ಪುಂಸ್ತ್ರೀ – ೧೭

ಪುಂಸ್ತ್ರೀ – ೧೭

ಅಗ್ನಿಗಾಹುತಿಯಾಯ್ತು ಸಕಲವು

ಅಂಬೆ

ಬ್ರಾಹ್ಮೀ ಮುಹೂರ್‍ತದಲ್ಲಿ ಮಧುಭಾಷಿಣಿ ‘ಅಂಬೆ, ಅಂಬೆ’ ಎಂದು ನನ್ನ ಮೈ ಕುಲುಕಿಸಿದಾಗ ನನಗೆ ಎಚ್ಚರವಾಯಿತು. ನಾನು ಎಲ್ಲಿದ್ದೇನೆಂದು ತಿಳಿಯಲು ಸ್ವಲ್ಪ ಹೊತ್ತು ಬೇಕಾಯಿತು. ಇಂದು ನನ್ನ ಜೀವನದ ಅತ್ಯಂತ ನಿರ್ಣಾಯಕ ದಿನವೆಂದುಕೊಂಡು ಎದ್ದೆ. ನಿತ್ಯಾಹ್ನಿಕಗಳನ್ನು ಮುಗಿಸಿ, ತಣ್ಣನೆಯ ನೀರಿನಲ್ಲಿ ಮಜ್ಜನ ಮಾಡಿ, ಮಧುಭಾಷಿಣಿ ಇತ್ತ ಫಲಾಹಾರ ಮುಗಿಸಿ ನಾನು ಪರಶುರಾಮರ ರಥವೇರಿದೆ. ನೀಹಾರಿಕೆ ಗಾಢ ನಿದ್ದೆಯಲ್ಲಿದ್ದುದರಿಂದ ಎಬ್ಬಿಸಲು ಮನಸ್ಸಾಗಲಿಲ್ಲ. ಅಪ್ಪನ ರಥವನ್ನು ಬಿಟ್ಟರೆ ನಾನೇರಿದ ಎರಡನೇ ರಥವಿದು. ಭೀಷ್ಮನ ರಥವನ್ನೇರಿದ ತಪ್ಪು ಪರಶುರಾಮರ ರಥವೇರಿದುದರಿಂದ ಸರಿಯಾದೀತೆ? ಅಥವಾ ಹೊಸ ಸಮಸ್ಯೆಗಳೇನಾದರೂ ಕಾಣಿಸಿಕೊಳ್ಳಬಹುದೆ?

ಪರಶುರಾಮರು ಅದಾಗಲೇ ರಥದಲ್ಲಿ ಧ್ಯಾನಭಂಗಿಯಲ್ಲಿ ಕೂತಿದ್ದರು. ಏನನ್ನು ಯೋಚಿಸುತ್ತಿದ್ದರೊ? ಅವರ ಶಿಷ್ಯನೊಬ್ಬ ರಥ ಓಡಿಸಲು ಸಿದ್ಧನಾಗಿದ್ದ. ಅವನನ್ನು ನೋಡಿ ನಾನೆಂದೆ: “ಗುರುವರ್‍ಯಾ, ನಾನು ಚೆನ್ನಾಗಿ ರಥ ಓಡಿಸಬಲ್ಲೆ. ಹಸ್ತಿನಾವತಿಗೆ ನಾವಿಬ್ಬರೇ ಹೋದರೆ ಚೆನ್ನಾಗಿರುತ್ತದೆ. ನಿಮ್ಮ ಶಿಷ್ಯನ ಅಗತ್ಯವಿಲ್ಲ”.

ಪರಶುರಾಮರು ಕಣ್ಣು ತೆರೆದು ನನ್ನನ್ನು ನೋಡಿದರು. ಬಳಿಕ ಶಾಂತವಾದ ಸ್ವರದಲ್ಲಿ ಹೇಳಿದರು: “ನಾವೀಗ ಪಯಣಿಸಲಿರುವುದು ಕಾಶಿಯ ರಾಜ ಬೀದಿಗಳಲ್ಲಲ್ಲ. ಕಲ್ಲು ಮಣ್ಣಿನ ಕಾಡ ಹಾದಿಯಲ್ಲಿ. ನಿನಗೆ ಪರಿಚಯವಿಲ್ಲದ ಹಾದಿಯಿದು. ಇವನು ಅನುಭವಸ್ಥ. ನೀನ್ಯಾಕೆ ಸುಮ್ಮನೆ ತೊಂದರೆ ತೆಗೆದುಕೊಳ್ಳಬೇಕು?”

ನಾನೆಂದೆ: “ಇಲ್ಲ ಗುರುವರ್‍ಯಾ, ನಾವಿಬ್ಬರೇ ಸಾಕು. ಕಾಶಿಯ ಕಾಡು ಮೇಡುಗಳಲ್ಲಿ ಕುದುರೆ ಸವಾರಿ ಮಾಡಿದವಳು ನಾನು. ನನ್ನ ಸಾರಥ್ಯದ ಬಗ್ಗೆ ನೀವು ಯೋಚಿಸಬೇಕಾಗಿಲ್ಲ. ಪಥ ದಿಗ್ದರ್ಶಕರಾಗಿ ಸಾಕ್ಷಾತ್‌ ಗುರುಗಳೇ ಇರುವಾಗ ನಾನು ದಾರಿ ತಪ್ಪುವ ಸಂಭವವೇ ಇಲ್ಲ”.

ಪರಶುರಾಮರ ಮುಖದಲ್ಲಿ ಮುಗುಳ್ನಗು ಮೂಡಿತು. ಆಗಲಿ ಎಂದು ತಲೆಯಾಡಿಸಿದರು. ಅವರ ಶಿಷ್ಯ ರಥದಿಂದ ಕೆಳಗಿಳಿದ. ಅವನ ಸ್ಥಾನವನ್ನು ನಾನು ಆಕ್ರಮಿಸಿಕೊಂಡೆ. ರಥ ಮುಂದಕ್ಕೆ ಸಾಗಿತು. ಹಾದಿ ಸಾಗುವಾಗ ದೂರದಲ್ಲಿ ಗಿರಿನಗರಿಯ ಸರೋವರ ಕಾಣಿಸಿತು. ಅಲ್ಲಿ ಕಳೆದ ನೆಮ್ಮದಿಯ ಕ್ಷಣಗಳು ನೆನಪಾದವು. ಸೋರುವ ಮೂಗಿನ ಮಕ್ಕಳು, ನಿಷ್ಕಪಟಿ ಚೆಲುವೆ ಸೇವಂತಿ, ತನಗೆ ಗೊತ್ತಿರುವುದನ್ನು ತನ್ನವರಿಗೆ ಹೇಳಿಕೊಡಲಾಗದ ಗಿರಿನಾಯಕ, ನನ್ನನ್ನು ಮಗಳಂತೆ ನೋಡಿಕೊಂಡ ಅವನ ಅಮ್ಮ‌ಅಪ್ಪ. ಗಿರಿನಾಯಕನಿಗೆ ಹಸ್ತಿನಾವತಿಯಿಂದ ಸ್ವತಂತ್ರವಾಗಿರುವುದಕ್ಕೆ ಸಾಧ್ಯವಿರುತ್ತಿದ್ದರೆ ನಾನು ಗಿರಿನಗರಿಯಲ್ಲೇ ನಿಲ್ಲಬಹುದಿತ್ತು. ಕಾಡಜನರನ್ನು ವಿದ್ಯಾವಂತರನ್ನಾಗಿ ಮಾಡಬಹುದಿತ್ತು. ಆಗ ನನ್ನ ಜೀವನಕ್ಕೊಂದು ಅರ್ಥ ಬರುತ್ತಿತ್ತು. ಪರಶುರಾಮರ ನಿರ್ದೇಶನದಲ್ಲಿ ನನ್ನ ಜೀವನ ಯಾವ ತಿರುವನ್ನು ಕಂಡುಕೊಳ್ಳುತ್ತದೊ?

ಪ್ರಕೃತಿಯ ನಡುವೆ ಪಯಣಿಸುವುದು ಅತ್ಯಂತ ಆಹ್ಲಾದಕರ ಅನುಭವ. ಈಗ ರಥ ಪೂರ್ವದತ್ತ ಚಲಿಸುತ್ತಿದೆ. ಪಶ್ಚಿಮಕ್ಕೆ ಈ ದಾರಿ ನನ್ನನ್ನು ಸಾಲ್ವಭೂಪತಿಯಲ್ಲಿ ಒಯ್ದಿತ್ತು. ಪೂರ್ವಕ್ಕೆ ಭೀಷ್ಮನಲ್ಲಿಗೆ ಒಯ್ಯುತ್ತಿದೆ. ಬಲಕ್ಕೆ ಕವಲೊಡೆದರೆ ಗಿರಿನಾಯಕನಲ್ಲಿಗೆ! ಭೀಷ್ಮ ನನ್ನ ಜೀವನವನ್ನು ಬಿರುಗಾಳಿಗೆ ಸಿಕ್ಕ ನೌಕೆಯಂತೆ ಮಾಡಿಬಿಟ್ಟ. ಸಾಲ್ವಭೂಪತಿ ಭಾವನೆಗಳಿಗೆ ಪ್ರತಿಷ್ಟೆಯ ಸೋಗಿನಲ್ಲಿ ಕಿಚ್ಚಿಟ್ಟುಬಿಟ್ಟ. ಗಿರಿನಾಯಕ ಕೆಲವು ಆಹ್ಲಾದಕರ ಕ್ಷಣಗಳನ್ನು ಅನುಭವಿಸಲು ಅವಕಾಶ ಮಾಡಿಕೊಟ್ಟ. ಅವನು ಆತುರಬಿದ್ದು ಹಸ್ತಿನಾವತಿಗೆ ಹೋಗಿ ನನ್ನ ಪೆಟ್ಟಿಗೆಯನ್ನು ತಾರದಿರುತ್ತಿದ್ದರೆ ನಾನು ಗಿರಿನಗರಿಯಲ್ಲಿ ಇನ್ನಷ್ಟು ದಿನ ಉಳಿಯಬಹುದಿತ್ತು. ಬಹುಶಃ ಅಲ್ಲೇ ಉಳಿದು ಬಿಡುತ್ತಿದ್ದೆನೋ ಏನೊ? ಈಗ ಪರಶುರಾಮರ ಇಚ್ಛೆಯಂತೆ ಹಸ್ತಿನಾವತಿಗೆ ಹೋಗುತ್ತಿದ್ದೇನೆ. ಭೀಷ್ಮನಿಗೊಂದು ಪಾಠ ಕಲಿಸಲು!

ಪರಶುರಾಮರ ಆಜ್ಞೆಯಂತೆ ಹಸ್ತಿನಾವತಿಯ ಮಹಾದ್ವಾರದ ಮುಂದಿನ ಅಂಗಣದಲ್ಲಿ ರಥವನ್ನು ನಿಲ್ಲಿಸಿದೆ. ಕಾವಲು ಭಟರಿಗೆ ದೂರದಿಂದಲೇ ರಥದ ಗುರುತು ಸಿಕ್ಕಿ ಓಡೋಡಿ ಬಂದರು. ಪರಶುರಾಮರ ಪಾದಸ್ಪರ್ಶ ಮಾಡಿದರು. ನಾನೀಗ ಪುರ ಪ್ರವೇಶ ಮಾಡುವುದಿಲ್ಲ. ಗಹನವಾದ ವಿಷಯವೊಂದನ್ನು ಭೀಷ್ಮನಲ್ಲಿ ಚರ್ಚಿಸಲಿಕ್ಕಿದೆ. ತಕ್ಷಣ ಅವನನ್ನು ಬರಹೇಳಿ. ಯುದ್ಧ ಸನ್ನದ್ಧನಾಗಿ ಬರುವಂತೆ ಗುರುಗಳ ಅಪ್ಪಣೆಯಾಗಿದೆಯೆಂದು ತಿಳಿಸಿ”.

ಭೀಷ್ಮ ಗಡಬಡಿಸಿ ಧಾವಿಸಿ ಬಂದ. ಸಾರಥಿ ಸ್ಥಾನದಲ್ಲಿ ನನ್ನನ್ನು ಕಂಡಾಗ ಅವನ ಮುಖದ ಬಣ್ಣ ಬದಲಾಯಿತು. ಭೀಷ್ಮ ರಥದಿಂದಿಳಿದ. ಪರಶುರಾಮರೂ ಇಳಿದರು. ಶಿಷ್ಯ ಗುರುಗಳ ಪಾದ ಮುಟ್ಟಿ ನಮಸ್ಕರಿಸಿದ. ವಿನಯದಿಂದ ಕೈ ಜೋಡಿಸಿ ಕೇಳಿದ: ಗುರುವರ್‍ಯಾ, ಈ ಶಿಷ್ಯನನ್ನು ಕಾಣಲು ಅಷ್ಟು ದೂರದಿಂದ ನೀವೇ ಬರಬೇಕಿತ್ತೆ? ಒಂದು ಮಾತು ಹೇಳಿ ಕಳುಹಿಸುತ್ತಿದ್ದರೆ ಆಶ್ರಮಕ್ಕೆ ನಾನೇ ಬಂದು ಬಿಡುತ್ತಿದ್ದೆ. ಹೇಳಿ ಗುರುವರ್‍ಯಾ, ಈ ಶಿಷ್ಯನಿಂದ ಏನಾಗಬೇಕು?”

ಗುರುಗಳು ಶಿಷ್ಯನನ್ನು ಆಪಾದಮಸ್ತಕ ವೀಕ್ಷಿಸಿದರು. ಬಳಿಕ ಗಂಭೀರತೆಯಿಂದ ಕೇಳಿದರು: “ಹೇಳಿದರೆ ಈಡೇರಿಸುತ್ತೇನೆಂದು ಮಾತು ಕೊಡುತ್ತೀಯಾ?”

ಭೀಷ್ಮ ನತಮಸ್ತಕನಾದ. ತಗ್ಗಿದ ಸ್ವರದಲ್ಲಿ ಅವನೆಂದ: “ಗುರುವರ್ಯಾ, ನಿಮ್ಮ ಶಿಷ್ಯನ ಪ್ರತಿಜ್ಞೆ ಭಂಗವಾಗುವ ಬೇಡಿಕೆ ನಿಮ್ಮದಿರಲಾರದೆಂದು ಭಾವಿಸುತ್ತೇನೆ. ವಿವಾಹದ ಸುದ್ದಿ ಯೊಂದನ್ನು ಬಿಟ್ಟು ನೀವು ಬೇರೇನನ್ನೂ ಹೇಳಿದರೂ ಶಿರಸಾವಹಿಸಿ ನೆರವೇರಿಸಿಕೊಡುತ್ತೇನೆ”.

ಪರಶುರಾಮರ ಕಣ್ಣುಗಳು ಕೆಂಡದುಂಡೆಗಳಾದವು. ಗಟ್ಟಿಯಾದ ಸ್ವರದಲ್ಲಿ ಅವರೆಂದರು: “ನೀಚ ಕ್ಷತ್ರಿಯನಂತೆ ಮಾತಾಡಬೇಡ. ಹೆಣ್ಣಿನ ಬದುಕಿನಲ್ಲಿ ಆಟವಾಡಿ ದಕ್ಕಿಸಿಕೊಳ್ಳಬಹುದೆಂದು ಭಾವಿಸಿದ್ದೀಯಾ? ನನ್ನ ಶಿಷ್ಯನಾಗಿ ನೀನು ಇಂಥ ಮಾತುಗಳನ್ನಾಡುವುದೆ? ತಪ್ಪು ಮಾಡಿದವ ನೀನು. ಸರಿಪಡಿಸಬೇಕಾದವನೂ ನೀನೇ. ಕಾಶೀರಾಜನ ಪಣದ ಪ್ರಕಾರ ಇವಳನ್ನು ನೀನೇ ವಿವಾಹವಾಗಬೇಕು. ಆಹ್ವಾನವಿಲ್ಲದಿದ್ದರೂ ಬುದ್ಧಿಗೇಡಿಯಾಗಿ ಕಾಶಿಗೆ ಹೋಗಿ, ಸಾಲ್ವಭೂಪತಿಯ ಮಡದಿಯಾಗಬೇಕಿದ್ದ ಇವಳನ್ನು ಬಲಾತ್ಕಾರವಾಗಿ ಹಸ್ತಿನಾವತಿಗೆ ಕರೆತಂದ ಪಾಪಿ ನೀನು. ನಿನ್ನ ಗುರುವಾಗಿ, ಕುರು ಸಾಮ್ರಾಜ್ಯದ ಒಳಿತಿಗಾಗಿ ಹೇಳುತ್ತಿದ್ದೇನೆ. ಇವಳನ್ನು ಮದುವೆಯಾಗಿ ನಿನ್ನ ಪಾಪ ಪರಿಮಾರ್ಜನೆ ಮಾಡಿಕೋ”.

ಭೀಷ್ಮ ಒಂದಿನಿತೂ ವಿಚಲಿತನಾಗದೆ ನುಡಿದ: “ಗುರುವರ್ಯಾ, ನಿಮ್ಮ ಶಿಷ್ಯನ ವಚನ ನಿಷ್ಠೆಗೆ ಭಂಗ ತರುವ ಮಾತುಗಳು ನಿಮ್ಮಿಂದ ಬರಬಾರದು. ಹಸ್ತಿನಾವತಿಯ ಸಿಂಹಾಸನದ ರಕ್ಷಕನಾಗಿ ರಾಜಮಾತೆಯ ಆದೇಶದಂತೆ ಇವಳನ್ನು ವಿಚಿತ್ರವೀರ್ಯನಿಗಾಗಿ ಕರೆತಂದೆ. ಇವಳ ತಂಗಿಯಂದಿರಿಗೆ ಮೆಚ್ಚುಗೆಯಾದ ವಿಚಿತ್ರವೀರ್ಯ ಇವಳಿಗಿಷ್ಟವಾಗಲಿಲ್ಲ. ನಾನು ಬಲಾತ್ಕಾರ ದಿಂದ ಇವಳ ವಿವಾಹವನ್ನು ವಿಚಿತ್ರ ವೀರ್ಯನೊಡನೆ ನೆರವೇರಿಸಬಹುದಿತ್ತು. ಆದರೆ ನಾನು ಹಾಗೆ ಮಾಡಲಿಲ್ಲ. ಇವಳ ಭಾವನೆಗಳನ್ನು ಗೌರವಿಸಿದೆ. ಇವಳ ಬಯಕೆಯಂತೆ ಇವಳಿಗಿಷ್ಟವಿರುವ ಸಾಲ್ವಭೂಪತಿಯಲ್ಲಿಗೆ ಗೌರವಪೂರ್ವಕವಾಗಿ ಘನ ವಿದ್ವಾಂಸನೊಬ್ಬನ ಜತೆಯಲ್ಲಿ ಕಳುಹಿಸಿ ಕೊಟ್ಟೆ. ಅವನಿಂದ ತಿರಸ್ಕೃತಳಾದ ಮೇಲೆ ನಿಮ್ಮಲ್ಲಿಗೇ ದೂರು ತಂದಿದ್ದಾಳೆ. ನನ್ನನ್ನೇ ವಿವಾಹವಾಗ ಬೇಕೆಂದು ಇವಳು ಬಯಸಿದ್ದರೆ ಸಾಲ್ವಭೂಪತಿಯಲ್ಲಿಗೆ ಹೋಗುವ ಬದಲು ನೇರವಾಗಿ ನಿಮ್ಮಲ್ಲಿಗೇ ಬರಬಹುದಿತ್ತು. ಆಗ ಶಿಷ್ಯನ ವಿಚಾರಣೆ ನಡೆಸುವುದಕ್ಕೆ ಗುರುಗಳಿಗೊಂದು ನೈತಿಕ ನೆಲೆಗಟ್ಟಾದರೂ ದೊರೆಯುತ್ತಿತ್ತು. ಗುರುವರ್‍ಯಾ, ನೀವು ಇವಳ ಚಿತ್ತಚಾಂಚಲ್ಯವನ್ನು ಅರ್ಥ ಮಾಡಿಕೊಳ್ಳಲಾರದೆ ಹೋದಿರಿ. ಸ್ವಯಂವರ ಮಂಟಪದಲ್ಲಿ ನಾನು ಏರಿರಿ ಎನ್ನಯ ರಥವ ಎಂದಾಗ ಇವಳು ಸಾಲ್ವ ಪ್ರೇಮವನ್ನು ಪ್ರಕಟಿಸಲಿಲ್ಲ. ನನ್ನ ಬ್ರಹ್ಮಚರ್ಯ ವ್ರತದ ವಿಷಯ ಗೊತ್ತಾದ ಬಳಿಕ ಸಾಲ್ವನನ್ನು ನೆನಪು ಮಾಡಿಕೊಂಡಳು. ಅವನು ನಿರಾಕರಿಸಿದ ಮೇಲೆ ನಿಮ್ಮಲ್ಲಿಗೆ ಬಂದು ನನ್ನ ಮೇಲೆ ದೂರು ಸಲ್ಲಿಸಿದ್ದಾಳೆ. ಅಸ್ಥಿರ ಬುದ್ಧಿಯ ಇವಳು ಹತಾಶಳಾಗಿ ಆಡಿದ ಮಾತುಗಳನ್ನು ಇದಮಿತ್ಥಂ ಎಂದು ಸ್ವೀಕರಿಸಿ ನೀವು ನನ್ನನ್ನು ವಿಚಾರಿಸಲು ಬಂದಿದ್ದೀರಿ. ಮಾಡಿದ ಪ್ರತಿಜ್ಞೆಯನ್ನು ಉಲ್ಲಂಘಿಸುವವ ನೆಂದಾದರೆ ನಿಮ್ಮ ಶಿಷ್ಯ ಇಲ್ಲಿಯವರೆಗೆ ಕಾಯಬೇಕಿದ್ದ ಅಗತ್ಯವೇನಿತ್ತು?”

ಪರಶುರಾಮರು ಯೋಚಿಸತೊಡಗಿದರು. ಅವರ ಸ್ವರ ಇನ್ನಷ್ಟು ತಗ್ಗಿತು: “ಭೀಷ್ಮಾ, ನಿನ್ನ ಪ್ರತಿಜ್ಞೆಯನ್ನು ಬದಿಗಿರಿಸಿ ಒಟ್ಟು ಘಟನೆಯನ್ನು ವಸ್ತುನಿಷ್ಠವಾಗಿ ನೋಡು. ರಾಜಮಾತೆಯ ಆದೇಶದಂತೆ ಸಿಂಹಾಸನದ ರಕ್ಷಕನಾಗಿ ಕಾಶಿಗೆ ಹೋದೆ ಎನ್ನುತ್ತೀ. ಅದೇ ರಾಜಮಾತೆ ಸಿಂಹಾಸನದ ರಕ್ಷಣೆಗಾಗಿ ಅಂಬೆಯನ್ನು ವಿವಾಹವಾಗು ಎಂದು ಆದೇಶಿಸಿದರೆ ಇವಳ ಕೈ ಹಿಡಿಯುತ್ತೀಯಾ? ನಿನ್ನ ತಪ್ಪನ್ನು ಅನ್ಯರ ಮೇಲೆ ಹೊರಿಸಬೇಡ. ಕಾಶೀರಾಜನಿಗೆ ತನ್ನ ಮಕ್ಕಳನ್ನು ಹಸ್ತಿನಾವತಿಯ ಸೊಸೆಯರನ್ನಾಗಿ ಮಾಡಲು ಇಷ್ಟವಿಲ್ಲದ ಕಾರಣ ಅವನು ನಿನಗೆ ಆಮಂತ್ರಣ ಕಳುಹಿಸಲಿಲ್ಲ. ಅಲ್ಲಿಗೆ ನಿನ್ನದು ಧರ್ಮೋಲ್ಲಂಘನೆಯಾಯಿತು. ಅಲ್ಲಿ ನೀನು ಪಣವನ್ನು ಗೆದ್ದುದರಿಂದ ಧರ್ಮ ಪ್ರಕಾರ ಮೂವರು ರಾಜಕುಮಾರಿಯರಿಗೂ ನೀನೇ ಗಂಡನಾದಂತಾಯಿತು. ಉಳಿದಿಬ್ಬರ ವಿಷಯ ಬಿಟ್ಟು ಬಿಡೋಣ. ಪಣದ ಪ್ರಕಾರ ಈಗಲೂ ನೀನು ಇವಳ ಪತಿಯಾಗಿದ್ದಿ. ಇವಳ ಹರೆಯಕ್ಕೆ ದೃಢ ನಿರ್ಧಾರ ತೆಗೆದುಕೊಳ್ಳುವ ಗುಣ ಹೇಗೆ ಬಂದೀತು ಹೇಳು? ನಿನ್ನ ಪ್ರತಿಜ್ಞೆಯನ್ನು ಗೌರವಿಸಿ ಇವಳು ಸಾಲ್ವನಲ್ಲಿಗೆ ಹೋದಳು. ಅವನಿಗೆ ಬುದ್ಧಿ ಇಲ್ಲ. ಇರುತ್ತಿದ್ದರೆ ಇವಳನ್ನು ತಿರಸ್ಕರಿಸುತ್ತಿರಲಿಲ್ಲ. ಅಥವಾ ಪಣದ ಪ್ರಕಾರ ಈಗಾಗಲೇ ಭೀಷ್ಮನ ಮಡದಿಯಾಗಿರುವ ಅಂಬೆಯನ್ನು ಹೇಗೆ ಸ್ವೀಕರಿಸುವುದು ಎಂಬ ಧರ್ಮಸಂಕಟ ಅವನನ್ನು ಕಾಡಿರಬೇಕು. ನಿನ್ನ ವಿಜಯದ ಫಲವನ್ನು ನೀನೇ ಅನುಭವಿಸಬೇಕು. ವಿಚಿತ್ರವೀರ್ಯನನ್ನು ನಾನೂ ಕಂಡವನೇ. ಅವನು ಧೀರನಾಗಿದ್ದರೆ ವಿವಾಹ ಮಂಟಪಕ್ಕೆ ನಿನ್ನನ್ನು ಯಾಕೆ ಸತ್ಯವತಿ ಕಳುಹಿಸಬೇಕಿತ್ತು? ಅವನ ನಡವಳಿಕೆಯಿಂದಾಗಿ ಅವನ ಪುಂಸ್ತ್ವದ ಬಗ್ಗೆ ಇವಳಿಗೆ ಮಾತ್ರವಲ್ಲ, ನನಗೂ ಸಂಶಯವಿದೆ. ಸಿಂಹಾಸನದ ರಕ್ಷಕನಾಗಿ ಒಬ್ಬ ಸಮರ್ಥ, ಬಲಿಷ್ಠ ಉತ್ತರಾಧಿಕಾರಿಯನ್ನು ಕುರು ಸಾಮ್ರಾಜ್ಯಕ್ಕೆ ನೀಡಬೇಕಾದದ್ದು ನಿನ್ನ ಕರ್ತವ್ಯ. ಇವಳನ್ನು ವಿವಾಹವಾಗಿ ಸಮರ್ಥನಾದ ಕುಮಾರನೊಬ್ಬನನ್ನು ಪಡೆದು ಕುರು ಸಾಮ್ರಾಜ್ಯವನ್ನು ಉಳಿಸು”.

ಭೀಷ್ಮನಿಗೆ ತಕ್ಷಣ ಮಾತಾಡಲಾಗಲಿಲ್ಲ. ಸ್ವಲ್ಪ ಹೊತ್ತು ಯೋಚಿಸಿ ನಿಧಾನವಾಗಿ ಅವನೆಂದ: “ಗುರುವರ್‍ಯಾ, ಅಂಬೆಯ ಸಮಸ್ಯೆಯನ್ನು ವ್ಯಷ್ಟಿಯಾಗಿ ನೋಡಿದ್ದೇನೆ. ಸಮಷ್ಟಿಯಾಗಿಯೂ ವಿಶ್ಲೇಷಿಸಿದ್ದೇನೆ. ಭೀಷ್ಮನ ಪ್ರತಿಯೊಂದು ಹೆಜ್ಜೆಯನ್ನು ಸಮಸ್ತ ಆರ್ಯಾವರ್ತ ಗಮನಿಸುತ್ತದೆ. ಭೀಷ್ಮ ದೊಡ್ಡವನೆಂದಲ್ಲ; ಕುರು ಸಾಮ್ರಾಜ್ಯ ದೊಡ್ಡದು. ಸಾಕೇತದ ರಾಮ ಚಂದ್ರ ತಂದೆಗಾಗಿ ಹದಿನಾಲ್ಕು ವರ್ಷ ವನವಾಸ ಅನುಭವಿಸಿದ. ಸೂರ್ಯವಂಶಕ್ಕೆ ಅಂತಹ ಹೆಸರು ಬರಲು ಅವನ ವಚನ ಪರಿಪಾಲನೆ ಕಾರಣವಾಯಿತು. ನಾನೂ ತಂದೆಗಾಗಿ ಪ್ರತಿಜ್ಞಾ ಬದ್ಧನಾದವನು. ಶಂತನು ಚಕ್ರವರ್ತಿಗಳ ದೇಹಾಂತ್ಯವಾಗಿದೆಯೆಂದು ಆ ಪ್ರತಿಜ್ಞೆಯನ್ನು ನಾನೇ ಮುರಿದರೆ ಚಂದ್ರವಂಶದ ಬಗ್ಗೆ ಇತಿಹಾಸ ಏನು ಹೇಳೀತು? ನೀವೂ ನಿಮ್ಮ ತಂದೆಗಾಗಿ ನಿಮಗಿಷ್ಟ ವಿಲ್ಲದ ಕೆಲವು ಕೆಲಸಗಳನ್ನು ಮಾಡಿದ್ದನ್ನು ನನ್ನಲ್ಲಿ ಹೇಳಿದ್ದು ನನಗಿನ್ನೂ ನೆನಪಿದೆ. ನನ್ನದು ಗುರು ತೋರಿಸಿದ ದಾರಿ. ವಚನ ಪರಿಪಾಲನೆ ಒಂದು ಅತ್ಯುತ್ಕೃಷ್ಟ ಮೌಲ್ಯ. ಗುರುಗಳಾಗಿ ನೀವು ಮೌಲ್ಯಗಳ ಸಂರಕ್ಷಕರಾಗಬೇಕು. ಮೌಲ್ಯಗಳಿಲ್ಲದೆ ಬದುಕನ್ನು, ಸಾಮ್ರಾಜ್ಯವನ್ನು ಕಟ್ಟಲಾಗುವುದಿಲ್ಲ. ಕೈ ಮುಗಿದು ಕೇಳಿಕೊಳ್ಳುತ್ತಿದ್ದೇನೆ ಗುರುವರ್‍ಯಾ. ಮೌಲ್ಯಗಳ ಅಧಃಪತನಕ್ಕೆ ನೀವು ಕಾರಣವಾಗಬೇಡಿ”.

ಪರಶುರಾಮರೂ ಯೋಚಿಸಬೇಕಾಯಿತು. ಓಲೈಕೆಯ ದನಿಯಲ್ಲಿ ಅವರೆಂದರು: “ಆದರೆ ಭೀಷ್ಮಾ, ಪಣದ ನಿಯಮದ ಪ್ರಕಾರ ಅಂಬೆಯನ್ನು ಮದುವೆಯಾಗಬೇಕಾದದ್ದು ನಿನ್ನ ಧರ್ಮವಾಗುತ್ತದೆ. ನಿಯಮವನ್ನು ಮುರಿಯುವುದು ಅಧರ್ಮವಾಗುವುದಿಲ್ಲವೆ? ಅದು ಮೌಲ್ಯದ ಅಧಃಪತನವಲ್ಲವೆ? ನೀನು ಧರ್ಮಕ್ಕೆ ಭಾಷ್ಯ ಬರೆಯಬಲ್ಲವ. ಸನ್ನಿವೇಶವನ್ನು ನಿನಗೆ ಅನುಕೂಲ ವಾಗುವಂತೆ ವ್ಯಾಖ್ಯಾನಿಸುತ್ತಿರುವೆ. ನಿನ್ನ ಪ್ರತಿಜ್ಞೆಗಾಗಿ ಹೆಣ್ಣೊಬ್ಬಳ ಬಾಳನ್ನು ಬಲಿಗೊಡುವುದು ಯಾವ ಮೌಲ್ಯದ ಸಂರಕ್ಷಣೆಯಾಗುತ್ತದೆ? ಹೇಳು, ಇವಳೀಗ ಏನು ಮಾಡಬೇಕು?”

ಭೀಷ್ಮ ತಕ್ಷಣ ಉತ್ತರಿಸಿದ: “ಗುರುವರ್‍ಯಾ, ಇವಳು ಸಾಲ್ವನಲ್ಲಿಗೆ ಹೋದಾಗ ಇವಳಾಗಿಯೇ ಕಾಶೀರಾಜನ ಪಣದ ನಿಯಮವನ್ನು ಮುರಿದಂತಾಯಿತು. ಅಲ್ಲಿಗೆ ಕುರು ಸಾಮ್ರಾಜ್ಯಕ್ಕೆ ಇವಳ ರಕ್ಷಣೆಯ ಬಾಧ್ಯತೆ ತೀರಿತು. ಇವಳು ಭವಿಷ್ಯವನ್ನು ನಿರ್ಧರಿಸಬೇಕಾದದ್ದು ಇವಳೇ. ಇವಳೇನು ಸ್ವಯಂ ನಿರ್ಧಾರ ಕೈಗೊಳ್ಳಲಾಗದ ಮುಗ್ಧೆಯಲ್ಲ. ಇವಳು ಪ್ರೀತಿಸಿದ್ದು ಸಾಲ್ವನನ್ನು. ನೀವು ನನ್ನ ಬಳಿಗೆ ಬರುವ ಬದಲು ಅವನಲ್ಲಿಗೆ ಹೋಗಿ ಎರಡು ಮಾತುಗಳನ್ನು ಗಟ್ಟಿಯಾಗಿ ಹೇಳುತ್ತಿದ್ದರೆ ಅವ ಬಾಯಿ ಮುಚ್ಚಿಕೊಂಡು ಅಂಬೆಯನ್ನು ಸ್ವೀಕರಿಸುತ್ತಿದ್ದ. ನೀವು ನನ್ನ ಗುರುಗಳು. ನನ್ನನ್ನು ತಿದ್ದಿ ತೀಡಿ ಬೆಳೆಸಿದವರು. ನಾನು ಆಜೀವ ಪರ್ಯಂತ ಬ್ರಹ್ಮಚಾರಿಯಾಗಿರುತ್ತೇನೆಂದು ಪ್ರತಿಜ್ಞೆ ಮಾಡುವಾಗ ನನ್ನ ಕಣ್ಣ ಮುಂದಿದ್ದುದು ನಿಮ್ಮ ಆದರ್ಶ. ಇನ್ನು ನಾನು ಹಿಂದೆ ಹೋಗುವ ಸಂಭವವೇ ಇಲ್ಲ. ನೀವೇನು ಶಿಕ್ಷೆ ವಿಧಿಸಿದರೂ ಅನುಭವಿಸಲು ಸಿದ್ಧನಿದ್ದೇನೆ”

ಪರಶುರಾಮರು ಸುಮ್ಮನಾದರು. ಅವರ ದುಡುಕುತನದಿಂದ ಹೀಗಾಯಿತೆಂದು ನನಗನ್ನಿಸಿತು. ನಾನು ಆಶ್ರಮದಲ್ಲಿ ಶಿಷ್ಯವೃತ್ತಿ ಸ್ವೀಕರಿಸಿ ಬ್ರಹ್ಮಚಾರಿಣಿಯಾಗಿ ಬಾಳು ಸವೆಸುವುದಾಗಿ ಹೇಳಿದ್ದೆ. ನನ್ನನ್ನು ಅಲ್ಲೇ ಉಳಿಯಗೊಡಬಹುದಿತ್ತು. ಶುದ್ಧ ಸಾತ್ವಿಕ ಜೀವನ ನನ್ನ ಕ್ಷತ್ರಿಯತ್ವವನ್ನು ನಿಶ್ಯೇಷ ಮಾಡಿ ಹಾಕುತ್ತಿತ್ತು. ಮಧು ಭಾಷಿಣಿ ನನ್ನ ಜತೆಯಾಗುತ್ತಿದ್ದಳು. ಸಾಲ್ವಭೀಷ್ಮರಲ್ಲಿ ಒಬ್ಬನನ್ನು ಆರಿಸಿಕೋ ಎಂದು ಅವರು ಒತ್ತಾಯಿಸಿದ್ದಕ್ಕೆ ನಾನು ಭೀಷ್ಮನನ್ನು ಆಯ್ದುಕೊಂಡೆ. ಸಾಲ್ವನನ್ನು ಪ್ರೀತಿಸಿದವಳು ಭೀಷ್ಮನನ್ನೇಕೆ ಆಯ್ದುಕೊಂಡೆ ಎಂದು ಅವರು ಪ್ರಶ್ನಿಸಲಿಲ್ಲ. ಅವರೇ ತೀರ್ಮಾನ ತೆಗೆದುಕೊಂಡು ನನ್ನನ್ನು ಸಾಲ್ವನಲ್ಲಿಗೆ ಕರೆದೊಯ್ಯ ಬಹುದಿತ್ತು. ಅವರ ಸಮಕ್ಷಮದಲ್ಲೇ ಸಾಲ್ವನೊಡನೆ ನನ್ನ ವಿವಾಹ ನೆರವೇರಿಸಬಹುದಿತ್ತು. ಅವರೊಂದು ಮಾತು ಹೇಳುತ್ತಿದ್ದರೆ ಸಾಲ್ವನಾಗಲೀ, ಅವನ ಪ್ರಜೆಗಳಾಗಲೀ ನಿರಾಕರಿಸುತ್ತಿರಲಿಲ್ಲ. ವರ್ಣ ಮತ್ತು ಜಾತಿ ವಿನಾಶವನ್ನು ಬಯಸುವ ಅವರು ಹಾಗೆ ಮಾಡುತ್ತಿದ್ದರೆ ಸಮಸ್ತ ಆರ್ಯಾ ವರ್ತದ ಚಿಂತನಾ ಕ್ರಮವೇ ಬದಲಾಗಿ ಹೋಗುತ್ತಿತ್ತು. ನನಗೂ ಅದು ಹೊಳೆಯದೇ ಹೋಯಿತು. ಈಗ ಯಾರನ್ನು ದೂರಿಯೂ ಪ್ರಯೋಜನವಿಲ್ಲ. ಅವರು ಇನ್ನೇನು ಮಾಡುತ್ತಾರೊ?

ಸ್ವಲ್ಪ ಹೊತ್ತಿನ ಬಳಿಕ ಪರಶುರಾಮರೆಂದರು: “ಪ್ರಕರಣ ಈ ಹಂತಕ್ಕೆ ಮುಟ್ಟಿದ ಮೇಲೆ ಇದಕ್ಕೊಂದು ಅಂತ್ಯ ಕಾಣಿಸಲೇಬೇಕು. ನೀನು ನನ್ನ ಶಿಷ್ಯನೆಂದು ನಾನು ಆಜ್ಞಾಪಿಸುತ್ತಿಲ್ಲ. ಅಂಬೆಯ ಸ್ಥಾನದಲ್ಲಿ ನಿಂತು ಇಡೀ ಪ್ರಕರಣವನ್ನೊಮ್ಮೆ ಅವಲೋಕಿಸು. ಕಾಶೀರಾಜ ತನ್ನ ಹೆಣ್ಣು ಮಕ್ಕಳನ್ನು ಕೇಳಿ ಸ್ವಯಂವರಕ್ಕೆ ಶೌರ್ಯವನ್ನು ಪಣವಾಗಿರಿಸಲಿಲ್ಲ. ನೀನು ಏರಿರೆನ್ನಯ ರಥಕೆ ಎಂದು ರಾಜಕುಮಾರಿಯರಿಗೆ ಆಜ್ಞಾಪಿಸುವಾಗ ಅವರ ಮನಸ್ಸೇನೆಂದು ಒಂದು ಮಾತು ಕೇಳಲಿಲ್ಲ. ಸ್ವಯಂವರ ಮಂಟಪದಲ್ಲಿ ‘ವಿಚಿತ್ರವೀರ್ಯನನ್ನು ನೀವು ಪತಿಯೆಂದು ಒಪ್ಪುತ್ತೀರಾ’ ಎಂದು ಪ್ರಶ್ನಿಸಲಿಲ್ಲ. ಪ್ರತಾಪಸೇನನಾಗಲೀ, ನೀನಾಗಲೀ ರಾಜಕುಮಾರಿಯರಿಗೂ ಒಂದು ಮನಸ್ಸೆಂಬುದಿದೆ ಎನ್ನುವುದನ್ನು ತಿಳಿದುಕೊಳ್ಳಲೇ ಇಲ್ಲ. ನಿಮ್ಮ ವರ್ತನೆ ಹೆಣ್ಣು ಮಕ್ಕಳನ್ನು ಹೇಗೆ ಬೇಕಾದರೂ ನಡೆಸಿಕೊಳ್ಳಬಹುದು ಎಂಬ ಮೌಲ್ಯವನ್ನು ಸೃಷ್ಟಿಸಿದೆ. ಆರ್ಯಾವರ್ತ ರೂಪುಗೊಳ್ಳುವ ಮೊದಲು ಸ್ತ್ರೀಯರಿಗೆ ಸ್ವಾತಂತ್ರ್ಯವಿತ್ತು. ತಾಯಿ ಕುಟುಂಬದ ಮುಖ್ಯಸ್ಥೆಯಾಗಿದ್ದಳು. ಈಗ ನೋಡು. ತನಗೆ ಇಷ್ಟವಾದ ಗಂಡನ್ನು ವರಿಸುವ ಯಃಕಶ್ಚಿತ್‌ ಸ್ವಾತಂತ್ರ್ಯವೂ ಅವಳಿಗಿಲ್ಲ. ನನ್ನ ಅಪ್ಪನ ಸಂಶಯ ಸ್ವಭಾವದಿಂದಾಗಿ ಅಮ್ಮ ನಲುಗಿ ಹೋದಳು. ಜೀವನವಿಡೀ ಕೊರಗಿದಳು. ಬಲಾಢ್ಯರು ಹೆಣ್ಣನ್ನು ಹೇಗೆ ಬೇಕಾದರೂ ನಡೆಸಿಕೊಳ್ಳಬಹುದು ಎಂಬ ಮೌಲ್ಯವನ್ನು ಸೃಷ್ಟಿಸಬೇಡ. ಶೌರ್ಯ ವಂತರು ದುರ್ಬಲರನ್ನು ಸಮಾನವಾಗಿಕಂಡು ಅವರನ್ನು ಬದುಕಗೊಡುವುದು ಪರಮೋಚ್ಚ ಧರ್ಮ. ನೀನೀಗ ಮಾಡುತ್ತಿರುವುದು ಅಧರ್ಮ. ಕುರು ಸಾಮ್ರಾಜ್ಯದ ರಕ್ಷಣೆ ಮಾಡುತ್ತಿದ್ದೇನೆಂಬ ನಿನ್ನ ಭ್ರಮೆ ಅದರ ಪತನಕ್ಕೆ ಕಾರಣವಾಗುತ್ತಿದೆ. ಗುರುವಾಗಿ ನಿನ್ನನ್ನು ಎಚ್ಚರಿಸಲೆಂದೇ ನಾನು ಬಂದಿದ್ದೇನೆ”.

ಭೀಷ್ಮನ ಮುಖದಲ್ಲಿ ಕಳವಳ ಮೂಡಿತು. ಅತ್ಯಂತ ವಿನೀತಭಾವದಲ್ಲಿ ಅವನೆಂದ: “ಗುರುವರ್ಯಾ, ಹಸ್ತಿನಾವತಿಯ ಸಿಂಹಾಸನಕ್ಕೆ ನಿಷ್ಠನಾಗಿರಬೇಕೆಂದು ಎಳವೆಯಲ್ಲಿ ಶಂತನು ಚಕ್ರವರ್ತಿಗಳು ಹೇಳಿಕೊಡುತ್ತಿದ್ದರು. ನಾನು ಜೀವನ ಪರ್ಯಂತ ಬ್ರಹ್ಮಚಾರಿಯಾಗಿರುತ್ತೇನೆಂದು ಪ್ರತಿಜ್ಞೆ ಮಾಡಲು ನೆಲೆಗಟ್ಟು ಒದಗಿಸಿದ್ದು ಅದೇ ಪಾಠ. ಅದರಿಂದಾಗಿಯೇ ವಿಚಿತ್ರವೀರ್ಯನಿಗಾಗಿ ರಾಜಮಾತೆಯ ಆಜ್ಞೆಯಂತೆ ಕಾಶೀ ರಾಜಕುಮಾರಿಯರನ್ನು ನಾನು ಕರೆತಂದದ್ದು. ಹೆಣ್ಣನ್ನು ಅಪಮಾನಿಸುವ ಉದ್ದೇಶ ನನ್ನದಲ್ಲ. ಈಗಲೂ ಅಂಬೆ ಒಪ್ಪಿದರೆ ವಿಚಿತ್ರ ವೀರ್ಯನೊಡನೆ ಇವಳ ವಿವಾಹ ನೆರವೇರುತ್ತದೆ. ಹಸ್ತಿನಾವತಿಯ ಸಮ್ರಾಜ್ಞಿ ಇವಳಾಗುತ್ತಾಳೆ. ಕೊಟ್ಟ ಮಾತನ್ನು ತಪ್ಪಬಾರದೆಂಬುದು ನೀವು ನನಗೆ ಹೇಳಿಕೊಟ್ಟ ಪಾಠ. ನಾನು ಪ್ರತಿಜ್ಞೆಯನ್ನು ಮುರಿದರೆ ಸಮಸ್ತ ಆರ್ಯಾವರ್ತಕ್ಕೆ ಅದೊಂದು ಕೆಟ್ಟ ಮಾದರಿಯಾಗುತ್ತದೆ. ಕುರು ಸಾಮ್ರಾಜ್ಯಕ್ಕೆ ನೈತಿಕ ನೆಲೆಗಟ್ಟೇ ಇಲ್ಲದಾಗುತ್ತದೆ”

ಪರಶುರಾಮರ ಕಣ್ಣುಗಳು ಬೆಂಕಿಯುಗುಳಿದವು. ಎತ್ತರದ ಸ್ವರದಲ್ಲಿ ಅವರೆಂದರು: “ಸಾಕು ಮಾಡು ನಿನ್ನ ಶಠತ್ವವನ್ನು. ಶಠತ್ವ ಷಂಡತ್ವದ ಇನ್ನೊಂದು ಮುಖವೆಂದು ತಿಳಿದುಕೋ. ಸತ್ತು ಹೋಗಿರುವ ಅಪ್ಪನಿಗಾಗಿ ಎಂದೋ ನೀನು ಮಾಡಿದ ಪ್ರತಿಜ್ಞೆಯನ್ನು, ಓರ್ವ ಅಸಹಾಯ ಹೆಣ್ಣಿನ ಬಾಳನ್ನು ನೇರ್ಪುಗೊಳಿಸುವುದಕ್ಕಾಗಿ ಇಂದು ಮುರಿದರೆ ಅದು ಮೌಲ್ಯದ ಅಧಃಪತನ ವಾಗುವುದಿಲ್ಲ. ಉನ್ನತ ಮೌಲ್ಯವೊಂದರ ಸೃಷ್ಟಿಯಾಗುತ್ತದೆ. ನಿನ್ನ ಪ್ರತಿಜ್ಞಾಬದ್ಧತೆಯಿಂದ ಆರ್ಯಾವರ್ತದ ಸ್ತ್ರೀಯರ ಬಾಳಿಗೆ ಬೆಂಕಿ ಬೀಳುತ್ತದೆಂದು ಗುರುವಾಗಿ ನಾನು ಎಚ್ಚರಿಸಿದರೂ ನಿನಗೆ ನಿನ್ನ ಪ್ರತಿಷ್ಟೆ ಮುಖ್ಯವೆನಿಸುತ್ತದೆ. ಈ ಲೋಕ ಚಲನಶೀಲವಾದದ್ದು. ಕಾಲದ ಅವಶ್ಯಕತೆಗಳಿಗೆ ಅನುಗುಣವಾಗಿ ಕೆಲವು ಮೌಲ್ಯಗಳು ಬದಲಾಗಲೇಬೇಕು. ಸಮುದಾಯದ ಒಳಿತಿಗಾಗಿ ಹೊಸ ಮೌಲ್ಯಗಳನ್ನು ಸೃಜಿಸುವಾತ ನಿಜವಾದ ನಾಯಕ. ನೀನು ಗೊಡ್ಡು ಮೌಲ್ಯದ ಹೆಸರಲ್ಲಿ ಷಂಡನಾಗಿದ್ದಿ. ನಿನ್ನಂಥವನಿಂದ ಕುರುಸಾಮ್ರಾಜ್ಯದ ರಕ್ಷಣೆಯಾಗುವುದಿಲ್ಲ. ನೀನು ಬದುಕಿದ್ದೂ ಪ್ರಯೋಜನವಿಲ್ಲ. ನಿನಗೆ ಅಪೂರ್ವ ಶಸ್ತ್ರಾಸ್ತ್ರಗಳ ರಹಸ್ಯ ತಿಳಿಸಿದ್ದು, ನನ್ನ ತಪ್ಪು. ಇನ್ನು ನೀನು ಬದುಕಿರಬಾರದು. ನನ್ನ ಶಿಷ್ಯನಾಗಿ ನನ್ನ ಕೆಟ್ಟ ಸೃಷ್ಟಿ ನೀನು. ಅದನ್ನು ನಾಶಪಡಿಸಿ, ಲೋಕಕ್ಕೆ ಒಳಿತುಂಟು ಮಾಡುತ್ತೇನೆ. ಬಿಲ್ಲು ಕೈಗೆತ್ತಿಕೋ, ಯುದ್ಧಕ್ಕೆ ಸಿದ್ಧನಾಗು”.

ಭೀಷ್ಮ ಕೈ ಜೋಡಿಸಿ ನಮಸ್ಕರಿಸಿ ಕೇಳಿದ: “ಗುರುವರ್ಯಾ, ಈ ಅಂಬೆಯ ಕಾರಣಕ್ಕಾಗಿ ನಾವು ಹೊಡೆದಾಡುವುದೆ? ನನಗೆ ಶರಪ್ರಯೋಗ ಕಲಿಸಿದವರು ನೀವು. ನಿಮ್ಮ ಮೇಲೆ ಹೇಗೆ ಬಾಣಗಳನ್ನು ಹೂಡಲಿ?”

ಪರಶುರಾಮರ ಸಿಟ್ಟು ಇಳಿದಿರಲಿಲ್ಲ. ಏರು ದನಿಯಲ್ಲೇ ಅವರೆಂದರು: “ಮುಚ್ಚು ಬಾಯಿ. ಮತ್ತೆ ಷಂಡತನದ ಮಾತುಗಳನ್ನಾಡಬೇಡ. ಭೂತಕಾಲದ ಗೊಡ್ಡು ಪ್ರತಿಜ್ಞೆಗಳಿಗಿಂತ ವರ್ತಮಾನದ ಬದುಕು ಮುಖ್ಯ. ನಾಳೆ ಇತಿಹಾಸಕಾರರು ಅಂಬೆಯ ಬಾಳು ಹಾಳು ಮಾಡಿದವ ಭೀಷ್ಮ ಎಂದು ನಿನಗೆ ಮಸಿ ಬಳಿಯದಿರಲೆಂದು ನಿನಗೊಂದು ಅವಕಾಶ ಕಲ್ಪಿಸಿಕೊಟ್ಟೆ. ನಿನಗೆ ಈಗಲೂ ನಿನ್ನ ಮೌಲ್ಯರಾಹಿತ್ಯ, ಅಸಂಗತ ಪ್ರತಿಜ್ಞೆ ಅಸಹಾಯ ಸ್ತ್ರೀಯರ ಬಾಳಿಗಿಂತ ದೊಡ್ಡದೆನಿಸಿದೆ. ನೀನು ತಪ್ಪು ಹಾದಿಯಲ್ಲಿ ಹೋಗುತ್ತಿರುವೆ. ವಿಚಿತ್ರವೀರ್ಯನ ಮುಂದಿನ ಪೀಳಿಗೆಗಳು ನಿನ್ನನ್ನು ಆದರ್ಶವೆಂದು ಸ್ವೀಕರಿಸಿ ಸ್ತ್ರೀಯರನ್ನು ಹೇಗೆ ಅಪಮಾನಿಸಲಿವೆಯೊ? ಅನ್ಯಾಯ, ಅಧರ್ಮಗಳಿಗೆ ನೀನು ಕಾರಣನಾಗಿ ಸಿಂಹಾಸನಕ್ಕೆ ವಿಧೇಯತೆ ಎನ್ನುವ ಪಲಾಯನವಾದ ಪಠಿಸಬೇಡ. ರಾಜಾ ಪ್ರತ್ಯಕ್ಷ ದೇವತಾ ಎಂದೊಪ್ಪಿಕೊಳ್ಳುವುದು ಷಂಡತನ. ರಾಜನಿಗೆ ಬಲ ಬರುವುದೇ ಪ್ರಜಾಜನರಿಂದ. ರಾಜನನ್ನು ಪ್ರಜೆಗಳು ಪ್ರಶ್ನಿಸುವಂತಾಗಬೇಕು. ನೀನು ನಿನ್ನ ಮನಸ್ಸು ಹೇಳಿದಂತೆ ನಡೆದುಕೊಳ್ಳುತ್ತಿರುವೆ. ನಿನ್ನ ನಡವಳಿಕೆಯ ಬಗ್ಗೆ ನಿನ್ನ ವಿವೇಕವೇನು ಹೇಳುತ್ತದೆಂದು ಒಮ್ಮೆಯಾದರೂ ಕೇಳಿಕೊಂಡಿದ್ದೀಯಾ? ನಿನ್ನ ಪ್ರಜೆಗಳ ಅಭಿಪ್ರಾಯಗಳನ್ನು ಸಂಗ್ರಹಿಸಿದ್ದೀಯಾ? ಬೇಡ, ಹಸ್ತಿನಾವತಿಯ ಅಮಾತ್ಯರುಗಳ ಸಲಹೆಯನ್ನಾದರೂ ಕೇಳಿಕೊಂಡಿದ್ದೀಯಾ? ನಿನ್ನ ಮಾಂಡಲಿಕರ, ಸಾಮಂತರ ಅಭಿಪ್ರಾಯವನ್ನು ವಿಚಾರಿಸಿದ್ದೀಯಾ? ಭೀಷ್ಮಾ, ನಾವೆಲ್ಲರೂ ಮನುಷ್ಯರು. ತಪ್ಪು ಮಾಡುವುದು ಸಹಜ. ಅದನ್ನು ಒಪ್ಪಿಕೊಂಡು ಸಮಷ್ಟಿ ದೃಷ್ಟಿಯಿಂದ ಪರಿಮಾರ್ಜನೆ ಮಾಡಿಕೊಳ್ಳಬೇಕು. ನಿನ್ನ ಪ್ರತಿಜ್ಞೆ ತೀರಾ ವೈಯಕ್ತಿಕವಾದದ್ದು. ಅಂಬೆಯನ್ನು ನೀನು ವಿವಾಹವಾಗಿ ಸಿಂಹಾಸನಕ್ಕೊಬ್ಬ ಸಮರ್ಥ ಉತ್ತರಾಧಿಕಾರಿಯನ್ನು ನೀಡಬೇಕಾದದ್ದು ಸಮಷ್ಟಿ ದೃಷ್ಟಿಯಿಂದ ಅತ್ಯಂತ ಸಮರ್ಪಕವಾದದ್ದು. ಸಾಮುದಾಯಿಕ ಹಿತವನ್ನು ವೈಯಕ್ತಿಕ ಪ್ರತಿಷ್ಟೆಗಾಗಿ ಬಲಿಗೊಡುವ ನಿನ್ನಂಥವ ಬದುಕುಳಿದರೆ ಇನ್ನಷ್ಟು ಹೆಣ್ಣು ಮಕ್ಕಳ ಬದುಕು ಅಸಹನೀಯವಾಗುತ್ತದೆ. ಪ್ರತಿವಾದಿಸದೆ ಯುದ್ಧಕ್ಕೆ ಸಿದ್ಧನಾಗು”.

ಭೀಷ್ಮ ಮರು ಮಾತನಾಡದೆ ರಥವೇರಿ ಪುರಪ್ರವೇಶ ಮಾಡಿದ. ಸ್ವಲ್ಪ ಹೊತ್ತಲ್ಲಿ ಕವಚಧರಿಸಿ, ಧನುರ್ಧಾರಿಯಾಗಿ, ಬೆನ್ನಿಗೆ ಬತ್ತಳಿಕೆ ಸಿಕ್ಕಿಸಿ ಯುದ್ಧ ಸನ್ನದ್ಧನಾಗಿ ಆಗಮಿಸಿದ. ಅವನ ರಥದ ಹಿಂದಿನಿಂದ ಮರದ ದಿಮ್ಮಮಿಗಳನ್ನು ತುಂಬಿಕೊಂಡ ನಾಲ್ಕು ಎತ್ತಿನ ಗಾಡಿಗಳು. ಅಂಗಣದ ತುದಿಯಲ್ಲಿ ಆ ದಿಮ್ಮಿಗಳನ್ನು ಜೋಡಿಸಿ ಹಸ್ತಿನಾವತಿಯ ಭಟರು ಅಗ್ನಿಸ್ಪರ್ಶ ಮಾಡಿದರು. ಆ ಬದಿಯ ಆಕಾಶಧೂಮದಿಂದ ತುಂಬಿ ಹೋಯಿತು. ಪರಶುರಾಮರು ಆಶ್ಚರ್ಯ ದಿಂದ ಪ್ರಶ್ನಾರ್ಥಕವಾಗಿ ಭೀಷ್ಮನನ್ನು ನೋಡಿದರು. ನನಗೂ ಭೀಷ್ಮನ ನಡವಳಿಕೆ ವಿಚಿತ್ರವಾಗಿ ಕಂಡಿತು. ಆಗ ಭೀಷ್ಮನೆಂದ: “ಗುರುವರ್‍ಯಾ, ಯುದ್ಧ ಕೊನೆಗೊಳ್ಳಲಿ. ನನ್ನ ಉದ್ದೇಶವೇನೆಂಬುದನ್ನು ಅಂತ್ಯದಲ್ಲಿ ಹೇಳುತ್ತೇನೆ”.

ಆ ಕ್ಷಣಕ್ಕೆ ನನಗೆ ಭೀಷ್ಮನ ಬಗ್ಗೆ ಮೆಚ್ಚುಗೆ ಮೂಡಿತು. ಇವನು ಮಾಡಿದ್ದು ತಪ್ಪೇ ಇರಬಹುದು. ಆದರೆ ಅದನ್ನವನು ಇವನ ಸ್ವಾರ್ಥಕ್ಕಾಗಿ ಮಾಡಲಿಲ್ಲ. ತಾನು ನಂಬಿದ ಮೌಲ್ಯ ಗಳಿಗಾಗಿ ಸಾಕ್ಷಾತ್‌ ಗುರುಗಳನ್ನೇ ಎದುರು ಹಾಕಿಕೊಳ್ಳಲು ಸಿದ್ಧನಾಗಿದ್ದಾನೆ. ಪರಶುರಾಮಾ ಚಾರ್ಯರು ಪರಮ ವಿಕ್ರಮಿ. ಅವರೊಡನೆ ಯುದ್ಧವೆಂದರೆ ಅದು ಅತಂಕನೂರಿಗೆ ರಹದಾರಿ. ಅದು ಗೊತ್ತಿದ್ದೂ ಭೀಷ್ಮ ಯುದ್ಧ ಸನ್ನದ್ಧನಾಗಿದ್ದಾನೆ. ಇವನಲ್ಲಿ ಸ್ವಾರ್ಥವೆಂಬುದಿಲ್ಲ. ರಾಜ ಮಾತೆಯ ಆಜ್ಞೆಯಂತೆ ಕುರುಸಾಮ್ರಾಜ್ಯದ ಕಲ್ಯಾಣಕ್ಕಾಗಿ ಇವನಿಗೆ ಸರಿಕಂಡದ್ದನ್ನು ಮಾಡಿದ್ದಾನೆ. ಯುದ್ಧದಲ್ಲಿ ಏನಾದರಾಗಲಿ. ಇವನ ಮೌಲ್ಯ ನಿಷ್ಠೆಯನ್ನು ಮೆಚ್ಚದಿರಲು ಸಾಧ್ಯವೇ ಇಲ್ಲ.

ಭೀಷ್ಮ ರಥದಿಂದಲೇ ಪರಶುರಾಮರಿಗೆ ವಂದಿಸಿ ನುಡಿದ: “ಗುರುವರ್‍ಯಾ, ನಿಮ್ಮ ಆಜ್ಞೆಯಂತೆ ಯುದ್ಧ ಸನ್ನದ್ಧನಾಗಿದ್ದೇನೆ. ಶಿಷ್ಯನಿಗೆ ವಿಜಯ ಲಭ್ಯವಾಗುವಂತೆ ಆಶೀರ್ವಾದ ಮಾಡಿ”.

ಪರಶುರಾಮರು ಪಡಿ ನುಡಿದರು: “ಗುರುವಾಕ್ಯ ಉಲ್ಲಂಘನಾ ದೋಷದಿಂದ ವಿಮುಕ್ತ ನಾಗುವವರೆಗೆ ನಿನಗೆ ಗುರುವಿನ ಆಶೀರ್ವಾದ ದೊರೆಯುವುದಿಲ್ಲ. ನನ್ನ ಪಾಠವನ್ನು ಎಷ್ಟು ನೆನಪಿಟ್ಟುಕೊಂಡಿದ್ದೀ ಎನ್ನುವುದನ್ನು ಪರೀಕ್ಷಿಸಬೇಕಾಗಿದೆ. ಯುದ್ಧ ಪ್ರಾರಂಭವಾಗಲಿ. ಶರಗಳನ್ನು ಪ್ರಯೋಗಿಸು”.

ಸ್ವಲ್ಪ ಹೊತ್ತು ಯುದ್ಧ ನಡೆಯಿತು. ಭೀಷ್ಮನೆಸೆಯುತ್ತಿದ್ದ ಶರಗಳನ್ನು ಪರಶುರಾಮರು ತುಂಡರಿಸುತ್ತಿದ್ದರು. ಆಚಾರ್ಯರ ಪ್ರತಿಯೊಂದು ಅಸ್ತ್ರಕ್ಕೂ ಭೀಷ್ಮನಲ್ಲಿ ಪ್ರತ್ಯಸ್ತ್ರವಿತ್ತು. ಯಾರೊಬ್ಬರ ಕೈಯೂ ಮೇಲಾಗಲಿಲ್ಲ. ವಯಸ್ಸಿನಿಂದಾಗಿ ಪರಶುರಾಮರಿಗೆ ವಿಪರೀತ ದಣಿವಾಗಿ ಅವರು ಯುದ್ಧ ನಿಲ್ಲಿಸಿ, ರಥದಲ್ಲಿ ಕೂತು ಬಿಟ್ಟರು. ಯುದ್ಧ ವೀಕ್ಷಿಸುತ್ತಿದ್ದ ಹಸ್ತಿನಾವತಿಯ ಆಸ್ಥಾನಿಕರು ತಕ್ಷಣ ಆಚಾರ್ಯರಿಗೆ ತಂಪು ಪಾನೀಯಗಳನ್ನು ಕುಡಿಯಲು ಕೊಟ್ಟರು. ನವಿಲು ಗರಿಯ ಬೀಸಣಿಕೆಗಳಿಂದ ಗಾಳಿ ಹಾಕಿದರು. ನೀರು ಕುಡಿದು ಆಚಾರ್ಯರು ಸುಧಾರಿಸಿಕೊಳ್ಳ ತೊಡಗಿದರು.

ಭೀಷ್ಮ ರಥವಿಳಿದು ಆಚಾರ್ಯರ ಬಳಿಗೆ ಬಂದು ಹೇಳಿದ: “ಗುರುವರ್‍ಯಾ, ನಿಮ್ಮ ದೇಹ ಬಳಲಿದೆ. ಇನ್ನು ಯುದ್ಧವನ್ನು ಮುಂದುವರಿಸುವುದರಲ್ಲಿ ಅರ್ಥವಿಲ್ಲ. ನಿಮಗೆ ಗೊತ್ತಿದೆ, ಈ ಭೀಷ್ಮ ಹೆಣ್ಣಿಗೆ ಸೋಲುವವನಲ್ಲ. ಯಾವ ಗಂಡೂ ಇವನನ್ನು ಸೋಲಿಸಲಾರ. ಯುದ್ಧ ಇಲ್ಲಿಗೇ ನಿಂತು ಬಿಡಲಿ”.

ಆಚಾರ್ಯರಿಗೆ ಮತ್ತೆ ಸಿಟ್ಟೇರಿತು: “ಫಲಿತಾಂಶವಿಲ್ಲದೆ ಯುದ್ಧ ನಿಲುಗಡೆಯ ಮಾತಿಲ್ಲ. ಯಾವ ಗಂಡಿನಿಂದಲೂ ನಿನ್ನನ್ನು ಗೆಲ್ಲಲಾಗದೆಂದು ಕೊಚ್ಚಿಕೊಳ್ಳಬೇಡ. ನಾನು ನಿನ್ನ ವಿದ್ಯಾಗುರು ಎನ್ನುವುದು ನೆನಪಿರಲಿ”.

ಭೀಷ್ಮ ನಕ್ಕ: “ಆದರೆ ಗುರುವರ್‍ಯಾ, ಈ ಬಾರಿ ನೀವು ಗೆದ್ದರೂ ಸೋತಂತೆಯೇ. ಈ ಅಂಬೆಯನ್ನು ಮೊದಲು ಗೆದ್ದವ ಸಾಲ್ವ. ಅವನನ್ನು ಸೋಲಿಸಿ, ನಾನಿವಳನ್ನು ಹಸ್ತಿನಾವತಿಗೆ ಕರೆತಂದೆ. ಗೆದ್ದವನೇ ಅವಳನ್ನು ಮದುವೆಯಾಗಬೇಕಾದದ್ದು ಧರ್ಮವೆಂದು ನೀವು ಹೇಳುತ್ತೀರಿ. ಯುದ್ಧ ಮುಂದುವರಿದು ನೀವು ಗೆದ್ದರೆ ಪಣದ ಪ್ರಕಾರ ನೀವೇ ಅಂಬೆಯನ್ನು ವಿವಾಹವಾಗ ಬೇಕಾಗುತ್ತದೆ. ನೀವು ಸೋತರೂ ಸೋಲೇ, ಗೆದ್ದರೂ ಸೋಲೇ”.

ಆಚಾರ್ಯರು ಅಪ್ರತಿಭರಾದರು: “ಭೀಷ್ಮಾ, ಅತಿ ಬುದ್ಧಿವಂತಿಕೆಯ ಮಾತು ಬೇಡ. ನಾನು ಸ್ವಯಂವರ ಮಂಟಪಕ್ಕೆ ಹೋದವನಲ್ಲ. ಆದುದರಿಂದ ಈ ಶರ್ತ ನನಗೆ ಅನ್ವಯಿಸುವುದಿಲ್ಲ. ಇದು ಸ್ವಯಂವರ ಮಂಟಪದ ಹೊರಗೆ, ಅಂಬೆಗೆ ನ್ಯಾಯ ಒದಗಿಸುವುದಕ್ಕಾಗಿ ನಡೆಯುತ್ತಿರುವ ಯುದ್ಧ. ಸುಮ್ಮನೆ ಪರಿಹಾಸ್ಯ ಬೇಡ”.

ಭೀಷ್ಮ ನುಡಿದ: “ಗುರುವರ್ಯಾ, ಸ್ವಯಂವರ ಮಂಟಪಕ್ಕೆ ನಾನು ಹೋದದ್ದು ನಿಜ. ಆದರದು ವಿವಾಹಾಕಾಂಕ್ಷಯಿಂದಲ್ಲ. ನಾನು ಕುರು ಸಾಮ್ರಾಜ್ಯಕ್ಕಾದ ಅಪಮಾನವನ್ನು ಸರಿಪಡಿಸಲು ಹೋದವನು. ಆದುದರಿಂದ ನನಗೂ ಕಾಶೀರಾಜನ ಶರ್ತ ಅನ್ವಯಿಸುವುದಿಲ್ಲ”.

ಆಚಾರ್ಯರು ಸುಮ್ಮನಾದರು. ಅವರಿಗೆ ಭೀಷ್ಮನ ಮಾತಿನಲ್ಲಿ ಸತ್ಯಾಂಶವಿದೆಯೆಂದೆನಿಸಿತು. ಭೀಷ್ಮ ಅವರ ಕೈಗಳನ್ನು ಹಿಡಿದುಕೊಂಡು ವಿನೀತಭಾವದಿಂದ ಹೇಳಿದ: “ಗುರುವರ್‍ಯಾ, ವರ್ತಮಾನದಲ್ಲಿ, ಈ ಭೂ ಮಂಡಲದಲ್ಲಿ ನನ್ನನ್ನು ಸೋಲಿಸಬಲ್ಲವರಿದ್ದರೆ ಅದು ನೀವು ಮಾತ್ರ. ಇಂದಿನ ಯುದ್ಧದಲ್ಲಿ ನಾನೆಲ್ಲಾದರೂ ಸೋಲುತ್ತಿದ್ದರೆ ನೀವಂದಂತೆ ಕೇಳಬೇಕಾಗುತ್ತಿತ್ತು. ಪ್ರತಿಜ್ಞಾ ಭಂಗವೆನ್ನುವುದು ನನಗೆ ಮರಣಕ್ಕೆ ಸಮನಾದುದು. ಅದಕ್ಕಾಗಿಯೇ ಅಂಗಣದ ಆ ಮೂಲೆಯಲ್ಲಿ ಚಿತೆ ಸಿದ್ಧಪಡಿಸಿದ್ದೇನೆ. ನಿಮ್ಮಿಂದ ನಾನು ಸೋಲುತ್ತಿದ್ದರೆ ಆ ಚಿತೆಯನ್ನು ಪ್ರವೇಶಿಸುತ್ತಿದ್ದೆನೇ ಹೊರತು ಅರಮನೆಗೆ ಹಿಂದಿರುಗುತ್ತಿರಲಿಲ್ಲ. ಅದೆಲ್ಲಾ‌ಈಗ ಮುಗಿದ ಮಾತು. ಅಂಬೆಗೆ ಇಷ್ಟವಿದ್ದರೆ ಈಗಲೂ ವಿಚಿತ್ರವೀರ್ಯನ ಅರಸಿಯಾಗಿ ಸುಖವಾಗಿರಬಹುದು”.

ಪರಶುರಾಮರು ಸೋತಮುಖದಿಂದ ನನ್ನನ್ನು ನೋಡಿದರು. ನನಗೆ ಎಲ್ಲಾ ಅವಕಾಶಗಳು ಮುಚ್ಚಿ ಹೋದವೆಂದೆನ್ನಿಸಿತು. ಕಾಶಿಗೆ ಹೋಗುವಂತಿಲ್ಲ. ಪರಶುರಾಮರೊಡನೆ ಆಶ್ರಮಕ್ಕೆ ಹಿಂದಿರುಗುವಂತಿಲ್ಲ. ಅದಾಗಲೇ ಒಂದು ನಿರ್ಣಯಕ್ಕೆ ಬಂದಿದ್ದ ನಾನು ರಥದಿಂದಿಳಿದು ಭೀಷ್ಮನ ಸಮ್ಮುಖದಲ್ಲಿ ನಿಂತು ಗಟ್ಟಿಯಾಗಿ ಹೇಳಿದೆ: “ಭೀಷ್ಮಾ, ನೀನು ಮಾತಿನಲ್ಲಿ ಯಾರನ್ನೂ ಕಟ್ಟಿ ಹಾಕಬಲ್ಲೆ. ನಿನಗೆ ರಾಜಮಾತೆ ಸತ್ಯವತೀ ದೇವಿಯ ಹಿತವಚನ ಹಿಡಿಸಲಿಲ್ಲ. ಗುರುಗಳ ಬೋಧನೆ ಪಥ್ಯವಾಗಲಿಲ್ಲ. ನಿನಗೆ ಗೊತ್ತಿರುವುದು ಎರಡೇ ಭಾಷೆ : ಪ್ರತಿಜ್ಞೆ ಮತ್ತು ಪ್ರತಿಷ್ಟೆ. ನೀನು ಹೃದಯದ ಭಾಷೆ ಅರ್ಥವಾಗದ ಪಶು. ಇಲ್ಲದಿದ್ದರೆ ನಿನ್ನ ಷಂಡ ತಮ್ಮನಿಗೆ, ಪ್ರತಿಜ್ಞಾಬದ್ಧತೆಯ ನೆಪದಲ್ಲಿ, ನನ್ನನ್ನು ಬಲಿಕೊಡಲು ಸಿದ್ಧನಾಗುತ್ತಿರಲಿಲ್ಲ. ಗಂಡಿನಿಂದ ಸೋಲಿಸಲಾಗದವನು, ಹೆಣ್ಣಿಗೆ ಸೋಲದವನು ಎಂಬ ಹಮ್ಮು ನಿನ್ನಿಂದ ನನ್ನ ಬಾಳನ್ನು ನರಕವಾಗಿಸಿತು. ಓರ್ವ ಗಂಡಾಗಿ ನನಗೆ ಬಾಳು ಕೊಡಲು ನಿನ್ನಿಂದಾಗಲಿಲ್ಲ. ಓರ್ವ ಹೆಣ್ಣಿನ ಸ್ಥಾನದಲ್ಲಿ ನಿಂತು ನೀನು ನನ್ನ ಮನೋವೇದನೆಯನ್ನು ಅರ್ಥ ಮಾಡಿಕೊಳ್ಳಲಿಲ್ಲ. ನಿನ್ನ ವರ್ತನೆಯಿಂದ ನೀನು ಗಂಡೂ ಅಲ್ಲ, ಹೆಣ್ಣೂ ಅಲ್ಲ ಎಂಬ ತೀರ್ಮಾನಕ್ಕೆ ನಾನು ಬಂದಿದ್ದೇನೆ. ಮುಂದಿನ ಜನ್ಮ ಎನ್ನುವುದೊಂದಿದ್ದರೆ, ಗಂಡೂ ಅಲ್ಲದ ಹೆಣ್ಣು ಅಲ್ಲದ ಜೀವಿಯಾಗಿ ಜನಿಸಿ ನಿನ್ನನ್ನು ಕೊಲ್ಲುತ್ತೇನೆ”.

ಮಾತು ನಿಲ್ಲಿಸಿ ಆವೇಶಕ್ಕೊಳಗಾಗಿ ನಾನು ಓಡಿದೆ. ಎಲ್ಲರೂ ನಿಂತು ನಿಬ್ಬೆರಗಾಗಿ ನೋಡುತ್ತಿರುವಂತೆ ಅಂಗಣದ ಮೂಲೆಯಲ್ಲಿ ಧಗಧಗನೆ ಉರಿಯುತ್ತಿದ್ದ ಚಿತೆಯನ್ನು ಪ್ರವೇಶಿಸಲು.
*****

ಮುಂದುವರೆಯುವುದು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ರಾಜಕೀಯ ಪ್ರೀತಿ
Next post ನಾನವಳ ಇನ್ನಿಲ್ಲದಂತೆ ಪ್ರೀತಿಸಿ ಕೂಡ

ಸಣ್ಣ ಕತೆ

  • ಏಡಿರಾಜ

    ಚಲೋ ವಂದು ಅರಸು ಮನಿ, ಗಂಡ-ಹೆಂಡ್ತಿ ದೊಡ್ಡ ಮನ್ತಾನದಲ್ ಆಳ್ಕತಿದ್ರು. ಆವಾಗೆ ಆ ಅರಸೂಗೆ ಗಂಡ್ ಹುಡ್ಗರಿಲ್ಲ. ಸಂತತ್ಯಲ್ಲ, ಇದ್ರದು ನಿಚ್ಚಾ ಕೆಲ್ಸಯೇನಪ್ಪ ಅರಸು ಹಿಂಡ್ತಿದು, ಮನಿ… Read more…

  • ನಿಂಗನ ನಂಬಿಗೆ

    ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…