ಗಡ ಗಡ ಗಾಡಿ ಗುಡು ಗುಡು ಗಾಡಿ
ಹೋದಲ್ಲೆಲ್ಲಾ ತೆಗೆದು ಲಗಾಡಿ
ಇದೇನು ಲಟಾರೀಂತ ನಗಾಡಬೇಡಿ
ನಗಾಡಿದವರನದು ಎತ್ಕೊಂಡು ಹೋಗುತೆ
ಇದು ಪಂಪ್ಕಿನ್ ಗಾಡಿ

ಧುಡು ಧುಡು ಬರುತೆ
ಧುಡು ಧುಡು ಹೋಗತೆ
ಎದುರಿಗೆ ಸಿಕ್ಕವರ ಹೊಡಕೊಂಡು ಹೋಗತೆ
ಸಿಗದಿದ್ದವರನು ಆಮೇಲೆ ಹುಡುಕುತೆ
ಇದು ಪಂಪ್ಕಿನ್ ಗಾಡಿ

ಎಲ್ಲಿಂದ ಬರತೆ ಎಲ್ಲಿಗೆ ಹೋಗತೆ
ನಮಗೊಂದು ಪಂಪ್ಕಿನ್ ಸಿಗುವುದೆ ಅಂತ
ಕೈತೋರಿಸಿ ಕರೆಯಲು ಬೇಡಿ
ಕರೆದವರನದು ಕರಕೊಂಡು ಹೋಗತೆ
ಇದು ಪಂಪ್ಕಿನ್‌ಗಾಡಿ

ಕುದುರೆಯು ಪಂಪ್ಕಿನ್ ಚಕ್ರವು ಪಂಪ್ಕಿನ್
ಗಾಡಿಕಾರನೂ ಪಂಪ್ಕಿನ್ ನೋಡ್ರಿ
ಇದು ಯಾಕೆ ಹೀಗಂತ ಕೇಳಲು ಬೇಡಿ
ಕೇಳಿದವರನದು ಹಿಡಕೊಂಡು ಹೋಗತೆ
ಇದು ಪಂಪ್ಕಿನ್ ಗಾಡಿ

ಅಜ್ಜನ ಕೇಳಿದ್ರೆ ಗೊತ್ತೇ ಇಲ್ಲ
ಅಪ್ಪನ ಕೇಳಿದ್ರೆ ಉತ್ತರವಿಲ್ಲ
ಅಮ್ಮನ ಕೇಳಿದ್ರೆ ಅಂತಾಳೆ ಅಯ್ಯೋ
ನೀನಿನ್ನೂ ನಿದ್ದೆಯಿಂದ ಎದ್ದಿಲ್ಲ ಪುಟ್ಟಾ
ಇದು ಕನಸಿನ ಗಾಡಿ!
*****

Latest posts by ತಿರುಮಲೇಶ್ ಕೆ ವಿ (see all)