ಶಿಶುಪಾಲ ವಧೆ

-ಕೌರವರಿಂದ ಸಂಕಷ್ಟಗಳಿಗೊಳಗಾಗಿ ಬಳಿಕ ಸ್ವಪ್ರಯತ್ನದಿಂದ ನಾಡನ್ನು ಕಟ್ಟಿ, ರಾಜ್ಯ ವಿಸ್ತಾರ ಮಾಡಿ ಇಂದ್ರಪ್ರಸ್ಥದಲ್ಲಿ ನೆಲೆಗೊಂಡ ಪಾಂಡವರು ರಾಜಸೂಯಯಾಗವನ್ನು ಕೈಗೊಂಡು ದಾಯಾದಿಗಳಾದ ಕೌರವರನ್ನು ಆಮಂತ್ರಿಸಲು, ಅವರುಗಳೂ ನೋಡೋಣವೆಂದು ಬಂದರು. ಭೀಷ್ಮ ದ್ರೋಣಾದಿ ಹಿರಿಯರೂ ಶುಭ ಹಾರೈಸಲು ಯಾಗಕ್ಕೆ ಬಂದರು. ಮಯಸಭೆಯಲ್ಲಿ ದುರ್ಯೋಧನ ಅಪಮಾನಿತನಾಗಿ ಕೊರಗಿದ. ಅತಿಶಯವಾದ ಯಾಗವನ್ನು ಮಾಡಿದ ಪಾಂಡವರು ಸೈ ಎನ್ನಿಸಿಕೊಂಡರು. ಏಳು ದಿನಗಳ ಕಾಲ ನಡೆದ ಈ ಮಹಾಯಾಗದಲ್ಲಿ ಅಪಾರ ದಾನಮಾಡಿದ ಪಾಂಡವರು ಸಕಲ ರಾಜರ ಮೆಚ್ಚುಗೆಯನ್ನು ಪಡೆದು ಧನ್ಯರಾದರು-

ಶ್ರೀಕೃಷ್ಣನ ಮುಂದಾಳತ್ವದಲ್ಲಿ ವೀರಪಾಂಡವರು ಬೆಳೆದಾಗ
ಪಾಂಡವಾಗ್ರಜನು ಧರ್ಮನು ನಡೆಸಿದ ರಾಜಸೂಯ ಮಹಾಯಾಗ
ಏಳನೆ ದಿನದಲಿ ಯಾಗವು ಮುಗಿಯಿತು ಅರ್ಘ್ಯವ ಕೊಟ್ಟರೆ ಸಾಕಿನ್ನು
ಅಗ್ರಪೂಜೆಯನು ಮಾಡಿಸಿಕೊಳ್ಳಲು ಆಯ್ಕೆ ಮಾಡುವುದು ಯಾರನ್ನು?
ಭೂಮಿಯ ಭೂಮೀಶ್ವರರುಗಳೆಲ್ಲರು ಒಪ್ಪುವ ಯೋಗ್ಯತೆ ಇರಬೇಕು
ಗುರು,ನೃಪ,ಆಚಾರ್ಯರು ಎಂಬಿವರಲಿ ಅರ್ಘ್ಯವ ಯಾರಿಗೆ ಕೊಡಬೇಕು?
ಎನ್ನುವ ಚರ್ಚೆಯು ನಡೆಯಿತು ಅಲ್ಲಿನ ಮಹಾಯಾಗ ಮಂಟಪದಲ್ಲಿ
ಒಮ್ಮತದಿಂದಲಿ ಆರಿಸಬೇಕಿದೆ ಮಹಾಜನರ ಸಮ್ಮುಖದಲ್ಲಿ!

ಹಿರಿಯರು ಗುರುಗಳು ಮುನಿಗಳು ತಾವೂ ಮಾಡತೊಡಗಿದರು ಚರ್ಚೆಯನು
ಭೂಭುಜರಲಿ ಗುರುಹಿರಿಯರುಗಳಿವರಲಿ ಆರಿಸಬಹುದವರಾರನ್ನು?
ಧರ್ಮನು ಭೀಷ್ಮನ ಕೇಳಿದ- “ತಾತಾ, ಅಗ್ರಪೂಜೆಗರ್ಹರು ಯಾರು?
ಯಾರಿಗೆ ಗೌರವ ನೀಡಲಿ? ಯಾಗದ ಮುಕ್ತಾಯವ ಮಾಡುವರಾರು?
ಬೇರೆ ಯಾರಿಗೂ ಬೇಸರವಾಗದ ತೆರದಲಿ ಆಯ್ಕೆಯು ಇರಬೇಕು
ಹಿರಿಯನಾಗಿರುವ ನೀನೇ ಮುಂದಿನ ದಾರಿಯ ತೋರಿಸಿಕೊಡಬೇಕು”
ಭೀಷ್ಮನು ನುಡಿದನು- “ಅಗ್ರಪೂಜೆಗೆ ಅರ್ಹನೊಬ್ಬನೇ ಶ್ರೀಕೃಷ್ಣ
ನಿಮ್ಮಗಳಿಂದಿನ ಈ ಅಭ್ಯುದಯಕೆ ಕಾರಣನಾದವ ಸಂಪನ್ನ”
ಭೀಷ್ಮನ ಮಾತುಗಳಿಂದಲಿ ಕಳೆಯಿತು ಮನಸಿನಲ್ಲಿದ್ದ ದುಮ್ಮಾನ
ಧರ್ಮನಿಗೂ ಬಲು ಸಂತಸವಾಯಿತು ಆತ್ಮಬಂಧುವಿಗೆ ಸನ್ಮಾನ
ಅಂತೆಯೆ ಧರ್ಮನು ಘೋಷಿಸಿಬಿಟ್ಟನು ಅಗ್ರಪೂಜೆ ಶ್ರೀಕೃಷ್ಣನಿಗೆ
ಜಗದ ದೃಷ್ಟಿಯಲಿ ದೇವನು ಎನಿಸಿದ ಶ್ರೀಕೃಷ್ಣಪರಮಾತ್ಮನಿಗೆ
ನೆರೆದಿದ್ದಂತಹ ಅರಸುಗಳೆಲ್ಲರು ಹೌದೆಂದರು ಒಕ್ಕೊರಲಿಂದ
ವ್ಯಾಸರಾದಿ ಮುನಿವರ್ಯರು ಒಪ್ಪುತ ಸಹಮತವಿತ್ತರು ಮುದದಿಂದ!

ಧರ್ಮನು ಕೂಡಲೆ ರತ್ನಖಚಿತ ಸಿಂಹಾಸನ ತರಿಸಿದ ಮಂಟಪಕೆ
ಕೃಷ್ಣನನ್ನು ಕರೆತಂದು ಕೂರಿಸಿದ ಅಗ್ರಪೂಜೆ ಕೈಗೊಳ್ಳಲಿಕೆ
ಯಜ್ಞದೀಕ್ಷಿತನು ಗಂಗೆಯ ಜಲದಲಿ ತೊಳೆದನು ಗೋವಿಂದನ ಪಾದ
ಪಾದೋದಕವನು ಪ್ರೋಕ್ಷಿಸಿಕೊಂಡನು ತಲೆಯ ಮೇಲೆ ಆಶೀರ್ವಾದ

ಯಾಗದ ಪುಣ್ಯದ ಫಲವೆಂದೆನ್ನುತ ಧರ್ಮನು ಹಿಡಿದನು ತಾಂಬೂಲ
‘ಸ್ವೀಕರಿಸೆಮ್ಮನು ಧನ್ಯರನಾಗಿಸು’ ನೀಡಲು ಹೊರಟನು ಭೂಪಾಲ
ಕೂಡಲೆ ‘ಕೂಡದು!’ ಎನ್ನುವ ಘೋಷವು ಮೊಳಗಿತು ರಾಜರ ನಡುವಿಂದ
ಅಚ್ಚರಿಗೊಂಡರು ಸಭಾಸದಸ್ಯರು, ನಗುತಲಿ ನೋಡಿದ ಮುಚುಕುಂದ
ಕೃಷ್ಣನ ಕಂಡರೆ ಬೆಂಕಿಯ ಕಾರುವ ಚೇದಿಯ ದೇಶದ ಭೂಪಾಲ
ಜರಾಸಂಧ ಸಂಹಾರದ ಸಮಯದಿ ದನಿಯೆತ್ತಿದ್ದವ, ಶಿಶುಪಾಲ!
ಚೇದಿಯ ಅರಸನು ಬಲು ಬೆಳೆದಿದ್ದನು ಜರಾಸಂಧ ಬೆಂಬಲದಿಂದ
ಮಥುರೆಯ ನಾಶವ ಮಾಡುವ ಕಾರ್ಯದಿ ನಿಂತಿದ್ದವ ಭುಜಬಲದಿಂದ
ರುಕ್ಕಿಣಿದೇವಿಗೆ ಮನವಿಟ್ಟಿದ್ದವ ಅವಳನ್ನು ವರಿಸುವ ಆಶೆಯಲಿ
ಆದರೆ, ಕೃಷ್ಣನು ಹಾರಿಸಿ ಹೊರಡಲು ನೊಂದವ ಬಹಳ ನಿರಾಶೆಯಲಿ!

ಪೂರ್ವದ್ವೇಷವು ಕೆರಳುತಲಿರುತಿರೆ ರಾಜಸೂಯ ಮಂಟಪದಲ್ಲಿ
ಶ್ರೀಕೃಷ್ಣನಿಗೇ ಅಗ್ರಪೂಜೆಯನ್ನು ಮಾಡಹೊರಟ ಸಂದರ್ಭದಲಿ
ಚೇದಿಯ ಅರಸನು ಶಿಶುಪಾಲನು ತಾ ಕೇಳಿದ ಧರ್ಮನ ಜೋರಾಗಿ-
“ಧರ್ಮನೆ, ಕೇಳುತಲಿರುವೆನು ನಿನ್ನನು ನನ್ನ ಮನಕೆ ಬೇಜಾರಾಗಿ
ಕೃಷ್ಣನು ನಿನ್ನಯ ಗೆಳೆಯನು ಎಂದರೆ ಮನೆಯೊಳಗವನನು ಸತ್ಕರಿಸು
ನಿಮಗುಪಕಾರವ ಮಾಡಿಹನಾದರೆ ಅರಮನೆಯಲಿ ನೀ ಉಪಚರಿಸು
ಆದರೆ ಈ ಪರಿ ಭೂಭುಜರೆದುರಲಿ ಗೊಲ್ಲನಿಗೇತಕೆ ಪ್ರಾಶಸ್ತ್ಯ
ಇಂಥ ಯಾಗದಲಿ ತಪ್ಪು ಮಾಡುತಿಹೆ ಕೆಟ್ಟಿದೆಯೇ ನಿನ್ನಯ ಸ್ವಾಸ್ಥ್ಯ?
ಭೂಮಂಡಲದಲಿ ರಾಜರ ಎದುರಲಿ ರಾಜನಲ್ಲದವ ಹೆಚ್ಚೇನು
ರಾಜರಿಗಪಮಾನವ ಮಾಡುತ್ತಿಹೆ ನಿನಗೇನಾದರೂ ಹುಚ್ಚೇನು?”
ಧರ್ಮನು ಭೀಷ್ಮನ ಮೊಗವನು ನೋಡಿದ ಅರ್ಥಗರ್ಭಿತದ ನೋಟದಲಿ
ಭೀಷ್ಮನು, ನೋಡುವ ಸುಮ್ಮನಿರೆಂದನು ಸಂಕೇತದ ಕಣ್ನೋಟದಲಿ!

ಅರೆರೆರೆ ಏನಿದು ಏತಕೆ ನುಡಿವನು ಏನಿದು ಅವನ ಅವಾಂತರವು
ಸರಭರ ಸರಭರ ನುಡಿಯುತಲಿರುವನು ಏತಕ್ಕೀ ವಿಷಯಾಂತರವು
ಅರಿಯದೆ ನುಡಿಯುವ ಮಾತುಗಳೆಂದರೆ ಅರಸನಾಗಿರುವ ಚೇದಿಯಲಿ
ಅರಿತೂ ನುಡಿಯುವುದಾದರೆ, ಅವನಿಗೆ ಇರುವುದು ವೈರವು ಅವನಲ್ಲಿ

ಕೆರಳಿದ ಶಿಶುಪಾಲನು ಹೀಗೆಂದನು- “ಸಭಿಕರೆ, ನನ್ನಯ ನುಡಿ ಕೇಳಿ
ನನ್ನಯ ಮಾತನು ಕೇಳಿದ ನಂತರ ನಿಮಗನಿಸುವುದೇನೋ ಹೇಳಿ
ಕೃಷ್ಣನು ಅರ್ಹನೆ? ಅಗ್ರಪೂಜೆಯನು ಸ್ವೀಕರಿಸಲು ಈ ಯಾಗದಲಿ
ಅವನಿಗಿಂತ ಅತಿ ಶ್ರೇಷ್ಠರಾದವರು ಇಲ್ಲವೇನು ಈ ಸಭೆಯಲ್ಲಿ
ರಾಜನಲ್ಲ ಯುವರಾಜನಾಗಲೂ ಅರ್ಹನಲ್ಲದವ ಈ ಕೃಷ್ಣ
ತಂತ್ರ-ಕುತಂತ್ರಕೆ ಮರುಳುಗೊಂಡವರು ಕರೆವರು ಅವನನು ಶ್ರೀಕೃಷ್ಣ
ದೇವನು ಎನ್ನುತ ಮೂಢಮಾನವರು ಪೂಜೆ ಮಾಡುವರು ದಿನನಿತ್ಯ
ದೇವನು ಸುಮ್ಮನೆ ಕೂರದೆ ಜಗಳವ ಒಡ್ಡುತಲಿರುವನು ಅನಗತ್ಯ
ಕೃಷ್ಣನು ತಾನೇ ಶ್ರೇಷ್ಠನು ಎನ್ನುತ ಮೆರೆಯುತಲಿರುವನು ಗರ್ವದಲಿ
ಅಗ್ರಾಸನವನು ಆರೋಹಿಸುತಲಿ ಕುಳಿತಿಹ ಎಲ್ಲರ ಎದುರಿನಲಿ
ಅಂತಹ ಅರ್ಹತೆ ಇರುವುದೆ ಇವನಿಗೆ ಹೇಳಿರಿ ರಾಜರೆ ನೀವಿಂದು
ತಪ್ಪು ನಿರ್ಣಯವು ಎಂದರಿತಿದ್ದರೂ ಒಪ್ಪಿಕೊಳ್ಳುವುದೆ ನಾವಿಂದು?
ಭೀಷ್ಮನು ಇರುವನು ದ್ರೋಣನು ಇರುವನು ಶ್ರೇಷ್ಠನಾದ ಬಲರಾಮನಿರುವನು
ವೇದವಿದ್ಯೆಗಳ ಪಾರಂಗತ ಶ್ರೀವೇದವ್ಯಾಸ ಮಹನೀಯನಿರುವನು
ಅರ್ಹರಾದ ಅನೇಕರು ಇರುವರು ಅವರಿಗೆ ಮಾಡಿರಿ ಸನ್ಮಾನ
ಅರ್ಹರಲ್ಲದವರನ್ನು ಮನ್ನಿಸುತ ಮಾಡದಿರೆಲ್ಲರಿಗಪಮಾನ!”

ನೆರೆದಿದ್ದಂತಹ ಭೂಭುಜರೆಲ್ಲರು ಅಂದುಕೊಂಡರಿದು ನಿಜವೆಂದು
ಆದರೆ, ನುಡಿಯಲು ಹೆದರಿಕೊಂಡರು ಸುಮ್ಮನೆ ತಮಗಿದು ಏಕೆಂದು
ಯಾರೂ ನುಡಿಯದೆ ಸಮ್ಮನೆ ಇರುತಿರೆ ಶಿಶುಪಾಲನು ತಾ ಕೆರಳಿದನು
ಹೇಡಿಗಳಿವರುಗಳೆಲ್ಲರೂ ಎಂದು ಕೃಷ್ಣನ ಕಡೆಗೆ ತಿರುಗಿದನು!!

“ಕಳ್ಳ ಕೃಷ್ಣನೇ, ಸುಳ್ಳ ಕೃಷ್ಣನೇ ನಿನಗೇತಕೆ ಈ ಮಾನ್ಯತೆಯು
ಹೆಣ್ಣುಗಳ್ಳನಾಗಿರುವ ನಿನಗೆ ಏಕಿಂಥ ದೊಡ್ಡ ಯಜಮಾನಿಕೆಯು
ಧರ್ಮನು ಅರಿಯದೆ ಹೇಳಿದ ಮಾತ್ರಕೆ ಕುಳಿತುಬಿಟ್ಟೆ ಇದು ಸರಿಯೇನು?
ಮಾನ ಮರ್ಯಾದೆ ಇದ್ದರೆ ಕೂಡಲೆ ಆಸನದಿಂದಿಳಿದು ಬಾ ನೀನು”
ಶಿಶುಪಾಲನ ಅವಹೇಳನ ನುಡಿಗಳನಾಲಿಸಿ ಮುನಿಗಳು ಹೆದರಿದರು
ತುಟಿಗಳು ನಡುಗಿರೆ ಮಂತ್ರವು ಮರೆತವು ತಬ್ಬಿಬ್ಬಾಗುತ ಬೆದರಿದರು

ಭೀಮಾರ್ಜುನರೂ ಯದುಕುಲ ವೀರರು ಕೋಪದ ಕಿಡಿಗಳ ಕಾರಿದರು
ಕೃಷ್ಣನ ಬಯ್ಯುತ ಹರಟೆಯ ಕೊಚ್ಚಿದ ಶಿಶುಪಾಲನ ಮೇಲೇರಿದರು
ಕೃಷ್ಣನು ಕೂಡಲೆ ಅವರನು ತಡೆದನು ಸುಮ್ಮನೆ ನಿಲ್ಲಿರಿ ಎನ್ನುತ್ತ
ಶಿಶುಪಾಲನು ಕೆಂಗಣ್ಣು ಬಿಡುತ್ತ ಮತ್ತೆ ತಿರುಗಿದನು ಅವನತ್ತ

ಮದಿಸಿದ ಮಾನವನೆದೆಯಲಿ ಉದಿಸುವ ಮಾತುಗಳೇ ಮತಿಯಿಲ್ಲದುವು
ಕುದಿಯುವ ಮನದಲಿ ನುಡಿಯುವ ನುಡಿಗಳು ಮುಂದಾಲೋಚನೆ ಇಲ್ಲದುವು
faಮದೋನ್ಮತ್ತನಿಗೆ ಮಾತಿನ ಹಿಡಿತವು ತಾಳತಪ್ಪುವುದು ತಂತಾನೆ
ವಿಧಾತನೆದುರಿಗೆ ಬಂದರೂ ಮಾತು ನಿಲ್ಲಿಸಿ ಸುಮ್ಮನೆ ನಿ೦ತಾನೆ?

“ಸೆರೆಮನೆಯಲಿ ನೀ ಹುಟ್ಟಿದೆ, ಹೇಗೋ ಸಾಗಿಸಿಬಿಟ್ಟರು ನಿನ್ನನ್ನು
ಇಲ್ಲದೆಹೋದರೆ ಹುಟ್ಟಿದ ದಿನವೇ ಸಾಯಬೇಕಿತ್ತು ನೀನೂನು
ಗೊಲ್ಲರಮನೆಯಲಿ ಬೆಣ್ಣೆಯ ಕದಿಯುತ ಬೆಳೆದುಬಂದ ಕಳ್ಳನು ನೀನು
ಜೊಲ್ಲು ಸುರಿಸುತ್ತ ಕದ್ದ ಬೆಣ್ಣೆಯನ್ನು ತಿಂದದ್ದೆಲ್ಲ ಮರೆತೆಯೇನು?
ಒರಳು ಉರುಳಿಸಿದೆ ಶಕಟ ಒಡೆಯಿಸಿದೆ ಬಾಲಲೀಲೆಗಳ ತೋರಿಸಿದೆ
ನೀರು ಹಾವು ಕಾಳಿಂದಿಮಡುವಿನಲಿ ಇದ್ದುದನ್ನು ಎಳೆದಾಡಿಸಿದೆ
ಗೋವರ್ಧನ ಗಿರಿ ಬಂಡೆ ಸಂದಿಯಲ್ಲಿ ನಿಲ್ಲಿಸಿಟ್ಟು ಗೋವುಗಳನ್ನು
ಬೆಟ್ಟವನು ತಾನು ಎತ್ತಿ ನಿಲ್ಲಿಸಿದೆ ಎಂದು ಕೊಚ್ಚಿಕೊಳ್ಳುವ ನೀನು
ಅಷ್ಟು ಮಾತ್ರಕ್ಕೆ ಅರಿಯದ ಮೂಢರು ಹೊಗಳತೊಡಗಿದರು ನಿನ್ನನ್ನು
ಎಷ್ಟು ಸತ್ಯವೋ ಏನು ಸತ್ವವೋ ಪರೀಕ್ಷಿಸಲಿಲ್ಲ ಯಾರೂನು
ಇಂದ್ರಜಾಲವನು ಮಾಡಿತೋರಿಸುತ ಪಾಪ ಜನರನ್ನು ನಂಬಿಸಿದೆ
ನಂಬಿದವರನ್ನು ಮರುಳು ಮಾಡುತ್ತ ದೇವನೆಂದು ನೀ ಬಿಂಬಿಸಿದೆ
ತಾಯಿಯ ಅಣ್ಣನ ಸಂಹರಿಸಿದವನು ಕಂಸಾರಿಯು ನೀ ಹೇಗಾದೆ
ಜರಾಸಂಧನನು ಮೋಸದಿ ಕೊಲ್ಲಿಸಿ ಮಹೋಪಕಾರಿಯು ನೀನಾದೆ
ಹೆಣ್ಣನಪಹರಿಸಿ ಕೊಂಡುಹೋದವನು ನೀನು ಹೇಗೆ ಪುರುಷೋತ್ತಮನು?
ನಿನ್ನಂಥವನನು ಹಾಡಿಹೊಗಳುವರು ನೀನು ಹೇಗೆ ಸರ್ವೋತ್ತಮನು?
ನ್ಯಾಯ ನೀತಿಗಳು ನಿನಗೆಲ್ಲಿರುವುವು ಧೈರ್ಯವು ಇದ್ದರೆ ಯುದ್ಧಕ್ಕೆ ಬಾ
ದ್ವಂದ್ವಯುದ್ಧದಲಿ ನಾನೋ ನೀನೋ ತೇಲಿಸಿಕೊಳ್ಳುವ ಈಗಲೆ ಬಾ”

ಶಿಶುಪಾಲನ ಅವಹೇಳನ ನುಡಿಗಳು ಕೆರಳಿಸಿರಲು ನೆರೆದವರನ್ನು
ಭೀಮನವನನ್ನು ಮುಗಿಸಬೇಕೆಂದು ಗದೆಯ ಹಿಡಿದು ಬಂದನು ತಾನು
ಕೃಷ್ಣನು ಕೂಡಲೆ ಅವನನು ತಡೆಯುತ ತಾನೇ ಇಳಿದನು ಆ ಘಳಿಗೆ
ಕೈಯೊಳಿದ್ದ ಆ ಅರ್ಘ್ಯದ ತಳಿಗೆಯು ಆಯುಧವಾಯಿತು ಮರುಘಳಿಗೆ
ತಳಿಗೆಯು ವೈರಿಯ ಕೊರಳನು ಸೀಳಲು ರುಂಡಮುಂಡಗಳ ಬೇರ್ಪಡಿಸಿ
ಶಿಶುಪಾಲನ ದೇಹವು ಉರುಳಿದ್ದಿತು ಭೂಮಿಗೆ ಬಿಸಿನೆತ್ತರು ಕುಡಿಸಿ!

ರಾಜಸೂಯದಲಿ ಅಸೂಯೆಯಿಂದಲಿ ನುಡಿದ ಸತ್ಯ ಸತ್ತಾಗಿತ್ತು
ರಾಜನೀತಿಯನ್ನು ಅರಿಯದೆಹೋದನು ಸತ್ಯವು ಅಪಥ್ಯವಾಗಿತ್ತು
ರಾಜಸೂಯದಧಿಪತಿಯನು ಎದುರಿಸಿ ನಿಲ್ಲುವ ರಾಜರು ಅಲ್ಲಿಲ್ಲ
ರಾಜರೆಲ್ಲ ತಮಗೇತಕೆ ಎನ್ನುತ ಸುಮ್ಮನೆ ಇದ್ದರು, ಮಾತಿಲ್ಲ!

ಶಿಶುಪಾಲನ ಸಂಹಾರದ ನಂತರ ಕೃಷ್ಣನು ಕುಳಿತನು ಪೀಠದಲಿ
ಅಗ್ರತಾಂಬೂಲ ಸ್ವೀಕರಿಸಿದ್ದನು ಎಣೆಯಿಲ್ಲದ ಸಂತೋಷದಲಿ
ಪೂರ್ಣಾಹುತಿಯನು ನೀಡಿದ ನಂತರ ಯಾಗ ಸಮಾಪ್ತಿಯ ಘೋಷಣೆಯು
ಪಾಂಡವರಿಗೆ ಗುರುಹಿರಿಯರು ಎಲ್ಲರ ಆಶೀರ್ವಾದದ ಪೋಷಣೆಯು
ಭೂಸುರರೆಲ್ಲರು ಭೂರಿಭೋಜನವ ಸವಿದು ತೃಪ್ತಿಯಲಿ ತೇಗಿದರು
ರಾಶಿರಾಶಿ ಧನಕನಕ ದಕ್ಷಿಣೆಯ ಪಡೆದು ಸಂತೃಪ್ತಿ ಹೊಂದಿದರು
ರಾಜರೆಲ್ಲ ಬಲವಂತದ ತೃಪ್ತಿಯ ಹೊಂದಿದರಲ್ಲಿನ ಯಾಗದಲಿ
ರಾಜನೀತಿಯನು ಅವರರಿತಿದ್ದರು ಶಿಶುಪಾಲನ ಬಲಿದಾನದಲಿ!
ರಾಜವರ್ಗವನು ಕಳುಹಿಸಿಕೊಟ್ಟರು ಕುಂತಿಸುತರು ಸಂತಸದಿಂದ
ರಾಜಸೂಯವನು ಹೊಗಳುತ ತೆರಳಿತು ರಾಜಸಮೂಹವು ಭಯದಿಂದ
ಭೀಷ್ಮಾದಿಗಳೂ ಆಶೀರ್ವದಿಸುತ ಮರಳಿದರೆಲ್ಲರು ಮುದದಿಂದ
ಕೌರವಪಕ್ಷವು ನಾಡಿಗೆ ಮರಳಿತು ಕೊನೆಯಿಲ್ಲದ ಮತ್ಸರದಿಂದ!!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಉಷಃಕಾಲದಲ್ಲಿ
Next post ಮಹಾತ್ಮರಿಗೆ

ಸಣ್ಣ ಕತೆ

  • ಗ್ರಹಕಥಾ

    [ಸತಿಯು ಪತಿಯ ಹಾಗೂ ಪತಿಯು ಸತಿಯ ಮನೋವೃತ್ತಿಗಳನ್ನು ಅರಿತು ಪರಸ್ಪರರು ಪರಸ್ಪರರನ್ನು ಸಂತೋಷಗೊಳಿಸಿದರೆ ಮಾತ್ರ ಸಂಸಾರವು ಉಭಯತರಿಗೂ ಸುಖಮಯವಾಗುತ್ತದೆ ಹೊರತಾಗಿ, ಅವರಲ್ಲಿ ಯಾರಾದರೊಬ್ಬರು ಅಹಂಭಾವದಿಂದ ಪ್ರೇರಿತರಾಗಿ, ಪರರ… Read more…

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

  • ಮರೀಚಿಕೆ

    ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…

  • ಒಂದು ಹಿಡಿ ಪ್ರೀತಿ

    ತೆಂಗಿನ ತೋಟದಲ್ಲಿ ಬಾಗಿಕೊಂಡು ಹಣ್ಣಾಗಿ ಉದುರಿದ ಅಡಕೆಗಳನ್ನು ಒಂದೊಂದಾಗಿ ಹೆಕ್ಕಿ, ಸನಿಹದಲ್ಲಿದ್ದ ಪ್ಲಾಸ್ಟಿಕ್ ಚೀಲಕ್ಕೆ ತುಂಬಿಸುತ್ತಿದ್ದಂತೆ ಪಕ್ಕದಲ್ಲಿ ಸರಕ್ಕನೆ ಹರಿದು ಹೋದ ಕೇರೆ ಹಾವಿನಿಂದಾಗಿ ಒಮ್ಮೆ ವಿಚಲಿತರಾದರು… Read more…

  • ಡಿಪೋದೊಳಗಣ ಕಿಚ್ಚು…

    ಚಿತ್ರ: ವಾಲ್ಡೊಪೆಪರ್‍ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…

cheap jordans|wholesale air max|wholesale jordans|wholesale jewelry|wholesale jerseys