ಆಮ್ಲ ಮಳೆ

ಆಮ್ಲ ಮಳೆ

‘ಆಸಿಡ್ ರೇನ್’ ಎಂಬ ಶಬ್ದವನ್ನು ಮೊಟ್ಟಮೊದಲು ಬಳಕೆಗೆ ತಂದವರು ರಾಬರ್‍ಟ್ ಆಂಗಸ್ ೧೮೭೨ ರಲ್ಲಿ. ಮಳೆಯ ನೀರಿನಲ್ಲಿ ಆಮ್ಲದ ಇರುವಿಕೆಯನ್ನು ‘ಆಮ್ಲ ಮಳೆ’ ಎಂದು ಕರೆಯುತ್ತೇವೆ.

ಸಾಮಾನ್ಯ ಮಳೆಯ ನೀರಿನ ಪಿ.ಎಚ್. ಮೌಲ್ಯವು ೫.೫ ರಿಂದ ೫.೭ ಇರುತ್ತದೆ. ಇದು ಸ್ವಲ್ಪ ಆಮ್ಲದ ಅಂಶವನ್ನು ಹೊಂದಿರುತ್ತದೆ. ಆದರೆ ಆಮ್ಲಮಳೆಯ ಪಿ.ಎಚ್. ಮೌಲ್ಯ ೪ ಇರುತ್ತದೆ.

ನೈಸರ್‍ಗಿಕ ನೀರು ಮತ್ತು ಮಣ್ಣಿನಲ್ಲಿ ಆಮ್ಲದ ಇರುವಿಕೆಯು ಜಗತ್ತಿನಾದ್ಯಂತ ಕಂಡುಬರುವ ಸಾಮಾನ್ಯ ಸಂಗತಿ. ಅದರಲ್ಲೂ ಈಶಾನ್ಯ ಅಮೇರಿಕಾ, ವಾಯವ್ಯ ಯೂರೋಪ ಮತ್ತು ಭಾರತಗಳಲ್ಲಿ ಸಾಮಾನ್ಯ. ಇದು ನಾರ್‍ವೆ, ಜರ್‍ಮನಿ, ಯು.ಕೆ, ಯು.ಎಸ್.ಎ, ರಶಿಯಾ ಮತ್ತು ಕೆನಡಾ ದೇಶಗಳಲ್ಲಿಯ ನದಿಗಳು, ಸರೋವರಗಳು ಮತ್ತು ಅರಣ್ಯಗಳ ಗಂಡಾಂತರಕ್ಕೆ ಕಾರಣವಾಗಿದೆ.

ಯೂರೋಪ್‌ನಲ್ಲಿ ೧೯೫೮ರಲ್ಲಿ ಸುರಿದ ಮಳೆಯ ಪಿ.ಎಚ್. ಮೌಲ್ಯ ೫.೦ ಆಗಿತ್ತು. ನೆದರ್‌ಲ್ಯಾಂಡ್‌ನಲ್ಲಿ ೧೯೬೨ರಲ್ಲಿ ಸುರಿದ ಮಳೆಯ ಆಮ್ಲೀಯತೆ ೪.೫ ಆಗಿತ್ತು. ಸ್ವೀಡನ್‌ನಲ್ಲಿ ೧೯೬೨ ರಿಂದ ೧೯೬೬ರ ವರೆಗೆ ಸುರಿದ ಮಳೆಯ ಪಿ.ಎಚ್. ಅಂಶ ೪.೫ ಇತ್ತು. ಇದರ ಪರಿಣಾಮವಾಗಿ ೧೯೭೦ ರಲ್ಲಿ ಪರಿಸರ ನಾಶವನ್ನು, ೧೯೭೯ ರಲ್ಲಿ ಸ್ವೀಡನ್ ದೇಶದ ೨೦,೦೦೦ ಸರೋವರಗಳ ಸಸ್ಯ ಸಂಕುಲ ಮತ್ತು ಪ್ರಾಣಿ ಸಂಕುಲಗಳೆರಡೂ ತೀವ್ರ ನಾಶ ಅನುಭವಿಸಬೇಕಾಯಿತು.

ಯು.ಎಸ್.ಎ. ದಲ್ಲಿ ೧೯೭೯ರಲ್ಲಿ ಸುರಿದ ಮಳೆಯ ಪಿ.ಎಚ್. ಅಂಶ ೪.೨ ಆಗಿತ್ತು. ಈವರೆಗೆ ಅತಿ ಹೆಚ್ಚಿನ ಆಮ್ಲವಿರುವ ಮಳೆ ಸುರಿದ ಉದಾಹರಣೆ – ಯು.ಎಸ್.ಎ. ದ ವಿಲೀಂಗ್ (ಪಶ್ಚಿಮ ವರ್‍ಜಿನಿಯ) ದಲ್ಲಿ ಸುರಿದ ಮಳೆಯ ಆಮ್ಲೀಯತೆ ನಿಂಬೆ ಹಣ್ಣಿನ ರಸಕ್ಕಿಂತ ಹೆಚ್ಚು ಮತ್ತು ಬ್ಯಾಟರಿ ಆಸಿಡ್ ನಷ್ಟು ಆಮ್ಲೀಯವಾಗಿತ್ತು!

೧೯೮೪ ರ ಏಪ್ರಿಲ್ ೧೦ ರಂದು ಸ್ಕಾಟ್‌ಲ್ಯಾಂಡ್ ದೇಶದ ಪಿಟ್ಲೂಚ್ರಿ ಎಂಬಲ್ಲಿ ಚಂಡಮಾರುತದ ಸಂದರ್‍ಭದಲ್ಲಿ ಸುರಿದ ಮಳೆಯು ಜಗದ್ವಿಖ್ಯಾತವಾಗಿದೆ. ಅಂದು ಸುರಿದ ಮಳೆಯು ನಿಂಬೆ ರಸಕ್ಕಿಂತ ಹುಳಿ ಮತ್ತು ವಿನೆಗರ್‌ನಷ್ಟು ಆಮ್ಲೀಯವಾಗಿತ್ತು. ಅದು ಸಾಮಾನ್ಯ ಮಳೆ ನೀರಿಗಿಂತ ೧೦೦ ಪಟ್ಟು ಆಮ್ಲೀಯವಾಗಿತ್ತು. ಯುರೋಪ್ ಮತ್ತು ಉತ್ತರ ಅಮೇರಿಕಾಗಳಲ್ಲಿ ೧೦ ಅಥವಾ ೧೦೦ ಪಟ್ಟು ಹೆಚ್ಚು ಆಮ್ಲೀಯ ಮಳೆಯು ಹಲವು ಬಾರಿ ಸುರಿದ ದಾಖಲೆಗಳಿವೆ.

ಆಮ್ಲ ಮಳೆ ಹೇಗಾಗುತ್ತದೆ?

ನಾವು ದಿನನಿತ್ಯ ಬಳಸುವ ಪ್ರತಿಯೊಂದು ಶಕ್ತಿಯ ಮೂಲವೂ ಅಂದರೆ ಕಲ್ಲಿದ್ದಲು, ಸೌದೆ, ಪೆಟ್ರೋಲಿಯಂ ಉತ್ಪನ್ನಗಳನ್ನು ಉರಿಸಿದಾಗ ಸಲ್ಫರ್‍ ಮತ್ತು ನೈಟ್ರೋಜನ್‌ಗಳಾಗಿ ಬಿಡುಗಡೆಯಾಗುತ್ತವೆ. ಈ ಮೂಲವಸ್ತುಗಳು ಗಾಳಿಯಲ್ಲಿ ಉರಿದಾಗ ಅವುಗಳ ಆಕ್ಸೈಡ್‌ಗಳಾಗಿ ಪರಿವರ್‍ತನೆಯಾಗುತ್ತವೆ. ಈ ಆಕ್ಸೈಡ್‌ಗಳು ನೀರಿನಲ್ಲಿ ಸುಲಭವಾಗಿ ಕರಗಬಲ್ಲವು. ಒಂದು ವರದಿಯ ಪ್ರಕಾರ ಪ್ರತಿ ವರ್‍ಷ ೧೫೦ ಮಿಲಿಯನ್ ಟನ್‌ಗಳಷ್ಟು ಸಲ್ಫರ್‍ ಡೈಆಕ್ಸೈಡ್ ಅನಿಲ ವಾಯುಮಂಡಲ ಸೇರುತ್ತದೆ. ಹಾಗು ೪೦ ಮಿಲಿಯನ್ ಟನ್ ನೈಟ್ರೋಜನ್ ಆಕ್ಸೈಡ್ ಉತ್ಪತ್ತಿಯಾಗುತ್ತದೆ. ಇವು ಮಳೆಯ ಸಂದರ್‍ಭದಲ್ಲಿ ಭೂಮಿಗೆ ತರಲ್ಪಡುತ್ತವೆ.

ಗಾಳಿಯಲ್ಲಿಯ ಆರ್‍ದ್ರತೆ ಪರಿಸ್ಥಿತಿಯಲ್ಲಿ N2O5 ನೀರಿನ ಆವಿಯೊಂದಿಗೆ ವರ್‍ತಿಸಿದಾಗ HNO3 ಉಂಟಾಗುತ್ತದೆ.

N2O5 + H2O -> 2HNO3
N2O3 + H2O -> 2HNO2

HNO3 ಮತ್ತು HNO2 ಭೂಮಿಗೆ ಮಳೆಯೊಂದಿಗೆ ತರಲ್ಪಡುತ್ತವೆ.

SO3 ಆರ್‍ದ್ರತೆ ವಾತಾವರಣದಲ್ಲಿ H2SO4 ಹನಿಗಳಾಗುತ್ತದೆ. HNO3 ಮತ್ತು H2SO4 ಈ ರೀತಿ ಉಂಟಾಗಿ, ನೈಸರ್‍ಗಿಕ ಮತ್ತು ಮಾನವ ಕೃತ್ಯದಿಂದ ಹೊರಬರುವ HCI ದೊಂದಿಗೆ ವರ್‍ತಿಸಿ ಆಮ್ಲಮಳೆ ಉಂಟಾಗುತ್ತದೆ.

ಸಲ್ಫರ್‍ ಮತ್ತು ನೈಟ್ರೋಜನ್ ಆಕ್ಸೈಡ್‌ಗಳು ವಾತಾವರಣದಲ್ಲಿ ಸೇರಿ ಸಾವಿರಗಟ್ಟಲೇ ಕಿ.ಮೀ. ದೂರ ಕ್ರಮಿಸುತ್ತವೆ. ಅವು ಗಾಳಿಯಲ್ಲಿ ಎಷ್ಟು ದೀರ್‍ಘಕಾಲದವರೆಗೆ ಇರುತ್ತವೆಯೋ ಅಷ್ಟು ಆಮ್ಲಗಳಾಗಿ ಆಕ್ಸೀಡೀಕರಣಗೊಳ್ಳುತ್ತವೆ. ಉದಾಹರಣೆಗೆ – SO2 ವಾತಾವರಣದಲ್ಲಿ ೪೦ ಗಂಟೆಗಳ ಕಾಲ ಇರಬಲ್ಲದು. ಸಲ್ಫೇಟ್ ಕಣ ೩ ವಾರಗಳವರೆಗೆ ವಾತಾವರಣದಲ್ಲಿ ಇರಬಲ್ಲದು. ಹೀಗೆ ಅವು ದೀರ್‍ಘ ಕಾಲದವರೆಗೆ ವಾತಾವರಣದಲ್ಲಿ ಸ್ಥಿರವಾಗಿದ್ದು, ಬಿಡುಗಡೆಯಾದ ಸ್ಥಳದಿಂದ ಹಲವು ಕಿ.ಮೀ. ದೂರದವರೆಗೆ ಹರಡಬಲ್ಲವು.

ಪರಿಣಾಮಗಳು

ಆಮ್ಲ ಮಳೆಯು ಸಸ್ಯ ಸಂಕುಲ, ಪ್ರಾಣಿಸಂಕುಲ ಅಷ್ಟೇ ಅಲ್ಲ ಕಟ್ಟಡಗಳಿಗೂ ಹಾನಿಯುಂಟುಮಾಡುತ್ತದೆ. ಒಟ್ಟಿನಲ್ಲಿ ಹೇಳಬೇಕಾದರೆ ಆಮ್ಲ ಮಳೆಯು ಪರಿಸರದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.

ಜಲ ಜೀವರಾಶಿಗಳ ಮೇಲೆ ಆಮ್ಲಮಳೆಯ ಪರಿಣಾಮ

೧) ಆಮ್ಲಮಳೆ ಸುರಿದು ಜಲದಲ್ಲಿ ಆಮ್ಲೀಯತೆ ಹೆಚ್ಚಾಗುವುದರ ಪರಿಣಾಮವಾಗಿ ಮೀನುಗಳ ಅನೇಕ ಜಾತಿಗಳು ನಿರ್‍ನಾಮವಾಗಿವೆ. ಸ್ವೀಡನ್ ದೇಶದಲ್ಲಿಯ ೧೫,೦೦೦ ಸರೋವರಗಳಲ್ಲಿ ಹಾಗೂ ಅಮೇರಿಕದ ಆಡಿರೊಂಡ್ಯಾಕ್ ಪ್ರಾಂತ್ಯದ ಸುಮಾರು ೧೦೦ ಸರೋವರಗಳ ಮೀನುಗಳು ಕಣ್ಮರೆಯಾಗಿವೆ.

೨) ಆಡಿರೊಂಡ್ಯಾಕ್ ಪ್ರಾಂತ್ಯದ ಕನಿಷ್ಠ ೨೪೦ ಸರೋವರಗಳ ಪಿ.ಎಚ್. ಮೌಲ್ಯ ೫ ಕ್ಕಿಂತ ಕಡಿಮೆ ಹೊಂದಿದ್ದು, ಅತಿ ಆಮ್ಲೀಯತೆಯಿಂದ ಕೂಡಿದ್ದು ಮೀನುಗಳಿಗೆ ಪ್ರತಿಕೂಲ ಪರಿಣಾಮ ಬೀರಿವೆ. ಇದರಿಂದ ಮಣ್ಣಿನಿಂದ ಅಲ್ಯುಮಿನಿಯಂ ಕ್ಷಾಲನಗೊಂಡು ನೀರಿನಲ್ಲಿ ಮಿಶ್ರವಾಗುತ್ತದೆ. ಇದರಿಂದಾಗಿ ಸರೋವರಗಳಿಂದ ನದಿ ಮತ್ತು ಹಳ್ಳ ಕೊಳ್ಳಗಳಿಗೆ ಹರಿಯುವ ನೀರು ಅತಿ ಹೆಚ್ಚಿನ ಅಲ್ಯುಮಿನಿಯಂ ಅಂಶ ಹೊಂದಿದೆ. ಇದು ಜಲಪ್ರಾಣಿಗಳಿಗೆ ಅದರಲ್ಲೂ ಮೀನುಗಳಿಗೆ ಅಪಾಯಕಾರಿ. ಅಲ್ಲದೇ, ಕಾರ್‍ಬನ್ ಅಣುಗಳೊಂದಿಗೆ ಅಲ್ಯುಮಿನಿಯಂ ಕೂಡಿ, ಮೀನುಗಳಿಗೆ ಹೆಚ್ಚಿನ ಅಪಾಯ ಒಡ್ಡಬಲ್ಲದು.

೩) ಬ್ಯಾಕ್ಟೀರಿಯಾ ಮತ್ತು ನೀಲಿ ಹಸಿರು ಪಾಚಿಗಳ ಜಾತಿಗಳು ಆಮ್ಲೀಯತೆಯಿಂದ ನಾಶ ಹೊಂದಿವೆ. ಇದರಿಂದ ಪರಿಸರ ಸಂತುಲನ ಏರುಪೇರಾಗುತ್ತದೆ. ಯುರೋಪ್ ಖಂಡದಲ್ಲಿ ಹಲವು ಜಾತಿಯ ಗಿಡ ಮರಗಳು ನಾಶವಾಗಿವೆ.

ಭೂಸಂಬಂಧೀ ಪರಿಸರ ವ್ಯವಸ್ಥೆಯ ಮೇಲೆ ಆಮ್ಲ ಮಳೆಯ ಪ್ರಭಾವ

೧) ಯೂರೋಪದಲ್ಲಿ ೧೯೫೮ರಲ್ಲಿ ಸುರಿದ ಆಮ್ಲಮಳೆಯ ಪಿ.ಎಚ್. ಅಂಶ ೫.೦ ಆಗಿತ್ತು. ನೆದರ್‌ಲ್ಯಾಂಡ್‌ನಲ್ಲಿ ೧೯೬೨ ರಲ್ಲಿ ಸುರಿದ ಮಳೆಯ ಪಿ.ಎಚ್. ಅಂಶ ೪.೫ ಆಗಿತ್ತು. ಇದು ಗಿಡಮರಗಳು ಎಲೆಗಳು ಉದುರಲು ಕಾರಣವಾಗಿತ್ತು. ಸ್ವೀಡನ್ ದೇಶದ ಅರಣ್ಯಗಳ ಬೆಳವಣಿಗೆ ಕುಂಠಿತಗೊಳಿಸಿದೆ.

೨) ಪಶ್ಚಿಮ ಜರ್‍ಮನಿಯ ೧೦ ಪ್ರತಿಶತದಷ್ಟು ಅರಣ್ಯ ನಾಶ ಹೊಂದಿದ್ದು, ೧೮ ಮಿಲಿಯನ್ ಎಕರೆ ಅರಣ್ಯ ಪ್ರದೇಶ ಆಮ್ಲ ಮಳೆಯಿಂದ ಪರಿಣಾಮ ಬೀರಿದೆ. ಸ್ವಿಡ್ಜರ್‌ಲ್ಯಾಂಡ್, ನೆದರ್‌ಲ್ಯಾಂಡ್ ಮತ್ತು ಜೆಕೆಸ್ಲೋವಾಕಿಯಾ ದೇಶಗಳ ಅರಣ್ಯಗಳು ನಾಶಹೊಂದಿವೆ. ಸಸ್ಯಗಳ ಬೆಳವಣಿಗೆಯಲ್ಲಿ ಅತಿ ಪ್ರಮುಖ ಪಾತ್ರ ವಹಿಸುವ ಕ್ಯಾಲ್ಸಿಯಂ, ಪೊಟ್ಯಾಸಿಯಂ, ಕಬ್ಬಿಣ ಮತ್ತು ಮೆಗ್ನಿಸಿಯಂ ಆಮ್ಲಗಳ ಪ್ರಭಾವದಿಂದ ಮಣ್ಣಿನಿಂದ ಕ್ಷಾಲನಗೊಂಡಿದೆ.

೩) ಉತ್ತರ ಅಮೇರಿಕಾ ಮತ್ತು ಯೂರೋಪ್ ದೇಶಗಳಲ್ಲಿ ಅರಣ್ಯ ಮತ್ತು ಬೆಳೆಗಳು ನಾಶಹೊಂದಿ, ಕೃಷಿ ಉತ್ಪನ್ನಗಳಲ್ಲಿ ಕ್ಷೀಣತೆ ಎದುರಿಸಿವೆ. ಉತ್ತರ ಅಮೇರಿಕದ ಕಾರ್‍ಖಾನೆಗಳು ಉತ್ಸರ್‍ಜಿಸಿದ ಮಲಿನಕಾರಕಗಳಿಂದ ಉಂಟಾದ ಆಮ್ಲಮಳೆಯಿಂದ ಕೆನಡಾದ ಬೆಳೆ ಮತ್ತು ಅರಣ್ಯಗಳು ನಾಶಹೊಂದಿವೆ.

೪) ಬಟಾಣಿ, ಬೀನ್ಸ್, ಆಲೂಗಡ್ಡೆ, ಮೂಲಂಗಿ, ಗಜ್ಜರಿ ಇತ್ಯಾದಿ ಸಸ್ಯಗಳ ಬೆಳವಣಿಗೆ ಕುಂಠಿತಗೊಳಿಸಿದೆ. ದ್ಯುತಿಸಂಶ್ಲೇಷಣೆ ಕ್ರಿಯೆ ಮೇಲೆ ಪರಿಣಾಮ ಬೀರಿ, ರೋಗ ಮತ್ತು ಸುಳಿಗಾಳಿಗಳಿಗೆ ಕಾರಣವಾಗಿದೆ.

೫) ಜಪಾನ್‌ನಲ್ಲಿ ೫,೦೦೦ ಚ.ಕಿ.ಮೀ. ಪ್ರದೇಶದ ಸಿಡಾರ್‍ ಮರಗಳು ನಾಶಹೊಂದಿವೆ.

ಸರೋವರ ಪರಿಸರ ವ್ಯವಸ್ಥೆಯ ಮೇಲೆ

೧) ಆಮ್ಲಮಳೆಯು ಕೊಳ್ಳ, ನದಿ, ಸರೋವರಗಳಲ್ಲಿ ಶೇಖರವಾಗಿ ಹಲವು ಸಮಸ್ಯೆಗಳಿಗೆ ಕಾರಣವಾಗಿದೆ. ಇದರಿಂದ ಮೀನುಗಳು, ಶೈವಲ ಸಸ್ಯಗಳು, ಕೀಟಗಳ ನಾಶಕ್ಕೆ ಕಾರಣವಾಗಿದ್ದು, ಆಹಾರ ಸರಪಳಿ (Food-chain) ಮೇಲೆ ಪರಿಣಾಮ ಬೀರಿದೆ.

೨) ಆಮ್ಲಮಳೆಯಿಂದ ಸರೋವರಗಳ ಸೂಕ್ಷ್ಮ ಸಸ್ಯಗಳು ನಾಶ ಹೊಂದಿವೆ. ಸ್ನೇಲ್ ಓಮಿಸ್ಟರ್‌ಗಳ ದೇಹದ ಕ್ಯಾಲ್ಸಿಯಂ ಕಾರ್‍ಬೊನೇಟ್‌ಗಳ ಕವಚ ಕರಗಿ ಅವು ನಾಶವಾಗಿವೆ.

೩) ಮೀನುಗಳ ಸಂಖ್ಯೆ ಕ್ಷೀಣವಾದಂತೆ ಅವು ತಿನ್ನುವ ಸೊಳ್ಳೆ, ಪ್ಲೈ ಮತ್ತಿತರ ಜಲಕೀಟಗಳ ಸಂಖ್ಯೆ ವೃದ್ಧಿಯಾಗಿದೆ.

ಮಾನವನ ಮೇಲೆ

ಆಮ್ಲೀಯತೆಯು ಮಾನವನ ನರವ್ಯವಸ್ಥೆ, ಉಸಿರಾಟ ವ್ಯವಸ್ಥೆ ಮತ್ತು ಪಾಚಕ ವ್ಯವಸ್ಥೆಗಳ ಮೇಲೆ ಪರಿಣಾಮ ಬೀರಿ, ನರಸಂಬಂಧೀ ರೋಗಗಳಿಗೆ ಬೇಗನೇ ತುತ್ತಾಗುವಂತೆ ಕ್ಷೀಣಗೊಳಿಸುತ್ತದೆ. ಇದಕ್ಕೆ ಕಾರಣವೇನೆಂದರೆ ಈ ಆಮ್ಲಗಳು ಅತಿ ಅಪಾಯಕಾರಿ ವಸ್ತುಗಳನ್ನು ಬಿಡುಗಡೆ ಮಾಡುತ್ತವೆ. ಅವು ನೀರನ್ನು ಮಲಿನಗೊಳಿಸಿ ಮಾನವನ ದೇಹವನ್ನು ಸೇರುತ್ತವೆ.

ಹವಾ ಮಲಿನಕಾರಕಗಳೊಂದಿಗೆ ಆಮ್ಲಮಳೆಯು ಮಿಶ್ರಿತವಾಗಿ ಕಣ್ಣಿನ ದೋಷಗಳನ್ನು ತರಬಲ್ಲದು.

ನಿರ್‍ಜೀವ ವಸ್ತುಗಳ ಮೇಲೆ

೧) ಆಮ್ಲಮಳೆಯು ಕಟ್ಟಡಗಳಿಗೆ ಮತ್ತು ಮಾರ್‍ಬಲ್, ಸುಣ್ಣಕಲ್ಲು, ಗಾರೆ ಮತ್ತು ಸ್ಲೇಟ್ ಇತ್ಯಾದಿಗಳಿಂದ ಕಟ್ಟಲ್ಪಟ್ಟ ವಸ್ತುಗಳಿಗೆ ಹಾನಿಯುಂಟು ಮಾಡುತ್ತದೆ. ಜಗತ್ಪ್ರಸಿದ್ಧ ತಾಜಮಹಲ್ ವಿಗ್ರಹವು ಆಮ್ಲಮಳೆಗೆ ಸಿಕ್ಕಿ ತನ್ನ ಹೊಳಪನ್ನು ಕಳೆದುಕೊಂಡಿದೆ. ಇದಕ್ಕೆ ಕಾರಣ ಮಥುರಾದ ತೈಲ ಸಂಸ್ಕರಣ ಘಟಕದಿಂದ ಪ್ರತಿದಿನ ಹಲವು ಟನ್ ಗಂಧಕದ ಡೈಆಕ್ಸೈಡ್ ಅನಿಲ ಹೊರಬರುತ್ತದೆ.

೨) ಜಗತ್ಪ್ರಸಿದ್ಧ ಸೇಂಟ್ ಪಾಲ್ ಕೆಥಡ್ರಾಲ್‌ನಲ್ಲಿಯ ಅತ್ಯಮೂಲ್ಯ ಕಲ್ಲಿನ ಕುಸುರಿ ಪ್ರತಿ ೧೦೦ ವರ್‍ಷಕ್ಕೆ ಇಂಚಿನಷ್ಟು ಹಾಳಾಗುತ್ತಿದೆ. ಗ್ರೀಸ್ ಮತ್ತು ಇಟಲಿಯ ಅತ್ಯಮೂಲ್ಯ ಕಲ್ಲಿನ ವಿಗ್ರಹಗಳು ಮತ್ತು ಜಗತ್ಪ್ರಸಿದ್ಧ ಲಿಬರ್‍ಟಿ ವಿಗ್ರಹ ತಮ್ಮ ಹೊಳಪನ್ನು ಕಳೆದುಕೊಂಡಿವೆ.

೩) ಆಮ್ಲಮಳೆಯು ಮನೆಗಳು, ವಿಗ್ರಹಗಳು, ಸ್ಮಾರಕಗಳು, ಸೇತುವೆಗಳು, ಸೀಳುವಂತೆ ಮಾಡಿದೆ. ಇದರಿಂದ ವರುಷಕ್ಕೆ ೧೪೫ ಮಿಲಿಯನ್ ಡಾಲರ್‍ ಹಣ ನಷ್ಟವಾಗುತ್ತದೆ. ಬ್ರಿಟಿಶ್ ಪಾರ್‍ಲಿಮೆಂಟ್ ಕಟ್ಟಡ H2SO4 ಮಳೆಯಿಂದ ಧ್ವಂಸಗೊಂಡಿದೆ.

೪) ಆಮ್ಲೀಯತೆಯ ಪ್ರಭಾವದಿಂದ ಅಲ್ಯುಮಿನಿಯಂ, ಮ್ಯಾಂಗನೀಸ್, ಪಲ್ಲಾಡಿಯಂ, ಕ್ಯಾಡಮಿಯಂ, ಕ್ರೋಮಿಯಂ ಮತ್ತು ಕಾಪರ್‌ಗಳಂತಹ ಭಾರಲೋಹಗಳ ಮಟ್ಟ ನೀರಿನಲ್ಲಿ ಪ್ರಮಾಣಕ್ಕಿಂತ ಹೆಚ್ಚಾಗಿ ಕಟ್ಟಡಗಳ ಮೇಲೆ ಪರಿಣಾಮ ಬೀರುತ್ತದೆ.

ಭಾರತದಂತಹ ಅಭಿವೃದ್ಧಿಶೀಲ ದೇಶವು ಆಮ್ಲ ಮಳೆಯಂತಹ ಸಮಸ್ಯೆ ಎದುರಿಸಬೇಕಾಗಿ ಬಂದಿದೆ. ದೆಹಲಿ, ಮುಂಬಯಿ, ಪುಣೆ ಮತ್ತು ಕಲಕತ್ತಾ ನಗರಗಳ ಕೈಗಾರಿಕಾ ಪ್ರದೇಶಗಳಲ್ಲಿ ಮಳೆಯ ನೀರಿನಲ್ಲಿರುವ ಆಮ್ಲದ ಪ್ರಮಾಣವು ಈಗಾಗಲೇ ಅಪಾಯದ ಮಟ್ಟವನ್ನು ಮೀರಿದೆ.

ಭಾರತದಲ್ಲಿ ಕಲ್ಲಿದ್ದಲಿನಿಂದ ಉರಿಯುವ ಉಷ್ಣ ಸ್ಥಾವರಗಳು ಮತ್ತು ಪೆಟ್ರೋಲಿಯಂ ರಿಫೈನರಿಗಳಿಂದಾಗಿ ಸಲ್ಫರ್‍ ಡೈಆಕ್ಸೈಡ್ ವರುಷಕ್ಕೆ ೮೫ ಟನ್ ಹೊರಬರುತ್ತಿದೆ. ಒಂದು ಅಧ್ಯಯನದ ಪ್ರಕಾರ ದೆಹಲಿಯಲ್ಲಿ ೬.೨೧, ಕೊಲ್ಕತ್ತಾದಲ್ಲಿ ೫.೮೦, ಚೆನ್ನೈನಲ್ಲಿ ೫.೮೫, ಹೈದರಾಬಾದಿನಲ್ಲಿ ೫.೭೩ ಮತ್ತು ಮುಂಬಯಿಯಲ್ಲಿ ೪.೮೦ ಆಮ್ಲಮಳೆಯ ಸರಾಸರಿ ಪಿ.ಎಚ್. ಅಂಶವಾಗಿದೆ. ಹಲವು ಕಾರ್‍ಖಾನೆಗಳು, ಹೊಸ ಥರ್‍ಮಲ್ ಪವರ್‍ ಪ್ಲಾಂಟ್‌ಗಳು ಸಲ್ಫರ್‍ ಆಕ್ಸೈಡ್‌ಗಳನ್ನು ವಿಸರ್‍ಜಿಸುವುದರಿಂದ ಮತ್ತು ಕಲ್ಲಿದ್ದಲು ಬಳಸುವುದರಿಂದ ಈ ಪರಿಸ್ಥಿತಿಯು ಇನ್ನೂ ಭೀಕರವಾಗಬಹುದು.

ನಾವು ಪ್ರತಿ ಬಾರಿ ಒಲೆ ಹೊತ್ತಿಸಲು, ಬೀಡಿ, ಸಿಗರೇಟು ಸೇದಲು ಕಡ್ಡಿ ಗೀರಿದಾಗ ಅದರಿಂದ ಪರಿಸರಕ್ಕೆ ಧಕ್ಕೆಯುಂಟಾಗುತ್ತದೆ. ಬೆಂಕಿ ಕಡ್ಡಿಯ ಮದ್ದಿನಲ್ಲಿಯ ಗಂಧಕ ಉರಿದಾಗ ಅದು ‘ಆಮ್ಲ ಮಳೆ’ಗೆ ಕೊಡುಗೆ ನೀಡುತ್ತದೆ.

ನಿಯಂತ್ರಣ

ಗಂಧಕದ ಡೈಆಕ್ಸೈಡ್, ಸಾರಜನಕ ಆಕ್ಸೈಡ್‌ಗಳು ವಾಯು ಮಂಡಲ ಸೇರುವುದನ್ನು ನಿಯಂತ್ರಿಸಬೇಕು. ಫಾಸಿಲ್ ಇಂಧನ (ಪೆಟ್ರೋಲ್, ಡೀಜಲ್, ಕಲ್ಲಿದ್ದಲು) ಉರುವಲು ಕಡಿಮೆ ಮಾಡಬೇಕು.

ಹಳ್ಳಕೊಳ್ಳ ಮತ್ತು ಸರೋವರಗಳನ್ನು ಆಮ್ಲ ಮಳೆಯಿಂದ ರಕ್ಷಿಸುವುದು ಅತಿ ಕಷ್ಟಕರ. ಆಮ್ಲಮಳೆಯ ಪರಿಣಾಮವನ್ನು ಸುಣ್ಣ ಉಪಯೋಗಿಸಿ ರಕ್ಷಿಸಬಹುದು. ಕೃಷಿಕರು ಹೊಲದಲ್ಲಿ ಮಣ್ಣಿಗೆ ಸುಣ್ಣ ಸಿಂಪರಿಸಿ ಬೆಳೆಗಳನ್ನು ಕೊಂಚಮಟ್ಟಿಗೆ ರಕ್ಷಿಸಬಹುದು. ಇದು ತಾತ್ಕಾಲಿಕ ಹಾಗೂ ಅತಿ ಲಿಚನನ ಒಂದು ಕ್ರಿಯೆಯಾಗಿದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಡಿಕ್ಷನರಿ
Next post ಅನ್ನದಾತನೆ ನಿನಗೆ

ಸಣ್ಣ ಕತೆ

 • ಶಾಕಿಂಗ್ ಪ್ರೇಮ ಪ್ರಕರಣ

  ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ.… Read more…

 • ಕರೀಮನ ಪಿಟೀಲು

  ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…

 • ಮುಗ್ಧ

  ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…

 • ಏಡಿರಾಜ

  ಚಲೋ ವಂದು ಅರಸು ಮನಿ, ಗಂಡ-ಹೆಂಡ್ತಿ ದೊಡ್ಡ ಮನ್ತಾನದಲ್ ಆಳ್ಕತಿದ್ರು. ಆವಾಗೆ ಆ ಅರಸೂಗೆ ಗಂಡ್ ಹುಡ್ಗರಿಲ್ಲ. ಸಂತತ್ಯಲ್ಲ, ಇದ್ರದು ನಿಚ್ಚಾ ಕೆಲ್ಸಯೇನಪ್ಪ ಅರಸು ಹಿಂಡ್ತಿದು, ಮನಿ… Read more…

 • ಡಿಪೋದೊಳಗಣ ಕಿಚ್ಚು…

  ಚಿತ್ರ: ವಾಲ್ಡೊಪೆಪರ್‍ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…

cheap jordans|wholesale air max|wholesale jordans|wholesale jewelry|wholesale jerseys