ರಾವಣಾಂತರಂಗ – ೬

ರಾವಣಾಂತರಂಗ – ೬

ಶಾಪಗಳ ಸುಳಿಯಲ್ಲಿ

“ಛೇ ಎಂತಹ ಕೆಲಸವಾಯಿತು ನಾನಲ್ಲಿಗೆ ಹೋಗಬಾರದಿತ್ತು ಎಂದೂ ಮಾತಾಡದ ಮಂಡೋದರಿ, ಈ ದಿನ ಇಷ್ಟೊಂದು ಮಾತಾಡಿದಳಲ್ಲ. ಈ ಹೆಂಗಸರೇ ಇಷ್ಟು! ಅಸೂಯೆಗೆ ಮತ್ತೊಂದು ಹೆಸರು, ಗಂಡನಾದವನು ಅವಳ ಕಣ್ಣೆದುರಿಗೆ ಹೇಳಿದಂತೆ ಕೇಳಿಕೊಂಡು ಬಿದ್ದಿರಬೇಕು. ಆಗ ಇಂದ್ರ ಚಂದ್ರನೆಂದು ಹಾಡಿ ಹೊಗಳುತ್ತಾರೆ. ಇಲ್ಲವಾದರೆ ತೃಣಕ್ಕಿಂತ ಕಡೆಯಾಗಿ ನೋಡುತ್ತಾರೆ. ಸೀತೆಯ ಸೌಂದರ್ಯ ಇವಳ ತಲೆಕೆಡಿಸಿರಬೇಕು. ಎಲ್ಲಿ ಅವಳನ್ನು ಮದುವೆಯಾಗಿ ಪಟ್ಟದರಸಿಯನ್ನಾಗಿ ಮಾಡಿಕೊಂಡು ಬಿಡುತ್ತಾನೋ ಎನ್ನುವ ಆತಂಕವಿರಬೇಕು. ಶಾಪವಂತೆ ಶಾಪ! ಎಲ್ಲರ ಶಾಪವು ಫಲಿಸುವುದಾಗಿದ್ದರೆ ಈ ಭೂಮಂಡಲದಲ್ಲಿ ಯಾರೂ ಜೀವಂತವಾಗಿ ಇರುತ್ತಿರಲಿಲ್ಲ. ಎಲ್ಲರೂ ಸುಟ್ಟು ಬೂದಿಯಾಗುತ್ತಿದ್ದರು. ಶಾಪ! ಶಾಪ! ಈ ರಾವಣಾಸುರನಿಗೆ ಶಾಪ! ಈ ಶಾಪತಾಪಕ್ಕೆಲ್ಲ ಹೆದರುವನಲ್ಲ ಈ ಪ್ರಚಂಡ ರಾವಣ. ನನ್ನ ಬದುಕಿಗೆ, ನನ್ನ ಹಿರಿಮೆಗೆ, ಗರಿಮೆಗೆ ಅದೆಷ್ಟೋ ಜನ ಶಾಪಕೊಟ್ಟಿದ್ದಾರೆ. ನನಗೇನು ಆಗಿಲ್ಲ ಗುಂಡುಕಲ್ಲಿನಂತಿದ್ದೇನೆ. ಶಾಪವಂತೆ ಶಾಪ! ಆಹ್ಹಾಹ್ಹಾ ! ಅಟ್ಟಹಾಸದಿಂದ ನಕ್ಕೆ.

“ರಾವಣೇಶ್ವರಾ ನಗು ನಗು ಇನ್ನೆಷ್ಟು ದಿನ ನಗುತ್ತೀಯಾ. ನಿನ್ನ ಪಾಪದ ಕೊಡ ತು೦ಬುವವರೆಗೂ ನಗುತ್ತಲೇ ಇರು. ಆಮೇಲೆ ನೀನೇ ಅನುಭವಿಸುತ್ತೀಯಾ ಪಾಪಕ್ಕೆ ತಕ್ಕ ಪಶ್ಚಾತ್ತಾಪ ಪಡುತ್ತೀಯಾ” ನಾಲ್ಕು ದಿಕ್ಕುಗಳಿಂದ ನಾಲ್ಕು ಧ್ವನಿಗಳು ಪ್ರತಿಧ್ವನಿಸಿದವು.

“ಯಾರು ? ಯಾರು? ನೀವ್ಯಾರು?

“ನಾವೇ ? ನಾವು ನಿನ್ನ ಹಿಂಸೆಗೆ ಶೋಷಣೆಗೆ ಬಲಿಯಾದವರು, ನಿನ್ನ ಅಕೃತ್ಯಗಳಿಗೆ ಸಾಕ್ಷಿಯಾದವರು, ಪ್ರತಿಭಟಿಸುವ ಶಕ್ತಿಯಿಲ್ಲದೆ ಅಸಾಯಕರಾಗಿ ನಿನಗೆ ಶಾಪವಿತ್ತವರು. ನಿನ್ನ ಅಂತ್ಯಕಾಣಲು ಕಾದು ಕುಳಿತವರು. ಇಲ್ಲಿ ನೋಡು; ತಲೆಯೆತ್ತಿ ನೋಡು, ಗುರುತಾಯಿತೇ ರಾವಣ ನಾನು ವೇದವತಿ.” “ಈ ಕಡೆ ನೋಡು ರಾವಣ ನಾನು ಅನರಣ್ಯ” “ಇತ್ತ ನೋಡು ರಾವಣ ನಾನು ನಳಕೂಬರ”

ಎಲ್ಲರೂ ಗಹಗಹಿಸಿ ನಗುತ್ತಿದ್ದಾರೆ. ಹಳೆಯ ಘಟನೆಗಳನ್ನು ನೆನಪಿಸುತ್ತಿದ್ದಾರೆ. ಗಾಯದ ಮೇಲೆ ಬರೆ ಎಳೆದಂತೆ ವಿಚಿತ್ರ ನೋವು! ವೇದವತಿ! ಎಂತಹ ಸೌಂದರ್ಯವತಿ! ಅಪ್ಸರೆಯರೆಲ್ಲರನ್ನು ಮೀರಿಸುವ ಲಾವಣ್ಯವತಿ! ಹೆಸರೇ ಮಧುರ! ಸೌಂದರ್ಯ ವರ್ಣಿಸಲಸದಳ ಭೂಮಿಯನ್ನೆಲ್ಲಾ ಸುತ್ತಿ ಅನೇಕ ರಾಜರನ್ನು ಸೋಲಿಸಿ ಶರಣಾಗಿಸಿ ಕಪ್ಪಕಾಣಿಕೆಗಳನ್ನು ತೆಗೆದುಕೊಂಡು ಬರುತ್ತಿರುವಾಗ ಹಿಮವತ್ಪರ್ವತದ ತಪ್ಪಲಿನಲ್ಲಿ ಲೋಕೈಕ ಸುಂದರಿಯೋರ್ವಳು ತಪಸ್ಸು ಮಾಡುತ್ತಿದ್ದಳು. ಸರಳ ನಿರಾಭರಣ ಸುಂದರಿಯಾದ ಅವಳು ಶಿವನನ್ನು ಒಲಿಸಿಕೊಳ್ಳುವ ಗಿರಿಜೆಯಂತೆ ಕಂಗೊಳಿಸುತ್ತಿದ್ದಳು. ಎಂತಹ ದಿವ್ಯ ಸೌಂದರ್ಯ, ಬ್ರಹ್ಮ ಸೃಷ್ಠಿಯಲ್ಲೇ ಅದ್ಭುತವಾದ ಕೈಚಳಕ ಎಂದೂ ಯಾರು ಕಂಡರಿಯದ ಕಣ್ಮನ ತಣಿಸುವ ಅಪರೂಪದ ಚೆಲುವಿನ ರಾಶಿ ಕಂಡು ಸ್ತಬ್ಧನಾಗಿ ನಿಂತ, ಆಕೆ ಕಣ್ಣು ತರೆದೊಡನೆ ಹತ್ತಿರ ಹೋಗಿ “ಮೋಹನಾಂಗಿ ನೀನು ಯಾರು? ಈ ಪರ್ವತದ ತಪ್ಪಲಿನಲ್ಲಿ ಏಕಾಂಗಿಯಾಗಿ ಏಕಿರುವೆ ಯಾವ ಕಾರಣಕ್ಕಾಗಿ ತಪವ ಮಾಡುತ್ತಿರುವೆ?”

“ಮಹಾರಾಜ ನಾನು ಬೃಹಸ್ಪತಿಯ ಮಗನಾದ ಕುಶಧ್ವಜನ ಮಗಳು. ಆತನು ವೇದ ಪಠನ ಮಾಡುವಾಗ ಮುಖದಿಂದ ಉದ್ಭವಿಸಿದೆನು. ಅದಕ್ಕಾಗಿ ನನಗೆ ವೇದವತಿಯೆಂದು ಕರೆದರು. ನನ್ನ ಆತಿಶಯರೂಪಲಾವಣ್ಯಕ್ಕೆ ತಕ್ಕ ಗಂಡ ವಿಷ್ಣು. ಅವನನ್ನು ಅಳಿಯನಾಗಿ ಪಡೆಯಬೇಕೆಂದು ಅವರು ನಿಶ್ಚಯಿಸಿದ್ದರು. ಆದರೆ ಒಂದು ದಿನ ಶಂಭುವೆಂಬ ರಾಕ್ಷಸನು ನನ್ನನ್ನು ನೋಡಿ ಮದುವೆಯಾಗಬೇಕೆಂದು ನನ್ನ ತಂದೆಯನ್ನು ಕೇಳಿದಾಗ ಗಿಳಿಯನ್ನು ಸಾಕಿ ಗಿಡುಗನ ಕೈಗೆ ಒಪ್ಪಿಸಬೇಕಾದ ಪ್ರಸಂಗ ಬಂದದ್ದಕ್ಕೆ ಹೆದರಿ ಸಾಧ್ಯವಿಲ್ಲ ಎಂದು ಖಡಾಖಂಡಿತವಾಗಿ ನುಡಿದರು. ಅಷ್ಟಕ್ಕೆ ಕುಪಿತನಾದ ಮೂಢ ರಾಕ್ಷಸನು ಹಿಂದೆ ಮುಂದೆ ಯೋಚಿಸದೆ ಸ್ವಲ್ಪವೂ ಕನಿಕರ ತೋರದ ನಿರ್ದಾಕ್ಷಿಣ್ಯವಾಗಿ ನನ್ನ ತಂದೆಯನ್ನು ಕೊಂದುಹಾಕಿದನು. ಇದನ್ನು ನೋಡಿ ನನ್ನ ತಾಯಿ ಎದೆ ಒಡೆದು ಸತ್ತಳು. ನಾನು ಅನಾಥೆಯಾದೆ, ಹೇಗೋ ತಪ್ಪಿಸಿಕೊಂಡು ನಿರ್ಜನವಾದ ಈ ಪ್ರದೇಶದಲ್ಲಿ ನೆಲೆ ನಿಂತು ಧೈರ್ಯತಂದುಕೊಂಡು ನನ್ನ ತಂದೆಯವರ ಆಸೆಯನ್ನು ಪೂರೈಸಲು ನಾರಾಯಣನನ್ನು ಕುರಿತು ತಪಸ್ಸು ಮಾಡುತ್ತಿದ್ದೇನೆ. ಇಷ್ಟೇ ನನ್ನ ಕಥೆ ನೀವ್ಯಾರೋ ತಿಳಿಯಲಿಲ್ಲ. ನಿಮ್ಮ ಪರಿಚಯವೂ ನನಗೆ ಬೇಕಾಗಿಲ್ಲ. ದಯವಿಟ್ಟು ನನ್ನ ತಪಸ್ಸಿಗೆ ಅಡ್ಡಿಮಾಡಬೇಡ ಇಲ್ಲಿಂದ ಹೊರಟುಹೋಗು.”

“ಬಾಲೆ ಸುಕೋಮಲೆಯಾದ ನಿನಗೇಕೆ ಈ ವ್ಯರ್ಥಶ್ರಮ. ಅನ್ಯಾಯವಾಗಿ ನಿನ್ನ ಯೌವ್ವನವನ್ನು ಹಾಳು ಮಾಡಿಕೊಳ್ಳುತ್ತಿದ್ದೀಯಾ, ವಿಷ್ಣುವಂತೆ ವಿಷ್ಣು ಎಲ್ಲಿರುವನು ನಿನ್ನ ನಾರಾಯಣ! ಕಪಟೆ, ಕಳ್ಳ, ನಯವಂಚಕ ವಿಷ್ಣುವಿಗೇಕೆ ಹಂಬಲಿಸುತ್ತೀಯಾ ಅಯ್ಯೋ ಮರಳೀ! ಇಲ್ಲಿ ನೋಡು ಗಂಡರಗಂಡ ರಣಪ್ರಚಂಡ ರಾವಣನಿಗಿಂತಲೂ ಯೋಗ್ಯನಾದ ಗಂಡ ನಿನಗೆಲ್ಲಿ ಸಿಕ್ಕುವನು ಈ ಹುಚ್ಚಾಟವನ್ನು ಬಿಟ್ಟು ನನ್ನನ್ನು ಮದುವೆಯಾಗು ಲಂಕೆಯರಾಣಿಯಾಗು ಎಂದು ಕೈ ಹಿಡಿದುಕೊಂಡೆ. ಆಗವಳ ಕಣ್ಣುಗಳು ಕೆಂಡದುಂಡಗಳಾದವು. ಮುಖವು ಮಿಂಚಿನಂತೆ ಮಾತುಗಳು ಗುಡುಗಿನಂತೆ, ಸೌಮ್ಯರೂಪದ ವೇದವತಿ ಕಾಳಿಯಂತೆ ಕೆರಳಿ “ನಿನ್ನ ವೇಷಭೂಷಣವನ್ನು ನೋಡಿ ನೀನೊಬ್ಬ ಮಹಾತ್ಮನೆಂದು ತಿಳಿದುಕೊಂಡಿದ್ದೆ ನಿನ್ನ ಆಚಾರಕ್ಕೂ ಆಕಾರಕ್ಕೂ ಸಾಮ್ಯವಿಲ್ಲ. ಎಲೈ ನೀಚನೇ ನನ್ನ ಕೈಹಿಡಿದು ಅಕಾರ್ಯವೆಸಗಿದೆ.”

“ನಿನ್ನ ಪಾಪದ ಕೈಗಳಿಂದ ನನ್ನ ಪವಿತ್ರವಾದ ದೇಹವನ್ನು ಮುಟ್ಟಿ ಮಲಿನಗೊಳಿಸಿದೆ. ನಿನ್ನನ್ನು ಕೊಂದು ನಾನು ಸಾಯಬೇಕೆಂದಿದ್ದೆ. ಆದರೆ ಹೆಂಗಸು ಗಂಡಸರನ್ನು ಕೊಲ್ಲುವುದು ಭೂಷಣವಲ್ಲ. ನಿನ್ನಂತಹ ಪಾಪಿಯನ್ನು ಕೊಂದು ನಾನ್ಯಾವ ನರಕಕ್ಕೆ ಹೋಗಲಿ. ಮನವಿಟ್ಟು ಕೇಳು! ಮುಂದಿನ ಜನ್ಮದಲ್ಲಿ ಸೀತೆಯೆಂಬ ಹೆಸರಿನಿಂದ ಜನಕರಾಯನ ಪುತ್ರಿಯಾಗಿ ವಿಷ್ಣುವಿನ ಅಂಶದಿಂದ ಧರೆಗಿಳಿಯುವ ಶ್ರೀರಾಮನನ್ನು ವರಿಸಿ ಅವನ ಕೈಯಿಂದ ನಿನ್ನನ್ನು ಕೊಲ್ಲಿಸುವೆನು” ಎಂದು ಶಪಿಸಿ ಕ್ಷಣ ಮಾತ್ರವೂ ನಿಲ್ಲದೆ ಅಗ್ನಿ ಪ್ರವೇಶ ಮಾಡಿದಳು, ಸಿಡಿಲು ಬಡಿದ ತೆಂಗಿನ ಮರದಂತೆ ಕಪ್ಪಾಗಿ ಶಿಲೆಯಂತೆ ನಿಂತಿದ್ದೆ. ಕ್ಷಣದಲ್ಲಿ ಏನೇನೆಲ್ಲಾ ಘಟಿಸಿಹೋಯಿತು. ಸ್ತ್ರೀಹತ್ಯಾದೋಷಕ್ಕೆ ಕಾರಣನಾದೆ, ಅರೆಕ್ಷಣ ಮನಸ್ಸಿಗೆ ಧೈರ್ಯ ತಂದುಕೊಂಡೆ. ಇಂತಹ ಅನೇಕ ಜನ ಸ್ತ್ರೀಯರನ್ನು ನೋಡಿದ್ದೇನೆ. ಅವರಲ್ಲಿ ಇವಳೊಬ್ಬಳು. ಇವಳದೇನು ಹೆಚ್ಚುಗಾರಿಕೆಯೆಂದು ಶಾಪದ ಕಡೆ ಲಕ್ಷ್ಯವನ್ನೇ ಕೊಡಲಿಲ್ಲ. ಆದುದರಿಂದ ಮಂಡೋದರಿಯ ಮಾತಿನಿಂದ ಮನಸ್ಸಿನಾಳದಲ್ಲಿ ಅಡಗಿದ್ದ ಭೂತಗಳು ಒಂದೊಂದಾಗಿ ಕಣ್ಣೆದುರು ನರ್ತಿಸುತ್ತಿವೆ, ಎಚ್ಚರಿಸುತ್ತಿವೆ. ಸಮರ್ಥನೆಯನ್ನು ನೀಡುತ್ತಿವೆ. ನನ್ನ ಅವನತಿಯ ಕ್ಷಣಗಳು ಇಲ್ಲಿಂದಲೇ ಪ್ರಾರಂಭವಾಯಿತೇ! “ಏಯ್ ರಾವಣ ವೇದವತಿ? ಒಬ್ಬಳೇ ಅಲ್ಲ ನಾನಿಲ್ಲಿದ್ದೇನೆ ನೋಡು. ನನ್ನ ಶಾಪದ ಮುಕ್ತಿ ಎಂದಾಗುವುದೋ ಎಂದು ಗರ್ಜಿಸಿದಾಗ ತಲೆಯೆತ್ತಿ ನೋಡಿದೆ, ಯಾರಿರಬಹುದೆಂದು” ಪತ್ತೆಯಾಗಲಿಲ್ಲವೇ ಲಂಕೇಶ್ವರ ನಾನು ಅನರಣ್ಯ”

ಅಯೋಧ್ಯೆಯ ರಾಜ್ಯವು ಸಂಪತ್‌ ಭರಿತವಾಗಿ ಸಮೃದ್ಧವಾಗಿತ್ತು. ರಾಜನಾದ ಅನರಣ್ಯನು ಪ್ರಜಾಪಾಲಕನಾಗಿ ಬಲಿಷ್ಠವಾಗಿ ಕೀರ್ತಿವಂತನಾಗಿ ಮೆರೆಯುತ್ತಿದ್ದನು. ಅವನು ಮುಪ್ಪಿನವನಾಗಿದ್ದು ಅವನ ಮಕ್ಕಳನ್ನು ಚಿಕ್ಕ ವಯಸ್ಸಿನ ಬಾಲಕರಾಗಿದ್ದರು. ಅವನ ಕೀರ್ತಿಯು ನನ್ನ ಬಯಕೆಯನ್ನು ಕೆರಳಿಸಿತು. ಯುದ್ಧದಾಶೆಯಿಂದ ಅವನನ್ನು ಸೋಲಿಸಲೇಬೇಕೆಂಬ ದುರಾಲೋಚನೆಯಿಂದ ಪುಷ್ಪಕ ವಿಮಾನವನ್ನೇರಿ ಅಯೋಧ್ಯೆಗೆ ಬಂದು ರಾಜ ಅನರಣ್ಯನನ್ನು ಕಂಡು “ನನ್ನೊಂದಿಗೆ ಯುದ್ಧ ಮಾಡುವೆಯಾ, ಇಲ್ಲ ಸೋತನೆಂದು ಜಯಪತ್ರವನ್ನು ಕೊಡುವೆಯಾ” ಎಂದು ಕೇಳಿದನು. ಅಷ್ಟು ಮಾತ್ರಕ್ಕೆ ಅನರಣ್ಯನು ಕೆರಳಿ ಕ್ಷತ್ರಿಯರಾದವರು ಯುದ್ಧಕ್ಕೆ ಹೆದರುವುದಿಲ್ಲ. ಹಾಗೆಯೇ ಸೋಲನೊಪ್ಪಿಕೊಳ್ಳುವುದಿಲ್ಲ. ದುರಾಶೆಯಿಂದ ನೀನಾಗಿಯೇ ಕಾಲು ಕೆರೆದುಕೊಂಡು ಯುದ್ಧಕ್ಕೆ ಬಂದಿದ್ದೀಯಾ ಮುದುಕನಾದರೂ ನನ್ನಲ್ಲಿನ್ನು ಉತ್ಸಾಹವಿದೆ ನಡೆ ಗೆದ್ದರೆ ಜಯಮಾಲೆ ಸೋತರೆ ವೀರಸ್ವರ್ಗ” ಎಂದು ಸಕಲಶಸ್ತ್ರಾಸ್ತ್ರಗಳನ್ನು ತೆಗೆದುಕೊಂಡು ಯುದ್ಧಭೂಮಿಗೆ ಬಂದನು. ಅನರಣ್ಯ ಅಸಾಧಾರಣ ಪರಾಕ್ರಮಿ.

ಅವನ ಯುದ್ಧ ಮಾಡುವ ಕೈಚಳಕಕ್ಕೆ ಬೆರಗಾದೆ, ಸತತವಾಗಿ ನೂರುವರ್ಷಗಳವರೆಗೆ ಯುದ್ಧ ನಡೆಯಿತು. ಕೊನೆಗೆ ನಿತ್ರಾಣನಾಗಿ ಅನರಣ್ಯನು ಹಿಂಜರಿದನು. ತನ್ನ ಆಯುಧಗಳೆಲ್ಲವನ್ನು ನುಚ್ಚುನೂರು ಮಾಡಿದ ನನ್ನ ಬಾಣದ ಏಟುಗಳನ್ನು ತಾಳಿಕೊಳ್ಳಲಾಗದೆ ಕುಸಿದನು. ಆಗ ಮುದುಕನೆಂದೂ ಕನಿಕರಿಸದೆ ಬಾಣಗಳಿಂದ ಅವನ ಎದೆಯನ್ನು ಸೀಳಿದೆನು. ಬಾಣದ ಪೆಟ್ಟಿನಿಂದ ವಿಲ ವಿಲ ಒದ್ದಾಡುತ್ತಾ ಮರಣೋನ್ಮಖನಾದ ಅನರಣ್ಯನು ನನ್ನನ್ನು ಕುರಿತು “ದಶಮುಖನೇ ನಾ ನಿನಗೆ ಯಾವ ಅನ್ಯಾಯವನ್ನು ಮಾಡದಿದ್ದರೂ ಮುಪ್ಪಿನವನೆಂದು ಕರುಣೆ ತೋರದೆ ವಿನಾಕಾರಣ ಯುದ್ಧ ಮಾಡಿ ನನ್ನನ್ನು ಸಾಯಿಸಿದೆ. ನನ್ನ ಮಕ್ಕಳನ್ನು ಅನಾಥರನ್ನಾಗಿಸಿದೆ. ಈಗ ನೀನು ನನ್ನನ್ನು ಕೊಂದದ್ದು ನಿಜವಾದರೂ ಮುಂದೆ ಇದೇ ಸೂರ್ಯವಂಶದಲ್ಲಿ ರಾಮಚಂದ್ರನೆಂಬ ಹೆಸರಿನಿಂದ ಹುಟ್ಟಿ ನಿನ್ನ ಸಂಹಾರ ಮಾಡುವೆನು” ಹೀಗೆ ಹೇಳಿ ಅನರಣ್ಯನು ಪ್ರಾಣಬಿಟ್ಟನು. ಒಂದು ಕ್ಷಣ ನಾನು ಮಾಡಿದುದ್ದು ತಪ್ಪೆಂದು ಆತ್ಮಸಾಕ್ಷಿ ತಿವಿಯತೊಡಗಿತು. ನನ್ನ ಜೈತ್ರ ಯಾತ್ರೆಯ ಮುಂದೆ ಇವೆಲ್ಲಾ ತೃಣ ಸಮಾನ! ನಾನಾದರೋ ಅಂದು ಆ ಶಾಪದ ಬಗ್ಗೆ ತಲೆ ಕೆಡಿಸಿಕೊಂಡಿರಲೇ ಇಲ್ಲ. ಶಾಪಗಳೆಲ್ಲ ನಿಜವಾಗಿ ಫಲಿಸುವಂತಿದ್ದರೆ ಈ ಲೋಕದಲ್ಲಿ ಪಾಪಿಗಳೇ ಇರುತ್ತಿರಲಿಲ್ಲ ಎಂದ ನನ್ನ ನಾನೇ ಸಮಾಧಾನ ಮಾಡಿಕೊಂಡೆ. ಆದರೀಗ ಮನದ ಮೂಲೆಯಲ್ಲಿ ಆತಂಕ, ಭಯದ ನೆರಳು ಸುಳಿದಾಡುತ್ತಿದೆ. ನಾನು ಎಸಗಿದ ಒಂದೊಂದು ಪಾಪಕಾರ್ಯಗಳು, ಇದೀಗ ಸಮಾಧಿಯಿಂದ ಎದ್ದು ಭಯಂಕರವಾಗಿ ಕುಣಿಯುತ್ತಿವೆ. ಒಬ್ಬನಿಲ್ಲಿ ಅದೆಷ್ಟು ಜನರ ಶಾಪ! ಮತ್ಯಾರದ್ದೋ ನೆರಳು ಬಿದ್ದಂತಾಗಿ ಬೆಚ್ಚಿ ನೋಡಿದೆ.

“ರಾವಣೇಶ್ವರಾ! ಸೀತೆಯನ್ನು ತಂದಿಟ್ಟು ಅಶೋಕವನದಲ್ಲಿ ಇರಿಸಿದೆ ಆದರೆ ನೀನು ಏಕೆ ಬಲತ್ಕಾರ ಮಾಡುತ್ತಿಲ್ಲವೆಂದು ನನಗೆ ಚೆನ್ನಾಗಿ ಗೊತ್ತು ನೀನೆಷ್ಟು ಮದಾಂಧನಾಗಿ ನಡೆಯುತ್ತಿದ್ದರೂ ನಿನ್ನ ಮಸ್ತಿಷ್ಕದ ಮೂಲೆಯಲ್ಲಿ ಅಂಜಿಕೆಯ ಬೆಂಕಿ ಸುಡುತ್ತಲೇ ಇದೆ. ಅದು ಸದಾ ನಿನ್ನ ಜಾಗೃತವಾಗಿ ಇರಿಸಿತ್ತು. ಅದಕ್ಕಾಗಿಯೇ ನೀನು ಸೀತೆಯಲ್ಲಿ ಬೇರೆ ಸ್ತ್ರೀಯರನ್ನು ಬಲತ್ಕಾರ ಮಾಡಲಿಲ್ಲ. ನೆನಪಿಸಿಕೊ ನನ್ನ ಶಾಪವನ್ನು”

“ಯಾವ ಶಾಪ! ಯಾರ ಶಾಪ! ನಾನ್ಯಾವ ಶಾಪವನ್ನು ಪಡೆದಿಲ್ಲ.”

“ಇಲ್ಲ ನನ್ನ ಶಾಪವನ್ನು ನೀನು ಮರೆತಿಲ್ಲ. ಜ್ಞಾಪಿಸಿಕೊ ರಂಭೆಯನ್ನು”

ರಂಭೆ ದಂತದಗೊಂಬೆ, ನಾಟ್ಯಮಯೂರಿ, ಅಪ್ಸರೆಯರಲ್ಲಿ ವಿನೂತನ ಅಪ್ಸರೆ, ದೇವಲೋಕದ ನರ್ತಕಿ. ಅಶ್ವಿನಿದೇವತೆಗಳ ಮಗನಾದ ನಳಕೂಬರನ ಪತ್ನಿ, ನಾನು ದೇವಲೋಕದಲ್ಲಿ ಬೀಡು ಬಿಟ್ಟಾಗ ಒಬ್ಬಳೇ ಎದುರಾದಳು. ನರ್ತಕಿಯರಿಗಿರಬಹುದಾದ ಪ್ರಮಾಣಬದ್ಧ ಅಂಗಸೌಷ್ಟವ ಅದಕೊಪ್ಪುವ ದಿವ್ಯವಸ್ತ್ರಾಭರಣಗಳು ಅವಳ ಅಂದವನ್ನು ಹೆಚ್ಚಿಸಿದ್ದವು. ತನ್ನ ಶರೀರದ ತುಂಬಾ ಕಸ್ತೂರಿಯನ್ನು ಪೂಸಿಕೊಂಡಿದ್ದಳು. ಕೈಗಳಲ್ಲಿ ಫಲಹಾರ ತುಂಬಿದ ಸುವರ್ಣದ ಪರಾತವನ್ನು ಹಿಡಿದು ಹೋಗುತ್ತಿರುವಾಗ ಕಸ್ತೂರಿಯ ಸುಗಂಧದಿಂದ ಸುತ್ತಮುತ್ತಲಿನವರನ್ನು ಆಕರ್ಶಿಸುತ್ತಿದ್ದಳು. ನಾನಾದರೂ ಪರಿಮಳಕ್ಕೆ ಮಾರುಹೋಗಿ ಚೆಲುವಿಗೆ ಸೋತು, ಹೋಗುತ್ತಿದ್ದ ಅವಳನ್ನು ತಡೆದು ನಿಲ್ಲಿಸಿದೆ. “ನಾಟ್ಯ ಮಯೂರಿ ಅಂದು ಇಂದ್ರನ ಆಸ್ಥಾನದಲ್ಲಿ ನಿನ್ನ ನಾಟ್ಯವನ್ನು ನೋಡಿ ಬೆರಗಾದೆ. ಇಂದೇಕೋ ಮನಸ್ಸು ನಿನ್ನ ನಾಟ್ಯವನ್ನು ಮತ್ತೊಮ್ಮೆ ನೋಡಲು ಹಾತೊರೆಯುತ್ತಿದೆ. ಸ್ವಲ್ಪ ಹೊತ್ತು ನನ್ನಲ್ಲಿದ್ದು ಹೋಗು. ಈ ರಾವಣೇಶ್ವರನ ಮನಸ್ಸಿಗೆ ಸಂತೋಷವನ್ನುಂಟುಮಾಡು” “ಆರ್ಯನೇ ನಾಟ್ಯವೆಂದರೆ ಹೊತ್ತುಗೊತ್ತಿಲ್ಲದೆ ಪ್ರದರ್ಶಿಸುವ ವಿದ್ಯೆಯಲ್ಲ. ನಾನೀಗ ಆತುರಾತುರವಾಗಿ ನನ್ನ ಸ್ವಾಮಿಯನ್ನು ಕಾಣಲು ಹೋಗುತ್ತಿದ್ದೇನೆ. ಇನ್ನೊಮ್ಮೆ ನಿನ್ನ ಆಸೆಯನ್ನು ಖಂಡಿತವಾಗಿ ಪೂರೈಸುತ್ತೇನೆ. ಈಗ ನನ್ನ ದಾರಿಗೆ ಅಡ್ಡ ಬರಬೇಡ. ನನ್ನ ಮಾತನ್ನು ನಂಬು ಇಲ್ಲದಿದ್ದರೆ ಪರಿಣಾಮ ನೆಟ್ಟಗಾಗದು” “ಏನೆಂದೆ ಸೊಕ್ಕಿನ ಮಾತಿನವಳೇ ತ್ರಿಭುವನ ಭಯಂಕರ, ವೀರಾಧಿವೀರನ ಮುಂದೆ ಸೊಕ್ಕಿನ ಮಾತುಗಳನ್ನಾಡುತ್ತಿರುವೆ, ನಾನೀಗ ಇಂದ್ರಲೋಕದ ಒಡೆಯ, ನನ್ನಾಜ್ಞೆಯನ್ನು ನೀನು ಪಾಲಿಸಲೇಬೇಕು. ನಡೆ ಈಗಿಂದೀಗಲೇ ಆಸ್ಥಾನಕ್ಕೆ” ಎಂದು ಆಗ್ರಹಪಡಿಸಿದೆ. ಕೈಹಿಡಿದು ಎಳೆಯಬೇಕೆಂದು ಕೊಳ್ಳುವಷ್ಟರಲ್ಲಿ ಅವಳು ತನ್ನ ಮಾಯಾವಿದ್ಯೆಯಿಂದ ಅದೃಶ್ಯಳಾಗಿ ತಪ್ಪಿಸಿಕೊಂಡಳು. ಅಲ್ಲಿಂದ ಹೋಗಿ ತನ್ನ ಪತಿಯಾದ ನಳಕೂಬರನಿಗೆ ವಿಷಯ ತಿಳಿಸಿದಳೆಂದು ಕಾಣುತ್ತದೆ. ಅವನು ಅತ್ಯಂತ ಕೋಪಾವಿಷ್ಠನಾಗಿ ನನ್ನಲ್ಲಿಗೆ ಬಂದು, “ರಾವಣಾಸುರ ಇಂದಿನಿಂದ ನೀನು ಪರಸ್ತ್ರೀಯರ ಮೇಲೆ ಬಲತ್ಕಾರ ಮಾಡಿದರೆ ನಿನ್ನ ತಲೆಯು ಒಡೆದು ಸಹಸ್ರಹೋಳುಗಳಾಗಲಿ” ಎಂದು ಶಾಪವಿತ್ತನು, ಅಂದು ಅವನಿತ್ತ ಶಾಪದ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ. ಶಾಪ ಕೊಡಲು ಅವನೇನು ಬ್ರಹ್ಮನೇ! ವಿಷ್ಣುವೇ! ಪರಮೇಶ್ವರನೇ! ತ್ರಿಮೂರ್ತಿಗಳಿಗೂ ಹೆದರದ ನಾನು ಯಕಶ್ಚಿತ್ ನಳಕೂಬರನ ಶಾಪಕ್ಕೆದುರುವುದೇ? ಎಂದು ಉದಾಸೀನನಾಗಿದ್ದೆ. ಆದರಿಂದು ಈ ಶಾಪಗಳೆಲ್ಲ ಮುತ್ತಿಗೆ ಹಾಕಿ ಚೂರಿಯಿಂದ ಎದೆ ತಿವಿಯುತ್ತಿವೆ. ಹೀಗೇಕಾಗುತ್ತಿದೆ. ಇಷ್ಟು ಬೇಗ ನನ್ನ ಮನಸ್ಸಿನ ಧೀಮಂತ ಶಕ್ತಿ ಕಡಿಮೆಯಾಯಿತೇ ಆತ್ಮ ವಿಶ್ವಾಸ ಕುಗ್ಗುತ್ತಿದೆಯೇ. ಇಲ್ಲ, ಕೂಡದು; ನಾನೀಗ ಮಾನಸಿಕವಾಗಿ ಗಟ್ಟಿಯಾಗಬೇಕು. ಮಂಡೋದರಿ ಹೇಳಿದ ಮಾತ್ರಕ್ಕೆ ಎಲ್ಲವೂ ನಿಜವಾಗುವುದಿಲ್ಲ. ಯಾರಿಂದಲೂ ಮರಣವೇ ಬಾರದಂತೆ ವರ ಪಡೆದಿದ್ದು ಇಷ್ಟು ವಿಷಯಕ್ಕೆ ಅಂಜುವುದೇ?

“ಇಲ್ಲ ರಾವಣ ಯಾರಿಂದಲೂ ಮರಣ ಬಾರದಂತೆ ಪಡೆದಿಲ್ಲ. ಕೇವಲ ದೇವತೆಗಳಿಂದ ಬರಬಾರದೆಂದು ಕೇಳಿದೆ. ಇನ್ನುಳಿದ ಮನುಷ್ಯರು, ರಾಕ್ಷಸರು, ನಾಗರು, ಸಿದ್ಧರು ಇವರನ್ನು ಬಿಟ್ಟೆಯಲ್ಲ. ಅವರುಗಳಲ್ಲಿ ಯಾರಿಂದಲಾದರೂ ನಿನಗೆ ಸಾವು ಬರಬಹುದು. ತಾನೇ ಜ್ಞಾಪಿಸಿಕೊಂಡೆ. ಅನರಣ್ಯ ಹೇಳಿದ್ದು ಅನರಣ್ಯನೇ ಇಂದು ಶ್ರೀರಾಮನಾಗಿ ಹುಟ್ಟಿ ನಿನ್ನ ಕಥೆಗೆ ಇತಿಶ್ರೀ ಹಾಡಲಿದ್ದಾನೆ. ನೀನು ಅಪಹರಿಸಿರುವ ಸೀತೆಯ ಪತಿಯೇ ಶ್ರೀರಾಮಚಂದ್ರ ಅವನಿಂದಲೇ ನಿನಗೆ ಮರಣ! ಮರಣ! ದಶದಿಕ್ಕುಗಳು ಮಾರ್ದನಿಸಿದವು.

“ಹೌದು ಶ್ರೀರಾಮನಿಂದಲೇ ನನ್ನ ಮರಣ ವಿಧಿ ಲಿಖಿತವೇ ಹಾಗಿರುವಾಗ ನಾನೇನು ಮಾಡುವ ಹಾಗಿದ್ದೇನೆ? ಬಂದದ್ದೆಲ್ಲಾ ಬರಲಿ, ಮುಂದೆ ಬರಲಿರುವ ಗಂಡಾಂತರಗಳನ್ನು ನೆನೆಸಿಕೊಂಡು ಕಂಗಾಲಾಗುವುದೇಕೆ? ಕಷ್ಟಗಳು, ನಷ್ಟಗಳು, ಬಂದಾಗ ಕಂಗಾಲಾದರೆ ನಮ್ಮನ್ನು ಇನ್ನಷ್ಟು ಹೆದರಿಸಿ ಅರ್ಧಸಾಯುವಂತೆ ಮಾಡುತ್ತವೆ. ಧೈರ್ಯದಿಂದ ಎದುರು ನಿಂತರೆ ಅವುಗಳೇ ಹೆದರಿ ಪಲಾಯನ ಮಾಡುತ್ತವೆ. ಸಾವಿಗೆ ಹೆದರಿ ಶರಣಾಗತನಾಗಿ ಸೀತೆಯನ್ನು ಒಪ್ಪಿಸುವುದಿಲ್ಲ. ಮುಂದಿಟ್ಟ ಹೆಜ್ಜೆಯನ್ನು ಹಿಂದೆ ತೆಗೆದುಕೊಳ್ಳುವ ಹೇಡಿ ನಾನಲ್ಲ. ಬರಲಿ ಬಂದದ್ದೆಲ್ಲಾ ಬರಲಿ ಒಂದು ಕೈ ನೋಡಿಯೇ ಬಿದುತ್ತೇನೆ. ಸವಾಲು ಹಾಕಿ ಸಮಾಧಾನ ಚಿತ್ತದಿಂದ ನಿದ್ದೆ ಮಾಡಲು ಪ್ರಯತ್ನಿಸಿದೆ.
*****
ಮುಂದುವರೆಯುವುದು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ತಂಗಿಗೆ
Next post ಯಾಕೆನ್ನ ಕಾವ್ಯ ಹೊಸ ಮಿಂಚಿರದೆ ಬರಡಾಯ್ತು ?

ಸಣ್ಣ ಕತೆ

  • ಮುಗ್ಧ

    ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

  • ಮಿಂಚು

    "ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…

  • ಮಂಜುಳ ಗಾನ

    ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…

  • ಮೋಟರ ಮಹಮ್ಮದ

    ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…

cheap jordans|wholesale air max|wholesale jordans|wholesale jewelry|wholesale jerseys