Home / ಲೇಖನ / ಇತರೆ / ಮನೆ ಮೇಲೆ ಕಲ್ಲಿನ ಮಳೆಗರಿಯುವುದು

ಮನೆ ಮೇಲೆ ಕಲ್ಲಿನ ಮಳೆಗರಿಯುವುದು

೧೯೭೨ನೇ ಇಸವಿ ಯಲ್ಲಿ ಬಾಗಲಕೋಟೆಯಲ್ಲಿ ನಾನು ಬಿ.ಎ ಓದುತ್ತಿದ್ದಾಗ, ಒಂದು ಶಾಸ್ತ್ರೀ ಚಾಳದಲ್ಲಿ ರೂಮ್ ಮಾಡಿಕೊಂಡಿದ್ದೆ. ಪರೀಕ್ಷೆ ಹತ್ತಿರ ಬಂದಿದೆ ಎಂದು ಗಾಢವಾಗಿ ಓದುತ್ತಿದ್ದೆ. ದಿಢೀರನೆ ನಮ್ಮ ಕೋಣೆಯ ಬಾಗಿಲು ಶಬ್ಬವಾಯಿತು. ಏನು? ಎಂದು ಬಾಗಿಲು ತೆಗೆದು ನೋಡಿದಾಗ, ನನ್ನ ಜೊತೆ ಓದುತ್ತಿದ್ದ ಸರಸ್ವತಿ ಎಂಬ ಹುಡುಗಿ ಆ ರಾತ್ರಿಯಲ್ಲಿ ಗರ ಬಡಿದಂತೆ ಮುಖ ಮಾಡಿಕೊಂಡು, “ಕವಿಗಳೇ, ಕವಿಗಳೇ ಬೇಗ ಬನ್ರಿ ನಮ್ಮನೆಗೆ” ಎಂದು ಕೇಳಿದಳು. ನನಗೆ ಗಾಬರಿ..! ಯೌವನಸ್ಥೆಯಾದ ಹುಡುಗಿ, ಏನಾದರೂ ಮಾಡಿಕೊಂಡು ಲೇಟಾಗಿ ಮನೆಗೆ ಹೋದಾಗ, ಮನೆಯವರೇನಾದ್ರೂ ಅಂದ್ರಾ? ನಾನು ಹೋಗಿ ಇವಳ ಪರ ವಹಿಸಬೇಕಾ? ಎಂದೆನಿಸಿತು. ಆದರೂ ಒಳ್ಳೆಯ ಹುಡುಗಿ ಯಾಕೆ ಹೀಗೆ…? ಮತ್ತೆ ಜೊತೆಗೆ ಇನ್ನೊಂದು ಭಯ ಶುರುವಾಯಿತು. ಅಕ್ಕಪಕ್ಕದಲ್ಲಿ ಇನ್ನೂ ಮೂರಾಲ್ಕು ರೂಮ್‍ಗಳಿದ್ದವು. ಈ ಸರಸ್ವತಿ ಈ ರಾತ್ರಿಯಲ್ಲಿ ಬಂದುದ್ದನ್ನು ನೋಡಿ, ಏನ್ ತಪ್ಪು ತಿಳ್ಕೊಂಡಿರಬಹುದು, ಎಂದು ಭಯ ಪಟ್ಟುಕೊಂಡು, ಒಳ ಕರೆದು ‘ಸರಸ್ವತಿ ಏನಾಯಿತೇಳು?’ ಎಂದು ಪ್ರಶ್ನಿಸಿದೆ.

ಆಗ ಅವಳು ನಿಧಾನವಾಗಿ ಕವಿಗಳೇ ದಿನಾಲೂ ಹನ್ನೊಂದು ಗಂಟೆಯಿಂದ ನಮ್ಮ ಮನೆ ಮೇಲೆ ಕಲ್ಲು ಮಳೆ ಬೀಳ್ತದೆ. ಸುಮಾರು ಒಂದು ತಿಂಗಳಾಯಿತು. ಇವತ್ತು ಬೇಗನೇ ಕಲ್ಲಿನ ಮಳೆ ಚಾಲುವಾಗಿದೆ. ಒಂದು ಕಲ್ಲು ನಮ್ಮಪ್ಪನ ತಲೆ ಮೇಲೆ ಬಿತ್ತು. ಹೆದರಿಕೊಂಡಿದ್ದಾರೆ. ಅದೇನಂತ ನೋಡ್ಲಿಕ್ಕೆ ನೀವು ಬರ್‍ಲೇಬೇಕು ಕವಿಗಳೆ ಎಂದು ಅಂಗಲಾಚಿದಳು. ನಾನು, ಆಯಿತಾಯಿತು ಬರ್‍ತೀನಿ. ನಾನೊಬ್ಬನೇ ಅಲ್ಲ, ಎಲ್ಲಾ ಗೆಳೆಯರನ್ನು ಕರ್‍ಕೊಂಡಿ ಬಡ್ತೀನಿ, ನೀನೊಬ್ಬಳೇ ಇಲ್ಲಿರಬಾರದು, ಹೋಗು ಮನೆಗೆ ಎಂದು ಕಳಿಸಿಕೊಟ್ಟು ಮೇಲಿರುವ ಗೆಳೆಯರೆಲ್ಲರನ್ನೂ ನನ್ನ ರೂಮ್ಗೆ ಕರೆಯಿಸಿದೆ.

ಈ ರಹಸ್ಯವನ್ನು ಹೇಗಾದರೂ ಮಾಡಿ ಬೇದಿಸಲೇಬೇಕು, ಮನೆ ಮೇಲೆ ಕಲ್ಲುಗಳು ಎಲ್ಲಿಂದ ಬೀಳ್ತವೆ? ಯಾಕೆ ಬೀಳ್ತವೆ? ಕಾರಣವಾದರೂ ಏನೂ? ಎನ್ನುವ ಸತ್ಯ ತಿಳಿದುಕೊಳ್ಳೋಣ. ನೀವು ನಿಧಾನವಾಗಿ ಸರಸ್ವತಿ ಮನೆಯ ಮೂಲೆ ಮೂಲೆಯಲ್ಲಿ ಯಾರಿಗೂ ಗೊತ್ತಾಗದಂತೆ ಹೋಗಿ ಕುಳಿತುಕೊಳ್ಳಬೇಕು, ಎಂದು ಹೇಳಿದೆ. ಅವರಿಗೆ ಇದು ಒಂದು ಸವಾಲಿನ ವಿಷಯವೆಂದು ನನ್ನ ಜೊತೆ ಬಂದು ಬಿಟ್ಟರು. ನಿಧಾನವಾಗಿ ಹೋಗಿ ಸರಸ್ವತಿ ಮನೆಯ ನಾಲ್ಕು ಮೂಲೆಯಲ್ಲಿ ಅವಿತುಕೊಂಡರು. ನಾನು ಸೀದಾ ಇವರ ಮನೆಗೆ ಹೋದೆ. ನಾನು ಹೋದಾಗ ಮತ್ತೆ ಕಲ್ಲುಗಳು ಪುನಃ ಬೀಳಲಾರಂಭಿಸಿದವು. ಭಯಗ್ರಸ್ಥರಾದ ಅವರ ತಂದೆಯವರು “ಇದು ಬಾನಾಮತಿಯ…. ಕೇಡುಗಾಲಕ್ಕೋ? ಎಂದು ನೋಡಲೇ ಬೇಕು ಕವಿಗಳೇ.. ಹೇಗಾದ್ರು ಮಾಡಿ ನೀವೆ ಇದಕ್ಕೆ ಉತ್ತರ ಹುಡುಕಬೇಕು” ಎಂದು ಕೈಚೆಲ್ಲಿ ಮೂಲೆಗೆ ಹೋಗಿ ಕುಳಿತುಕೊಂಡರು. ಮತ್ತೆ ಕಲ್ಲುಗಳು ಕಿಟಕಿಯಡೆಗೆ ಬಿದ್ದಾಗ ನಾನು ಲಗುಬಗೆಯಿಂದ ಅವರ ಮನೆ ಅಟ್ಟದ ಮೇಲೇರಿ ನಿಂತು, ಕಲ್ಲು ಬೀಳುವ ಸ್ಥಳವನ್ನು ಪರೀಕ್ಷಿಸಿ ಗೊತ್ತು ಮಾಡಿಕೊಂಡೆ. ಮತ್ತೆ ಪುನಃ ಎಡ ದಿಕ್ಕಿನಿಂದ ಕಲ್ಲು ಬಿದ್ದಾಗ “ಗೋಪಾಲ ಹಿಡ್ಕೋ..” ಎಂದೆ. ಬಲದಿಕ್ಕಿನಿಂದ ಕಲ್ಲು ರಭಸವಾಗಿ ಬಂದಾಗ “ರಾಜೇಶ ಹಿಡ್ಕೋ” ಎಂದೆಂದೆ. ಹೀಗೆ ನಾಲ್ಕು ದಿಕ್ಕಿನಿಂದ ಹಿಡ್ಕೋ ಎಂಬ ಧ್ವನಿಯನ್ನು ಕೇಳಿದ ನಮ್ಮ ಶಿಷ್ಯರು ಜಾಗೃತಗೊಂಡರು. ಸುತ್ತಲೂ ಪೊದೆಗಳು, ಬಿದ್ದು ಹೋದ ಮನೆಗಳಿದ್ದುದರಿಂದ ಅದರ ಮರೆಯಿಂದ ಚಾಲಾಕಿ ತನದಿಂದ ಕಲ್ಲುಗಳನ್ನು ಎಸೆಯುತ್ತಿದ್ದರು. ನಾನು ಗೋಪಾಲ, ರಾಜೇಶ, ಶ್ರೀನಿವಾಸ ಅಲ್ಲಿ ಅಲ್ಲಿ ಹಿಡ್ಕೊಳಿ ಎನ್ನುವಷ್ಟರಲ್ಲಿ ಅವರೆಲ್ಲರೂ ಸೇರಿ, ಮೂರು ಜನರನ್ನು ಕೈ ಹಿಂದೆ ಕಟ್ಟಿಕೊಂಡು, ಎಳೆದುಕೊಂಡು, ನನ್ನನ್ನು ಕೂಗಿದರು. ಅವರ್‍ಯಾರೇ ಇರಲಿ ಎಳೆದುಕೊಂಡು ಸರಸ್ವತಿ ಮನೆಗೆ ಕರ್‍ಕೊಬನ್ನಿ, ಎಂದು ಹೇಳಿ.. ಕೆಳಗಿಳಿದೆ. ನಮ್ಮ ಗೆಳೆಯರೋ ದಡೂತಿಗಳು. ನಾಲ್ಕು ಜನ ಬಂದರೂ… ಎತ್ತಿ ಬಿಸಾಕುವ ಶಕ್ತಿಯುಳ್ಳವರು.

ಹೀಗಾಗಿ ಎಳೆದುಕೊಂಡು ಸರಸ್ವತಿ ಮನೆಯೊಳಗೆ ಕರೆತಂದರು. ಅವರು ಬಂದ ಕೂಡಲೇ ಒಳಗಿನ ಚಿಲಕ ಹಾಕಿಕೊಂಡೆ. ಮನೆಯವರಿಗೆಲ್ಲಾ ಈ ಮುಠಾಳರ ಮೋಸ ಮಾಡಿದ್ದು? ಎಂದು ಬಯ್ಯಲಾರಂಭಿಸಿದರು. ನಾನು ಅವರನ್ನು ಸುಮ್ಮನಿರಿಸಿ, ಕಲ್ಲು ಹೊಡೆದ ಬಗೆಗಿನ ವಿಚಾರಣೆಯನ್ನು ತೀಕ್ಷ್ಣವಾಗಿ ಆರಂಭಿಸಿದೆವು. ಕೂಡಲೇ ಪೊಲೀಸರನ್ನು ಕರೆಸುತ್ತೇವೆ ಎಂದು ಹೆದರಿಸಿದೆವು. ನಮ್ಮ ಏಟು ತಾಳಲಾರದೆ, ಆಗ ಒಬ್ಬೊಬ್ಬರಾಗಿ ಬಾಯಿಬಿಡಲಾರಂಭಿಸಿದರು. ನಿಜ ಹೇಳುತ್ತೇವೆ, ಎಂದು ಕೈಕಾಲಿಗೆ ಬಿದ್ದು ಅಂಗಲಾಚಿದರು. ಅದರಲ್ಲೊಬ್ಬ ಮೀಸೆ ಬಂದ ಹುಡುಗ “ನಂದೇನು ತಪ್ಪಿಲ್ಲ ಸರ್…. ಪ್ಯಾಟೆಯಿಂದ ಬಂದಾನಲ್ಲಾ ಆ ಸಾಹುಕಾರ, ಅವನ ಮಗನೂ, ಈ ಸರಸ್ವತಿನೂ ಒಂದೇ ಕಡೆ ಓದುತ್ತಾರಂತೆ. ಇವಳಿಗೆ ಲವ್ ಮಾಡು ಅಂತ ಒತ್ತಾಯ ಮಾಡಿದ್ದಕ್ಕೆ, ಈ ಸರಸ್ವತಿ ಬೈದು, ಚಪ್ಪಲಿ ತೋರಿಸಿದಳಂತೆ. ಅದಕ್ಕೆ ಅವನಿಗೆ ರೋಷ ಹತ್ತಿ, ಏನಾದರೂ ಆಗಲಿ, ಅವಳನ್ನ ಲವ್ ಮಾಡ್ಲೇಬೇಕು, ಮದುವೆ ಆಗಬೇಕು ಎಂದು ಕೆಟ್ಟ ತೀರ್ಮಾನ ತೆಗೆದುಕೊಂಡು, ನಮಗೆ ಮೂರು ಜನಕ್ಕೂ ಒಂದೊಂದು ಸಾವಿರ ರೂಪಾಯಿ ಕೊಟ್ಟು ಹಿಂಗೆ ಮಾಡ್ರಿ ಅಂತ ಹೇಳಿದ. ಅದಕ್ಕೆ ನಾವು, ಈ ಏಳೆಂಟು ದಿವಸದಿಂದ ಇವರ ಮನೆ ಮೇಲೆ ಗೊತ್ತಾಗದಂಗೆ ಕಲ್ಲು ಹೊಡಿತಿದೀವಿ, ಎಂದ. ನಮ್ಮ ಗೆಳೆಯ “ಕಲ್ಲು ಹೊಡೆದ ಮಾತ್ರಕ್ಕೆ ಮನಸ್ಸು ಕರಗ್ತದಾ? ಇನ್ನೂ ಹೆಚ್ಚಾಗಲ್ವೇನೋ” ಎಂದು ಬದಲಾಯಿಸಿದ. ಆಗ, ಇನ್ನೊಬ್ಬ ಕಲ್ಲು ಹೊಡೆಯುವಾತ “ಸಾರು… ದಿನನಿತ್ಯ ಕಲ್ಲು ಹೊಡೆಯುವುದರಿಂದ ಯಾರೋ ಬಾನಾಮತಿ ಮಾಡಿಸಿದ್ದಾರಂತ ಇವರ ಮನಸ್ಸು ಕುಗ್ಗಿ ಹೋಗ್ತದಾ… ಮಾನಸೀಕವಾಗಿ ಕಾಯಿಲೆ ಬೀಳ್ತಾರ. ಆಗ ಆ ಸಾಹುಕಾರನ ಮಗನೇ ನಿಮ್ಮಂಗೆ ಕಲ್ಲು ಹೊಡೆಯೋದನ್ನ ಕಂಡು ಹಿಡಿದು, ನಮಗೆ ಹೊಡೆದು, ಅವ್ನೇ ಹೀರೋ ಆಗಿ, ಸಹಾನುಭೂತಿ ಪಡ್ಕೊತಿದ್ದ. ನಂತರ ಪ್ರೀತಿ ಗೀತಿ ಅಂತ ಮಾಡಿ ಇವರಿಗೆ ಬಲೆ ಬೀಸ್ತಿದ್ದ. ಸತ್ಯವಾಗ್ಲೂ ಇಷ್ಟೇ ನೋಡಿ ಹಕ್ಕಿ ಕಥಿ ಎಂದು ಉಸಿರುಗರೆದು ಕೈ ಕಟ್ಟಿ ನಿಂತ. ಸರಸ್ವತಿ ಮನೆಯವರಿಗೂ ಇದರ ಮರ್ಮ ಅರ್ಥವಾಗಿತ್ತು. ಆ ಮೂರು ಹುಡುಗರಿಂದ ಅವರ ವಿಳಾಸ, ಟೆಲಿಫೋನ್ ನಂಬರ್, ಇತ್ಯಾದಿಗಳನ್ನು ಪಡೆದುಕೊಂಡು, ಅಲ್ಲೇ ಅವರನ್ನು ಕುಳ್ಳಿರಿಸಿ, ನಮ್ಮ ಗೆಳೆಯರೊಬ್ಬರಿಗೆ ಪೊಲೀಸರನ್ನು ಕರೆತರಲು ಗುಟ್ಟಾಗಿ ಹೇಳಿ, ಕಳಿಸಿಕೊಟ್ಟೆ. ಇದಾದ ಐದು ನಿಮಿಷಕ್ಕೆ ಪೊಲೀಸ್ ಇನ್ಸ್‍ಪೆಕ್ಟರ್ ಈ ಕಥೆಯನ್ನು ಅರಿತುಕೊಂಡು, ಜೀಪಿನಲ್ಲಿ ಆ ಸಾಹುಕಾರನ ಮಗನನ್ನು ಅಷ್ಟೊತ್ತಿನಲ್ಲಿ ಎತ್ತಿ ಹಾಕಿಕೊಂಡು, ಸರಸ್ವತಿ ಮನೆ ಮುಂದೆ ಬಂದು ಹಾರನ್ ಮಾಡಿದರು. ಬಾಗಿಲು ತೆಗೆದೆವು. ಇನ್ಸ್‍ಪೆಕ್ಟರ್ ಆ ಸಾಹುಕಾರನ ಮಗನಿಗೆ ಒದ್ದು, “ತಪ್ಪಾಯ್ತು ಅಂತ ಅವಳ ಕಾಲಿಗೆ ಬೀಳು”, ಎಂದು ಸರಸ್ವತಿ ಕಾಲಿನೆಡೆಗೆ ನೂಕಿದರು.

ಸಾಹುಕಾರನ ಮಗ ತಡವರಿಸುತ್ತಾ… “ಇಲ್ಲ ತಾಯಿ ತಪ್ಪಾಯಿತು. ಇನ್ನೊಂದು ಸಾಲ ನಾನು ಹೀಗೆ ಮಾಡಲ್ಲ ಕ್ಷಮಿಸು”” ಎಂದು ಅಂಗಲಾಚಿದ, ಮತ್ತೊಂದು ಸಲ ಎಲ್ಲರಿಗೂ ಕೋಲಿನಿಂದ ಉಣಬಡಿಸಿ, ಪೋಲೀಸ್ ಸ್ಟೇಷನ್ ಎಡೆಗೆ ಎಲ್ಲರನ್ನೂ ಕರೆದುಕೊಂಡು ಹೋದರು. ಸರಸ್ವತಿ ಬದುಕು ಭಯ ಮುಕ್ತಗೊಂಡು, ನಿರುಮ್ಮಳವಾಯಿತು. ನಾವು ಬೆಳಗಿನ ಜಾವ ಎದ್ದು ನಮ್ಮ ರೂಮ್‍ಗೆ ಬಂದೆವು.

ಇತ್ತೀಚೆಗೆ ಒಂದು ವರ್ಷದ ಹಿಂದೆ ನಾನು ಊರಿಗೆ ಹೋಗಿ ಬರುವಾಗ, ಬಾಗಲಕೋಟೆಯ ಸರಸ್ವತಿ ಮನೆಗೆ ಹೋಗಿದ್ದೆ. ನನ್ನಂತೆ ಅವಳಿಗೂ ಮೊಮ್ಮಕ್ಕಳಾದ ವಿಷಯ ತಿಳಿದು, ಸಂತೋಷಗೊಂಡು ಸಕಲೇಶಪುರಕ್ಕೆ ಬಂದೆ.
*****

ಅನುಭವಂಗಳನುತಿಸಿ,
ಅನುಭಾವಿಯಾಗಿ,
ಅಮರತ್ವದ ತತ್ವಗಳ ಭೋದಿಸುತ
ಸಾಧನೆಗಳ ಗೈದು,
ವೇದನೆಗಳನ್ನಳಿಸಿ
ಅಳಿಯದೆ ಉಳಿಯುವುದೆ
ಅನುಭೂತಿ ತತ್ವ.

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...