ಮುಸ್ಸಂಜೆಯ ಮಿಂಚು – ೩

ಮುಸ್ಸಂಜೆಯ ಮಿಂಚು – ೩

ಅಧ್ಯಾಯ ೩ ಮನು ಕಾಲು ಮುರಿದುಕೊಂಡ

“ರಿತು ಇವತ್ತು ಏನಾಯ್ತು ಗೊತ್ತಾ? ಆಫೀಸಿನಲ್ಲಿ, ಇನ್ನೇನು ಆಫೀಸ್ ಟೈಮ್ ಮುಗೀಬೇಕು ಅನ್ನುವಾಗ ಯಾರೋ ಇಬ್ಬರು ವಯಸ್ಸಾದ ದಂಪತಿ ಲಗೇಜ್ ಹಿಡ್ಕೊಂಡು ಸೀದಾ ಆಫೀಸಿನೊಳಗೆ ಬಂದರು. ಅವರ ಮಗ ಇದೇ ಆಫೀಸಿನಲ್ಲಿ ಕೆಲ್ಸ ಮಾಡ್ತಾ ಇದ್ದಾನೆ ಅಂತ ತಿಳ್ಕೊಂಡು ಬಂದಿದ್ದಾರೆ. ಪಾಪ, ಆತ ಈ ಆಫೀಸಿನಲ್ಲಿಲ್ಲ ಅಂತ ಗೊತ್ತಾದ ಮೇಲೆ ತುಂಬಾ ಅಪ್‌ಸೆಟ್ ಆಗಿಬಿಟ್ರು. ಈ ಊರಲ್ಲಿ ಬೇರೆ ಯಾರೂ ಪರಿಚಯಸ್ಥರು ಇಲ್ಲ ಅಂತ ಕಾಣುತ್ತೆ. ಹೊಟೇಲಿನಲ್ಲಿ ರೂಮ್ ಮಾಡುವಷ್ಟು ಧೈರ್ಯವಂತರೂ ಅಲ್ಲ ಅನ್ನಿಸ್ತು. ಹಳ್ಳಿಯ ಮುಗ್ಧ ಜನ. ಪಾಪ ಅನ್ನಿಸಿತು. ಇವತ್ತು ರಾತ್ರಿ ಇಲ್ಲೇ ಉಳ್ಕೊಂಡು ನಾಳೆ ಹೋಗ್ತೀವಿ ಅಂತ ನಮ್ಮ ಬಾಸ್‌ನ ಅಂಗಲಾಚಿದರು ರಿತು. ನಮ್ ಬಾಸ್ ಬೇರೆ ತುಂಬಾ ಸ್ಟ್ರಿಕ್ಟ್, ‘ಆಗೋದೇ ಇಲ್ಲ, ಹಾಗೆಲ್ಲ ಕೊಡೋಕೆ ಆಗಲ್ಲ, ತಪ್ಪಾಗುತ್ತೆ’ ಅಂತ ಹೇಳಿಬಿಟ್ಟರು. ಹಾಗೆಂದ ಕೂಡಲೇ ಆ ವೃದ್ಧರು ಅದೆಷ್ಟು ಪೆಚ್ಚಾಗಿಬಿಟ್ಟರು ಅಂತ. ನಂಗಂತೂ ಹೊಟ್ಟೆ ಉರಿದುಹೋಯ್ತು. ನಮ್ಮ ಮನೆಗೆ ಬಂದು ಉಳ್ಕೊಳ್ಳಿ, ಈ ರಾತ್ರಿ ಪಾಪ ಎಲ್ಲಿ ಇರ್ತಿರಿ? ಬೀದೀಲಿ ಇರೋಕೆ ಆಗುತ್ತಾ? ಬನ್ನಿ ಅಂತ ಕರೆದೆ. ಆದ್ರೆ ತುಂಬಾ ಸ್ವಾಭಿಮಾನಿ ದಂಪತಿ, ನಿಮಗ್ಯಾಕೆ ತೊಂದರೆ. ಯಾರೋ ನೆಂಟರಿದ್ದಾರೆ ಅಲ್ಲಿಗೇ ಹೋಗ್ತೀವಿ ಅಂದರು. ನಂಗಂತೂ ಅವರ ಮುಗ್ಧ ಮುಖಗಳೇ ಎದುರಿಗೆ ಬರುತ್ತಿವೆ. ಅವರ ಮಗ ಯಾಕೆ ಸುಳ್ಳು ಅಡ್ರೆಸ್ ಕೊಟ್ಟ? ಈ ಸಾಗರದಲ್ಲಿ ಎಲ್ಲಿ ಅಂತ ಮಗನ್ನ ಹುಡುಕುತ್ತಾರೋ ಏನೋ?” ದೀರ್ಘವಾಗಿ ಹೇಳಿದ ತನುಜಾ ತಟ್ಟೆಯಲ್ಲಿ ಅನ್ನ ಬಡಿಸಿಕೊಂಡಿದ್ದರೂ ತಿನ್ನಲಾರದೆ ಒದ್ದಾಡಿದಳು.

“ಹೋಗ್ಲಿ ಬಿಡಮ್ಮಾ, ನೀನಂತೂ ಬನ್ನಿ ಅಂತ ಕರೆದ್ಯಲ್ಲ, ಬರದೇ ಹೋದರೆ ಏನು ಮಾಡೋಕೆ ಆಗುತ್ತೆ? ಆಫೀಸಿನಲ್ಲಿ ಹೇಗೆ ಅವರನ್ನ ಇರಿಸಿಕೊಳ್ಳೋಕೆ ಆಗುತ್ತೆ? ಇನ್ನು ನಾಳೆ-ನಾಡಿದ್ದು ಎರಡೂ ದಿನಾನೂ ರಜೆ. ನಾಳೆ ಏನಾದ್ರೂ ಹೆಚ್ಚು-ಕಡಿಮೆ ಆದ್ರೆ ನಿಮ್ಮ ಬಾಸ್ ತಾನೇ ಫೇಸ್ ಮಾಡಬೇಕು. ಮಗ ಸಿಗದೆ ಇದ್ರೆ ಮತ್ತೆ ಹಳ್ಳಿಗೆ ಹೋಗ್ತಾರೆ ಬಿಡು. ಅಷ್ಟು ಸಣ್ಣ ವಿಷಯಕ್ಕೆ ತಲೆ ಕೆಡಿಸಿಕೊಂಡು, ಊಟ ಮಾಡದೆ ಕೂತಿದ್ದೀಯಾ? ಬೇಗ ಊಟ ಮಾಡಿ ಕೈತೊಳ್ಕೊ. ಕೈಯೆಲ್ಲಾ ಒಣಗ್ತಾ ಇದೆ” ತಾಯಿಯನ್ನು ಊಟ ಮಾಡಲು ಬಲವಂತ ಮಾಡಿದಳು.

ರಾತ್ರಿ ಮಲಗಿದ್ದರೂ ತನುಜಾಳಿಗೆ ದಂಪತಿಗಳದ್ದೇ ನೆನಪು. ಯಾಕೋ ಅವರು ತೀವ್ರವಾಗಿ ಕಾಡಹತ್ತಿದರು. ಒಂದು ಹಂತದಲ್ಲಿ ಮನುವನ್ನು ಕರೆದುಕೊಂಡು ಹೋಗಿ ಅವರು ಅಲ್ಲಿಯೇ ಇದ್ದರೆ ಬಲವಂತವಾಗಿಯಾದರೂ ಕರೆದುಕೊಂಡು ಬರಬೇಕು ಅಂತ ಅನ್ನಿಸಿಬಿಟ್ಟಿತು. ಈ ಅರ್ಧರಾತ್ರಿಯಲ್ಲಿ ತಾನು ಮನುವನ್ನು ಏಳಿಸಿ, ತನ್ನ ಅನಿಸಿಕೆಯನ್ನು ತಿಳಿಸಿದರೆ ತನ್ನನ್ನು ಹುಚ್ಚಿ ಎಂದು ಲೇವಡಿ ಮಾಡುವುದು ಖಂಡಿತ ಎಂದು ಬಲವಂತವಾಗಿ ಹತ್ತಿಕ್ಕಿಕೊಂಡಳು. ಅವರು ನಾನು ಕರೆದಾಗ ಬರಲ್ಲ ಅಂದಕೂಡಲೇ ನಾನು ಸುಮ್ಮನಾಗಬಾರದಿತ್ತು. ಬಲವಂತವಾಗಿ ಒಪ್ಪಿಸಿ ಕರೆತರಬೇಕಿತ್ತು. ಮಗ ಸಿಗುವ ತನಕ ಇಲ್ಲೇ ಇಟ್ಟುಕೊಳ್ಳಬಹುದಿತ್ತು. ಸಿಗದಿದ್ದ ಪಕ್ಷದಲ್ಲಿ ಹಳ್ಳಿಗೆ ಕಳುಹಿಸಿದರಾಗಿತ್ತು. ತಾನೆಂಥ ಉದಾಸೀನ ಮಾಡಿದ. ಆಗಲೇ ಈ ನಿರ್ಧಾರ ಮಾಡಿದ್ದರೆ ಆಪತ್ಕಾಲದಲ್ಲಿ ವೃದ್ಧರಿಗೆ ಸಹಾಯ ಮಾಡಿದ ತೃಪ್ತಿಯಾದರೂ ಸಿಕ್ಕಿ, ಹೀಗೆ ರಾತ್ರಿಯೆಲ್ಲಾ ಚಡಪಡಿಸುತ್ತ ನಿದ್ದೆಗೆಡುವುದು ತಪ್ಪುತ್ತಿತ್ತು ಎಂದು ಅದೆಷ್ಟು ಬಾರಿ ಅಂದುಕೊಂಡಳೋ? ಬೆಳಗ್ಗೆ ಎದ್ದಕೂಡಲೇ ಮನುವಿಗೆ ಹೇಳಿ ಕರೆದುಕೊಂಡು ಬರಬೇಕು ಎಂದು ತೀರ್ಮಾನ ಮಾಡಿದ ಮೇಲೆಯೇ ತನುವಿಗೆ ನಿದ್ದೆ ಬಂದದ್ದು. ಒಂದು ವೇಳೆ ಅವರು ಅಲ್ಲಿ ಇಲ್ಲದಿದ್ದರೂ ಎಲ್ಲಿಯೋ ಕ್ಷೇಮವಾಗಿ ಇದ್ದಾರೆಂಬ ನೆಮ್ಮದಿಯಾದರೂ ಸಿಕ್ಕಿತು ಎಂದು ಅಂದುಕೊಂಡಳು.

ಆದರೆ ಬೆಳಗಾದೊಡನೆ ಮನೆಯಲ್ಲಿ ನಡೆದದ್ದೇ ಬೇರೆ. ಜಾಗಿಂಗ್‌ಗೆಂದು ಹೋಗಿದ್ದ ಮನು ಎಡವಿ ಬಿದ್ದು, ಕಾಲು ಮುರಿದುಕೊಂಡು ಆಸ್ಪತ್ರೆ, ಮನೆ ಎಂದು ಓಡಾಡುವ ಗಡಿಬಿಡಿ, ಗಾಬರಿ, ಆತಂಕಗಳಲ್ಲಿ ಆ ವೃದ್ದರು ಅವಳ ಮನಃಪಟಲದಿಂದ ಮರೆಯಾಗಿಬಿಟ್ಟಿದ್ದರು. ಆಸ್ಪತ್ರೆಯಲ್ಲಿ ಎರಡು ದಿನವಿದ್ದ ಮನು ಪ್ಲಾಸ್ಟರ್ ಹಾಕಿಕೊಂಡು ಇನ್ನೆರಡು ತಿಂಗಳು ಮಂಚ ಬಿಟ್ಟು ಕೆಳಗಿಳಿಯುವಂತಿರಲಿಲ್ಲ. ಸದ್ಯ ಆಸ್ಪತ್ರೆ ವಾಸ ಎರಡೇ ದಿನಕ್ಕೆ ಮುಗಿಯಿತಲ್ಲ ಎಂದು ತನುಜಾ ಸಮಾಧಾನಿಸಿಕೊಂಡಳು. ಶನಿವಾರ, ಭಾನುವಾರ, ಎರಡೂ ದಿನಗಳು ರಜೆ ಇದ್ದುದರಿಂದ ರಜೆ ಹಾಕುವ ಅಗತ್ಯ ಬರಲಿಲ್ಲ. ಮನುವನ್ನು ನೋಡಿಕೊಳ್ಳುವ ಸಲುವಾಗಿ ರಜೆ ಹಾಕಲು ಮುಂದಾಗಿದ್ದ ತನುಜಾಳನ್ನು ಮನುವೇ ಬೇಡವೆಂದು ತಡೆದಿದ್ದ. ಊರಿನಿಂದ ಅಣ್ಣನ ಮಗ ಧರಣಿಯನ್ನು ಕರೆಸಿಕೊಳ್ಳುತ್ತೇನೆ. ನೀನು ಆಫೀಸಿಗೆ ಹೋಗು ಎಂದು ಬಲವಂತ ಮಾಡಿದ.

ತನುಜಾಳ ಅವಶ್ಯಕತೆ ಆಫೀಸಿಗೆ ಎಷ್ಟಿದೆ ಎಂದು ಅರಿವಿದ್ದೇ ಮನು ತನುಜಾಳನ್ನು ಆಫೀಸಿಗೆ ಕಳುಹಿಸಿದ್ದ. ಮನು ರಾತ್ರಿಯೇ ಫೋನ್ ಮಾಡಿದ್ದರಿಂದ ಧರಣಿ ಬೆಳಗ್ಗೆಯೇ ಬಂದುಬಿಟ್ಟ. ಧರಣಿ ಬಂದದ್ದನ್ನು ನೋಡಿಯೇ ನಿರಾತಂಕವಾಗಿ ಆಫೀಸಿಗೆ ಹೊರಟಳು ತನು. ಧರಣಿ ತನಗಿಂತ ಹೆಚ್ಚಾಗಿ ಚಿಕ್ಕಪ್ಪನನ್ನು ನೋಡಿಕೊಳ್ಳುವನೆಂಬ ಖಾತ್ರಿ ಇತ್ತು. ಹಾಗಾಗಿಯೇ ಆತಂಕ ಕಡಿಮೆಯಾಯಿತು. ರಿತು ಅಂತೂ ತುಂಬಾ ಪೆಚ್ಚಾಗಿಬಿಟ್ಟಿದ್ದಳು. ಪ್ರೀತಿಯ ಅಪ್ಪ ಇನ್ನೆರಡು ತಿಂಗಳು ಹಾಸಿಗೆಯಲ್ಲಿಯೇ ಮಲಗಿ ಇರಬೇಕಾದ ಪರಿಸ್ಥಿತಿಯಿಂದ ದುಗುಡಗೊಂಡಿದ್ದಳು. ಮೊದಲೇ ಅವಳದು ಅತಿ ಮೃದು ಮನಸ್ಸು. ಯಾರೇ ನೋಯುತ್ತಿದ್ದರೂ ದ್ರವಿಸುವ ರಿತು ಅಪ್ಪನಿಗಾದ ಈ ಆಘಾತದಿಂದ ತಾನೇ ನೋವು ಅನುಭವಿಸುತ್ತಿರುವಂತೆ ಚಡಪಡಿಸುತ್ತಿದ್ದಳು. ಇದ್ದುದರಲ್ಲಿ ತನುಜಳೇ ಧೈರ್ಯಸ್ಥೆ ಎನ್ನಬೇಕು. ರಿತುವನ್ನು ಒಂದು ಕಡೆ ಸುಧಾರಿಸುತ್ತ, ಮನುವನ್ನೂ ನೋಡಿಕೊಂಡು ಮನಸ್ಸಿಗಾದ ಕಸಿವಿಸಿ, ನೋವು, ಬೇಸರವನ್ನು ಮರೆಮಾಡುತ್ತ ಆಸ್ಪತ್ರೆಯಿಂದ ಮನೆಗೆ ಕರೆತರುವತನಕ ಕೊಂಚವೂ ಏರುಪೇರಾಗದಂತೆ ಅಚ್ಚುಕಟ್ಟಾಗಿ ನಿಭಾಯಿಸಿ, ಮನುವಿನ ಕಣ್ಣಲ್ಲಿ ಮೆಚ್ಚುಗೆ ಮೂಡಿಸಿದಳು. ಅದಕ್ಕೆಂದೇ ತನುಜಾಳನ್ನು ಕಂಡರೆ ಮನುವಿಗೆ ಅಭಿಮಾನ, ಬರೀ ಅಭಿಮಾನವಲ್ಲ, ಅದು ಹುಚ್ಚು ಅಭಿಮಾನ.

ಮನೆಗೆ ಬಂದ ಮೇಲೂ ಅಪ್ಪನನ್ನು ಬಿಟ್ಟು ಅಲ್ಲಾಡದೆ ಮಂಚಕ್ಕಂಟಿಕೊಂಡೇ ಕುಳಿತು ಅಪ್ಪನಿಗೆ ಏನೋ ಆಗಿಹೋಯಿತೆಂಬಂತೆ ವರ್ತಿಸುತ್ತಿದ್ದ ರಿತುವನ್ನು ಮನು ರೇಗಿಸಿದ, “ರಿತು, ಕಾಲಿನ ಮೂಳೆ ಮಾತ್ರ ಮುರಿದಿದೆ. ಕಾಲು ಮುರ್ಕೊಂಡು ಕುಂಟ ಆಗಿಲ್ಲ ಕಣೆ. ಪ್ರಾಣ ಅಂತೂ ಈ ಬಾಡಿಲೇ ಉಳ್ಕೊಂಡಿದೆ. ನೀನ್ಯಾಕೆ ಇಷ್ಟೊಂದು ಫೀಲ್ ಆಗ್ತಾ ಇದ್ದೀಯಾ?” ಅಂತ ನಗಾಡಿದ.

ಕಣ್ಣಲ್ಲಿ ನೀರು ತುಂಬಿಕೊಂಡಿದ್ದ ರಿತು ಥಟ್ಟನೆ ಅಪ್ಪನ ಬಾಯಿ ಮುಚ್ಚುತ್ತ, “ಅಪ್ಪಾ, ಹಾಗೆಲ್ಲ ಮಾತಾಡಬೇಡ, ಈಗ್ಲೇ ನಾನು ಕಂಗೆಟ್ಟು ಹೋಗಿದ್ದೇನೆ. ನನ್ನ ಇನ್ನಷ್ಟು ಹೆದರಿಸಬೇಡ. ನೀನು ಬಿದ್ದುಬಿಟ್ಟಿದ್ದೀಯಾ ಅಂತ ಗೊತ್ತಾದ ಕೂಡಲೇ ನನ್ನೆದೆನೇ ಒಡೆದುಹೋಗಿತ್ತು. ಸದ್ಯ ಇಷ್ಟಕ್ಕೆ ಮುಗೀತಲ್ಲ. ದೇವರ ದಯೆ. ನನ್ನ ಅಪ್ಪಂಗೆ ಏನೂ ಆಗೋಲ್ಲ. ನೀನು ಏನೇನೋ ಮಾತನಾಡಬೇಡ” ಅತ್ತೇಬಿಟ್ಟಳು.

ತನುವೇ ಬಯ್ದು ಎಚ್ಚರಿಸಿದಳು. “ಯಾಕೆ ಹೀಗೆಲ್ಲಾ ಆಡ್ತೀಯಾ ರಿತು? ನೀನು ಬಹಳ ಧೈರ್ಯಸ್ಥೆ ಅಂತ ಅಂದುಕೊಂಡಿದ್ದು ನನ್ನದೇ ತಪ್ಪು, ನೀನೇ ನಂಗೆ ಧೈರ್ಯ ಹೇಳಬೇಕು. ಅಂಥದ್ದರಲ್ಲಿ ಹೀಗೆ ಗರಬಡಿದವಳಂತೆ ಕುಳಿತದ್ದು ನೋಡಿ ನಂಗೆಷ್ಟು ಆತಂಕ ಆಯ್ತು ಗೊತ್ತಾ? ಎಲ್ಲಾ ಕಡೆ ನಾನೇ ಓಡಾಡಬೇಕಾಯ್ತು. ಇಷ್ಟು ದೊಡ್ಡ ಮಗಳಿದ್ದು ನಂಗೆ ಏನೂ ಹೆಲ್ಪ್ ಆಗಲೇ ಇಲ್ಲ. ಹೀಗೆ ಎದೆಗುಂದಿದರೆ ಹೇಗೆ ರಿತು? ಬಂದದ್ದನ್ನೆಲ್ಲ ಎದುರಿಸುವ ಎದೆಗಾರಿಕೆ ನಿನ್ನಲ್ಲಿ ಇರಬೇಕು ಅಂತ ನಿನ್ನ ಬೆಳೆಸಿದ್ದೆಲ್ಲ ಎಲ್ಲಿ ಹೋಯ್ತು? ಕಲ್ಲೆದೆ ನಿನ್ನದಾಗಬೇಕು. ಆಗಷ್ಟೇ ಈ ಬದುಕಿನಲ್ಲಿ ದಿಟ್ಟವಾಗಿ ನಡೆಯೋಕೆ ಸಾಧ್ಯ. ಮನೋಸ್ಥೆರ್ಯ ಬೆಳೆಸಿಕೊಳ್ಳಬೇಕು. ಇದೇ ಕೊನೆ, ಇನ್ನು ಮುಂದೆ ಈ ಅಳುಮುಂಜಿ ರಿತುವನ್ನು ನಾನು ನೋಡೋಕೆ ಇಷ್ಟಪಡಲ್ಲ” ಎಂದು ನಿಷ್ಟುರವಾಗಿಯೇ ನುಡಿದಳು. ತಾನು ಬೆಳೆಸಿದ ರಿತುವೇ ಇವಳು ಎನಿಸಿಬಿಟ್ಟಿತ್ತು ಅವಳಿಗೆ.

ರಿತುವಿಗೂ ಈ ಪರಿ ಹೊಸದೇ. ಮನಸ್ಸು ಮೃದುವಾಗಿದ್ದರೂ ಬಂದದ್ದನ್ನೆಲ್ಲ ಧೈರ್ಯವಾಗಿ ಫೇಸ್ ಮಾಡುವುದನ್ನು ಅಮ್ಮನಿಂದಲೇ ಕಲಿತಿದ್ದಳು. ಆದರೇಕೊ ಅಪ್ಪ ಬಿದ್ದದ್ದು, ನೋವಿನಿಂದ ಮುಖ ಕಿವುಚುತ್ತಿದ್ದುದು, ಆಸ್ಪತ್ರೆಯಲ್ಲಿ ಸ್ಟೆಚರಿನಲ್ಲಿ ಮಲಗಿಸಿಕೊಂಡು ಒಳ ಕರೆದೊಯ್ದದ್ದು ಅವಳಿಗೇಕೋ ತನ್ನ ಪ್ರೀತಿಯ ಅಪ್ಪ, ಸದಾ ಜೇಮ್ಸ್ ಬಾಂಡ್‌ನಂತೆ ಇರುತ್ತಿದ್ದ ಅಪ್ಪ, ಜಾಗಿಂಗ್, ವ್ಯಾಯಾಮದಿಂದ ಸದಾ ಆರೋಗ್ಯದಿಂದ ನಳನಳಿಸುತ್ತಿದ್ದ ತನ್ನ ಅಪ್ಪನಂಥ ಅಪ್ಪ ಹಾಸಿಗೆಯ ಮೇಲೆ ಪ್ಲಾಸ್ಟರ್ ಹಾಕಿಸಿಕೊಂಡು ನೋವಿನಿಂದ ಒದ್ದಾಡುತ್ತ ಮಲಗಿದ್ದು ಅವಳನ್ನು ತಲ್ಲಣಿಸುವಂತೆ ಮಾಡಿತ್ತು. ಶೂನ್ಯ ಆವರಿಸಿದಂತಾಗಿ ಏನು ಮಾಡಲೂ ತೋಚದೆ ಬೆಪ್ಪಾಗಿ ಕುಳಿತುಬಿಟ್ಟಿದ್ದಳು. ಈಗಷ್ಟೇ ಅವಳಿಗರಿವಾಗಿತ್ತು, ತಾನೆಷ್ಟು ಅಪ್ಪನನ್ನು ಹಚ್ಚಿಕೊಂಡಿದ್ದೆ ಎಂದು, ಈ ಅತಿ ಪ್ರೀತಿಯೇ ಅವಳೆದೆಗೆ ಆಘಾತ ತಡೆದುಕೊಳ್ಳುವ ಶಕ್ತಿಯನ್ನು ದೂರ ಮಾಡಿತ್ತು. ತನುಜಾ ನಿಷ್ಠುರವಾಗಿ ಹೇಳದಿದ್ದರೆ ಈ ಆಘಾತದಿಂದ ಹೊರಬರಲು ಇನ್ನೆಷ್ಟು ದಿನ ಬೇಕಾಗಿರುತ್ತಿತ್ತೋ? ಅಮ್ಮನ ನುಡಿಗಳು ಮನದಾಳಕ್ಕೆ ಇಳಿದು ತನ್ನ ಬಗ್ಗೆಯೇ ತಾನು ನಾಚಿಕೊಳ್ಳುವಂತಾಗಿತ್ತು. ತನ್ನ ಭಯ, ಆತಂಕ ಅತಿ ಎನಿಸಿ ಮನಸಿಗೆ ಧೈರ್‍ಯ ತಂದುಕೊಂಡಳು. ಅಪ್ಪನಿಗಾಗಿರುವುದು ಒಂದು ಸಣ್ಣ ಆಕ್ಸಿಡೆಂಟ್ ಅಷ್ಟೇ. ಇನ್ನೆರಡು ತಿಂಗಳಲ್ಲಿ ಮಿಂಚಿನಂತೆ ಓಡಾಡುವ, ಜೇಮ್ಸ್ ಬಾಂಡ್‌ನಂತಾಗುವ ಅಪ್ಪನ ಬಗ್ಗೆ ತನ್ನ ಕಳವಳ ಸಲ್ಲದು ಎಂದುಕೊಂಡು ಕಣ್ಣೀರು ಒರೆಸಿಕೊಂಡು, “ಸ್ಸಾರಿ ಅಮ್ಮ, ಸ್ಸಾರಿ ಅಪ್ಪ ಅಪ್ಪನಿಗೇನಾಯ್ತೋ ಅನ್ನೋ ಭಯದಲ್ಲಿ ನಂಗೇನು ತೋಚಲೇ ಇಲ್ಲ. ಒಂದೆರಡು ದಿನ ನಂಗೆ ಎಲ್ಲಾ ಮರೆತುಹೋಗಿತ್ತು. ನಾನು ಡ್ಯೂಟಿಗೆ ಹೊರಡ್ತೀನಿ” ಎಂದು ಎದ್ದು ಹೊರಟಾಗ ತನುಜಾ ಮತ್ತು ಮನು ಹೆಮ್ಮೆಯಿಂದ ರಿತುವಿನೆಡೆ ನೋಡಿದರು. ಆ ನೋಟದಲ್ಲಿ ಆಪ್ಯಾಯಮಾನವಿತ್ತು. ಅಭಿಮಾನವಿತ್ತು, ಪ್ರೀತಿಯಿತ್ತು.

“ತನುಜಾ, ನೀನು ಅಷ್ಟೊಂದು ಒರಟಾಗಿ ಹೇಳಬಾರದಿತ್ತು” ಮನು ಆಕ್ಷೇಪಿಸಿದ.

“ನಾನು ಹಾಗೆ ಹೇಳದೆ ಇದ್ರೆ ಇನ್ನೂ ನಿಮ್ಮ ಮುಂದೆ ಅಳ್ತಾ ಕೂತಿರ್ತಿದ್ದಳು, ನಿಮ್ಮ ಮುದ್ದಿನ ಮಗಳು. ನನ್ನ ಮಾತು ಮನಸ್ಸಿಗೆ ನಾಟಿದ್ರಿಂದ್ಲೇ ಅವಳು ಮೊದಲಿನಂತಾಗಿದ್ದು” ತನ್ನನ್ನು ಸಮರ್ಥಿಸಿಕೊಂಡಳು ತನುಜಾ.

“ಎಲ್ಲರ ಹಾಗೆ ಅಲ್ವೇನೇ ನಮ್ಮ ಮಗಳೂ, ಯಾವತ್ತೂ ಹೀಗೆ ಆಗಿರಲಿಲ್ಲ. ನಾನು ಆಸ್ಪತ್ರೆಗೆ ಹೋಗಿದ್ದನ್ನೇ ರಿತು ನೋಡಿಲ್ಲ. ದೇವರ ದಯೆಯಿಂದ ನಿಮ್ಮಿಬ್ಬರಿಗೂ ಆಸ್ಪತ್ರೆ ಮೆಟ್ಟಿಲು ಏರೋ ಪ್ರಸಂಗವೇ ಇದುವರೆಗೆ ಬಂದಿರಲಿಲ್ಲ. ಈಗ ದಿಢೀರನೇ ನಾನು ಕಾಲು ಮುರ್ಕೊಂಡು ಮಲಗಿದ್ದರೆ ಯಾವ ಹೆತ್ತ ಮಕ್ಕಳು ಸಹಿಸುತ್ತಾರೆ ಹೇಳು. ನಮ್ಮ ರಿತುನೂ ಇದಕ್ಕೆ ಹೊರತಲ್ಲ. ನಾನು ಅಂದ್ರೆ ಅವಳಿಗೆ ಪ್ರಾಣ. ನಂಗೇನು ಆಗಿ ಹೋಯ್ತೋ ಅನ್ನೋ ಭಯದಿಂದ ಹಾಗಾಗಿದ್ದಳು ಅಷ್ಟೇ.”

ಮನುವಿನ ಪಕ್ಕ ನಿಧಾನವಾಗಿ ಕೂರುತ್ತ ತನುಜಾ, “ಹಾಗಾಗಬಾರದು ಅಂತ ಅಲ್ವೇನ್ರಿ ನಮ್ಮಾಸೆ? ಎಲ್ಲರ ಹಾಗೆ ಬೆಳೀಬಾರದು ಅನ್ನೋದೇ ತಾನೆ ನಮ್ಮ ಉದ್ದೇಶ? ನಮ್ಮ ರಿತು ಎಲ್ಲರಿಗಿಂತ ಭಿನ್ನವಾಗಿರಬೇಕು. ಮಗ-ಮಗಳು ಎರಡೂ ಅವಳೇ. ಗಂಡಿನ ಧೈರ್ಯ, ಹೆಣ್ಣಿನ ಮನಸ್ಸು ಎರಡೂ ಇರಬೇಕು. ಬಂದದ್ದನ್ನೆಲ್ಲ ಎದುರಿಸುತ್ತ ಎದೆಗಾರಿಕೆಯುಳ್ಳ ಹೆಣ್ಣಾಗಿ, ಅಂಜದೆ, ಅಳುಕದ ಮಾನವತೆಯ ಸಾಕಾರವಾಗಿರಬೇಕು ಅಂತ ತಾನೇ ನಾವು ಅವಳ ಪ್ರತಿಯೊಂದು ಹೆಜ್ಜೆಯನ್ನೂ ಎಚ್ಚರಿಕೆಯಿಂದ ಇಡಿಸುತ್ತಿದ್ದದ್ದು. ಒಂದು ಕ್ಷಣ ಏನಾಗಿಹೋಯ್ತು ಅವಳಿಗೆ? ಈ ಸಣ್ಣ ಆಘಾತಾನ ಅವಳಿಂದ ತಡೆಯೋಕೆ ಆಗ್ಲಿಲ್ಲ ಅಂದ್ರೆ ಮುಂದೆ ಏನನ್ನ ಎದುರಿಸುತ್ತಾಳೆ ? ನನ್ನ ಮಗಳು ಎಲ್ಲರಿಗಿಂತ ಬೇರೆಯೇ ಆಗಿರಬೇಕು. ಸಾಧಾರಣ ಹೆಣ್ಣಾಗಿ ಮದ್ವೆ, ಸಂಸಾರ ಅಂತ ತನ್ನ ಬದುಕನ್ನ ಮಾತ್ರ ಅಪ್ಪಿಕೊಳ್ಳೋ ಮಗಳಾಗಿರಬಾರದು. ತನ್ನ ಬದುಕಿನ ಜತೆಜತೆಗೆ ಮದರ್ ಥೆರೆಸಾ, ನೈಟಿಂಗೇಲ್ ಮುಂತಾದವರ ಗುಣಗಳನ್ನು ಅಳವಡಿಸಿಕೊಂಡು ಬೇರೆಯವರಿಗಾಗಿಯೂ ಬದುಕಬೇಕು. ಹಾಗೆ ಬದುಕಬೇಕಾದಲ್ಲಿ ಯಾವ ಆಘಾತಗಳೂ ಅವಳನ್ನು ಅಲುಗಾಡಿಸಬಾರದು, ಎಲ್ಲವನ್ನೂ ನುಂಗಿಕೊಳ್ಳುವ ಗುಣ ಬೆಳೆಸಿಕೊಳ್ಳಬೇಕು. ನಮ್ಮ ರಿತು ಅಸಾಧಾರಣ ಹೆಣ್ಣಾಗಬೇಕು. ಆ ಎಲ್ಲಾ ಕುರುಹುಗಳೂ ಅವಳಲ್ಲಿ ಕಾಣ್ತಾ ಇವೆ. ನಿಮಗಾದ ಈ ಆಘಾತ ಕ್ಷಣ ಅವಳನ್ನು ತಲ್ಲಣಗೊಳಿಸಿತಷ್ಟೇ. ಈಗ ಸರಿಯಾಗಿಬಿಟ್ಟಳು” ಅವಳ ಮಾತು ಮುಗಿಯುವುದಕ್ಕೂ ರಿತು ಸಿದ್ಧವಾಗಿ ಹೊರಬರುವುದಕ್ಕೂ ಸರಿಯಾಯ್ತು.

“ಅಮ್ಮಾ, ನಿನ್ನ ಆಫೀಸಿಗೆ ಡ್ರಾಪ್ ಮಾಡಿ ನಾನು ಹೋಗ್ತಿನಿ ಬಾ” ಎಂದಳು. ಗಂಡನೆಡೆ ನೋಡಿ ನನ್ನ ಮಾತು ನಿಜ ತಾನೇ ಎಂಬಂತೆ ಕಣ್ಣಿನಲ್ಲಿಯೇ ಕೇಳಿದಳು. ನೀನು ಹೇಳಿದ್ದು ಸರಿ ಎಂಬಂತೆ ಕತ್ತಾಡಿಸಿದ ಮನು.

ಧರಣಿಗೆ ಮನುವನ್ನು ಹೇಗೆ ನೋಡಿಕೊಳ್ಳಬೇಕು? ಯಾವ್ಯಾವಾಗ ಯಾವ ಯಾವ ಮಾತ್ರ ನೀಡಬೇಕು ಎಂದು ತಿಳಿಸಿದ ತನುಜಾ ತಿಂಡಿ, ಅಡುಗೆ ಎಲ್ಲಾ ಮಾಡಿರುವುದಾಗಿ, ಮಧ್ಯಾಹ್ನ ಊಟ ಮಾಡಿಸು. ಸಂಜೆ ಬೇಗ ಬಂದು ತಿಂಡಿ ಮಾಡ್ತೀನಿ ಎಂದು ಹೇಳಿ ಅಡುಗೆ ಮನೆಯ ಪರಿಚಯವನ್ನು ಮಾಡಿಸಿದಳು.

“ಇದೇನು ಚಿಕ್ಕಮ್ಮ, ನಾನೇನು ಹೊಸದಾಗಿ ನಿಮ್ಮ ಮನೆಗೆ ಬಂದಿದ್ದಿನಾ? ನಿಂಗೆ ಗಾಬರಿಯಿಂದ ಎಲ್ಲಾ ಮರೆತುಹೋಗಿದೆ. ನೀನೇನು ವರಿ ಮಾಡ್ಕೊಬೇಡ. ಚಿಕ್ಕಪ್ಪನ್ನ ನಾನು ಚೆನ್ನಾಗಿ ನೋಡಿಕೊಳ್ತಿನಿ. ಹಾಯಾಗಿ ನೀವಿಬ್ಬರೂ ಕೆಲಸಕ್ಕೆ ಹೋಗಿ ಬನ್ನಿ. ಸಂಜೆ ಮಾತ್ರ ನನ್ನ ಬಿಟ್ಟುಕೊಡಿ. ಸಂಜೆ ಒಂದು ಪಾರ್ಟ್‌ಟೈಮ್ ಕೆಲ್ಸ ಒಪ್ಪಿಕೊಂಡಿದ್ದೇನೆ. ಎಕ್ಸ್‍ಪೀರಿಯನ್ಸ್‍ಗಾಗಿ. ಇಲ್ಲಿ ಅನುಭವವಾದ್ರೆ ನಮ್ಮೂರಲ್ಲೇ ಕೆಲ್ಸ ಸಿಗೋ ಛಾನ್ಸ್ ಇದೆ” ಎಂದ ಧರಣಿ.

“ಸರಿಯಪ್ಪ ನಂಗೂ ಯಾಕೋ ತಲೆ ಕೆಟ್ಟಂತಾಗಿದೆ. ಸುಮ್ಮೆ ಎರಡು ತಿಂಗಳು ವೇಸ್ಟ್ ಆಗುತ್ತಲ್ಲ ನಿಂಗೆ ಅಂತ ಅಂದ್ಕೋತಾ ಇದ್ದೆ. ಒಳ್ಳೆಯ ಅವಕಾಶವೇ ಸಿಕ್ಕಿದೆ. ಸಂಜೆ ನೀನು ಹೋಗು. ನಾನು ಬಂದ ಮೇಲೆ ಎಲ್ಲಾ ನೋಡಿಕೊಳ್ತೀನಿ. ನಡಿ ರೀತು, ಲೇಟಾಗಿಯೇ ಬಿಟ್ಟಿತು. ಬಾಸ್ ಏನನ್ನುತ್ತಾರೋ?” ಹೊರಡಲು ರಿತುವನ್ನು ಅವಸರಿಸಿದಳು.

ಮನೆ ಬಿಡುವ ತನಕ ಮನುವೇ ಮನದಲ್ಲಿ ನೆಲೆನಿಂತುಬಿಟ್ಟಿದ್ದರಿಂದ ಬೇರೆ ಯಾವ ಆಲೋಚನೆಗೂ ಅವಕಾಶವಿರಲಿಲ್ಲ. ಈಗ ನಿರಾತಂಕವಾಗಿ ಧರಣಿಗೆ ಮನುವನ್ನು ಒಪ್ಪಿಸಿ ಬಂದದ್ದರಿಂದ ಮನಸ್ಸು ಆಫೀಸನ್ನು ಕುರಿತು ಯೋಚಿಸಲು ಪ್ರಾರಂಭಿಸಿತ್ತು. ಆಫೀಸಿನ ವಿಷಯ ಯೋಚಿಸುತ್ತಿರುವಾಗಲೇ ಅದುವರೆಗೂ ಮರೆಯಾಗಿಯೇ ಹೋಗಿದ್ದ ಆ ವೃದ್ಧ ದಂಪತಿ ನೆನಪಾಗಿ ಪಾಪ, ಏನು ಪಾಡುಪಡುತ್ತಿದ್ದಾರೋ ಈ ಅರಿಯದ ಊರಿನಲ್ಲಿ ಇವತ್ತೇನಾದರೂ ಸಿಕ್ಕಿದರೆ ಕರೆದುಕೊಂಡೇ ಬರುತ್ತೇನೆ ಎಂದುಕೊಂಡಳು. ರಿತುವಿನ ಮನಸ್ಸು ಕೂಡ ತಿಳಿಯಾಗಿತ್ತೇನೋ? “ಅಮ್ಮಾ, ಮೊನ್ನೆ ಹೇಳಿದ್ಯಲ್ಲ ಆ ಮುದುಕರ ವಿಷಯ. ಅವರಿಗ್ಯಾರೂ ಇಲ್ಲದಿದ್ದರೆ ನಮ್ಮ ಆಶ್ರಮಕ್ಕೆ ಬರಲು ತಿಳಿಸಮ್ಮ, ತೀರಾ ನಿರಾಶ್ರಿತರಾದವರಿಗೆ, ಅನಾಥರಿಗೆ ಅಲ್ಲಿ ಇರೋಕೆ ಫ್ರಿಯಾಗಿ ಅವಕಾಶ ಕೊಡ್ತಾರಂತೆ. ನೀನೇ ಕರ್ಕೊಂಡು ಬಾ. ಇಲ್ಲದಿದ್ದರೆ ಆಟೋದಲ್ಲಿ ಕೂರಿಸಿ ಅಡ್ರೆಸ್ ಹೇಳು. ಬೇರೆ ಕಡೆ ವ್ಯವಸ್ಥೆ ಆಗೋವರೆಗೆ ಬೇಕಾದ್ರು ಇರಬಹುದು, ಖಾಯಂ ಆಗಿ ಬೇಕಾದ್ರೆ ಇರಬಹುದು. ನಿನ್ನ ಕೆಲಸದಲ್ಲಿ ಮುಳುಗಿ ಮರೀಬೇಡ, ನಾನು ಬರ್‍ಲಾ” ತನುಜಾಳನ್ನು ಆಫೀಸ್ ಮುಂದೆ ಇಳಿಸಿ ಭರ್ರೆಂದು ಹೋಗಿಯೇಬಿಟ್ಟಳು ಅಷ್ಟು ಹೇಳಿ. ಸ್ಪೀಡ್ ಕಡಿಮೆ ಮಾಡಿಕೋ ಎಂದು ಹೇಳಬೇಕು. ಇಷ್ಟೊಂದು ಸ್ಪೀಡಾಗಿ ಹೋದರೆ ಹೇಗೆ? ನನ್ನ ಕೂರಿಸಿಕೊಂಡ್ರೆ ನಿಧಾನವಾಗಿ ಹೋಗ್ತಾಳೆ. ಒಬ್ಳೇ ಆದ್ರೆ ರಾಕೆಟ್‌ನಂತೆ ಹೋಗುತ್ತಾಳೆ. ಸರಿಯಾಗಿ ಬಯ್ದು ಹೇಳಬೇಕು ಎಂದುಕೊಳ್ಳುತ್ತಲೇ ಆಫೀಸಿನ ಒಳಹೊಕ್ಕಳು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನೆಲಮಣ್ಣಿನ ಸ್ವಯಂ ಸ್ವಯಂವರ
Next post ಮಾತನಾಡಿಸಬೇಕು

ಸಣ್ಣ ಕತೆ

 • ಮೌನರಾಗ

  ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…

 • ನಂಟಿನ ಕೊನೆಯ ಬಲ್ಲವರಾರು?

  ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…

 • ಶಾಕಿಂಗ್ ಪ್ರೇಮ ಪ್ರಕರಣ

  ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ.… Read more…

 • ಮೌನವು ಮುದ್ದಿಗಾಗಿ!

  ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

 • ಗಿಣಿಯ ಸಾಕ್ಷಿ

  ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…