕ್ಕಕೆ ಜರುಗಿದನು
ಕಲ್ಲಿನ ಬಡಿಗೆಯ ಪೆಟ್ಟಿಗೆ ಬಂಡಿಯ ಪಾತ್ರೆಗಳೆಲ್ಲ ಚೆದುರಿದವು
ಬಂಡಿಗೆ ಹೂಡಿದ ಕೋಣಗಳೆರಡೂ ಭಾರೀ ಶಬ್ದಕೆ ಬೆದರಿದವು
ಭೀಮನು ತೋಳನು ತಟ್ಟುತ ನಿಂತನು ರಕ್ಕಸನೊಂದಿಗೆ ಯುದ್ಧಕ್ಕೆ
ರಕ್ಕಸನೂ ಗೊರಗುಟ್ಟುತ ಬಂದನು ಭೀಮನೊಡನೆ ಕಾದಾಟಕ್ಕೆ!
ಮಲ್ಲಯುದ್ಧದಲಿ ಒಬ್ಬರನೊಬ್ಬರು ಚಿತ್ತುಬೀಳಿಸಲು ನೋಡಿದರು
ಮಹಾಮಲ್ಲರಂತೆಯೆ ಕಾದಾಡುತ ಮುಷ್ಠಿಗಳಲ್ಲಿ ಬಡಿದಾಡಿದರು
ಆದರೆ, ಬಕನದು ಒರಟು ಹೋರಾಟ ನೀತಿನಿಯಮಗಳು ಇರಲಿಲ್ಲ
ಅರಿತ ಭೀಮನೂ ಒರಟುತನಕ್ಕೇ ಇಳಿದನು ಅವನೂ ಬಿಡಲಿಲ್ಲ
ಮುಂದಿನ ಕ್ಷಣದಲಿ ರಕ್ಕಸನಿದ್ದನು ಭೀಮನ ಉಕ್ಕಿನ ರೆಟ್ಟೆಯಲಿ
ರಕ್ಕಸ ತಪ್ಪಿಸಿಕೊಳ್ಳಲು ಹೆಣಗಿದ ನರಳುತ ಭೀಮನ ಹಿಡಿತದಲಿ!

ಭೀಮನು ಬಕನನು ಕೆಳಗಡೆ ಬೀಳಿಸಿ ಅಂಗಾತದಲ್ಲಿ ಮಲಗಿಸಿದ
ರೆಟ್ಟೆಯರಡನ್ನು ಒಟ್ಟಿಗೆ ಮುರಿಯುತ ಅವನ ಶಕ್ತಿಯನು ಉಡುಗಿಸಿದ
ಏದುಸಿರಿಡುತಿಹ ರಕ್ಕಸನೆದೆಯನು ಮುಷ್ಟಿಯ ಬಿಗಿಯುತ ಗುದ್ದಿದನು
ಬಕಬಕ ಬಕಬಕ ಕಾರಿದ ನೆತ್ತರ ಕೆಸರಲಿ ಅವನನು ಅದ್ದಿದನು
ಬಕಾಸುರನಿಗೊದಗಿದ ಸ್ಥಿತಿ ನೋಡಿದ ಮರಿರಕ್ಕಸ ಪಡೆ ಹೆದರಿತ್ತು
ನಾಯಕ ಸತ್ತುದು ಅರಿವಾಗುತ್ತಲೆ ದಿಕ್ಕುದಿಕ್ಕಿನೆಡೆ ಚೆದುರಿತ್ತು!

ನಿತ್ಯ ನಿರಂತರ ಜನರನು ಕಾಡಿದ ರಕ್ಕಸ ಕಾಟವು ಅಳಿದಿತ್ತು
ಹೆದರಿಸಿ ಬೆದರಿಸಿ ಜನಗಳ ಪೀಡಿಸಿ ಬದುಕುವ ಸಂತತಿ ಕಳೆದಿತ್ತು
ಆಗಲೆ ಸಂಜೆಯು ಮುಗಿಯುತ ಬಂದಿತು ಕತ್ತಲು ಆವರಿಸುತ್ತಿತ್ತು
ಬೇಗನೆ ನಾಡಿಗೆ ಬೆಳಕನು ನೀಡಲು ರಾತ್ರಿಯು ಕಾತರಪಡುತಿತ್ತು
ಭೀಮನು ಕೂಡಲೆ ಗಾಡಿಯ ಹಿಂದಕೆ ತಿರುಗಿಸಿ ಬಂದನು ಮನೆಯೆಡೆಗೆ
ಅಂದಿನ ರಾತ್ರಿಯೆ ಪಾಂಡವರೆಲ್ಲರು ಹೊರಟೇಬಿಟ್ಟರು ಬೇರೆಡೆಗೆ!

ಮರುದಿನ ನಸುಕಿನ ವೇಳೆಗೆ ಜನಗಳು ಕಂಡರು ಗಾಡಿಯ ಊರಿನಲಿ
ಗಾಡಿಯಲಿದ್ದವು ಖಾಲಿಪಾತ್ರೆಗಳು, ಜೋಡಿ ಕೋಣಗಳು ಎದುರಿನಲಿ
ನರಿಗೆ ತುಂಬಾ ಗಾಬರಿಯಾಯಿತು ಗಾಡಿ, ಕೋಣಗಳ ನೋಡುತ್
ರಕ್ಕಸ ಖಂಡಿತ ದಾಳಿ ಮಾಡುವನು ಎಂದರು ಮನದಲಿ ಹೆದರುತ್ತ
ಸರದಿಯ ಪ್ರಕಾರ ಆಳನು ಕಳಿಸದೆ ಗೋಳನು ತಂದರು ನಾಡಿನಲಿ
ರಕ್ಕಸ ಕೋಪಕೆ ಬಲಿಯಾಗುವೆವೆ? ಮಾತುಗಳಾದವು ಬೀಡಿನಲಿ
ರಕ್ಕಸನಿಗೆ ಆಹಾರವ ನೀಡದೆ ಮೋಸವ ಮಾಡಿದರೆನ್ನುತ್ತ
ಉಕ್ಕುವ ಕೋಪದಿ ಜನರು ಜಮಾಯಿಸಿ ಹುಡುಕಿರಿ ಅವರನು ಎನ್ನುತ್ತ
ಬ್ರಾಹ್ಮಣವೇಷದ ಪಾಂಡುಕುಮಾರರ ಊರಿನ ಎಲ್ಲೆಡೆ ಹುಡುಕಿದರು
ಊರೊಳಗೆಲ್ಲೂ ಅವರನು ಕಾಣದೆ ಆಶ್ರಯದಾತನ ತದಕಿದರು!

ಕೋಪದಿ ಕೆರಳಿದ ರಕ್ಕಸ ಊರಿಗೆ ನಿತ್ಯವೂ ದಾಳಿ ಮಾಡುವನು
ಮಾತಿಗೆ ತಪ್ಪಿದ ಊರಿನ ಜನಗಳ ರುಂಡ ಮುಂಡ ಚೆಂಡಾಡುವನು
ಎನ್ನುತ ಹೆದರಿದ ಊರಿನ ಮಂದಿಯು ಕೂಡಲೆ ಒಂದೆಡೆ ಸೇರಿದರು
ರಕ್ಕಸನೊಂದಿಗೆ ಹೊಸ ಒಪ್ಪಂದವ ಮಾಡಿಕೊಳಲು ನಿರ್ಧರಿಸಿದರು
ಅಂತೆಯೆ ಸಂಜೆಗೆ ತಲುಪಿದರೆಲ್ಲರು ಬೆಟ್ಟದ ಮೇಲಿನ ಗುಹೆಯನ್ನು
ಕಂಡರು ಅಲ್ಲಿಯೆ ನೆತ್ತರ ಮಡುವಲಿ ಬಿದ್ದಿದ್ದಂತಹ ಬಕನನ್ನು!
ಮಡಿದ ರಕ್ಕಸನ ನೋಡಿದ ಜನಗಳು ಮನದಲಿ ಅಚ್ಚರಿ ಹೊಂದುತ್ತ
ಯಾರು ಕೊಂದರೋ ಹೇಗೆ ಕೊಂದರೋ ಎಲ್ಲವು ವೀರನದೇ ಚಿತ್ತ
ಏನೇ ಆಗಲಿ ಊರನ್ನು ಕಾಡಿದ ಪೀಡೆ ನಿವಾರಣೆಯಾಗಿತ್ತು
ಇಷ್ಟೂ ದಿನಗಳ ಹಿಂಸೆಯು ತಪ್ಪಿತು, ಜನರಿಗೆ ಸಂತಸವಾಗಿತ್ತು
ಜಗನ್ನಿಯಾಮಕ ಬ್ರಾಹ್ಮಣ ವೇಷದಿ ಬಕನನು ಕೊಂದನು ಎನ್ನುತ್ತ
ಆಪತ್ಥಾಂಧವ ಅನಾಥರಕ್ಷಕ ಎನ್ನುತ ಭೀಮನ ಹೊಗಳುತ್ತ
ಊರಿಗೆ ಭಿಕ್ಷೆಗೆ ಬಂದಿದ್ದಂತಹ ಬ್ರಾಹ್ಮಣರನು ಕೊಂಡಾಡಿದರು
ಭೀಮನ ಪ್ರತಿಮೆಯ ಊರಲಿ ನಿಲ್ಲಿಸಿ ನಿತ್ಯಪೂಜೆಯನು ಮಾಡಿದರು!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮೋಹನ ಮುರಳಿ
Next post ವಚನ ವಿಚಾರ – ಗುರು ಶಿಷ್ಯರು

ಸಣ್ಣ ಕತೆ

  • ಗಂಗೆ ಅಳೆದ ಗಂಗಮ್ಮ

    ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…

  • ಜುಡಾಸ್

    "ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…

  • ಕೆಂಪು ಲುಂಗಿ

    ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…

cheap jordans|wholesale air max|wholesale jordans|wholesale jewelry|wholesale jerseys