ಹಾದಿ ಬೀದಿಯ ಗುಂಟ
ತಂಪು ನೆರಳಿನ ಸಾಲು
ತಂಗಾಳಿ ತೀಡಿ,
ಮುಂಗುರುಳು ಮೋಡಿ
ಮಲ್ಲಿಗೆಯ ನರುಗೆಂಪು
ಬಾನಾಡಿ ನುಡಿ ಇಂಪು
ಹಡೆದವ್ವ್ನ ನೆನಪು ನೂರ್ಕಾಲ

ತೌರೂರ ಬಾಳೆ
ತೊಯ್ದಾಟ ನೋಡು
ಕಣ್ಣೂರ ಮನೆಯಲ್ಲಿ
ಹನಿಗೂಡಿ ಹಾಡು
ಕಣ್ಣಕಾಡಿಗೆಗಿಂತ
ಮಣ್ಣವಾಸನೆ ಚೆಂದ
ಮಣ್ಣಿನ ಮಗಳ
ಮನಚೆಂದ
ಹಡೆದವ್ನ ನೆನಪು ನೂರ್ಕಾಲ

ಮೆದು ನುಡಿಯಲಿ
ಮರಳು ಮಾಡಿ ಮೃಷ್ಟಾನ ರುಚಿ
ತಣ್ಣೆಯನ್ನಕೆ ನೀಡಿ
ಉಣ್ಣಿಸಿದ ನೆನಪು ನೂರ್ಕಾಲ
ಕಂಕುಳಲಿ ಏರಿ ತೋಳಿಗೆ
ಜೋತಾಡಿ
ಕಾಡಿ ಬೇಡಿದ ನೆನಪು ನೂರ್ಕಾಲ
ಎರಡೇಟು ಹಿಂಗಾಲ್ಗೆ ಬಿಗಿದು
ಬಾಸುಂಡೆ ಬರೆ ಮುಂಗೈಗೆ ಎಳೆದು
ಬಗ್ಗಿ ನಡೆಯಲು ಕಲಿಸೆ
ಜಗ್ಗದೇ ಕಾಡಿದ ನೆನಪು ನೂರ್ಕಾಲ

ಹಾಸಿಗೆಯೂ ಹಾಸಿತ್ತು
ದೀಪವೂ ಉರಿದಿತ್ತು.
ಕಣ್ಣೂರ ಕೋಡಿಯೂ ಹರಿದಿತ್ತು
ತಾಯವ್ವನ ನಿರ್ಜೀವ ದೇಹವೂ ಮಲಗಿತ್ತು
ಹಡೆದವ್ವನ ನೆನಪು ನೂರ್ಕಾಲ.
*****

ನಾಗರೇಖಾ ಗಾಂವಕರ