ಒಂದು ಸಾರಿ ಸಿಂಹವೊಂದು
ಮದುವೆ ಆಯಿತು
ಎಲ್ಲಾ ಪ್ರಾಣಿಗಳನು ಊಟ-
ಕೆಂದು ಕರೆಯಿತು.
ಆನೆ ಕರಡಿ ಚಿರತೆ ಹುಲಿ
ಒಂಟೆ ಬಂದುವು
ಕುದುರೆ ನರಿ ಬೆಕ್ಕು ಉಡು-
ಗೊರೆಯ ತಂದವು.
ಮದುವೆಯಲ್ಲಿ ಕತ್ತೆ ಒಂದು
ಹಾಡು ಹೇಳಿತು
ಆನೆ ಬೆನ್ನ ಮೇಲೆ ಕರಡಿ
ತಬಲ ಹೊಡೆಯಿತು – ನರಿ
ತಾಳ ಹಾಕಿತು – ಕೋತಿ
ಡಾನ್ಸು ಮಾಡಿತು.
ಕತ್ತೆ ಹಾಡು ಕೇಳಿ ಎಲ್ಲ
ನಕ್ಕು ಬಿಟ್ಟವು
ಸಾಕು ಮೊದಲು ನಿಲ್ಸು ಅಂತ
ಬೇಡಿಕೊಂಡವು!
*****
ಲಕ್ಷ್ಮೀನಾರಾಯಣ ಭಟ್ಟರು ಕನ್ನಡ ಕಾವ್ಯದ ಜೀವಂತಿಕೆಯನ್ನು ಹೆಚ್ಚಿಸುತ್ತ ಆಧುನಿಕ ಕನ್ನಡ ಕಾವ್ಯವನ್ನು ಬೆಳೆಸುತ್ತ ಬಂದಿರುವ ಪ್ರಮುಖ ಕವಿಗಳಲ್ಲಿ ಒಬ್ಬರು. ಅವರ ಅನುವಾದಗಳು ಕನ್ನಡ ಕಾವ್ಯಕ್ಕೆ ಕೊಟ್ಟ ಬೆಲೆಬಾಳುವ ಉಡುಗೊರೆಗಳು ಮಾತ್ರವಾಗಿರದೆ ಸ್ವಂತಕ್ಕೆ ಪಡೆದ ರಕ್ತದಾನವೂ ಆಗಿದೆ. ಸ್ವಂತ ಪ್ರತಿಭೆ, ಶ್ರೇಷ್ಠಕವಿಗಳ ಆಪ್ತ ಅಧ್ಯಯನ ಎರಡೂ ಅವರನ್ನೂ ಎತ್ತರಕ್ಕೆ ಹತ್ತಿಸಿವೆ. ಅಧ್ಯಯನ, ಚಿಂತನೆ ಇವು ಅವರಲ್ಲಿ ಹಾಸು ಹೊಕ್ಕಾಗಿ ಒಂದನ್ನು ಮತ್ತೊಂದು ಬಲಗೊಳಿಸುತ್ತ ಬಂದಿವೆ.