ಅಡಿಗೆ ಮನೇಲಿ ನೂರಾರ್ ಡಬ್ಬ
ಸಾಲಾಗ್ ಕೂತಿದ್ದಾವೆ
ನಾನು ಅಮ್ಮ ಹಂಚ್ಕೋತೀವಿ
ಎಲ್ಲಾ ಡಬ್ಬನೂವೆ.
ನಾಕೇ ಡಬ್ಬ ಸಾಕು ನಂಗೆ
ಉಳಿದದ್ ಅಮ್ಮಂಗೇನೆ,
ಪಾಪ ಅಡಿಗೆ ಮಾಡ್ಬೇಕಲ್ಲ
ಟೈಮಿಗ್ ಎಲ್ಲಾರ್ಗೂನೆ!
ಅಲ್ದೆ ಅಮ್ಮ ದೊಡ್ಡೋಳಲ್ವ?
ದೊಡ್ಡೋರ್ಗೇನೆ ಜಾಸ್ತಿ
ಹಾಗೇ ಅಮ್ಮ ಒಳ್ಳೇವ್ಳಲ್ವ?
ಅವರ್ಗೇ ಅಂತೆ ಆಸ್ತಿ.
ನಾನ್ ಚಿಕ್ಕೋನು ಸಾಕು ನಂಗೆ
ನಾಕೇ ಡಬ್ಬ ಒಟ್ಟು
ಚಕ್ಲಿ ಉಂಡೆ ಕೋಡ್ಬಳೇದು
ನಾಕ್ನೇದು ನಿಪ್ಪಟ್ಟು!
*****
ಲಕ್ಷ್ಮೀನಾರಾಯಣ ಭಟ್ಟರು ಕನ್ನಡ ಕಾವ್ಯದ ಜೀವಂತಿಕೆಯನ್ನು ಹೆಚ್ಚಿಸುತ್ತ ಆಧುನಿಕ ಕನ್ನಡ ಕಾವ್ಯವನ್ನು ಬೆಳೆಸುತ್ತ ಬಂದಿರುವ ಪ್ರಮುಖ ಕವಿಗಳಲ್ಲಿ ಒಬ್ಬರು. ಅವರ ಅನುವಾದಗಳು ಕನ್ನಡ ಕಾವ್ಯಕ್ಕೆ ಕೊಟ್ಟ ಬೆಲೆಬಾಳುವ ಉಡುಗೊರೆಗಳು ಮಾತ್ರವಾಗಿರದೆ ಸ್ವಂತಕ್ಕೆ ಪಡೆದ ರಕ್ತದಾನವೂ ಆಗಿದೆ. ಸ್ವಂತ ಪ್ರತಿಭೆ, ಶ್ರೇಷ್ಠಕವಿಗಳ ಆಪ್ತ ಅಧ್ಯಯನ ಎರಡೂ ಅವರನ್ನೂ ಎತ್ತರಕ್ಕೆ ಹತ್ತಿಸಿವೆ. ಅಧ್ಯಯನ, ಚಿಂತನೆ ಇವು ಅವರಲ್ಲಿ ಹಾಸು ಹೊಕ್ಕಾಗಿ ಒಂದನ್ನು ಮತ್ತೊಂದು ಬಲಗೊಳಿಸುತ್ತ ಬಂದಿವೆ.