ಜರಾಸಂಧ ಸಂಹಾರ

-ಅಭಿಮನ್ಯುವಿನ ಜನನದ ವೇಳೆಗೆ ಪಾಂಡವರ ರಾಜವೈಭವವು ಕಣ್ಣುಕುಕ್ಕುವಂತಿತ್ತು. ಶ್ರೀಕೃಷ್ಣನಂಥವನು ಸಲಹೆಗಾರನಾಗಿ ಅವರ ಬೆಂಬಲಕ್ಕಿದ್ದುದರಿಂದಲೂ ಐದು ಮಂದಿ ಸೋದರರ ಒಗ್ಗಟ್ಟಿನ ದುಡಿಮೆಯಿಂದಲೂ ರಾಜ್ಯ ಸಂಪತ್ತುಗಳು ಬಲುಬೇಗನೆ ವೃದ್ಧಿಸಲಾರಂಭಿಸಿ, ಅವರು ಹಸ್ತಿನಾಪುರದ ಅರಸರಿಗಿಂತಲೂ ಶ್ರೀಮಂತರಾಗುತ್ತ ಬೆಳೆದು ನಿಂತರು. ಇದರಿಂದ ತಮ್ಮ ವೈಭವದ ಬದುಕನ್ನು ಜಗತ್ತಿಗೆ ತೋರಿಸಿ ಹೆಮ್ಮೆ ಪಡಬೇಕೆಂಬ ಆಸೆಯು ಪಾಂಡವರಲ್ಲಿ ಕ್ರಮೇಣ ಮೊಳಕೆಯೊಡೆಯಿತು. ಅದಕ್ಕಾಗಿ ಏನು ಮಾಡಬೇಕೆಂಬ ಆಲೋಚನೆಯಲ್ಲಿ ಅವರು ಮುಳುಗಿರುವಾಗ ಕುಂತಿಯು, ಶ್ರೀಕೃಷ್ಣನನ್ನು ಕರೆದು ಅವನ ಅಭಿಪ್ರಾಯ ಕೇಳಲು ತಿಳಿಸಿದಳು-

ಪಾಂಡುಕುಮಾರರ ವೈಭವ ಕೀರುತಿ ಎಣೆಯಿಲ್ಲದುದೆಂದೆನಿಸಿತ್ತು
ತಮ್ಮಯ ಬದುಕನು ಲೋಕಕೆ ತೋರುವ ಆಸೆಯು ಮನದಲಿ ಜನಿಸಿತ್ತು
ದುರ್ಯೋಧನ ತಾ ಕೊಲ್ಲಲೆಳಸಿದ್ದ ಕುಂತಿಯಪುತ್ರರು ಇವರೇನು
ಎನ್ನುತ ಲೋಕವು ಬೆರಗಲಿ ನೋಡಲಿ ಎಂದವರಿಗೆ ಅನಿಸದು ಏನು?
ಯೋಚನೆ ಮನದಲಿ ಮೂಡಿದುದೇ ತಡ ಕೂಡಲೆ ಜಾರಿಗೆ ಬಂದಿತ್ತು
ಹಿತಚಿಂತಕ ಶ್ರೀಕೃಷ್ಣನ ಸಲಹೆಯ ಕೇಳುವ ಬುದ್ಧಿಯ ತಂದಿತ್ತು
ಪಾಂಡವರೆಲ್ಲರು ಮನಸಿನ ಆಸೆಯ ಕೃಷ್ಣನ ಎದುರಲಿ ಹೇಳಿದರು
ಮುಂದೇನೆಂಬುವ ಸಲಹೆಯ ನೀಡಲು ವಿನಯದಿ ಅವನನು ಬೇಡಿದರು!

ಕೃಷ್ಣನು ನುಡಿದನು- “ಪಾಂಡವ ವೀರರೆ, ಕೈಗೊಳ್ಳಿರಿ ದಿಗ್ವಿಜಯವನು
ಜಯವನು ಪಡೆಯಿರಿ ಜನರನು ಕರೆಯಿರಿ ಮಾಡಿರಿ ರಾಜಸೂಯವನು”
ಪಾಂಡವವೀರರು ಕೃಷ್ಣನ ಮಾತನು ಸಂತಸದಿಂದಲಿ ಒಪ್ಪಿದರು
‘ಶ್ರೀಕೃಷ್ಣನೆ, ನಮಗೆಲ್ಲವೂ ನೀನೇ’ ಎಂದವನನು ಬಿಗಿದಪ್ಪಿದರು
ಅಂದಿನ ದಿನವೇ ನಾಂದಿಯ ಹಾಡುತ ಕಾರ್ಯದ ಬಾಗಿಲು ತಟ್ಟಿದರು
ನಾಡಿನ ಎಲ್ಲೆಡೆ ಢಂಗುರ ಸಾರಿಸಿ ಕೂಡಲೆ ಸೈನ್ಯವ ಕಟ್ಟಿದರು!
ಕೃಷ್ಣನು ಹೇಳಿದ- “ಮೊದಲಿಗೆ ಮಗಧದ ಜರಾಸಂಧನನು ಗೆಲಬೇಕು
ಆ ನಂತರವೇ ಉಳಿದವರೆಲ್ಲರ ಗೆಲ್ಲಲು ಮುಂದಡಿಯಿಡಬೇಕು
ಕ್ಷುದ್ರವಿದ್ಯೆಗಳ ತಿಳಿದಿರುವಂತಹ ಶಕ್ತಿದೇವತೆಯ ಉಪಾಸಕ
ಹಲವು ರಾಜರನು ಬಲಿಗೊಡಲೆಂದೇ ಬಂಧಿಸಿರುವ ಮಹಾಕಟುಕ
ಜರಾಸಂಧನನು ಜಯಿಸಿದಿರಾದರೆ ರಾಜರು ಬಿಡುಗಡೆ ಹೊಂದುವರು
ನಿರಾಯಾಸದಲಿ ಅವರುಗಳೆಲ್ಲರು ನಿಮ್ಮೊಂದಿಗೆ ಕೈ ಕುಲುಕುವರು
ವೈರಿಯ ಗೆಲ್ಲಲು ಶಕ್ತಿಯ ಜೊತೆಯಲಿ ಯುಕ್ತಿಯು ಕೂಡ ಇರಬೇಕು
ಭೀಮ-ಅರ್ಜುನರು ಮಾರುವೇಷದಲ್ಲಿ ನನ್ನಯ ಸಂಗಡ ಬರಬೇಕು”

ಕೃಷ್ಣನು ಭೀಮಾರ್ಜುನರೊಡಗೂಡಿ ನಡೆದನು ಮಗಧದ ಗಿರಿವ್ರಜಕೆ
ಬೆಟ್ಟಗುಡ್ಡಗಳ ಸೀಮೆಯು ಎನಿಸಿದ ದುರ್ಗಮ ಪ್ರಾಂತದ ಸನಿಹಕ್ಕೆ
ಬ್ರಾಹ್ಮಣ ವೇಷವ ಧರಿಸಿ ಮೂವರೂ, ಕದ್ದಿಂಗಳ ಆ ರಾತ್ರಿಯಲಿ
ಜರಾಸಂಧ ಸಂಹಾರವ ಮಾಡಲು ಕಂಕಣ ಧರಿಸುತ ಖಾತ್ರಿಯಲಿ

ಬೆಟ್ಟದ ತುದಿಯಲಿ ಇಟ್ಟಿದ್ದಂತಹ ಭಾರಿ ನಗಾರಿಯ ನೋಡಿದರು
ಅಲ್ಲಿದ್ದಂತಹ ಕಾವಲು ಭೇದಿಸಿ ನಗಾರಿ ಹರಿದೀಡಾಡಿದರು
ವೈರಿದೇಹಗಳ ಚರ್ಮವನು ಸುಲಿದು ಮಾಡಿದ್ದಂಥ ನಗಾರಿಯದು
ಎದೆಯನು ನಡುಗಿಸುವಂತಹ ಧ್ವನಿಯನ್ನು ಹೊರಡಿಸುವಂತಹ ಜೋರಿನದು!
ಎಪ್ಪತ್ತಾದರೂ ಮುಪ್ಪನು ಕಾಣದ ಜರಾಸಂಧ ಬಲವಿದ್ದವನು
ಮಗನಿಗೆ ರಾಜ್ಯದ ಒಡೆತನ ನೀಡದೆ ಅಧಿಕಾರದಿ ಉಳಿದಿದ್ದವನು
ಬೃಹದ್ರಥನು ತಂದೆಯು ಎನಿಸಿದ್ದರೆ ಜರೆಯೆಂಬುವ ರಕ್ಕಸಿ ತಾಯಿ
ಮಾನವ ರೂಪದ ರಕ್ಕಸನೆನಿಸಿದ ಭೈರವ ಪಂಥದ ಅನುಯಾಯಿ!
ಜರಾಸಂಧನನು ಎದುರಿಸಿ ನಿಲ್ಲುವ ವೀರರು ಹುಟ್ಟಿಯೇ ಇರಲಿಲ್
ಕ್ರೂರನಾದ ಅವನನ್ನು ಎದುರಿಸಲು ಯಾರಿಗೂ ಧೈರ್ಯವಿರಲಿಲ್ಲ!
ಆಸ್ತಿ-ಪ್ರಾಸ್ತಿ ಎಂಬಿಬ್ಬರು ಪುತ್ರಿಯರನ್ನು ಪಡೆದುಕೊಂಡಿದ್ದವನು
ಎರಡು ಕಣ್ಣುಗಳು ಇಬ್ಬರು ಮಕ್ಕಳು, ಸಹದೇವನು ಎನ್ನುವ ಸುತನು
ಕಂಸಾಸುರನಿಗೆ ಆಸ್ತಿ-ಪ್ರಾಪ್ತಿಯರನಿತ್ತು ಮದುವೆ ಮಾಡಿದ್ದವನು
ಕಂಸನ ಕೊಂದಿದ್ದಂತಹ ಕೃಷ್ಣನ ಕೊಲ್ಲಲು ಕಾತರಿಸಿದ್ದವನು!
ಆದರೆ ಕೃಷ್ಣನು ಮಥುರೆಯ ತೊರೆದು ಸಾಗರ ಮಧ್ಯಕೆ ತೆರಳಿದ್ದ
ದ್ವಾರಕೆ ಹೆಸರಿನ ದ್ವೀಪದೊಳುಳಿಯುತ ಸಮಯ ಬರಲಿ ಎಂದೆನುತಿದ್ದ
ಇಂದು ಕೃಷ್ಣನಿಗೆ ಕಾಲವೊದಗಿತ್ತು ಮಾರುವೇಷದಲ್ಲಿ ಬಂದಿದ್
ಜರಾಸಂಧನನು ಮುಗಿಸಲು, ಭೀಮಾರ್ಜುನರ ಜತೆಗೆ ಕರೆತಂದಿದ್ದ!

ಸಿಂಹವ ಬೇಟೆಯನಾಡಲು ಸಿಂಹದ ಗುಹೆಯೊಳಗೇ ಅಡಿಯಿರಿಸಿದರು
ಸಿಂಹವ ಕೆರಳಿಸಿ ಹಿಂಸಿಸಿ ನರಳಿಸಿ ನಂತರ ಕೊಲ್ಲಲು ಬಯಸಿದರು
ಹಸಿದ ಸಿಂಹವನ್ನು ಹಸಿದಿರುವಾಗಲೆ ಸದೆಬಡಿವುದೆ ಸರಿಯಾದದ್ದು
ಕುಸಿದ ಅದರ ವಿಶ್ವಾಸವು ಮರಳುವ ಮುನ್ನವೆ ಮುಗಿಸುವುದೊಳ್ಳೆಯದು

ಭೈರವ ಪೂಜೆಯ ಮಾಡಲು ತೊಡಗಿದ ಅಪರಾತ್ರಿಯ ಆ ಸಮಯದಲಿ
ವಟುಗಳ ವೇಷ ಧರಿಸಿದ್ದಂತಹ ಮೂವರೂ ಬರಲು ವಿನಯದಲಿ
ಯಾಚಕರಾಗಿಯೆ ಬಂದವರಂತಿಹ ಮೂವರು ಬ್ರಾಹ್ಮಣ ವಟುಗಳನು
ದರ್ಬಾಸನದಲಿ ಕೂರಿಸಿ ಕೇಳಿದ- “ಏನನು ನೀಡಲಿ? ಬೇಕೇನು?”

ಕೃಷ್ಣನು ಹೇಳಿದ- “ಮಲ್ಲಯುದ್ಧವನು ಬಯಸಿ ಬಂದಿಹೆವು ನಿನ್ನಲ್ಲಿ
ಗೆಲ್ಲಲಾಗುವುದೆ ನಮ್ಮನು ಎದುರಿಸಿ ಈಗಿಂದೀಗಲೆ ನೀನಿಲ್ಲಿ?”
ಜರಾಸಂಧ ಬಲು ಅಚ್ಚರಿಯಿಂದಲಿ ದಿಟ್ಟಿಸಿ ನೋಡಿದ ಅವರನ್ನು
ಸಿಂಹದ ಗುಹೆಯನ್ನು ಹೊಕ್ಕಿರುವಂತಹ ಹುಲ್ಲೆಗಳಂತಿಹ ವಿಪ್ರರನು
ಕೇಳಿದನವರನು- “ನಿಜವನು ನುಡಿಯಿರಿ, ಸಾವನು ಬಯಸಿದ ನೀವಾರು?
ಮಲ್ಲಯುದ್ಧದಲಿ ನನ್ನನು ಎದುರಿಸಿ ನಿಲ್ಲುವಂಥ ವೀರನು ಯಾರು?
ಬದುಕುವ ಆಸೆಯು ಇದ್ದರೆ ನೀವುಗಳೆಲ್ಲರೂ ಈಗ ಶರಣಾಗಿ
ಇಲ್ಲದೆಹೋದರೆ ಶಕ್ತಿದೇವತೆಗೆ ಬಲಿಯನು ಕೊಡುವೆನು, ಅಣಿಯಾಗಿ”
ಕೃಷ್ಣನು ಹೇಳಿದ “ಕಂಸನ ಕೊಂದವ ದೇವಕಿನಂದನ ನಾನೇನೆ
ಪಾಂಡವ ವೀರರು ಕುಂತಿಯ ಪುತ್ರರು ಭೀಮ, ಅರ್ಜುನರು ಇವರೇನೆ
ಯಾರೊಡನಾದರೂ ನೀ ಹೋರಾಡಿಕೊ ನಮ್ಮಲ್ಲೊಬ್ಬನ ಆರಿಸಿಕೋ
ಗೆಲ್ಲುವ ಸಾಹಸ ನಿನ್ನೊಳಗಿದ್ದರೆ ಮಲ್ಲಯುದ್ಧದಲ್ಲಿ ತೋರಿಸಿಕೋ”
ಜರಾಸಂಧನೋ ಗಹಗಹಿಸುತ್ತಲಿ ನಕ್ಕನು ಅವರೆದುರಿಗೆ ಬಂದು
ನಂತರ ಭೀಕರ ರೋಷಾವೇಷದಿ ಹೇಳಿದ ಅವನಿಗೆ ಇಂತೆಂದು-
“ದೇವಕಿನಂದನ, ನೀನೋ ಹೇಡಿಯು ಮಥುರೆಯ ತೊರೆದು ಓಡಿದವ
ನನ್ನನು ಎದುರಿಸಲಾಗದೆ ಜಲಧಿಯ ನಡುವಲಿ ಮನೆಯನ್ನು ಮಾಡಿದವ
ಕಳ್ಳನಂತೆ ಹಿಂಬಾಗಿಲಿನಿಂದಲಿ ವೇಷವ ಬದಲಿಸಿ ಬಂದಿರುವೆ
ಸಾಯಲು ಬಂದವ ಇನ್ನಿಬ್ಬರನೂ ಜೊತೆಯಲಿ ನೀ ಕರೆತಂದಿರುವೆ
ನನ್ನನು ಗೆಲ್ಲುವ ಸಾಹಸವೆಲ್ಲಿದೆ? ನಿಲ್ಲಿಸು ಮಾತಿನ ಮೇಲಾಟ
ಕ್ಷತ್ರಿಯ ಗುಣಗಳು ಇಲ್ಲದ ನಿನ್ನಯ ಸಂಗಡ ಎಂತಹ ಹೋರಾಟ?
ನಿನ್ನಂತಹ ನರಿಬುದ್ಧಿಯ ಹೇಡಿಯ ಕೊಲ್ಲಲು ನನಗೂ ಮನಸಿಲ್
ಜರಾಸಂಧನನು ಜಯಿಸುವ ವೀರನು ಭೂಮಂಡಲದಲಿ ಜನಿಸಿಲ್ಲ!
ಅರ್ಜುನನಾದರೂ ಹೆಣ್ಣಿನ ಲಂಪಟ ಅವನಲಿ ವೀರ್ಯವು ಇದೆಯೇನು
ಬಿಲ್ಲಿನ ವಿದ್ಯೆಯ ತಿಳಿದಿರಬಹುದವ ಮಲ್ಲಯುದ್ಧ ಪಟ್ಟಿದೆಯೇನು?
ಮಲ್ಲಯುದ್ಧದಲಿ ಸರಿಸಮನೊಂದಿಗೆ ಗೆಲ್ಲುವುದಲ್ಲವೆ ವೀರತನ
ಹಿಡಿಂಬ ಬಕರನು ಕೊಂದಿರುವಂತಹ ಭೀಮನ ಸಂಗಡ ಸರಿ ಕದನ”
ಎನ್ನುತ ತೊಡೆಯನು ತಟ್ಟುತ ಇಳಿದನು ಭೀಮನೊಡನೆ ಹೋರಾಟಕ್ಕೆ
ಭೀಮನು ತಾನೂ ಹೂಂಕರಿಸುತ್ತಲಿ ನಿಂತನೊಡನೆ ಕಾದಾಟಕ್ಕೆ!

ಮದಿಸಿದ ಮದಗಜವೆರಡರ ಕಾಳಗ ಮಗಧದ ಗರಡಿ ಅಖಾಡದಲಿ
ಗುಡುಗು ಸಿಡಿಲುಗಳ ಆರ್ಭಟವಾಯಿತು ಕದ್ದಿಂಗಳ ಕಾರ್ಮೋಡದಲಿ
ಒಬ್ಬರನೊಬ್ಬರು ಮೀರಿಸುವಂತಹ ಮಹಾಮಲ್ಲ ಜಗಜಟ್ಟಿಗಳು
ಮಲ್ಲಯುದ್ಧದಲಿ ಸಲ್ಲುವ ಎಲ್ಲಾ ವಿಧಗಳಲ್ಲಿ ಬಿಗಿಪಟ್ಟುಗಳು
ಇಬ್ಬರ ದೇಹದಿ ಹರಿದಿಹ ಬೆವರಿಗೆ ಮಣ್ಣೆಲ್ಲವು ಕೆಸರಾಗಿತ್ತು
ಬಿಸಿಯುಸಿರಿನ ಬಿರುಗಾಳಿಗೆ ಅಲ್ಲಿನ ಹವೆಯೆಲ್ಲವು ಬಿಸಿಯಾಗಿತ್ತು
ಜಾವವಾದರೂ ಮುಗಿಯದ ಸೆಣಸನು ನೋಡಿದ ಕೃಷ್ಣನು ಬೆರಗಾಗಿ
ಬೇಗನೆ ಮುಗಿಸಲು ಸಂಜ್ಞೆಯ ಮಾಡಿದ ಭೀಮನ ಗೆಲುವಿನ ಸಲುವಾಗಿ
ಕೂಡಲೆ ಭೀಮನು ವೈರಿಯ ಕೆಡವುತ ಗುದ್ದಿದ ರಭಸದಿ ಅವನೆದೆಗೆ
ನೆತ್ತರು ಕಾರುತ ತತ್ತರಿಸುತ್ತಿರೆ ಸೆಳೆಯುತ ಅವನನು ಬಲಬದಿಗೆ
ತುಳಿಯುತ ಕಾಲುಗಳೆರಡನ್ನು ಅಗಲಿಸಿ ಎಳೆದನು ಒಂದನು ಬಲವಾಗಿ
ದುರಹಂಕಾರದ ಜರಾಸಂಧನನು, ಸೀಳಿ ಬಿಸಾಡಿದ ಎರಡಾಗಿ!!

ಬೇಟೆಗಾರ ಬಲು ಚಾಣಾಕ್ಷತೆಯಲಿ ಸಿಂಹಕೆ ಬಲೆಯನ್ನು ಬೀಸಿದ್ದ
ಕೆಣಕುತ ಕಾಡುತ ಸಿಂಹದ ಬೇಟೆಗೆ ಅದರ ಗುಹೆಯನ್ನೆ ಬಳಸಿದ್ದ
ಕೆರಳಿದ ಸಿಂಹವು ಬಾಲವ ಮುದುಡುತ ಬಲೆಯಲಿ ಬಿದ್ದಿತು ದಿಕ್ಕೆಟ್ಟು
ಮರಳಿ ಬಿಡುಗಡೆಗೆ ಯತ್ನವ ಮಾಡುತ ಬಲಿಯಾಗಿದ್ದಿತು ತಲೆಕೆಟ್ಟು

ಕ್ಷುದ್ರದೇವತೆಗೆ ಬಲಿಯನ್ನು ನೀಡಲು ಬಂಧಿಸಿದಂತಹ ರಾಜರಿಗೆ
ಬಿಡುಗಡೆಯಾಗಲು, ಘೋಷವಗೈದರು ಚತುರನಾದ ಶ್ರೀಕೃಷ್ಣನಿಗೆ
ಜರಾಸಂಧ ಸುತ ಸಹದೇವನಲ್ಲಿ ಕೃಷ್ಣನು ಕರುಣೆಯ ತೋರಿಸಿದ
ಪುಕ್ಕಲು ಮನಸಿನ ಅವನನ್ನು ಕರೆಯಿಸಿ ಸಿಂಹಾಸನದಲಿ ಕೂರಿಸಿದ
ಬಂದ ಕಾರ್ಯ ನೆರವೇರಿತು ಎನ್ನುತ ಇಂದ್ರಪ್ರಸ್ಥಕೆ ಮರಳಿದನು
ಜರಾಸಂಧನನು ಕೊಂದ ಭೀಮನನು ತುಂಬುಮನಸಿನಲಿ ಹೊಗಳಿದನು
ರಾಜಸೂಯಕ್ಕೆ ಇದ್ದ ಅಡ್ಡಿಯನು ತೊಲಗಿಸಿಬಿಟ್ಟನು ತಂತ್ರದಲಿ
ಯಾಗಕೆ ಸಿದ್ಧತೆ ಮಾಡಲು ಹೇಳಿದ ಸುಂದರ ಇಂದ್ರಪ್ರಸ್ಥದಲಿ!
‘ಜರಾಸಂಧ ಬಲಿಯಾದನು ಮೋಸದ ಕೃತ್ರಿಮವಾದ ಕುತಂತ್ರಕ್ಕೆ’
ಎನ್ನುತ ಚೇದಿಯ ಅರಸ ಶಿಶುಪಾಲ ಕೆರಳಿದ ಕೃಷ್ಣನ ತಂತ್ರಕ್ಕೆ

`ಕೃಷ್ಣನ ಕಂಡರೆ ಉರಿದುಬೀಳುವನು ರಕ್ಕಸ ಗುಣಗಳ ಶಿಶುಪಾಲ
ಮುಂದಿನಿಂದ ಅವನನ್ನು ಎದುರಿಸದೆ ಆಡಿಕೊಳ್ಳುವನು ಧರೆಯೆಲ್ಲ
ಅಲ್ಲದೆ ಬಯಸಿದ ರುಕ್ಮಿಣಿಯನ್ನೂ ದಕ್ಕದೆ ಮಾಡಿದ್ದನು ಕೃಷ್ಣ
ಅವಳನಪಹರಿಸಿ ಮದುವೆಯಾಗಿದ್ದ ಯದುಕುಲನಂದನ ಶ್ರೀಕೃಷ್ಣ
ಕೃಷ್ಣನ ಎದುರಿಸಿ ನಿಲ್ಲುವ ಧೈರ್ಯವು ಶಿಶುಪಾಲನಿಗೂ ಇರಲಿಲ್
ಅವನನು ಎದುರಿಸುವಂಥ ಪ್ರಮೇಯವು ಅವನಿಗೆ ಎಂದೂ ಸಿಗಲಿಲ್ಲ
ಸಮಯವು ಬರಲೆಂದೆನ್ನುತ ಕಾಯುತಲಿದ್ದನು ಸಮಯವು ಬರಲಿಲ್ಲ
ಬಂದರೂ ಅವನ ಗೆಲ್ಲುವ ಶಕ್ತಿಯು ಇರುವುದೆ? ಅದು ಗೊತ್ತಿರಲಿಲ್ಲ!

ಜರಾಸಂಧ ಸಂಹಾರದ ನಂತರ ಪಾಂಡವರಿಗೆ ಎದುರಿರಲಿಲ್ಲ
ಅವರನು ಗೆಲ್ಲಲು ಸಾಧ್ಯವಾಗುವುದೆ? ಮಾತಾಯಿತು ಜಗದೊಳಗೆಲ್ಲ
ಕೆಲವೇ ದಿನದಲ್ಲಿ ದಿಗ್ವಿಜಯದ ನಡೆ ಯುದ್ಧದ ಸಿದ್ಧತೆ ನಡೆದಿತ್ತು
ನಾಲ್ವರು ವೀರರ ನಾಯಕತ್ವದಲ್ಲಿ ಚತುರಂಗವು ಮುನ್ನಡೆದಿತ್ತು
ಮೂಡಣ ದಿಕ್ಕಿಗೆ ಭೀಮನು ಹೊರಟನು ಸಹದೇವನು ಪಡುವಣದೆಡೆಗೆ
ನಕುಲನು ಹೊರಟನು ತೆಂಕಣ ದಿಕ್ಕಿಗೆ ಅರ್ಜುನ ಬಡಗಣ ದಿಸೆಯೆಡೆಗೆ!
ಜರಾಸಂಧನನು ಜಯಿಸಿದ ವೀರರು ಎನ್ನುತ ರಾಜರು ಹೆದರಿದರು
ಕಾಳಗ ಮಾಡುವ ಗೋಜಿಗೆ ಹೋಗದೆ ಶರಣಾಗತಿ ಅನುಸರಿಸಿದರು
ನಾಡಿನ ನಾಲ್ಕೂ ದಿಕ್ಕುಗಳಲ್ಲೂ ಬಿದ್ದಿತು ಕೊರಳಿಗೆ ಜಯಮಾಲೆ
ಕಪ್ಪಕಾಣಿಕೆಯ ಮೂಟೆಮೂಟೆಗಳು ಆನೆ, ಕುದುರೆ, ಒಂಟೆಯ ಮೇಲೆ
ಕೋಶಾಗಾರಕೆ ಹರಿಯುತ ಬಂದಿತು ರಾಶಿರಾಶಿ ರತ್ನಾಭರಣ
ರಾಜಸೂಯಯಾಗದ ವಿಧಿ ನಡೆಸಲು ನಿಗಧಿತವಾಯಿತು ಶುಭದ ದಿನ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಮರ
Next post ವಚನ ವಿಚಾರ – ಸಂಧಿಸುವುದು ಇಲ್ಲ

ಸಣ್ಣ ಕತೆ

  • ಬಲಿ

    ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…

  • ಪ್ರಥಮ ದರ್ಶನದ ಪ್ರೇಮ

    ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…

  • ಕಲ್ಪನಾ

    ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…

  • ಬಾಗಿಲು ತೆರೆದಿತ್ತು

    ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…

cheap jordans|wholesale air max|wholesale jordans|wholesale jewelry|wholesale jerseys