ಬದುಕುತ್ತೇನೆ ಗೆಳೆಯಾ
ನೀನಿಲ್ಲದೆಯೂ
ಬದುಕುತ್ತೇನೆ ನಾನು ನಾನಾಗಿ
ನಶ್ವರದ ಪಯಣದಲಿ
ಅಗಲುವಿಕೆ ಅನಿವಾರ್ಯತೆ
ಒಂಟಿತನ ಸಹಜ ತಾನೇ
ಅದೆಷ್ಟು ಸಿಹಿಯಾಗಿದ್ದೆ ಸಕ್ಕರೆಯಂತೆ
ಸವಿಯಾಗಿ ಮಾತನಾಡಿ
ಹೊಂಗನಸಿನಲಿ ತೇಲಾಡಿಸಿ
ಅಣುಅಣುವಿನಲ್ಲಿ ನೀನಾಗಿದ್ದೆ
ಅತಿಯಾದರೆ ಅಮೃತವೂ ವಿಷ
ಅರಿವಾದದ್ದು ನಿನ್ನಿಂದಲೇ
ವಾಮನನಂತಿದ್ದ ನೀನು
ದೇಹದ ಕಣಕಣಗಳನ್ನೆಲ್ಲಾ ವ್ಯಾಪಿಸಿ
ತ್ರಿವಿಕ್ರಮನಾಗಿ ಬೆಳೆದಾಗಲೇ
ನಿಜಸ್ವರೂಪದ ಅರಿವು
ಅಸ್ತಿತ್ವವನ್ನೇ ಬುಡಮೇಲು ಮಾಡಿ
ಪತನದತ್ತ ಹೆಜ್ಜೆ ಇರಿಸುತ್ತಿರುವ
ನಿನ್ನ ಬಿಡದೆ ಗತ್ಯಂತರವಿಲ್ಲ
ಗೆಳೆಯಾ ನಾನು ಬದುಕಬೇಕಲ್ಲ.
*****