ಮುಸ್ಸಂಜೆಯ ಮಿಂಚು – ೨೨

ಮುಸ್ಸಂಜೆಯ ಮಿಂಚು – ೨೨

ಅಧ್ಯಾಯ ೨೨  ಹೃದಯದ ಹಕ್ಕಿ ದನಿ ಎತ್ತಿ ಹಾಡಿತು!

ಬೆಳಗ್ಗೆ ಟೀವಿ ನೋಡುತ್ತ ಎಲ್ಲರೊಂದಿಗೆ ತಿಂಡಿ ತಿನ್ನುತ್ತಿದ್ದ ಗಂಗಮ್ಮ ಇದ್ದಕ್ಕಿದ್ದಂತೆ ಎದೆ ಎದೆ ಬಡಿದುಕೊಂಡು ಅಳಲಾರಂಭಿಸಿದಾಗ ಅಲ್ಲಿದ್ದವರೆಲ್ಲ ಗಾಬರಿಯಾದರು. ಬೇಗ ಬಂದಿದ್ದರಿಂದ ರಿತು ಅಲ್ಲಿಗೆ ತಿಂಡಿಗೆ ಬಂದಿದ್ದಳು. ಸೂರಜ್, ವೆಂಕಟೇಶ್ ಎಲ್ಲಾ ಅಲ್ಲಿಯೇ ಕುಳಿತಿದ್ದಾರೆ. ಅವರು ದಢಾರನೇ ಎದ್ದು ಗಂಗಮ್ಮನ ಬಳಿ ಬಂದಿದ್ದರು.

“ಅಯ್ಯೋ, ನನ್ನ ಮಗ-ಸೊಸೆ ನೇಣಾಕಿಕೊಂಡ್ರಲ್ಲಪ್ಪ, ನನ್ನ ಮೊಮ್ಮಗಳು ಸತ್ತುಹೋದಳಂತಲ್ಲಪ್ಪ. ದೇವರೇ, ನಾನೇನು ಮಾಡಲಿ? ನಂಗೆ ಯಾರು ದಿಕ್ಕು?” ಎಂದು ಒಂದೇ ಸಮ ಕಿರುಚಾಡಿ, ಅಳ್ತಾ ಇದ್ದಾಳೆ ಗಂಗಮ್ಮ, ಯಾರಿಗೂ ತಲೆ-ಬುಡ ಅರ್ಥವಾಗಲೇ ಇಲ್ಲ.

“ನಾನು ಈಗಲೇ ಊರಿಗೆ ಹೋಗಬೇಕು. ನನ್ನ ಅಲ್ಲಿಗೆ ಕಳ್ಸಿಕೊಡಿ. ಕೊನೆ ಬಾರಿ ಮುಖನಾದ್ರೂ ನೋಡ್ಕೊಂಡು ಬರ್ತಿನಿ” ಎನ್ನುತ್ತ ಸೂರು ಕಿತ್ತುಹೋಗುವಂತೆ ಜೋರಾಗಿ ಅಳುತ್ತಿದ್ದಾಳೆ, ಟೀವಿಯಲ್ಲಿ ಮತ್ತೊಮ್ಮೆ ಸುದ್ದಿ ಹೇಳುತ್ತಿದ್ದಾರೆ. ತತ್‌ಕ್ಷಣವೇ ಅಳು ನಿಲ್ಲಿಸಿ, ಟೀವಿಯ ಹತ್ತಿರ ಓಡಿದಳು.

“ಈಗಾಗಲೇ ಒಬ್ಬಳೇ ಮಗಳನ್ನು ಕಳೆದುಕೊಂಡಿದ್ದ ತಂದೆ-ತಾಯಿ, ಈಗ ಇರುವ ಒಬ್ಬಳೇ ಮಗಳು ಅಪಘಾತದಲ್ಲಿ ನಿಧನವಾದ ದುಃಖವನ್ನು ಭರಿಸಲಾರದೆ ಹತಾಶರಾದ ದಂಪತಿ ನೇಣಿಗೆ ಕೊರಳೊಡ್ಡಿ ಸಾವಿಗೆ ಶರಣಾಗಿದ್ದಾರೆ” ಎಂದು ಹೇಳುತ್ತಿರುವಂತೆ ಅವರ ಫೋಟೋ ತೋರಿಸಲಾರಂಭಿಸಿದರು.

“ಇವನೇ ನನ್ನ ಮಗ, ನನ್ನ ಸೊಸೆ. ಅಯ್ಯೋ ಯಾಕೆ ಹೀಗೆ ಮಾಡಿಕೊಂಡರೋ?” ಎದೆ ಬಡಿದುಕೊಳ್ಳುತ್ತ ಎದ್ದು ಓಡಿದಳು. ತತ್‌ಕ್ಷಣವೇ ಸೂರಜ್ ವಾಸುವನ್ನು ಕರೆದು, “ವಾಸು, ಗಂಗಮ್ಮನ್ನ ಹಿಡ್ಕೋ, ತಾತ ಈಗ ಏನು ಮಾಡೋದು?”.

ಎಲ್ಲರಿಗೂ ಗಂಗಮ್ಮನ ದುಃಖಕ್ಕೆ ಕಾರಣ ತಿಳಿದು ಸಂತಾಪಪಡಹತ್ತಿದರು.

“ತಾತ, ನಾನು ಗಂಗಮ್ಮನ ಕರ್ಕೊಂಡು ಅವರ ಊರಿಗೆ ಹೋಗಿಬರ್ತಿನಿ. ರಿತು, ನೀನು ಬರ್ತಿಯಾ?” ಎಂದೊಡನೆ ಒಪ್ಪಿದಳು.

ಮತ್ತೆ ಮನಸ್ಸು ಬದಲಾಯಿಸಿ, “ನೀನು ಬೇಡ ರಿತು, ನಾನು ವಾಸುನ್ನ ಕರ್ಕೊಂಡು ಹೋಗ್ತೀನಿ” ಅಂತ ಹೇಳಿ ಕಾರು ಹೊರತೆಗೆಯಲು ಅವಸರವಾಗಿ ನಡೆದ.

ನಡೆದದ್ದು ಇಷ್ಟೆಯೇ, ಗಂಗಮ್ಮನಿಗೆ ಒಬ್ಬನೇ ಮಗ, ಮಗ ಚಿಕ್ಕವನಾಗಿರುವಾಗಲೇ ಗಂಡನನ್ನು ಕಳೆದುಕೊಂಡಿದ್ದ ಗಂಗಮ್ಮ ಹೆದರದೆ ಸಂತೆಯಲ್ಲಿ ತರಕಾರಿ ಮಾರುವುದನ್ನು ಮುಂದುವರಿಸಿಕೊಂಡು ಮಗನನ್ನು ಸಾಕಿದಳು. ಮಗ ಅಪಾರ ಬುದ್ದಿವಂತ, ಚೆನ್ನಾಗಿ ಓದಿ ಇಂಜಿನಿಯರ್ ಆಗಿದ್ದ. ಕಾಲೇಜೊಂದರಲ್ಲಿ ಉಪನ್ಯಾಸಕಿಯಾಗಿದ್ದವಳನ್ನು ಮೆಚ್ಚಿ ಮದುವೆಯಾಗಿದ್ದನು. ಇಬ್ಬರು ಹೆಣ್ಣು ಮಕ್ಕಳಾದರು. ಜನರೇಶನ್ ಗ್ಯಾಪ್, ಹಾಗಾಗಿ ಅತ್ತೆ-ಸೊಸೆಗೆ ಹೊಂದಲೇ ಇಲ್ಲ. ಗಂಗಮ್ಮ ಸ್ವಲ್ಪ ಜೋರಾದ ದರ್ಪಿಷ್ಟ ಹೆಣ್ಣು. ಹದಿವಯಸ್ಸಿಗೆ, ವಿಧವೆಯಾಗಿದ್ದ ಗಂಗಮ್ಮ ತನ್ನ ಮೇಲೆ ಕಣ್ಣು ಹಾಕಿದವರಿಗೆ ಮಹಾಕಾಳಿಯಾಗುತ್ತಿದ್ದಳು. ಒಂಟಿ ಹೆಣ್ಣು ಬದುಕಬೇಕೆಂದರೆ ಜೋರಾಗಲೇಬೇಕಿತ್ತು, ಒರಟುತನ ಮೈಗೂಡಿಬಿಟ್ಟಿತ್ತು.

ಮಗ ವಿದ್ಯಾವಂತನಾದ, ಒಳ್ಳೆಯ ಕೆಲಸದಲ್ಲಿದ್ದಾನೆ, ಸೊಸೆ ಕೂಡ ಕೆಲಸದಲ್ಲಿದ್ದಾಳೆ. ಇಡೀ ಮನೆಯ ವಾತಾವರಣವೇ ಬದಲಾಗಿತ್ತು. ಆದರೆ ಗಂಗಮ್ಮ ಬದಲಾಗಿರಲಿಲ್ಲ. ಅವಳದು ಅದೇ ಗುಣ, ಅದೇ ಸ್ವಭಾವ. ಇದು ಸೊಸೆಗೆ ಸರಿಬರುತ್ತಿರಲಿಲ್ಲ. ಅತ್ತೆ-ಸೊಸೆಗೆ ಜಗಳ ಶುರುವಾಗಿ ಬಿಡುತ್ತಿತ್ತು. ಯಾರಿಗೂ ಹೇಳಲಾರದೆ ಮಗ ಸೋತು ಹೋಗುತ್ತಿದ್ದ. ಇಷ್ಟೆಲ್ಲ ಕಷ್ಟಪಟ್ಟು ಸಾಕಿ, ಸಲುಹಿ, ವಿದ್ಯಾವಂತನನ್ನಾಗಿ ಮಾಡಿದ್ದೇನೆ, ಅಂದೇ ಯಾರಿಗೂ ಅಂಜದೆ ಬದುಕಿದ್ದೇನೆ. ಈಗ ಸೊಸೆ-ಮಗನಿಗೆ ಹೆದರಬೇಕೇ? ಅವರು ಹೇಳಿದಂತೆ ಕೇಳಬೇಕೇ ಎಂಬ ನಿಲುವು ಗಂಗಮ್ಮನದು. ಕೊನೆಗೊಂದು ದಿನ ಮಗ ಸೊಸೆ ಪರ ವಹಿಸಿಕೊಂಡು ತನ್ನನ್ನು ಬಯ್ದನೆಂದು ಸಿಟ್ಟು ಮಾಡಿಕೊಂಡು ಯಾರಿಂದಲೋ ಈ ಆಶ್ರಮದ ವಿಷಯ ತಿಳಿದುಕೊಂಡು ಬಂದುಬಿಟ್ಟಿದ್ದಳು. ತಾನು ಇಲ್ಲಿರುವ ವಿಷಯವನ್ನು ಮಗನಿಗೆ ತಿಳಿಸಿರಲಿಲ್ಲ. ಎಲ್ಲಾ ಕಡೆ ಹುಡುಕಿ ಮಗ ಹತಾಶನಾಗಿದ್ದ. ಅವನಿಗೆ ಗಿಲ್ಟಿ ಕಾನ್ಸಿಯೆಸ್ ಕಾಡತೊಡಗಿತ್ತು. ಇರುವವ ನಾನೊಬ್ಬನೇ ಮಗ, ಹೆತ್ತ ತಾಯಿಯನ್ನು ಸಾಕಲಾರದೆ ಇದ್ದ ಮೇಲೆ ಬದುಕಿ ಪ್ರಯೋಜನವೇನು ಎಂದು ನೊಂದಿದ್ದ. ಅದೇ ಸಮಯಕ್ಕೆ ಮಗಳೊಬ್ಬಳು ತೀರಿಹೋದಳು. ಇದನ್ನು ಬಹುವಾಗಿ ಹಚ್ಚಿಕೊಂಡಿದ್ದ. ಇದಕ್ಕೆಲ್ಲ ಕಾರಣ, ತಾನು ಮಾತೃದ್ರೋಹಿ ಆಗಿದ್ದರಿಂದಲೇ ತಾಯಿಯ ಸಂಕಟದ ಶಾಪ ಇದು ಎಂದು ಹೆಂಡತಿಯ ಮೇಲೂ ಕೂಗಾಡುತ್ತಿದ್ದ. ಸೊಸೆಗೂ ಪಶ್ಚಾತ್ತಾಪವಾಗಿತ್ತು. ದಿನದಿನಕ್ಕೆ ಮನೆಯ ಶಾಂತಿ ಕದಡಿ ಹೋಗುತ್ತಿತ್ತು. ಇದ್ದ ಕೆಲಸ ಬೇರೆ ಹೋಯಿತು. ಬೇರೆ ಕೆಲಸಕ್ಕಾಗಿ ಹುಡುಕಾಟ ನಡೆಸಿದ್ದ. ಯಾವುದೋ ಕೆಲಸ ವಿಚಾರಿಸಲು ಗಂಡ-ಹೆಂಡತಿ-ಮಗಳು ಬೈಕಿನಲ್ಲಿ ಹೋಗುತ್ತಿದ್ದಾಗ, ಹಿಂಬದಿಯಿಂದ ಲಾರಿಯೊಂದು ಗುದ್ದಿ ಮಗು ಸ್ಥಳದಲ್ಲಿಯೇ ಮೃತಪಟ್ಟಿತ್ತು. ತೀವ್ರ ಆಘಾತಗೊಂಡ ದಂಪತಿ ದುಃಖ ಭರಿಸಲಾರದೆ ನೇಣಿಗೆ ಕೊರಳೊಡ್ಡಿದ್ದರು.

ಹೃದಯವಿದ್ರಾವಕವಾದ ಘಟನೆ ಎಲ್ಲರನ್ನೂ ತಲ್ಲಣಗೊಳಿಸಿತ್ತು. ಅಂದೆಲ್ಲ ಆಶ್ರಮದಲ್ಲಿ ಅದೇ ವಿಷಯದ ಬಗ್ಗೆಯೇ ಚರ್ಚೆ, ಮಾತುಕತೆ ನಡೆದವು. ಮಗ-ಸೊಸೆಯ ಮೇಲೆ ಕೋಪವಿದ್ದರೂ ಅವರ ಸಾವನ್ನು ಬಯಸುವಂಥ ಕೆಟ್ಟ ತಾಯಿ ಆಗಿರಲಿಲ್ಲ. ಗಂಗಮ್ಮ ಎಲ್ಲೋ ನೆಮ್ಮದಿಯಾಗಿದ್ದಳು. ಆದರೀಗ ಹೆತ್ತ ಕರುಳಿಗೆ ಬೆಂಕಿ ಬಿದ್ದಿತ್ತು. ಅದು ಹೇಗೆ ಸಹಿಸುತ್ತಾಳೆ ಎಂದು ಎಲ್ಲರೂ ಅವರ ಸಾವನ್ನು ಬಯಸುವಂಥ ಕೆಟ್ಟ ತಾಯಿ ತನ್ನ ಕರುಳ ಕುಡಿ ಸುಖವಾಗಿದೆ ಎಂದೇ ತಿಳಿದು ಇಲ್ಲಿ ಆಕೆಯ ಬಗ್ಗೆ ಪರಿತಾಪಪಡುವವರೇ.

ಅಂತ್ಯಸಂಸ್ಕಾರವನ್ನು ಮುಗಿಸಿಕೊಂಡು ಗಂಗಮ್ಮನನ್ನು ಅಲ್ಲಿಯೇ ಬಂಧುಗಳೊಂದಿಗೆ ಬಿಟ್ಟು ಬಂದ ಸೂರಜ್ ಸುಸ್ತಾಗಿದ್ದನು. ಬಂದವನು ಊಟವೂ ಮಾಡದಂತೆ ಮಲಗಿಬಿಟ್ಟನು. ಅಲ್ಲಿನ ರೋದನ, ಆ ಬಂಧುಗಳ ಗೋಳಾಟ, ಆ ಸಂಕಟ ಅವನ ಎದೆ ಕಲಕಿಬಿಟ್ಟಿತ್ತು.

ಏನು ಜನಗಳೋ? ಯಾಕಿಷ್ಟು ದುರ್ಬಲರಾಗುತ್ತಾರೋ? ನೋಡಿದರೆ ಗಂಡ-ಹೆಂಡತಿ ಇಬ್ಬರೂ ವಿದ್ಯಾವಂತರೇ, ಹೆಂಡತಿ ಹದಿಹರೆಯದ ಮಕ್ಕಳಿಗೆ ಕಲಿಸುವ ಉಪನ್ಯಾಸಕಿ ಬೇರೆ. ಅದೇನು ತನ್ನ ವಿದ್ಯಾರ್ಥಿಗಳಿಗೆ ಕಲಿಸುತ್ತಿದ್ದಳೋ? ಅವನಿಗಾದರೂ ಬುದ್ದಿ ಬೇಡವೇ ? ಇಂಜಿನಿಯರ್, ಸಮಾಜದಲ್ಲಿ ಸ್ಥಾನಮಾನ ಪಡೆದವರು, ಮಕ್ಕಳ ಸಾವು ತಡೆಯಲಾರದ ಆಘಾತವೇ ಸರಿ, ಹಾಗಂತ ಮಕ್ಕಳನ್ನು ಕಳೆದುಕೊಂಡವರೆಲ್ಲ ಸಾವಿಗೆ ಶರಣಾಗಿದ್ದಾರೆಯೇ? ಯಾಕಿಂಥ ನಿರ್ಧಾರ ತೆಗೆದುಕೊಂಡುಬಿಟ್ಟರೋ? ಪಾಪ, ವಯಸ್ಸಾಗಿರುವ ಗಂಗಮ್ಮನ ಗತಿ-ಏನು? ಮಗ-ಸೊಸೆ-ಮೊಮ್ಮಕ್ಕಳನ್ನೆಲ್ಲ ಕಳೆದುಕೊಂಡು ಅನಾಥವಾಗಿರುವ ಆಕೆ ತಾನೇ ಹೇಗೆ ಈ ದುಃಖ ಭರಿಸುತ್ತಾಳೆ ? ಈ ನೋವು ಕಾಣಲೆಂದೇ ಗಂಡ ಸತ್ತ ಮೇಲೂ ಧೈರ್ಯವಾಗಿ ಬದುಕಿ, ಮಗನನ್ನು ವಿದ್ಯಾವಂತನನ್ನಾಗಿ ಮಾಡಿದ್ದು? ಇದನ್ನು ಕಾಣಲೆಂದೇ ಇಷ್ಟು ವರ್ಷ ಬದುಕಿದ್ದಳೇ? ಪಾಪ, ಸತ್ತವರು ಸತ್ತರು. ಬದುಕಿರುವವರ ಪಾಡೇನು? ಮನಸ್ಸೇ ಕೆಟ್ಟುಹೋಗಿತ್ತು.

ಅಪ್ಪ-ಅಮ್ಮ ಹೊರಟು ನಿಂತಾಗಲೂ ಒಂದೂ ಮಾತಾಡದೆ ಬಸ್‌ಸ್ಟಾಂಡಿಗೆ ಬಿಟ್ಟು ಬಂದ. ರೈಲಿನಲ್ಲಿ ಟಿಕೆಟ್ ಸಿಗದೆ ಮಗನ ಮೇಲಿನ ಸಿಟ್ಟಿನಿಂದ ಬಸ್ಸಿನಲ್ಲಿಯೇ ಹೋಗಲು ನಿರ್ಧರಿಸಿದ್ದರು. ಅದನ್ನು ತಡೆಯುವ ಗೋಜಿಗೂ ಹೋಗದೆ ಸುಮ್ಮನಾಗಿದ್ದ. ವೆಂಕಟೇಶ್ ಕೂಡ ಮೌನಕ್ಕೆ ಶರಣಾಗಿದ್ದರು. ಮಗನ ಕೆಟ್ಟ ಹಟ ಅವರಿಗೆ ಬೇಸರ ತರಿಸಿತ್ತು. ಅವನಿಗೊಂದು ನ್ಯಾಯ, ಅವನ ಮಗನಿಗೊಂದು ನ್ಯಾಯ ಅದು ಹೇಗೆ ಸಾಧ್ಯ? ಈ ಪ್ರಕರಣ ಇಲ್ಲಿಗೆ ಮುಗಿದರೆ ಸಾಕು ಎನಿಸಿಬಿಟ್ಟಿತ್ತು. ಮಗ ಹೊರಟೊಡನೆ ಹಾಯಾಗಿ ಉಸಿರಾಡಿದ್ದರು.

ಬೆಳಗ್ಗೆ ಎದ್ದಾಗಲೂ ಗಂಭೀರವಾಗಿಯೇ ಇದ್ದ ಸೂರಜ್‌ನನ್ನು ನೋಡಿ, ಕಂದ, ಆವಾಗಿನಿಂದ ನೋಡ್ತಾ ಇದ್ದೀನಿ, ಸಪ್ಪಗೆ ಇದ್ದಿಯಾ? ನಿಮ್ಮಪ್ಪ-ಅಮ್ಮ ಹೋಗಿದ್ದು ಬೇಸರ ಆಯಿತಾ? ಹೋಗ್ಲಿ ಬಿಡು. ಮಗನಿಗಿಂತ ಅವರಿಗೆ ಅವರ ಹಟವೇ ಹೆಚ್ಚಾಗಿದೆ. ಅವತ್ತು ನಾನೂ ಹೀಗೆ ಹಟ ಹಿಡಿದಿದ್ದರೆ ಇವತ್ತು ನಿನ್ನ ಇಲ್ಲಿ ನೋಡೋಕೂ ಆಗ್ತಾ ಇರ್ಲಿಲ್ಲ. ಮಗ ದೂರಾದರೇನು? ಮೊಮ್ಮಗ ಹತ್ತಿರವಾಗಿದ್ದಾನೆ. ಕೊನೆಗಾಲದ ಆಸರೆಯಾಗಿ ನನ್ನ ಪಾಲಿಗೆ ನೀನಿದ್ದಿಯಾ. ಅಂಥ ದಿನಗಳು ಬಂದಾಗಲೇ ಅವನಿಗೆ ಬುದ್ದಿ ಬರೋದು. ಮನಸ್ಸನ್ನು ಕೆಡಿಸಿಕೊಳ್ಳಬೇಡ. ಅವನ ಬೇರು ಇಲ್ಲೇ ಇರುವುದರಿಂದ ಇವತ್ತಲ್ಲ ನಾಳೆ ಇಲ್ಲಿಗೆ ಬಂದೇ ಬರುತ್ತಾನೆ. ನಿನ್ನ ನೆರಳಿನ ತಂಪು ಅವನಿಗೆ ಬೇಕೆ ಬೇಕು. ಈ ಸತ್ಯ ನಿಧಾನವಾಗಿ ಅವನಿಗೆ ಅರ್ಥವಾಗುತ್ತೆ. ಅಲ್ಲಿಯವರೆಗೂ ನೀನು ಕಾಯಲೇಬೇಕು ಕಂದಾ” ಅವನನ್ನು ಅಪ್ಪಿ ಹೇಳಿದಾಗ ತಾತನ ಅಪ್ಪುಗೆಯಲ್ಲಿದ್ದ ಸೂರಜ್‌ಗೆ ಏನೆನಿಸಿತೋ? ತಾತನ ಎದೆಗೊರಗಿ ಅತ್ತೇಬಿಟ್ಟ.

“ಹುಚ್ಚಾ, ಅಳ್ತಾ ಇದ್ದೀಯಾ? ಹೆಣ್ಣಿನಂತೆ ಅಳ್ತಾರೇನೋ? ನೀನು ಗಂಡಸು, ಯಾವತ್ತೂ ನೀನು ಎದೆಗುಂದಬಾರದು. ಇಂದೇ ಕೊನೆ, ನಾನು ಯಾವತ್ತೂ ಈ ಕಣ್ಣಿನಲ್ಲಿ ನೀರು ನೋಡೋಕೆ ಬಯಸುವುದಿಲ್ಲ. ಇಂಥ ಅನರ್ಥ್ಯ ರತ್ನನ ದೂರ ಎಸೆದು ಹೋದ್ರಲ್ಲ, ಅವರು ಮೂರ್ಖರು ಕಣೋ, ನಿನ್ನಂಥ ವಜ್ರದ ಮುಂದೆ ಬೇರೆಲ್ಲ ಕ್ಷುಲ್ಲಕ, ತೃಣಕ್ಕೆ ಸಮಾನ. ಈ ರತ್ನ ನನ್ನ ಮಡಿಲಿಗೆ ಬಿದ್ದು ನನ್ನನ್ನು ಅದೃಷ್ಟವಂತನನ್ನಾಗಿ ಮಾಡಿದೆ. ನಾನೇ ಪುಣ್ಯವಂತ ಕಣೋ. ನಾನು ನಿನ್ನ ಜತೆಯಲ್ಲಿ ಇನ್ನೂ ನೂರು ವರ್ಷ ಬದುಕಬೇಕು ಅನ್ನೋ ಆಸೆ ಚಿಗುರುತ್ತಾ ಇದೆ. ಸಾವೇ ಬಂದು ನನ್ನ ಕರ್ಕೊ ಅಂತ ದಿನಾ ಬೇಡಿಕೊಳ್ತಾ ಇದ್ದೆ. ಆದ್ರೆ ಈಗ ನನ್ನ ಮನೆ ಹೊಸಿಲಿಗೂ ಬರಬೇಡ ಅಂತ ಗದರಿಸಿ ಕಳುಹಿಸುತ್ತೇನೆ ಗೊತ್ತಾ ಪುಟ್ಟಾ ನೀನು ಮದ್ವೇ ಆಗಬೇಕು, ಈ ಮನೆ ತುಂಬ ನಿನ್ನ ಹೆಂಡತಿಯ ಕಾಲುಗೆಜ್ಜೆ ಸದ್ದು ಕೇಳಬೇಕು” ಭಾವುಕನಾಗಿ ಹೇಳುತ್ತಲೇ ಇರುವ ತಾತನ ಕನಸುಗಳನ್ನು ಕತ್ತರಿಸುತ್ತ-

“ಸ್ಟಾಪ್ ಸ್ಟಾಪ್ ತಾತ. ಇಷ್ಟೊಂದು ಸ್ಪೀಡಾಗಿ ಹೋದ್ರೆ ಹೇಗೆ? ಈ ಕಾಲದಲ್ಲಿ ಹುಡುಗಿಯರು ಗೆಜ್ಜೆನೇ ಹಾಕಲ್ಲ. ಇನ್ನು ಮನೆ ತುಂಬಾ ಗೆಜ್ಜೆ ಸದ್ದು ಎಲ್ಲಿ ಕೇಳುತ್ತೆ? ನಾನು ಸ್ವಲ್ಪ ಇಮೋಶನಲ್ ಆಗಿದ್ದೆ. ಅಪ್ಪ-ಅಮ್ಮ ನನ್ನ ಅರ್ಥಮಾಡಿಕೊಳ್ಳದೆ ಸಿಟ್ಟು ಮಾಡಿಕೊಂಡು ಹೊರಟುಹೋದರಲ್ಲ ಅನ್ನೋ ನೋವು ಕಾಡ್ತಾ ಇತ್ತು. ನಿನ್ನೆ ಬೇರೆ ಗಂಗಮ್ಮನ ಫ್ಯಾಮಿಲಿ ದುರಂತ ನೋಡಿದ್ದೆನಲ್ಲ ಏಕೋ ಸಮಾಧಾನವೇ ಇರ್ಲಿಲ್ಲ. ಈಗ ನಿನ್ನ ಮಾತು ಕೇಳಿದ ಮೇಲೆ ನನ್ನ ದುಗುಡಗಳೆಲ್ಲ ದೂರವಾಗಿ ಮನಸ್ಸು ಹಗುರವಾಗ್ತಾ ಇದೆ. ಅಪ್ಪ-ಅಮ್ಮ ಯಾವತ್ತಾದರೂ ಒಂದು ದಿನ ನನ್ನ ಹತ್ತಿರ ಬಂದೇ ಬರ್ತಾರೆ ಅಂದ್ಯಲ್ಲ, ಅದೇ ನನಗೆ ಆಶಾಕಿರಣವಾಗಿದೆ ತಾತ. ಹೇಗೋ ನಮ್ಮ ಮನೆಯ ಕಥೆ ಸುಖಾಂತವಾದ್ರೆ ಸಾಕು ತಾತ.”

“ಆಗುತ್ತೆ ಕಣೋ, ಸುಖಾಂತ ಖಂಡಿತ ಆಗುತ್ತೆ. ಅದನ್ನ ನೋಡೋಕೆ ದೇವ್ರು ನಂಗೆ ಇಷ್ಟೊಂದು ಆಯುಸ್ಸು ಕೊಟ್ಟಿರುವುದು. ಇಷ್ಟು ವಯಸ್ಸಾದರೂ ನೋಡು. ನಾನು ಗಟ್ಟಿಮುಟ್ಟಾಗಿದ್ದೇನೆ. ನಿನ್ನ ಮದುವೆ ಮಾಡಿ, ನಿನ್ನ ಮಗುನಾ ನಾ ನೋಡಿಯೇ ಸಾಯುವುದು, ಮರಿಮಗನ್ನ ನೋಡೋ ಯೋಗನ್ನ ಬೇಗ ನನಗೆ ಕಲ್ಪಿಸಿಕೊಡೋ ಮಗೂ.”

“ಮರಿಮಗನನ್ನಷ್ಟೇ ಅಲ್ಲ ತಾತ, ಅವನ ಮದುವೆನೂ ನೋಡುವೆಯಂತೆ ಸುಮ್ಮನಿರು. ನನ್ನ ಮನಸ್ಸಿಗೆ ಒಪ್ಪೋ ಹೆಣ್ಣು ನಂಗೆ ಸಿಗೋದೇ ಬೇಡವೇ? ನನ್ನ ಕನಸುಗಳಿಗೆ, ನನ್ನ ಧೈಯಗಳಿಗೆ ಜತೆಯಾಗಿ ಹೆಜ್ಜೆ ಹಾಕುವಂಥ ಹುಡುಗಿ ಬೇಕು ನಂಗೆ. ಅಂಥ ಹೆಣ್ಣು ಸಿಕ್ಕಿದ ಕೂಡಲೇ ಅವಳಿಗೆ ಮಾಲೆ ಹಾಕಿ ಕರ್ಕೊಂಡು ಬಂದು, ನಿನ್ನ ಮುಂದೆ ನಿಲ್ಲಿಸಿಬಿಡ್ತೀನಿ ಆಯ್ತಾ? ಈಗ ನಂಗೆ ಬಿಡುಗಡೆ ಕೊಡ್ತಿಯಾ? ಆಫೀಸ್ ಕಡೆ ಹೋಗಿ ಬರ್ತಿನಿ. ರಿತು ಇರೋದ್ರಿಂದ ಪರವಾಗಿಲ್ಲ. ಎಲ್ಲಾ ನಿಭಾಯಿಸುತ್ತಾಳೆ” ಹೊರಟನು.

“ತುವಿನಂಥ ಹೆಣ್ಣೀ ಈ ಮನೆ ತುಂಬುವಂತಾಗಲಿ” ಎಂದ ತಾತನನ್ನು ತಟಕ್ಕನೇ ತಿರುಗಿ ನೋಡಿದ. ಅವರಾಗಲೇ ಒಳಹೋಗುತ್ತಿದ್ದರು. ರಿತುವಿನಂಥ ಹೆಣ್ಣು ತನ್ನ ಸಂಗಾತಿ. ಅವಳಂಥವಳೇ ಯಾಕೆ, ಅವಳೇ ಆದರೆ ವಾಹ್! ಎಂಥ ಒಳ್ಳೆಯ ಯೋಚನೆ. ಹೃದಯದಲ್ಲಿ ಹೊಸರಾಗ ಹುಟ್ಟಿಕೊಂಡಿತು. ಅದು ದನಿ ಎತ್ತಿ ಹಾಡತೊಡಗಿದಂತೆ ಭಾಸವಾಗಿ ಎದೆಯನ್ನು ಗಟ್ಟಿಯಾಗಿ ಒತ್ತಿಕೊಂಡ.
* * *

ಸೂರಜ್ ರಿತುವನ್ನೇ ಹುಡುಕಿಕೊಂಡು ಬಂದ. ಅವಳಿನ್ನೂ ನಿನ್ನ ನಡೆದ ಘಟನೆಯಿಂದ ಚೇತರಿಸಿಕೊಂಡಿದ್ದಾಳೋ ಇಲ್ಲವೋ ಎಂದುಕೊಳ್ಳುತ್ತಲೇ ರಿತುವಿನ ರೂಮಿಗೆ ಬಂದ. ಅವಳಿನ್ನೂ ತನ್ನ ರೂಮಿಗೆ ಬಂದು ಕೆಲಸ ಪ್ರಾರಂಭಿಸಿಲ್ಲ ಎಂದು ತಿಳಿದುಕೊಂಡು, ಅವಳು ಕೂರುವ ಚೆಯರಿನ ಮೇಲೆ ಕುಳಿತುಕೊಂಡು ಕಣ್ಮುಚ್ಚಿದ. ಹಿತವಾದ ಅನುಭವ. ಯಾವುದೋ ಲೋಕದಲ್ಲಿ ತೇಲಿಹೋಗುತ್ತಿರುವ ಭಾವ. ಏನೋ ನವುರು, ಏನೋ ತಲ್ಲಣ, ಏನಾಗುತ್ತಿದೆ ನನಗೆ? ಪ್ರೇಮದಲ್ಲಿ ಬಿದ್ದುಬಿಟ್ಟಿದ್ದೆನಾ? ನಾನು ಪ್ರೇಮಿಯಾಗಿಬಿಟ್ಟೆನೇ? ಹಾಯ್, ಎಂಥ ಸುಂದರ ಅನುಭೂತಿ! ಮಧುರ ಸಿಂಚನ. ವಾಹ್! ಈ ಗಳಿಗೆ ಹೀಗೆ ಇದ್ದುಬಿಡಲಿ ಎಂದುಕೊಂಡು ಆ ಕನಸಿನಲ್ಲಿ ತೇಲಿಹೋದ.

“ಹಲೋ, ಯಾವ ಲೋಕದಲ್ಲಿ ವಿಹರಿಸುತ್ತಾ ಇದ್ದೀರಿ? ನಾನು ಬಂದು ಹತ್ತು ನಿಮಿಷ ಆಯ್ತು. ಯಾವುದೋ ಹುಡ್ಗಿ ಜತೆ ಡ್ಯೂಯೆಟ್ ಹಾಡ್ತಾ ಇರೋ ಹಾಗಿತ್ತು” ಜೇನಿನಂತೆ ಸಿಹಿಯಾದ ಸ್ವರ.

ಮೆಲ್ಲನೆ ಕಣ್ಣು ತೆರೆದ. ಸಿರಿದೇವಿಯಂತೆ ನಗುತ್ತ ನಿಂತಿದ್ದಾಳೆ. ಅಮಲಿನಲ್ಲಿರುವಂತೆ ಮೆಲ್ಲನೆ ನಕ್ಕ.

“ಅಯ್ಯಾ, ಪ್ರೇಮ ತಪಸ್ವಿ, ಸ್ವಲ್ಪ ಈ ಲೋಕಕ್ಕೆ ಇಳಿದು ಬರ್ತಿರಾ? ನಿನ್ನೆಯಿಂದ ಕೆಲಸ ಆಗಿಲ್ಲ. ನಿಂಗೇನು ಸುಮ್ಮೆ ಕೂತ್ರೂ ನಡೆಯುತ್ತೆ. ಆದ್ರೆ, ನಂಗೆ ಸಂಬಳ ಬೇಕಲ್ವಾ? ಏಳು ಮೇಲೆ, ಕುರ್ಚಿ ಬಿಡು, ಕೆಲಸ ರಾಶಿ ಇದೆ” ಅವನನ್ನು ಭುಜ ಹಿಡಿದು ಎಚ್ಚರಿಸಿದಳು. ಎದ್ದು ನಿಂತ ಸೂರಜ್ ಅವಳೆಡೆ ಒಮ್ಮೆ ನೋಡಿ, ಸುಮ್ಮನೆ ಹೊರನಡೆದ.

“ಅರೆ ಏನಾಯ್ತು ಈ ಸೂರಜ್‌ಗೆ? ಇವತ್ತೇನೋ ಹೊಸ ಥರ ಇದ್ದಾನಲ್ಲಾ? ತೀರ್ಥ-ಗೀರ್ಥ ಏನಾದ್ರೂ ಹಾಕಿದ್ದಾನಾ ಅಥವಾ ರಾತ್ರಿ ಹಾಕಿದ್ದು ಇನ್ನೂ ಮತ್ತು ಇಳಿದಿಲ್ವಾ?” ತನ್ನಲ್ಲಿಯೇ ಅಚ್ಚರಿಗೊಂಡಳು. ಛೇ ಛೇ, ಸೂರಜ್ ಹಾಗೆಲ್ಲ ಡ್ರಿಂಕ್ಸ್ ಮಾಡಲ್ಲ. ರಾತ್ರಿ ನಿದ್ದೆ ಮಾಡಿಲ್ಲವೇನೋ? ನಿದ್ದೆ ಸರಿಯಾಗಿಲ್ಲದೆ ಇದ್ರೆ ಹೀಗೇ ಆಗೋದು ಎಂದುಕೊಂಡು ತನ್ನ ಕೆಲಸದಲ್ಲಿ ಮುಳುಗಿಹೋದಳು. ಎಲ್ಲಾ ಮುಗಿಸುವಷ್ಟರಲ್ಲಿ ಮಧ್ಯಾಹ್ನವಾಗಿತ್ತು. ಬರೆದು ಬರೆದು ಕೈಬೆರಳುಗಳು ನೋಯುತ್ತಿದ್ದವು. ಒಂದೇ ದಿನದಲ್ಲಿ ಮುಗೀಬೇಕು. ನಿಧಾನವಾಗಿಯೇ ಮುಗಿಸಿದರೆ ಆಗಲ್ವಾ ಅಂತ ವೆಂಕಟೇಶ್‌ ಬಯ್ಯುತ್ತಿದ್ದರೂ ಬೇಗ ಮಾಡಿ ಮುಗಿಸಿದರೆ ಅವಳಿಗೆ ಸಮಾಧಾನ. ಎಲ್ಲವನ್ನೂ ಎತ್ತಿಟ್ಟು ಹೊರಬಂದಳು. ಮಿಂಚುವನ್ನು ಇವತ್ತು ಮಾತಾಡಿಸಿಯೇ ಇಲ್ಲ. ಪಾಪ, ಮಗು ಎಷ್ಟು ಮಿಸ್ ಮಾಡಿಕೊಳ್ಳುತ್ತ ಇದೆಯೋ ಏನೋ? ಮಿಂಚುವನ್ನು ಹುಡುಕಾಡಿದಳು.

ಮಿಂಚು ಸೂರಜ್‌ನ ತೋಳುಗಳಲ್ಲಿ ಆಶ್ಚರ್ಯದ ಮೇಲೆ ಆಶ್ಚರ್ಯ! ಸೂರಜ್‌ ಮಿಂಚುವನ್ನು ಕುಣಿಸುತ್ತಿದ್ದಾನೆ. ಮಿಂಚು ಕಿಲಕಿಲನೆ ನಗುತ್ತಿದ್ದಾಳೆ.

ಬೆರಗಿನಿಂದ ನೋಡಿಯೇ ನೋಡುತ್ತಿದ್ದಾಳೆ. ಮಿಂಚುವನ್ನು ಆಡಿಸುತ್ತಾ ಮೈಮರೆತಿದ್ದಾನೆ ಸೂರಜ್, ಏನಾಗಿದೆ ಇವನಿಗೆ? ಯಾಕೆ ಇಷ್ಟೊಂದು ಸಂತೋಷವಾಗಿದ್ದಾನೆ? ಅರ್ಥವಾಗದೆ ಕಣ್ಣರಳಿಸಿ, ದಿಟ್ಟಿಸುತ್ತಿದ್ದಾಳೆ.

ಇತ್ತ ತಿರುಗಿದ ಸೂರಜ್ ಅವಳನ್ನು ಕಂಡು ಹತ್ತಿರ ಬಂದ. “ಏನಮ್ಮಾ, ಈ ಮಿಂಚು ಹೇಗೆ ಆಡ್ತಾಳೆ? ಇವಳ ಜತೆ ಆಟ ಆಡ್ತಾ ಇದ್ರೆ ಹೊತ್ತು ಹೋಗೋದೇ ಗೊತ್ತಾಗೋದಿಲ್ಲ. ಹೋಗು, ನಿಮ್ಮಮ್ಮನ ಹತ್ತಿರ” ಎಂದು ಮಿಂಚುವನ್ನು ಅವಳೆಡೆ ಚಾಚಿದ.

“ಅಮ್ಮಾ ಏನಿದು ಹೊಸ ಪ್ರಯೋಗ?” ಚಕಿತಳಾದಳು, “ಮತ್ತೆ ಅಮ್ಮ ಅಲ್ವಾ? ನೀನು ಅವಳಿಗೆ ಜೀವದಾನ ಮಾಡಿದೋಳು, ಮಿಂಚು ನಿನ್ನ ಮಾನಸಪುತ್ರಿ ತಾನೇ? ನಿನ್ನಿಂದಲೇ ಅವಳು ಇಲ್ಲಿ ಉಳಿಯೋಕೆ ಸಾಧ್ಯವಾಗಿದ್ದು” ಮಿಂಚುವಿನ ಕೆನ್ನೆ ಹಿಂಡುತ್ತ ಹೇಳಿದ. “ನಿಜ, ಮಿಂಚು ನನ್ನ ಮಾನಸಪುತ್ರಿ” ಒಪ್ಪಿದಳು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮೋಹನ್ಮೋಹ ಮಾಯಾಲೋಕ
Next post ಹೂವಿನ ಸಾವು

ಸಣ್ಣ ಕತೆ

 • ಸ್ವಯಂಪ್ರಕಾಶ

  ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…

 • ದೊಡ್ಡವರು

  ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

 • ಆನುಗೋಲು

  ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

 • ಪತ್ರ ಪ್ರೇಮ

  ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…

 • ಯಿದು ನಿಜದಿ ಕತೀ…

  ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…