ದ್ರುಪದನ ಗರ್ವಭಂಗ

-ಕುರುಸಾಮ್ರಾಜ್ಯದ ಅರಸುಮಕ್ಕಳಿಗೆ ಶಸ್ತ್ರಾಸ್ತ್ರವಿದ್ಯೆಗಳ ಕಲಿಸುವ ಭರದಲ್ಲಿ ಏಕಲವ್ಯನ ಭವಿಷ್ಯವನ್ನು ಬಲಿ ತೆಗೆದುಕೊಂಡ ದ್ರೋಣನು ಕೆಲವು ದಿನ ಖಿನ್ನಮನಸ್ಕನಾಗಿದ್ದು, ಬಳಿಕ ತನಗೆ ತಾನೇ ಸಮಾಧಾನ ತಂದುಕೊಂಡು ಶಿಷ್ಯರಿಗೆ ವಿದ್ಯೆ ಕಲಿಸುವಲ್ಲಿ ಮಗ್ನನಾದನು. ತನ್ನ ಶಿಷ್ಯರಲ್ಲಿ ಎಲ್ಲರಿಗಿಂತ ಅರ್ಜುನನು ಸಕಲವಿದ್ಯೆಗಳನ್ನು ಕಲಿತು ಅಗ್ರಗಣ್ಯನಾದುದನ್ನು ಕಂಡು ಸಂತೋಷಿಸಿದನು. ದ್ರೋಣನು ಸಮರ್ಥನಾದ ಅರ್ಜುನನನ್ನು ಬಳಸಿಕೊಂಡು, ಹಿಂದೆ ತನ್ನ ಸಹಪಾಠಿಯಾಗಿದ್ದವನು ಬಳಿಕ ರಾಜನಾಗಿ, ಅಧಿಕಾರಮದದಿಂದ ತನ್ನನ್ನು ಅವಮಾನಿಸಿದ, ಪಾಂಚಾಲದೇಶದ ರಾಜ ದ್ರುಪದನಿಗೆ ಸರಿಯಾದ ಬುದ್ಧಿಪಾಠ ಕಲಿಸಬೇಕೆಂದು ನಿರ್ಧರಿಸಿದನು-

ಎಲ್ಲ ಶಿಷ್ಯರಲಿ ಅರ್ಜುನ ಮೊದಲಿಗನಾಗಲು ದ್ರೋಣನು ಹರ್ಷಿಸಿದ
ತನಗಪಮಾನವ ಮಾಡಿದ ದ್ರುಪದನ ಮದವನು ಇಳಿಸಲು ಯೋಚಿಸಿದ
‘ಅರ್ಜುನ ನೀ ಗುರುದಕ್ಷಿಣೆ ರೂಪದಿ ದ್ರುಪದನ ಸೋಲಿಸಿ ಕೊಡು ನನಗೆ’
ಎನ್ನುತ ಶಿಷ್ಯನ ಜೊತೆಯಲ್ಲಿ ನಡೆದನು ಮದಿಸಿದ ದ್ರುಪದನ ಅರಮನೆಗೆ!

ದ್ರೋಣನು, ದ್ರುಪದನು ಗುರುಕುಲದಲ್ಲಿ ಒಟ್ಟಿಗೆ ವಿದ್ಯೆಯ ಕಲಿತವರು
ಉತ್ತಮ ಗೆಳೆಯರು ಎನ್ನುವ ಕೀರ್ತಿಯ ಆಶ್ರಮದಲ್ಲಿ ಪಡೆದಿದ್ದವರು
ರಾಜಕುಮಾರನು ಬ್ರಾಹ್ಮಣಕುವರನು ಭೇದಭಾವಗಳು ಇಲ್ಲದೆಯೆ
ಒಳ್ಳೆಯ ಗುಣಗಳ ಗಣಿಯಾಗಿದ್ದರು ಅವರಲ್ಲಿದ್ದಿತು ಪ್ರಾಣಿದಯೆ
ಪಾಂಚಾಲದೇಶದ ರಾಜಕುಮಾರನು ದ್ರುಪದನು ಉತ್ತಮನಾಗಿದ್ದ
ಬಡಬ್ರಾಹ್ಮಣ ಆ ದ್ರೋಣನ ಸಂಗಡ ಒಳ್ಳೆಯ ಗೆಳೆತನ ಬೆಳೆಸಿದ್ದ
ಒಬ್ಬರಿಗೊಬ್ಬರು ಜೀವನ ಕೊಡಲೂ ಸಿದ್ಧರಿದ್ದ ಗೆಳೆಯರು ಇವರು
ಒಬ್ಬರನೊಬ್ಬರು ಒಂದು ಘಳಿಗೆಯೂ ಪರಸ್ಪರರ ಬಿಟ್ಟಿರದವರು!

ಆಟಪಾಠಗಳು ಎರಡರಲ್ಲಿಯೂ ಇಬ್ಬರೂ ಒಂದು ಜೊತೆಯಲ್ಲಿ
ದೇಹವು ಎರಡಾಗಿದ್ದರೂ ಜೀವ ಒಂದೇ ಎನ್ನುವ ತೆರದಲ್ಲಿ
ಶಿಷ್ಯರೆಲ್ಲರಿಗೆ ಮಾದರಿ ಇವರೇ, ಗುರುವಿನ ಮೆಚ್ಚುಗೆ ಪಡೆದವರು
ಗೆಳೆತನದಲ್ಲಿಯೆ ಹಿತವನು ಕಾಣುತ ಸನ್ಮಾರ್ಗದಲ್ಲಿ ನಡೆದವರು

ಜೀವಕೆ ಜೀವವ ನೀಡುವ ಗೆಳೆಯರು ಜೀವನವೆಲ್ಲವು ಹೀಗೇನೇ
ನೋವು ನಲಿವುಗಳು ಏನು ಬಂದರೂ ನೀಗಿಕೊಳ್ಳುವೆವು ನಾವೇನೆ
ಸರಸ ವಿರಸಗಳು ಸಾವಿರವಾದರೂ ಸಾಮರಸ್ಯವನ್ನು ಸಾರುವೆವು
ಸರ್ವರೀತಿಯಲ್ಲಿ ಸರಿಸಮರಾಗುತ ಸಮರಸದಿಂದಲಿ ಬಾಳುವೆವು

ಹೀಗಿರಲೊಂದಿನ ದ್ರುಪದನು ಕೊಳದಲಿ ಜಳಕವ ಮಾಡಲು ಇಳಿದಿರಲು
ಕೊಳದೊಳು ನೆಲೆಸಿದ ಮೊಸಳೆಯು ಹಸಿವಲಿ ದ್ರುಪದನ ಕಾಲನು ಹಿಡಿದಿರಲು
ನೀರೊಳಗಿರುತಿಹ ಮೊಸಳಗೆ ಹೆಚ್ಚಿನ ಬಲವೆಂದವನಿಗೆ ತಿಳಿದಿತ್ತು
‘ಅಯ್ಯಯ್ಯೋ! ಕಾಪಾಡಿರಿ!’ ಎನುತಿರೆ ನೀರಿನ ಆಳಕೆ ಎಳೆದಿತ್ತು.

ಹತ್ತಿರ ದಡದಲಿ ನಿಂತಿದ್ದಂತಹ ದ್ರೋಣನು ಘಟನೆಯ ನೋಡಿದನು
ಬಿಲ್ಲಿಗೆ ಹೆದೆಯನ್ನೇರಿಸಿ ಕೂಡಲೆ ಬಾಣವನೊಂದನು ಹೂಡಿದನು
ಗೆಳೆಯನ ತನ್ನೆಡೆ ಸೆಳೆಯುವ ಮೊಸಳೆಯ ಬೆನ್ನಿಗೆ ಬಾಣವ ನೆಟ್ಟಿದ್ದ
ಸಾವಿನ ದವಡೆಯ ಕೋರೆಗಳಿಂದಲಿ ದ್ರುಪದನು ಹೊರಗಡೆ ಬಂದಿದ್ದ
ಮೊಸಳೆಯ ಹಿಡಿತದ ಭಯದಲಿ ದ್ರುಪದನ ಎದೆಯಲಿ ಢವಢವಗುಡುತಿರಲು
‘ಅಬ್ಬಾ! ಬದುಕಿದೆ’ ಎನ್ನುತ ಮನದಲಿ ಸಂತಸ ಹೊನಲೇ ಹರಿದಿರಲು
ಹೋಗುವ ಜೀವವ ಉಳಿಸಿದ ಜೀವದ ಗೆಳೆಯನ ಹತ್ತಿರ ಸಾಗಿದನು
‘ಪ್ರಾಣದ ಮಿತ್ರನು ನೀನೇ’ ಎನ್ನುತ ಗೆಳೆಯನನ್ನು ಬಿಗಿದಪ್ಪಿದನು
ಗೆಳೆಯನ ಪ್ರೀತಿಯ ನೋಟದಿ ನೋಡುತ ದ್ರುಪದನು ನುಡಿದನು ಹೀಗೆಂದು-
“ಸಾವನು ಗೆಲಿಸಿದ ಜೀವದ ಗೆಳೆಯನೆ, ಬಂಧುವು ನೀನೆನಗೆಂದೆಂದೂ
ನಾನೇ ಪಾಂಚಾಲದ ದೊರೆಯಾಗುವೆ ನೀನೂ ಅಲ್ಲಿಗೆ ಬಂದುಬಿಡು
ನನ್ನರಮನೆಯಲಿ ಶಾಶ್ವತ ನೆಲೆಸುತ ನನ್ನಯ ಸಂಗಡ ಉಳಿದುಬಿಡು
ರಾಜಭೋಗವನು ಇಬ್ಬರೂ ಕೂಡಿ ಅನುಭವಿಸುವ ಆನಂದದಲಿ
ಜೀವದ ಗೆಳೆಯರು ನಾವುಗಳೆಂದೂ ಸೋದರತೆಯ ಅನುಬಂಧದಲಿ”
ದ್ರೋಣನು ನುಡಿದನು “ಮಿತ್ರನೆ ನಿನ್ನೀ ಪ್ರೀತಿಯ ಮಾತೇ ಸಾಕೆನಗೆ
ಅರಮನೆ ವೈಭವ ರಾಜಭೋಗಗಳು ಬೇಡವು ಬ್ರಾಹ್ಮಣನಾದೆನಗೆ
ಇದ್ದುದರಲ್ಲಿಯೇ ತೃಪ್ತಿಯ ಕಾಣುವ ಬುದ್ಧಿಯು ಎಂದೂ ಇರಲೆನಗೆ
ಗೆಳೆತನ ಹೀಗೆಯೆ ಉಳಿದರೆ ಸಾಕಿದೆ ನಮ್ಮೀ ಬದುಕಿನ ಕೊನೆವರೆಗೆ”

ವರುಷಗಳುರುಳಲು ಅಂದಿನ ದ್ರುಪದನು ಪಾಂಚಾಲರ ದೊರೆ ತಾನಾದ
ಶಿಖಂಡಿ, ದೃಷ್ಟದ್ಯುಮ್ನ, ಕೃಷ್ಣೆಯರ ತಂದೆಯೆಂದೆನಿಸಿಕೊಂಡಿದ್ದ
ದ್ರೋಣನು ಬಡತನವೆನ್ನುವ ಬೆಂಕಿಯ ಬಡಬಾಗ್ನಿಯಲ್ಲಿ ಬೆಂದಿದ್ದ
ಮಿತ್ರನ ನೆರವನ್ನು ಯಾಚಿಸಲೆನ್ನುತ ಪಾಂಚಾಲಕೆ ತಾ ಬಂದಿದ್ದ!
ದ್ರುಪದನ ಕಾಣಲು ಬಯಸಿದ ದ್ರೋಣನ ತಡೆದರು ಅರಮನೆ ದ್ವಾರದಲಿ
ರಾಜನ ಗೆಳೆಯನು ತಾನೆನ್ನುತ್ತಿರೆ ದ್ವಾರಪಾಲಕರು ಕುಹಕದಲಿ
ಒಟ್ಟಿಗೆ ವಿದ್ಯೆಯ ಕಲಿತವರೆಂದರೆ ಕೇಕೆ ಹಾಕಿ ಗಹಗಹಿಸಿದರು
ದ್ರೋಣನು ಹಠಮಾಡುತ್ತಲಿ ಕೂರಲು ವಿಷಯವ ರಾಜನಿಗರುಹಿದರು
ರಾಜನು ನುಡಿದನು- “ಯಾರೋ ಅರಿಯೆನು ಕಳುಹಿಸಿ ಅವನನು ಒಳಗಡೆಗೆ”

ಒಳಗಡೆ ಕಳುಹಲು ದ್ರೋಣನು ನಡೆದನು ರಾಜವೈಭವದರಮನೆಯೊಳಗೆ
ಸಿಂಹಾಸನದಲಿ ದ್ರುಪದನು ಕುಳಿತಿರೆ ದ್ರೋಣನು ಅಲ್ಲಿಗೆ ಬಂದಿರಲು
ಸಭೆಯಲ್ಲಿನ ಜನ ನೋಡುತಲಿರುತಿರೆ ರಾಜನ ನಮಿಸದೆ ನಿಂತಿರಲು
ದ್ರುಪದನು ದ್ರೋಣನ ದುರುದುರು ನೋಡುತ ನುಡಿದನು- “ವಿಪ್ರನೆ ನೀನಾರು?
ಯಾವ ದೇಶದಿಂದಾಗಮಿಸಿರುವೆಯೊ? ಎಲ್ಲಿಗೆ ಹೊರಟಿಹೆ? ಯಾವೂರು?”
ದ್ರೋಣನು ಅಚ್ಚರಿಯಿಂದಲಿ ಕೇಳಿದ “ಮಿತ್ರನೆ, ಮರೆತೆಯಾ ನನ್ನನ್ನು
ಆಶ್ರಮದಲ್ಲಿನ ಗುರುಗಳ ಬಳಿಯಲಿ ಒಟ್ಟಿಗೆ ವಿದ್ಯೆಯ ಕಲಿತುದನು?
ಜೀವದ ಗೆಳೆಯರು ನಾವೆಂಬುವುದನು ಆಶ್ರಮದಲ್ಲಿ ತೋರಿದ್ದವರು
ದೇಹವೆರಡು ಆತ್ಮವು ಒಂದೆನ್ನುವ ತೆರದಲಿ ನಾವುಗಳಿದ್ದವರು”

ದ್ರುಪದನು ಕೋಪದಿ ಸಿಡುಕುತ ನುಡಿದನು- “ನೀನಾರೋ ನನಗರಿವಿಲ್ಲ
ನಿನ್ನನು ನನ್ನಯ ಮಿತ್ರನು ಎನ್ನುವೆ ನಿನಗೇನೋ ತಲೆ ಸರಿಯಿಲ್ಲ
ರಾಜ್ಯಕೆ ರಾಜನು ನಾನಾಗಿರುವೆನು ಕಡುಬಡಬ್ರಾಹ್ಮಣ ನೀನೆಲ್ಲಿ
ನಮ್ಮಿಬ್ಬರಿಗೂ ಗೆಳೆತನ ಎನ್ನುವೆ, ಸಾಧ್ಯವೆ ಇದು ಈ ಜಗದಲ್ಲಿ?
ಬ್ರಾಹ್ಮಣ ಬಂದಿಹೆ ಯಾಚಿಸಿ ಇಲ್ಲಿಗೆ ನೀಡುವ ಹೊನ್ನನು ನೀ ಪಡೆದು
ದಾರಿಯ ತಪ್ಪುತ ಬಂದಿರುವಂತಿದೆ ಈಗಿಂದೀಗಲೆ ಹೊರ ಹೊರಡು”

ಬಾಳಲಿ ಬಡತನ ಬರಲೇಕೂಡದು ಬಲುಹೀನಸ್ಥಿತಿ ಬದುಕಿನಲಿ
ನಾಳಿನ ಚಿಂತೆಯ ಯೋಚನೆಯಲ್ಲಿ ಕಾಲವು ನಿಲುವುದು ಎದುರಿನಲಿ
ತೋಳಲಿ ಶಕ್ತಿಯು ಇದ್ದರೂ ಕೂಡ ಏಳಿಗೆಯಾಗುವುದೇ ಮುಂದು?
ತಾಳಿದವನಿಗೇ ಬಾಳಲಿ ಬವಣೆಯು ಕಾಣಿಸಿಕೊಳುವುದು ಏಕಿಂದು?

ದ್ರೋಣನಿಗಾಯಿತು ಬಲು ಅಪಮಾನವು ಆಸ್ಥಾನದ ಆ ಸಭೆಯಲ್ಲಿ
ಗೆಳೆಯನ ಈ ಪರಿ ಬದಲಾವಣೆಯ ನಿರೀಕ್ಷೆಯು ಇರಲಿಲ್ಲವನಲ್ಲಿ
ಆದರೂ ತಾಳ್ಮೆ ಹೊಂದಿದ ದ್ರೋಣನು ಸಭೆಯಲ್ಲಿ ದ್ರುಪದನ ಸಹಿಸಿದನು
ಗೆಳೆಯನ ಹಿತವನು ಮನದಲಿ ಬಯಸುತ ಅವನಿಗೆ ಒಳಿತನು ತಿಳಿಸಿದನು-
“ರಾಜನೆ, ಆಲಿಸು ಮನುಜನಿಗೆಂದೂ ಅಧಿಕಾರದ ಮದ ಒಳಿತಲ್ಲ
ಬದುಕಿನಲ್ಲಿ ಈ ವೈಭವ, ಭೋಗವು ಎಂದೂ ಶಾಶ್ವತ ಉಳಿಯಲ್ಲ
ಹಣವನು ಗಳಿಸಲು ಮಾರ್ಗಗಳಿರುವುವು ಗೆಳೆಯರ ಗಳಿಸುವುದತಿಶಯವು
ಎಲ್ಲ ಬಗೆಯ ಸಂಬಂಧಗಳಲ್ಲಿಯೂ ಗೆಳೆತನವೆಂಬುದು ಉತ್ತಮವು
ಉತ್ತಮ ಗೆಳೆಯರ ಪಡೆಯುವ ವ್ಯಕ್ತಿಯ ಜೀವನ ಜಗದಲಿ ಸಾರ್ಥಕವು
ಗೆಳೆತನದರ್ಥವ ತಿಳಿಯದ ಮೂಢರ ಬಾಳ್ವೆಯು ಜಗದಿ ನಿರರ್ಥಕವು
ಬಂಧುಬಾಂಧವರು ದೂರ ಸರಿಯುವರು ಕಷ್ಟ ಕಾಲ ಎದುರಾದಾಗ
ಸ್ನೇಹಬಂಧವೇ ನೆರವಿಗೆ ಬರುವುದು ಕಷ್ಟದಲ್ಲಿ ನಾವಿರುವಾಗ
ಗೆಳೆತನವೆಂದರೆ ಏನೆಂಬುವುದೇ ಅರಿಯದೆ ಹೋಗಿದೆ ನಿನಗೀಗ
ರಾಜ್ಯದ ವೈಭವ ಅಧಿಕಾರದ ಮದ ಹೊರಟು ಹೋಗುವುವು ಬಲು ಬೇಗ
ನಿನ್ನ ಮನಸ್ಸಿನ ಕೊಳೆಯನ್ನು ಕಳೆಯುವ ಕಾಯಕ ಉಳಿದಿದೆ ನನಗೀಗ
ನಿನ್ನ ಅಹಮ್ಮನು ದೂರಕೆ ದೂಡಲು ಬರುವೆನು ಶಕ್ತಿಯ ಜೊತೆ ಬೇಗ”
ಹೇಳಿದ ದ್ರೋಣನು ಬೀಸುಹೆಜ್ಜೆಯಲಿ ಅರಮನೆಯಿಂದಲಿ ಹೊರನಡೆದು
ಅಪಮಾನದ ಬಿರುಬೇಗೆಯು ಸುಡುತಿರೆ ತನ್ನಯ ಮನದಲ್ಲಿಯೇ ಕುದಿದು
ಬಡವನ ಕೋಪವು ದವಡೆಗೆ ಮೂಲವು ಎಂಬುದನ್ನು ಮನಸಿಗೆ ತಂದು
ಬಡತನ ಎಂತಹ ಹೀನ ಪರಿಸ್ಥಿತಿ ಎನ್ನುತ ಮನದಲಿ ಬಲುನೊಂದು
ಧನವನು ಗಳಿಸುವ ಮಾರ್ಗವ ಹುಡುಕುತ ಹೊರಟನು ಕುರುಕುಲ ಭೀಷ್ಮನಲಿ
ವಿದ್ಯೆಯ ಕಲಿಸುವ ಉತ್ತಮ ಕೆಲಸವ ಮಾಡುತ ನಿಂತನು ಅವನಲ್ಲಿ!
ಅಧಿಕಾರದ ಮದದಹಂಕಾರವನ್ನು ಸದೆಬಡಿಯುವ ದೃಢ ವಿಶ್ವಾಸ
ಮದಿಸಿದ ಮಾನವನೆದೆಯಲಿ ಹುದುಗಿದ ಮದವನು ವಧಿಸುವುದೇ ಶ್ವಾಸ
ವಿಧಿಯ ಆಟದಲಿ ಅವನಿಗೆ ದೊರಕಿದ ವೀರ ಶಿಷ್ಯನೀ ಅರ್ಜುನನು
ನಿಧಿಯೇ ದೊರಕಿದ ಸಂತಸವಾಯಿತು, ಸಂಭ್ರಮಿಸಿದ ದ್ರೋಣನು ತಾನು!
ದ್ರೋಣನು, ದ್ರುಪದನ ವಿಷಯವನೆಲ್ಲಾ ಹಿರಿಯ ಭೀಷ್ಮನಲ್ಲಿ ತಿಳಿಸಿದನು
‘ದ್ರುಪದನ ಗರ್ವವ ಅಡಗಿಸು’ ಎನ್ನುತ ಭೀಷ್ಮನು ಸೈನ್ಯವ ಕಳಿಸಿದನು
ಪಾಂಚಾಲರು ಕೆಳವರ್ಗದ ಜನಗಳು ಎನ್ನುವ ಭಾವವು ಕುರುಗಳದು
ಕುರುಗಳು ಆರ್ಯರು ತಾವೇ ಶ್ರೇಷ್ಠರು ಎಂಬ ಭ್ರಮೆಯು ಆ ರಾಜರದು
ದ್ರುಪದನು ಇದನ್ನು ವಿರೋಧಿಸಿದ್ದನು ಕುರುಗಳನೆದುರಿಸಿ ನಿಂತಿದ್ದ
ಆದುದರಿಂದಲೆ ದ್ರೋಣನು ಕೇಳಿದ ಕೂಡಲೆ ಭೀಷ್ಮನು ಒಪ್ಪಿದ್ದ
ಪಾಂಚಾಲರ ಸದೆಬಡಿಯಲಿ ಎನ್ನುತ ಸೈನ್ಯವ ಕಳುಹಿಸಿಕೊಟ್ಟಿದ್ದ
ಕುರುಗಳ ಶೌರ್ಯವ ನೋಡಲಿ ಎನ್ನುತ ಮನದಲಿ ಸಂತಸಪಟ್ಟಿದ್ದ!

ದ್ರೋಣನು ಅರ್ಜುನನೊಂದಿಗೆ ವೇಗದಿ ದ್ರುಪದನ ರಾಜ್ಯಕೆ ಸಾಗಿದನು
ಕೋಟೆಯ ಹೊರಗಡೆ ಸೈನ್ಯವ ನಿಲ್ಲಿಸಿ ಕೂಡಲೆ ಯುದ್ಧವ ಸಾರಿದನು
ವಿಷಯವ ಅರಿಯುತ ಅಚ್ಚರಿ ಹೊಂದಿದ ದ್ರುಪದನು ಯುದ್ಧಕ್ಕೆ ಬಂದಿದ್ದ
ಆರ್ಯರ ನಾಯಕನಾಗಿ ಬಂದಿದ್ದ ಗೆಳೆಯ ದ್ರೋಣನನ್ನು ಕಂಡಿದ್ದ
ಉರಿಯುವ ಕೋಪದಿ ಎದುರಿಸಿ ನಿಂತನು ಕುರುಗಳ ಸೈನ್ಯವ ಧೈರ್ಯದಲಿ
ಹಾರುವನೊಬ್ಬನು ಸೇನೆಯ ನಾಯಕ ಎಂದು ಬಗೆದು ತಾತ್ಸಾರದಲಿ!

ಆದರೆ, ಯುದ್ಧವು ವಿಷಮಿಸತೊಡಗಿತು ಕುರುಗಳ ಕೈ ಮೇಲಾಗಿತ್ತು
ದ್ರುಪದನ ಸೈನ್ಯವು ಎದುರಿಸಲಾಗದೆ ಕೈಗಳ ಹಿಚುಕುವುದಾಗಿತ್ತು
ದ್ರುಪದನ ಎದುರಲಿ ಅರ್ಜುನ ನಿಂತನು, ವೇಗದಿ ಬಾಣದ ಮಳೆಗೆರೆದ
ದ್ರುಪದನು ಶರಗಳ ರಾಶಿಯಲಡಗಿದ ಕೈಲಾಗದ ತೆರದಲಿ ಉಳಿದ
ಅರ್ಜುನನೊಂದಿಗೆ ಯುದ್ಧವ ಮಾಡಲು ಸಾಧ್ಯವಾಗದವ ದಣಿದಿದ್ದ
ಅವನ ಪರಾಕ್ರಮ ಎದುರಿಸಲಾಗದೆ ಶೌರ್ಯದ ಎದುರಲಿ ಮಣಿದಿದ್
ಅರ್ಜುನನೊಂದಿಗೆ ಸೆಣಸಲು ಆಗದೆ ಸೋತುಹೋಗಿ ಮಣ್ಮುಕ್ಕಿದನು
ತಪ್ಪಿಸಿಕೊಳ್ಳುವ ಸಾಹಸ ಮಾಡದೆ ರಣರಂಗದಿ ಸೆರೆಸಿಕ್ಕಿದನು!

ಅರ್ಜುನ ದ್ರುಪದನ ಹೆಡಮುರಿ ಕಟ್ಟುತ ತಂದೊಪ್ಪಿಸಿದನು ದ್ರೋಣನಿಗೆ
ದ್ರುಪದನು ತಲೆಯನು ಬಾಗಿಸಿ ನಿಂತನು ದ್ರೋಣನ ಎದುರಲಿ ಆ ಘಳಿಗೆ!
ಮಿತ್ರನ ಸ್ಥಿತಿಯನ್ನು ನೋಡಿದ ದ್ರೋಣನ ಹೃದಯವು ಕರಗಿತು ನೋವಿನಲಿ
ದ್ರುಪದನು ಪಶ್ಚಾತ್ತಾಪದಿ ನೊಂದನು ಕ್ಷಮೆಯನು ಕೋರಿದ ನಿಮಿಷದಲಿ!
ಅರ್ಜುನನೂ ಕ್ಷಮೆ ಕೋರಿದ ದ್ರುಪದನ, ಅವನಿಗೆ ವಂದಿಸಿ ಮರುಘಳಿಗೆ
‘ಇಂತಹ ವೀರ ತನ್ನಳಿಯನಾದರೆ…’ ಆಸೆಯು ದ್ರುಪದನ ಮನದೊಳಗೆ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ತೃಪ್ತಿ
Next post ವಚನ ವಿಚಾರ – ಕಲ್ಲಿನಲಿ ಕಠಿಣ

ಸಣ್ಣ ಕತೆ

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…

  • ಮತ್ತೆ ಬಂದ ವಸಂತ

    ಚಿತ್ರ: ಆಮಿ ಮೊದಲ ರಾತ್ರಿಯ ಉನ್ಮಾದದಲ್ಲಿದ್ದ ಮಧುವಿನ ಕಿವಿ ಹಿಂಡಿ ಅವಳಂದಳು. ‘ಮಧು, ಇಂದಿನಿಂದ ನಾವು ಗಂಡ - ಹೆಂಡತಿಯಾಗಿರುವುದು ಬೇಡ. ಬದುಕಿನ ಕೊನೆ ತನಕವೂ ಗೆಳೆಯ… Read more…

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

cheap jordans|wholesale air max|wholesale jordans|wholesale jewelry|wholesale jerseys