ಹಿಂದೂಮುಸಲ್ಮಾನರ ಐಕ್ಯ – ೫

ಹಿಂದೂಮುಸಲ್ಮಾನರ ಐಕ್ಯ – ೫

ಮುಂದೆ ಕೆಲ ದಿನಗಳ ತರುವಾಯ ಒಂದು ದಿನ ರಾತ್ರಿ ಗುಲಾಮ ಆಲಿಯು ಆ ನೂತನ ಚಂಡಿನಂಣಪದ ಪ್ರಾಂಗಣದಲ್ಲಿ ಯಾವನೊಬ್ಬ ತರುಣ ಯವನನ ರುಂಡವನ್ನು ತನ್ನ ಕೈಯೊಳಗಿನ ಹದನಾದ ಖಡ್ಗದಿಂದ ಕತ್ತರಿಸಿ, ಒಳ್ಳೇ ದ್ವೇಷದಿಂದ ಆ ರುಂಡದ ಕಡೆಗೆ ನೋಡುತ್ತಿರಲು, ದೇವಿ ಮಂದಿರದಿಂದ ಬರುತ್ತಿದ್ದ ಮಾಯೆಗೆ ಆ ಭೀಷಣ ದೃಶ್ಯವು ಕಾಣಿಸಿತು ಆಗ ಅವಳು ಲಗುಬಗೆಯಿಂದ ಜಹಗೀರದಾರನೆಡೆಗೆ ಬಂದು: “ಜಹಗೀರದಾರರೇ, ಇದೇನು ಮಾಡುವಿರಿ? ನಿಮ್ಮ ಸರ್ವಸ್ವವನ್ನೂ ಘಾತಮಾಡಿಕೊಳ್ಳುವ ಇದೆಂಥ ನಿಂದ್ಯ ಕೆಲಸವನ್ನು ಮಾಡಿ ಬಿಟ್ಟಿರಲ್ಲ! ಈ ನಿಮ್ಮ ದುಷ್ಕೃತಿಗೆ ಎಂಥ ದುಷ್ಟ ಫಲಗಳುಂಟಾದಾವೆಂದು ಯಾರು ಹೇಳಬೇಕು? ನಿಮ್ಮ ಕೈಯಲ್ಲಿ ಹಿಡಿದಿರುವ ಈ ರುಂಡಕ್ಕೆ ಪ್ರತಿಯಾಗಿ ನೀವು ನಿಮ್ಮ ಸ್ವಂತದ ರುಂಡವನ್ನು ಅರ್‍ಪಿ ಬೇಕಾಗುವದಲ್ಲದೆ, ನಿಮ್ಮ ಆಸ್ತಿ-ಪಾಸ್ತಿಗಳೂ, ಪ್ರಿಯಕರ ಪ್ರಜಾಗಣವೂಸ ಮಣ್ಣು ಪಾಲಾಗುವ ಪ್ರಸಂಗ ಒದಗಿತ್ತಲ್ಲ? ಈ ಸಹಸ್ರಶೀರ್ಷದ ಕಾಲ ಕೂಟನನ್ನು ನೀವೇಕೆ ತಡವಿದಿರಿ? ನನ್ನನ್ನು ರಕ್ಷಿಸುವ ಸಲುವಾಗಿ ನೀವೀ ನಿಂದ್ಯ ಕೆಲಸವನ್ನು ಕೈಕೊಳ್ಳತಕ್ಕದ್ದಿದ್ದಿಲ್ಲ ನನಗೆ ಇಂಥ ನೀಚರಿಂದ ಆಗುವದೇನು? ನಮ್ಮ ಮಹಾಮಾಯೆಯು ಎಂಥ ದುರ್ಧರ ಸಂಕಟದಿಂದಲಾದರೂ ನನ್ನನ್ನು ರಕ್ಷಿಸಲು ಸಮರ್ಥಳಾಗಿರುತ್ತಾಳೆ. ಹೀಗಿರಲು, ವಿಕಾರವಶರಾಗಿ ನೀವಿದೆಂಥ ಹೇಸಿ ಕೆಲಸ ಮಾಡಿರುವಿರಲ್ಲ?” ಎಂದು ನುಡಿದಳು.

ತುಸ ಶಾಂತನಾಗಿ ಗುಲಾಮ ಆಲಿಯು :-ತಂಗೀ, ನೀನು ಹೀಗೆ ಹೇಳುವದು ಸ್ವಾಭಾವಿಕವಾಗಿರುತ್ತದೆ; ಆದರೆ ನಾನು ನನ್ನ ಭಾರ್ತೃವಾದ ಶಿವ ದಾಸನಿಗೆ ಮರಣಕಾಲಕ್ಕೆ ಕೊಟ್ಟ ವಚನಪಾಲಿಸುವದಕ್ಕೆಂದು ನನ್ನಿ ಕೃತಿಯು ಯಥಾರ್ಥವಾಗಿರುತ್ತದೆ. ನಿನ್ನ ಮನೋಧರ್ಮದ ಪ್ರಕಾರ ನಿನ್ನನ್ನು ರಕ್ಷಿಸುವವಳೂ ನಾಶ ಪಡಿಸುವವಳೂ ಮಹಾಮಾಯೆಯ ಎಂದು ನೀನನ್ನುವದು ಯೋಗ್ಯವಾಗಿರುತ್ತದೆ; ಆದರೆ ಕೇವಲಸಂಸಾರೋಪಾಧಿಗಳಿಂದ ಆವರಿಸಲ್ಪಟ್ಟ ನಾವು- ಸಂಸಾರಿಗಳು, ಎಲ್ಲ ವಿಷಯದಲ್ಲಿಯೂ ದೇವರಮೇಲೆ ಭಾರಹೊರಿಸುವದಿಲ್ಲ. ನಮ್ಮ ಕೈಯಿಂದ ನೀಗುವ ಕೆಲಸಗಳನ್ನೆಲ್ಲ ನಾವೇ ಮಾಡುತ್ತೇವೆಂದು ಅಭಿಮಾನ ವಹಿಸಿ, ಕೈಲಾಗದ ಕೆಲಸಗಳ ಭಾರವನ್ನು ಮಾತ್ರ ನಿರಭಿಮಾನದಿಂದ ದೇವರ ಮೇಲೆ ಹೊರಿಸಿ ಬಿಡುತ್ತೇವೆ. ಆದ್ದರಿಂದ ನಮ್ಮ ಈ ದ್ವಿಧಾ ವೃತ್ತಿಯಿಂದ ನಮಗೆ ಆಗಾಗ್ಗೆ ಎಷ್ಟೋ ಸಂಕಟಗಳು ಪ್ರಾಪ್ತವಾಗಿ, ನಾವು ಅವುಗಳ ಪ್ರಖರತೆಗೊಳಗಾಗಬೇಕಾಗುತ್ತದೆ. ಪ್ರಸ್ತುತದಲ್ಲಿ ನಾನು ನಿನ್ನನ್ನು ಸಂರಕ್ಷಿಸುವನೆಂಬ ಅಭಿಮಾನ ವಹಿಸಿರುವದರಿಂದಲೇ ನನ್ನಿಂದ ಈ ಹೇಯ ಕೃತ್ಯವು ಸಂಘಟಿಸಿರುತ್ತದೆ. ತಂಗೀ, ಮಾಯಾ, ಸಂಸಾರ ಧರ್ಮ ಪಾಲಿಸಲಿಕ್ಕೆ ಹೊಣೆಗಾರನಾದ ನಾನು, ನಿನ್ನ ಅಜ್ಜನಿಗೆ ಕೊಟ್ಟ ವಚನ ಪಾಲಿಸುವದಕ್ಕಾಗಿ, ನನ್ನ ಇಮಾನ ಕಾಯ್ದುಕೊಳ್ಳುವದಕ್ಕಾಗಿ ತಿಳಿದೂ ತಿಳಿದು ಈ ನೀಚ ಕಾರ್ಯಕ್ಕೆ ಪ್ರವೃತ್ತನಾಗಿರುತ್ತೇನೆ. ಲೋಕದಲ್ಲಿ ಹುಟ್ಟಿ ಬಂದ ಬಳಿಕ ಕೇವಲ ದೇವರ ದಾಸರಾಗಿ ಅವನ ಆಜ್ಞೆಯಂತೆ ನಡೆಯುವ ನಿನ್ನಂಥ ಮನುಷ್ಯರು ಉತ್ತಮ ಕೋಟಿಯಲ್ಲಿ ಗಣ್ಯರಾಗುತ್ತಾರೆ. ಅವರು ದೇವರ ಆಜ್ಞೆಯ ವಿನಃತಮ್ಮ ಯಾವ ಮನೋವಿಕಾರಗಳಿಗೂ ವಶರಾಗುವದಿಲ್ಲ; ಆದರೆ ತಂಗೀ, ನಮ್ಮಂಥ ಪಾಮರರು ವಿವಿಕ್ಷಿತ ಪ್ರಸಂಗಗಳಲ್ಲಿ ದೇವರ ಆಜ್ಞೆಯ ಮೇರೆಗೆ ನಡೆಯಬೇಕೆಂದೂ, ಮಿಕ್ಕ ಪ್ರಸಂಗಗಳಲ್ಲಿ ಸಂಸಾರಧರ್ಮಪಾಲನೆಗಾಗಿ ನಮ್ಮ ಬುದ್ದಿ ತೋಚಿದಂತೆ ನಡೆಯಬೇಕೆಂದೂ ಗೊತ್ತು ಮಾಡಿಕೊಂಡು, ಅದರಂತೆ ನಡೆಯುತ್ತ ಬಂದಿರುವರು. ಹೀಗೆ ಯಥಾ ರೀತಿಯಾಗಿ ಸಂಸಾರ ಸಾಗಿಸುವದಾದರೂ ಕಡಿಮೆ ಯೋಗ್ಯತೆಯ ಕೆಲಸವೆಂತಲ್ಲ; ಆದರೆ ಈ ಸಂಸಾರ ಧರ್ಮಪಾಲನ ಮಾಡುವಾಗ ಸಂಸಾರಿಯು ಸದಭಿಮಾನ, ಸದಾಚಾರ, ಸನ್ಮಾರ್ಗ ಪ್ರವರ್ತನೆ ಮುಂತಾದ ಸದ್ಗುಣಗಳಿಂದ ಪೋಷಿತನಾಗಿರ ಬೇಕಲ್ಲದೆ ದುರಭಿಮಾನ, ದುರಾಚಾರ, ದುರ್ಮಾರ್ಗ ನಿರತತೆ ಮೊದಲಾದ ದುರ್ಗಣಗಳಿಂದ ಆವರಿಸಿರಲಾಗದು. ತಂಗಿ, ಮಾಯಾ, ಸಂಸಾರಿಗಳಲ್ಲಿ ಎಲ್ಲ ಸದ್ಗುಣಗಳಿಗಿಂತಲೂ ಇಮಾನ ಕಾಯುವ ಶ್ರೇಷ್ಠ ಗುಣವೊಂದಿದ್ದರೆ, ಅವನು ಇಹ-ಪರಗಳಲ್ಲಿ ಅಖಂಡವಾದ ಸುಖಕ್ಕೆ ಪಾಲುಗಾರನಾಗುವನೆಂದು ನನ್ನ ದೃಢವಿಶ್ವಾವಿರುವದರಿಂದ, ನನ್ನ ಇಮಾನ ಕಾಯುವದಕ್ಕಾಗಿಯೇ ಸದ್ಯಕ್ಕೆ ನಾನೀ ನಿಂದ್ಯ ಕೆಲಸಮಾಡಿರುತ್ತೇನೆ. ದೃಶ್ಯತಃ ಇದರಿಂದ ಎಷ್ಟೋ ದುಷ್ಫಲಗಳುಂಟಾಗುವವೆಂದು ಅನಿಸಿದರೂ, ನನ್ನ ಖಂಬೀರವಾದ ಮನಸ್ಸಿಗೆ ಅವಾವುಗಳೂ ಲೇಪವಾಗಲಾರವೆಂದು ನನ್ನ ಮನೋಭಾವನೆಯಾಗಿರುತ್ತದೆ.”

ಶೋಣಿತ ರಂಜಿತವಾದ ಗುಲಾಮ ಆಲಿಯ ಎರಡೂ ಕೈಗಳನ್ನು ತನ್ನ ಕೈಗಳಿಂದ ಹಿಡಿದು, ಅಶ್ರುಪೂರ್ಣವಾದ ತನ್ನ ದೃಷ್ಟಿಯನ್ನು ಅವನ ದೃಷ್ಟಿ ಯೊಡನೆ ಬೆರೆಸಿ, ಮಾಯೆಯು:-“ಜಹಗೀರದಾರರೇ, ನನ್ನನ್ನು ಕ್ಷಮಿಸಿರಿ; ಬಿರಿನುಡಿ ನುಡಿದು ಸುಮ್ಮನೆ ನಿಮಗೆ ವ್ಯಥೆ ಕೊಟ್ಟಿದ್ದಕ್ಕಾಗಿ ಸಂಪೂರ್ಣವಾಗಿ ಕ್ಷಮಿಸಬೇಕೆಂದು ಈ ನಿಮ್ಮ ದೀನ ಮಾಯೆಯು ಬೇಡಿಕೊಳ್ಳುತ್ತಾಳೆ, ಇಮಾನವನ್ನೆ ಶ್ರೇಷ್ಠವೆಂದು ತಿಳಿದಿರುವ ನೀವು, ಎಂಥ ಪ್ರಸಂಗಕ್ಕೂ ಅಂಜದೆ ನಿಮ್ಮ ಇಮಾನವನ್ನು ಕಾದುಕೊಂಡಿರುತ್ತೀರಿ, ಜಹಗೀರದಾರರೇ, ಅತ್ತ ನೋಡಿರಿ; ಅಲ್ಲಿ ಮಹಾಮಾಯೆ ನಿಂತಿರುತ್ತಾಳೆ ಆಕೆಯ ಸಾಕ್ಷಿಯಾಗಿ ನೀವು ನಿಮ್ಮ ಇಮಾನವನ್ನು ಕಾದುಕೊಂಡಿರುತ್ತೀರಿ. ನಿಮ್ಮ ಪೂಜ್ಯ ಇಮಾನವನ್ನು ಕಾಯುವದಕ್ಕಾಗಿ ನೀವೇ ಮಹತ್ಸಂಕಟವನ್ನು ನಿಮ್ಮ ಮೇಲೆ ಎಳಕೊಂಡಿದ್ದರೂ, ಆ ಮಹಾಮಾಯೆಯು ಈ ಸಂಕಟದಿಂದ ನಿಮ್ಮನ್ನು ಸುಲಭವಾಗಿ ಪಾರುಗಾಣಿಸುವಳು!”

ಮಾಯೆಯ ಈ ಭಾಷಣವನ್ನು ಕೇಳಿ ಗುಲಾಮ ಆಲಿಯ ಕೈಖಡ್ಗವು ಕಳಚಿಬಿತ್ತು. ಕೂಡಲೆ ಅವನು ತನ್ನ ರಕ್ತರಂಜಿತ ಹಸ್ತಗಳನ್ನು ಮಾಯೆಯ ತಲೆಯಮೇಲಿಟ್ಟು:-ತಂಗೀ, ನನ್ನ ಇಮಾನ ರಕ್ಷಿಸಲಿಕ್ಕೆ ಸಹಾಯಕಾರಣಿಯಾದ ಆ ನಿನ್ನ ಮಹಾ ಮಾಯೆಯು ನನಗೇನೂ ಕಡಿಮೆ ಮಾಡಿರುವದಿಲ್ಲ. ಧನ, ದೌಲತ್ತು, ಅಧಿಕಾರ ಮುಂತಾದವುಗಳು ಬೇಕಾದಷ್ಟಿರುತ್ತವೆ; ಅಲ್ಲದೆ ಗೃಹಸೌಖ್ಯಕ್ಕೂ ಕೊರತೆಯಿಲ್ಲ. ಆದ್ದರಿಂದ ನನಗೆ ಆಕೆಯ ಇನ್ನಾವ ಕೃಪಾಪೇಕ್ಷೆಯೂ ಇರುವದಿಲ್ಲ. ಇಷ್ಟೇ ಅಲ್ಲ, ಅವಳನ್ನು ಪ್ರಾರ್ಥಿಸಿ, ಈ ಮಹತ್ಸಂಕಟದಿಂದ ಮುಕ್ತನಾಗಬೇಕೆಂಬ ಹಂಬಲ ಕೂಡ ನನಗಿರುವದಿಲ್ಲ; ಆದರೆ ನಿಷ್ಕಾಮದಿಂದ ಆ ಜಗದ್ಧಾತ್ರಿಯನ್ನು ಮನ್ನಿಸಿ ಕೊಂಡಾಡುವದು ನನ್ನ ಕರ್ತವ್ಯವಾಗಿರುವದರಿಂದ, ಮಾಯಾ, ಬಾ; ಆ ನಿನ್ನ ಮಹಾ ಮಾಯೆಯ ಅಡಿದಾವರೆಗಳಿಗೆರಗುವಾ ಬಾ ಎಂದು ಗದ್ಗದಕಂಠದಿಂದ ನುಡಿದು ಗುಲಾಮ ಆಲಿಯು ಮಾಯೆಯೊಡನೆ ಎದುರಿಗಿನ ಚಂಡೀಮಂಟಪಕ್ಕೆ ತೆರಳಿದನು.

ಯಾವ ಯುವಕನ ರುಂಡವು ಗುಲಾಮ ಅಲಿಯ ಖಡ್ಗದಿಂದ ಧರೆಗಿಳಿಸಲ್ಪಟ್ಟಿತ್ತೂ ಆ ಹತಭಾಗಿಯು ಬಂಗಾಲದ ನವಾಬನಾದ ಮಜೀದಖಾನನ ಮಕ್ಕಳಲ್ಲಿ ಒಬ್ಬನಾದ ಯಾಕೂಬಖಾನನು. ಈ ಯಾಕೂಬಖಾನನ ಕಡೆಗೇ ಆಗ ಗುಲಾಮ ಅಲಿಯ ಜಹಗೀರನ ಇಲಾಖೆಯ ಫೌಜದಾರಿಯ ಕೆಲಸವಿತ್ತು. ಸರಕಾರೀ ಕೆಲಸದ ಸಲುವಾಗಿ ಕೆಲವು ದಿನಗಳಿಂದ ಯಾಕೂಬನು ಗುಲಾಮ ಆಲಿಯ ಪಟ್ಟಣಕ್ಕೆ ಬಂದಿದ್ದನು. ಬಂಗಾಲದ ನವಾಬನು ಈ ಜಹಗೀರದಾರನ ಸ್ವಾಮಿಯು. ಸ್ವಾಮಿಪುತ್ರನು ಬಂದಿರಲು, ಗುಲಾಮ ಆಲಿಯು ಅನೇಕ ಪ್ರಕಾರದ ಉತ್ಸವಾದಿಗಳಿಂದ ಅವನನ್ನು ಬರಮಾಡಿಕೊಂಡು, ಉಪ ಚರಿಸಿದನು, ಒಂದು ದಿನ ಆ ನವಾಬ ಪುತ್ರನು ತನ್ನ ಕೆಲ ಜನ ಗೆಳೆಯರೊಡನೆ ನೌಕಾವಿಹಾರಕ್ಕೆ ಹೊರಟನು. ಗುಲಾಮ ಅಲಿಯು ಶಿವದಾಸನಿಂದ ಮಾಯೆಯ ಸಲುವಾಗಿ ನಿರ್ಮಿಸಿದ ಗಂಗಾತೀರದ ನೂತನ ಚಂಡೀ ಮಂಟಪದ ಬಳಿಗೆ ಅವನ ಆ ನೌಕೆ ಬಂದಾಗ ಸಾಯಂಕಾಲದ ಸ್ನಾನಕ್ಕಾಗಿ ಮಾಯೆಯು ಅಲ್ಲಿಯ ಘಾಟಿಗೆ ಹೋಗಿದ್ದಳು. ಶುಭ್ರ ವಸನ ಪರಿವೇಷ್ಟಿತಳೂ ಕಪ್ಪಾದ ಉದ್ದನ್ನ ಕೂದಲುಳ್ಳವಳೂ, ಬ್ರಹ್ಮಚರ್ಯದಿಂದ ಮಿನುಗುವ ಸ್ವರೂಪದವಳೂ ಆದ ಮಾಯೆಯ ಸುಂದರ ರೂಪದಿಂದ ಆ ಕುಟಿಲ ಹೃದಯದ ನಬಾಬಪುತ್ರನು ಮುಗ್ಧನಾದನು. ನಂತರ ಸಂಗಡಿಗರ ಅನುಸಂಧಾನದಿಂದ ಅವನಿಗೆ ಮಾಯೆಯ ಜೀವನ ಚರಿತ್ರೆ ತಿಳಿದು ಬಂದಿತು. ಅವಳು ಒಳ್ಳೆ ನಿಕಟ ಬ್ರಹ್ಮಚಾರಿಣಿಯೆಂಬದು ಅವನಿಗೆ ತಿಳಿದರೂ, ಅವನ ಮನಸ್ಸಿನಲ್ಲಿ ಹುಟ್ಟಿದ ಆಕೆಯ ವಿಷಯದ ಲಾಲಸ ಕಡಿಮೆಯಾಗಲಿಲ್ಲ. ಆಗ ಅವನು ಅವಳನ್ನು ಆ ಕಠಿಣ ವ್ರತದಿಂದ ಬಿಡಿಸಿ ತನ್ನವಳನ್ನಾಗಿ ಮಾಡಿಕೊಂಡರೆ, ತನಗೆ ಕೊಂಚವೂ ಪಾಪ ತಟ್ಟದೆ, ಒಬ್ಬ ಅನಾಥ ಹಿಂದೂ ವಿಧವೆಯ ಕಠೋರ ನಿಷ್ಫಲ ಜೀವನವನ್ನು ಸುಖಮಯವಾಗಿ ಮಾಡಿದ ಪುಣ್ಯವು ಲಭಿಸಿ, ಉಭಯತರೂ ಸುಖಿಗಳಾಗುವೆವೆಂದು ಭಾವಿಸಿದನು; ಆದರೆ ಈ ತನ್ನ ಸದ್ಭಾವನೆಗೆ ಗುಲಾಮ ಆಲಿಯು ಸಮ್ಮತಿಸಲಿಕ್ಕಿಲ್ಲವೆಂಬದೂ, ತಾನು ಆಕೆಯನ್ನು ಹರಣ ಮಾಡಲೆತ್ನಿಸಿದರೆ, ಈ ಧೀರ ಆಲಿಯು ತನಗೆ ವ್ಯತ್ಯಯವನ್ನುಂಟುಮಾಡಬಹುದೆಂಬದೂ ಅವನಿಗೆ ಚೆನ್ನಾಗಿ ಗೊತ್ತಿತ್ತು. ಅದರಿಂದ ಅವನು ತನ್ನ ಆ ಕೃತ್ಯದ ಸುದ್ದಿ ಬೇರೆ ಯಾರಿಗೂ ತಿಳಿಯದ ಹಾಗೆ ಗುಪ್ತ ವಾಗಿರಿಸಿದನು. ಒಂದು ದಿನ ಮಧ್ಯರಾತ್ರಿಯಲ್ಲಿ ನೌಕಾ ವಿಹಾರಕ್ಕೆಂದು ಹೊರಟ ಆತನು ಆ ಚಂಡೀ ಮಂಟಪಕ್ಕೆ ಬಂದನು; ಆದರೆ ಈ ಗುಪ್ತ ಸುದ್ದಿ ಯು ಅವನ ತೆನಾತಿನೊಳಗಿನ ಒಬ್ಬ ವೃದ್ಧ ಅಧರ್ಮಭೀರುವಿಗೆ ಗೊತ್ತಾದ ಕೂಡಲೆ, ಅವನು ಆಗಬಂದು ಅದನ್ನು ಗುಲಾಮ‌ಆಲಿಗೆ ತಿಳಿಸಿದನು.

ಮಾಯೆಯನ್ನು ನವಾಬ ಪುತ್ರನು ಭ್ರಷ್ಟಗೊಳಿಸುವ ಹವ್ಯಾಸದಲ್ಲಿರುವನೆಂಬ ಸುದ್ದಿ ತಿಳಿದ ಕೂಡಲೆ ಗುಲಾಮ ಆಲಿಯು ಸಿಟ್ಟು ಬೆಂಕಿಯಾದನು! ಅವನು ಆ ಕ್ಷಣವೇ ತನ್ನ ಎಲ್ಲ ದಂಡಾಳುಗಳನ್ನು ಸಶಸ್ತ್ರವಾಗಿ ಹೊರಡಿಸಿಕೊಂಡು ಬರಲಿಕ್ಕೆ ತನ್ನ ದಂಡಿನ ಮುಖ್ಯಸ್ತನಿಗೆ ತಿಳಿಸಿ, ತಾನು ಹಿರಿದ ಕತ್ತಿಯನ್ನು ಹಿಡಕೊಂಡು ತ್ವರಿತಗತಿಯಿಂದ ಆ ದೇವಾಲಯವನ್ನು ಹೊಕ್ಕು ನವಾಬಪುತ್ರನ ಅನುಚರರನ್ನು ಹೊಡೆದೋಡಿಸಿ, ಇನ್ನು ಮಾಯೆಯನ್ನು ಹಿಂದಿನಿಂದ ಹೋಗಿ ಹಿಡಿದೆಳೆಯಲಿಕ್ಕೆ ಹವಣಿಸಿದ್ದ ಆ ಯಾಕೂಬಖಾನನ ರುಂಡವನ್ನು ಮೇಲೆ ವಿವರಿಸಿದಂತೆ ಮುಂಡದಿಂದ ಬೇರೆ ಮಾಡಿದನು!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹೋಗೋಣ ತೀರಕೆ
Next post ಮರಕುಟಿಗ

ಸಣ್ಣ ಕತೆ

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

  • ತಿಥಿ

    "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…

  • ಕರೀಮನ ಪಿಟೀಲು

    ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…

  • ಮೋಟರ ಮಹಮ್ಮದ

    ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…

cheap jordans|wholesale air max|wholesale jordans|wholesale jewelry|wholesale jerseys