ವಿಜಯ ವಿಲಾಸ – ತೃತೀಯ ತರಂಗ

ವಿಜಯ ವಿಲಾಸ – ತೃತೀಯ ತರಂಗ

ಬೆಳಗಾಯಿತು. ದಿನರಾಜನಾದ ಪ್ರಭಾಕರನು ತನ್ನ ಸಹಸ್ರಕಿರಣಗಳಿಂದ ಲೋಕಕ್ಕೆ ಆನಂದವನ್ನುಂಟುಮಾಡಿ ದಿಕ್ತಟಗಳನ್ನು ಬೆಳಗಲಾರಂಭಿಸಿದನು. ಜಯಶಾಲಿಯಾಗಿ ರತ್ನ ಬಾಣವನ್ನು ಪಡೆಯಬೇಕೆಂಬ ಕುತೂಹಲದಿಂದಿದ್ದ ವಿಜಯನು ಎದ್ದು ಎಂದಿನಂತೆ ತಾಯಿಯಂತಃಪುರಕ್ಕೆ ಬಂದು ನೋಡಲು, ಅಲ್ಲಿ ಆಕೆ ಇರಲಿಲ್ಲ. ಆಶ್ಚರ್ಯದಿಂದ ವಿಚಾರಿಸುವಲ್ಲಿ, ರಾತ್ರಿ ನಡೆದ ಸಂಗತಿಯು ಅಲ್ಲಿದ್ದ ಚೇಟಿಯರಿಂದ ತಿಳಿಯಬಂತು. ತನ್ನ ತಾಯಿಯು ದುರಾಚಾರಿಣಿಯೆಂದು ರಾಜನು ಆಕೆಯನ್ನು ಕಾರಾಗೃಹದಲ್ಲಿಟ್ಟಿರುವನೆಂಬ ವಾರ್ತೆಯನ್ನು ಕೇಳಿದಕೂಡಲೆ ವಿಜಯನ ಕಿವಿಗಳಲ್ಲಿ ಕಾಯಿಸಿದ ಸೀಸವನ್ನು ಸುರಿದಂತಾಯಿತು. ಆದರೆ ತನ್ನ ತಾಯಿಯು ಮಹಾ ಪತಿವ್ರತೆಯೂ, ಶೀಲವತಿಯೆಂಬ ನಾಮಕ್ಕೆ ತಕ್ಕಗುಣವತಿಯೂ ಎಂಬ ವಿಚಾರವು ಮಾತ್ರ ವಿಜಯನ ಮನಸ್ಸಿನಲ್ಲಿ ದೃಢವಾಗಿತ್ತು. ಆದುದರಿಂದ ಆಕೆ ಅಂತಹ ದುರಾಚಾರಿಣಿ ಯಾಗಿರಲಾರಳೆಂದು ನಂಬಿ, ಕೂಡಲೇ ತಂದೆಯ ಬಳಿಗೆ ಹೋಗಿ ನಮಸ್ಕರಿಸಿ, “ಜನಕಾ! ಮಾತೆಯಾದ ಶೀಲವತಿಯ ಗುಣವನ್ನು ನೀನು ಪರೀಕ್ಷಿಸಿದರೆ ಆಕೆಯು ನಿರ್ದೋಷಿಯೆಂಬುದು ನಿನ್ನ ಗೋಚರಕ್ಕೆ ಬಾರದೆ ಇರದು. ಆ ಮಹಾ ಪತಿವ್ರತೆಯ ವಿಷಯದಲ್ಲಿ ನೀನು ದಯೆಯನ್ನು ತೋರಿಸು.” ಎಂದು ಬೇಡಿಕೊಂಡನು. ಆದಕ್ಕೆ ರಾಜನು “ಎಲವೋ! ವಿಜಯಾ! ನಿಮ್ಮ ತಾಯಿಯ ಶೀಲವನ್ನು ನಾನೇ ಪ್ರತ್ಯಕ್ಷವಾಗಿ ನೋಡಿದೆನು. ಆದಕಾರಣ ನಿನ್ನ ವಾದವು ನನಗೆ ಬೇಡ. ಆ ನೀಚಳನ್ನೀದಿನ ನಾನು ಶೂಲಕ್ಕೆ ಹಾಕಿಸುವನು” ಎಂದು ಗಜರಿದನು. ವಿಜಯನು ತಂದೆಯ ಪಾದಗಳನ್ನು ಹಿಡಿದು “ಜನಕಾ! ಇದು ಏನೋ ವಿಚಿತ್ರ ವಿಷಯವಾಗಿರುವುದು. ಆಕೆ ಅಂತಹ ದುಶೀಲೆಯೆಂದು ನಿನಗೆ ಅಷ್ಟು ನಂಬುಗೆ ಇರುವುದಾದರೆ ಆಕೆಯು ಈ ವಿಚಾರವಾಗಿ ಏನು ಹೇಳುವಳೆಂಬುದನ್ನು ವಿಚಾರಿಸಿ ತಿಳಿದು, ಅನಂತರ ನಿನ್ನ ಇಷ್ಟಾನುಸಾರ ನಡೆಯಿಸ ಬಹುದು. ಅಪರಾಧಿನಿಯ ಮುಖದಿಂದ ಯಾವ ವಿಚಾರವನ್ನೂ ತಿಳಿಯದೆ ಹೀಗೆ ಮರಣದಂಡನೆಯನ್ನು ವಿಧಿಸುವುದು ನಿನ್ನಂತಹ ಸತ್ಯ ಪ್ರಭುವಿಗೆ ತಕ್ಕುದೇ ಎಂಬುದನ್ನು ದಯೆಯಿಟ್ಟು ಶಾಂತವಾಗಿ ಆಲೋಚಿಸಬೇಕು,” ಎಂದು ಕೈಮುಗಿದು ಬೇಡಿಕೊಂಡನು. ಅದಕ್ಕೆ ಆತನು “ಎಲವೋ! ಆ ಅಯೋಗ್ಯಳ ಮುಖವನ್ನೇ ನಾನು ನೋಡಲಾರೆನು. ಇನ್ನು ಅವಳ ಮುಖದಿಂದ ಕೇಳಬೇಕಾದ ವಿಚಾರವೇನು ತಾನೇ ಇರುವುದು? ಆದರೂ ನೀನು ಬಹಳವಾಗಿ ಪ್ರಾರ್ಥಿಸುವೆಯಾದುದರಿಂದ ಈ ದಿನ ಏರ್ಪಡಿಸಿರುವ ಶರವಿದ್ಯಾ ಪರೀಕ್ಷೆಯಲ್ಲಿ ನೀನು ಗೆಲ್ಲುವುದಾದರೆ ನಿನ್ನ ಇಷ್ಟದಂತೆ ಅವಳಿಗೆ ತನ್ನ ವಿಚಾರವಾಗಿ ನನ್ನೊಡನೆ ಮಾತನಾಡಲು ಅವಕಾಶ ಕೊಡುವೆನು,” ಎಂದನು. ಸದ್ಯಕ್ಕೆ ಇಷ್ಟು ಮಟ್ಟಿಗೆ ಆದುದೇ ಪುಣ್ಯವಶವೆಂದು ತಿಳಿದು ವಿಜಯನು ಆಗಬಹುದೆಂದು ಒಪ್ಪಿ ತಂದೆಗೆ ವಂದಿಸಿ ಹೊರಟನು.

ಇತ್ತಲಾ ಸೌದಾಮಿನಿ ಕಾದಂಬಿನಿಯರು, ಸವತಿಗೆ ತಕ್ಕ ಶಿಕ್ಷೆಯನ್ನು ಮಾಡಿಸಲು ತಾವು ಮಾಡಿದ ಉಪಾಯವು ಫಲಿಸಿತೆಂದು ನಲಿಯುತ್ತಿದ್ದರು. ಇವರ ಮಕ್ಕಳಾದ ಭಾನುತೇಜನೂ ರಾಜಹಂಸನೂ ಸಹ ರತ್ನ ಬಾಣವನ್ನು ವಿಜಯನ ಬತ್ತಳಿಕೆಯಲ್ಲಿಟ್ಟಿದ್ದುದರಿಂದ ಅವನನ್ನು ರಾಜನು ಕಳ್ಳನೆಂದು ಕ್ರೂರಶಿಕ್ಷೆಗೆ ಗುರಿಮಾಡುವನೆಂತಲೂ ರತ್ನ ಬಾಣವೂ, ರಾಜ್ಯಾಧಿಪತ್ಯವೂ, ರಮಣಿರತ್ನವೂ, ತಮ್ಮ ವಶವೇ ಆಗುವುವೆಂತಲೂ ಹಿಗ್ಗಿ ಆನಂದಪಡುತ್ತ, ಅಸ್ತ್ರವಿದ್ಯಾ ಪರೀಕ್ಷೆಗೆ ನಿಯಮಿತವಾಗಿದ್ದ ಕಾಲವನ್ನೇ ಅತಿಕುತೂಹಲದಿಂದ ಎದುರು ನೋಡುತ್ತಿದ್ದರು.

ಮೊದಲೇ ನಿಶ್ಚಿತವಾಗಿದ್ದಂತೆ ಮಧ್ಯಾಹ್ನವಾದ ಮೇಲೆ ಮೂರು ಘಂಟೆಯ ಸಮಯಕ್ಕೆ ಸರಿಯಾಗಿ ರಾಜನು, ಅರಮನೆಯ ಹಿಂದಣ ಉದ್ಯಾನದಲ್ಲಿ ಏರ್ಪಡಿಸಿದ್ದ ಲತಾಮಂಟಪ ಪ್ರದೇಶಕ್ಕೆ ಮಂತ್ರಿ ಪರಿವಾರ ಸಹಿತನಾಗಿ ಬಂದು ರತ್ನಾಸನದಲ್ಲಿ ಮಂಡಿಸಿದನು. ರಾಜನ ಬಲಗಡೆಯ ಭದ್ರಾಸನದಲ್ಲಿ ಮಂತ್ರಿವರ್ಯನಾದ ಧುರಂಧರನು ಕುಳಿತನು. ಮೂರು ಮಂದಿ ರಾಜಪುತ್ರರೂ ತಮ್ಮ ತಮ್ಮ ಧನುಸ್ಸುಗಳನ್ನೂ ಬತ್ತಳಿಕೆಗಳನ್ನೂ ತಂದು ಪರೀಕ್ಷೆಗೆ ಸಿದ್ಧರಾದರು. ರಾಜನು, ಮುಂದೆ ಕಾಣುತಿದ್ದ ಒಂದು ಎತ್ತರವಾದ ಹಲಸಿನಮರದ ಮೇಲ್ಗಡೆಯ ಕೊಂಬೆಯಲ್ಲಿದ್ದ ಒಂದು ಎಲೆಗೆ ಕರಿಯ ಚುಕ್ಕೆಯ ಗುರುತನ್ನು ಇಡಿಸಿ, ಆ ಎಲೆಯನ್ನು ಒಂದೇ ಬಾಣದಿಂದ ಯಾವನು ಹೊಡೆದು ಉದರಿಸುವನೋ ಕೊಡುವೆನೆಂದು ಅವನಿಗೆ ರತ್ನಬಾಣವನ್ನು ಕೊಡುವೆನೆಂದು ತಿಳಿಸಿದನು. ಆಗಬಹುದೆಂದು ಒಪ್ಪಿ, ಮೊದಲು ರಾಜಹಂಸನು ಬಾಣಪ್ರಯೋಗಮಾಡಿದನು. ಆದರೇನು? ಗುರಿಯು ತಪ್ಪಿ ಬಾಣವು ವ್ಯರ್ಥವಾಯಿತು. ಅವನು ಜೋಲುಮುಖವನ್ನು ಹಾಕಿಕೊಂಡು ಹಿಂದಿರುಗಿದನು. ಭಾನುತೇಜನೂ ಅಟ್ಟಹಾಸದಿಂದ ಮುಂದೆ ಬಂದು ಧನುಷ್ಟಂಕಾರ ಮಾಡಿ ಬಿಲ್ಲಿಗೆ ಬಾಣವನ್ನು ಹೂಡಿ ಗುರಿನೋಡಿ ಹೊಡೆದನು. ಆದರೂ ಬಾಣವು ಗುರಿಯ ಸಮೀಪಕ್ಕೆ ಸಹ ಹೋಗದೆ ಬೇರೆ ಎಲೆಗಳು ಉದುರಿದವು. ತಮ್ಮನಂತೆಯೇ ಇವನ ಮುಖವೂ ಕಳೆಗುಂದಿತು, ಅಸೂಯಾಪರರೂ, ದುಷ್ಟರೂ ಆದ ಭಾನುತೇಜ ರಾಜಹಂಸರ ಡಂಭವು ಅಡಗಿತು. ತೇಜವು ಕುಂದಿತು. ಆಸೆಯು ವ್ಯರ್ಥವಾಯಿತು.

ಇಷ್ಟು ಹೊತ್ತಿಗೆ ರತ್ನ ಬಾಣವನ್ನೆಲ್ಲಿದ್ದರೂ ಕಂಡುಹಿಡಿದು ಅಪಹರಿಸಬೇಕೆಂದು ಮಾಯಾ ಗೃಧ್ರವೇಷಧಾರಿಯಾಗಿ ಅಗ್ನಿಶಿಖ ರಾಕ್ಷಸನು ನಾನಾ ಪ್ರದೇಶಗಳನ್ನು ಸಂಚರಿಸಿ ವೇದವತೀ ನಗರದ ಮೇಲೆ ಹಾರಾಡುತ್ತ ಇದ್ದನು.

ತಮ್ಮಂದಿರಿಬ್ಬರೂ ಸೋತ ನಂತರ, ವಿಜಯನು ಮುಂದೆ ಬಂದು ತಂದೆಯ ಪಾದಗಳಿಗೆ ನಮಸ್ಕರಿಸಿ ಧನುಷ್ಟಂಕಾರ ಮಾಡಿ ಬತ್ತಳಿಕೆಯಿಂದ ಬಾಣವನ್ನೆಳೆದು ಗುರಿಗೆ ಹೊಡೆದನು. ಆ ಕ್ಷಣವೇ ರಾಜನು ಕರಿಯ ಗುರುತನ್ನಿಡಿಸಿ ಗುರಿಯಾಗಿಟ್ಟಿದ್ದ ಎಲೆಯು ನೆಲಕ್ಕೆ ಉದುರಿತು. ವಿಜಯನು ಗೆದ್ದನೆಂದು ಎಲ್ಲರೂ ಕರತಾಡನಗಳನ್ನುತ್ಸಾಹದಿಂದ ಮಾಡುತ್ತಿರುವಲ್ಲಿ ವಿಜಯನ ಧನುಸ್ಸಿನಿಂದ ಹೊರಟ ಬಾಣವು ರತ್ನ ಮಯವಾಗಿ ಥಳಥಳಿಸು ತಿದ್ದುದನ್ನು ರಾಜನು ನೋಡಿ, ಇದು ಯಾವ ಬಾಣವೆಂದಾಶ್ಚರ್ಯ ಪಡುತ್ತಿರುವಲ್ಲಿ, ಭಾನುತೇಜ ರಾಜಹಂಸರು ತಂದೆಯ ಬಳಿಗೆ ಬಂದು “ಜನಕಾ! ಅದೋ! ಅದೋ! ವಿಜಯನು ನಿನ್ನ ರತ್ನ ಬಾಣವನ್ನು ಕದ್ದಿರುವನು” ಎಂದು ತೋರಿಸಿದರು. ರಾಜನು ತಾನು ರತ್ನ ಬಾಣವನ್ನಿಟ್ಟಿದ್ದ ಬತ್ತಳಿಕೆಯನ್ನು ತರಿಸಿ ನೋಡುವಲ್ಲಿ ಅದು ಬರಿಯದಾಗಿದ್ದಿತು. ಆಗ ವಿಜಯನು ಅದನ್ನು ಕದ್ದನೆಂಬುದೇ ರಾಜನ ಮನಸ್ಸಿನಲ್ಲಿ ದೃಢವಾಯಿತು. ಆ ಬಾಣವಾದರೋ ಗುರಿಯಾಗಿದ್ದ ಎಲೆಯನ್ನು ಉದುರಿಸಿದುದಲ್ಲದೆ ವಾಯುವೇಗದಿಂದ ಹೋಗಿ, ಮೇಲೆ ರತ್ನ ಬಾಣವನ್ನು ಕಂಡುಹಿಡಿಯಲು ಹಾರಾಡುತ್ತಿದ್ದ ಮಾಯಾಗೃಧ್ರರಾಜನ ಪಕ್ಕೆಗೆ ಚುಚ್ಚಿಕೊಂಡಿತು. ಆ ಹಕ್ಕಿಯ ಮೈಯಿಂದ ರಕ್ತದ ತೊಟ್ಟುಗಳು ನೆಲಕ್ಕೆ ಬಿದ್ದುವೇ ಹೊರತು ಬಾಣವು ಮಾತ್ರ ಕೆಳಗೆ ಬೀಳಲೇ ಇಲ್ಲ. ಆದರೆ ಹದ್ದು ಬಾಣದೊಡನೆ ಹಾರಿಹೋದುದನ್ನು ವಿಜಯನು ಕಂಡನು. ಅದು ಎಲ್ಲಿ ಹೋಯಿತೆಂಬುದು ತಿಳಿಯಲಿಲ್ಲ. ಗೃಧ್ರರಾಜನು ಬಾಣಹತಿಯಿಂದ ನೊಂದು ಬಹಳ ಕಷ್ಟದಿಂದ ಹಾಗೆಯೇ ಹಾರಿ ರತ್ನ ದ್ವೀಪ ಪ್ರಾಂತಕ್ಕೆ ಬಂದು ಸೇರಿ ತನ್ನ ನಿಜರೂಪವನ್ನು ಪಡೆದನು. ಚುಚ್ಚಿಕೊಂಡಿದ್ದ ಬಾಣವನ್ನು ಮಾತ್ರ ಶರೀರದಿಂದ ಕೀಳಲು ಸಾಧ್ಯವಾಗಲಿಲ್ಲ. ಆದಕಾರಣ ಹಾಗೆಯೇ ಒಲು ನೋವಿನಿಂದ ನರಳುತ್ತ ಅಗ್ನಿಶಿಖನು ಹಾಸುಗೆ ಹತ್ತಿ ಮಲಗಿದನು.

ಇತ್ತ, ಆ ಚಂದ್ರಸೇನರಾಜನು, ತಾನು ಕಷ್ಟಪಟ್ಟು ತಪಸ್ಸಿನಿಂದ ಶಂಕರನನ್ನು ಮೆಚ್ಚಿಸಿ ಪಡೆದ ಅಮೋಘವಾದ ರತ್ನ ಬಾಣವನ್ನು ವಿಜಯನು ಕದ್ದುದೂ ಅಲ್ಲದೆ, ಅದನ್ನು ಯಾರಿಗೂ ಇಲ್ಲದಂತೆ ಕಳೆದುಬಿಟ್ಟನೆಂದು ಅವನ ಮೇಲೆ ಕಿಡಿಕಿಡಿಯಾಗಿ ಕೆರಳಿದನು. ಆಗ ವಿಜಯನು ಕೋಪಗೊಳ್ಳದೆ ವಿನಯದಿಂದ ತಂದೆಗೆ ಕೈಮುಗಿದು, “ಅಪ್ಪಾ! ನಿಜಾಂಶವನ್ನು ದಯವಿಟ್ಟು ಲಾಲಿಸಬೇಕು. ರತ್ನ ಬಾಣವನ್ನು ನಾನು ಕದ್ದವನಲ್ಲ. ಅದು ನನ್ನ ಬತ್ತಳಿಕೆಗೆ ಹೇಗೆ ಬಂದು ಸೇರಿತೆಂಬುದೂ ನನಗೆ ತಿಳಿಯದು. ಅದು ಹೇಗಾದರೂ ಇರಲಿ, ರತ್ನ ಬಾಣವನ್ನು ತಂದು ನಿನ್ನ ಸನ್ನಿಧಿಗೆ ಅರ್ಪಿಸುವ ಭಾರವು ನನ್ನದಾಗಿರುವುದು. ಆದರೆ ಈಗ ಪರೀಕ್ಷೆಯಲ್ಲಿ ನಾನೇ ಜಯಶಾಲಿಯಾಗಿರುವುದರಿಂದ ನಿನ್ನ ವಾಗ್ದಾನದಂತೆ ನಮ್ಮ ತಾಯಿಯನ್ನು ಸರಿಯಾದ ವಿಚಾರಣೆಯಿಲ್ಲದೆ ಶಿಕ್ಷಿಸಲಾಗದೆಂದು ಮತ್ತೆ ಬೇಡಿಕೊಳ್ಳುತ್ತೇನೆ” ಎಂದನು. ಅದಕ್ಕೆ ರಾಜನು “ಎಲೈ! ನೀನು ಪರೀಕ್ಷೆಯಲ್ಲಿ ಗೆದ್ದಿರುವುದರಿಂದ ನಾನು ನನ್ನ ವಾಗ್ದಾನವನ್ನೇನೋ ನಡೆಯಿಸಿಕೊಡುವೆನು. ಆದರೆ ಆ ಅಮೋಘವಾದ ಬಾಣವನ್ನು ನೀನು ನನಗೆ ಕ್ಷಿಪ್ರದಲ್ಲಿ ತಂದೊಪ್ಪಿಸಬೇಕು. ಇಲ್ಲವಾದರೆ ನಿನ್ನನ್ನೂ, ನಿನ್ನ ತಾಯಿಯನ್ನೂ ಇಬ್ಬರನ್ನೂ ಹಿಡಿದು ಶಿರಚ್ಛೇದನ ಮಾಡಿಸುವೆನು” ಎಂದನು. ಅದಕ್ಕೆ ವಿಜಯನು “ಅಪ್ಪಾ! ಈ ದಿನ ಶುಕ್ಲ ಪಕ್ಷದ ಪಾಡ್ಯಮಿಯು, ಬರುವ ಪೂರ್ಣಿಮೆಯವರೆಗೂ ನನಗವಧಿಯನ್ನು ಕೊಡು, ಅಷ್ಟರೊಳಗಾಗಿ ನಾನು ನಿನ್ನ ರತ್ನ ಬಾಣವೆಲ್ಲಿದ್ದರೂ ಹುಡುಕಿ ತಂದೊಪ್ಪಿಸುವೆನು. ಆವರೆಗೂ ನನ್ನ ತಾಯಿಯ ಪ್ರಾಣವನ್ನು ಮಾತ್ರ ಕಾಪಾಡಿರ ಬೇಕು. ಅವಧಿಯಲ್ಲಿ ನಾನು ಜಯಶಾಲಿಯಾಗಿ ಬಾರದಿದ್ದರೆ ನನ್ನ ತಾಯಿಯ ವಿಷಯದಲ್ಲಿಯೂ, ನನ್ನ ವಿಚಾರದಲ್ಲಿಯೂ ನಿನ್ನ ಚಿತ್ತಾನುಸಾರ ನಡೆಯಿಸಬಹುದು” ಎಂದನು. ಅದಕ್ಕೆ ಧುರಂಧರನು, ಈ ಆಲೋಚನೆಯು ಸಮಂಜಸವಾಗಿರುವುದೆಂದು ರಾಜನೊಡನೆ ಹೇಳಿ, ಇದಕ್ಕೆ ಒಪ್ಪುವುದುಚಿತವೆಂದನು. ಅದರಂತೆ ರಾಜನು ಒಪ್ಪಿ ಹದಿನಾಲ್ಕು ದಿನಗಳ ಅವಧಿಯನ್ನು ಕೊಟ್ಟು ವಿಜಯನನ್ನು ಪ್ರಯಾಣಮಾಡಿಸಿ ಶೀಲವತಿಯನ್ನು ಪುನಃ ತನ್ನಾಜ್ಞೆಯಾಗುವವರೆಗೂ ಕಾರಾಗೃಹದಲ್ಲಿ ಎಚ್ಚರಿಕೆಯಿಂದ ನೋಡಿಕೊಳ್ಳುತ್ತಿರಬೇಕೆಂದು ಆಜ್ಞೆ ಮಾಡಿದನು. ಇದನ್ನರಿತು ಸೌದಾಮಿನಿ ಕಾದಂಬಿನಿಯರು ಶೀಲವತಿಯ ಜೀವಿತದ ಅವಧಿಯು ಹದಿನಾಲ್ಕು ದಿನಗಳು ಹೆಚ್ಚಿದುದಕ್ಕಾಗಿ ಮನಸ್ಸಿನಲ್ಲಿ ಖೇದಗೊಂಡರು. ಆದರೆ ರತ್ನ ಬಾಣವನ್ನು ಹುಡುಕಿಕೊಂಡು ಹೋದ ವಿಜಯನು ಜಯಶಾಲಿಯಾಗಿ ಶರವನ್ನು ತರುವುದು ಅಸಂಭವವೆಂದು ಇವರು ಮನಸ್ಸಿನಲ್ಲಿ ಸ್ಥಿರಮಾಡಿಕೊಂಡು ತಮ್ಮ ಮಕ್ಕಳಲ್ಲಿ ಯಾರಾದರೂ ಒಬ್ಬನಿಗೆ ರಾಜ್ಯಾಧಿಪತ್ಯವೂ, ಮತ್ತೊಬ್ಬನಿಗೆ ವಿದ್ಯಾಧರಿಯ ಪಾಣಿಗ್ರಹಣವೂ ಆಗುವಂತೆ ಸಂಧಾನಮಾಡಬೇಕೆಂತಲೂ, ಹಾಗೆ ಕ್ಷಿಪ್ರದಲ್ಲಿ ಏರ್ಪಡಿಸಿ ನಡೆಯಿಸಿದರೆ, ಅನಂತರ ವಿಜಯನು ಬಂದರೂ ಅವನಿಗೆ ಯಾವ ಪ್ರಯೋಜನವೂ ಆಗದೆ ತಮ್ಮ ಇಷ್ಟಾರ್ಥವೇ ಫಲಿಸುವುದೆಂತಲೂ ನಿಶ್ಚಯಿಸಿಕೊಂಡರು. ರಾಜನಿಗೂ ಸಹ ವಿಜಯನು ರತ್ನ ಶರವನ್ನು ತರುವ ವಿಷಯದಲ್ಲಿ ಸಂಪೂರ್ಣವಾದ ಸಂದೇಹವೇ ಉಂಟಾಗಿತ್ತು. ಹೇಗಾದರೂ ಅಯೋಗ್ಯಳಾದ ಶೀಲವತಿಯೂ, ಆ ದುಷ್ಟಳ ಮಗನಾದ ವಿಜಯನೂ ತನ್ನ ಎದುರಿಗಿಲ್ಲದೆ ತೊಲಗಿದರೆಂದು ಆಲೋಚಿಸಿ ತನ್ನ ವಾಗ್ದಾನದಂತೆ ಹದಿನಾಲ್ಕು ದಿನಗಳವರೆಗೂ ಶೀಲವತಿಯನ್ನು ಪ್ರಾಣದಿಂದಿಟ್ಟಿರ ಬೇಕಾದುದವಶ್ಯವೆಂತಲೂ, ಅವಧಿಯ ಹದಿನಾಲ್ಕು ದಿನಗಳು ಕಳೆದ ಮಾರನೆಯ ದಿನವೇ ಶೀಲವತಿಯನ್ನು ತಮ್ಮ ಕುಲದೈವವಾದ ಮಹಾಕಾಳಿಗೆ ಬಲಿಯಾಗಿ ಒಪ್ಪಿಸಬೇಕೆಂತಲೂ ನಿಶ್ಚಯಿಸಿ, ರಾಜನು ಅಧಿಕಾರಿಗಳಿಗೆ ಆಜ್ಞೆ ಮಾಡಿದನು. ವಿದ್ಯಾಧರಿಯನ್ನು ತಮ್ಮ ಮಕ್ಕಳಲ್ಲಿ ಒಬ್ಬನಿಗೆ ತಂದು ವಿವಾಹಮಾಡಿಕೊಳ್ಳಬೇಕೆಂಬ ಕುತೂಹಲದಿಂದ ಇದ್ದ ಸೌದಾಮಿನಿ ಕಾದಂಬಿನಿಯರು, ವಿಜಯನು ವಿಜಯಶಾಲಿಯಾಗಿ ಬರುವುದು ಅಸಂಭವವೆಂತಲೂ, ಒಂದು ವೇಳೆ ಅವನು ಜೀವದಿಂದ ಬಂದರೂ ಆ ಕುಲಟೆಯ ಮಗನಿಗೆ ಮಂತ್ರಿ ಪುತ್ರಿಯಾದ ವಿದ್ಯಾಧರಿಯಂತಹ ಕನ್ಯೆಯನ್ನು ತಂದು ವಿವಾಹ ಮಾಡುವುದೂ ರಾಜ್ಯಾಧಿಪತ್ಯವನ್ನು ಕೊಡುವುದೂ ಸಮ್ಮತವಲ್ಲ ವೆಂತಲೂ, ಅದರಿಂದ ವಿದ್ಯಾಧರಿಯನ್ನು ಭಾನುತೇಜ ರಾಜಹಂಸರಲ್ಲಿ ಒಬ್ಬನಿಗೆ ವಿವಾಹಮಾಡಿ ಮತ್ತೊಬ್ಬನಿಗೆ ರಾಜ್ಯಾಧಿಪತ್ಯವನ್ನು ಕೊಡುವ ಸಂಕಲ್ಪ ಮಾಡಬೇಕೆಂತಲೂ, ಸಮಯವರಿತು ರಾಜನ ಮನಸ್ಸಿಗೆ ತಾಕುವಂತೆ ಆಗಾಗ ಒತ್ತಿ ಹೇಳುತ್ತ ಬಂದರು. ರಾಜನೂ ಸಹ ಇವರ ಮಾತುಗಳಿಗೆ ನಮ್ರನಾಗಿ ಅದರಂತೆ ಮಾಡಲು ಒಪ್ಪಿದನು.

ಮಂತ್ರಿಯಾದ ದುರಂಧರನಾದರೋ ಮೂರು ಮಂದಿ ರಾಜಪುತ್ರರನ್ನೂ ಬಾಲ್ಯದಿಂದಲೂ ಚೆನ್ನಾಗಿ ಬಲ್ಲವನು. ವಿಜಯನ ಗುಣ, ಗಾಂಭೀರ್ಯ, ಚಾತುರ್ಯಗಳ ವಿಷಯದಲ್ಲಿ ಆತನಿಗೆ ಹೆಚ್ಚು ಗೌರವವೂ ಪ್ರೀತಿಯೂ ಇತ್ತು. ಇದರಿಂದ ಅವನಿಗೇ ತನ್ನ ಪುತ್ರಿಯಾದ ವಿದ್ಯಾಧರಿಯನ್ನು ಕೊಟ್ಟು ವಿವಾಹಮಾಡಬೇಕೆಂಬ ಕುತೂಹಲವು ಆತನಿಗಿತ್ತು.

ವಿದ್ಯಾಧರಿಯಾದರೋ ವಿಜಯನಲ್ಲಿ ಬದ್ಧಾನುರಾಗೆಯಾಗಿ ಸದಾ ಅವನ ನಾಮಸ್ಮರಣೆಯಲ್ಲಿಯೇ ಕಾಲವನ್ನು ಕಳೆಯುತ್ತ, ಚಿತ್ತದಲ್ಲಿ ಅವನ ಬಿಂಬವನ್ನೇ ನೋಡುತ್ತ ವಿರಹವ್ಯಥೆಯಿಂದ ದಿನಗಳನ್ನು ಯುಗಗಳಂತೆ ನೂಕುತ್ತಿದ್ದಳು.

ಭಾನುತೇಜನೂ, ರಾಜಹಂಸನೂ ವಿಜಯನು ಹೊರಟುಹೋದುದರಿಂದ ಬಹಳ ಸಂತೋಷಪಟ್ಟು ಅವನು ಬರುವುದರೊಳಗಾಗಿ ಹೇಗಾದರೂ ವಿದ್ಯಾಧರಿಯ ಮನವನ್ನು ತಮ್ಮ ಕಡೆಗೆ ತಿರುಗಿಸಿಕೊಳ್ಳಬೇಕೆಂದು ನಾನಾ ಪ್ರಯತ್ನಗಳನ್ನು ಮಾಡುತ್ತ ಬಂದರು. ವಿದ್ಯಾಧರಿಯ ಚಿತ್ರವಾದರೋ ವಿಜಯನಲ್ಲಿಯೇ ಲೀನವಾಗಿ ಹೋಗಿದ್ದುದರಿಂದ ಇವರ ಪ್ರಯತ್ನಗಳೊಂದೂ ಫಲಿಸಲಿಲ್ಲ. ಸೌದಾಮಿನಿ ಕಾದಂಬಿನಿಯರೂ ಸಹ ಇವಳಿಗೆ ನಾನಾ ರೀತಿಯಿಂದ ಬೋಧನೆಗಳನ್ನು ಮಾಡಿ ವಿಜಯನಲ್ಲಿ ದ್ವೇಷವನ್ನೂ, ಭಾನುತೇಜ ರಾಜಹಂಸರಲ್ಲಿ ಅನುರಾಗವನ್ನೂ ಹುಟ್ಟಿಸಲು ವಿಧವಿಧವಾದ ಪ್ರಯತ್ನಗಳನ್ನು ಮಾಡುತ್ತ ಬಂದರು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹಡೆದವ್ವನ ನೆನಪು
Next post ಯಾಕೆ?

ಸಣ್ಣ ಕತೆ

 • ಲೋಕೋಪಕಾರ!

  ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

 • ದೇವರು

  ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…

 • ಜೋತಿಷ್ಯ

  ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…

 • ನಿರೀಕ್ಷೆ

  ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

 • ಮುದುಕನ ಮದುವೆ

  ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…