ಕರ್ನಾಟಕ ಗಡಿ ಸಂಸ್ಕೃತಿಯ ನೆಲೆಗಳು

ಕರ್ನಾಟಕ ಗಡಿ ಸಂಸ್ಕೃತಿಯ ನೆಲೆಗಳು

ಕರ್ನಾಟಕದ ಗಡಿ ಸಂಸ್ಕೃತಿಯ ಸ್ವರೂಪ ವೈವಿಧ್ಯಮಯವಾದುದು. ಭಾಷಿಕವಾಗಿ ಆರ್ಥಿಕವಾಗಿ, ರಾಜಕೀಯವಾಗಿ ವಿಭಿನ್ನ ಚಿತ್ರಗಳು ವಿಭಿನ್ನ ರಾಜ್ಯಗಳಿಗೆ ಅಂಟಿಕೊಂಡ ಕರ್ನಾಟಕದ ಗಡಿ ಪ್ರದೇಶಗಳಲ್ಲಿ ಕಾಣಸಿಗುತ್ತವೆ. ಇದರೊಂದಿಗೆ ಭೌಗೋಳಿಕ ವಾತಾವರಣದೊಂದಿಗೆ ಅಂಟಿಕೊಂಡ ಜನರ ಬದುಕೂ ಸೇರಿ ಒಟ್ಟಾರೆ ಗಡಿ ಸಂಸ್ಕೃತಿ ವೈವಿಧ್ಯಮಯವಾಗಿ ಕಂಡುಬರುತ್ತದೆ. ಹಾಗಾಗಿ ಒಂದು ಗಡಿ ಪ್ರದೇಶವನ್ನು ಕುರಿತ ಚರ್ಚೆ ಎಷ್ಟೋ ಸಲ ಮತ್ತೊಂದು ಗಡಿ ಪ್ರದೇಶಕ್ಕೆ ಬಹುತೇಕ ಅನ್ವಯವಾಗುವುದಿಲ್ಲ. ಉದಾಹರಣೆಗೆ ಪಾವಗಡದ ಆರ್ಥಿಕತೆ ಮತ್ತು ಗಡಿ ಸಮಸ್ಯೆಯನ್ನು ಕುರಿತ ಚರ್ಚೆ ಕೊಡಗಿಗೆ ಅನ್ವಯವಾಗುವುದಿಲ್ಲ. ಆದ್ದರಿಂದ ಕರ್ನಾಟಕದ ಗಡಿ ಸಂಸ್ಕೃತಿಯ ವೈವಿಧ್ಯಮಯ ನೆಲೆಗಳನ್ನು ಕುರಿತ ಚರ್ಚೆ ಕೆಲವು ಒಳನೋಟಗಳ ಮೂಲಕ ಆಗಬೇಕೆಂದು ಆಶಿಸುತ್ತೇನೆ.

ಕರ್ನಾಟಕದ ಗಡಿ ಭಾಗಗಳ ಆರ್ಥಿಕ ನೆಲೆ ವಿವಿಧವಾದುದು. ಬೀದರ್, ರಾಯಚೂರು, ಬಳ್ಳಾರಿ, ಪಾವಗಡ, ಕೋಲಾರ- ಆ ಭಾಗಗಳಿಗೂ ಬೆಳಗಾವಿ, ಕೊಡಗು, ಕಾಸರಗೋಡು ಮೊದಲಾದ ಭಾಗಗಳಿಗೂ ಪ್ರಾಕೃತಿಕವಾಗಿಯೇ ವ್ಯತ್ಯಾಸಗಳಿವೆ. ಇಲ್ಲಿಯ ಮೊದಲ ಭಾಗದ ಪ್ರದೇಶಗಳಲ್ಲಿ ಉಷ್ಣಹವಾಮಾನ, ಬರ, ನೀರಾವರಿ ಸಮಸ್ಯೆ ಮೊದಲಾದ ಕಾರಣಗಳಿಂದ ವಾಣಿಜ್ಯ ಬೆಳೆಗಳನ್ನು ಇಲ್ಲಿ ಬೆಳೆಯಲಾಗುತ್ತಿಲ್ಲ. ಸರ್ಕಾರಕ್ಕೂ ಇದರಿಂದ ಹೆಚ್ಚು ಆದಾಯ ಬರುತ್ತಿಲ್ಲ. ಇದರೊಂದಿಗೆ ಸರ್ಕಾರದ ಉಪೇಕ್ಷೆಯೂ ಸೇರಿ ಇಲ್ಲಿಯ ಜೀವನಮಟ್ಟ ನಿರಾಶಾದಾಯಕವಾಗಿದೆ. ಪರಿಣಾಮವಾಗಿ ಬಡತನ, ಅನಕ್ಷರತೆ, ನಿರುದ್ಯೋಗ, ಅಪರಾಧ ಮೊದಲಾದ ನಕಾರಾತ್ಮಕ ಸಂಗತಿಗಳು ಇಲ್ಲಿ ಹೆಚ್ಚಾಗಿ ಕಂಡುಬರುತ್ತಿವೆ. ಆದ್ದರಿಂದಲೇ ಇಲ್ಲಿ ನಕ್ಸಲೈಟ್ ಹಾವಳಿಗಳು ಸಹ ಹೆಚ್ಚಾಗಿರುವುದು. ಇಂತಹ ಹಾವಳಿಗಳಿಗೆ ಬಡತನವೂ ಬಹಳ ಮುಖ್ಯ ಕಾರಣ ಎಂಬುದನ್ನು ಒಪ್ಪಬೇಕು.

ಇದಕ್ಕೆ ಪರ್ಯಾಯವಾದ ನೆಲೆಯಲ್ಲಿ ಕಾಣಬರುವ ಬೆಳಗಾವಿ, ಕಾಸರಗೋಡು, ಕೊಡಗುಗಳಂತಹ ಕರ್ನಾಟಕದ ಗಡಿ ಪ್ರದೇಶಗಳು ಆರ್ಥಿಕವಾಗಿ ಸಮೃದ್ಧವಾಗಿವೆ. ಇಲ್ಲಿ ಬೆಳೆಯುವುದು ಬಹುಪಾಲು ವಾಣಿಜ್ಯ ಬೆಳೆಗಳನ್ನೇ. ಆದ್ದರಿಂದ ಇಲ್ಲಿಯ ಪ್ರತಿಯೊಂದು ಎಕರೆಯೂ ಬೆಂಗಳೂರಿನಂತಹ ನಗರಗಳ ನಿವೇಶನಗಳಿಗಿಂತ ತುಟ್ಟಿಯಾಗಿರುವುದು.

ಒಟ್ಟಾರೆ ಇಂತಹ ಪ್ರದೇಶಗಳಲ್ಲಿ ಈ ಬಗೆಯ ‘ಭೂಮಿ’ ಮೂಲದ ಕಾರಣದಿಂದ ಜೀವನಮಟ್ಟವೂ ಸುಧಾರಿಸಿದ್ದು, ಇತರೆ ಪ್ರದೇಶಗಳಿಗಿಂತ ಬಡತನ, ಅನಕ್ಷರತೆ, ನಿರುದ್ಯೋಗ ಮೊದಲಾದ ವಿಚಾರಗಳಲ್ಲಿ ಸಾಕಷ್ಟು ದೂರ ನಿಂತಿದೆ. ಇಂತಹ ಪ್ರದೇಶಗಳಿಂದ ಸರ್ಕಾರಕ್ಕೂ ಹೆಚ್ಚಿನ ಆದಾಯ ಬರುತ್ತಿದ್ದು, ಸರ್ಕಾರವೂ ಇವುಗಳ ಬಗ್ಗೆ ತೀವ್ರ ಕಾಳಜಿಯನ್ನು ಇರಿಸಿಕೊಳ್ಳಲು ಸಾಧ್ಯವಾಗಿದೆ. ಆದ್ದರಿಂದಲೇ ಕೊಡಗಿನಲ್ಲಿ ಪ್ರತ್ಯೇಕತೆಯ ಕೂಗು ಏಳುವುದು. ಆದರೆ ಇಂತಹ ಕೂಗು ಪಾವಗಡದಂತಹ ಪ್ರದೇಶಗಳಲ್ಲಿ ಏಳದೇ ಇರುವುದು ಅದರ ಆರ್ಥಿಕ ಮೂಲವಾದ ಕಾರಣದಿಂದಲೇ ಎಂಬುದು ಸ್ಪಷ್ಟ. ಇಲ್ಲಿ ಪಂಜಾಬಿನ ಪ್ರತ್ಯೇಕತೆಯ ಕೂಗನ್ನು ಸಹ ಸ್ಮರಿಸಬಹುದು. ಕಾಶ್ಮೀರಕ್ಕಾಗಿ ಪಾಕಿಸ್ತಾನವು ನಡೆಸುತ್ತಿರುವ ಹೋರಾಟವನ್ನು ಸಹ ಇದರೊಂದಿಗೆ ಸ್ಮರಿಸಬಹುದು.

ಹೀಗೆ ಆರ್ಥಿಕವಾಗಿ ಸಮೃದ್ಧವಾದ ಈ ಪ್ರದೇಶಗಳು ಅಂತರರಾಜ್ಯ ಗಡಿ ಸಮಸ್ಯೆಯಲ್ಲಿಯೂ ಮುಖ್ಯ ಮರ್ಮಗಳಾಗಿವೆ. ಆದ್ದರಿಂದಲೇ ಮಹಾರಾಷ್ಟ್ರವು ಬೆಳಗಾವಿಯನ್ನು ಕಬಳಿಸಲು ತೀವ್ರ ಹೋರಾಟ ನಡೆಸಿದರೆ, ಕೇರಳ ರಾಜ್ಯವು ಕಾಸರಗೋಡನ್ನು ಕಬಳಿಸಲು ಯತ್ನಿಸಿ, ಸಫಲವೂ ಆಗಿದೆ. ಈ ಬಗೆಯ ಹೋರಾಟದ ಕಾವು ಇನ್ನೂ ಆ ಪ್ರದೇಶಗಳಲ್ಲಿ ಜೀವಂತವಾಗಿದೆ. ಆದರೆ ಇಂತಹ ಹೋರಾಟವಾಗಲೀ, ಬಿಸಿಯಾಗಲೀ ಪಾವಗಡ ಮತ್ತು ರಾಯಚೂರಿನಂತಹ ಗಡಿ ಪ್ರದೇಶಗಳಲ್ಲಿ ಇಲ್ಲದೇ ಇರುವುದು ಯಾವುದೇ ರಾಜ್ಯದ ಜನತೆಯ ನಾಡಭಿಮಾನದ ವಿಚಾರವಲ್ಲ; ಅದು ಆರ್ಥಿಕ ಮೂಲವಾದ ವಿಚಾರ. ಆದ್ದರಿಂದಲೇ ಮಡಕಶಿರಾ ಕರ್ನಾಟಕಕ್ಕೆ ಸೇರುವ ವಿಚಾರವಾಗಲಿ, ಪಾವಗಡ ಆಂಧ್ರಕ್ಕೆ ಸೇರುವ ವಿಚಾರವಾಗಲಿ ತೀವ್ರತೆಯನ್ನು ಪಡೆದುಕೊಂಡಿಲ್ಲ. ಸರ್ಕಾರವೂ ಇದನ್ನು ಲಕ್ಷಿಸುತ್ತಿಲ್ಲ. ಪರಿಣಾಮವಾಗಿ ಇಲ್ಲಿ ಅಭಿವೃದ್ಧಿ ಕೆಲಸಗಳಾದ ಕೈಗಾರಿಕೆಗಳ ಸ್ಥಾಪನೆಯಾಗಲೀ, ವಾಣಿಜ್ಯ ಚಟುವಟಿಕೆಗಳಾಗಲೀ, ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣವಾಗಲೀ ಸಾಧ್ಯವಾಗುತ್ತಿಲ್ಲ.

ಹೀಗೆ ಭೂಮಿ ಮತ್ತು ಬದುಕು-ಈ ಎರಡರ ನಡುವೆ ಇರುವ ಅಂತರ್ ಸಂಬಂಧದಿಂದ ಕರ್ನಾಟಕದ ಪಶ್ಚಿಮ ಮತ್ತು ಪೂರ್ವ ಗಡಿ ಪ್ರದೇಶಗಳ ಸಾಂಸ್ಕೃತಿಕ ನೆಲೆಗಳಲ್ಲಿ ಈ ಬಗೆಯ ವ್ಯತ್ಯಾಸವಿರುವುದು. ಇದು ಆರ್ಥಿಕ ಮೂಲವಾದ ಸ್ಥೂಲ ಸಾಂಸ್ಕೃತಿಕ ಗ್ರಹಿಕೆ.
* * *
ಕರ್ನಾಟಕದ ಗಡಿ ಪ್ರದೇಶಗಳಿಗೂ ಆತಂಕಕ್ಕೂ ತೀರಾ ನಿಕಟ ನಂಟು. ಕರ್ನಾಟಕದ ಮಟ್ಟಿಗೆ ಇದು ಆಂಧ್ರಕ್ಕೆ ಹೊಂದಿಕೊಂಡ ಕನ್ನಡದ ಪ್ರದೇಶಗಳಿಗೆ ಹೆಚ್ಚು ಅನ್ವಯವಾಗುತ್ತದೆ. ಆದ್ದರಿಂದ ಪೊಲೀಸ್ ಇಲಾಖೆಯ ಗಸ್ತು ಇಲ್ಲಿ ವಿಶೇಷ. ಜನರೂ ಇದನ್ನು ಅರಿತಿದ್ದು, ಸೂರ್ಯ ಮುಳುಗುವ ಮೊದಲೇ ತಮ್ಮ ದಿನನಿತ್ಯದ ಹೊರಗಿನ ವ್ಯವಹಾರಗಳನ್ನು ಮುಗಿಸಿಕೊಳ್ಳುವುದು ರೂಢಿ. ಈ ಹಿನ್ನೆಲೆಯಲ್ಲಿ ಮಡಕಶಿರಾ-ಪಾವಗಡದ ಜನರೂ ಸಹ ಸೂರ್ಯನ ಮಿತ್ರರೇ ವಿನಃ ಚಂದ್ರನ ಮಿತ್ರರಲ್ಲ!

ಕರ್ನಾಟಕದ ಗಡಿ ಸಂಸ್ಕೃತಿ ದ್ವಿಭಾಷಿಕವಾದುದು. ಇದು ಬಹುತೇಕ ಎಲ್ಲಾ ಗಡಿ ಪ್ರದೇಶಗಳಿಗೂ ಅನ್ವಯವಾಗುವ ಮಾತು. ಉದಾಹರಣೆಗೆ ಬೀದರಿನಲ್ಲಿ ಕನ್ನಡ ಮತ್ತು ಉರ್ದು; ಪ್ರಧಾನ ಭಾಷೆಗಳಾಗಿದ್ದರೆ, ಬಳ್ಳಾರಿ, ಪಾವಗಡ, ಕೋಲಾರ ಮೊದಲಾದ ಪ್ರದೇಶಗಳಲ್ಲಿ ಕನ್ನಡ ಮತ್ತು ತೆಲುಗು ಪ್ರಧಾನ ಆಡುಭಾಷೆಗಳಾಗಿವೆ. ಕೊಡಗಿನಲ್ಲಿ ಕೊಡವ ಪ್ರಧಾನವಾಗಿದ್ದರೆ, ದಕ್ಷಿಣ ಕನ್ನಡದಲ್ಲಿ ತುಳು ಜನರ ಅನಧಿಕೃತ ವ್ಯವಹಾರ ಭಾಷೆಯಾಗಿದೆ. ಉತ್ತರ ಕನ್ನಡದಲ್ಲಿ ಕೊಂಕಣಿ ಇದ್ದರೆ, ಬೆಳಗಾವಿಯಲ್ಲಿ ಮರಾಠಿ ಇದೆ. ಇನ್ನು ತಮಿಳು; ಕೆ.ಜಿ.ಎಫ್.ನಲ್ಲಿ ಮುಖ್ಯವಾಗಿ, ಕರ್ನಾಟಕದ ದಕ್ಷಿಣ ಜಿಲ್ಲೆಗಳಲ್ಲಿ ಗಮರ್ನಾಹವಾಗಿ ಪ್ರಚಲಿತದಲ್ಲಿದೆ.

ಇದು ಕೇವಲ ಈ ಹೊತ್ತಿನ ಸತ್ಯವಲ್ಲ, ಇದಕ್ಕೆ ನೂರಾರು ವರ್ಷಗಳ ಚರಿತ್ರೆ ಇದೆ. ಹಾಗಾಗಿ ಈ ಎಲ್ಲಾ ಪ್ರದೇಶಗಳಲ್ಲಿ ಕನ್ನಡವೇ ಮೊದಲ ಭಾಷೆಯಾಗಬೇಕು ಎಂದು ಕ್ಷಣದಲ್ಲಿಯೇ ಮಿಲಿಟರಿ ಆಡಳಿತ ಹೇರಿದರೆ, ಅದರಿಂದ ಇಲ್ಲಿ ಕನ್ನಡ ಬೆಳೆಯುವ ಬದಲು ಇಲ್ಲಿಯ ಸಂಸ್ಕೃತಿ ನಶಿಸುತ್ತದೆ. ಉಸಿರು ಕಟ್ಟಿದ ವಾತಾವರಣ ನಿರ್ಮಾಣವಾಗುತ್ತದೆ. ಆದ್ದರಿಂದ ಕರ್ನಾಟಕವು ಕನ್ನಡವನ್ನು ಅಧಿಕೃತ ರಾಜ್ಯ ಭಾಷೆ ಎಂದು ಒಪ್ಪಿರುವುದರಿಂದ ಕ್ರಮಾನುಗತವಾಗಿ ಕನ್ನಡದ ಬಗೆಗೆ ಜನಜಾಗೃತಿ ಉಂಟುಮಾಡುವ ಮೂಲಕ ನಾವು ಕಾರ್ಯೋನ್ಮುಖಗೊಂಡರೆ, ಅದು ಪ್ರಜಾಸತ್ತಾತ್ಮಕಕವೂ ಆಗುತ್ತದೆ. ಅದೇ ಸಂದರ್ಭದಲ್ಲಿ ತುಳುನಾಡಿನಲ್ಲಿ ತುಳುವನ್ನು,ಕೊಡಗಿನಲ್ಲಿ ಕೊಡವ ಭಾಷೆಯನ್ನು, ಉತ್ತರ ಕನ್ನಡದಲ್ಲಿ ಕೊಂಕಣಿಯನ್ನು ಮಾನ್ಯ ಮಾಡುವುದು ಸಹ ಬಹುಭಾಷೆ ಮತ್ತು ಬಹುಸಂಸ್ಕೃತಿಗಳನ್ನು ಗೌರವಿಸುವ ನಮ್ಮ ಸಂವಿಧಾನಕ್ಕೆ ನಾವು ತೋರುವ ಗೌರವವೂ ಆಗಿರುತ್ತದೆ. ಯಾಕೆಂದರೆ, ಈ ಮೂರ್‍ನಾಲ್ಕು ಭಾಷೆಗಳು ತಮಿಳು, ಮರಾಠಿ, ತೆಲುಗುಗಳಂತೆ ಅನ್ಯ ರಾಜ್ಯಗಳ ಮೂಲದವುಗಳಲ್ಲ. ಈ ರಾಜ್ಯದಲ್ಲಿಯೇ ಅನಾದಿ ಕಾಲದಿಂದಲೂ ಹುಟ್ಟಿ ಬೆಳೆದು ಬಂದಿರುವುದು. ಆದ್ದರಿಂದ ನಮ್ಮ ನೆಲದ ಭಾಷೆಗಳನ್ನು ಗೌರವಿಸುವುದು ಮತ್ತು ಅದರೊಂದಿಗೆ ಕನ್ನಡವನ್ನು ರಾಜ್ಯದ ಮೂಲೆ ಮೂಲೆಗಳಲ್ಲಿ ಪ್ರಸರಿಸುವುದು ನಮ್ಮ ಸಂವಿಧಾನಾತ್ಮಕ ಜವಾಬ್ದಾರಿಯೂ ಆಗುತ್ತದೆ.

ಇಲ್ಲಿ ಒಂದು ವಿಚಾರ ಬಹಳ ಮುಖ್ಯ ಎನ್ನಿಸುತ್ತದೆ. ಈ ಗಡಿ ಪ್ರದೇಶಗಳ ಜನತೆ ಕನ್ನಡವಲ್ಲದ ಅನ್ಯ ಭಾಷೆಗಳನ್ನು ತಮ್ಮ ಖಾಸಗಿ ಜೀವನದ ವ್ಯವಹಾರಗಳಲ್ಲಿ ಬಳಸುವುದಾಗಲೀ, ಕನ್ನಡ ಭಾಷೆಯನ್ನೇ ತಮ್ಮ ನೆಲದ ಭಾಷೆಯನ್ನಾಗಿ ಮಾಡಿಕೊಂಡ ಜನತೆ ಕನ್ನಡ ಭಾಷೆಯನ್ನು ಬಳಸುವುದಾಗಲೀ ಕನ್ನಡಾಭಿಮಾನದ ಅಥವಾ ಅದನ್ನು ಕುರಿತ ನಿರಭಿಮಾನದ ವಿಚಾರವೆಂದು ನಾವು ಭಾವಿಸಬಾರದು. ಕಾರಣ, ಕನ್ನಡಾಭಿಮಾನದ ಭಾಷಣವನ್ನು ಕೇಳುವ ಪೂರ್ವದಲ್ಲಿಯೇ ಜನರು ಇಂತಹ ಭಾಷೆಗಳನ್ನು ತಮ್ಮ ದೈನಂದಿನ ವ್ಯವಹಾರಗಳಲ್ಲಿ ಬಳಸುತ್ತಾ ಬಂದಿದ್ದಾರೆ. ಇದು ಸಾವಿರಾರು ವರ್ಷಗಳ ಸತ್ಯ. ಆದ್ದರಿಂದಲೇ ಕಛೇರಿಯ ವ್ಯವಹಾರಗಳಲ್ಲಿ ಕನ್ನಡವನ್ನು ಬಳಸಿದಾಗಲೂ ಖಾಸಗಿ ವ್ಯವಹಾರದಲ್ಲಿ ಅದನ್ನು ಬಳಸದೇ ಅನ್ಯ ಭಾಷೆಯನ್ನು ಬಳಸಿದವರಲ್ಲಿ ಕನ್ನಡಾಭಿಮಾನ ಇಲ್ಲ ಎಂದರೆ ಅದು ಕನ್ನಡಾಭಿಮಾನದ ಹೆಸರಿನಲ್ಲಿ ಆಡುವ ಬೊಗಳೆ ಮಾತಾಗುತ್ತದೆ. ಇದನ್ನು ಇನ್ನೊಂದು ಚೂರು ವಿಸ್ತರಿಸುವುದಾದರೆ-

ಮಂಗಳೂರಿನ ಮಂದಿ ತುಳುವರು. ಅದಕ್ಕಾಗಿ ಇವರು ಪ್ರತ್ಯೇಕ ರಾಜ್ಯವನ್ನು ಕೇಳಲಿಲ್ಲ. ಕಛೇರಿ ವ್ಯವಹಾರಗಳಲ್ಲಿ ಕನ್ನಡವನ್ನಲ್ಲದೆ ತುಳುವನ್ನು ಬಳಸುವುದಿಲ್ಲ. ಹಾಗಾಗಿ ಇವರು ತುಳುವನ್ನು ಕುರಿತ ನಿರಭಿಮಾನಿಗಳೇ? ಅಥವಾ ಕನ್ನಡವನ್ನು ಕುರಿತ ಅಭಿಮಾನಿಗಳೇ? ಇದಕ್ಕೂ ಸ್ಪಷ್ಟ ಉತ್ತರವಿಲ್ಲ. ಕಾರಣ, ಇವರಲ್ಲಿ ಶೇ. ೯೯ ಮಂದಿ ತಮ್ಮ ಮಕ್ಕಳನ್ನು ತುಳುವೂ ಅಲ್ಲದ ಕನ್ನಡವೂ ಅಲ್ಲದ ಇಂಗ್ಲೀಷ್ ಮಾಧ್ಯಮದ ಶಾಲೆಗೆ ಮಾತ್ರ ಕಳುಹಿಸುತ್ತಾರೆ. (ಇದು ನನ್ನ ಪಿ‌ಎಚ್.ಡಿ. ಅಧ್ಯಯನದ ಕ್ಷೇತ್ರ ಕಾರ್ಯದಲ್ಲಿ ದೃಢಪಟ್ಟ ಸತ್ಯ.)

ಹೀಗೆ ನಿರ್ದಿಷ್ಟ ಭಾಷಾ ಅಭಿಮಾನಕ್ಕೆ ದೂರ ನಿಂತ ತುಳುವರ ಸಂಸ್ಕೃತಿಯಲ್ಲಿ ತುಳು ಖಾಸಗಿ ವ್ಯವಹಾರದ ಭಾಷೆಯಾದರೆ, ಕನ್ನಡವು ಕಛೇರಿ ಮಾಧ್ಯಮದ ಭಾಷೆಯಾಗಿದೆ. ಇವುಗಳ ನಡುವೆ ಇಂಗ್ಲೀಷು ಶಿಕ್ಷಣ ಮಾಧ್ಯಮದ ಭಾಷೆಯಾಗಿ ರಾರಾಜಿಸುತ್ತಿದೆ.

ಇದು ಕರ್ನಾಟಕದ ಅನೇಕ ಗಡಿಗಳ ಚಿತ್ರವೂ ಹೌದು.

ಆದ್ದರಿಂದ ಕನ್ನಡಾಭಿಮಾನದ ಪ್ರಶ್ನೆಯನ್ನು ಸಹ ನಾವು ಇಂದು ಸರಿಯಾಗಿ ಅರ್ಥಮಾಡಿಕೊಳ್ಳಬೇಕಿದೆ. ಇದೇ ನಿಟ್ಟಿನಲ್ಲಿ ಹಳ್ಳಿಗಾಡಿನ ಜನ ತಮ್ಮ ಮಕ್ಕಳನ್ನು ಕನ್ನಡ ಶಾಲೆಗಳಿಗೆ ಕಳುಹಿಸುವುದು ಕನ್ನಡಾಭಿಮಾನದ ಕಾರಣದಿಂದ ಮತ್ತು ನಗರವಾಸಿಗಳು ಹೆಚ್ಚಾಗಿ ತಮ್ಮ ಮಕ್ಕಳನ್ನು ಇಂಗ್ಲೀಷು ಶಾಲೆಗಳಿಗೆ ಕಳುಹಿಸುವುದು ಕನ್ನಡವನ್ನು ಕುರಿತ ನಿರಭಿಮಾನದ ಕಾರಣದಿಂದ ಎಂಬುದು ಅತ್ಯಂತ ಸರಳ ಗ್ರಹಿಕೆ ಮಾತ್ರವಾಗಿರುತ್ತದೆ. ಕಾರಣ, ಯಾವುದೇ ಬಗೆಯ ಶಾಲೆಗಳಿಗೆ ಮಕ್ಕಳನ್ನು ಕಳುಹಿಸುವ ತಂದೆ ತಾಯಿಗಳು ಭಾಷಾ ಮಾಧ್ಯಮದ ಆಯ್ಕೆಯ ವಿಚಾರದಲ್ಲಿ ಅಭಿಮಾನವನ್ನು ಆಧರಿಸಿರುವುದಿಲ್ಲ; ಬಹುಪಾಲು ಮಂದಿ ತಮ್ಮ ಆರ್ಥಿಕ ಸ್ಥಿತಿಗತಿ, ಶಾಲೆಗಳ ಲಭ್ಯತೆ, ಸಾಮಾಜಿಕ ಸ್ಥಾನಮಾನ, ಭಾಷೆಗಿರುವ ಮಾರುಕಟ್ಟೆ ಮೌಲ್ಯ-ಇವುಗಳನ್ನೇ ಪ್ರಧಾನವಾಗಿ ಆಧರಿಸಿರುತ್ತಾರೆ ಎಂಬುದನ್ನು ಕನ್ನಡ ಚಳುವಳಿಗಾರರು ಮತ್ತು ಅದರ ಚಿಂತಕರು ಪರಿಭಾವಿಸಬೇಕು. ಈ ನಿಟ್ಟಿನಲ್ಲಿ ಕರ್ನಾಟಕದ ವಿವಿಧ ಭಾಗಗಳ ಜನ ಕನ್ನಡ, ಮರಾಠಿ, ಉರ್ದು, ಇಂಗ್ಲಿಷ್ ಮೊದಲಾದ ಮಾಧ್ಯಮಗಳಲ್ಲಿ ಕಲಿಯುವುದಕ್ಕೆ ಇಂತಹ ಅನೇಕ ಸತ್ಯಗಳು ಹಿನ್ನೆಲೆಯಾಗಿರುತ್ತವೆ ಎಂಬುದನ್ನು ಗುರುತಿಸಬೇಕು.

ಈ ಹಿನ್ನೆಲೆಯಲ್ಲಿ ಪಾವಗಡ, ಮಡಕಶಿರಾ ಮಂದಿ ಶಾಲೆಗಳಲ್ಲಿ ಕನ್ನಡ ಪಾಠಗಳನ್ನು ತೆಲುಗು ಅನುವಾದಗಳಲ್ಲಿ ಕಲಿಯುವುದು ಸಹ ಇಂತಹ ಸಂಕೀರ್ಣತೆಯ ಸನ್ನಿವೇಶದಲ್ಲಿಯೇ ವಿನಃ ಕನ್ನಡವನ್ನು ಕುರಿತ ನಿರಿಭಿಮಾನದ ಅಥವಾ ತೆಲುಗನ್ನು ಕುರಿತ ಅಭಿಮಾನದ ಮೂಲದಿಂದ ಅಲ್ಲ ಎಂಬುದನ್ನು ಇಲ್ಲಿ ಲಕ್ಷಿಸಬೇಕಾಗಿದೆ. ಜೊತೆಗೆ, ಮಡಕಶಿರಾ ರಾಜಕೀಯವಾಗಿ ಆಂಧ್ರಪ್ರದೇಶದ ಭಾಗವಾಗಿರುವುದರಿಂದ ಇಲ್ಲಿಯ ಮಂದಿ ತಾವು ತೆಲುಗಿನಲ್ಲಿ ಕಲಿತರೆ ಭವಿಷ್ಯದಲ್ಲಿ ತಮ್ಮ ಅಂಕಪಟ್ಟಿಗಳಿಗೆ ಆಂಧ್ರ ಸರ್ಕಾರದ ಮನ್ನಣೆ ಸಹಜವಾಗಿಯೇ ಇರುತ್ತದೆ ಎಂಬ ಭಾವನೆ ಇದೆ. ಆದ್ದರಿಂದ ಮಕಡಶಿರಾ ಕರ್ನಾಟಕಕ್ಕೆ ಸೇರಬೇಕು ಎಂಬ ಕ್ಷೀಣ ಧ್ವನಿ ಇಲ್ಲಿ‌ಇದ್ದಾಗಲೂ ತೆಲುಗು ಶಾಲೆಗಳಲ್ಲಿಯೇ ಕನ್ನಡದ ಜನತೆ ಹೆಚ್ಚು ಕಾರ್ಯೋನ್ಮುಖ ರಾಗಿರುತ್ತಾರೆ. ಕಾರಣ, ನಿರ್ದಿಷ್ಟ ಭಾಷೆಯ ಆಯ್ಕೆಗಿಂತ ಬದುಕು ಹೆಚ್ಚು ಮುಖ್ಯ ಎಂಬ ಗ್ರಹಿಕೆ ತಮ್ಮ ಸುಪ್ತ ಮನಸ್ಸಿನಲ್ಲಿಯಾದರೂ ಮನುಷ್ಯ ಸಹಜವಾಗಿ ಇರುತ್ತದೆ. ಈ ತಾತ್ವಿಕ ನೆಲೆಯಲ್ಲಿಯೇ ಕಾಸರಗೋಡಿನ ಕನ್ನಡಿಗರು ಸಹ ಮಲೆಯಾಳ ಭಾಷೆಯಲ್ಲಿ ಶಾಲೆಯನ್ನು ಕಲಿಯುತ್ತಿರುವುದು.

ಕರ್ನಾಟಕದ ಗಡಿ ಪ್ರದೇಶಗಳ ಮುಖ್ಯ ಲಕ್ಷಣ ದ್ವಿಭಾಷಿಕತೆ. ಸಾಮಾನ್ಯವಾಗಿ ದ್ವಿಭಾಷಿಕ ಪರಿಸರಗಳಲ್ಲಿ ಸಂಘರ್ಷ ಮತ್ತು ಸಾಮರಸ್ಯದ ಮಾತುಗಳು ಹೆಚ್ಚಾಗಿ ಕೇಳಿಬರುತ್ತಿರುತ್ತವೆ. ಇಂತಹ ಮಾತುಗಳು ಸಾಮಾನ್ಯವಾಗಿ ಜನಸಾಮಾನ್ಯರಿಂದ ಮೂಡಿಬರುವಂತಹವುಗಳಲ್ಲ ಎಂಬುದು ಮುಖ್ಯವಾಗುತ್ತಲೇ ಇಲ್ಲಿಯ ಪ್ರಜ್ಞೆವಂತ ಜನತೆ ಮತ್ತು ಇಂತಹ ಪ್ರದೇಶಗಳನ್ನು ಕುರಿತು ಚಿಂತಿಸುವ ಜನರೇ ವಿಶೇಷವಾಗಿ ಅಂತಹ ಮಾತುಗಳನ್ನು ಆಡುತ್ತಿರುವುದು. ಆದರೆ ಮೂಲಭೂತವಾಗಿ ಜನಸಾಮಾನ್ಯರಲ್ಲಿ ವಿಭಿನ್ನ ಭಾಷೆಗಳನ್ನು ಕುರಿತ ಸಾಮರಸ್ಯವೇ ಮುಖ್ಯ ದ್ರವ್ಯವಾಗಿರುತ್ತದೆ. ಜನ ಹೆಚ್ಚಾಗಿ ಭೌತಿಕ ಶ್ರಮವನ್ನು ಆಶ್ರಯಿಸಿದ್ದರಿಂದ ಅವರಿಗೆ ಬದುಕು ಮೊದಲಿನ ಆಯ್ಕೆಯಾಗುತ್ತದೆಯೇ ವಿನಃ ಭಾಷೆಯಾಗಿರುವುದಿಲ್ಲ. ಆದ್ದರಿಂದ ಭಾಷಾ ಜಗಳಕ್ಕೆ ತಲೆಕೆಡಿಸಿಕೊಳ್ಳುವುದಕ್ಕಾಗಲೀ ತಾವು ಯಾವ ರಾಜ್ಯದಲ್ಲಿ ನೆಲೆಸಿದ್ದೇವೆ ಎಂಬ ವಿಚಾರಗಳ ಬಗ್ಗೆಯಾಗಲೀ ಚಿಂತಿಸಲು ಇವರು ಸಾಮಾನ್ಯವಾಗಿ ಸಿದ್ಧರಿರುವುದಿಲ್ಲ. ಆದ್ದರಿಂದಲೇ ತೆಲುಗು-ಕನ್ನಡದ ದ್ವಿಭಾಷಿಕ ಪ್ರದೇಶಗಳಲ್ಲಿಯಾಗಲೀ ಬೆಳಗಾವಿ, ಕೊಡಗು, ಮಂಗಳೂರು, ಕೋಲಾರದಂತಹ ಪ್ರದೇಶಗಳಲ್ಲಿಯಾಗಲೀ ಪ್ರಜ್ಞೆವಂತ ಜನತೆ ಕನ್ನಡತ್ವದ ಚಿಂತನೆಯನ್ನು ಕುರಿತು ಸಂಘರ್ಷ ಸಮಿತಿಗಳನ್ನು ಕಟ್ಟಿಕೊಂಡಿರುತ್ತಾರೆಯೇ ವಿನಃ ಜನಸಾಮಾನ್ಯರು ಎಂದಿನಂತೆಯೇ ನಡೆಯುತ್ತಿರುತ್ತಾರೆ.

ಈ ನೆಲೆಯಲ್ಲಿ ಗಡಿ ಪ್ರದೇಶಗಳ ಕನ್ನಡ ಹೋರಾಟಗಳು ಜನಸಾಮಾನ್ಯರು ಮತ್ತು ಅವರ ಬದುಕಿನಿಂದ ದೂರ ಉಳಿದಿರುವುದರಿಂದಲೇ ಅವುಗಳ ಚಲನೆಯೂ ವೈಫಲ್ಯದ ದಿಕ್ಕಿನತ್ತ ಇರುವುದು. ಆದ್ದರಿಂದ ಕನ್ನಡ ಚಿಂತನೆ ಎನ್ನುವುದು ಕರ್ನಾಟಕದ ಗಡಿ ಪ್ರದೇಶದ ಕಟ್ಟ ಕಡೆಯ ಮನುಷ್ಯನ ಬದುಕನ್ನು ಎತ್ತರಿಸುವುದರತ್ತ ಹರಿದಾಗ ಮಾತ್ರ ಕನ್ನಡ ಹೋರಾಟಗಳು ಜನಮುಖಿಯಾಗುತ್ತವೆ. ಜನರೂ ಕನ್ನಡ ಹೋರಾಟದ ದಿಕ್ಕನ್ನು ಬದಲಿಸುತ್ತಾರೆ.

ಹೀಗೆ ಸಮೂಹವನ್ನೊಳಗೊಳ್ಳದ ಹೋರಾಟವು ಹೋರಾಟವಾಗುವುದಿಲ್ಲ. ಅದು ಕೇವಲ ಕೆಲವೇ ಜನರ ಹಾರಾಟ ಮಾತ್ರವಾಗಿರುತ್ತದೆ.
* * *
ಇಂಡಿಯಾ ದೇಶಕ್ಕೆ ಸ್ವಾತಂತ್ರ್ಯ ಬಂದು ೫೦ ವರ್ಷಗಳು ಕಳೆದರೂ ಇನ್ನೂ ಗಮನಾರ್ಹವಾದ ಆರ್ಥಿಕ ಪ್ರಗತಿಯನ್ನು ತಾನು ಸಾಧಿಸಲಾಗಿಲ್ಲ. ಇನ್ನು ಭಾರತ ಜನನಿಯ ತನುಜಾತೆಯಾದ ಕರ್ನಾಟಕದ್ದೂ ಅದೇ ಕತೆ. ಇದರಿಂದ ಅಷ್ಟೇನೂ ಹೊರತಲ್ಲ ಕರ್ನಾಟಕದ ಗಡಿ ಪ್ರದೇಶಗಳು. ಆದರೆ ಈ ಹಿಂದೆ ಪ್ರಸ್ತಾಪಿಸಿದಂತೆ ಕರ್ನಾಟಕದ ಪಶ್ಚಿಮ ಗಡಿಗಳಿಗಿಂತ ಉತ್ತರದ ಗಡಿ ಪ್ರದೇಶಗಳು ಅನೇಕ ಕಾರಣಗಳಿಗಾಗಿ ಹಿಂದುಳಿದಿವೆ. ಒಟ್ಟಾರೆ ಈ ಪ್ರದೇಶಗಳು ಬೆಂಗಳೂರು, ಮೈಸೂರು ಇಂತಹ ಮಹಾನಗರಗಳ ಎದುರಿನಲ್ಲಿ ವ್ಯಾಪಾರ, ವಾಣಿಜ್ಯ, ಕೈಗಾರಿಕೆ, ಸಾರಿಗೆ ಮೊದಲಾದ ವಿಚಾರಗಳ ದೃಷ್ಟಿಯಿಂದ ಸಾಕಷ್ಟು ಹಿಂದುಳಿದಿವೆ. ಇದಕ್ಕೆ ಮುಖ್ಯ ಕಾರಣಗಳಲ್ಲಿ ರಾಜಕಾರಣವೂ ಒಂದು.

ದೇಶದ ಮೊದಲ ಪ್ರಧಾನಿ ನೆಹರುರವರು ಚಿಂತಿಸಿ, ಜಾರಿಗೆ ತಂದ ನಗರ ಕೇಂದ್ರಿತ ಆರ್ಥಿಕ ನೀತಿ ಬೃಹತ್ ಕೈಗಾರಿಕೆಗಳನ್ನು, ಅದರ ಸುತ್ತಲೂ ನಗರಗಳನ್ನು, ಕೊಳೆಗೇರಿಗಳನ್ನು ಸೃಷ್ಟಿಸುತ್ತಾ ಗ್ರಾಮಾಂತರ ಪ್ರದೇಶಗಳನ್ನು ನಿರ್ಲಕ್ಷಿಸುತ್ತಾ ಬಂದಿತು. ಇದು ಗಾಂಧಿ ಕಂಡ ಗ್ರಾಮ ಸ್ವರಾಜ್ಯದ ಸೋಲೂ ಹೌದು. ಇಂತಹ ಪ್ರಜ್ಞೆ ನಮ್ಮ ರಾಜಕಾರಣಿಗಳಲ್ಲೂ ಇದೆ.

ಆದ್ದರಿಂದಲೇ ಎಷ್ಟೋ ಬಾರಿ ಕರ್ನಾಟಕವೆಂದರೆ ಬೆಂಗಳೂರೇ ಆಗುತ್ತದೆ; ಜನತೆ ಎಂದಾಗ ನಗರ ವಾಸಿಗಳೇ ಕಣ್ತುಂಬಿ ಬಿಡುತ್ತಾರೆ! ಆದ್ದರಿಂದಲೇ ಇಂದಿಗೂ ಸರ್ಕಾರದ ನೀತಿಗಳು ಅದರಲ್ಲೂ ಜಾಗತೀಕರಣವಾಗುತ್ತಿರುವ ಈ ದಿನಗಳಲ್ಲಿ ನಗರ ಕೇಂದ್ರಿತ ದಿಕ್ಕಿನತ್ತ, ಇಂಗ್ಲೀಷ್ ಭಾಷೆಯತ್ತ ಚಲಿಸುತ್ತಿದೆ. ಪರಿಣಾಮವಾಗಿ ಗ್ರಾಮಾಂತರ ಪ್ರದೇಶಗಳಾಗಲೀ ಗಡಿ ಪ್ರದೇಶಗಳಾಗಲೀ ಕನ್ನಡವೇ ಆಗಲೀ, ಯಾವುದೂ ಕಾಣುತ್ತಿಲ್ಲ. ವಿಶ್ವದ ಎದುರು ಕರ್ನಾಟಕದ ಅನನ್ಯತೆಯು ಕುಬ್ಜ ಎಂಬ ಭಾವನೆ ಬಲವಾಗುತ್ತಿದೆ. ಆದ್ದರಿಂದ ದೇಶೀ ಚಿಂತನೆಗಳ ಬಗ್ಗೆಯೆ ತಲೆಕೆಡಿಸಿಕೊಳ್ಳದ ವೈಟ್‌ಕಾಲರ್‌ಗಳ ಜನ ಮತ್ತು ಸರ್ಕಾರಗಳು ಗಡಿ ಪ್ರದೇಶಗಳ ಬಗ್ಗೆ ಕಾಳಜಿ ವಹಿಸುವುದು ದೂರದ ಮಾತೇ ಸರಿ. ಈ ಮೂಲಕವಾಗಿ ಕರ್ನಾಟಕದ್ದಷ್ಟೇ ಅಲ್ಲ, ಭಾರತದ ಗಡಿಗಳು ಸಹ ಸಡಿಲಗೊಳ್ಳುತ್ತಿವೆ. ಪ್ರಪಂಚವೇ ಇದರೊಳಗೆ ಧಾವಿಸುತ್ತಿದೆ. ಇಂತಹ ಅಂತರರಾಷ್ಟ್ರೀಯ ಮಟ್ಟದ ಅತಂಕಗಳು ನಮ್ಮ ಮುಂದಿರುವಾಗ ಕರ್ನಾಟಕದ ಗಡಿ ಸಂಸ್ಕೃತಿಯ ಬಗ್ಗೆ ನಾವು ವಿಶೇಷವಾಗಿ ಮಾತನಾಡುತ್ತಿರುವುದು ವ್ಯಂಗ್ಯದ ಸಂಗತಿ. ಆದರೆ ಇದು ಮುಖ್ಯ ಅಲ್ಲ ಎಂಬುದು ನನ್ನ ಭಾವನೆಯಲ್ಲ. ಕರ್ನಾಟಕದ ಗಡಿ ಸಂಸ್ಕೃತಿಯ ಸ್ವರೂಪಕ್ಕೂ ರಾಜ್ಯ, ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ನೀತಿ ಮತ್ತು ಧೋರಣೆಗಳಿಗೂ ಸೂಕ್ಷ್ಮ ಸಂಬಂಧಗಳಿರುತ್ತವೆ ಎಂಬುದು ಇಲ್ಲಿಯ ಮುಖ್ಯ ಮಾತು.

ಈ ಹಿನ್ನೆಲೆಯಲ್ಲಿ ಕರ್ನಾಟಕದ ಗಡಿ ಸಂಸ್ಕೃತಿಯ ಸ್ವರೂಪದ ವೈವಿಧ್ಯವು ಕೇವಲ ವರ್ತಮಾನವನ್ನು ಆಧರಿಸಿಲ್ಲ. ಅದರ ಒಳಗೆ ಈ ನೆಲದ ಚರಿತ್ರೆ, ಸಾಮಾಜಿಕತೆ, ಭೌಗೋಳಿಕ ರೂಪು-ಗುಣ ವೈವಿಧ್ಯ, ಆರ್ಥಿಕತೆ ಮತ್ತು ಸರ್ಕಾರಗಳ ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ನೀತಿಗಳು ಇದರ ಒಳ ಮತ್ತು ಹೊರ ವಿನ್ಯಾಸವನ್ನು ನಿರ್ಧರಿಸಿವೆ ಎಂಬುದು ಇಲ್ಲಿಯ ಮುಖ್ಯ ಆಶಯವಾಗಿದೆ.
*****
ಒತ್ತಾಸೆ : ಇದೇ ವರ್ಷ ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನವರು ಮಡಕಶಿರಾದಲ್ಲಿ ವ್ಯವಸ್ಥೆಗೊಳಿಸಿದ್ದ ಗಡಿನಾಡ ಸಮ್ಮೇಳನದ ಗೋಷ್ಠಿಯೊಂದಕ್ಕೆ ಸಿದ್ಧಪಡಿಸಿದ ಪ್ರಬಂಧ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮುದ್ದಿನ ಗಿಳಿ
Next post ಹಸಿರು ಸೀರೆ

ಸಣ್ಣ ಕತೆ

  • ಗುಲ್ಬಾಯಿ

    ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…

  • ನಿಂಗನ ನಂಬಿಗೆ

    ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

  • ತಿಥಿ

    "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…

  • ಅಪರೂಪದ ಬಾಂಧವ್ಯ

    ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…