ನವಿಲುಗರಿ – ೧೨

ನವಿಲುಗರಿ – ೧೨

ರಂಗನ ಮನೆ ಮುಂದೆ ಪೊಲೀಸ್ ಜೀಪ್ ಬಂದಾಗ ನೆರೆಹೊರೆಯವರಿಗೆ ಅಚ್ಚರಿ. ಕಮಲಮ್ಮ ಕಾವೇರಿಗೆ ಗಾಬರಿ. ಅಣ್ಣಂದಿರು ಅತ್ತಿಗೆಯರಿಗೆಂತದೋ ಸಂಭ್ರಮವೆನಿಸಿದರೂ ತೋರಗೊಳ್ಳುವಂತಿಲ್ಲ. ರಂಗ ತನ್ನ ರೂಮಿನಲ್ಲಿ ಓದುತ್ತಾ ಕುಳಿತಿದ್ದ. ಇನ್ಸ್‌ಪೆಕ್ಟರ್‌ ಪೇದೆಗಳೊಂದಿಗೆ ಒಳ ಬಂದಾಗ ಪ್ರಶ್ನಿಸಿದ್ದು ಕಮಲಮ್ಮ. ಇನ್ಸ್‌ಪೆಕ್ಟರ್‌ ಆಕೆಗೆ ಉತ್ತರಿಸದೆ ‘ಮನೇನೆಲ್ಲಾ ಸರ್ಚ್ ಮಾಡಿ’ ಪೇದೆಗಳಿಗೆ ಅಪ್ಪಣೆಯಿತ್ತ. ಪೇದೆಗಳ ಮನೆಯಲ್ಲೆಲ್ಲಾ ತಡಕಾಡುವಾಗ ರಂಗ ಹೊರಬಂದ. ‘ಏನ್ಸಾರ್ ಇದೆಲ್ಲಾ?’ ಇನ್ಸ್‌ಪೆಕ್ಟರ್‌ನನ್ನು ಪ್ರಶ್ನಿಸುತ್ತಾ ಸೋದರರತ್ತ ನೋಡಿದ. ಅವರದ್ದು ದಿವ್ಯ ಮೌನ.

‘ಈಗ ಗೊತ್ತಾಗುತ್ತೆ ತಾಳಿ’ ದರ್ಪದಿಂದ ಲಟ್ಟವನ್ನು ಲಯಬದ್ಧವಾಗಿ ತನ್ನ ತೊಡೆಯ ಭಾಗಕ್ಕೆ ತಟ್ಟಿಕೊಂಡು ನಕ್ಕ ಇನ್ಸ್‌ಪೆಕ್ಟರ್‌.

‘ಹೀಗೆಲ್ಲಾ ಮನೆಯಲ್ಲಿ ನುಗ್ಗೋದು ಡ್ಯೂಟಿಯಲ್ಲ ಗೂಂಡಾಗಿರಿ ಅನಿಸುತ್ತೆ ಏನ್ ಸರ್ಚ್ ಮಾಡ್ತಿದಿರಾ ಹೇಳಿ? ಅದನ್ನ ತಿಳ್ಕೊಳ್ಳೋ ಹಕ್ಕು ಮನೆಯವರಿಗಿದೆ ಇನ್ಸ್‌ಪೆಕ್ಟರ್‌’ ರಂಗ ತೀಕ್ಷಣವಾಗಂದ.

‘ಪಾಳೇಗಾರರ ಮನೆ ಹುಡುಗಿ ಚಿನ್ನುವಿನ ಅಪರೂಪದ ವಾಚ್ ಕಳುವಾಗಿದೆಯಂತೆ. ವಜ್ರಗಳನ್ನು ಕೂರಿಸಿದ ಗೋಲ್ವಾಚ್ ಅದು, ಫಾರಿನ್ ವಾಚಂತೆ. ಲಕ್ಷಗಟ್ಟಲೆ ಬೆಲೆ ಬಾಳುತ್ತೆ ಗೊತ್ತಾ?’ ಇನ್ಸ್‌ಪೆಕ್ಟರ್‌ ವಿವರಿಸಿದ.

‘ಕಳುವಾಗಿದೆಯೋ? ಕಳ್ಕೊಂಡಿದಾಳೋ ಸಾರ್? ಕೇಳಿದ್ರಾ?’ ರಂಗ ರೇಗಿದ.

‘ಸ್ವಲ್ಪ ತಡಿಯಪ್ಪ ಗೊತ್ತಾಗುತ್ತೆ. ಚಿನ್ನು ನಿನ್ನೆ ನಿಮ್ಮ ಮನೆಗೆ ಬಂದಿದ್ದರಂತೆ ಹೌದಾ?’

‘ಆಫ್‌ಕೋರ್ಸ್… ಬಂದಿದ್ದಳು. ನಾವಿಬ್ಬರೂ ಕ್ಲಾಸ್‌ಮೇಟ್ಸ್’ ಅಲ್ಲಿ ಇಲ್ಲಿ ಹುಡುಕಾಡಿದ ಪೇದೆಗಳೀಗ ರಂಗನ ರೂಮಿಗೆ ನುಗ್ಗಿದರು. ಅಣ್ಣಂದಿರಾಗಲಿ, ಅತ್ತಿಗೆಯರಾಗಲಿ ಎಲ್ಲಾ ‘ಫ್ರೀಜ್’ ಆದವರಂತೆ ಕಂಡರು. ರಂಗನಿಗೆ ಇದೆಲ್ಲಾ ಚಿನ್ನು ಮನೆಯವರ ಹಕೀಕತ್ ಎಂದು ಕ್ಷಣದಲ್ಲೇ ತಿಳಿಯಿತು. ತಾನೇಕೆ ಕದಿಯಲಿ? ತನಗೆಂತಹ ಅಳಕು ಎಂದು ಸೆಟೆದುನಿಂತ. ಹೊರಬಂದರು ಪೇದೆಗಳು ಒಬ್ಬನ ಕೈನಲ್ಲಿ ವಾಚ್ ಇದೆ. ‘ಸಾರ್ ವಾಚೂ ಸಾರ್, ಎಷ್ಟು ವಂಡರ್‌ಫುಲ್ಲಾಗಿದೆ ನೋಡಿ ಸಾರ್’ ಅಂದ ಪೇದೆ. ‘ಈಡಿಯಟ್, ಇದು ಎಲ್ಲಿ ಸಿಗ್ತು ಹೇಳಯ್ಯ’ ಗದರಿಕೊಂಡ ಇನ್ಸ್‌ಪೆಕ್ಟರ್‌.

‘ಇವನ ರೂಮಲ್ಲೇ ಇತ್ತು. ಇವನ ಬ್ಯಾಗಲ್ಲೇ ಬುಕ್ಸ್ ಮಧ್ಯೆ ಇತ್ತು ಸಾ’ ಪೇದೆ ಅಂದ.

‘ನಡಿಯೋ ಸ್ಟೇಷನ್ಗೆ’ ಇನ್ಸ್‌ಪೆಕ್ಟರ್ ಜಬರ್‌ದಸ್ತ್ ಮಾಡಿದ.

‘ಸಾರ್…. ಖಂಡಿತ ಇದು ನನ್ನ ರೂಮಿಗೆ ಹೇಗೆ ಬಂತೋ! ಬ್ಯಾಗಲ್ಲಿ ಎಲ್ಲಿತ್ತೋ ನನ್ಗೆ ತಿಳೀದು ಸಾರ್, ಚಿನ್ನು ಬಂದಿದ್ದು ನಿಜ… ಇಲ್ಲೇ ಉಯ್ಯಾಲೆನಲ್ಲಿ ಕೂತು ಹೊರಟು ಹೋದ್ಲು… ಅಲ್ವೇನ್ರೋ?’ ಅಣ್ಣಂದಿರತ್ತ ನೋಡಿದ. ಅವರು ಅವನತ್ತ ನೋಡಲೇ ಇಲ್ಲ.

‘ಸಾರ್, ನನ್ಮಗ ಕಳ್ಳ ಅಲ್ಲ ಸಾರ್. ನಾವು ಬಡವರು ನಿಜ. ಆದರೆ ಮಾನವಾಗಿ ಬದುಕ್ತಾ ಇದೀವಿ’ ಕಮಲಮ್ಮ ಅಂಗಲಾಚುತ್ತಾ ಕೈಕೈ ಮುಗಿದರು.

‘ಹೌದು ಸಾರ್ ನಮ್ಮಣ್ಣ ಅಂಥವನಲ್ಲ. ಪಾಳೇಗಾರರ ಮನೆಯವರಿಗೆ ಇವನನ್ನು ಕಂಡ್ರೆ ಆಗೋದಿಲ್ಲ ಅದಕ್ಕೆ ಏನೋ ಮಸಲತ್ತು ಮಾಡಿದಾರೆ ಸಾ… ಪ್ಲೀಸ್ ಸಾರ್ ಅವನನ್ನ ಸ್ಟೇಷನ್ನೆ ಕರ್‍ಕೊಂಡು ಹೋಗ್ಬೇಡಿ ಸಾರ್’ ಪರದಾಡಿದಳು ಕಾವೇರಿ.

‘ಎಲ್ಲರೂ ಹೀಗೆ ಹೇಳೋದು ಕಣ್ರಿ. ಅದ್ಸರಿ ಈ ವಾಚ್ ನಿಮ್ಮ ಮನೆಯಲ್ಲಿ ಹೆಂಗ್ರಿ ಬಂತು?… ನಡಿಯಯ್ಯ’ ಇನ್ಸ್‌ಪೆಕ್ಟರ್ ರಂಗನ ರೆಟ್ಟೆಗೆ ಕೈ ಹಾಕಿದಾಗ ಸಿಡಿದೆದ್ದ ಅವನು. ‘ಬಿಡಿಸಾರ್ ಬರ್ತಿನಿ. ಬಡವರ ಮಾತನ್ನ ಯಾರೂ ನಂಬೋಲ್ಲ’ ಎಂದು ತಾನೇ ಹೋಗಿ ಜೀಪಲ್ಲಿ ಕೂತ. ಜನ ನಿಂತು ನೋಡಿದರು. ಅದೇನು ಕುತೂಹಲವೋ, ರಂಜನೆಯೋ ಎಲ್ಲರ ಮೋರೆಗಳಲ್ಲಿ ನಗೆಯಾಡಿತು.

ಈಗ ಕಮಲಮ್ಮನದು ಆರ್ದ್ರ ಹೃದಯ. ಲಾಯರ್ ಮಗನನ್ನು ರಂಗನನ್ನು ಬಿಡಿಸಿ ತರಲು ಕಾಡಿಬೇಡಿದಳು.

‘ಕಳ್ಳರ ಸುಳ್ಳರ ಪರ ವಕಾಲತ್ತು ವಹಿಸೋ ಪೆಟ್ಟಿಕೇಸ್ ಲಾಯರಲ್ಲ ನಾನು… ತಪ್ಪು ಮಾಡಿದವರಿಗೆ ಶಿಕ್ಷೆ ಆಗ್ಲೇಬೇಕು ದಟ್ ಈಸ್ ರೂಲ್ಸ್’ ಎಂದು ಅಸಂಬದ್ಧವಾಗಿ ಏನೇನೋ ತಲೆಹರಟೆ ಮಾಡಿದ. ನಿನ್ನ ಕೈಯಲ್ಲಿ ಆಗುತ್ತೋ ಇಲ್ಲವೋ ಹೇಳೋ ವೆಂಕಟ’ ತಾಯಿ ಆತಂಕ ಪಟ್ಟಳು.

‘ಅಮ್ಮಾ, ಬೇಗ ಏನಾದ್ರೂ ಮಾಡಮ್ಮ, ಅಣ್ಣನ್ನ ಪೋಲೀಸಿನವರು ಹಿಂಸೆ ಕೊಡ್ದೆ ಇರ್ತಾರಾ…’ ಕಾವೇರಿ ತಾಯಿಯನ್ನು ಹಿಡಿದು ಗಳಗಳನೆ ಅತ್ತಳು. ಆತುರಪಟ್ಟಳು. ಇವರುಗಳು ಯಾರೂ ತನ್ನ ಮಗನನ್ನು ಖಂಡಿತ ಕಾಪಾಡುವುದಿಲ್ಲವೆಂಬುದು ಖಾತರಿಯಾದೊಡನೆ ಆಕೆ ಮನೆಬಿಟ್ಟಳು. ಕಮಲಮ್ಮಳೀಗ ನೇರವಾಗಿ ಗರಡಿಮನೆಯತ್ತ ಬಂದು ಹೊರಗಡೆ ನಿಂತು ‘ಅಣ್ಣಾ ಚಮನ್ಸಾಬಣ್ಣ’ ಎಂದು ಕೂಗಿದಳು. ಮೊದಲು ಹುಡುಗರು ಬಂದರು.

‘ಅರೆ ನಮ್ಮ ರಂಗನ ತಾಯಿ ಕಣ್ರೋ’ ಎಂದು ಒಳ ಓಡಿ ಸುದ್ದಿ ಮುಟ್ಟಿಸಿದರು. ಚಮನ್‌ಸಾಬಿ ಹೊರ ಬಂದರು. ‘ನಮಸ್ತೆ ಅಮ್ಮಾ’ ಎಂದು ಕೈ ಜೋಡಿಸಿದ. ಆಕೆಯ ಮುಖ ಕಪ್ಪಿಟ್ಟಿರುವುದನ್ನು ಕಂಡೇ ಏನೋ ಪರೇಶಾನಿ ಆಗಿದೆಯೆಂದು ಪತ್ತೆ ಹಚ್ಚಿದ. ‘ರಂಗ ಹುಶಾರಾಗಿದಾನಾ ಅಮ್ಮಾ?’ ಕಾತರದಿಂದ ಕೇಳಿದ.

‘ಇದಾನೆ. ಅವನೀಗ ಸ್ಟೇಷನ್‌ನಲ್ಲಿದಾನೆ ಸಾಬಣ್ಣ. ಅವರ ಅಣ್ಣಂದಿರು ಯಾರೂ ಅವನ್ನ ಬಿಡಿಸಿಕೊಳ್ಳೋಕೆ ತಯಾರಿಲ್ಲ… ನೀವಾದ್ರೂ ಸಹಾಯ ಮಾಡಿ ಅಣ್ಣಾ’ ಕಮಲಮ್ಮ ಕಾಲು ಹಿಡಿಯಲು ಬಂದಳು.

‘ತೋಬಾ ತೋಬಾ, ಹಂಗೆಲ್ಲ ಮಾಡಬಾರ್‍ದು ಅಮ್ಮ, ಆ ಇನ್ಸ್‌ಪೆಟ್ರು ಹಾದಿನಾಗೆ ಸಿಕ್ಕಾಗ ಸಲಾಂ ಉಸ್ತಾದ್ ಅಂತ ಸೆಲ್ಯೂಟ್ ಹೊಡಿತಾನೆ. ಆದ್ರೆ ಸ್ಟೇಶನ್ನಾಗೆ ಹೆಂಗೋ ಎಂತೋ! ಈ ಪೋಲೀಸಿನೋರ ಮ್ಯಾಗೆ ಭರೋಸಾ ಇಡಂಗಿಲ್ಲ ನಡೀರಿ ಅದೇನಾಯ್ತದೋ… ಚಮನ್‌ಸಾಬಿ ಆಕೆಯೊಂದಿಗೆ ಯಾವ ನಿರೀಕ್ಷೆಯನ್ನು ಇಟ್ಟುಕೊಳ್ಳದೆ ಹೊರಟರೂ ತಮ್ಮ ಶಿಷ್ಯ ಇಮಾಂದಾರ್ ಎಂಬ ಭರವಸೆಯಿತ್ತು. ಕಮಲಮ್ಮ ದಾರಿಗುಂಟ ವಿಷಯವನ್ನೆಲ್ಲಾ ಕಣ್ಣೀರರೆಯುತ್ತಾ ನಿವೇದಿಸಿಕೊಂಡಳು. ರಂಗನನ್ನು ಹಿಡಿದು ಬಡಿಯುತ್ತಿರುವ ದೃಶ್ಯವನ್ನು ನೋಡೋದು ಹೇಗಪ್ಪಾ ಎಂದಂಜುತ್ತಲೇ ಠಾಣೆಯೊಳಗಡಿಯಿಟ್ಟರು ಚಮನ್‌ಸಾಬಿ ಮತ್ತು ಕಮಲಮ್ಮ, ಇನ್ಸ್‌ಪೆಕ್ಟರ್‍ಗೆ ನಮಸ್ಕರಿಸಿದರು. ಆತ ಮುಗುಳ್ನಗದಿದ್ದರೂ ಕುಳಿತುಕೊಳ್ಳಿ ಎಂಬಂತೆ ಸನ್ನೆ ಮಾಡಿದ. ಕೂತರು. ‘ನಮ್ಮ ಹುಡುಗ ಎಲ್ಲಿ ಸ್ವಾಮಿ?’ ಸಾಬಿ ಕೇಳಿದ.

‘ಸೆಲ್‌ನಲ್ಲಿ ಇದಾನೆ’ ಇನ್ಸ್‌ಪೆಕ್ಟರನ ಚುಟುಕು ಉತ್ತರ.

‘ಅವನ್ನ ಹೊಡ್ದಿ ಬಡ್ದಿ ಮಾಡಿಬಿಟ್ರೋ ಹೆಂಗೆ. ಅವನು ಬೋತ್ ಅಚ್ಚಾ ಲಡಕಾ ಅದಾನೆ ಸಾಹೇಬ್ರೆ’ ಚಮನಸಾಬಿಯ ಕಣ್ಣಲ್ಲಿ ನೀರು ತುಳುಕಿತು.

‘ಎಷ್ಟು ಹೊಡೆದರೂ ಬಡಿದರೂ ತಡ್ಕೊಳೋ ಹಂಗೆ ಶಿಷ್ಯನ್ನ ತಯಾರ್‌ಮಾಡಿದಿರಾ ಹೇಳಿ ಪೈಲ್ವಾನರೆ’ ನಿರ್ಲಿಪ್ತವಾಗಂದ ಇನ್ಸ್‌ಪೆಕ್ಟರ್‌.

‘ನಮ್ಮ ಹುಡುಗ ಚೋರ್ ಅಲ್ಲ ಬದ್ಮಾಶ್ ಅಲ್ಲ… ಇಮಾಂದಾರ್ ಅದಾನೆ… ಸಾ. ಅವನ್ಗೆ ಬಿಟ್ಟುಬಿಡಿ ಇದೆಲ್ಲಾ ಹಕೀಕತ್ತು ಪಾಳೇಗಾರರದ್ದು’ ಸಾಬು ಅಂದ.

‘ದೊಡ್ವರು ಕಂಪ್ಲೇಂಟ್ ಕೊಟ್ಟ ಮೇಲೆ ನಾವು ಎನ್‌ಕ್ವಯರಿ ಮಾಡ್ಲೆಬೇಕಲ್ವೆ ಉಸ್ತಾದರೆ. ಅದರಲ್ಲಿ ವಾಚ್ ಬೇರೆ ರಂಗನ ಬ್ಯಾಗಿನಲ್ಲೇ ಸಿಕ್ಕಿದೆ… ನಾವಾದ್ರೂ ಏನ್ ಮಾಡೋದು ಯಾರನ್ನ ನಂಬೋದು ಹೇಳಿ?’

‘ನಿಮ್ದು ಮಾತು ಕರೆಕ್ಟ್ ಸಾ… ಆದ್ರೂ ಖುದಾಕೆಲಿಯೆ ಆ ಹುಡುಗನ್ನ ಬಿಟ್ಟುಬಿಡಿ ಸ್ವಾಮಿ ಬಡಹುಡ್ಗ’.

‘ಇದಕ್ಕೆಲ್ಲಾ ನೀವು ಲಾಯರ್‌ ಮೂಲಕ ಬರಬೇಕ್ರಿ ಉಸ್ತಾದ್, ರಂಗನ ಅಣ್ಣನೇ ಇದಾರಲ್ಲ…’

‘ಅವನು ಬರೋಲ್ಲ ಸಾರ್, ನೀವೇ ಏನಾದ್ರೂ ಮಾಡ್ಬೇಕು ಸಾರ್’ ಕಮಲಮ್ಮ ಈಗ ಕಂಗಾಲಾದಳು. ‘ಯಾಕೆ ಬರೋದಿಲ್ಲಮ್ಮ!?’ ತಲೆ‌ಎತ್ತಿ ನೋಡಿದ ಇನ್ಸ್‌ಪೆಕ್ಟರ್‌ ಮೊರೆಯಲ್ಲಿ ಚಕಿತತೆ. ಆಕೆಗೆ ಏನು ಹೇಳಬೇಕೋ ತಿಳಿಯದಾಯಿತು. ‘ಇಲ್ಲೆ ಏನೋ ಪಿತೂರಿ ಐತೆ ಸಾಹೇಬ್ರೆ… ಆ ಹುಡ್ಗಿ ವಾಚು ಇವರ ಮನೆಯಾಗೆ, ರಂಗನ ರೂಮಿನಾಗೆ ಹೆಂಗ್ ಬಂತ್ರಿ!’ ಸಾಬುಗೂ ಅಚ್ಚರಿ.

‘ಇದರ ಬಗ್ಗೆ ನಾನು ಏನು ಮಾಡ್ಬೇಕು ಹೇಳಿ. ಐ ಆಮ್ ಹೆಲ್ಪೆಸ್… ಒಂದು ಕೆಲ್ಸ ಮಾಡಿ ನೀವು ಪಾಳೇಗಾರರನ್ನೇ ಬೇಡ್ಕೊಂಡು ಕಂಪ್ಲೇಂಟ್ ವಾಪಸ್‌ ತಗೊಳ್ಳೋ ಹಾಗೆ ಮಾಡಿ…’ ಇನ್ಸ್‌ಪೆಕ್ಟರ್‌ ಮತ್ತೊಂದು ಪರಿಹಾರ ಸೂಚಿಸಿದ. ಕಮಲಮ್ಮ ಸಾಬು ಇಬ್ಬರ ಮುಖವೂ ವಿವರ್ಣವಾಯಿತು.

‘ಕಟುಕರ ಮುಂದೆ ಬಸವ ಪುರಾಣ ಓದಿದ್ರೆ ಕೇಳ್ತಾರ ಸ್ವಾಮಿ? ಬೇಕಾಗೇ ಇದನ್ನೆಲ್ಲಾ ಮಾಡಿದಾರೆ ಸ್ವಾಮಿ’ ಸಾಬು ಕಂಠ ಕಂಪಿಸಿತು.

‘ಸಾರಿ ಪೈಲ್ವಾನ್ರೆ, ತಾವಿನ್ನು ಹೊರಡಬಹುದು’ ನಿರ್ದಾಕ್ಷಿಣ್ಯವಾಗಂದ ಎಸ್.ಐ. ಸಾಬು, ಕಮಲಮ್ಮರ ಜಂಘಾಬಲವೇ ಉಡುಗಿತು. ಉಸಿರೆಳೆದುಕೊಂಡು ಮೇಲೆದ್ದರು. ಅವರಿನ್ನೇನು ಹೊರಡಬೇಕು ಬಿರುಗಾಳಿಯಂತೆ ನುಗ್ಗಿ ಬಂದಳು ಚಿನ್ನು. ಅವಳು ಬಂದಿದ್ದು ಬಂದ ಪರಿ ನೋಡಿ ಎಲ್ಲರೂ ನಿಬ್ಬೆರಗಾದರು.

‘ಸಾರ್ ಸಾರ್ ರಂಗನ್ನ ಬಿಟ್ಟುಬಿಡಿ ಸಾರ್… ಬಿಟ್ಟುಬಿಡಿ ಅವನ್ನಾ’ ಕೂಗಾಡಿದಳು.

‘ಫ್ಲೀಸ್ ಎಕ್ಸೆಟ್ ಆಗ್ಬೇಡಿ… ಕೂತೊಳ್ಳಿ, ರಂಗ ನಿಮ್ಮ ವಾಚ್ ಕದ್ದಿದ್ದಾನೆಂತ ನಿಮ್ಮ ತಂದೆನೇ ಕಂಪ್ಲೇಂಟ್ ಕೊಟ್ಟಿದಾರೆ…’ ಇನ್ಸ್‌ಪೆಕ್ಟರ್‌ ನಯವಾಗಂದ.

‘ಸುಳ್ಳು ಸಾರ್ ಸುಳ್ಳು. ಅವನು ಕದ್ದಿಲ್ಲ’ ಆವೇಶಗೊಂಡಿದ್ದಳು ಚಿನ್ನು.

‘ಅವನ ಮನೇಲಿ ಅವನ ಬ್ಯಾಗನಲ್ಲೇ ವಾಚ್ ಸಿಕ್ಕಿದೆಯಲ್ಲಮ್ಮ’

‘ಸಿಕ್ಕುಬಿದ್ದರೆ ರಂಗ ಕಳ್ಳ ಆಗಿಬಿಡ್ತಾನೋ ಇನ್ಸ್‌ಪೆಕ್ಟರ್‌?’

‘ಕದ್ದು ಮಾಲು ಸಿಕ್ಕಾಗ ಇನ್ನೇನ್ ಅಂತಾರೆ ಅವನ್ನ?’ ಎಸ್.ಐ. ಕನ್‌ಫ್ಯೂಸಾದ.

‘ಅದು ಕದ್ದಿದ್ದಲ್ಲ… ನಾನು ಅವನಿಗೆ ಪ್ರೆಸೆಂಟ್ ಮಾಡಿದ್ದೆ ಸಾರ್’ ಅವಳ ಮಾತಲ್ಲಿ ಕೃತಿಮತೆಯಾಗಲಿ ಅಳುಕಾಗಲಿ ಕಾಣಲಿಲ್ಲ. ದನಿಯಲ್ಲಿ ದೃಢತೆ ಕಂಡಿತು. ‘ನಿಮ್ಮ ತಂದೆ ಕದ್ದಿದಾನೆ ಅಂತ ಕಂಪ್ಲೇಂಟ್ ಕೊಟ್ಟಿದ್ದಾರಲ್ಲಮ್ಮ’ ಇನ್ಸ್‍ಪೆಕ್ಟರ್ ಪೇಚಿಗೆ ಬಿದ್ದ. ಅವರಿಗೆ ಆಗದವರ ಮೇಲೆ ಮರ್ಡರ್ ಮಾಡಿದಾನೆ ಅಂತ್ತೂ ಕಂಪ್ಲೇಂಟ್ ಕೊಡ್ತಾರಿ ಅವರು… ಅರೆಸ್ಟ್ ಮಾಡಿಬಿಡ್ತೀರಾ?’ ಕೇಳಿದಳು ಚಿನ್ನು.

‘ಸರಿ. ನೀವು ಏನ್ ಹೇಳ್ತಿದಿರೋ ರೈಟಿಂಗ್‌ನಲ್ಲಿ ಕೊಡ್ತಿರಾ?’ ಇನ್ಸ್‍ಪೆಕ್ಟರ್‍ಗೂ ಸಂಚು ತಿಳಿಯದ್ದೇನಲ್ಲವಲ್ಲ. ಬೇಗ ಕನ್ವಿನ್ಸ್ ಆದರಾದರೂ ನಾಳೆ ಅವರೂ ಪಾಳೇಗಾರರಿಂದ ಬಚಾವಾಗಬೇಕಲ್ಲ. ಉತ್ತರ ಹೇಳಬೇಕಲ್ಲ.

‘ನಾನು ಬರೆದುಕೊಟ್ಟರೆ ರಂಗನ ಬಿಡ್ತಿರಾ ಇನ್ಸ್‌ಪೆಕ್ಟರ್‌?’ ಕೇಳಿದಳು ಚಿನ್ನು.

‘ಶೂರ್…’ ಎಂದ ಎಸ್.ಪಿ. ಹಾಳೆ ಪೆನ್ನು ಅವಳ ಬಳಿ ಇರಿಸಿದರು. ಈಗ ಚಿನ್ನುವಿನ ಗಮನಕ್ಕೆ ಪೈಲ್ವಾನರು ಕಮಲಮ್ಮ ಬಂದರು. ನನ್ನ ತಾಯಿ… ನೀನು ನನ್ನ ಪಾಲಿನ ದೇವ್ರು ಕಣಮ್ಮ’ ಎಂದಪ್ಪಿಕೊಂಡಳು ಕಮಲಮ್ಮ. ಚಮನ್‌ಸಾಬಿಯ ಮುಖವೂ ಊರಗಲವಾಯಿತು. ಚಿನ್ನು ಬರೆದುಕೊಟ್ಟಳು. ಅವಳ ಧೈರ್ಯಕ್ಕೆ ದಂಗಾದ ಇನ್ಸ್‌ಪೆಕ್ಟರ್‌ ಕೇಳಿದ.

‘ನೀವು ಬರೆದು ಕೊಟ್ಟಿರಿ… ನಾನು ರಂಗನ್ನ ಬಿಡ್ತೀನಿ. ಇದರ ಪರಿಣಾಮ ಮುಂದೆ ಏನಾಗುತ್ತೆ ಗೊತ್ತಾ?’

‘ನಿಮಗೇನ್ ಮಾಡ್ತಾರೋ ಅಂತ ಜೀವಭಯಾನಾ?’ ವ್ಯಂಗ್ಯವಾಗಿ ಕೇಳಿದಳು ಚಿನ್ನು.

‘ಅಲ್ಲ… ನಿಮಗೇನ್ ಮಾಡ್ತಾರೋ ಅಂತ’ ತಟ್ಟನೆ ಹೇಳಿದ.

‘ಏನ್ ಮಾಡ್ತಾರೆ? ಜೀವ ತೆಗೀತಾರಾ? ತೆಗೆಯಲಿ ಬಿಡ್ರಿ’ ಅವಳ ದನಿಯಲ್ಲಿ ರೊಚ್ಚಿನ ತಾಂಡವ. ‘ಬಿಡ್ತು ಅನ್ನು ನನ್ನಮ್ಮ’ ಕಮಲಮ್ಮ ಬೆವರಿದಳು.

‘ಓಕೆ ಯಂಗ್ ಲೇಡಿ… ಫೋರ್‌ನಾಟ್ ಒನ್ ರಂಗನ್ನ ರಿಲೀಸ್ ಮಾಡ್ರಿ’ ಎಸ್.ಪಿ. ಆಜ್ಞಾಪಿಸಿದಾಗ ಪೇದೆಗಳಿಗೂ ಖುಷಿ. ಎಲ್ಲರ ಮೆಚ್ಚಿಗೆಯ ನೋಟ ದಿಟ್ಟ ಹುಡುಗಿ ಚಿನ್ನುವಿನತ್ತ ಹರಿಯಿತು. ಅಷ್ಟರಲ್ಲಿ ಉಗ್ರಪ್ಪ, ಮೈಲಾರಿ ಪೋಲೀಸ್ ಠಾಣೆಗೆ ಧಾವಿಸಿಬಂದರು. ಮಗಳನ್ನು ಅಲ್ಲಿ ಕಂಡು ಉರಿದುಹೋದರು. ಆಗಲೇ ರಂಗನೂ ಹೊರಬಂದುದನ್ನು ನೋಡಿದಾಗಲಂತೂ ಇಲ್ಲೇನು ನಡೆಯುತ್ತಿದೆ ಎಂಬುದೇ ಅರ್ಥವಾಗದೆ ಮುಷ್ಟಿ ಕಟ್ಟಿ ತೊಡೆಗೆ ಗುದ್ದಿಕೊಂಡರು. ನೀನು ಯಾಕೆ ಇಲ್ಲಿಗೆ ಬಂದೆ ಎಂದು ಎಗರಾಡಿ ಬೆದರಿಸುವ ಆಲೋಚನೆ ಬದಿಗೊತ್ತಿ, ‘ಏನ್ ನಡಿತೀದೇರಿ… ಹಾಂ… ಇಲ್ಲಿ? ಇನ್ಸ್‌ಪೆಕ್ಟ್ರೆ? ಎಂದು ಘರ್ಜಿಸಿದರು.

‘ಮೊದಲು ಕುಳಿತುಕೊಳ್ಳಿ ಸಾರ್ ತಾವಿಬ್ಬರೂ…’ ಗೌರವ ತೋರಿದ ಎಸ್.ಐ. ಉಗ್ರಪ್ಪ ಕಟಕಟನೆ ಹಲ್ಲು ಕಡಿದ. ಇನ್ಸ್‌ಪೆಕ್ಟರ್‌ ಮಾತು ಬೆಳೆಸದೆ ಚಿನ್ನು ಬರೆದುಕೊಟ್ಟ ಪತ್ರವನ್ನು ಉಗ್ರಪ್ಪನ ಕೈಗಿತ್ತ. ಸೋದರರು ದೊಪ್ಪನೆ ಕೂತವರು ಒಮ್ಮೆ ಚಮನ್ಸಾಬಿ ಕಮಲಮ್ಮ ರಂಗನನ್ನು ತಿರಸ್ಕಾರದಿಂದ ನೋಡಿ, ಚಿನ್ನುವನ್ನು ಕೆಕ್ಕರಿಸಿದರು. ಉಗ್ರಪ್ಪ ಪತ್ರ ಓದಿಕೊಂಡಾಗ ಮೋರೆಯ ಬಣ್ಣವೇ ಬದಲಾಯಿತು. ಪತ್ರವನ್ನು ಮೈಲಾರಿಯ ಕೈಗಿತ್ತ ಮೌನವಾಗಿ, ಅವನಿಗೆ ಅಪಮಾನಕ್ಕಿಂತ ಹೆಚ್ಚಾಗಿ ನೋವು ಹಿಂಡಿ ಹಿಪ್ಪೆ ಮಾಡಿತು. ಇವಳಾ ತಾನು ಮುದ್ದಾಗಿ ಸಾಕಿದ ಕೂಸು ಎಂದವಳತ್ತ ವಿಷಾದ ನೋಟ ಬೀರಿದ. ಮೈಲಾರಿ ಪತ್ರ ಓದುತ್ತಲೇ ಕುಗ್ಗಿಹೋದನಾದರೂ ದರ್ಪದಿಂದಲೇ ವರ್ತಿಸಿದ. ‘ಇವಳೊಂದು ಕೂಸು, ಅವಳಿಗೇನ್ ತಿಳಿದೇತ್ರಿ ಇನ್ಸ್‌ಪೆಟ್ರೆ. ಅವನಿಗೆ ಹೆದರ್‍ಕೊಂಡು ಏನೇನೋ ಬರ್‍ಕೊಟ್ಟು ಬಿಟ್ಟು, ನೀವ್ ನಂಬಿ ಬಿಟ್ರೆ ಹಿಂಗೇ ಆಗ್ತದಂತ ಗೊತ್ತಾಗೇ ನಾವ್ ಬಂದಿದ್ದು, ಮೊದ್ಲು ಅವನ್ನ ಒಳಾಗ್ ಹಾಕಿ, ಕೂಸಿನ ಮಾತಿಗೆಲ್ಲಾ ಕಾನೂನು ಬಲ್ಲೋರು ಬೆಲೆ ಕೊಡಬಾರದ್ರಿ’ ಮೈಲಾರಿ ಅಂದ.

‘ನಿಮ್ಮ ಮನೆಗೆ ಈ ಹುಡ್ಗಿ ಕೂಸೆ ಇರಬಹುದು. ಆದರೆ ವಿದ್ಯಾವಂತ ಹುಡುಗಿ, ಅಲ್ದೆ ಮೆಜಾರ್‍ಟಿಗೆ ಬಂದ ಹುಡುಗಿನೇ ಖುದ್ ಬಂದು ಹೇಳಿಕೆ ಕೊಟ್ಟಿದಾಳೆ. ರೈಟಿಂಗ್‌ನಲ್ಲಿ ಕೊಡಬೇಕಮ್ಮ ಅಂದೆ. ರೈಟಿಂಗ್‌ನಲ್ಲೂ ಕೊಟ್ಟಿದ್ದಾಳೆ. ನಾನ್ ಕೂಡ ಕಾನೂನು ಪ್ರಕಾರ ಕ್ರಮ ಕೈಗೊಂಡಿದೀನಿ ಸಾರ್’ ವಿನಯವಾಗಿ ವಿನಂತಿಸಿಕೊಂಡ.

‘ಏನೆಲೆ, ನೀನು ಇವನಿಗೆ ವಾಚ್‌ನ ಪ್ರೆಸೆಂಟ್ ಮಾಡಿದ್ದೀಯ? ನಾವು ಇದನ್ನು ನಂಬ ಬೇಕಾ?’ ಎಂದೂ ಒರಟಾಗಿ ಮಗಳ ಬಗ್ಗೆ ಉಸಿರೆತ್ತದ ಉಗ್ರಪ್ಪ ಅತ್ಯಂತ ಬಿರುಸಾಗಿ ಪ್ರಶ್ನಿಸಿ ಬೆದರಿಸಲು ನೋಡಿದ.

‘ನೀವು ನಂಬೋದಿಲ್ಲ ಅಂತ ನಂಗೊತ್ತು. ಇನ್ಸ್‌ಪೆಕ್ಟರ್‌ ನಂಬಿದರೆ ಸಾಕು’ ಚಿನ್ನು ಅಷ್ಟೇ ವ್ಯಂಗ್ಯ ಬೆರೆಸಿ ಉತ್ತರಿಸಿದಳು. ‘ಹಂಗೋ! ಯಾರು ಇವನು ನಿನ್ಗೆ ವಾಚ್ ಪ್ರೆಸೆಂಟ್ ಮಾಡೋಕೆ ಅಣ್ಣನಾ, ತಮ್ಮನಾ, ಮಾವನಾ, ಭಾವನಾ?’ ಉಗ್ರಪ್ಪ ಕಿಡಿಕಿಡಿಯಾದ. ‘ಅದಕ್ಕಿಂತ ಹೆಚ್ಚು’ ಚಿನ್ನು ತಟ್ಟನೆ ಅಂದಳು.

‘ಅಂದ್ರೆ?’ ಏದುಸಿರುಬಿಟ್ಟ ಉಗ್ರಪ್ಪ.

‘ನಾನು ರಂಗನ್ನ ಪ್ರೀತಿಸ್ತೀನಿ. ಇದು ನಾನು ಅವನಿಗೆ ನೀಡಿದ ಲವ್‌ಗಿಫ್ಟ್’ ಒಂದಿನಿತೂ ಬೆದರದೆ ಸರಾಗವಾಗಂದು ಮುಗುಳ್ನಕ್ಕಾಗ ಉಗ್ರಪ್ಪ ತಟ್ಟನೆ ಎದ್ದುನಿಂತ. ಅವಳ ಕೆನ್ನೆಗೆ ರಾಚಿದ. ರಾಚಿದ ಕೈ ಅವಳ ಕೆನ್ನೆಯನ್ನು ಸೋಕುವ ಮೊದಲೇ ಯಾರೋ ಗಟ್ಟಿಯಾಗಿ ಹಿಡಿದಂತಾಯಿತು. ರಂಗ ಉಗ್ರಪ್ಪನ ಕೈಯನ್ನು ಮಿಸುಕಾಡದಂತೆ ತನ್ನ ಮುಷ್ಟಿಯಲ್ಲಿ ಹಿಡಿದಿದ್ದಾನೆ!

‘ಏಯ್… ಬಿಡಲೆ ಕೈನಾ ಬೇವಾರ್‍ಸಿ ನನ್ಮಗ್ನೆ’ ಅರಿಚಿದ ಉಗ್ರಪ್ಪ.

‘ಅವಳ ಮೈಮೇಲೆ ಯಾರಾದ್ರೂ ಒಂದು ಏಟು ಹಾಕಿದರೂ ಅವರು ಯಾರೇ ಆಗಿರಲಿ ಅವರ ಕೈ ಕತ್ತರಿಸಿಬಿಡ್ತೀನಿ… ಹುಷಾರ್’ ಹೂಂಕರಿಸಿದ ರಂಗ ಉಗ್ರಪ್ಪನ ಕೈಯನ್ನು ತಿರಸ್ಕಾರವಾಗಿ ತಳ್ಳಿದ.

‘ಎಲಾ ನಾಯಿ… ನಾನು ಅವಳಪ್ಪ ಕಣೋ. ಅವಳ ಕಡಿದು ಕತ್ತರಿಸೋ ಅಧಿಕಾರ ನನಗೈತೆ. ನೀನ್ ಯಾವ ದೊಣ್ಣೆನಾಯಕನೋ ಅಡ್ಡ ಬರೋಕೆ?’

‘ಕಡಿದು ಕತ್ತರಿಸೋ ಅಧಿಕಾರ ಯಾರ್‍ಗೂ ಇಲ್ಲ. ಹಾಗೂ ಮುಂದುವರೆದ್ರೆ ಅವಳನ್ನ ಕಾಪಾಡೋ ಹಕ್ಕು ನನಗೂ ಇದೆ’.

‘ಯಾರಲೆ ಕುನ್ನಿ ನೀನು? ನಮಗೆ ಎದುರುತ್ತರ ಕೊಡ್ತೀಯೇನೋ ಪರದೇಶಿ’ ಮೈಲಾರಿ ರಂಗನ ಕಾಲರ್ ಹಿಡಿದು ಹೊಡೆಯಲನುವಾದ. ರಂಗನೂ ತನ್ನ ಬಲ ತೋರಿ ಬಿಡಿಸಿಕೊಂಡು ಕಾಲರ್ ಸರಿಪಡಿಸಿಕೊಂಡು ನಕ್ಕ.

‘ಹೀಗೆಲ್ಲಾ ಠಾಣೆಯಲ್ಲಿ ಗಲಾಟೆ ಮಾಡಬಾರು ಪ್ಲೀಸ್’ ಇನ್ಸ್‌ಪೆಕ್ಟರ್ ಪಾಳೇಗಾರರನ್ನು ಬೇಡಿದ.

‘ಗಲಾಟೆ ಮಾಡ್ತಿರೋನು ರಂಗ ಕಣ್ರಿ… ಅವನ್ನ ಒಳಾಗ್ ಹಾಕಿ ಕೇಸ್ಬುಕ್ ಮಾಡಿ’ ಮೈಲಾರಿ ತಹತಹಿಸಿದ.

‘ನೀವು ಕೇಸ್‌ಬುಕ್ ಮಾಡಿ ಅಂತಿರಾ. ನಿಮ್ಮ ಹುಡ್ಗಿ ನಾನು ರಂಗನ್ನ ಲವ್ ಮಾಡ್ತಾ ಇದೀನಿ ಅನ್ನುತ್ತೆ… ನಾನೇನ್ ಕ್ರಮ ತಗೊಳ್ಳಿ ಹೇಳಿ?’ ಎಸ್.ಐ. ತನ್ನ ಅಸಹಾಯಕತೆ ತೋರಿದ. ‘ಅವಳು ಹೇಳ್ತಾಳೆ ಅರೀದ ಹುಡ್ಗಿ, ಅಲ್ಲಿ ನಿಂತಿದ್ದಾನಲ್ಲ ಆ ರಂಗ ಅವನು ಹೇಳ್ಳಿ ದಮ್ಮಿದ್ದರೆ’ ಉಗ್ರಪ್ಪನಿಗೆ ಹಿಂದೆ ತನ್ನ ಮಗಳನ್ನು ವಾಪಾಸ್ ಕರೆತಂದು ಬಿಟ್ಟಿದ್ದು ನೆನಪಾಗಿ ಬೀಗುತ್ತಾ ಅಂದ. ಚಿನ್ನುಗೀಗ ಸಂದಿಗ್ಧ. ರಂಗನನ್ನೇ ದೇವರನ್ನು ನೋಡುವ ಭಕ್ತನ ಪರಿ ನೋಡಿದಳು.

‘ಹುಡುಗಿನೇ ಅಷ್ಟು ಧೈರ್ಯವಾಗಿ ಹೇಳಿರುವಾಗ ನನಗೇನ್ರಿ ಹೆದರಿಕೆ. ನಾನೂ ಅವಳನ್ನು ಮನಸಾರೆ ಪ್ರೀತಿಸ್ತಾ ಇದೀನಿ. ನಮ್ಮ ತಾಯಾಣೆ’ ಎಂದ ರಂಗ ತಾಯಿಯತ್ತ ನೋಡಿ ನಕ್ಕ. ಆಕೆಯೂ ಹಿಗ್ಗಿನ ನಗೆ ಬೀರಿದಾಗ ಅವನಿಗೆ ನೂರಾನೆ ಬಲ ಬಂದಂತಾಯಿತು. ಅದಕ್ಕೆ ಹೇಳಿದ್ದು ಅವಳ ಮೈನ ಅವರಪ್ಪನೇ ಅಲ್ಲ ಆ ದೇವರೇ ಮುಟ್ಟಿದರೂ ಅವನ ಕೈಯೂ ಕಟ್ ಆಫ್’ ನಕ್ಕ ರಂಗ. ಮೈಲಾರಿ ಉಗ್ರಪ್ಪನವರಲ್ಲೀಗ ಅನಾಥಪ್ರಜ್ಞೆ ಆದರೂ ಸಾವರಿಸಿಕೊಂಡ ಮೈಲಾರಿ ಗುಡುಗಿದ, ‘ಕೇಳಿದಿರೇನ್ರಿ ಇನ್ಸ್‍ಪೆಟ್ರೆ, ಬಡಿದು ಸೆಲ್‌ಗೆ ದೂಡ್ರಿ ಆ ಭಿಕಾರಿ ನನ್ನ ಮಗನ್ನ, ಇವನು ಯಾವುದರಲ್ಲಿ ನಮಗೆ ಸರಿಸಮ ಅದಾನ್ರಿ?’

‘ಸಾರಿ ಮೈಲಾರಪ್ಪನೋರೆ ಪ್ರೀತಿಯ ವಿಷಯದಲ್ಲಿ ಎಲ್ಲಾನೂ ಸರಿ, ಎಲ್ಲರೂ ಸಮ. ಕಾನೂನು ಪ್ರೇಮಿಗಳ ಪರವಾಗೇ ಇದೆ. ಐ ಕಾಂಟ್ ಹೆಲ್ಪ್’ ಎಸ್‌ಐ ನಿರ್ಭಾವುಕನಾಗಂದ. ಸಾವಿರ ಕ್ಯಾಂಡಲ್ ಬಲ್ಬ್‍ನಂತಾಗಿತ್ತು ಚಿನ್ನು ಮುಖ. ಹೆಮ್ಮೆಯಿಂದ ರಂಗನತ್ತ ನೋಟವನ್ನು ನೆಟ್ಟಳು. ಅವನದೂ ಅದೇ ಸ್ಥಿತಿ. ಇನ್ನು ಅಲ್ಲೇ ಇದ್ದರೆ ತಮ್ಮ ಮರ್ಯಾದೆಗೆ, ದೌಲತ್ತಿಗೆ ಕವಡೆ ಕಾಸಿನ ಕಿಮ್ಮತ್ತೂ ಇರದೆಂದು ಆಲೋಚಿಸಿದ ಉಗ್ರಪ್ಪ ಮಾತು ಬೆಳೆಸಲಿಲ್ಲ.

‘ಯೋಯ್ ಮೈಲಾರಿ, ಇವಳನ್ನ ಕಾರಾಗೆ ಎತ್ತಿ ಹಾಕ್ಕೊಳೋ, ಯಾವನೇನ್ ಮಾಡ್ತಾನೋ ನೋಡೋಣ’ ಎಂದು ಮೀಸೆ ತೀಡಿ ಅಬ್ಬರ ಮಾಡಿದ ಉಗ್ರಪ್ಪ.

‘ರಂಗಾ’ ಕಾಪಾಡು ಎನ್ನುವಂತೆ ಆರ್ತನಾದ ಮಾಡಿದಳು ಚಿನ್ನು. ಅವಳನ್ನು ಎತ್ತಿ ಹೆಗಲ ಮೇಲೆ ಹಾಕಿಕೊಳ್ಳಲು ನುಗ್ಗಿ ಬಂದ ಮೈಲಾರಿಗೆ ಅಡ್ಡ ಬಂದ ರಂಗ,

‘ತಡಿಯೊ ಧಡಿಯ…’ ಎಂದವನನ್ನು ತಡೆದ. ಚಿನ್ನುವನ್ನೊಮ್ಮೆ ಪ್ರೇಮದಿಂದ ನೋಡಿದ. ‘ಈಗ ಧೈರ್ಯವಾಗಿ ಹೋಗಿ ಬಾ… ನಿನ್ನ ಹುಟ್ಟಿದ ಮನೆಗೆ ಹೋಗೋಕೆ ಯಾಕೆ ಭಯ ಪಡ್ತಿಯಾ? ಆದರೆ ಹುಟ್ಟಿದ ಮನೆ ಶಾಶ್ವತವಲ್ಲ. ಗಂಡನ ಮನೆನೇ ಹೆಣ್ಣಿಗೆ ಶಾಶ್ವತ ಚಿನ್ನು, ಯಾವತ್ತಿದ್ದರೂ ನೀನು ನನ್ನವಳೆ’ ಗಂಭೀರ ದೃಢಧ್ವನಿ ಅವನದು.

‘ಹಲ್ಕಾ ಲೋಫರ್… ಅದು ಈ ಜನ್ಮದಲ್ಲಿ ಸಾಧ್ಯವಿಲ್ಲವಲೆ’ ಉಗ್ರಪ್ಪ ಕೋಪತಾಳದೆ ನಡುಗಹತ್ತಿದ.

‘ಅಸಾಧ್ಯವನ್ನು ಸಾಧಿಸೋನೇ ನಿಜವಾದ ಗಂಡು. ನೀವೇ ಒಪ್ಪಿ ನಿಮ್ಮ ಮಗಳನ್ನು ನನಗೆ ಧಾರೆ ಎರೆಯೋ ಹಾಗೆ ಮಾಡಲಿಲ್ಲ. ನಾನ್ ರಂಗನೇ ಅಲ್ಲ’ ಸವಾಲ್ ಹಾಕಿ ತೊಡೆತಟ್ಟಿದ ರಂಗ, ತಾನೇ ಚಿನ್ನುವನ್ನು ಕರೆದೊಯ್ದು ಕಾರು ಹತ್ತಿಸಿದ. ‘ಜೋಪಾನವಾಗಿ ಕರ್‍ಕೊಂಡು ಹೋಗಿ, ಈಗ ಇವಳು ನನ್ನ ಸೊತ್ತು… ಅವಳಿಗೇನಾದ್ರೂ ಹೊಡೆದು ಬಡಿದು ಮಾಡಿದವನು ಯಾರೇ ಆಗಿರಲಿ ಜೈಲಿಗೋದ್ರೂ ಸರಿ ಅವನ್ನ ಬಲಿ ತಗೊಳ್ದೆ ಬಿಡೋಲ್ಲ. ನಿಮ್ಮ ಮನೇಲೇ ನನಗೆ ಬೇಕಾದವರಿದ್ದಾರೆ. ಚಿನ್ನುಗೆ ಏನಾದ್ರೂ ನನಗೆ ತಕ್ಷಣ ತಿಳಿಯುತ್ತೆ… ಬಿ ಕೇರ್ ಫುಲ್’ ಬೆದರಿಸಿದ ರಂಗ. ಜನ ಸೇರುತ್ತಿರುವುದನ್ನು ಗಮನಿಸಿದ ಉಗ್ರಪ್ಪ, ಮಾನ ಬೀದಿಪಾಲಾಗುವ ಮುನ್ನ ಮನೆ ಸೇರಿಕೊಳ್ಳುವುದೇ ಕ್ಷೇಮವೆಂದರಿತ. ನಿಧಾನ ಮಾಡದೆ ‘ಮೈಲಾರಿ ಗಾಡಿ ಓಡ್ಸು’ ಎಂದು ಸನ್ನೆ ಮಾಡಿದ. ಮರೆಯಾಗುವವರೆಗೂ ಚಿನ್ನು ಕೈ ಆಡಿಸುತ್ತಲೇ ಇದ್ದಳು. ಯಾರೂ ಅವಳನ್ನು ತಡೆಯುವ ಸಾಹಸ ಮಾಡಲಿಲ್ಲ. ನಮ್ಮ ಮನೆಯಲ್ಲಿ ಏನೇ ನಡೆದರೂ ಇವನಿಗೆ ತಿಳಿಸೋರು ಯಾರಿದ್ದಾರೆ? ಉಗ್ರಪ್ಪ ಮತ್ತು ಮೈಲಾರಿ ತಲೆಯಲ್ಲಿ ರಂಗ ಬಿಟ್ಟ ಹುಳುವಾಗಲೆ ಇಂಚು‌ಇಂಚಾಗಿ ಬೆಳೆಯಲಾರಂಭಿಸಿತ್ತು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕನಸು
Next post ಜಾತ್ರೆಯಲ್ಲಿ ಶಿವ

ಸಣ್ಣ ಕತೆ

  • ಗೃಹವ್ಯವಸ್ಥೆ

    ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…

  • ಮುದುಕನ ಮದುವೆ

    ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…

  • ಕೆಂಪು ಲುಂಗಿ

    ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…

  • ಮೌನರಾಗ

    ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…

  • ಪ್ರೇಮನಗರಿಯಲ್ಲಿ ಮದುವೆ

    ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. "ಹಾಯ್,… Read more…