ಸರ್ಗಾ…

ಸರ್ಗಾ…

ಚಿತ್ರ: ಲೊಗ್ಗ ವಿಗ್ಲರ್‍
ಚಿತ್ರ: ಲೊಗ್ಗ ವಿಗ್ಲರ್‍

ಕೋಳಿ ಕೂಗದ ಮುನ್ನ, ನಾಯಿ ಬೊಗಳದ ಮುನ್ನ…. ರವಿ ಕಣ್ಣು ಬಿಡದ ಮುನ್ನ… ಇಡೀ ಊರು ಕೇರಿಯೆದ್ದೆದ್ದು ಕುಳಿತಿತು. ಅಂಗ್ಳ ಗುಡ್ಸಿ…. ಸಗಣೀರಾಕಿ, ರಂಗು ರಂಗ್ನಿನ ಸಪ್ತವರ್ಣಗಳಲ್ಲಿ ರಂಗವಲ್ಲಿಯಿಕ್ಕಿ, ತಂಗ್ಡಿ, ಗುರ್ಯಾಳು, ಚಂಡು, ಲಕ್ಲಿ, ಯಕ್ಕೆ, ಸುಂಕೇಸ್ರಿ…..ಹೂವುಗಳ ಮುಡ್ಸಿ… ಅಂದ, ಚಂದ, ವಪ್ಪ, ವಾರ್ಣಗೊಳ್ಸಿ, ಕುಸ್ಪಿಟ್ರು… ಬ್ರಾಹ್ಮಿ ಮೂರ್ತದಲಿ ಎಲ್ರು ಮಡಿ, ಮೈಲಿಗೆ, ಕಳೆದುಕೊಂಡರು.

ವ್ರತ… ವ್ರತ… ಮುದುಕ್ರು… ಮುಷ್ಟುರು… ಮಕ್ಕಳಾದಿಯಾಗಿ ಉಪಾಸ! ಪೂಜಿ ಮುಗಿದು, ಎಡೆ ಏರುವತನ್ಕ, ಯಾರೊಬ್ರು… ತೊಟ್ಟು ನೀರು ಗಂಟಲೊಳ್ಗೆ ಇಳ್ಸಿವಂತಿಲ್ಲ. ಎಲ್ಲವೂ ಕಟ್ಟು ನಿಟ್ಟು ನೇಮ, ನಿಮಯ, ಇದು ದೊಡ್ಡ ಧಣಿಗಳ ಹುಕುಮೆಂದ್ರೆ…. ಕೋರ್ಟಿಗೂ ಮಿಗಿಲು! ಕೋಟಿಗೂ ಜಾಸ್ತಿ. ಒಂದ್ಸಲ ಹೇಳ್ದ್ರೆ ನೂರ್ಸುಲ ಹೇಳದಂತೆ!! ನೂರಾರು ವರ್ಷಗಳಿಂದ, ಹರ್ಷದಿಂದ ಪರಂಪರೆಯಿಂದ ಬಂದ ಆಚರಣೆಗೆ, ಹಗಲುರಾತ್ರಿ ಜಾಗರಣೆಯಾಯಿತು.

ಇಡೀ ಊರು ಕೇರಿಗೇ ಢಣಾಢಣಾ…..ಢಂಗೂರ ಸಾರ್ಸಿ, ಪಂಚಾಯ್ತಿ ಕಲ್ಸಿ….”ಬರೋ ಯೀ ಯಳ್ಳು ಅಮಾಸ್ಸಿಗೆ, ಯೇಳುವೂಲು ಮ್ಯಾರಿ ಸರ್ಗಾ ಸೆಲ್ಲಿ ’ಪಟ್ಟಾ’ ಕಳೀತಾ ಬಂತು! ಅವತ್ತೇ ವೂರಬ್ಬಾ…. ವಲ್ದು ಮ್ಯಾರಿಗುಂಟು ಸರ್ಗಾ ಸಲ್ಬೇಕು. ವೂರು ಕೇರಿಯೆಲ್ಲಾ…..ವಾರ್ಣಾ ವಪ್ಪಾಗಿ ತಳಿರುತೋರ್ಣದ ಸಪ್ರಾಗಿ. ಬಾಳೆಕಂಬಾ, ತೆಂಗಿನ ಗರಿಗಳ್ನ ಕಟ್ಟಿ, ಖಾನ್ಗೆ ಸಪ್ಪು, ಮಾನಿನೆಸಪ್ಪು ಹಂದರ ಆಕೀ, ನಾಲ್ಕು ಮೂಲ್ಗೆ, ಎಂಟು ದಿಕ್ಕಿಗೆ ಅಷ್ಟದಿಗ್ಬಂಧನವಾಗ್ಬೇಕು. ಯೀ ಕಾರೇವು ಮುಗೀತನ್ಕ ವೂರು ಕೇರಿಯೊಳ್ಕೆ ವೊಸಬ್ರು ಯಾರೂ ಬರ್ಬಾದು! ಅಳುಬ್ರು ಯಾರೂ….ವಲು ಮ್ಯಾರೀ ದಾಟ್ಬಾದು….” ಎಂದು. ದೊಡ್ ಧಣಿಗಳು ಕಟ್ಟಪ್ಪಣೆ ವಿಧಿಸಿದಂತೆ, ಜನ್ರು ವಾರ್ದಿಂದಾ…..ಕಣ್ಣಿಗೆ ಎಣ್ಣೆಬಿಟ್ಕೊಂಡು, ಪುರ್ಸೊತ್ತಿಲ್ದಂಗೇ…..ಹಗ್ಲು ರಾತ್ರಿ ’ಏಕ್ಸಾಟಿ’ಯಾದ್ರು.

ದಿನುಗ್ಳು ಆಕ್ಳಿಸಿಬಿಟ್ಟವು. ಎಳ್ಳು ಅಮಾಸೇ ದಿನ, ಬಂದೇ ಬಿಡ್ತು. ಇದ್ನ ಜನ್ರೆಲ್ಲ ’ಸರಿ…..ಕರಿ’ ಅಮಾಸೆ ….’ಸರ್ಗಾದಾಮಾಸೆ…’ ಅಂತಾ ಕರೀತಾರೆ! ಅವತ್ತು ಜನ್ರ ಮುಗುಳಿ ಮೇಲೆ ಬಟ್ಟೆ ನಿಲ್ದುಂಗಾತು.  ಈ ಊರಬ್ಬಕ್ಕೆ ಕೇರಿನೇ ಬೀಜವೃಕ್ಷಾ! ಈ ಆಚರಣೆನೇ ತಾಯಿ! ಇವ್ರಾ ನೀತಿ ನಿಯತ್ತೇ ಕಾಯಿ, ಭೂತಾಯಿನೇ ಯೀಭೂತಿ! ಬೆವ್ರೇ ಸಹಾನೂಭೂತಿ, ತಾಳ್ಮೆನೇ ಆರ್ತಿ, ಕರ್ಪೂರ!

ಹೊತ್ತೇರಿದೆಂತೆಲ್ಲ….ಏಳು ಹಲಗೆಗಳೂ… ಬೋರಾಡಿ… ಬೋರಾಡಿ…’ಗೋಮಾಳೆ’ ಸೇರಿದುವು. ಕೊಂಬು ಕಹಳೆಗಳೂ… ಮುಗಿಲು ಮುಟ್ಟಿದವು. ಹುರುಮೆಗಳೂ ಎದೆಬಡಿತ ಹೆಚ್ಚಿಸಿದುವು. ಶಂಕೂ…ಜಾಗಟೆಗಳಾ ಸದ್ದು……. ಕಿವಿಗಿಂಪು ತಂದವು. ಸಿಡಿಮದ್ದುಗಳೂ ಜಾಗೃತಿ ಮೂಡ್ಸಿದ್ವು… ಚೌಡಿಕೆಯ ಮೇಳ ದೇವಲೋಕ ನಾಚಿಸಿದವು. ಹಳಿಹಳ್ಳಿನೇ ದಿಲ್ಲಿ ದರ್ಬಾರಾಯಿತು! ಕಣ್ಣು ಕುಕ್ಕುವ ದೀಪ್ಗಳ ಮಾಲೇ, ಚಿನ್ಕುರ್ಳಿಗಳ ಸಾಲೇ…..ಬಣ್ಣ ಬಣ್ಣದ ಪರೆಪರ್ಗೆಳ ಚಿತ್ತಾರ ಲೋಕ ಮುಗಿಲ್ತುಂಬಿಕೊಂಡಿತು….

“ಗಲ್ಲೆ ಯೊಳಗೆ ಯಲ್ಲಮ್ಮನಿರುವಳು….ತಂದು ನಾನೇ ತಂದುನ್ನ ನಾನೇ…..ಮೂಲೋಕ ಬೆಳಗಿದವಳು ಕೇರಿಯೊಳಗೆ ಕುಂತುವಳೇ…..ತಂದುನಾನೇ….ಯಳ್ಳು ಬೆಲ್ಲವ ಯಡಿಮಾಡಿ…. ಯಲ್ಲಮ್ಮನಿಗೆ ಉಧೋ….ಉಧೋ ಯೆನ್ನಿ…” ಎಂದು, ಪದಗಳ್ಮೇಲೆ ಪದಗಳೂ ಕಿವಿಗಳ ತುಂಬಿ…..ತುಂಬಿದವು. ತಂಗ್ಡಿ ಚಕ್ಕೆಯ ಗಲ್ಲೆ ಯಿಂದ ತೆಂಗಿನ ಚಿಪ್ಪಿ ನಿಂದ, ಸುರೆ ನೀರು ತಗೊಂಡು, ಮಾಯಕಾರ್ತಿ ತಾಯಿ ಯಲ್ಲಮ್ಮನ ವಂಡ್ಸಿಗೊಂಡು….ಗೊಂಡುಗೊಡ್ಲಿ…..ಕೊಡ್ಲಿ, ಕುಡುಗೋಲು, ಕತ್ತಿ, ಗುರಾಣೆ , ಗುದ್ದುಬಾಕು, ಚಾಕು, ಚೂರಿ, ಈಟಿ, ಹಾರೆ, ಭರ್ಜಿಗಿ, ಸಲಕೆ, ಹೊಸ ತೀಡ್ಗಾಣಿ ಪುಟ್ಟಿ-ತಟ್ಟೆ-ಜಲ್ಲೆ, ಕೋಣ್ಗೆ ಸ್ವಟ್ಗಾ ಮುತ್ಲಿ – ಮೊರಾ…ಈ ಚ್ಲುಪರ್ಕೆ, ಐದಾರು ಹುಂಜ, ಹ್ಯಾಟೆ ಮರಿಗ್ಳು ಹಿಡಿದೂ ಕೊಂಕ್ಳಲ್ಲಿ ಸಿಗ್ಸಿಗೊಂಡು….ಅಬ್ಬಾಬ್ಬಾ! ಒಳ್ಳೆ ’ಹೆಡ್ಗೆ’ ಯಾತ್ರೆಯಂಗೆ, ಒಂಭತ್ತು ಕಂಬಾ…ಕುಂಭಾ…ಕಳ್ಸಾ…ಒಂಭತ್ತು ಜನ ಮುತ್ತೈದೆಯರೂ ತಲ್ಮೇಲೆ ಮಲ್ಲಿಗೆ ದಂಡೆ ಸೊಸ್ಲಾಗ್ಳ… ಹಾಕಿಕೊಂಡು, ಕೇರಿ ಮಣೆಗಾರ ಕೃಷ್ಣಪ್ಪನನ್ನು ಒಳ್ಳೆ ಮಧುಮಗ್ನಂಗೆ ಸಿಂಗರ್ಸಿಗೊಂಡು’ಸರ್ಗಾ’ ಉಗ್ಗೋ ಹೊಸ ’ಐರಾಣ್ಗೆ’ ಹೊರ್ಸಿಗೊಂಡು…’ಸರ್ಗಾವುಗ್ಗಾನೆ ಬಾರೆ! ನಿರ್ಗಿವಯ್ಯಾನೆ ಬಾರೆ! ಮುತ್ತೈದೆಯ್ರ ಮುತ್ತನು ಚೆಲ್ಹಾಡಾನು ಬಾರೆ! ಯೇಳುವಲ್ಮೇರಿ ವುಲ್ಸು ತಂದು! ಯೀ ವೂರುಕೇರೀನಾ ಬೆಳ್ಗಾನೆ ಬಾರೆ!…..’ ಯೆಂದು…ಹಾಡುತ್ತಾ….ಕುಣಿಯುತ್ತಾ… ಗಂಡು, ಹೆಣ್ಣು, ಮಕ್ಳು ಮರಿಯಂಬಾ….ಭೇದ ಭಾವ ಮರೆತು, ಹೆಜ್ಜೆ ಮೇಲೆ, ಹೆಜ್ಜೆಯೂರುತ್ತಾ…ಕೋಲ್ಹಾಟವಾಕುತ್ತಾ…. ಊರು ಅಗ್ಸಿ ದಾಟಿ, ಹೊರಟ ಗತ್ತು ….ಗಮ್ಮತ್ತು ….ದವಲತ್ತಿಗೇ….ಮೂಲೋಕಗಳೂ ಕಣ್ಣುಕಾಲು ಬಿಡತೊಡಗಿದ್ದವು.
*                 *           *
ಇತ್ತಃ ಊರ್ಳೊಗೆ… ಮಾದಿಗ್ರ್ನ ಎದ್ರು ನೋಡ್ತಾ…. ಬುಡ್ಡೆಕಲ್ಲು ಬಳಿ, ಸುತ್ತಾ ಮುತ್ತಾ….ಯಜ್ಞ ಯಾಗಾದಿಗಳ ತುತ್ತೂರಿ ಭಾರೀ….ಭಾರೀ….ಭರದಿಂದ ಸಾಗಿತ್ತು! ಊರು ಪ್ರಮುಖ್ರು…..ಸರಪಂಚ್ರು….ದೊಡ್ಡ ವಾಡೇವುದ ಧಣಿಗಳೂ….ಹರಿವಿರ್ಲಿ ಪೂಜಾ ಕಾರ್ಯಗಳಲ್ಲಿ, ಬೆಳಗಿನ ಜಾವದಿಂದ್ಲೆ….ತೊಡಗಿದ್ದ್ರು . ಅವ್ರ….ಸುತ್ತಾ..ಮುತ್ತಾ… ರಾಶಿರಾಶಿ ಹೂವುಗಳೂ, ಉಳ್ಳಾಗಡ್ಡೆ, ಬೂದುಗುಂಬಳಕಾಯಿಗಳೂ, ಬದನೆಕಾಯಿಗಳೂ, ಹಸಿ ಮೆಣಸಿನಕಾಯಿಗಳೂ, ತೆಂಗಿನಕಾಯಿಗಳೂ, ಅಂತ್ರಗಾಯಿಗಳೂ, ನಿಂಬೆಹಣ್ಣುಗಳೂ, ವುಳ್ಳಿ, ಗೆಣ್ಸು, ಟೆಂಕಾಯಿ, ಎಳ್ಳು….ತ್ವಗುರಿ ಹೋಳಿಗೆಗಳೂ, ಕರಿಗಡಬು-ಕರ್ಜಿಕಾಯಿ, ಗಾರ್ಗೆಗಳೂ, ಮಾದ್ಲಿ….ಸಜ್ಜೆಯ, ಜೋಳದ, ರಾಗಿಯ, ಗೋಧಿಯ, ಅಕ್ಕಿಯ…ರೊಟ್ಟಿಗಳೂ….ಸಲಿಕೆರುದ್ರ, ನವಣೆ, ನೆಲ್ಲು, ಆರ್ಕಾ, ಜೋಳದ ಬಾನಗಳೂ….ಕಡ್ಲೆ, ಹೆಸ್ರು, ಅಲಸಂದೆ, ತೊಗ್ರಿ, ಮಡಿಕೆಸ್ರು, ಅವ್ರೆ, ಜೋಳ, ನೆಲಗಡ್ಲೆ, ಉದ್ದು…ಹೀಗೇ…..ಒಂಭತ್ತು ತೆರನಾದ ಅಕ್ಡಿಕಾಳುಗಳೂ ಸೇರ್ಸಿ ಗುಗ್ಗುರಿಗಳೂ….ಬೆಲ್ಲ, ಸಕ್ರೆ, ತುಪ್ಪ, ಜೇನುತುಪ್ಪ, ಬೆಣ್ಣೆ, ಗಿಣ್ಣು, ಸಾರು, ಹಾಲು, ಮಸ್ರು, ಮಜ್ಗೆ, ಕೊಸಂಬ್ರಿ….ಕಲ್ಸಾನ್ನ….ಪಾನ್ಕ, ಪಲ್ಲೆಗಳು, ಗುರಾಳುಪುಡಿ…ಚಟ್ನಿ, ವುಣ್ಸೆಕಾಯಿ ತೊಕ್ಕು, ಹಿಂಡಿ…. ಹಣ್ಣು ಹಂಪುಲುಗಳೂ….ಅಬ್ಬಬ್ಬಾ!! ’ದಿರ್ಬೆವು ’ ಅಲ್ಲಿ ಸುರಿದಿತ್ತು! ಹಾಲೀನ ಮಳೆ, ಜೇನಿನಾ ಹೊಳೆ….ಹರಿದಿತ್ತು. ಸಾಲ್ಸಾಲು ಹೊಸಾ ಬಿದ್ರ್ನು ಜಲ್ಲೆ….ಪುಟ್ಟಿ, ತಟ್ಟೆಯಲ್ಲಿ ಕಲ್ಸಿ…..ಕಲ್ಸಿ….ಗೋಪುರ್ದಲೀ….ಪೇರ್ಸಿ….ಪೇರ್ಸಿ….ಒಂಭತ್ತು ಎಡೆಗಳಾಕಿ, ಐದು ಗುಂಡು ಕಲ್ಲುಗಳನ್ನು ’ಪಂಚಪಾಂಡವ’ರೆಂದೂ….’ಕಳ್ಳ’ರೆಂದೂ ಕೂಗಿ….ಕೂಗಿ….ಕರೆದೂ, ಇವೆಲ್ಲವುಗಳನ್ನೂ ಪೂಜಿಸತೊಡಗಿದ್ದಲ್ಲಿಗೇ……ಕೇರಿ ಮಣೆಗಾರರೂ ಅವರ ದಂಡು, ದಳಾ…..ಬೆಂಗಾವಲಿನವರೂ…ಅಟ್ಟಹಾಸದಿಂದ, ಭಕ್ತಿ ಭಾವದಿಂದ, ತಂದಿದ್ದನ್ನೆಲ್ಲ ಬುಡ್ಡೇಕಲ್ಲು ಬಳಿಯಿಟ್ಟು, ಗುಂಡು ಕಲ್ಲಿನಂತೇ …..ಕುಳಿತರು. ಅಕ್ಯಾಕೆ ಕರೀ ಎಳ್ಳು ಕಲ್ಸಿತಂತಾಯ್ತು!

ವಾಡೇವುದ ದೊಡ್ಡ ಧಣಿಗಳೆದ್ದು ನಿಂತರು…..’ಈಗ ಕೇರಿ ನಮ್ಮೀ….ಮಣೆಗಾರನಾದ, ಈ ಸಲದ ’ಸರ್ಗಾ’ ಸೆಲ್ಲೋನಾದ ಕೃಷ್ಣ, ಮೊದ್ಲ ಪೂಜೆ ಸಲ್ಲಿಸಲು, ಈ ಊರು ಕೇರಿಗರ ಅಪ್ಪಣೆಯಾಗಿದೆ….’ ಎಂದು ಹೇಳಿ ಕುಳಿತರು.

ಕೃಷ್ಣಪ್ಪ ತಂದಿದ್ದ, ಕರೆಬಾನೆ ನೀರನ್ನು, ತೀರ್ಥ ದೋಪಾದಿಯಲ್ಲಿ ನೆಲಕ್ಕೆ, ಆಕಾಶಕ್ಕೆ, ಎಡೆಗಳ್ಮೇಲೆ, ಕುಂತ, ನಿಂತ, ಜನ್ರ ಮೇಲೆ ಚಿಮಿಕ್ಸಿ….ಊದುಗಡ್ಡಿ ಹಚ್ಚಿ, ಎಡೆ ಸುತ್ತ ಮೂರ್ಸುತ್ತು….ತಿರುಗಿ, ಕಣ್ಮುಚ್ಚಿ….ಬಾಯಿಂದ….ಅದೇನೋ ….ಪಿಟಿ…ಪಿಟಿ…ಮಾಡಿ, ತೆಂಗಿನಕಾಯಿ ಒಡೆದು, ನಿಂಬೆಹಣ್ಣು ಕೊಯ್ಯಿದು, ಅಂತ್ಲಾಗೊಂದು ಇಂತ್ಲಾಗೊಂದು ಹೋಳು ಮಾಡಿ ಎಸೆದು, ಸಣ್ಣದೊಂದು ಹ್ಯಾಟ್ ಮರಿಯನ್ನು ಹಾರಿಬಿಟ್ಟ. ಕೈಮುಗಿದು, ಯಥಾ ಸ್ಥಳದಲ್ಲಿ ಕುಂತುಗೊಂಡ. ಮಣೆಗಾರರ ನಂತರ…..ಎರಡನೆಯ ಪೂಜೆಯಾಗಿ ಊರು ಮೇಟಿ ಗೌಡ್ರು ಮನೆಯಿಂದ, ಗೌಡ, ಬಿಟಿಯಸ್ ಕುಲಕರ್ಣಿ, ಶಾನುಭೋಗರಿಂದ, ಸರಪಂಚ್ರು ಕಡೆಯಿಂದ ಪೂಜೆಗಳು ಭರದಿಂದ ಜರುಗಿದವು.

*          *           *
ಜನ ಗಿಜಿಗಿಜಿಗುಟ್ಟಿತು. ಕೇರಿಯ ಮಣೆಗಾರ ಕೃಷ್ಣಪ್ಪನಿಗೆ ಜನಿವಾರ ಹಾಕಿ, ಕಂಕಣ ಕಟ್ಟಿ, ವೀರ ತಿಲಕವನ್ನು ದೊಡ್ಡ ಧಣಿಗಳಿಟ್ಟು… ಊರು, ಕೇರಿಯ ಮೊತ್ತವಾಗಿ ಹೊಸಪಂಚೆ, ಶಲ್ಯೆವು, ಒಂಭತ್ತು ಎಲೆ, ಅಡಿಕೆ, ತೊಂಭತ್ತು ರೂಪಾಯಿಗಳು, ಬೆಳ್ಳಾಗಡ್ಡೆ ಎಸಳು, ಮೆಣ್ಸುಕಾಳು ಸೇರ್ಸಿ ’ಈಳ್ಯಾ’ವೆಂದು ಕೊಡ ಮಾಡಿ… ’ಮಾಜನ್ರೇ… ವೂರುಕೇರಿ ಬಂಧುಗಳೇ, ಯೀವತ್ತು… ಯೇಳು ವಲ್ದಾ ಮೇರ್ಗೆ ’ಸರ್ಗಾ’ ಸಲ್ಲುವ ದಿನ.  ಯೀ ನೆಲ್ದೆ ದೊಡೆಯರಾದ… ಕೇರಿ ಮಣೆಗಾರ ಕೃಷ್ಣಪ್ಪ, ಮಟಮಟ ಮಧ್ಯಾನ್ದಾ ಬ್ರಾಂಬ್ರು ಆದ! ಯೀಗಾಗ್ಲೆ ತನ್ನ ದಂಡು, ದಳದ ಸಮೇತನಾಗಿ ಬಂದಿದ್ದಾನೆ! ಯಿವ್ರು ನಮ್ ರಾಮಾಣ್ದಾಗೆ ಶ್ರೀರಾಮ ವನುವಾಸಕ್ಕೆ ವೋಗುವಾಗ ಶಲ್ಯೆಗಂಟ್ಗೆ ಅಯ್ಯೋಧ್ಯದ ಯಿಡಿ ಮಣ್ಣು ’ವುಲ್ಸಾಗಿ’ ಕಟ್ಟಿಗೊಂಡಂತೆ… ಪ್ರತಿವೊಲ್ದು ಮ್ಯಾರಿದು, ಮಣ್ನು ತರ್ಭೇಕು. ಆ ವೂರು ಕೇರಿ ಜನ್ರು ’ವುಲ್ಸು’ ವಯ್ಯಲು ಬಿಡಲ್ಲ! ಅದ್ನ ಯದ್ರುಸಿ ತರ್ಬೇಕು. ಗಂಡ್ಸರೆಂದ್ರೆ… ಸಾಹಸ್ಗಿರು! ತಂದೆ, ತಾಯಿ, ಗುರು, ನೆಲ, ಜಲ, ವುಪ್ನಿ ಋಣವೆಂದ್ರೆ… ಯಿದ್ನೇ ಕರೆಯೋದು. ಯಿವೆಲ್ಲ ಸ್ವರ್ಗಕ್ಕಿಂತ ಮಿಗಿಲು. ಯೀ ತ್ಯಾಗ, ಬಲಿದಾನ್ದ, ಪವಿತ್ರ ಕೆಲ್ಸಾ…. ಬೆಳ್ಕರೆಷ್ಟೊತ್ತಿಗೆಲ್ಲ ಆಗ್ಬೇಕು. ತಂದಿದ್ದನ್ನೆಲ್ಲ ಬುಡ್ಡೇಕಲ್ಲು ಬಳಿ ಹೂತು ಪೂಜಿಸ್ಬೇಕು! ಹರಿಜನ್ರು ಹರಿಯಮಕ್ಳು… ಮಣೆಗಾರಿಲ್ದ್ಮೇಲೆ ಮಾದೇವ್ನಿಲ್ಲ…. ಆದಿಜಾಂಬ್ವುಂತನ ಕೃಪೆ ಯೀ ಜಗತ್ತು! ಕೃಷ್ಣನಿಗೆ ಬೆಳ್ಳಿಕಡ್ಗು ತೋಡ್ಸಿ…..ಪಲ್ಲಾ ಜೋಳ ವರ್ಸುಬೇಕು….’ ಎಂದು, ಹೆಗ್ಮೇಲೆ ಮಣ್ದ ಭಾರ್ನ ಹೊರ್ಸಿ, ಕಿವಿ ಅವುಡು ಗಚ್ಚುವಂತೆ ಜನ್ರಿಂದ, ಚಪ್ಪಾಳೆ ಗಿಟ್ಸಿಗೊಂಡು, ಕುಳಿತರು.

’ಸರ್ಗಾ’ ಯಂಭೋ….ಯಜ್ಞಕ್ಕೆ, ಬಲಿಪಶು ತಾನೆಂದು, ಮುಂದಿನ ಪೀಕ್ಲಾಟವನ್ನು ನೆನೆದು, ಕೃಷ್ಣಪ್ಪ ಆ ಕ್ಷಣ… ಭೂಮ್ಯಾಕ್ಕಿಳಿದ. ಮುಖಾಂಭೋ…. ಮುಖ ಕಳಾಹೀನವಾಯಿತು. ಅಹೋಬಲವೆಲ್ಲ ಹುದುಗಿತು. ಕಣ್ಗುಳು ಮಬ್ಬಾದ್ವು… ಕೇರಿಯಿಂದ ಬರುವಾಗ, ಇದ್ದ ಉತ್ಸಾಹವೆಲ್ಲ ಕರಗಿ, ಸಾವು ನೋವು ಕಣ್ಣ…. ಮುಂದೆ….ಸುಳಿದವು! ಜನಂಭೋ ಜನ ಕೋಟೆಯಂಗೆ ಸ್ವಲ್ಪಜನ…..ಕುಂತಿದ್ರು…..ಅಲ್ಪ ಜನಾ….ನಿಂತಿದ್ರು…. ಸುತ್ತಾ ಕಣ್ಣಾಡ್ಸಿದ. ಅಳಿವು ಉಳಿವ್ನಿ ಪ್ರಶ್ನೆಯಿದೆಂದು ಮೇಲ್ಗೆ… ಗಟ್ಟಿ ಧೈರ್ಯ ತಂದುಕೊಂಡು, ಜೀವ ಬಿಗಿ ಹಿಡಿದು, ಎದ್ದು ನಿಂತೇ ಬಿಟ್ಟ. ಜನ್ರು ಗಾಬ್ರಿ ಬಿದ್ದು ಅವ್ನತ್ತಲೇ ನೋಡತೊಡಗಿದರು.

“ಧಣಿಗಳೇ….ಯಿದೆಲ್ಲ ಅಳೇಕಾಲ್ದಾ…ಆಚರ್ಣೆ. ಅಶ್ವಮೇಧದಂತೆ! ದಿಗ್ವಿಜಯದ ಯಾತ್ರೆಯಂತೆ!  ಯಿದು…..ಯೀಗ್ಲೂ ಯಾಕೆ ಬೇಕೇಳ್ರಿ?? ಯೆಲ್ಲ ಬದ್ಲು ಆಗೈತಿ! ಯೀಗ್ಗೇ, ನಮ್ತಾತ ಬಬ್ಲೆಪ್ನಾ ತಲೆಮಾರ್ನಿ ಕೆಳ್ಗೆ, ವಿಠುಲಾಪುರ್ದ ವೊಲ್ದು ಮ್ಯಾರ್ಯಾಗೆ ’ಸರ್ಗಾ’ ವುಗ್ಗೋಕೋದವ್ರಿಗೆ ಕಣ್ಕಟ್ಟ ಮಾಡ್ಸಿದ್ದಕೆ….ಅಲ್ಲೇ ಕಣ್ಣು ಕಾಣ್ದಾಂಗಾಗಿ, ಕೈಕಾಲು ಬಿದ್ದೋಗಿ ವದ್ದಾಡಾರ್ನ ಬಂಡ್ಯಾಗೆ ಅಕ್ಕೊಂಡು ನಾವೆಲ್ಲ ತಂದಿರಲಿಲ್ವೇ? ಅಷ್ಟೇ ಯಾಕೆ ಮೂರು ತಲೆಮಾರ್ನಿ ಕೆಳ್ಗೆ ಕೋನಾಪುರ್ದ ವೊಲುಮ್ಯಾರ್ಯಾಗೆ ಸರ್ಗಾ ಚಲ್ಲೋ ಮಾದಿಗ್ರ್ನ ವಂದ್ ತುಂಡ್ಗೆ ’ಕಸಕ್’ ಅಂಬಂಗೆ ಕತ್ರಿಸ್ರಿಲಿಲ್ವೇ?? ಯಿಂಗೇನೇ….ಯೀ… ಮಣೆಗಾರ್ನ ಕೈ ಯಿಡ್ದು…. ಕೈಯಿಡ್ದು  ಯೇಲು ತುಳ್ಸಿಕ್ಯಾಂತಾ ನೀವು ಬಂದೀರಿ! ಯಿದು ಯಿನ್ನೇಲ್ಲಿ ತನ್ಕಾ?? ಬಲಿಕೆಲ್ಸಬೇಡ. ತ್ವಾಳ…..ಹುಲಿಕೆಲ್ಸ ಯಿವತ್ಗೆ ಸಾಕು ಮಾಡ್ರೀ…..!!” ಎಂದು ಕೃಷ್ಣಪ್ಪ, ಪಟ್ಟಾಟ್ನೀ….. ಗಿಳಿ ಪಾಠ ಒಪ್ಸಿದ.

ಊರು ಕೇರಿ ಜನ್ರು. ’ಅಡಲ್ಲಾಗಿ’  ಹೋದ್ರು. ಕೇರಿಯಿಂದ….ಬರ್ವೂಗಾ ಕುಣುಕೊಂತಾ ಸರ್ಗಾ ವುಗ್ಲೂ…ಬಂದಾನೇ! ಯೀಗೇನು ಕೋಳಿ ಜಗಳ?! ವೋಗಿ ವೋಗಿ…..ಯಿವುನ್ಗೇ ….ಸರ್ಗಾ ಸೆಲ್ಲೋ ಕರ್ಮ….ಯೀ ಸಲ್ದಾ ಸತ್ನೇನ್ ?! ಯೀ ಯಡುವಟ್ಯಾನ್ಗೇ ಕಾಯ್ದೆ, ಕಾನೂನ್ಪುಂಡಿತ್ಗೇ ಬರ್ಬೇಕೇನು? ಜನಂಭೋ ಜನ್ರು….ಗುನುಗುನು ಗುನ್ಗಿಕ್ಯಾಂತಾ….ಬಾಯಾಕೆ…. ಅಕ್ಕಿ ಕಾಳ್ಹಾಕಿ ಕುಂತ್ರು.

’……ವಳ್ಳೇ……ಕೈಲಾಗ್ದು, ರಣುಮುಂಡೇ ಮಾತಾಡ್ದಿಂಗೇ. ಕುಣಿಲಾರ್ದ ಯಂಗ್ಸು ನೆಲಡೊಂಕು ಅಂದಂಗೇ….. ನೀ….ತೆಬ್ಬರ್ಕು….ಯರ್ಪುಕ್ಕನಂಗೇ…..ಮಾತಾಡ್ತಿಯಲ್ಲಲೇ? ಯೀ ದೇಸ ಬಿಟ್ಟು ಬ್ರಿಟಿಸ್ರ್ನು ವೋಡ್ಸಿದ ವೂರಿಕೇರಿಯಿದು! ಯೀಗ ಭೇದಭಾವ ಮಾಡಿ, ಪಿತ್ರುಡ್ಕು ಬ್ಯಾಡ ಕೃಷ್ಣಾ?! ಮೊತ್ತ ನಾವೆಲ್ಲ ವಂದು, ಹಿಂದು, ಮುಂದು ಬಂಧು. ವೂರು ಕೇರಿ ಯರ್ಡು ಕಣ್ಣು. ದೇಹ ವಂದು, ಕೈಕಾಲು ಬೇರೆ ಬೇರೆ. ಮರವಂದೇ ಹಣ್ಣುಗಳು ಬೇರೆ ಬೇರೆ. ನನ್ ಸ್ವಂತು ಲಾಭಕ್ಕೇ ನಾನೇನ್ನ ಯಿಷ್ಟಲ್ಲಾ…..ಬಡಿದಾಡ್ತೀನೆರ್ರಲೇ? ನಪ್ನ, ಯೀ ವೂರು ಕೇರಿಗೇ , ತ್ಯಾಗ, ಬಲ್ದಾನ, ಮಾಡ್ದೋನೊಬ್ಬ ಗಂಡ್ಸುಯೇನ್ಲೇ?! ನಮ್ ವೃತ್ತಿ ಬೇರೆ ಬೇರೆ ಯಿರ್ಬೋದು! ಯಲ್ರಲ್ಲಿ ಸಾಹಾಸ ಪ್ರವೃತ್ತಿ ಮಾತ್ರ ಯಿರ್ಬೇಕು! ಆಗಾವ್ರ್ನಾ ಗಂಡ್ಸುರು….ಅನ್ನೋದು! ಆ ಮಹಾಪುರ್ಸು, ಆದಿಜಾಂಬುವಂತ, ತನ್ನ ಪುತ್ರಮ್ಮನ, ಭೂಮಿಗೆಪ್ಪು ಕೊಟ್ಟು, ಯೀ ಲೋಕ ಉದ್ಧಾರವೆಂದ! ಅವ್ರಾ ವಂಸ್ದೋರಾಗಿ, ಪಾಲು ತಿಮ್ತಾಯಿದ್ದೀರಿ! ಯೀಗ ನರ್ಸುತ್ತು, ಯೇಡಿಗ್ಳಂಗೇ ಯಿಂದೆ ಸರ್ದುರೆಂಗ್ಲೇ? ಆ…..ಹನುಮಂತ, ವಾಲಿ, ಸುಗ್ರೀವ, ಶಬರಿ, ಅರುಂಧತಿ, ಯಲ್ಲಮ್ಮ, ಅನಸೂಯೆ, ವನ್ಕೆವೊಬವ್ವ, ಬಾಲನಾಗಮ್ಮ, ಬಡ್ವಿಲಿಂಗಮ್ಮ ಯಿವ್ರೆಲ್ಲ ನಿಮ್ಮವ್ರೇ …ಊರ್ನಿ ದೊಡ್ಡ ಧಣೀಗ್ಳು …ದೊಡ್ ಬಾಯ್ಲಿ ದೊಡ್…ದೊಡ್…..ರ್ವಾಸುಪಂತ್ದು, ಮಾತ್ನು ಆಡಿದ್ರು.

ಎಲ್ರುಗೆ ಬೆಚ್ಚುಗೆ ಆಯ್ತು!
ಮೈಕೋದ್ಲು, ನೆಟ್ಟಗಾದುವು. ಜನ್ರು ಉಸಿರಾಡಾದೋ ….ಸಪ್ನ ಕೇಳಿಸತೊಡಗಿತು.

” ಯೀಗ್ಗೇ……ವಾರ್ದೆಂದಾ ತೆಪ್ಗೆದ್ದು……ಯೀಗೆಂಥಾ ಕೂಳಿ ಜಗ್ಳಲೇ? ಅಸುಭದಾ ಮಾತಂತು ಆಡ್ತೀಯ್ಲೇ ಕೃಷ್ಣಾ?! ರಾಸಿರಾಸೀಗೇ….ಯೇಸ್ಗೆಯಿಲ್ದೆ…..ವಲ್ದು ಮ್ಯಾರಿ ಪಾಲಾಂತಾ….ಕಂಡ್ಗುಟ್ಲೆ ಕಾಳುಕಡಿ, ಉಳ್ಳಾಗಡ್ಡೆ, ಬೆಳ್ಳುಗಡ್ಡೆ…. ಅತ್ತಿ, ಪಟ್ಣುಗೂರುಳು, ಕುಸುಮಿ, ಸಜ್ಜೆ ಮುಸ್ಕುನ್ಜೋಳ, ತ್ವಗ್ರಿ, ವುಣ್ಸೆಣ್ಣು, ವಣುಕಾಯಿ, ಅಸೀಕಾಯಿ, ಬದ್ನೇಕಾಯಿ…..ಮದ್ಲು ಮಾಡಿ, ಕಡುಕ್ಕೆಂಡು ಕುಪ್ಪೆಕ್ಕೆಂಡು ಯೆದ್ಗೆ ಬರೋತನ್ಕ ತಿಂದು ತಿಂದು….ಯೀಗ ಯಿಂಗೆಂದ್ರೆ ಯಿಷ್ಟು ದಿನ್ಗೊ ತನ್ಕ ಕೈಗೇನು ಬಳಿ ತೊಟ್ಟಿದ್ರೇನ್ರಾಲೇ?? ಮಾದಿಗ್ಮುಂಡೆ ಮಕ್ಳೇ ನಾ ಸಿಟ್ಟಿಗೆದ್ರೆ ನೋಡ್ರೀ….ವುಟ್ಲಿಲ್ಲ ಅನ್ಸಿಬಿಡ್ತೀನಿ……”

ದೊಡ್ಡಗೌಡ್ರು….ಕೇರಿಗ್ರ ಮ್ಯಾಲೆ, ಕೆಂಡ ಮಂಡ್ಲವಾಗಿ, ಒಡೇಕೆ-ಬಡೀಕೇ, ನಡುಕಟ್ಟಾಕಿ ನಿಂತ್ರು, ಜಾತ್ರೆ ಹೋಗಿ, ಶವಗಳ ಯಾತ್ರೆಗೆ, ಯೀ…. ಸರ್ಗಾ ಸೆಲ್ಲೋ! ಅಬ್ಬಾ… ತಿರುಗಿದ್ದು…. ಜನ್ರ ಎದೆಗುಂಡಿಗೆ ಆ ಕ್ಷಣ…. ಝಲ್ಲೆನ್ಸಿತು.

ಕೇರಿಗ್ರು ಎಚ್ಚೆತ್ತುಕೊಂಡರು. ಯಿಂದ್ನಿ ಕಹಿಘಟ್ನೆಗ್ಳು ಮೆರ್ವಣ್ಗೆ ವಂಟವು.ಎರ್ಡು ತಲೆ ಹಾವಿನಂಗೆ, ಊಸ್ರುವಳ್ಳಿಯಂಗೆ, ಬಣ್ಣಬದ್ಲಿಸಿ, ಮೇಲ್ಗೆ ಬಣ್ದ ಮಾತಾಡತೊಡಗಿದ್ರು, “ಅವುದೇಳ್ರೀ ಗೌಡ್ರೇ….ಬುದ್ಧೇರಾ….ವಂದು ಊರು, ಕೇರಿಯೆಂದ್ಮೇಲೆ, ಅಳೇ ಪದ್ಧತಿಯಂಗೇ, ನಡ್ಬೇಕು. ಊರ್ಗಾಳ್ರು ಮಾತು ಯಂಗೆ ಕೈ ಬಿಡಾಕೆ ಬರುತ್ತೇಳ್ರಿ?! ಕೇರಿ ಮಣೆಗಾರ, ಮೇಟಿ ಮನೆಯವ್ರು ಅಂದ್ರೆ ಸರುದಿಂತೆ ಕೃಷ್ಣಪ್ಪನೇ ಸರ್ಗಾ ವುಗ್ಗುಬೇಕೇಳ್ರೀ…ಅವ್ರರಪ್ಪಾ ಸಣ್ಣಯಲ್ಲಪ್ಪ, ದೊಡ್ಡೆಲ್ಲಪ್ಪ, ತಾತ ಬಬ್ಲೆಪ್ಪ, ಮುತ್ತಾತ ಕಡೇ ಯಲ್ಲಪ್ಪ, ಮೇಟಿ ಯಲ್ಲಪ್ಪ, ಅವ್ರ ಅಪ್ಪ ಕೆಟ್ಟೆಮನೆ ದೊಡ್ಡ ಕುಲ್ಡಪ್ಪ…. ಯಲ್ರು ಯಿಂಗೇ…..ಸರ್ಗಾ ವುಗ್ಗಿ ಯೇಸ್ರು ಮಾಡೇವ್ರೇ…..!! ಅಂಥಾದ್ರಲ್ಲಿ ಯೀವ್ರ ಮಕ್ಳುದೇನು? ಮೇಟಿಯವ್ರು ತೋಟ್ಗಿರಾಗಿಯಿರ್ಬೇಕು! ಯಿಲ್ಲಾ ಯೀಗ, ವೂರು ಕೇರಿ ಬಿಟ್ಟು, ದೇಸಾಂತ್ರ ಮತ್ತೆ ದ್ಯಾಸಂದ್ರಕೇ ವೋಗ್ಬೇಕು…..” ಕೇರಿ ಮಣೆಗಾರ ಕರಿಯಣ್ಣ, ಬೆಳ್ಗಾ ಮಾತು ತೇಲ್ಸಿ…..ಉರಿಯ ಬೆಂಕಿಗೆ ತುಪ್ಪ ಸುರ್ವಿ, ಛಳಿಕಾಯ್ಸಿಕೊಳ್ಳು ವಂಟಿಕಾಲೀಲಿ ಸಿಡ್ಲಾರ್ಗಿ…..ಧಗ್ಗುಟ್ಟಾದ್ನ …ಕಾಯ್ತಾನಿಂತಾ…..

“ಕರಿಯ್ನ ಮಾತು ಸರೈತಿ! ಸರ್ಗಾ ವುಗ್ಗಿ ಗಂಡ್ಸೆನ್ಸಿಕಾಬೇಕು! ಯಿಲ್ಲಾ ಬಳೆ ತೊಟ್ಟು ಮನೆ ವಳ್ಗಿರ್ಬೇಕು. ಯಿಜ್ಬೇಕು, ಯಿದ್ದು ಜೈಸ್ಬೇಕು. ಜೀವ್ನ ಬಿಡ್ಲುರ್ದಾದ ಕರ್ಮ….” ಜನ್ರು ಕೂಗಿದ್ರು.

“ಅಲ್ಲಾ ಗೌಡ್ರೇ….ವಗ್ಳಿ ವಗ್ಳಿ ನನ್ನ ಸಿಡಿಮರ್ಕೇರ್ಸಿಬೇಕೆಂದಿರೇನು? ನಾ ಮಕ್ಳಾನು! ದಾರ್ಯಾಗೆ , ಬಟ್ಟೇಗೆ, ಯೇನನ್ನಾ ಯದ್ವಾತದ್ವಾವಾದ್ರೆ ನನ್ನಂಡ್ತಿ….ಮೂರು ಜನ್ರ ಮಕ್ಳು , ಗತಿಯೆಂಗೇ?? ಹಸ್ದಿವ್ರಾ….ಹಸಿವು ಹಸಿಯ್ದವರೆಂತು ಬಲ್ರು? ಯಿ ಜನ್ರು ಬಾಳಾ ದುಷ್ಟರಿದ್ದಾರೆ!! ಯಲ್ಡು ತಲೆ ಹಾವ್ನಿಂಗೆ, ಮೃತ್ಯುಂಜಯರು! ಯದೆಗ್ವಯಿಕ್ರು ತಾಯ್ಗಿಂಡ್ರು…. ನಂಬ್ಸಿ ಕುತ್ಗೆ ಕೊಯ್ತಾರೆ. ನಂಬಿಕೆಸ್ಥರಲ್ಲ. ಮಕಕೆ ಮಸಿ ಬಳ್ತಾರೆ…. ಗನ್ನ ಘಾತುಕ್ರು….ಅದ್ಕೆ ಮೀನಾ ಮೇಷಾ ಯೆಣಿಸ್ತೀನಿ….ಬಡ್ವರ ಕಷ್ಟ ದೇವ್ರು ಕ್ವಾಣೀನು ಬಲ್ದು?! ಕುಡ್ಗೋಲು ಕುಂಬ್ಳಕಾಯಿ ನಿಮ್ಮತ್ರಿವೆ.” ಕೃಷ್ಣಪ್ಪ ಹೊಟ್ಟೇಗ್ಳುದು ಹೊರಹಾಕಿದ!

“ಯಿವುನಪ್ಪ್ನಾ…..! ಯಿವುನು ತಲ್ಯಾಗೇ ಅನುಮಾನ್ದು, ಹತ್ತಾರು ಹುತ್ತಗಳ್ವಿ! ಯೀಗೀಗಾ ಯಾರಿಗೇ ಯಾರು ಗ್ಯಾರಂಟಿಯಪ್ಪ?! ನಂಬಿ, ನಚ್ಚಿ, ಎಲ್ಲರ್ರುನೂ ನಮ್ಮವರೆಂದೇ ನಡೀಯೋದಪ್ಪಾ!! ವರುಕಡ್ಗೆ ವೋದಾರು, ಮನ್ಗೆ ಬರೋದು ಗ್ಯಾರಂಟಿ ಯೇನೈತಿ ಯೇಳ್ರಪ್ಪಾ”?! ಬಲ್ಗೈನ ಯಡ್ಗೈ ನಂಬಂಗಿಲ್ಲ. ಯಡ್ಗೈನ ಬಲ್ಗೈ ಸೇರಲ್ಲ. ಅಂತಾದ್ರುಲ್ಲಿ…..ಯಿವುನ್ಗೆ ಯೇನು ಗ್ಯಾರಂಟಿ ಕೂಡಾನಾ?? ಎಂದು ಸೇರ್ದಿ ಜನ್ರು ಎಂದಿನಂತೆ, ಬಿದ್ದು ಬಿದ್ದು ನಗ್ಸಿ….ಹುಬ್ಬುಗಂಟಿಕ್ಕಿದ ಮಕ್ಗಳ್ನ, ಗಾಂಧಿ ನೋಟ್ನಿಂಗೆ ಹಸನ್ಮುಖಿಗಳನ್ನಾಗ್ಸಿಲು, ಗೌಡ್ರು ಶಕ್ತಿ ಮೀರಿ ಶ್ರಮಿಸ್ಸಿದ್ದ್ರು….

ದೊಡ್ ಧಣಿಗ್ಳು, ಗಂಭೀರ ವದ್ನರಾಗಿ, ಎದ್ದು ನಿಂತು, ಮಂದಹಾಸ ಬೀರುತ್ತಾ… ’ಯೀ ನಮ್ಮ ಕೃಷ್ಣಾ, ಕೇಳುವ ಪ್ರಶ್ನೆಗೆ ಯಲ್ರು ರವ್ವಾಟ್ ಹೊತ್ತು ವಿಚಾರ ಮಾಡೋದೈತಿ!! ಹಳ್ಳಿ ಹಳ್ಳಿಗ್ಳಾ ಮಧ್ಯೆ….ವಲ್ದು ಮ್ಯಾರಿಗ್ಳಾ ನಡ್ವೆ…..ಬಲು…ಪ್ರತಿಕಾರದ ಜ್ವಾಲೆಯಿದೆ. ಕಿಚ್ಚಿದೆ. ಸೇಡಿದೆ. ದಳ್ಳುರಿಯಿದೆ. ವೈಮನಸ್ಸಿದೆ! ಆದ್ರೂ ನಾವು ’ಸರ್ಗಾ’ ವುಗ್ಗೋ ಪದ್ಧತಿನಾ, ಆಚರ್ನೆ…..ಸಂಪ್ರದಾಯ್ನ ಕೈ ಬಿಟ್ಟು ಕುಂತಿಲ್ಲ. ಯಾವುದ್ನೂ ನಾವು….ಬಿಟ್ಟಿಲ್ಲ! ನಮ್ಮೂರು ಕೇರೀದೇ ಗತ್ತು ಗಮ್ಮತ್ತು ಬೇರೈನೈತಿ. ಅದ್ನ ಯೇಳಿದ್ರೆ….ಮೈಕೂದ್ಲು ನೆಟ್ಟಾಗುತ್ವೇ….ಯೀ ಬುಡ್ಡೆಕಲ್ಲುತಾಗ, ಜೀವಂತವಾಗಿ, ಮಾದಿಗ್ರ್ನ, ನಮ್ ಪೂರ್ವೀಕರು,  ವೂತಿರುವುದ್ನ ನಾ ಬಾಯಿಂದ ಬಾಯಿಗೆ, ಕೇಳೀನಿ! ಯಾರಿಗೂ ಅನ್ಯಾಯ ಮಾಡಿಲ್ಲ. ಯೀ ’ಸರ್ಗಾ’ ವುಗ್ಗೋ …. ಯಲ್ರುಗೂ ವೂಲ, ಮನೆ, ಅಡುವು, ಆಸ್ತೀನ ಮನಾರೇ ಕೊಟ್ಟು ಕಣ್ಣೀಲಿ ನೋಡ್ಯಾರೆ! ಯಿಗ್ಲೂ ನೋಡ್ತೀವಿ. ಕೆನ್ನೂಲ ವೋಗ್ಲಿ…..ಬೆದ್ಲು…ಮಾಗಾಣಿ…ವೋಗ್ಲಿ….! ನ್ಯಾವ್ಯಾರು ಕೈ ಬಿಡಲ್ಲೇಳು’ ಎಂದು ವಚನವಿತ್ತು.

’ದೊಡ್ ಧಣಿಗಳದ್ದು ಮನಗಂಡು ಮಾತು. ಯಿದುಕ್ಕಿನ್ನ ಯಿನ್ನೇನು ಬೇಕ್ಲೇ ಕೃಷ್ಣಾ?! ತಲ್ಸೆವ್ರಾಡಿಕೊಂಡು ಮಾತಾಡ್ಲೇ? ಯಿದ್ರು ಕೋಟಿ ವೋದ್ರೂ ಕೋಟಿ. ಒಳ್ಳೇ ಅವಕಾಶವಪ್ಪಾ’ ಜನ್ರು ಪುಟಿದೆಬ್ಸಿದ್ರು.

“ತಿನ್ನೋ ಯಿಷ್ಟೊಂದು ಅಡುಗೆಯನ್ನು ಕಸ್ರು ಪಿಸ್ರು ಮಾಡಿ, ಯೇಳು ವಲುಮ್ಯಾರಿಗೆಲ್ಲ ’ಹುಲ್…ಹುಲಿಗೋ….ಸಲಗಾಮ್ ಹೊಲಿಗೋ….ವಾಸುದೇವಾ….ಭೂದೇವಿ….ಹೊಲಿಗೋ….’ ಎಂದು ಕೂಗ್ತಾ….’ಸರ್ಗಾ’ ಸೇಲ್ದ್ರಿ….ಭೂತಾಯಿ ವಳ್ಳೆ ಮಳೀ ಬೆಳೀ ಕೊಡುವಳೆಂಬಾ ನಂಬಿಕೆನೇ ಸುಳ್ಳು. ಸಿಕ್ಕಾಪಟ್ಟೆ ಮರ, ಗಿಡ, ಬಳ್ಳಿ, ಕಾಡು ಬೆಳ್ಸಿ, ವನಂತ್ರಾ ಮಾಡಿ, ಉತ್ತು, ಬಿತ್ತಿ, ನೀರು, ಗೊಬ್ರಾ, ಹಾಕಿ, ಬೀಜ ಕಾಣ್ಸಿ, ಕಳೆ ತೆಗ್ದು, ಜಂತೆ ಹಾಕಿ, ರಂಟೆ ಹೊಡೆದು, ಮಾದಿಗ್ರು ರಟ್ಟೆ ಮುರುದು, ಸಂಬಳ ದುಡಿದ್ರೆ, ಜಗ್ಗಾ ವುಲ್ಸು ಬರುತ್ತೆ…’ ಎಂದು ಕೃಷ್ಣಪ್ಪ, ಸಣ್ಣ ಬಾಯಾಗೆ, ದೊಡ್ಡ ಮಾತುಗಳ್ನ, ಹರೀಬಿಟ್ಟ.

’ಲೇ ಕೃಷ್ಣಾ…. ಯೀ ನಿನ್ನಾ ಗೀತೋಪದೇಶ್ನ ಮದ್ಲು ನಿಲ್ಸಿಲೇ….ಯೇನ್ ಠೇಂಕಾರ್ದ ಕಿಡಿನುಡಿಗಳೂ? ಯಿಲ್ಲ್ಯಾರು ಕೌರವರಿಲ್ಲ! ನಂಬಿಕೆ ನಮ್ಮ ದೇವ್ರು, ಆಚರಣೆ ನಮ್ಮ ತಾಯಿ, ಊರುಕೇರಿಗಳು ಅಣ್ಣತಮ್ಮುಗ್ಳು. ಸರ್ಗಾ ನಮ್ಮ ಸಂಸ್ಕೃತಿ: ಶ್ರದ್ಧಾ, ಭಕ್ತಿ, ನಮ್ ನಾಗರಿಕತೆ. ಯಿದ್ನಾ ಆಳು ಮಾಡಿ ದೊಡ್ಡವರೆನ್ಸಿಕೊಳ್ಳಾದು ಬೇಡಾ. ಹಳೇದು ಬೇರು. ಅದ್ನ ಹಿಡಿದು ಯೀ ಊರುಕೇರಿ ಬೆಳ್ಸೋಣ…..’ ಎಂದು, ಬಿಟಿಯಸ್ ಕುಲಕರ್ಣಿ ಹೇಳಿದ್ರು.

ಊರುಕೇರಿ ಜನ್ರು ಹೌದೌದೆಂದ್ರು. ಯೀ ಸರ್ಗಾ…. ಆಚರಣೆ…… ಪದ್ಧತಿ ಮಾನ್ವೋಪಯೋಗಿಗಳು. ಯೀ ಯಾತ್ರೆ ಸಾಗ್ಲಿ….’ ಎಂದು, ಜನ್ರ ಗಗನ ಭೇದಿಯಾಯಿತು. ’ನಿನ್ಗೆ ಬಿತ್ತೋದು ಗೊತ್ತಿಲ್ಲ. ಬೆಳೆಯೋದು ಗೊತ್ತಿಲ್ಲ. ಯೀ ಭೂಮಿ
ಋಣ ತೀರ್ಸೋಗೆ?? ಶಾಂತಿ ನೆಲ್ಸಿಲಿ ಅಂತಾ ಯೀ ಕುರಿ, ಕೋಳಿ, ಕುಂಬ್ಳುಕಾಯಿ, ನಿಂಬೆಣ್ಣು ಕತ್ರಿಸಿ…. ಮಂತ್ರೋಸ್ಸೊದ. ಯರುಪುಕ್ಕ…. ಯಿದು ಸತ್ತ ದನ ತಿಂದಷ್ಟು ಸರಳವಿಲ್ಲ. ನೀ ಸರ್ಗಾ ಚೆಲ್ಲು…. ಆಚರಣೆ ಸಾಗ್ಲಿ’ ಎಂದು ದೊಡ್ಡ ಧಣಿಗಳು, ಹುಕ್ಕುಂ ಕೊಟ್ರು. ಮೀಸ ತಿರುವುತ್ತಾ…ಕಣ್ಣುಗುಡ್ಡೆಗಳ್ನ… ಉರಿವಾ ಬೆಂಕಿಯಂಗೇ ಮಾಡಿಕೊಂಡು, ಹುಳಿ ಹುಳಿ, ಕೃಷ್ಣಾನ ನೋಡುತ್ತಾ, ಕುಂತ್ರು.

’ಯಜ್ಞ ನಡೆದ್ಮೇಲೆ, ಪ್ರೋಕ್ಷಿಸುವ ಮಂತ್ರದ ನೀರಿನಂತೆ, ಯೀ ನನ್ನ ಮಾತುಗಳು! ಯೀಗ ನೀವೆಲ್ಲ ಮೌಢ್ಯದ….ಸೋಮರಸ ಕುಡಿದಿರುವಾಗ, ನಾನೀಗ ಬೆಂತರನಂತೆ ನಿಮಗೆ ಕಾಣದೆ ಯಿನ್ನೇನು?? ನನ್ನ ಪರ ವಹಿಸಿ ಯಾರೊಬ್ರು ವುಸ್ರುರೆತ್ತುತ್ತಿಲ್ಲ. ನೀವೆಲ್ಲ ಯಥಾಸ್ಥಿತಿನಾದದ ರಾಗದಲ್ಲಿದ್ದೀರಿ. ವಸಾ ಕುಂಭಾ ವೊರಲು, ಸರ್ಗಾ ಸೆಲ್ಲಲೂ ನಾ ಸಿದ್ಧ….ಬದ್ಧ!’ ಎಂದು ಕೃಷ್ಣಪ್ಪ, ಸಿಂಹಾನಾದದಲಿ ಯೆದ್ದು ನಿಂತ!

’ಅದಪ್ಪಾ! ಅಪ್ಪುಗುಟ್ಟಿದ ಮಾತೆಂದ್ರೆ….’ ಎಂದು, ದೊಡ್ಡ ಧಣಿಗಳು ಎದ್ದು ಬಂದು ಕೊರಳಿಗೆ, ಹಾರ ಹಾಕಿ, ವಸಾ ಕುಂಭಾನ ’ಜಯ….ಜಯಾ….ಭೂದೇವಿಗೆ, ಜಯಾ….ಜಯಾ….ವೂರುಕೇರಿಗೇ…..ಸರ್ಗಾ ಸೆಲ್ಲೋ ಮಹಾಧೀರರಿಗೇ….ಮಧ್ಯಾನ್ದ ಬ್ರಾಂಬ್ರಿಗೆ….ಮಾದಿಗರಿಗೆ….. ಜಯ ಜಯವಾಗ್ಲಿ…’ ಎಂದು, ಒಂಭತ್ತು ಜನ ಮುತ್ತೈದೆಯರು, ಕೃಷ್ಣಾನ ತಲೆ ಮೇಲಿದ್ದ ಸಿಂಬೆಯ ಮೇಲಿಟ್ಟರು. ಬುಡ್ಡೆಕಲ್ಲಿಗೆ  ಮೂರ್ಸುತ್ತು ಕೈಮುಗ್ದು …ತಿರುಗ್ದಿ…ಹಲ್ಲಾಲ್ಲು ….ಕಡಿತಾ… ಹಾವು ತೊನೆದಾಡುವಂತೆ, ಭುಸ್ಗುರಿತಾ…ತೊನೆದಾಡಿದ. ಹತ್ತರ, ಇಪ್ಪತ್ತರ, ಐವತ್ತರ, ನೂರರ ನೋಟುಗಳಿಂದ, ಮಾಡಿದ ಹಾರವನ್ನು ಜನತೆಯ ಪರ್ವಾಗಿ….ದೊಡ್ಡ ಧಣಿಗಳು, ಕೃಷ್ಣನ ಕೊರಳಿಗೆ, ಖುಷಿ ಯಿಂದ ಹಾಕಿ, ’ಕೆಹೇಕೆಹೇ…’ ಎಂದು ಎಲ್ರ ಹುಬ್ಬು ಮೇಲೇರುವಂತೆ ಮಾಡಿದರು.

ಕೃಷ್ಣಪ್ಪನ ಹಿಂದೆ ಕಾಲುದಳ, ಅಶ್ವದಳ, ವೀರರೂ….ಶೂರರೂ….ಧೀರರೆಲ್ಲ…ಓಟಕಿತ್ತರು. ಕೃಷ್ಣಪ್ಪ ಚಿರತೆಯ ವೇಗದಲ್ಲಿದ್ದ, ತಾಳಮೇಳ, ಶಂಖು, ಜಾಗಟೆ ಹುರುಮೆಯವರೂ….ಹಲಗೆ ಯವರೂ…ಕುರಿ ಹಿಂಡಿನಂಗೆ, ಒಂಟಿ ಸಲ್ಗಾನ…ಹಿಂಬಾಲಿಸಿದರು! ಒಂದೇ ಉಸಿರಿಗೆ ಕೋನಾಪುರ……….. ಬೊಮ್ಮಕ್ಕನಹಳ್ಳಿ, ಸೀರೇಕೊಳ್ಳ, ಕರಡೀ ಹಳ್ಳಿ, ವೇಂಕಟಾಪುರ, ವಿಟಲಾಪುರ, ದ್ಯಾಸಂದ್ರ… ಹೊಲಮ್ಯಾರಿಗಳ ದಾಟಿ ಸರ್ಗಾ ಚೆಲ್ಲಿ, ಹಿಡಿಮಣ್ಣು ಸೆರಗಿನಲ್ಲಿ ಗಂಟಿಕ್ಕೆ ಕೋಳಿ ಮರಿಗಳನ ಹಾರಿ ಬಿಟ್ಟು, ನಿಂಬೆಣ್ಣು ಮಂತ್ರಿಸಿ, ನಿವ್ವಾಳ್ಸಿ, ಕತ್ರಿಸಿ, ಕತ್ತೆ ದಿಕ್ಕಿಗೆ ಒಗೆದು….., ಸರ್ಪಗಾವಲಾಗಿ ಪ್ರತಿ ಹೊಲಮ್ಯಾರಿಯಲ್ಲಿ, ನಿಂತಿದ್ದವ್ರ್ನ ತಳ್ಳಿ, ನೂಕಿ, ಓಡಾಡ್ಸಿಕೊಂಡು…. ಒಂದೇ ಉಸ್ರುಗೇ ಊರು ಬುಡ್ಡೇಕಲ್ಲು ತುಳಿದ! ಏಳು ಹೊಲ ಮ್ಯಾರಿ ವುಲ್ಸು ಹೂತು ಪೂಜೆ ಸಲ್ಲಿಸಿದ ದೊಡ್ಡ ಧಣಿಗಳು….ಕೃಷ್ಣಪ್ಪನ ’ಜಿಂಕೆಮರಿ’ ವೀರಹನುಮಾನ್, ಶಕ್ತಿಮಾನ್….ಎಂದು ಕರೆದು ಬಲಗೈಗೆ, ಬೆಳ್ಳಿ ಕಡುಗ ತೊಡ್ಸಿ, ಮಾಲೆ ಹಾಕಿ, ಪಲ್ಲಾ ಜೋಳವನ್ನಿತ್ತು, ಜಯಕಾರ ಹಾಕಿದರು.

“ಅಬ್ಬಾ….ಹಡೆದವ್ವನ ವಟ್ಟೆ ಬಲು… ತಣ್ನಗಿತ್ತು! ದಾರ್ಯಾಗೆ, ಬಟ್ಟೇಗಾ ಯೇನು ವಿಪತ್ತು, ಆಪತ್ತು ಬಂದೆರಗಲಿಲ್ಲ…..! ಮಾದಿಗ್ರಾ ಯಿಂದೆ ಮಾದೇವನೇನು? ಮುಕ್ಕೋಟಿ ದೇವಾನು ದೇವತೆಗಳಿದ್ದಾರೆ!” ಎಂದು. ಕೃಷ್ಣಪ್ಪ ಭೂತಾಯಿಗೆ ನಮಿಸಿ, ಅಂಗಾತ ಅಡ್ಡಬಿದ್ದು….ದಿಂಡ್ರಿಕೆ ಕಟ್ಟಿ, ವುಳ್ಳು ವುಳ್ಳಾಡಿ…. ಮುತ್ತನಿತ್ತು, ಆನಂದ ಭಾಷ್ಪನ, ಒರ್ಸೆಕೊಂಡ. ಯಿತ್ತ…. ಜನ್ರು ಮಂತ್ರಮುಗ್ಧರಾಗಿ ಕೃಷ್ಣಪ್ಪನನ್ನೇ ….ನೋಡುತ್ತಿದ್ದರು.
*****

ಕೀಲಿಕರಣ : ಬುಸಿರಾಜು ಲಕ್ಷ್ಮೀದೇವಿ ದೇಶಾಯಿ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಚಕ್ರ
Next post ಮಿಂಚುಳ್ಳಿ ಬೆಳಕಿಂಡಿ – ೧೭

ಸಣ್ಣ ಕತೆ

 • ನಂಟಿನ ಕೊನೆಯ ಬಲ್ಲವರಾರು?

  ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…

 • ನಾಗನ ವರಿಸಿದ ಬಿಂಬಾಲಿ…

  ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…

 • ಕಳ್ಳನ ಹೃದಯಸ್ಪಂದನ

  ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…

 • ಮುದುಕನ ಮದುವೆ

  ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…

 • ಜೀವಂತವಾಗಿ…ಸ್ಮಶಾನದಲ್ಲಿ…

  ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…