ಆತ್ಮಾಭಿಮಾನ ಮತ್ತು ಆತ್ಮಾವಲೋಕನ

ಆತ್ಮಾಭಿಮಾನ ಮತ್ತು ಆತ್ಮಾವಲೋಕನ

(ಸಂವಾದ – ಮಾಸಿಕದ ವಿಶೇಷಾಂಕ ಬಿಡುಗಡೆ-ಭಾಷಣ)

ಶ್ರೀ ಮರಿಸ್ವಾಮಿಯವರ ಒತ್ತಾಸೆ ಹಾಗೂ ವ್ಯವಸ್ಥಾಪನೆಯಲ್ಲಿ ಗೆಳೆಯ ಇಂದೂಧರ ಹೊನ್ನಾಪುರ ಅವರು ಸಂಪಾದಕರಾಗಿ ಹೊರತರುತ್ತಿರುವ ‘ಸಂವಾದ’ ಮಾಸಿಕದ ದಶವಾರ್ಷಿಕ ವಿಶೇಷಾಂಕ ಈಗ ಬಿಡುಗಡೆಯಾಗಿದೆ. ಇದೊಂದು ಸಂತೋಷದ ಸಂದರ್ಭ, ಬಿಡುಗಡೆ ಮಾಡಿದ ನಿಜದ ಖುಷಿ ನನ್ನದು. ನನ್ನ ಖುಷಿಗೆ ಕಾರಣಗಳಿವೆ : ‘ಸಂವಾದ’ವು ಸಾಮಾಜಿಕ ಸ್ವರೂಪದ ವಿಶಿಷ್ಟ ಮಾಸಿಕ. ಇದು ವೈಚಾರಿಕ ಸಂವಾದದ ಸಾಧ್ಯತೆಗಳನ್ನು ಸದಾ ವಿಸ್ತರಿಸುತ್ತಿರುವ ಪತ್ರಿಕೆ, ಚರ್ಚೆಗಳನ್ನು ಬೆಳೆಸುತ್ತ ಸಾಮಾಜಿಕ ನ್ಯಾಯದ ವಿವಿಧ ಆಯಾಮಗಳನ್ನು ಅನಾವರಣ ಗೊಳಿಸುತ್ತಿರುವ ಒಂದು ಅಕ್ಷರ ವೇದಿಕೆ. ಹತಾಶೆಯಲ್ಲಿ ಹೂತು ಹೋಗದಂತೆ ಆಶಾವಾದವನ್ನು ಮುಂಚೂಣಿಗೆ ತರುವ ಒಂದು ಒತ್ತಾಸೆ. ಈ ಪತ್ರಿಕೆಯಲ್ಲಿ ಪ್ರಕಟವಾಗುವ ಲೇಖನಗಳಲ್ಲಿನ ಅಭಿಪ್ರಾಯಗಳೆಲ್ಲ ಸಾಮಾಜಿಕವಾಗಿ ಸರ್ವಸಮ್ಮತವೆಂದು ಹೇಳಲಾಗದಿದ್ದರೂ ಪತ್ರಿಕೆಯ ಸಾಮಾಜಿಕ ಜವಾಬ್ದಾರಿಯನ್ನು ಮೆಚ್ಚಲೇಬೇಕು. ಅದರಲ್ಲೂ ಸಾಮಾಜಿಕ ಕಾಳಜಿ, ಸಾಮಾಜಿಕ ನ್ಯಾಯ ಮುಂತಾದ ಪರಿಕಲ್ಪನೆಗಳನ್ನು ಕಡೆಯ ಸಾಲಿನಲ್ಲಿ ಕೂಡಿಸುವ ‘ಆರ್‍ಥಿಕ ಸುಧಾರಣೆ’ಗಳ ಈ ಸನ್ನಿವೇಶದಲ್ಲಿ ‘ಸಂವಾದ’ದ ಪಾತ್ರ ಮಹತ್ವದ್ದೆಂದು ಹೇಳಲೇಬೇಕು.

A. Kukarkin ಅವರು ತಮ್ಮ ‘The Passing Age’ ಎಂಬ ಪುಸ್ತಕದಲ್ಲಿ ಹೇಳಿದ ಒಂದು ಮಾತು ಇಲ್ಲಿ ನೆನಪಿಗೆ ಬರುತ್ತಿದೆ : ‘ಅಧಿಕ ಪ್ರಸಾರವುಳ್ಳ ಪತ್ರಿಕೆಗಳು, ಸಮೂಹ ಮಾಧ್ಯಮದ ವಿವಿಧ ಪ್ರಕಾರಗಳು ಬಹು ಸಂಖ್ಯೆಯನ್ನು ತಲುಪಲು ಬಯಸುವುದು ಲಾಭಕ್ಕಾಗಿ ಮಾತ್ರ. ಇಲ್ಲಿ ಸ್ವಾರ್ಥ ಮತ್ತು ಲಾಭಕೋರತನವೇ ಮುಖ್ಯ’ – ಇದು ಕುಕಾರ್ಕಿನ್ ಮಾತಿನ ಸಾರ. ಮುಂದುವರೆದು ಅವರು ‘ಜಾಹೀರಾತು ಸಂಸ್ಕೃತಿ’ಯ (ಕೇವಲ ಜಾಹೀರಾತುಗಳಲ್ಲ – ಸಂಸ್ಕೃತಿ) ಅಪಾಯಗಳ ಕಡೆ ಗಮನ ಸೆಳೆಯುತ್ತಾರೆ : ‘ಜಾಹೀರಾತು ಸಂಸ್ಕೃತಿಯು ಬೂರ್‍ಜ್ವಾ ಸಂಸ್ಕೃತಿಯ ಶೈಲಿಯನ್ನು ಸ್ಥಾಪಿಸುತ್ತದೆ ಮತ್ತು ಅದರ ನೀತಿಗಳನ್ನು ನಿರೂಪಿಸುತ್ತದೆ. ಇದು ಬಂಡವಾಳಶಾಹಿ ರಾಷ್ಟ್ರಗಳ ಸಂಸ್ಕೃತಿಯಲ್ಲಿ ಅತ್ಯಗತ್ಯವಾದ ಹಾಗೂ ಪ್ರಮುಖವಾದ ಒಂದು ಅಂಶವಾಗಿದೆ. ಸಾಮಾಜಿಕ ಪ್ರಜ್ಞೆಯನ್ನು ನಿಯಂತ್ರಿಸುವ ಸಾಧನವಾಗಿದೆ’. – ಕುಕಾರ್ಕಿನ್ ಅವರ ಈ ಒಟ್ಟಾರೆ ಅಭಿಪ್ರಾಯದ ನಿಜ ನೆಲೆಯನ್ನು ನಮ್ಮ ದೇಶದ ಇಂದಿನ ಸನ್ನಿವೇಶದಲ್ಲೂ ಕಾಣಬಹುದಾಗಿದೆ. ಬಂಡವಾಳಶಾಹಿ ಆರ್ಥಿಕ ನೀತಿಯು ಮೇಲುಗೈ ಪಡೆಯುತ್ತ ಸಾಮಾಜಿಕ ಪ್ರಜ್ಞೆಯನ್ನು ನಿಯಂತ್ರಿಸುತ್ತ ಮಾರುಕಟ್ಟೆ ಮನೋಧರ್ಮವೇ ಮುಖ್ಯವಾಗುತ್ತಿರುವ ನಮ್ಮ ಸನ್ನಿವೇಶ ಸೈದ್ಧಾಂತಿಕ ಬಿಕ್ಕಟ್ಟುಗಳನ್ನು ಎದುರಿಸುತ್ತಿದೆ. ಜಾಗತೀಕರಣದ ಫಲವಾದ ‘ಆರ್ಥಿಕ ಸುಧಾರಣೆ’ಯ ಪ್ರತಿಪಾದಕರು ಮತ್ತು ಫಲಾನುಭವಿಗಳಿಗೆ ಶ್ರೇಣೀಕೃತ ಸಮಾಜದ ಸಂಕಟಗಳು ಕಾಣಿಸುತ್ತಿಲ್ಲ. ಜಾತಿ ಮತ್ತು ವರ್ಗ ಮೂಲ ಶೋಷಣೆಯ ನೆಲೆಗಳು ನಿಜವೆನ್ನಿಸುತ್ತಿಲ್ಲ ಅಥವಾ ನಿಜವೆನ್ನಿಸದಂತಹ ವಿಚಾರಗಳನ್ನು ಪ್ರತಿಪಾದಿಸಲಾಗುತ್ತಿದೆ. ಸ್ವಾರ್ಥ, ಲಾಭಕೋರತನಗಳ ಮಾರುಕಟ್ಟೆಯ ರೂಪಕವಾಗಿ ಮನುಷ್ಯನ ವ್ಯಕ್ತಿತ್ವವನ್ನು ರೂಪಿಸಲಾಗುತ್ತಿದೆ. ಇದರ ಪರಿಣಾಮದಲ್ಲಿ ಸಮೂಹ ಮಾಧ್ಯಮಗಳೂ ತಮ್ಮ ಸಾಮಾಜಿಕ ಪ್ರಜ್ಞೆಯ ಪ್ರಖರತೆಯನ್ನು ಉಳಿಸಿಕೊಳ್ಳುತ್ತಿಲ್ಲ. ಕೆಲವರಿಗೆ ಬೇಕಾಗಿಲ್ಲ; ಬೇಕಾದವರಿಗೆ ಬಿಕ್ಕಟ್ಟುಗಳು ಬಿಡುತ್ತಿಲ್ಲ. ಒಂದು ರೀತಿಯ ಸಂದಿಗ್ಧ ಹಾಗೂ ವೈರುಧ್ಯಗಳ ನಡುವೆ ಸಿಕ್ಕಿರುವ ಮಾಧ್ಯಮಗಳು ಉದ್ಯಮ ಪ್ರಧಾನ ಮಾತ್ರವಾಗುವ ಅಪಾಯ ಕಾಣಿಸುತ್ತಿದೆ.

ಪತ್ರಿಕೆ, ಪುಸ್ತಕ, ಚಲನಚಿತ್ರ – ಇವುಗಳೆಲ್ಲ ಮೂಲತಃ ಮಾಧ್ಯಮಗಳು. ಆದರೆ ಬರಬರುತ್ತ ಈ ಮಾಧ್ಯಮಗಳೆಲ್ಲ ಉದ್ಯಮಗಳಾದವು. ಪತ್ರಿಕಾ ಮಾಧ್ಯಮ ಪತ್ರಿಕೋದ್ಯಮವಾಯಿತು; ಪುಸ್ತಕ ಮಾಧ್ಯಮ ಪುಸ್ತಕೋದ್ಯಮವಾಯಿತು, ಚಲನಚಿತ್ರ ಮಾಧ್ಯಮ ಚಲನಚಿತ್ರೋದ್ಯಮವಾಯಿತು. ಹೀಗೆ ಮಾಧ್ಯಮಗಳೆಲ್ಲ ಉದ್ಯಮವಾಗಲು ಭಾರಿ ಬಂಡವಾಳದ ತೊಡಗಿಸುವಿಕೆಯೇ ಮುಖ್ಯಕಾರಣವಾಯಿತು. ಈಗಲೂ ಸಣ್ಣ ಮತ್ತು ಮಧ್ಯಮ ಪ್ರಮಾಣದ ಪತ್ರಿಕೆಗಳು, ಪ್ರಕಾಶನ ಸಂಸ್ಥೆಗಳು, ಸಿನಿಮಾಗಳು ಮಾಧ್ಯಮದ ನೆಲೆಗಳನ್ನು ಉಳಿಸಿಕೊಳ್ಳಲು ಪ್ರಾಮಾಣಿಕವಾಗಿ ‘ಸೆಣಸುತ್ತಿವೆ’. ಗಮನಿಸಿ : ಮಾಧ್ಯಮಕ್ಕೆ ಸಂವೇದನೆ ಮುಖ್ಯ; ಉದ್ಯಮಕ್ಕೆ ಸಂಪಾದನೆ ಮುಖ್ಯ. ಸಂವೇದನೆ ಮತ್ತು ಸಂಪಾದನೆಗಳ ಸಂಘರ್ಷದಲ್ಲಿ ಸಂಪಾದನೆಯ ನೆಲೆ-ನಿಲುವುಗಳೇ ಮುನ್ನೆಲೆಗೆ ಬರುತ್ತಿರುವುದಕ್ಕೆ ಜಾಗತೀಕರಣದ ಮುಕ್ತ ಮಾರುಕಟ್ಟೆ ಆರ್ಥಿಕ ನೀತಿಯು ಒಂದು ಪ್ರಮುಖ ಕಾರಣವಾಗಿದೆ. ಇಂಥ ಸನ್ನಿವೇಶದಲ್ಲಿ ‘ಸಂವಾದ’ದಂತಹ ಎಲ್ಲ ಸಣ್ಣ ಪ್ರಮಾಣದ ಪತ್ರಿಕೆಗಳ ಪಾತ್ರ ತುಂಬಾ ಪ್ರಮುಖವಾದುದು. ‘ಸಂವಾದ’ದ ಜೊತೆಗೆ ಸಂಕ್ರಮಣ, ಶೂದ್ರ, ಹೊಸತು, ಅನ್ವೇಷಣೆ, ಒಡನಾಡಿ – ಮುಂತಾದ ಪತ್ರಿಕೆಗಳು ನಿರಂತರವಾಗಿ ತೋರಿದ ಸಾಮಾಜಿಕ ಕ್ರಿಯಾಶೀಲತೆಯೂ ಮುಖ್ಯವಾದುದು. (ಯಾವುದಾದರೂ ಇಂತಹ ಪತ್ರಿಕೆಯ ಹೆಸರು ಉಲ್ಲೇಖ ವಾಗಿಲ್ಲದಿದ್ದರೆ ಅದು ಉದ್ದೇಶಪೂರ್ವಕವಲ್ಲ. ಕ್ಷಮೆಯಿರಲಿ)

ಮುಕ್ತ ಮಾರುಕಟ್ಟೆ ಆರ್ಥಿಕ ನೀತಿಯು ಮಾಧ್ಯಮಗಳ ಮೇಲಷ್ಟೇ ಅಲ್ಲ ಇಡೀ ಸಾಮಾಜಿಕ ಪರಿಸರದ ಮೇಲೆ ಪ್ರಭಾವ ಬೀರಿದೆ; ಬಿಕ್ಕಟ್ಟುಗಳನ್ನು ಸೃಷ್ಟಿ ಮಾಡಿದೆ : ಸೈದ್ಧಾಂತಿಕ ಸಂಬಂಧಗಳನ್ನು ಜಟಿಲಗೊಳಿಸಿದೆ. ಇಂಥ ಸಂದರ್ಭದಲ್ಲಿ ಎಡ ಮತ್ತು ಪ್ರಗತಿಪರ ಶಕ್ತಿಗಳು ತಮ್ಮ ಸೈದ್ಧಾಂತಿಕ ಸಂಬಂಧಾಂತರಗಳನ್ನು ಆತಂಕದಿಂದ ಆತ್ಮಾವಲೋಕನ ಮಾಡಿಕೊಂಡು ಪ್ರತಿಗಾಮಿಗಳಿಗೆ ಪ್ರತಿರೋಧ ಒಡ್ಡುವ ಕಾರ್ಯವಿಧಾನಗಳನ್ನು ರೂಪಿಸಿಕೊಳ್ಳಬೇಕಾಗಿದೆ. ನಿಜ; ಮೇಲ್ನೋಟಕ್ಕೆ ಎಡ ಮತ್ತು ಎಲ್ಲ ಪ್ರಗತಿಪರರ ನಡುವೆ ಉತ್ತಮ ಸಂಬಂಧವಿರುವಂತೆ ಕಾಣುತ್ತಿದೆ. ಆದರೆ ಈ ಸಂಬಂಧವು ಕ್ರಿಯೆಯಲ್ಲಿ ಪ್ರತಿಫಲನಗೊಳ್ಳುತ್ತಿದೆಯೆ? ಪ್ರತಿಫಲನಗೊಂಡರೂ ಅದು ಅನುಮಾನ ಮತ್ತು ಅಪನಂಬಿಕೆಗಳಿಂದ ದೂರವಾಗಿದೆಯೆ? ತಮ್ಮ ಸೈದ್ಧಾಂತಿಕ ಶತ್ರುಗಳನ್ನು ಆದ್ಯತೆಯ ಮೇಲೆ ಗುರುತಿಸಿಕೊಂಡು ವಿರೋಧಿಸುವ ಒಗ್ಗಟ್ಟು ಕಾಣಿಸುತ್ತಿದೆಯೆ? ಎಪ್ಪತ್ತರ ದಶಕದ ಕ್ರಿಯಾಶಕ್ತಿ ಮತ್ತು ಸನ್ನಿವೇಶ ಈಗಲೂ ಇದೆಯೆ ? ಇಂತಹ ಪ್ರಶ್ನೆಗಳನ್ನು ವಿಶೇಷವಾಗಿ ನಾವು – ಎಡ ಹಾಗೂ ಪ್ರಗತಿಪರ ಪಂಥೀಯರು – ಕೇಳಿಕೊಂಡು ಕ್ರಿಯಾಶೀಲತೆಯನ್ನು ಮತ್ತಷ್ಟು ರಚನಾತ್ಮಕಗೊಳಿಸಿಕೊಳ್ಳಬೇಕಾಗಿದೆ. ಸಾಮಾನ್ಯ ಕನಿಷ್ಠ ಕಾರ್ಯಕ್ರಮದ ಮೇಲೆ ಸಮಾನ ಶತ್ರುವಿಗೆ ಎದುರಾಗಬೇಕಾಗಿದೆ. ಎದುರಾಗುವ ಸಂಭ್ರಮಕ್ಕಿಂತ ಹೆಚ್ಚಾಗಿ ಹೆಚ್ಚು ಹೆಚ್ಚು ಜನರನ್ನು ನಮ್ಮೊಂದಿಗೆ ಕರೆದೊಯ್ಯುವ ಹೊಸ ಕಾರ್ಯ ವಿಧಾನಗಳನ್ನು ಚಿಂತಿಸಬೇಕಾಗಿದೆ. ನಮಗೀಗ ‘ಹೀರೊಗಳು’ ಬೇಕಿಲ್ಲ ‘ನಾಯಕರು’ ಬೇಕು. ಜನರ ವಿಶ್ವಾಸವನ್ನು ಒಳಗೊಳ್ಳುವ ಕಾರ್ಯವಿಧಾನ ಬೇಕು. ನನ್ನ ದೃಷ್ಟಿಯಲ್ಲಿ ‘ಹೀರೋತನ’ವೇ ಬೇರೆ. ‘ನಾಯಕತ್ವ’ವೇ ಬೇರೆ. ಜನರನ್ನು ಕ್ಷಣಿಕ ಉದ್ವೇಗ ಮತ್ತು ಉದ್ರೇಕಗಳಿಗೆ ಈಡು ಮಾಡುವ ‘ಹೀರೋತನ’ದ ಜಾಗದಲ್ಲಿ ದೂರದರ್ಶಿತ್ವದ ದರ್ಶನಾತ್ಮಕ ಧೀಮಂತಿಕೆಯ ನಾಯಕತ್ವ ಬೇಕು. ಈ ನಾಯಕತ್ವ ಏಕ ವ್ಯಕ್ತಿಯದಾಗಬೇಕೆಂದು ನಾನು ಹೇಳುತ್ತಿಲ್ಲ. ಸಂಘಟನಾತ್ಮಕ ಕ್ರಿಯೆಗಳಲ್ಲೇ ನಾಯಕತ್ವದ ನೆಲೆಗಳು ಮೂಡಿಬರುತ್ತವೆ.

ಇವತ್ತಿನ ನಾಯಕತ್ವದ ಸ್ವರೂಪಗಳನ್ನು ಗಮನಿಸಿ, ಧಾರ್ಮಿಕ ನಾಯಕತ್ವದಲ್ಲಿ ಧಾರ್ಮಿಕತೆಗಿಂತ ಜಾತೀಯತೆ ಮತ್ತು ಆರ್ಥಿಕತೆಯೇ ಪ್ರಬಲವಾಗುತ್ತಿದೆ. ರಾಜಕೀಯ ನಾಯಕತ್ವ ಸೈದ್ಧಾಂತಿಕವಾಗಿ ಆರ್‍ಥಿಕ ನಾಯಕತ್ವಕ್ಕೆ ಶರಣಾಗಿ ಅಧಿಕಾರ ಮತ್ತು ಹಣದಲ್ಲಿ ತೇಲಾಡುತ್ತಿದೆ. ಈ ಮಧ್ಯೆ ಸಾಮಾಜಿಕ ನಾಯಕತ್ವದ ಶಕ್ತಿ ಕ್ಷೀಣವಾಗುತ್ತಿದೆ. ಆಳುವ ಪಕ್ಷ ಹಾಗೂ ಸರ್ಕಾರದ ಓಲೈಕೆಯಲ್ಲಿ ತೊಡಗಿರುವ ಸಾಮಾಜಿಕ ಧುರೀಣರ ಸಂಖ್ಯೆ ಹೆಚ್ಚಾಗುತ್ತಿದೆ. ಇದು ಆತಂಕದ ಸಂಗತಿ. ಎಪ್ಪತ್ತರ ದಶಕದ ಆದ್ಯತೆಗಳು ಈಗ ಪಲ್ಲಟಗೊಂಡಿರುವುದೂ ಇಂತಹ ಅನಾರೋಗ್ಯಕರ ಸನ್ನಿವೇಶಕ್ಕೆ ಒಂದು ಪ್ರಮುಖ ಕಾರಣ.

ಎಪ್ಪತ್ತರ ದಶಕದ ಸೈದ್ಧಾಂತಿಕತೆಯ ಜಾಗವನ್ನು ಸಮಯಸಾಧಕತೆ ಆಕ್ರಮಿಸಿಕೊಳ್ಳುತ್ತಿದೆ. ಸಾಮಾಜಿಕ ವಿವೇಕದ ಬದಲು ಆರ್ಥಿಕ ಅವಿವೇಕ ವಿಜೃಂಭಿಸುತ್ತಿದೆ. ಮಾನವೀಯತೆಯನ್ನು ಮತೀಯತೆಯು ಮಣ್ಣುಮುಕ್ಕಿಸುತ್ತಿದೆ. ಕೋಮುಸಾಮರಸ್ಯದ ಬದಲು ಕೋಮು ಸಂಘರ್ಷ ಆದರ್ಶವಾಗುವ ಅಪಾಯ ಕಾಣುತ್ತಿದೆ. ಜಾತಿ ವಿನಾಶದ ಆಶಯಗಳನ್ನು ಜಾತಿವಾದ ನುಂಗುತ್ತಿದೆ. ಧರ್ಮಗುರುಗಳು ಜಾತಿಗುರುಗಳು ಮಾತ್ರವಾಗುತ್ತಿದ್ದಾರೆ. ರಾಜಕೀಯ ನಾಯಕರು ಕುರ್ಚಿಯಲ್ಲಿ ಕೂತ ಕುಬ್ಜರಾಗುತ್ತಿದ್ದಾರೆ. ಉದ್ಯಮಪತಿಗಳು ರಾಜಕೀಯ ಕುರ್ಚಿಗಳ ಕಣ್ಣಾಗುತ್ತಿದ್ದಾರೆ. ಇಂಥ ಸನ್ನಿವೇಶದಲ್ಲಿ ನೈಜ ಹೋರಾಟಗಳಿಗಿಂತ ಹೋರಾಟ ಪ್ರಹಸನಗಳಿಗೆ ಪ್ರಚಾರ ಹೆಚ್ಚಾಗುತ್ತಿದೆ. ಸ್ವಾರ್ಥ ಕೇಂದ್ರಿತ ಹೋರಾಟಗಳೂ ಮುಂಚೂಣಿಗೆ ಬರುತ್ತಿವೆ. ರಾಜಕೀಯ ಕ್ಷೇತ್ರವೊಂದೇ ಅಲ್ಲ, ಧಾರ್ಮಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ವಿಶ್ವಾಸಾರ್ಹತೆಯೂ ಪ್ರಶ್ನಾರ್ಹವಾಗುತ್ತಿದೆ. ಸಮುದಾಯ ಪ್ರಜ್ಞೆಗಿಂತ ವ್ಯಕ್ತಿವೈಪರೀತ್ಯಗಳು ವೈಭವೀಕರಣಗೊಳ್ಳುತ್ತಿವೆ. ಒಟ್ಟಾರೆ ಒಂದು ಕ್ರೂರ ಸನ್ನಿವೇಶದಲ್ಲಿ ನಮ್ಮ ಸಮಾಜ ತೊಳಲಾಡುತ್ತಿದೆ. ಆದ್ದರಿಂದ ಸರಿದಾರಿಯತ್ತ ಕೊಂಡೊಯ್ಯುವ ಹೊಣೆ ಎಲ್ಲ ಪ್ರಗತಿಪರ ಸಂಘಟನೆಗಳ ಮೇಲಿದೆ. ಆದರೇನು ಮಾಡುವುದು, ಎಪ್ಪತ್ತರ ದಶಕದ ಸಂಘಟನೆಯ ನೆಲೆಗಳನ್ನು ಈಗ ವಿಘಟನೆಯ ನೆಲೆಗಳು ಆವರಿಸಿಕೊಳ್ಳುತ್ತಿವೆ. ಪ್ರತಿಗಾಮಿಗಳಿಗಿಂತ ಹೆಚ್ಚಾಗಿ ಪ್ರಗತಿಗಾಮಿಗಳಲ್ಲೇ ವಿಘಟನೆಯ ವ್ಯಾಪ್ತಿ ದೊಡ್ಡದಾಗಿದೆ. ವಿಪರ್ಯಾಸ ಮತ್ತು ವಿಷಾದದ ಸಂಗತಿಯೆಂದರೆ, ಪ್ರತಿಗಾಮಿಗಳು ಈಗ ಹೆಚ್ಚು ಸಂಘಟಿತರಾಗುತ್ತಿದ್ದಾರೆ, ಪ್ರಗತಿಗಾಮಿಗಳು ಹೆಚ್ಚು ವಿಘಟಿತರಾಗುತ್ತಿದ್ದಾರೆ. ಹೀಗಾಗಿ ಪ್ರಗತಿಪರ ವಲಯ ವಿಘಟನೆಯ ವಲಯವಾಗುತ್ತಿದೆ; ಸೈದ್ಧಾಂತಿಕ ಶಿಥಿಲತೆ ಅಧಿಕವಾಗುತ್ತಿದೆ. ಆದರೆ ಪ್ರತಿಗಾಮಿ ವಲಯ ಸಂಘಟನೆಯ ವಲಯವಾಗುತ್ತಿದೆ. ಪ್ರತಿಗಾಮಿ ಸಿದ್ಧಾಂತದ ಬದ್ಧತೆ ಅಧಿಕವಾಗುತ್ತಿದೆ. ಇಂತಹ ಸಂದರ್ಭದಲ್ಲಿ ಪ್ರಗತಿಪರ ವಲಯದ ಒಗ್ಗಟ್ಟು ತೀರಾ ಅಗತ್ಯವಾಗಿದೆ.

ಪ್ರಗತಿಪರವಲಯದ ಒಗ್ಗಟ್ಟು ಎಂದರೆ ಕೇವಲ ಶೋಷಿತ ಜಾತಿ ಮತ್ತು ವರ್ಗಗಳು ಒಂದಾಗುವುದು ಮಾತ್ರವಲ್ಲ. ಆತ್ಮಾಭಿಮಾನ ಮತ್ತು ಆತ್ಮಾವಲೋಕನಗಳ ಮೂಲಕ ವಿಶ್ವಾಸಾರ್ಹತೆಯನ್ನು ಗಟ್ಟಿಗೊಳಿಸುವ, ವೃದ್ಧಿಸುವ ಸಂಘಟನಾತ್ಮಕ ಶಕ್ತಿಯಾಗಿಯೂ ಮುಖ್ಯ. ಶೋಷಿತ ಜಾತಿಯವರು ಮತ್ತು ವರ್ಗದವರು ಎಂಬ ಒಂದೇ ಕಾರಣಕ್ಕಾಗಿ ಆಯಾ ಜಾತಿ-ವರ್‍ಗಗಳನ್ನು ಅಥವಾ ನಾಯಕರನ್ನು ವಿಮರ್‍ಶೆಗೆ ಒಡ್ಡದೆ ಹೋದರೆ ನಮ್ಮ ವಿಶ್ವಾಸಾರ್‍ಹತೆ ಉಳಿಯುವುದಿಲ್ಲ. ಶೋಷಿತ ಜಾತಿ ಮತ್ತು ವರ್ಗ ಎಂದು ತಪ್ಪುಗಳಿಗೂ ವಿನಾಯಿತಿ ಕೇಳುವ ಕಾಲ ಮುಗಿದಿದೆ ಎಂದು ನಾನು ಭಾವಿಸುತ್ತೇನೆ. ಇದರರ್ಥ ಶೋಷಿತ ವಲಯವು ವಿಶಿಷ್ಟ ಹಾಗೂ ವಿಶೇಷ ಸವಲತ್ತುಗಳನ್ನು ಕೇಳಬಾರದೆಂದಲ್ಲ; ಕೇಳಲೇಬೇಕು; ಅಗತ್ಯವಾದರೆ ಹೋರಾಟಕ್ಕಿಳಿಯ ಬೇಕು. ಸೈದ್ಧಾಂತಿಕ ನೆಲೆಯ ಹೋರಾಟಗಳ ಜೀವಶಕ್ತಿಯನ್ನು ಸದಾ ಅಂತರ್ಗತ ಮಾಡಿಕೊಂಡಿರಬೇಕು. ವೈಯಕ್ತಿಕ ನೆಲೆಯನ್ನು ಮೀರಿದ ಸಾಮುದಾಯಿಕ ಪ್ರಜ್ಞೆಯು ಮುಖ್ಯವಾಗಬೇಕು. ಶೋಷಿತ ವಲಯದವರಿಗೆ ಅಧಿಕಾರ ಸಿಕ್ಕಾಗ ಈ ಎಲ್ಲ ಅಂಶಗಳೂ ಜಾಗೃತವಾಗಿರಬೇಕು; ಸಾಮಾಜಿಕ ವಿವೇಕದ ಎಚ್ಚರ ಜೊತೆಗಿರಬೇಕು.

ಈಗ ನೋಡಿ; ಮೇಲ್ಜಾತಿ ಮತ್ತು ವರ್ಗಗಳೇ ಹೆಚ್ಚು ಕಾಲ ಅಧಿಕಾರ ಕೇಂದ್ರದಲ್ಲಿದ್ದ ಕಾರಣದಿಂದ ಉತ್ತರ ಪ್ರದೇಶ ಮತ್ತು ಬಿಹಾರ ರಾಜ್ಯಗಳಲ್ಲಿ ಪರ್ಯಾಯ ಶಕ್ತಿಯ ಅನಿವಾರ್ಯ ವುಂಟಾಯಿತು. ದಲಿತ ಮತ್ತು ಹಿಂದುಳಿದವರ ಸಂಘಟನೆ ಮತ್ತು ಸಂವೇದನೆಯ ಫಲವಾಗಿ ಕಾನ್ಸಿರಾಂ, ಕರ್ಪೂರಿಠಾಕೂರ್, ಮಾಯಾವತಿ, ಲಾಲೂಪ್ರಸಾದ್ ಯಾದವ್, ಮುಲಾಯಂ ಸಿಂಗ್ ಯಾದವ್ ಮುಂತಾದವರ ಉದಯವಾಯಿತು. ಕಾನ್ಶಿರಾಂ ಅವರು ಸ್ವತಃ ಅಧಿಕಾರ ಹಿಡಿಯದಿದ್ದರೂ ದಲಿತರು ಅಧಿಕಾರಕ್ಕೆ ಬರುವುದಕ್ಕೆ ಬೇಕಾದ ಕ್ರಿಯಾ ಯೋಜನೆಯನ್ನು ಸಮರ್ಥವಾಗಿ ರೂಪಿಸುತ್ತ ಬಂದರು. ಕರ್ನಾಟಕದಲ್ಲಿ ದೇವರಾಜ ಅರಸರು ಬಂದು ಹೋದದ್ದರಿಂದ ಕಾನ್ಶಿರಾಂ ಅವರ ಅನಿವಾರ್ಯತೆ ಇಲ್ಲಿ ಇಲ್ಲ ಎಂದು ನಾನು ತುಂಬಾ ಹಿಂದೆಯೇ ಬರೆದಿದ್ದೆ. ಇದು ಕಾನ್ಸಿರಾಂ ಶಕ್ತಿಯ ನಿರಾಕರಣೆ ಅಲ್ಲ. ಕರ್ನಾಟಕದ ಸಾಮಾಜಿಕ-ರಾಜಕೀಯ ವಿಕಾಸದ ವಿವರಣೆ. ಅದು ಬೇರೆ ವಿಷಯ; ದಲಿತ ಹಾಗೂ ಹಿಂದುಳಿದ ವರ್ಗಗಳಿಂದ ಯಾರೇ ಅಧಿಕಾರಕ್ಕೆ ಬಂದರೂ ಅದೊಂದು ಚಾರಿತ್ರಿಕ ಸಂಭ್ರಮವೇ ಸರಿ. ಆದರೆ ಅವರು ಹೊಸ ಚರಿತ್ರೆಯನ್ನು ನಿರ್ಮಿಸದೆ ಹೋದರೆ ಚಾರಿತ್ರಿಕ ದುರಂತವಾದೀತು ಎಂಬ ಎಚ್ಚರ ಮತ್ತು ವಿವೇಕ ಅಗತ್ಯ. ಲಾಲೂ ಪ್ರಸಾದ್ ಯಾದವ್, ಮುಲಾಯಂ ಸಿಂಗ್ ಯಾದವ್, ಮಾಯಾವತಿ – ಇಂಥವರ ಜಾತ್ಯತೀತ ನಿಲುವಿನ ಬಗ್ಗೆ ಗೌರವವನ್ನಿಟ್ಟುಕೊಂಡೇ ಇವರು ಕರ್ಪೂರಿ ಠಾಕೂರ್‌ ಆಗಲಿಲ್ಲ. ದೇವರಾಜ ಅರಸು ಆಗಲಿಲ್ಲ. ಕಾನ್ಶಿರಾಂ ಆಗಲಿಲ್ಲ ಎಂದು ವಿಷಾದದಿಂದ ಹೇಳಬೇಕಾಗಿದೆ. ಅಧಿಕಾರಕ್ಕಾಗಿ ಕೋಮುವಾದಿಗಳ ಜೊತೆ ಕೈಜೋಡಿಸಲು ಹಿಂಜರಿಯದೆ ಇದ್ದವರೂ ಇಂಥವರಲ್ಲಿದ್ದಾರೆ. ಈ ವಿಷಯದಲ್ಲಿ ಲಾಲೂ ಪ್ರಸಾದ್ ಮಾತ್ರ ಪ್ರತ್ಯೇಕವಾಗಿ ನಿಲ್ಲುತ್ತಾರೆ. ಆದರೆ ಇವರಾರೂ ಹಗರಣ ಮುಕ್ತರಾಗಲಿಲ್ಲ: ಆತ್ಮರತಿಯಿಂದ ಹೊರಬರಲಿಲ್ಲ. ಮಾಯಾವತಿಯವರು ಆನೆಗಳ ಪ್ರತಿಮೆಗಳನ್ನು ಯಥೇಚ್ಛವಾಗಿ ಸ್ಥಾಪಿಸುವುದರ ಜೊತೆಗೆ ತಮ್ಮ ಪ್ರತಿಮೆಯನ್ನೂ ಸ್ವತಃ ಸ್ಥಾಪಿಸಿದರು. ಇತ್ತೀಚೆಗೆ ನಡೆದ ವಿಧಾನ ಸಭಾ ಚುನಾವಣೆಯಲ್ಲಿ ಮುಲಾಯಂ ಅವರ ಸಮಾಜವಾದಿ ಪಕ್ಷ ಸ್ಪಷ್ಟ ಬಹುಮತ ಪಡೆದಾಗ ‘ನಡೆದ ಸಂಭ್ರಮಾಚರಣೆಯಲ್ಲಿ ಉನ್ಮತ್ತ ಕಾರ್ಯಕರ್ತನ ಬಂದೂಕಿಗೆ ಎಂಟು ವರ್ಷದ ಬಾಲಕ ಬಲಿಯಾದ. ಎರಡೇ ದಿನಗಳಲ್ಲಿ ಹತ್ತು ಹದಿನೈದು ದಲಿತರ ಗುಡಿಸಲುಗಳನ್ನು ಇದೇ ಕಾರ್ಯಕರ್ತರು ಸುಟ್ಟು ಹಾಕಿದರು. ಹಿಂದುಳಿದ ವರ್ಗ ಎಂಬ ಕಾರಣಕ್ಕಾಗಿ ಇದನ್ನೆಲ್ಲ ಕ್ಷಮಿಸಲಾದೀತೆ? ದಲಿತ ಮಹಿಳೆ ಎಂಬ ಕಾರಣಕ್ಕಾಗಿ ಮಾಯಾವತಿಯವರು ಮಾಡಿದ್ದೆಲ್ಲ ಸರಿ ಎನ್ನಲಾದೀತೆ? ಕೆಲವು ತಪ್ಪುಗಳ ನಡುವೆಯೂ ದೇವರಾಜ ಅರಸು ಹೆಸರು ಯಾಕೆ ಉಳಿದಿದೆ? ಬಿ. ಬಸವಲಿಂಗಪ್ಪನವರು ಯಾಕೆ ನೆನಪಲ್ಲಿದ್ದಾರೆ ? ಕರ್ಪೂರಿ ಠಾಕೂರ್ ಯಾಕೆ ಕಾಣಿಸುತ್ತಾರೆ? ಇಂಥ ಪ್ರಶ್ನೆಗಳ ಮೂಲಕ ನಮ್ಮ ಅಧಿಕಾರಸ್ಥರನ್ನು ವಿಮರ್ಶೆಗೆ ಒಡ್ಡದಿದ್ದರೆ ಅದು ಆತ್ಮವಂಚನೆಯಾದೀತು.

ಈ ಎಲ್ಲ ಎಚ್ಚರ ಮತ್ತು ವಿವೇಕಗಳ ನೆಲೆಯಲ್ಲಿ ಆತ್ಮಾವಲೋಕನ ಮಾಡಿಕೊಂಡರೆ ದಲಿತ ಮತ್ತು ಹಿಂದುಳಿದ ವರ್ಗಗಳ ಆತ್ಮಾಭಿಮಾನವು ಮತ್ತಷ್ಟು ಗಟ್ಟಿಯಾಗುತ್ತದೆ. ಈ ದಿಕ್ಕಿನಲ್ಲಿ ಸೂಕ್ತ ‘ಸಂವಾದ’ ನಡೆಯಲಿ ಎಂದು ಆಶಿಸುತ್ತೇನೆ.
*****
(೨೦೧೨ ಏಪ್ರಿಲ್)

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧೦೪
Next post ಶುಭ

ಸಣ್ಣ ಕತೆ

 • ಎರಡು ಮದುವೆಗಳು

  ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

 • ಮೃಗಜಲ

  "People are trying to work towards a good quality of life for tomorrow instead of living for today, for many… Read more…

 • ಕೊಳಲು ಉಳಿದಿದೆ

  ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

 • ದುರಾಶಾ ದುರ್ವಿಪಾಕ

  "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

 • ಕರೀಮನ ಪಿಟೀಲು

  ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…

cheap jordans|wholesale air max|wholesale jordans|wholesale jewelry|wholesale jerseys