ಅಂದು ಇದೇ ರೀತಿಯ ರಾತ್ರಿ; ಗುಡುಗು-ಮಿಂಚುಗಳ ಮಧ್ಯೆ ಸೀಳಿಬರುವ ಬಿರುಗಾಳಿ. ಇವುಗಳ ಅಬ್ಬರ ಕಡಿಮಯಾದಂತೆ ರೊಯ್ಯೆಂದು ಸುರಿದ ಮಳೆ. ಮಳಯೆ ಮಧ್ಯೆ ಮಲಗಿದ ಹಟ್ಟಿ. ಸುತ್ತ ಬೆಟ್ಟದ ಮೇಲಿಂದ ಹರಿಯುವ ಝರಿಯ ಸದ್ದು. ಮಳೆ ಕಡಿಮೆಯಾದ ಸೂಚನೆ. ಎಚ್ಚರವಾಗೇ ಇದ್ದ ಶಬರಿ. ಮೂಲೆಯಲ್ಲಿ ಮುದುರಿಕೊಂಡಿದ್ದ ತಿಮ್ಮರಾಯಿ.

ಯಾರೋ ನಡೆದು ಬಂದ ಸಪ್ಪಳ.

ಶಬರಿ ಕೇಳಿಸಿಕೊಂಡಳು. ಯಾರಿರಬಹುದು? ಮಳ ಕಡಿಮೆಯಾಯಿತೆಂದು ಹುಚ್ಚೀರ ತನ್ನ ಗುಡಿಸಲಿಂದ ಇಲ್ಲಿಗೆ ಬರುತ್ತಿರಬಹುದೆ?

ಕಾಲ ಸಪ್ಪಳ ಬಾಗಿಲ ಬಳಿ ನಿಂತಿತು.
ಕ್ಷಣಹೊತ್ತು ಸದ್ದೇ ಇಲ್ಲ.
ಶಬರಿ ಕಿವಿ ನಿಮಿರಿ ಕೂತಳು.
ಸ್ವಲ್ಪ ಹೂತ್ತಿನ ನಂತರದಲ್ಲಿ ಬಾಗಿಲು ಬಡಿದ ಸದ್ದು.
“ಯಾರು?” – ಶಬರಿ ಕೇಳಿದಳು.
ಉತ್ತರವಿಲ್ಲ.
“ಯಾರದು?” – ಮತ್ತೆ ಕೇಳಿದಳು- ಸ್ವಲ್ಪ ಜೋರಾಗಿ. ಮಾತಿಲ್ಲ, ಕತಯಿಲ್ಲ.

ಶಬರಿಗೆ ಸ್ವಲ್ಪ ಗಾಬರಿ. ಅಪ್ಪ ತಿಮ್ಮರಾಯೀನ ಏಳಿಸಿದಳು. “ಯಾರೊ ಬಾಗಿಲು ಬಡೀತಾ ಅವ್ರೆ-ಕೇಳಿದ್ರೆ ಮಾತೇ ಆಡ್ತಿಲ್ಲ”- ಎಂದಳು. “ಅಂಗಾರೆ ಆ ಮೂಗ, ಹುಚ್ಚೀರ್‍ನೆ ಇರ್‍ಬೇಕು. ಮಾತು ಬಂದ್ರಲ್ವ ಮಾತಾಡಾದು. ಬಾಗ್ಲು ತಗಿ” ಎಂದ ತಿಮ್ಮರಾಯಿ.

ಶಬರಿಗೆ ಇದು ಸರಿ ಅನ್ನಿಸಿತು. ಬಂದು ಬಾಗಿಲು ತೆಗೆದಳು.

ಆಶ್ಚರ್ಯ! ಬಾಗಿಲಲ್ಲಿ ನಿಂತ ವ್ಯಕ್ತಿ ಹುಚ್ಚೀರನಲ್ಲ! ಯಾರೋ ಗೊತ್ತಿಲ್ಲ! ಹೂಸ ಮುಖ. ಯುವಕ; ಷರಟು ಪ್ಯಾಂಟು ಹಾಕಿದ್ದ. ಬಗಲಲ್ಲಿ ಒಂದು ಚೀಲ. ಥೇಟ್‌ ಚಂದ್ರನ ಇನ್ನೊಂದು ರೂಪ. ಚಂದ್ರನಿಗಿಂತ ಹೂಳಪು ಮುಖ.

ಶಬರಿಗೆ ಏನು ಮಾಡಬೇಕೆಂದು ಗೊತ್ತಾಗದೆ “ಯಪ್ಪೊ ಯಪ್ಪೊ” ಎಂದು ಕೂಗಿದಳು.

“ಏನವ್ವ ಅದು” ಎಂದು ತಿಮ್ಮರಾಯಿ ಎದ್ದು ಬಂದು ನೋಡಿದ; ಆತನಿಗೂ ಅಚ್ಚರಿ. ಬಂದಿದ್ದ ವ್ಯಕ್ತಿ ಕೇಳಿದ – “ಒಳಗೆ ಬರಬಹುದೆ?”

“ಅಲ್ಲಪ್ಪ ಇಂಗ್‌ ಸರ್‌ವೂತ್ನಾಗೆ ಬಂದು ಬರ್‌ಬವ್ದೆ ಅಂದ್ರೆ? ಈಟಕ್ಕೂ ನೀನ್‌ ಯಾರು, ಏನ್ಕತೆ”? – ತಿಮ್ಮರಾಯಿ ಕೇಳಿದ.

“ಗಾಬರಿ ಆಗ್‌ಬೇಡಿ. ನಾನು ನಿಮ್ಮ ಆಶ್ರಯ ಕೇಳಿ ಬಂದಿದ್ದೀನಿ.”
-ಆತ ನಸುನಗುತ್ತ ಹೇಳಿದ. ಮತ್ತೆ “ಒಳಗ್‌ ಬರ್‍ಲಾ?” ಎಂದ.
“ಇದೊಳ್ಳೆ ಚಂದಾಗೈತೆ! ಇಂಗ್‌ ಇದ್‌ಕಿದ್ದಂಗೆ ಕೇಳಿರೆ ಏನಪ್ಪ ಯೇಳಾದು? ಒಳ್ಳೆ ಕಾರ್ ಕತ್ತಲಿನಾಗೆ ಸೂರ್ಯ ವುಟ್ದಂಗಾತು ನೋಡು” ಎಂದ ತಿಮ್ಮರಾಯಿ.
ಕೂಡಲೇ ಆ ಯುವಕ ಹೇಳಿದ – “ನನ್ ಹೆಸರು ಸೂರ್ಯ.”
ಶಬರಿಯಲ್ಲಿ ಮಿಂಚು.

ಚಂದ್ರ, ಮದುವೆಯ ದಿನ ಈತನಿಗಾಗಿಯೇ ಕಾದಿದ್ದು. ಆಗ ಕಡೆಗೂ ಬಾರದ ಈತ ಈಗ ಬಂದಿದ್ದಾನೆ. ಶಬರಿ ಈತನನ್ನು ಒಳಗೆ ಕರೆಯಬೇಕಂದು ಕೊಂಡಾಗಲೇ ಆತ ಮತ್ತೆ ಹೇಳಿದ- “ನಾನು ಚಂದ್ರನ್ ಗೆಳೆಯ”.

“ಗೊತ್ತಾತು. ಗೊತ್ತಾತು. ಒಳೀಕ್ ಬರ್ರಿ” ಎಂದು ಶಬರಿ ಕರೆದಳು. ಇಷ್ಟು ಹೂತ್ತು ಹೊರಗೆ ನಿಲ್ಲಸಿ ತಪ್ಪು ಮಾಡಿದ ಭಾವ ಅವಳಲ್ಲಿತ್ತು. ಸೂರ್ಯ ಒಳಬರುತ್ತ ಹೇಳಿದ- “ನಂಗೆ ಎಲ್ಲಾ ವಿಷಯ ಗೊತ್ತಾತು. ನಿಮ್ಗೆ ಹೀಗಾಗ್‌ಬಾರ್‍ದಿತ್ತು.”

ಆಗ ತಿಮ್ಮರಾಯಿ “ಅಯ್ಯೊ ಅವೆಲ್ಲ ಇವಾಗ್ಯಾಕಪ್ಪ ಮಾತು. ಬಾ ಕುಂತ್ಕ” ಎಂದು ಆ ಮಾತು ಮರೆಸಿ “ಶಬರವ್ವ, ಒಸಿ ವಲ್ಲಿ ಬಟ್ಟೆ ತಂದ್ಕೊಡವ್ವ, ಬಂದವ್ರೆ ನೆತ್ತಿ ಒರಿಸ್ಕಂಬ್ಲಿ” ಎಂದ.

ಶಬರಿ ವಲ್ಲಿಬಟ್ಟೆಯನ್ನು ತಂದುಕೊಟ್ಟಳು.

“ವಲ್ಲಿ ಬಟ್ಟೆ ಅಂದ್ರೆ ಏನೋ ಆಂದ್ಕೊಂಡಿದ್ದೆ. ಟವಲ್ಲಾ?” ಎಂದು ಸೂರ್ಯ ನಗುತ್ತ ಅದರಲ್ಲಿ ತಲೆ ಒರೆಸಿಕೂಂಡ.

“ಬಟ್ಟೆ ಎಲ್ಲ ನೆಂದೈತ, ಆಕಡೆ ವೋಗ್‌ ಬಿಚ್ಚಾಕಪ್ಪ, ಪರವಾಗಿಲ್ಲ” ಎಂದ ತಿಮ್ಮರಾಯಿ.

ಸೂರ್ಯ, ರೂಮಿನಂತಿದ್ದ ಜಾಗಕ್ಕೆ ಹೋಗಿ ಬಟ್ಟೆ ತೆಗೆದ. ತಲೆ ಮೈ ಒರೆಸಿಕೊಳ್ಳತೂಡಗಿದ. ಶಬರಿ ಅಲ್ಲಿಗೇ ಬಂದಳು. ಸೂರ್ಯ ಮೈಮೇಲೆ ಟವಲನ್ನು ಹಾಕಿಕೂಂಡ.

“ಏನಾರ ತಿನ್ನಾಕ್ ಕೊಡ್ಲ” ಎಂದು ಕೇಳಿದಳು.

“ಹಸಿವಂತೂ ಆಗಿದೆ. ಏನಾದ್ರು ಕೂಟ್ರೆ ನಿನಿಗ್‌ ಪುಣ್ಯ ಬರುತ್ತೆ ಶಬರಿ?” ಎಂದು ಸೂರ್ಯ ನಸುನಕ್ಕ.

“ಓ…. ನನ್‌ ಯೆಸ್ರೂನು ಗೊತ್ತ ನಿಮ್ಗೆ?”
“ಚಂದ್ರ ನನ್ನ ಗಳೆಯ ಅಂದಮೇಲೆ ಎಲ್ಲಾ ಗೊತ್ತಿರಬೇಕಲ”
“ಚಂದ್ರ ನಿಮಿಗ್‌ ತುಂಬಾ ದಿನದಿಂದ ಗೊತ್ತಾ?”
“ಹಾಗೇನಿಲ್ಲ; ತೀರಾ ಇತ್ತೀಚಿನ ಪರಿಚಯ.”

ಅಷ್ಟರಲ್ಲಿ ತಿಮ್ಮರಾಯಿ “ಬರೀ ಮಾತ್ನಾಗೇ ವೊಟ್ಟೆ ತುಂಬಿಸ್‌ಬ್ಯಾಡ. ಏನಾರ ಹಿಟ್ಟೊ, ರೂಟ್ಟೀನೋ ಮಾಡವ ಬ್ಯಾಗ್‌ ಬ್ಯಾಗ” ಎಂದ.

ಶಬರಿ “ಆಯ್ತಪ್ಪ” ಎಂದು ಒಲೆ ಮುಂದಕ್ಕೆ ಬಂದಳು.

ಅಷ್ಟರಲ್ಲಿ ಹುಚ್ಚೀರ ಮೆಲ್ಲನೆ ಒಳಗೆ ಬಂದ. ತಿಮ್ಮರಾಯಿ ಆತನ ಪರಿಚಯ ಹೇಳಿದ.

“ಇವ್ನು ಹುಚ್ಚೀರ ಅಂಬ್ತ. ಮಾತ್‌ ಬರಲ್ಲ. ಮೂಗ.”

ಸೂರ್ಯ, ಹುಚ್ಚೀರನ ಹತ್ತಿರಬಂದು ಅತನ ಬೆನ್ನು ತಟ್ಟಿದ. ಹುಚ್ಚೀರನಿಗೆ ಖುಷಿಯಾಯಿತು. ಈ ಸರ್ಶದಲ್ಲಿ ಏನೋ ಸುಖ ಇತ್ತು. ಯಾಕೆಂದರೆ ಅದರ ಹಿಂದೆ ಪ್ರೀತಿಯಿತ್ತು. ಸೂರ್ಯ “ಚನ್ನಾಗಿದ್ದೀಯೇನಪ್ಪ” ಎಂದು ಕೇಳಿದಾಗ ಹುಚ್ಚೀರನ ಕಣ್ಣು ತುಂಬಿ ಬಂತು. ಈ ಮನುಷ್ಯ ಎಷ್ಟು ಒಳ್ಳೆಯವನು ಅಂತ ಒಳಗೇ ಆನಂದಪಟ್ಟ. ಸೂರ್ಯ ಕೂತುಕೊಳ್ಳುತ್ತ ತಿಮ್ಮರಾಯೀನ ಕೇಳಿದ-

“ಅಲ್ಲಜ್ಜ, ನಿನ್ ಮಗಳಿಗೆ ಶಬರಿ ಅಂತ ಯಾಕ್‌ ಹಸರಿಟ್ಟ್?”

“ಅಯ್ಯೊ ಯಸರಿಡಾಕೆಲ್ಲ ಏನಾರ ನೆವ ಏನಿರ್‌ತೈತಪ್ಪ. ಆ ಸ್ಯಬರಜ್ಜೀನೂ ನಮ್ಮಂಗೆ ಗುಡುಸ್ಲಾಗಿದ್ದಲು; ಕಾಡು ಮೇಡು, ಬೆಟ್ಟ ಗುಡ್ಡ ಅಲ್ಕಂಡಿದ್ಲು. ಅವಳೂ ನಮ್ಮೋಳೆ. ಅದ್ಕೆ ಅದೇ ಯಸರಿನಾಗ್ ಕರ್‍ಯ್ಕಾಕ್ ಸುರುಮಾಡ್ದೆ; ಎಲ್ಲಾರೂ ಅಂಗೇ ರೂಡಿ ಮಾಡ್ಕಂಡ್ರು ಆಟೇಯ” ಎಂದು ತಿಮ್ಮರಾಯಿ ಹೇಳುವ ವೇಳಗೆ ಶಬರಿ ತಿನ್ನಲು ತಂದುಕೂಟ್ಟಳು.

ಸೂರ್ಯನಿಗೆ ಹಸಿವಾಗಿತ್ತು. ಚನ್ನಾಗಿ ತಿಂದು ತೇಗಿದ. ಆನಂತರ ಅತ್ತಿತ ದೃಷ್ಟಿ ಹಾಯಿಸಿ “ನಾನು ಒಂದಷ್ಟು ದಿನ ಇಲ್ಲೇ ಇರಾನ ಅಂತ ಬಂದಿದ್ದೀನಿ. ಆಗಬಹುದಾ?” ಎಂದು ಕೇಳಿದ.

ತಿಮ್ಮರಾಯಿಗೆ ತಕ್ಷಣ ಉತ್ತರ ಕೂಡಲಾಗಲಿಲ್ಲ. ಶಬರಿಯ ಕಡೆ ನೋಡಿದ. ಶಬರಿಗೂ ಮಾತು ಹೂರಡಲಿಲ್ಲ. ಇಂತಹ ವಿಷಯಗಳಲ್ಲಿ ಅಪ್ಪನೇ ಒಂದು ತೀರ್‍ಮಾನಕ್ಕೆ ಬರಬೇಕು ಅಂತ ಅವಳು ಅಂದುಕೂಂಡು ಸುಮ್ಮನೆ ನಿಂತಿದ್ದಳು. ಹುಚ್ಚೀರ ಏನು ತಾನೆ ಹೇಳಬಲ್ಲ? ಮಿಕಿ ಮಿಕಿ ನೋಡುತ್ತಿದ್ದ. ಸ್ವಲ್ಪ ಸಾವರಿಸಿಕೊಂಡು ತಿಮ್ಮರಾಯಿ ಕೇಳಿದ-

“ಅಲ್ಲಪ್ಪ, ನೀನೂ ನಮ್‌ ಚಂದ್ರ ಗೆಣಕಾರ್ರು ಅಂಬಾದ್ನ ಸುಮ್ ಸುಮ್ಕೆ ಯಂಗಪ್ಪ ನಂಬಾದು?”

ಈ ಮಾತಿನಿಂದ ಸೂರ್ಯನಿಗೆ ಬೇಸರವಾಗಬಹುದೆಂದು ಶಬರಿ ಭಾವಿಸಿದಳು. ಆದರೆ ಸೂರ್ಯ ನಸುನಗ್ತಾ ತನ್ನ ಬಗಲು ಚೇಲದೂಳಗೆ ಏನೋ ಹುಡುಕಿದ. ಕಡಗೆ ಒಂದು ಫೋಟೋ ತಗೆದು ತಿಮ್ಮರಾಯಿಗೆ ತೋರಿಸಿದ.

“ಇಲ್ನೋಡಜ್ಜ. ಈ ಫೋಟೊ ನೋಡು. ನಿಮ್‌ ಚಂದ್ರ-ನಾನು ಒಟ್ಟಿಗೆ ಇದ್ದೀವಿ.” ಎಂದು ಹೇಳುತ್ತಿದ್ದಂತೆ ತಿಮ್ಮರಾಯಿ ಅದನ್ನು ನೂಡಿ “ಸುಮ್ಕೆ ಅಂಗಂದೆ ಕಣಪ್ಪ, ಬ್ಯಾಸ್ರ ಮಾಡ್ಕಬ್ಯಾಡ” ಎಂದ.

“ಇದ್ಕೆಲ್ಲ ಬ್ಯಾಸ್ರ ಮಾಡ್ಕಂಡ್ರೆ ನಮ್ ಕೆಲ್ಸ ಮಾಡಾಕಾಗುತ್ತೇನಜ್ಜ?” ಎಂದು ಸೂರ್ಯ ಫೋಟೋನ ಮತ್ತೆ ಬಗಲು ಚೀಲಕ್ಕೆ ಸೇರಿಸಿದ.

“ನಿನ್ ಕೆಲ್ಸ ಏನಪ್ಪ?”- ತಿಮ್ಮರಾಯಿ ಕೇಳಿದ.
“ಹೀಗೇ ಜನಗಳ ಜೊತೆ ಬೆರೆಯೋದು. ಅವರಿಗಾಗಿ ದುಡ್ಯೋದು.”
“ಅದೂ ಒಂದ್ ಕೆಲ್ಸಾನ?” – ತಿಮ್ಮರಾಯಿ ಚಕಿತನಾಗಿ ರಾಗ ಎಳೆದ.

“ನಮಗೆ ಇದೇ ಮುಖ್ಯವಾದ ಕೆಲ್ಸ ಕಣಜ್ಜ. ನಿಮ್ಗೆಲ್ಲ ಒಳ್ಳೇದಾದ್ರೆ ಅದ್ಕಿಂತ ಬೇರೆ ಭಾಗ್ಯ ಯಾವುದಿದೆ ಹೇಳು. ಬಡವರ ಬಾಳಿಗ್ ಬೆಳಕು ಬರ್‍ಬೇಕು ಕಣಜ್ಜ ಬೆಳಕು. ಈಗ ನೋಡು, ನೀವು ಬುಡಕಟ್ನೋರು ಬೆವರು ಬಸೀತೀರಿ; ಎರಡು ಹೊತ್ತಿಗೆ ತಿನ್ನೋಕ್ ಸಿಕ್ಕಿದ್ರೆ ಸಾಕು ಅಂತ ಜೀವನ ಇಡೀ ದುಡೀತಾನೇ ಇರ್‍ತೀರಿ. ಇನ್ನೂ ಒಳ್ಳೇ ದಿನ ಬರುತ್ತೆ ಅಂತ ಸಾಯೋವರ್‍ಗೂ ಕಾಯ್ತಾನೇ ಇರ್‍ತೀರಿ…”

“ಆ ಸ್ಯಾಬರಜ್ಜೀನೂ ಕಾಯ್ತಾನೇ ಇದ್ಲಲ್ಲ. ಕಡಗೆ ಆಯಪ್ಪ ಸೀರಾಮ ಬಂದೇ ಬಿಟ್ನಲ್ಲ!”

“ಈಗ ಒಳ್ಳೇದಿನ ತನಗೆ ತಾನೇ ಬರಲ್ಲಜ್ಜ. ನಾವು ಬರೋಹಾಗ್ ಮಾಡ್‍ಬೇಕು. ನಿನ್‌ ಮಗಳು ಶಬರಿ ಅಜ್ಜಿ ಆಗೋಕ್ ಮುಂಚೆ ಒಳ್ಳೇ ದಿನ ಬರ್‍ಬೇಕು ಗೊತ್ತಾ?”

“ನಮ್ಗು ಅವ್ರಿವ್ರ್‌ ಕಾಲ್‌ಕಟ್ಟಿ ಸಾಕಾಗೋಗೈತೆ ಕಣಪ್ಪ. ನೋಡಾನ ಯಾವತ್ತು ಒಳ್ಳೇದಿನ ಕಾಣ್ತೀವೊ ಅಂಬ್ತ. ಇವಾಗೇನಪ, ನೀನಿಲ್ಲೆ ಎಲ್ಡ್ ದಿನ ಇರ್‍ತೀಯ; ಆಟೆ ತಾನೆ?”

“ಎರ್‍ಅಡು ದಿನಾನೇ ಇರ್‍ತೀನೊ ಎಷ್ಟು ದಿನ ಇರ್‍ತೀನೊ ಗೊತ್ತಿಲ್ಲ ಕಣಜ್ಜ. ನಿಮ್ ಚಂದ್ರ ಬುಡಕಟ್ಟಿನೋರ್‍ಗೆ ಒಳ್ಳೇದು ಮಾಡ್ಬೇಕು ಅಂತ ನನ್ ಹತ್ರ ಹೇಳ್ತಾನೇ ಇದ್ದ. ಈಗ ಅವ್ನ್ ಆಸೆ ಈಡೇರ್‍ಸೋಕೆ ಏನಾದ್ರು ಮಾಡೋಣ ಅಂತಿದ್ದೀನಿ.”

“ಏನ್ ಮಾಡ್ತೀಯೊ ಏನ್ ಕತೆಯೊ ಎಲ್ಡ್ ದಿನ ನಮ್ಮ ಜೋಪಡೀನಾಗೇ ಇರು. ಆಮ್ಯಾಕ್ ನೋಡಾನ.”

ಆಗ ಹುಚ್ಚೀರ ತನ್ನ ಗುಡಿಸಲಲ್ಲೇ ಇರಲೆಂದು ಸನ್ನೆ ಮಾಡಿ ತಿಳಿಸಿದ.

ಶಬರಿ ಕೂಡಲೇ ಹೇಳಿದಳು-

“ಏನು? ನಿನ್ನ ಜೋಪಡಿನಾಗಿರ್‍ಬೇಕ? ಮದ್ಲೇ ಮುರುದೋಗೈತೆ. ಅಲ್ಲೇನು ಬ್ಯಾಡ. ಅಪ್ಪಯ್ಯ ಯೇಳ್ದಂಗೆ ಇಲ್ಲೇ ಇರ್‍ಲಿ. ಆಮ್ಯಾಕ್ ನೋಡಾನ.”

ಹುಚ್ಚೀರ ನಿರಾಶಯಿಂದ ಸುಮ್ಮನಾದ. ಸೂರ್ಯ ಸಮಾಧಾನ ಹೇಳಿದ. “ನಿನ್ ಗುಡಿಸ್ಲೀಗೂ ಬರ್ತೀನಿ ಹುಚ್ಚೀರ. ನಂಗೇನ್ ಸ್ವಂತ ಮನೆ ಇಲ್ಲ. ಮಠ ಇಲ್ಲ. ಎಲ್ಲರ ಮನೇನೂ ನನ್ ಮನೆ ಅಂದ್ಕಂಡ್ರಾಯ್ತು. ಎರಡು ದಿನ ಈ ಗುಡಿಸ್ಲು. ಆಮೇಲರಡು ದಿನ ನಿನ್ ಗುಡಿಸ್ಲು. ಇಲ್ಲ ಅಂದ್ರೆ ಆ ಕಡೆ ದೇವರ ಕಟ್ಟೆ ಇದ್ಯಲ್ಲ ಅದ್ರ ಮೇಲೆ ಆರಾಮವಾಗ್‌ ಮಲಗ್ತೀನಿ. ಆ ದೇವ್ರೇ ನನ್ ಕಾವಲು ಕಾಯ್ಬೇಕು” ಎಂದು ಸೂರ್ಯ ನಕ್ಕ.

ತಿಮ್ಮರಾಯಿಗೆ ದೇವರ ಬಗ್ಗೆ ಹಗುರವಾಗಿ ಮಾತಾಡಿದ್ದು ಸರಿಬರಲಲ್ಲ. “ಅಂಗಾರ್ ನೀನೇನು ದ್ಯಾವ್ರಿಗಿಂತ ದೊಡ್ಡಾನ? ದ್ಯಾವ್ರು ನಿನಗ್ ಕಾವಲಿರ್‍ಬೇಕು ಅಂದ್ರೇನು ಉಡುಗಾಟಾನ? ಯಾಕೊ ನಿನ್ ಮಾತು ಸರ್‌ ಬರಾಕಿಲ್ಲ ಬಿಡು” ಎಂದು ಹೇಳೇಬಿಟ್ಟ.

“ಇಷ್ಟಕ್ಕೆಲ್ಲ ಬೇಜಾರಾದ್ರೆ ಹೇಗಜ್ಜ? ಸುಮ್ನ ತಮಾಷೇಗ್ ಹಾಗಂದೆ. ನಾನು ಯಾರ್‍ಗೂ ದೊಡ್ಡೋನಲ್ಲ. ಚಿಕ್ಕೋನೂ ಅಲ್ಲ. ನಾನು, ನೀನೂ ಈ ಹುಚ್ಚೀರ ಎಲ್ಲಾ ಒಂದೇ ಕಣಜ್ಜ.” ಎಂದು ಸೂರ್ಯ ಸಮಜಾಯಿಷಿ ನೀಡಿದಾಗ, ಇನ್ನು ಮಾತು ಮುಂದುವರೆಯುವುದು ಬೇಡವೆಂದು ತಿಳಿದ ಶಬರಿ “ಏಟೋತ್ನಿಂದ ನಡ್ಕಂಡ್ ಬಂದ್ರೊ ಏನೋ; ಅದೂ ಈ ಗಾಳಿಮಳೇನಾಗ ಒಬ್ರೇ ದಣಿದು ಬಂದಿವ್ರಿ, ಬರ್ರಿ ಮಲೀಕಳ್ರಿ” ಎಂದಳು.

“ಮಾತಿಗ್ ಮದ್ಲು ಇರ್‍ತೈತೆ ವೊರ್‍ತು ಕೊನೆ ಇರಾಕಿಲ್ಲ. ವೋಗಪ್ಪ ಅಲ್ ಮಲೀಕ. ಇನ್‌ಮ್ಯಾಕ ಆ ಜಾಗಾನೇ ನಿಂದು ಅಂಬ್ತ ತಿಳ್ಕ” ಎಂದು ತಿಮ್ಮರಾಯಿ ರೂಮಿನಂತಿದ್ದ ಭಾಗವನ್ನು ತೋರಿಸಿದ. ಅದು ಗುಡಿಸಲಿನ ಪಡಸಾಲೆಗೆ ಹೊಂದಿಕೊಂಡಿದ್ದ ಪ್ರತ್ಯೇಕ ಭಾಗ. ಆ ಕಡಗೆ ಹೋಗಲು ಏಳುತ್ತ ಸೂರ್ಯ ಕೇಳಿದ-

“ಊರಿನ ಜನ ಹೀಗೆಲ್ಲ ಒಳ್ಗಡ ಜಾಗ ಕೊಡ್ತಿದ್ರೇನಜ್ಜ! ಹೊರ್‍ಗಡೆ ಅಂಗಳದಾಗೊ ಹಜಾರ್‌ದಾಗೊ ಮಲಗು ಅನ್ನೋರು.”

“ನಿಂದೊಳ್ಳೆ ಮಾತಾತು. ನಮ್ತಾವೇನೈತೆ ನೀನ್ ವೊತ್ಕಂಡೋಗ ಅಂತಾದು. ಈಟಕ್ಕೂ ನೀನು ನಮ್ಮಂಗೇ ಒಬ್‌ ಮನ್ಸ” ಎಂದು ತಿಮ್ಮರಾಯಿ ಸರಳವಾಗಿ ತನ್ನ ತತ್ವವನ್ನು ಹೇಳಿದ.

“ಈ ಸಮಾಜ ನಿಮ್ಮನ್ನೂ ಮನುಷ್ಯರು ಅಂತ ತಿಳ್ಳೂಂಡ್ರೆ ಎಷ್ಟು ಚೆನ್ನಾಗಿರುತ್ತೆ” ಎಂದು ಸೂರ್ಯ ಶಬರಿಯ ಕಡೆ ನೋಡಿದ.

ಶಬರಿಯಲ್ಲಿದ್ದ ಸಂಕಟ ಸಿಟ್ಟಾಗಿ ಹೂರಬಂತು.

“ನಮ್ಮನ್ನ ಮನುಸ್ರು ಅಂಬ್ತ ತಿಳ್ಕಮಾಕೆ ಮದ್ಲು ಆ ದೊಡ್‌ಜನ ಮನುಸ್ರಾಗಿರ್‍ಬೇಕಲ್ಲ? ಅವ್ರಿಗೆ ನಾವ್‌ ಕಾಲಕಸಕ್ಕಿಂತ ಕಡೆ. ಆ ಚಂದ್ರ ಸತ್ತಾಗ ಈ ಹುಚ್ಚೀರನ್ನ ದನಕ್ ಬಡ್ದಂಗ್ ಬಡುದ್ರು.”

ಶಬರಿಗೆ ಇಷ್ಟು ತಿಳುವಳಿಕೆ ಇದೆ ಅಂತ ಸೂರ್ಯನಿಗೆ ಅನ್ನಿಸಿರಲಿಲ್ಲ. ಆಕೆ ಹೀಗೆಲ್ಲ ಮಾತಾಡಬಹುದು ಅಂತ ತಿಮ್ಮರಾಯಿಗೂ ತಿಳಿದಿರಲಿಲ್ಲ. ಅತ ಕೂಡಲೇ ಪ್ರತಿಕ್ರಿಯಿಸಿದ.

“ಯೇ ಆ ವಿಸ್ಯ ಇವಗ್ಯಾತುಕ್ ಬಿಡವ್ವ. ದೊಡ್ಡಾರ್ ಮಾತೆಲ್ಲ ನಮಗ್ಯಾಕೆ?”

“ದೊಡ್ಡೋರು ಅಂಬ್ತ ಕೂಪ್ಪರಿಗೆ ಎಣ್ಣೆ ಕಾಯ್ಸಿ ತಲೆಮ್ಯಾಲ್ ಸುರ್‍ಕಮಾಕಾಗ್ತೈತಾ? ಚಂದ್ರ ದ್ಯಾವರ್‌ ಗುಡೀತಾವ ಯಾಕ್ ಸತ್ನೋ ಏನ್ ಕತ್ಯೊ ಅದಕ್ಕೆ ಈ ಹುಚ್ಚೀರನ್ನ ಹುಚ್‌ನಾಯಿ ತರಾ ಅಟ್ಟಿಸ್ಕಂಡ್‌ ಹೊಡೀಬೇಕಾ?

ಹುಚ್ಚೀರ ಮೈಮುದುಡಿಕೊಂಡು ಕೂತಿದ್ದ.

ನಿಜ; ಚಂದ್ರ ಸತ್ತ ಮೇಲೆ ಹುಚ್ಚೀರನಿಗೆ ಒದೆ ಬಿದ್ದದ್ದು ನಿಜ. ಚಂದ್ರನ ಜೊತೆ ಹುಚ್ಚೀರನೂ ಗುಡಿಯ ಬಳಿ ಬಂದಿದ್ದ ಎಂಬುದೇ ಇದಕ್ಕೆ ಕಾರಣ. ಊರ ಒಡೆಯರು ಈ ಆರೋಪ ಮಾಡಿ ಹಟ್ಟಿಯಲ್ಲಿ ಅಟ್ಟಿಸಿಕೊಂಡು ಹೊಡೆದಿದ್ದರು. “ಯಾಕ್ ಗುಡಿ ಹತ್ರ ಬಂದಿದ್ದೆ?” ಎಂದೆಲ್ಲ ಪ್ರಶ್ನೆಗಳ ಸುರಿಮಳೆ. ಹುಚ್ಚೀರ ಮಾತು ಬಾರದೆ ಏನೆಲ್ಲ ಸದ್ದು ಮಾಡಿ ತಿಳಿಸಿದರೂ ಯಾರೂ ಅರ್ಥಮಾಡಿಕೂಳ್ಳುವ ಪ್ರಯತ್ನ ಮಾಡಲಿಲ್ಲ. ಆತ ಏನು ಹೇಳುತ್ತಾನೆಂಬುದು ಯಾರಿಗೂ ಬೇಕಿರಲಿಲ್ಲ. ಹಟ್ಟಿಗೆ ಬಂದ ಊರ ಒಡೆಯರು “ಹುಚ್ಚೀರನ್ನ ಹಿಡ್ಕಂಡ್ ಬರ್ರಿ” ಎಂದಾಗ ಮರಗಿಡಗಳ ಮಧ್ಯೆ ಓಡಿದ್ದ. ಆದರೆ ತಪ್ಪಿಸಿಕೊಳ್ಳಲಾಗಲಿಲ್ಲ. ಒಡೆಯರ ಭಂಟರು ಹಿಡಿದು ತಂದರು. ಒಡೆಯರು ಒದ್ದರು; ಪೂಜಾರಪ್ಪನೂ ಎರಡು ಕೊಟ್ಟ ತಿಮ್ಮರಾಯಿ ರೇಗಾಡಿದ.

ಶಬರಿಯೊಳಗೆ ಸಂಕಟದ ಸರೋವರ.
ಅಲ್ಲಿರುವ ನೀರಿಗೆ ಬೆಂಕಿಯ ಬಿಸಿ.
ಬಿಸಿಯಲ್ಲಿ ಬೆಂದ ಹೂಗಳು.
ಕರುಕಲಾಗಿ ಕಂಗೆಟ್ಟ ಎಲೆಗಳು.
ಇದ್ದಲ್ಲೇ ಇರುವ ಕುದಿವ ಸರೋವರ.

ಶಬರಿ ಮಾತಾಡಲಿಲ್ಲ. ಚಲಿಸಿದ ನಾಲಗೆ, ಅದುರಿದ ತುಟಿ ಮಾತಾಗಿ ಮೂಡಲಲ್ಲ.

ಸರೋವರ ತಣ್ಣಗಾಯಿತು.
ಹೂಗಳು ಅರಳುವುದು ಮುದುಡುವುದು ನಡದೇ ಇತ್ತು.
ಮಾತಾಗಿ ಮೂಡಲು ಇಷ್ಟು ಕಾಲ ಬೇಕಾಗಿತ್ತು.

ಸೂರ್ಯ ಒತ್ತಾಯಿಸಿ ವಿವರಗಳನ್ನು ಪಡೆದ. ತಿಮ್ಮರಾಯಿಗೆ ಆ ಮಾತು ಮುಂದುವರೆಸುವುದು ಬೇಕಿರಲಿಲ್ಲವಾದ್ದರಿಂದ ಒತ್ತಾಯ ಅನಿವಾರ್ಯವಾಗಿತ್ತು. ಶಬರಿ ಅಳುತ್ತಲೇ ತನಗೆ ತಿಳಿದಷ್ಟು ಹೇಳಿದಳು. ಗುಡಿ ಒಳಗಡೆ ದೇವರ ಕಿರೀಟ ಕಾಣಿಸಿದ್ದು ಬಿಟರೆ ಬೇರೇನೂ ಗೊತ್ತಿಲ್ಲ ಎಂದಳು. ಏನೋ ಗದ್ದಲವಾದಂತಾಗಿ ಮೂದಲೇ ಬೆದರಿ ಕೂತಿದ್ದ ತಾನು ಓಡಿಬಂದ ಸಂಗತಿ ವಿವರಿಸಿದಳು.

“ಅದ್ಸರೀ, ಹುಚ್ಚೀರ ಚಂದ್ರನ ಜೊತ ಗುಡಿ ಹತ್ರ ಹೋಗಿದ್ದ ಅನ್ನೋದ್ಕೆ ಸಾಕ್ಷಿ ಏನು? ಯಾರ್‌ ನೋಡಿದ್ರು?”- ಸೂರ್ಯ ಕೇಳಿದ.

“ಸಾಕ್ಷಿ ಕೇಳಾಕ್ ಯಾರವ್ರೆ ಇಲ್ಲಿ. ಓಡೇರ್‌ ಯೇಳಿದ್‌ ಮ್ಯಾಗೆ ಅದೇ ದ್ಯಾವ್ರ್ ಮಾತಿದ್ದಂಗೆ”- ಶಬರಿ ಅದೇ ಸಂಕಟದಲ್ಲಿ ಹೇಳಿದಳು.

“ಹುಚ್ಚೀರ ಏನ್‌ ಹೇಳ್ತಾನೆ?”

“ಚಂದ್ರ ಸತ್ತಾಗ್ನಿಂದ ಮಂಕ್ ಬಡ್ದ್ ಕುಂತವ್ನೆ. ಅದೇನೊ ಸನ್ನೆ ಮಾಡ್ತಾನೆ. ಒಂದು ತಿಳ್ಯಾಕಿಲ್ಲ. ಅವ್ನೂ ಸರ್‍ಯಾಗ್ ಸನ್ನೆ ಮಾಡಾಕಿಲ್ಲ. ಒಟ್ನಾಗೆ ಅವ್ನು ಮದಿಲ್‌ನಂಗಿಲ್ಲ.”

ಹುಚ್ಚೀರ ಮಂಕು ಬಡಿದಂತೆ ಇದ್ದದ್ದು ನಿಜ. ಆತನಿಗೆ ಏನೋ ಹೇಳುವುದಕ್ಕೆ ಇತ್ತು ಎಂದೆನ್ನಿಸಿದರೂ ಆಗುತ್ತಿಲ್ಲ. ಮಾತಂತು ಮೊದಲೇ ಇಲ್ಲ.

ಇಷ್ಟೆಲ್ಲ ಮಾತುಕತೆ ಆಗುವ ವೇಳೆಗೆ ತಿಮರಾಯಿಯ ತಾಳ್ಮೆ ತಪ್ಪಿತು. “ಸುಮ್ಕೆ ಮಲೀಕಂಡ್ರಾಗಾಕಿಲ್ವ? ಬಂದ್‌ ಬಂದಾನೆ ಏನೇನೊ ಕೇಳ್ತಿದ್ದೀಯಲ್ಲಪ್ಪ. ನಾವೇನ್ ಮರ್‍ವಾದೆ ಇಟ್ಕಂಡ್‌ ಬಾಳ್ವೆ ಮಾಡಾದ್‌ ಬ್ಯಾಡ್ವ?” ಎಂದು ಕೇಳಿಯೇ ಬಿಟ್ಟ.

ಸೂರ್ಯನಿಗೆ ಕಸಿವಿಸಿಯಾಯಿತು. ತಿಮ್ಮರಾಯಿ ಹತ್ತಿರ ಬಂದು ಕೂತು ಹೇಳಿದ-

“ತಪ್ಪಾಯ್ತು ಅಜ್ಜ. ಏನೋ ಮಾತಿಗ್‌ ಮಾತು ಬಂತು ಅಂತ ಇಷ್ಟೆಲ್ಲ ಕೇಳಿ ತಿಳ್ಕೊಂಡೆ. ನಿಮ್‌ ಮರ್‍ಯಾದೆ ಕಳ್ಯೊ ಕೆಲ್ಸ ನಾನ್‌ ಮಾಡಲ್ಲ. ಬೇಸರ ಮಾಡ್ಕೋಬೇಡ.”

“ಆಯ್ತಾಯ್ತು. ಮಲಕಳ್ರಿ”- ಎಂದು ತಿಮ್ಮರಾಯಿ ಶಬರಿಯ ಕಡೆ ನೋಡಿದ.

ಶಬರಿ ಒಂದು ಈಚಲು ಚಾಪೇನ ಸೂರ್ಯನು ಮಲಗಬೇಕಾದ ಜಾಗಕ್ಕೆ ಹಾಕಿದಳು. ಜೊತಗೆ ಒಂದು ಹಳೇ ಕಂಬಳಿ ಇಟ್ಟಳು. ಸೂರ್ಯ ಮಲಗಲು ಹೋದ. ಹುಚ್ಚೀರ ತನ್ನಾರಕ್ಕೆ ತಾನು ಎದ್ದು ಹೋದ.

ರಾತ್ರಿ ಎಷ್ಟು ಹೊತ್ತಾದರೂ ಶಬರಿಗೆ ನಿದ್ದೆ ಬರಲಿಲ್ಲ.

ಇವತ್ತು ಎಷ್ಟೆಲ್ಲ ಮಾತಾಡಿದೆ ಎನ್ನಿಸಿತು. ಗೌರಿಯ ಜೊತ ಅಷ್ಟಿಷ್ಟು ಹಂಚಿಕೊಂಡು ಅತ್ತದ್ದು ಬಿಟ್ಟರೆ ಸಿಟ್ಟಾಗಿ ನುಡಿದದ್ದು ಈಗಲೇ. ಒಳಗಿನ ಉರಿ ಹೊರಗೆ ಹರಿದದ್ದರಿಂದಲೋ ಏನೊ ಸ್ವಲ್ಪ ನಿರಾಳ ಎನಿಸಿತ್ತು. ಆದರೆ ಇವತ್ತು ತಾನೆ ನೋಡಿದ ಹೂಸ ಮನುಷ್ಯನ ಎದುರು ಇಷ್ಟೆಲ್ಲ ಮಾತಾಡಬೀಕಿತ್ತೆ ಅಂತ ಒಮ್ಮೊಮ್ಮೆ ಅನ್ನಿಸಿತು. ಕಡೆಗೆ ಅದರಲ್ಲಿ ತಪ್ಪೇನು ಅಂತ ಸಮಾಧಾನವೂ ಆಯಿತು. ಮಾತು ಬಾರದ ಹುಚ್ಚೀರನನ್ನು ಹೊಡೆದು ಬಡಿದು ನೋಯಿಸಿದ್ದು ತನ್ನೂಳಗೆ ಅದೆಷ್ಟು ದಿನದಿಂದ ಕೆಂಡವಾಗಿ ಕೂತಿತ್ತು! ಒಳಗೇ ಸುಡ್ತಾ ಇದ್ದದ್ದನ್ನ ಬೂದಿ ಆಗೋಕೆ ಮುಂಚೆ ಹೂರಗಾಕಿದ್ದು ತಪ್ಪೇನಲ್ಲ ಎಂದು ತನಗೆ ತಾನೇ ಸಮರ್ಥಿಸಿ ಕೊಂಡಳು-ಮೌನವಾಗಿ.

ಮಾನವೇ ಹೀಗೆ.
ಮಾತಿಗೆ-ಆಡಿದಪ್ಟೇ ಸಾಲುಗಳು.
ಮೌನಕ್ಕೆ-ಲಿಕ್ಕವಿಲ್ಲದಷ್ಟು ಸಾಲುಗಳು.
ಮಾತು-ಆಕಾರ; ಮೌನ-ನಿರಾಕಾರ.
ನಿರಾಕಾರ ಆಕಾರವಾಗಲು ನಡೆಸುವ ಸೆಣಸೇ ಒಂದು ಚರಿತ್ರೆ.

ಶಬರಿಗೆ ಇಷ್ಟೆಲ್ಲ ತಿಳುವಳಿಕೆ ಹೇಗೆ ಬಂದೀತು? ಆದರೆ ಯಾತನೆಯ ಅನುಭವ ಅವಳಿಗಿಂತ ಬೇರೆ ಯಾರಿಗೆ ಅಷ್ಟು ಇದ್ದೀತು!

ಶಬರಿ, ಮಾತಾಗುವ ಮೌನ.
ಹುಚ್ಚೀರ, ಮಾತಾಗದ ಮೌನ
ಶಬರಿಯದು ಮೌನದ ಮಾತು.
ಹುಚ್ಚೀರನದು ಮಾತಿನ ಮಾನ
ಹಾಗಾದರೆ ಸೂರ್ಯ?

ಬಂದ ದಿನವೇ ಕಾಡಿಸಿದ ಸೂರ್ಯನ ನೆನಪಲ್ಲಿ ಶಬರಿ ನಿದ್ದೆ ಹೋದಳು. ಎಂದಿನಂತೆ ಹೊತ್ತಿಗೆ ಮುಂಚೆ ಎದ್ದಳು. ಸೀದಾ ಸೂರ್ಯನಿದ್ದ ಜಾಗಕ್ಕೆ ಬಂದು ನೋಡಿದಳು.

ಅಲ್ಲಿ ಸೂರ್ಯ ಇಲ್ಲ!
ಮಡಿಚಿದ ಕಂಬಳಿ, ಸುತ್ತಿಟ್ಟ ಚಾಪೆ.
ಸೂರ್ಯನೂ ಇಲ್ಲ; ಬಗಲು ಚೀಲವೂ ಇಲ್ಲ!

ಗಾಬರಿಯಾಯಿತು. ಒಳಗೆಲ್ಲೂ ಇಲ್ಲ. ಹೂರಗೆ ಬಂದಳು. ಸುತ್ತೆಲ್ಲ ನೋಡಿದಳು. ಹಟ್ಟಿಯ ಹೂರಬಂದು ದಿಟ್ಟಿಸಿದಳು. ಕಾಣಿಸಲಿಲ್ಲ. ಹಟ್ಟಿಯ ಒಳಗೆ ಬರುವಾಗ ಪೂಜಾರಪ್ಪ ಬೀಡಿ ಸೇದುತ್ತ ಕೂತಿದ್ದ.

“ಗೌರಿ ಏನಾರ ಕೂಡವ್ವ ಕುಡ್ಯಾಕೆ” ಎಂದು ಕೂಗಿ ಹೇಳುತ್ತಿದ್ದ.

ಗೌರಿ, ಪೂಜಾರಪ್ಪನ ಮಗಳು. ಅವಳದೊಂದು ಕತೆ. ಪೂಜಾರಪನ ಕಾಟ ತಾಳಲಾರದೆ ಇವಳ ತಾಯಿ ಮನೆಯನ್ನೇ ಬಿಟ್ಟು ಹೋಗಿದ್ದಳು. ಅದಕ್ಕೆ ಮುಂಚೆ ನಿತ್ಯ ಜಗಳ; ಪೂಜಾರಪ್ಪ ಹೆಂಡತಿಗೆ ಹೂಡೆಯದ, ಬಯ್ಯದ ದಿನಗಳೇ ಇರಲಿಲ್ಲ. ಕುಡಿಯೋದು, ಬಡಿಯೋದು. ಕಡೆಗೆ ರೋಸಿ ಹೋದ ಗೌರಿಯ ತಾಯಿ ತವರು ಮನೆಗೆ ಹೋದಳು. ಬೇರೊಬ್ಬನ ಜೊತೆ ಕೂಡಿಕೆ ಮಾಡಿಕೊಂಡು ಸಂಸಾರ ನಡೆಸತೊಡಗಿದಳು. ಗೌರಿ ಆಗಾಗ್ಗೆ ತಾಯಿಯನ್ನ ನೋಡಲು ಹೋಗುತ್ತಿದ್ದಳು. ಆದರೆ ಪೂಜಾರಪ್ಪ ಅದಕ್ಕೂ ಹರಕತ್ತು ಮಾಡಿದ. “ಅವ್ಳ ಗಾಳಿ ಸೋಕಿದ್ರೆ ನಿನ್‌ ಗ್ವಾಮಾಳ ಕಿತ್ತಾಕ್ ಬಿಡ್ತೀನಿ” ಎಂದು ಹೆದರಿಸಿದ. ಒಂದೆರಡು ಸಾರಿ ಹೊಡೆದ. ಕಡಗೆ ಗೌರಿ, ಕದ್ದೂ ಮುಚ್ಚಿ ತಾಯಿ ಕಡೆ ಹೋಗಿ ಬರುತ್ತಿದ್ದಳು-ಅದೂ ತುಂಬಾ ಅಪರೂಪವಾಗಿ. ಇದಕ್ಕೆ ಶಬರಿಯ ಸಹಾಯ ಇತ್ತು. ಶಬರಿ ಹೇಳಿದಾಗೆಲ್ಲ ಹುಚ್ಚೀರ ಗೌರೀನ ಕರ್‍ಕೊಂಡು ತಾಯಿ ತೋರಿಸ್ಕಂಡು ಬರ್‍ತಿದ್ದ. ಇತ್ತೀಚೆಗೆ ಇದೆಲ್ಲ ಇಲ್ಲವೇ ಇಲ್ಲ ಅನ್ನೋವಷ್ಟು ಅಪರೂಪವಾಗಿದೆ.

ಸೂರ್ಯನ ವಿಷಯವನ್ನ ಈಗಲೇ ಗೌರಿಗೆ ಹೇಳಲೆ ಎಂದುಕೂಂಡಳು- ಶಬರಿ. ಪೂಜಾರಪ್ಪ ಇರುವಾಗ ಬೇಡ ಎಂದುಕೊಂಡು ಹುಚ್ಚೀರನ ಬಳಿ ಬಂದಳು. ಆತನನ್ನು ಸನ್ನೆಯ ಮೂಲಕವೇ ಕೇಳಿದಳು. ಆತನಿಗೆ ಪೂರ್ಣ ಅರಿವಾಗಲಿಲ್ಲ. ಕರಕೂಂಡು ಬಂದಳು. ಸೂರ್ಯ ಮಲಗಿದ್ದ ಜಾಗ ತೋರಿಸಿ- ಈತ ಎಲ್ಲಿ ಹೋದ-ಎಂಬಂತೆ ಸನ್ನೆ ಮೂಲಕ ಕೇಳಿದಳು. ಆತ ತಿಳಿಯದೆಂದು ತನ್ನದೇ ಹಾವಭಾವದಿಂದ ಸ್ಪಷ್ಟಪಡಿಸಿದ.

ಅಷ್ಟರಲ್ಲಿ ತಿಮ್ಮರಾಯಿ ಎದ್ದು ಕೂತಿದ್ದ. ಶಬರಿ ತಕ್ಷಣವೇ ಹೇಳಿದಳು.
“ಯಪ್ಪ, ಸೂರ್ಯ ಕಾಣುಸ್ತಿಲ್ಲ.”
“ನೀರ್‍ಕಡೀಕೆಲ್ಲೊ ವೋಗಿರ್‍ಬೇಕು ಬಿಡು.”
“ನೀರ್‍ಕಡೀಕ್‌ ಈಟೊತ್ತೋಗ್ತಾರ? ಅವ್ರ್ ತಗಂಡ್ ಬಂದಿದ್ರಲ್ಲ ಬಗಲು ಚೀಲ, ಅದೂ ಇಲ್ಲ ಕಣಪ್ಪೊ”

“ಅದಕ್ ನಾನೇನವ್ವ ಮಾಡ್ಲಿ? ಅವ್ನೇನು ಯಾರ್‍ನಾರ ಕೇಳ್ ಬಂದಿದ್ನ? ಇವಾಗ್ಲೂ ಆಟೇ; ಯಾರ್‍ನೂ ಕೇಳ್ ವೋಗಿಲ್ಲ. ಅದಕ್ಕಾಕ್ ತಲೆ ಕೆಡಿಸ್ಕಂಬ್ತೀಯ.”

ಶಬರಿಗೆ ಈ ಮಾತು ಸರಿಬರಲಿಲ್ಲ.

“ನೀನು ರಾತ್ರಿ ಬ್ಯಾಸ್ರ ಮಾಡ್ಕಂಡ್ ಮಾತಾಡ್ದೆ ನೋಡು. ಅದುಕ್ ಅವ್ರಿಗೆ ಬ್ಯಾಸ್ರ ಆಗಿ ವೂಂಟೋದ್ರೊ ಏನೊ?”- ಎಂದಳು.

“ಅದೇನವ್ವ ನಾನ್ ಅನ್‍ಬಾರದ್ದಂದೆ. ನಿಂದೊಳ್ಳೆ ಕತೆಯಾತು” ಎನ್ನುತ್ತಾ ತಿಮ್ಮರಾಯಿ ಹೊರಹೋದ.

ಶಬರಿಗೆ ಸಮಾಧಾನವಾಗಲಿಲ್ಲ. ಬಗಲು ಚೀಲ ಇಲ್ಲದೆ ಇದ್ದುದು ಆಕೆಯ ಆತಂಕಕ್ಕೆ ಕಾರಣವಾಗಿತ್ತು. ಇಲ್ಲೇ ಎಲ್ಲೊ ಹೋಗಿದ್ದರೆ ಚೀಲವನ್ನು ಯಾಕೆ ತೆಗೆದುಕೊಂಡು ಹೋಗುತ್ತಿದ್ದ- ಎಂಬ ಪ್ರಶ್ನೆ ಕೆಣಕುತ್ತಿತ್ತು. ಒಮ್ಮೊಮ್ಮೆ ತಾನ್ಯಾಕೆ ಇಷ್ಟೊಂದು ಆತಂಕಗೊಳ್ಳಬೇಕೆಂದು ಕೇಳಿಕೊಂಡದ್ದೂ ಉಂಟು.

ಕಾರಣಗಳು ಕ್ಷಣಕ್ಷಣಕ್ಕೂ ಸ್ಪಷ್ಟವಾಗುತ್ತಿದ್ದರೆ ಬದುಕು ಎಷ್ಟು ನಿರಾಳವಾಗುತ್ತಿತ್ತು! ಗುಬ್ಬಚ್ಚಿಗೂಡಿನ ಎಳೆಗಳನ್ನು ಸ್ಪಷ್ಟವಾಗಿ ಬಿಡಿಸಲಾದೀತೆ? ನಾರು ಬೇರುಗಳೆಲ್ಲ ಒಂದರೊಳಗೊಂದು ಸೇರುತ್ತ ಪ್ರತ್ಯೇಕತೆಯನ್ನು ಕಳೆದುಕೊಳ್ಳುತ್ತ ಒಟ್ಟು ಒಂದು ಗೂಡಾಗಿ ರೂಪುಗೊಂಡ ಪರಿಯನ್ನು ನಿಂತ ನಿಲುವಿನಲ್ಲೇ ವಿವರಿಸಲಾದೀತೆ?

ಶಬರಿಯ ಮನಸ್ಸಿನಲ್ಲೊಂದು ಗುಬ್ಬಚ್ಚಿಗೂಡು.
ನಾರು ಬೇರುಗಳು ಹೆಣದುಕೊಂಡ ಹಣತೆ ಬೀಡು.
ಗಾಳಿಗೆ ತುಯ್ದಾಡುವ ಬೆಳ್ಳಿ ಬೆಳಕು-ಗುಬ್ಬಚ್ಚಿದನಿ.
ಬೆಳಕು ಆರಬಾರದು.
ಆದರೆ ಗೂಡಿಗೆ ಗೂಡೇ ಭಗ್ಗೆಂದರೆ?
ನಾರು ಬೇರುಗಳು ಸುಟ್ಟು ಬೂದಿಯಾದರೆ?

ಇಲ್ಲ. ಹಾಗಾಗಬಾರದು. ಒಮ್ಮೆ ಕಂಡ ಸೂರ್ಯನ ಶಾಖಕ್ಕೆ ಸುಟ್ಟು ಹೋಗಬಾರದು……

ಶಬರಿ ಒಲೆ ಹಚ್ಚಿದಳು. ಹಿಟ್ಟು ಮಾಡಿದಳು. ಆನಂತರ ಹುಚ್ಚೀರನ ಜೊತೆ ಊರ ಒಡೆಯನ ಹೊಲಕ್ಕೆ ಕೂಲಿ ಕೆಲಸಕ್ಕೆ ಹೋದಳು. ಜೊತೆಗೆ ಗೌರಿಯೂ ಇದ್ದಳು.

ಸಾಯಂಕಾಲ ಹಟ್ಟಿಗೆ ಬಂದವಳೆ ಒಳಗೆಲ್ಲ ಕಣ್ಣು ಹಾಯಿಸಿದಳು. ತಿಮ್ಮರಾಯಿ ತನಗೇನೂ ಸಂಬಂಧವಿಲ್ಲವೆಂಬಂತೆ ಕೂತು ಸೇಂದಿ ಕುಡಿಯುತ್ತಿರುವುದನ್ನು ಕಂಡಳು.

“ಈಟೋತ್ಗೇ ಸುರು ಮಾಡ್ಕಂಡ?” ಎಂದು ಕುಟುಕಿದಳು. “ಆ ಪೂಜಾರಪ ತಂದ್ ಕೊಟ್ಟ ಕಣವ್ವ” ಎಂದ ತಿಮ್ಮರಾಯಿ.

“ಪೂಜಾರಪ್ಗೇನು. ಒಡೇರ ಗಡಂಗ್‍ನಾಗೆ ಬಿಟ್ಟಿ ಕೂಡ್ತಾರೆ.”
“ನಂಗೂ ಬಿಟ್ಟೀನೆ ಕೊಟ್ಟ ಕಣವ್ವ”
ತಿಮ್ಮರಾಯಿ ಜೊತೆ ಇನ್ನು ಮಾತಾಡಿ ಪ್ರಯೋಜನವಿಲ್ಲ ಎಂದುಕೊಂಡಳು. ಹೊರಗೆ ಬಂದಳು.

ಆಕಾಶದಲ್ಲಿ ಕಪ್ಪು ಮೋಡಗಳು ದಟ್ಟವಾಗುತ್ತಿದ್ದವು.

ಸೂರ್ಯನ ಸುಳಿವಿಲ್ಲ.
* * *

ಶಬರಿಗೆ ನಿದ್ದೆ ಬರಲಿಲ್ಲ. ಈ ಕಡೆ ಹುಚ್ಚೀರನಿಗೂ ನಿದ್ದೆಯಿಲ್ಲ. ಆತ ಹಟ್ಟಿಯಲ್ಲಿ ಅತ್ತಿಂದಿತ್ತ ಓಡಾಡುತ್ತಿದ್ದ. ಒಳಗಿನ ತಳಮಳಕ್ಕೆ ಹೂರಗಿನ ಕಳವಳ.

ಕಪ್ಪು ಮೋಡಗಳು; ಕಗ್ಗತಲು.

ಶಬರಿಯ ಗುಡಿಸಲಲ್ಲಿ ಮಾತ್ರ ಮಿಣುಕು ದೀಪ.

ಹುಚ್ಚೀರ ಕಿಟಕಿಯಂಥಾ ಒಂದು ಕಂಡಿ ಮೂಲಕ ನೋಡುತ್ತಾನೆ.

ಶಬರಿ ನಿದ್ದೆ ಮಾಡುತ್ತಿಲ್ಲ.

ತನ್ನದೇ ಸಂಜ್ಞೆ ಮೂಲಕ ಗಮನ ಸೆಳಯುತ್ತಾನೆ. ಆಕೆ ಬೆಚ್ಚಿ ನೋಡುತ್ತಾಳೆ.

“ನಿಂಗೇನೊ ಬಂತು ಕೆಟ್ಟಾಪತ್ತು? ವೋಗ್‌ ಮಲೀಕ ಸುಮ್ಕೆ? ಎನ್ನುತ್ತಾಳೆ. ಆತ-ನೀನು ಮೊದಲು ಮಲಗು-ಎಂದು ಸಂಜ್ಞೆ ಮಾಡುತ್ತಾನೆ.

ಈಕೆ ಆಯಿತು ಎಂದ ಮೇಲೆ ಆತ ಒತ್ತಾಯಕ್ಕೆ ಹೋಗುತ್ತಾನೆ.

ಶಬರಿಯು ಒತ್ತಾಯಪೂರ್ವಕವಾಗಿ ಮಲಗಲು ಯತ್ನಿಸುತ್ತಾಳೆ.

ಅಪರಿಚಿತನೊಬ್ಬ ಬಂದು ಇಲ್ಲೇ ಇರುತ್ತೇನೆಂದು ಹೀಗೆ ಒಂದೇ ರಾತ್ರಿಯಲ್ಲಿ ಹೇಳದೆ ಕೇಳದೆ ಹೋದರೆ ಏನಂದುಕೊಳ್ಳಬೇಕು. ಯಾಕೆ ಬಂದ. ಯಾಕ ಹೋದ? ಇರುವಷ್ಟು ಸಮಯದಲ್ಲೇ ಹತ್ತಿರವಾದಂತೆ ಯಾಕೆ ಕಾಣಿಸಿಕೊಂಡ? ಶಬರಿಗೆ ಯಾವುದೂ ನಿಖರವಾಗಲಿಲ್ಲ.

ಶಬರಿ ಎದ್ದು ಬಂದು ಹೊರಗೆ ಇಣುಕಿ ನೋಡಿದಳು. ಹುಚ್ಚೀರ ಇರಲಿಲ್ಲ. ಇದ್ದಕ್ಕಿದ್ದಂತೆ ಸೆಳೆಮಿಂಚು; ಶಬರಿ ಬೆದರಿದಳು. ಹಿಂದೆ ಬಂದು ಅಪ್ಪನ ಕಡೆ ನೋಡಿದಳು. ತಿಮ್ಮರಾಯಿ ಮಲಗಿದ್ದ. ತಾನೂ ಹೋಗಿ ಮಲಗಿದಳು.

ಎಲ್ಲ ಕಡ ನಿಶ್ಶಬ್ದ. ಗಾಳಿಯಾಡುತ್ತಿಲ್ಲ ಅಕಸ್ಮಾತ್‌ ಸಣ್ಣದಾಗಿ ಗಾಳಿ ಬೀಸಿದರೂ ಮರದೆಲೆಗಳ ಸದ್ದು ಕೇಳಿಸುವಂಥ ವಾತಾವರಣ. ಇದ್ದಕ್ಕಿದ್ದಂತ ಯಾರೋ ನಡೆದು ಬರುವ ಸದ್ದು ಕೇಳಿಸಿತು. ಕಿವಿ ನಿಮಿರಿ ಕೇಳಿಸಿಕೊಂಡಳು. ಹಜ್ಜೆ ಸಪ್ಪಳ ಹತ್ತಿರಕ್ಕೆ ಬಂದು ನಿಂತಿತು. ಶಬರಿ ಕೂತುಕೊಂಡಳು.

ಸಪಳವಿಲ್ಲ!

ಹುಚ್ಚೀರನ ಓಡಾಟವಿರಬಹುದೇ ಎಂದುಕೊಳ್ಳುವ ವೇಳಗೆ ಬಾಗಿಲು ಬಡಿದ ಸದ್ದು.

ಶಬರಿ ಬಾಗಿಲು ಬಳಿ ಬಂದು “ಯಾರು?” ಎಂದು ಕೇಳಿದಳು. “ನಾನು ಸೂರ್ಯ” ಎಂಬ ಉತ್ತರ ಕೇಳಿ ಹಿಂದೆ ಮುಂದೆ ನೋಡದೆ ಬಾಗಿಲು ತೆಗೆದಳು. ಎದುರಿಗೆ ಸೂರ್ಯ ನಿಂತಿದ್ದ!

ಒಳಗೆ ಕರೆದಳು. ಬಂದ; ಉಸ್ಸೆಂದು ಬಗಲು ಚೀಲ ತಗೆದಿಟ್ಟ.

“ಇಂಗ್ ಬಂದು ಅಂಗ್ ವೋಗ್‍ಬಿಟ್ರೆ ನಾವೇನಂಬ್ತ ತಿಳ್ಕಮಾದು” ಎಂದು ಶಬರಿ ನೇರವಾಗಿ ಕೇಳಿದಳು.

“ಅದೆಲ್ಲ ಬೆಳಗ್ಗೆ ಹೇಳ್ತೀನಿ. ಈಗ ನಾನ್‌ ಮಲಗ್‍ಬೇಕು” ಎಂದು ಸೂರ್ಯ ಚಾಪೆ ಹಾಸಿಕೊಂಡ.

ಎಲಾ ಇವ್ನ! ನಾನು ಇಷ್ಟು ಹೊತ್ತು ಮಲಗದೆ ಎಲ್ಲಿ ಹೋದ್ನೊ; ಏನಾದ್ನೊ ಅಂತ ಸಂಕಟದಲ್ಲಿ ಸುಟ್ಟುಕೊಳ್ತಾ ಇದ್ರೆ ಇವಯ್ಯ ಬಂದೋನೆ ಮಲಗ್ತೀನಿ ಅಂತಾನಲ್ಲ- ಎಂದು ಶಬರಿ ತನ್ನೊಳಗೇ ಗೊಣಗಿಕೊಂಡಳಾದರೂ ಹೂರಗೆ ತೋರಗೊಡದೆ “ಉಂಂಬಾಕಿಲ್ವ?” ಎಂದು ಕೇಳಿದಳು.

“ಊಟ ಮಾಡ್ಕೂಂಡೆ ಬಂದಿದೀನಿ.” ಎಂದು ಷರಟು ಬಿಚ್ಚಿ ಮಲಗಲನುವಾದ.

ಶಬರಿ ಅಲ್ಲಿಂದ ಹೂರಟಳು.

‘ಮಲಗ್ಬೇಕು’ ಎಂದು ಹೇಳಿದರೂ ಸೂರ್ಯ ನಿದ್ದೆ ಮಾಡಲಿಲ್ಲ. ಒಂದು ಕಿಲೋಮೀಟರ್ ದೂರ ನಡೆದು ಬಂದಿದ್ದ. ಅದರ ಆಯಾಸವೇನೂ ಇರಲಿಲ್ಲ. ಒಂದು ಕಿಲೋಮೀಟರ್ ದೂರದವರೆಗೆ ಗೆಳೆಯನೊಬ್ಬ ಬಿಟ್ಟುಹೋಗಿದ್ದ. ಈಗ ಇಲ್ಲಿ ಏನೇನು ಮಾಡಬೇಕೆಂಬ ಬಗ್ಗೆ ಯೋಚನೆ ಶುರುವಾಗಿ ಸೂರ್ಯನಿಗೆ ನಿದ್ದೆ ಹತ್ತಿರಲಿಲ್ಲ. ಶಬರಿಗಂತೂ ಅತ್ತ ಇತ್ತ ಹೊರಳಿ ಸಾಕಾಗಿತ್ತು.

ಈ ಮಧ್ಯೆ ಹುಚ್ಚೀರ ಬಂದು ಇಣುಕಿ ನೋಡಿ ಹೋಗಿದ್ದ.
ಒಟ್ಟಾರೆ ಎಲ್ಲರೂ ಬೆಳಗಾಗೋದನ್ನ ಕಾಯ್ತಾ ಇದ್ದಂತಿತ್ತು.
ತಿಮ್ಮರಾಯಿ ಎದ್ದವನೇ ಸೂರ್ಯನನ್ನು ನೋಡಿ ನಿಟ್ಟುಸಿರುಬಿಟ್ಟ.

“ಸದ್ಯ ಬಂದೆಲ್ಲ ಮಾರಾಯ. ಇದ್ಕಿದ್ದಂಗೆ ಮಂಗಮಾಯ ಆಗಿ ನಂಗೆ ದಿಗಲುಟ್ಟಿಸ್ಬಿಟ್ಟಿದ್ದೆಲ್ಲಪ್ಪ ನೀನು. ನಾನ್ ಒರಟಾಗ್ ಮಾತಾಡ್ದೆ ಅಂದ್ಕಂಡು ನೀನ್ ಮನೆ ಬಿಟ್ಟೋಗಿದ್ದೀಯಾಂಬ್ತ ನಮ್ ಸ್ಯಬರಿ ನಂಗ್ ಉಗ್ಯೋದೊಂದ್ ಬಾಕಿ ನೋಡು. ಅದ್ಕೆ ನಾನು ವೊತ್ತು ಮುಳ್ಗಾಕ್ ಮುಂಚೇನೇ ಬುಂಡೆ ಯೆಂಡ ತಂದು ಗಡದ್ದಾಗ್ ಕುಡ್ದು ಮಲೀಕಂಡ್ ಬಿಟ್ಟೆ” ಎಂದು ತಿಮ್ಮರಾಯಿ ಒಂದೇ ಉಸಿರಿಗೆ ಹೇಳಿದಾಗ ಶಬರಿ, ಸೂರ್ಯ, ಹುಚ್ಚೀರ ಎಲ್ಲರೂ ನಕ್ಕರು.

ಈ ವೇಳೆಗೆ ಪೂಜಾರಪ್ಪ ಒಳಗೆ ಬರುತ್ತ “ಏನ್ ತಿಮ್ಮರಾಯಿ ಯಾರೋ ನೆಂಟ್ರು ಬಂದಂಗೈತೆ” ಎಂದು ಕೇಳಿದ.

“ಬಾರಪ್ಪ ಬಾ ಕುಂತ್ಕ” ಎಂದು ಪೂಜಾರಪನನ್ನು ಕರದು “ಒಂತರಾ ನೆಂಟ್ರೇ. ಅದೇ ನಮ್ ಚಂದ್ರ ಇದ್ನಲ್ಲ ಅವ್ನ್ ಗೆಣಕಾರ ಇವಪ್ಪ. ಸೂರ್ಯ ಅಂಬ್ತ ಎಂದು ಪರಿಚಯಿಸಿದ.

ಸೂರ್ಯ ಪೂಜಾರಪ್ಪನಿಗೆ ನಮಸ್ಕರಿಸಿದ.

“ಅವ್ನು ಚಂದ್ರ, ನೀನು ಸೂರ್ಯ, ನೀನೂ ಅವ್ನಂಗೇ ಅದೇನು ಇದೇನು ಅಂಬ್ತ ಕೂಚ್ಚನ್ ಮಾಡ್ತೀಯೆನು?” – ಪೂಜಾರಪ್ಪ ಕೇಳಿದ.

“ಏನ್ ಮಾಡ್ತೀನಿ ಅಂತ ಈಗ್ಲೇ ಹೇಗ್ ಹೇಳೋದು? ಏನಾದ್ರು ಒಳ್ಳೆ ಕೆಲ್ಸ ಮಾಡೋಣಾಂತ ಇದ್ದೀನಿ”- ಸೂರ್ಯ ಲೋಕಾಭಿರಾಮವಾಗಿ ಹೇಳಿದ.

“ಈ ವೊಟ್ಟೆ ಮುಂದೆ ಯಾವ್ದು ಒಳ್ಳೇದೊ ಯಾವ್ದು ಕಟ್ಟುದ್ದೂ ಯಾರಿಗ್ಗೊತ್ತು? ವೊಟ್ಟೆಗ್ ಇಟ್ಟು ಉಟ್ಟಂಗಿದ್ರೆ ಅದೇ ಒಳ್ಳೇದು. ನಾನ್ ಯೇಳಾದಂತೂ ಈಟೆ ನೋಡಪ್ಪ.” ಎಂದು ತನ್ನ ದೃಷ್ಟಿ ಧೋರಣೇನ ಮಂಡಿಸಿದ ಮೇಲೆ ಪೂಜಾರಪ್ಪ “ಬತ್ತೀನಿ ಒಡೇರ್‍ನ ನೋಡ್ಬೇಕು. ವೂತ್ತು ವುಟ್ಟಿದ್ಮೇಲೆ ಒಂದ್‌ ಕಿತ ಒಡೇರ್‍ನ ನೋಡಿದ್ರೆ ಈ ವೊಟ್ಟೆಗೇನು ಬರ ಬರಾಕಿಲ್ಲ. ಬತ್ತೀನ್ ತಿಮ್ಮರಾಯಿ. ಆಮ್ಯಾಕೆಲ್ಲ ಮಾತಾಡವ” ಎಂದು ಹೂರಟೀಬಿಟ್ಟ. ಆತನ ದಾರಿ ನೋಡುತ್ತಿದ್ದ ತಿಮ್ಮರಾಯಿ, ಅನಂತರ ಸೂರ್ಯನಿಗೆ “ನಮ್ ಅಟ್ಟೀನಾಗೆ ಈವಯ್ಯಂದೆ ಎಲ್ಲ ನಡ್ಯಾದು. ಊರ್ ಒಡೇರ್‍ಗೆ ಈ ಪೂಜಾರಪ್ಪನ್‌ ಮ್ಯಾಲೆ ಪಿರೀತಿ ಜಾಸ್ತಿ” ಎಂದು ಪರಿಚಯಿಸಿದ.

ಮೂದಲ ದಿನವೇ ವಿರೋಧಿಯ ಪರಿಚಯ ಆಯ್ತಲ್ಲ ಎಂದುಕೂಂಡು ಸೂರ್ಯ ಒಳಗೇ ನಕ್ಕ.

“ಹುಚ್ಚೀರನ್ ಕರ್‍ಕೊಂಡು ಬೆಟ್ಟದ ಕಡೆ ಹೋಗ್‌ ಬರ್ತೀನಿ” ಎಂದು ಸೂರ್ಯ ಹೂರಟು ನಿಂತ. “ಬಾ ಹುಚ್ಚೀರ” ಎಂದು ಹೆಗಲ ಮೇಲೆ ಕೈಹಾಕಿದ. ಹುಚ್ಚೀರನಿಗೆ ರೋಮಾಂಚನವಾಯ್ತು. ಖುಷಿಯಾಗಿ ಹೂರಟ.

ಸೂರ್ಯ ಹುಚ್ಚೀರನ ಜೊತೆ ಹೋದದ್ದನ್ನು ಗಮನಿಸಿದ ಹಟ್ಟಿಯವರಿಗೆ ಕುತೂಹಲ. ಇತರೆ ಹಂಗಸರು ಗೌರಿ ಬಳಿ ಬಂದು “ಯಾರವ್ವ ಈಯಪ್ಪ? ಸ್ಯಬರಿ ಮನೇಗ್ ಬಂದ್‍ಮ್ಯಾಗೆ ನಿಂಗೊತ್ತಿರ್‍ಬೇಕಲ್ವ” ಎಂದು ಕೇಳಿದರು. ಗೌರಿ, “ನಂಗೇನೂ ಗೊತ್ತಿಲ್ಲಮ್ಮ ಸರವೂತ್ನಾಗೆಲ್ಲೊ ಬಂದಂಗೈತ ಆಯಪ್ಪ, ಇವಾಗ ನಮ್ಮಪ್ಪಯ್ಯ ವೋಗಿ ಇಚಾರಿಸ್ಕಂಡ್‌ ಬಂದ್ರು. ಚಂದ್ರನ್‌ ಗೆಣೆಕಾರ ಅಂತೆ” ಎಂದಳು. ಆ ಹಂಗಸರು “ಪಾಪ! ಚಂದ್ರ ಸತ್‌ ಮ್ಯಾಲ್ ಬಂದವ್ನೆ ಈಯಪ್ಪ” ಎಂದು ನೊಂದುಕೊಂಡರು.

ತಿಮ್ಮರಾಯಿ ಹೂರಗೆ ಹೋಗುವುದನ್ನೇ ಕಾಯುತ್ತಿದ್ದ ಗೌರಿ ಸರಕ್ಕನೆ ಶಬರಿಯ ಬಳಿಗೆ ಸರಕ್ಕನೆ ಹೋದಳು. “ಆಯಪ್ಪ ಯಾರೇ ಶಬರಿ” ಎಂದು ವಿಚಾರಿಸಿದಳು. ಶಬರಿ ಏನನ್ನೂ ಮುಚ್ಚಿಡದೆ ಎಲ್ಲವನ್ನೂ ವಿವರಿಸಿದಳು. “ಎಲ್ರಿಗೂ ನೀನೇ ಯೇಳ್ಬಿಟ್ರೆ ನನ್ನ ಕಷ್ಟ ತಪ್‍ತೈತೆ ನೋಡು” ಎಂದು ಶಬರಿ ನಕ್ಕಾಗ “ಯೇಳ್ದೆ ಇರಾಕಾಯ್ತದ? ಈಯಪ್ಪ ನಮ್ಮೋನೆ ನಮ್ಮೋಳ್ಳೇದಕ್ಕೇ ಬಂದವ್ನೆ ಅಂಬ್ತೀನಿ ಬ್ಯಾಗ್ ಬ್ಯಾಗ ಬಂದ್ ಬಿಡು. ಕೂಲಿ ಕೆಲ್ಸಕ್‌ ವೋಗ್‌ಬೇಕಲ್ಲ” ಎಂದು ಜ್ಞಾಪಿಸಿದಳು. ಶಬರಿ “ಆಯ್ತು” ಅಂತ ಹೇಳಿ ಬೇಗ ಹಿಟ್ಟು ಮಾಡಲು ಹೋದಳು.

ಸಂಜೆ ತಿಮ್ಮರಾಯಿ ಹೆಂಡದ ಬುಂಡೆ ಎತ್ತಿದಾಗ ಶಬರಿ ತಡೆದಳು.

“ನಿಂಗೇಟ್‌ಸಾರಿನಪ್ಪ ಯೇಳಾದು? ಕುಡ್ದೂ ಕುಡ್ದೂ ಕಳ್‌ ಸುಟ್ಟೋಗ್ತೈತೆ. ಆಟೆಯ” ಎಂದು ಬೇಸರದಿಂದ ಹೇಳಿದಳು.

“ನಿನ್ನವ್ವ ದ್ಯಾವ್ರ್‌ ಪಾದ ಸೇರಿದ್‌ ಮ್ಯಾಗಿಂದ ಇದೇ ನಿನ್ನವ್ವ ಆಗೈತೆ ಕಣವ್ವ” ಎಂದ ತಿಮ್ಮರಾಯಿ.

“ಏನಪ್ಪೊ ಇಂಗೆ ಮಾತಾಡ್ತೀಯ ನೀನು. ಈ ಯಂಡ ಅಂಬ್ತ ಕರೀತೀಯ? ಯೆಣ್ಣಂಗಸ್ರು ಅಂದ್ರೆ ಆಟಂದ್‌ ಸದ್ರ ಆಗೋತೇನು?” -ಗದರುವ ದಾಟಿಯಲ್ಲಿ ಹೇಳಿದಳು ಶಬರಿ.

ತಿಮ್ಮರಾಯಿ ತಬ್ಬಿಬ್ಬಾದ. “ಎಲ್ಲಾನ ಉಂಟೇನವ್ವ. ಈ ಯಂಡ ಎಲ್ಲಿ. ಆ ನಿನ್ನವ್ವ ಎಲ್ಲಿ… ಛೆ! ಛೆ! ಏನೋ ಅಂಗಂದೆ. ನಿನ್ನವ್ವ ಇಲ್ವಲ್ಲ ಆ ಸಂಕಟ ಇನ್ನೂ ವೋಗಿಲ್ಲ ಕಣವ್ವ. ಎದೇನಾಗೆ ಉರಿ ಅತ್ಕಂಡ್‌ ಭಗಭಗ ಅಂದಾಗ ವೊಟ್ಟೆ ಓಳೀಕೆ ಈ ಯೆಂಡ-ಸಾರಾಯಿ ಸೇರುಸ್ತೀನಿ. ಆಟೇಯ” ಎಂದು ಸಂಕಟದಿಂದ ಸಮಜಾಯಿಷಿ ನೀಡಿದ.

“ಸರ್ ಸರಿ. ನನ್ನವ್ನನ್‌ ನೆಪ್ತಿನಾಗೆ ಎದಿ ಉರೀತೈತೆ, ಯೆಂಡ ಸಾರಾಯ್ ಕುಡ್ದು ವೊಟ್ಟೆ ಉರ್‍ದು ಸುಟ್‌ವೋಗ್ತೈತೆ. ಕಡ್ಗೆ ನೋಡ್ ನೋಡ್ತಾ ಇದ್ದಂಗೆ ನೀನೇ ಸುಟ್ ಬೂದಿ ಆಗ್ತೀಯ ಆಟೇಯ” ಎಂದು ಶಬರಿ ದುಃಖಪಟ್ಟಳು.

ಆ ವೇಳೆಗೆ ಸೂರ್ಯ. ಹುಚ್ಚೀರನ ಜೊತೆ ಬಂದ.

ಶಬರಿ ಕಣ್ಣೀರು ಒರೆಸಿಕೊಂಡಳು. ಸೂರ್ಯ ಗಮನಿಸಿದ.

“ಯಾಕೆ, ಏನಾಯ್ತು?” ಎಂದ.

ಶಬರಿ, ತಿಮ್ಮರಾಯಿಯ ಕಡೆ ನೋಡಿ ಹೇಳಿದಳು- “ಈಯಪ್ಪಂಗೆ ವೊತ್ ಮುಳಗಾಕ್ ಸರ್ಯಾಗ್ ಯೆಂಡ ಸಾರಾಯಿ ಬೇಕು. ಅದ್ಕೇನ್ ಇಟೂ ಆಟು ಅಂಬ್ತ ಇಲ್ಲ. ಸುರ್‍ಕಂಬ್ತಾ ಇರಾದೆ ಆಯ್ತು.”

ತಿಮ್ಮರಾಯಿಗೆ ಅವಮಾನವಾಯಿತು- “ನಿಂದೂ ಆಟೇ ಕಣವ್ವ. ಈಟು ಆಟು ಅಂಬ್ತ ಏನೂ ಇಲ್ಲ. ಬಾಯೋದಂಗ್ ಮಾತಾಡ್ತೀಯ. ನಿನ್ನವ್ವ ಬದ್ಕಿದ್ರೆ ಯಾಕಿಂಗಾಗಾದು.” ಎಂದು ಕಣ್ಣಲ್ಲಿ ನೀರು ತುಂಬಿಕೂಂಡ.

ಸೂರ್ಯನಿಗೆ, ಇವರ ಮುಚ್ಚಮರೆಯಿಲ್ಲದ ಸ್ವಭಾವ ವಿಸ್ಮಯ ಮೂಡಿಸಿತು. ತಾನು ಹೊಸಬ ಅಂತ ಭಾವಿಸಿ ಆಡೋ ಮಾತನ್ನ ಅರ್ಧಕ್ಕೇ ನುಂಗೋ ಸ್ವಭಾವ ಇವರದಲ್ಲ. ಎಲ್ಲವೂ ನೇರ; ಸ್ಪಷ್ಟ ಸಾಚ. ಎಂಥ ಮನುಷ್ಯರು!

ಅಪ್ಪ-ಮಗಳ ನಡುವಿನ ಮುನಿಸಿನ ಮಧ್ಯೆ ತನ್ನ ಮಾತಿನ ಅಗತ್ಯ ಇದೆ ಅನ್ನಿಸಿ ಸೂರ್ಯ ಹೇಳಿದ-

ಅಷ್ಟೊಂದ್ ಬೆಜಾರ್‌ ಮಾಡ್ಕೊಂಡ್ರೆ ಹೇಗೆ ಶಬರಿ. ನಿಮ್ಮಪ್ಪಂಗೆ ಈ ವಯಸ್ನಲ್ಲಿ ಬೇರೆ ಯಾರಿದಾರೆ ಹೇಳು. ಜೊತೆಗೆ ಹಟ್ಟಿನಾಗೆ ಇವ್ರೊಬ್ರೆ ಕುಡ್ಯಲ್ವಲ್ಲ? ಅಭ್ಯಾಸಬಲ. ಬೆಗ ಬಿಡೋಕ್ಕಾಗೊಲ್ಲ.”

ಸೂರ್ಯನ ಮಾತಿನಿಂದ ತಿಮ್ಮರಾಯಿ ಉತ್ತಜಿತನಾದ.

“ಯಾವ್ ಗಂಡಸ್ ಕುಡ್ಯಲ್ಲ ಈ ಅಟ್ಟಿನಾಗೆ ಯೇಳು ಮತ್ತೆ. ಲಾಗಾಯ್ತಿಂದ ನಡಿಸ್ಕಂಡ್ ಬಂದು ಇವಾಗ್ ಬಿಟ್‌ಬಿಡು ಅಂದ್ರೆ ಅದೆಂಗಾಯ್ತದೆ ನೀನೇ ಯೇಳಪ್ಪ ಇವ್ಳ್‍ಗೆ” ಎಂದು ಹೆಂಡದ ಬುಂಡಗೆ ಕೈ ಹಾಕಿದ.

ಸೂರ್ಯ ತಿಮ್ಮರಾಯಿಯ ಹತ್ತಿರಬಂದು ತಡೆದು ಹೇಳಿದ- “ಶಬರೀಗ ನಾನು ಹಾಗೇಳ್ದೆ ಅಂದ್‌ಕೂಡ್ಲೆ ನೀನು ಸದಾ ಕುಡ್ಕಂಡೇ ಇರ್‍ಬೇಕು ಅಂತ ಅಲ್ಲಪ್ಪ, ನಿಂಗೂ ವಯಸ್ಸಾಯ್ತು. ನಿನ್ ಮಗಳು ಜೀವನಕ್ಕೆ ಇನ್ನೂ ಒಂದ್ ದಾರಿ ತೋರುಸ್ಬೇಕು. ಇಚ್ಚಾಪಟ್ಟೆ ಕುಡ್ದು ತೂಂದ್ರೆ ಮಡ್ಕೂಬಾರ್ದು. ಅಲ್ವಾ?

ಮಗಳ ಜೀವನದ ನೆನಪು ತಿಮ್ಮರಾಯಿಯ ಹೊಟ್ಟೆಗೆ ಕೆಂಡ ಸುರಿಯಿತು. ಇದ್ದಕ್ಕಿದ್ದಂತ ಮುಖ ಮುಚ್ಚಿಕೊಂಡ. ಒತ್ತಿ ಬರುವ ದುಃಖವನ್ನು ತಡೆಯಲು ಯತ್ನಿಸಿದ. ಸೂರ್ಯ ಆತನ ಕೈಹಿಡಿದು “ಇಂಗೆಲ್ಲ ಸಂಕಟ ಪಡಬೇಡಜ್ಜ. ನಿನ್ ಮಗಳಿಗೆ ಇವತ್ತಲ್ಲ ನಾಳೆ ಒಳ್ಳೇದಾಗುತ್ತೆ. ಈಗ ಕುಡೀಲೆ ಬೇಕು ಅಂತಿದ್ರೆ ಕುಡಿ; ಬರ್‍ತಾ ಬರ್‍ತ ಕಡಿಮೆ ಮಾಡು. ಆದ್ರೆ ಅಪ್ಪ-ಮಗಳು ಹೀಗ್‌ ಮುನಿಸ್ಕೊಬೇಡಿ” ಎಂದು ಸಮಾಧಾನಿಸಿದ.

ತಿಮ್ಮರಾಯಿ ಸೂರ್ಯನ ಕೈಯ್ಯನ್ನು ಭದ್ರವಾಗಿ ಹಿಡಿದುಕೊಂಡ. ದುಃಖ ನುಂಗಿಕೊಂಡ. ಆನಂತರ ಹೆಂಡದ ಬುಂಡೆ ಎತ್ತಿಕೊಂಡು ಹೂರ ನಡೆದ.

ಒಂದು ಕ್ಷಣ ಮೌನ.
ಹುಚ್ಚೀರ ಬೆಪ್ಪಾಗಿ ನಿಂತಿದ್ದ.
ಸೂರ್ಯ ಶಬರಿಯ ಕಡೆ ನೋಡಿದ.
ಶಬರಿ-ಹಪ್ಪುಗಟ್ಟಿದ ನದಿ.
ಅಲುಗದ ಎಲೆಗಳು; ಅರಳದ ಹೂಗಳು.

ಸೂರ್ಯ ಹತ್ತರ ಬಂದ.
“ಸಣ್ ಸಣ್ ವಿಷ್ಯಕ್ಕೆಲ್ಲ ಸಂಕಟ ಪಡಬಾರ್‍ದು ಶಬರಿ. ನೀನೂ ಒಂಟಿ; ನಿಮ್ಮಪ್ಪನೂ ಒಂಟಿ. ಕಡೇಪಕ್ಷ ನೀವಿಬ್ರೂ ಮಾತಾಡ್ಕೊಂಡು ಮನಸ್ನ ಹಗುರ ಮಾಡ್ಕೋತೀರಿ. ಆದ್ರೆ ಈ ಹುಚ್ಚೀರನ್ ನೋಡು. ಅವ್ನೂ ಒಂಟಿ. ಆದ್ರೆ ಅವ್ನ್ ಮನಸ್ಸನ್ನ ಯಾರ್ ಜೊತೆ ಹಂಚ್ಕೊಳ್ಳಾಕೆ ಆಗುತ್ತೆ ಹೇಳು. ಸುಮ್ನೆ ಸಂಕಟಪಡೋಬದ್ಲು ನಾನೂ ನೀನೂ ಸೇರಿ ಹಟ್ಟೀನ ಒಂದ್ ಹದಕ್ ತರೋಣ” ಎಂದು ಹೇಳಿದಾಗ ಶಬರಿಗೆ ಅಚ್ಚರಿ.

ಇದಂಥ ಮಾತು! “ನಾನೂ ನೀನೂ ಸೇರಿ ಹಟ್ಟೀನ ಒಂದ್ ಹದಕ್ ತರೋಣ?” ಅದೆಲ್ಲ ತನಗೆ ಹೇಗೆ ಸಾಧ್ಯ? ಈ ಮಾತಿನ ಮರ್‍ಮ ಏನು?

“ಯಾಕ್ ಸುಮ್ನೆ ನಿಂತ್ಕೊಂಡೆ? ನಾನ್ ಏನ್ ಹೇಳ್ದೆ ಗೊತ್ತಾ? ಹೇಗಿದ್ರೂ ನಾನು ಸ್ವಲ್ಪ ದಿನ ಇಲ್ಲೇ ಇರ್‍ತೀನಲ್ಲ-ಆದ್ರಿಂದ ನಿಮ್ಮಪ್ಪನ್ನೂ ಸೇರ್‍ದಂಗೆ ಎಲ್ರಿಗೂ ಬುದ್ಧಿ ಹೇಳಿದ್ರಾಯ್ತಲ್ವ- ಅಂತ ಹಾಗಂದೆ” -ಸೂರ್ಯ ವಿವರಣೆ ನೀಡಿದ. ಹೆಪ್ಪಗಟ್ಟಿದ ನದಿ, ಸೂರ್ಯನ ಶಾಖಕ್ಕೆ ಕರಗತೊಡಗಿತು.

ಎಲೆಗಳು ಅಲುಗಾಡತೊಡಗಿದಂತೆ ಹೂಮೊಗ್ಗು ಬಿರಿಯತೂಡಗಿದವು.

ಶಬರಿಯ ಮುಖದಲ್ಲಿ ಮುಗುಳ್ನಗೆ. ಮಾತು ಹೂರ ಬಂತು.

“ಇಲ್ಲೇ ಇರ್‍ಬೇಕು ಅನ್ನೋರು ಯೇಳ್ದೆ ಯಾಕ್ ಹೋಗ್‌ಬೇಕಾಗಿತ್ತು. ಅದೂ ನಮ್‌ಚಂದ್ರನ್ ಗೆಣೆಕಾರ್ರು ಇಂಗ್‌ ಬಂದು ಅಂಗ್‌ ವೋದ್ರು ಅಂಬ್ತ ನಂಗೆ ಎಂಗಾಗಿತ್ತು ಗೊತ್ತಾ?”

“ತಪ್ಪಾಯ್ತು ಶಬರಿ. ನಾನು ಇಲ್ಲೇ ಇರೋ ವಿಷ್ಯಾನ ನನ್ ಸ್ನೇಹಿತ್ರಿಗೆ ತಿಳ್ಸಿ ಒಂದಷ್ಟು ಮಾತಾಡ್ಕೊಂಡ್ ಬರಬೇಕಿತ್ತು. ಜೊತೆಗೆ ನಾನ್ ಬಂದಿರೊ ವಿಷ್ಯ ತಕ್ಷಣ ಎಲ್ರಿಗೂ ಗೊತ್ತಾಗೋದು ಬೇಡ ಅನ್ಸಿತ್ತು. ಅದಕ್ಕೆಂತ ಹಾಗ್ ಮಾಡೆ. ಬೇಸರ ಮಾಡ್ಕೊಬೇಡ.”

ಸೂರ್ಯನ ಮಾತು ಕೇಳಿ ಶಬರಿ ಸಂತೋಮಷದಿಂಂಂದ ಹೇಳಿದಳು- “ಅದೇನೊ ನಂಗೊತ್ತಿಲ್ಲ. ಯೇಳ್ದೆ ಕೇಳ್ದೆ ವೋಗ್‌ಬಾರ್‍ದು. ಆಟೇಯ.”

“ಇನ್ ಹೋಗೋದೆಲ್ ಬಂತು. ನಾನು ಒಂದಷ್ಟು ದಿನ ದೂರ ಇರ್‍ಲೇಬೇಕು. ಅದ್ಕೇ ಈ ಜಾಗ ಹುಡಿಕ್ಕೊಂಡ್‌ ಬಂದೆ.”

“ಅಂಗಂದ್ರೆ? ದೂರ ಯಾಕಿರ್‌ಬೇಕು? ಏನಂತಾ ಕೆಲ್ಸ ಮಾಡಿದ್ದೀರ?”- ಶಬರಿ ಥಟ್ಟನೆ ಕೇಳಿದಳು.

“ಛೆ! ಛೆ! ಅಂಥಾದ್ದೇನೂ ಇಲ್ಲ. ಹೇಳ್‌ಬೇಕಾದಾಗ ಎಲ್ಲಾ ಹೇಳೀನಿ.”

“ಇವಾಗ್ಲೆ ಯಾಕ್‌ ಹೇಳ್‌ಬಾರ್‍ದು ಅಂಬ್ತ?” – ಶಬರಿ ಅನುಮಾನದಿಂದ ಕೇಲಿದಳು.

“ಅದೂ… ಅದೂ… ನೋಡು ಶಬರಿ…” ಎಂದು ಸೂರ್ಯ ತಡವರಿಸುತ್ತ ಇರುವ ವೇಳೆಗೆ ತಿಮ್ಮರಾಯಿ ಒಳಬಂದ. ಸೂರ್ಯ ಕೂಡಲೇ ಮಾತು ತಿರುಗಿಸಿ “ಏನಜ್ಜ ಎಲ್ಲಾ ಖಾಲಿ ಮಾಡ್‌ಬಂದ್ಯಾ?” ಎಂದು ಕೇಳಿದ.

“ಖಾಲಿ ಮಾಡಾದೆಲ್ಲಪ್ಪ ಬಂತು” ಎನ್ನುತ್ತ ತಿಮ್ಮರಾಯಿ ಉಸ್ಸೆಂದು ಕೂತುಕೊಂಡು ಮಾತು ಮುಂದುವರೆಸಿದ- “ಇಲ್ಲಂದ ಎದ್ದ ಹೋದ್ನ? ಅದ್ಯಾಕೊ ಕುಡೀಬೇಕು ಅನ್ನುಸ್ಲಿಲ್ಲ. ಕಟ್ಟೆಮ್ಯಾಲ್ ದ್ಯಾವ್ರ್‌ ಆಯ್ತಲ್ಲ, ಅದ್ರ್‌ ಮುಂದಿಟ್‌ಬಿಟ್ಟು ಸೀದಾ ಬಂದ್‌ಬಿಟ್ಟೆ. ನಮ್ ಸ್ಯಬರೀಗೆ ಇವತ್ತೂಂದ್‌ ದಿನಾನಾರು ಸಂತೋಸ ಆಗ್ಲಿ ಬಿಡಪ್ಪ”

ಶಬರಿಗೆ ಕೂರಳುಬ್ಬಿ ಬಂತು.

ತಿಮ್ಮರಾಯಿ ಮತ್ತೆ ಮಾತು ಮುಂದುವರೆಸಿದ. “ನೀನ್ ಬ್ಯಾರೆ ಹೂಸದಾಗ್ ಬಂದಿದ್ದೀಯಲ್ಲ ಸೂರ್ಯಪ್ಪ. ನಿನ್ ಎದ್ರಿಗೆ ಸುಮ್‌ಸುಮ್ಕೆ ನಾವ್‌ ಮುನಿಸ್ಕಮಾದು ಯಾಕೊ ಸರ್‌ಬರ್‍ಲಿಲ್ಲ ನಂಗೆ.”

ಸೂರ್ಯನಿಗೆ ತಿಮ್ಮರಾಯಿಯ ಔಚಿತ್ಯ ದೊಡ್ಡದೆನಿಸಿತು.

“ಇದ್ಕಿಂತ ಇನ್ನೇನ್‌ ಬೇಕು ಶಬರಿ. ಎಂಥಾ ಅಪ್ಪ, ಎಂಥಾ ಮಗಳು! ಬೇಗ ಅಡುಗೆ ಮಾಡ್‌ಬಿಡು. ಹೂಟ್ಟೆ ತುಂಬಾ ಉಂಡು ಬಾಯ್ತುಂಬ ಮಾತಾಡೋಣ” ಎಂದು ಸೂರ್ಯ ಹೇಳಿದಾಗ ಶಬರಿ “ಆಯ್ತು” ಎನ್ನುತ್ತ ಅಡುಗೆ ಮಾಡಲು ಹೊರಟು, ತಕ್ಷಣ ನಿಂತು “ಬಾಯ್ತುಂಬ ಮಾತಾಡ್ವಾಗ ಒಂದಷ್ಟು ದಿನ ನೀವ್ಯಾಕ್‌ ದೂರ ಇರಾಕ್‌ ಬಂದಿದ್ದು ಅಂಬಾದ್ನ ಯೇಳ್‌ಬೇಕು” ಎಂದಳು.

ಸೂರ್ಯನಿಗೆ ಒಂದು ಕ್ಷಣ ತಬ್ಬಿಬ್ಬು. ಈಕೆ ಸೂಕ್ಷ್ಮಳೂ ಹೌದು ಎನ್ನಿಸಿತು. ವಿದ್ಯಾವಂತಳಲ್ಲದಿದ್ದರೂ ವಿವೇಕವಂತಳು ಎಂಬ ಭಾವನೆ ಬಂತು.

ವಿದ್ಯಾವಂತರೆಲ್ಲ ವಿವೇಕಿಗಳಲ್ಲ;
ಅವಿದ್ಯಾವಂತರೆಲ್ಲ ಅವಿವೇಕಿಗಳಲ್ಲ.

ಇದು ತನ್ನ ಅನುಭವದ ಮಾತಲ್ಲವೆ ಎಂದು ನೆನಪಿಸಿಕೊಂಡ ಸೂರ್ಯ. “ಯಾಕ್ ಸುಮ್ಕೆ ನಿಂತ್ಕಂಡ್ರಿ?”- ಶಬರಿ ಮತ್ತೆ ಕೇಳಿದಳು-

“ಇಂಗೆಲ್ಲ ಯಾಕ್‌ ಕೇಳ್ತಾ ಇವ್ನಿ ಗೊತ್ತಾ? ಗೊತ್ತು ಗುರ್‍ತು ಇಲ್ದೆ ಇರೋರು ಮನೇಗ್ ಬಂದ್ ಇರ್‍ವಾಗ ಹಿಂದೆ ಮುಂದೆ ತಿಳ್ಕಾಬೇಕು ಅಲ್ವಾ?”

“ಅದ್ಸರಿ ಶಬರಿ. ಬರ್‍ತಾ ಬರ್‍ತಾ ನಿಂಗೆಲ್ಲ ಗೊತ್ತಾಗುತ್ತೆ. ಒಂದು ವೇಳೆ ನನ್ ಮೇಲೆ ನಂಬಿಕೆ ಇಲ್ಲೆ ಇದ್ರೆ ಈಗ್ಲೆ ಜಾಗ ಖಾಲಿ ಮಾಡ್ತೀನಿ” ಎಂದು ಸೂರ್ಯ ನೇರವಾಗಿ ಹೇಳಿದ.

ಹುಚ್ಚೀರನ ಮುಖದಲ್ಲಿ ಆತಂಕ.
ಶಬರಿಗೆ ನಿರೀಕ್ಷಿಸದೆ ಇರುವ ಉತ್ತರ.

ತಕ್ಷಣ ತಿಮ್ಮರಾಯಿ “ಅದ್ಯಾಕಪ್ಪ ಅಂಗಬ್ತೀಯ. ನಾವು ನಾಲ್ಗೆ ನಂಬಾ ಜನ. ನಿನ್ ಮಾತಿನ್ ಮ್ಯಾಲೆ ನಾನು ನಂಬ್ಕೆ ಮಡುಗ್ತೀನಿ” ಎಂದು ಸೂರ್ಯನಿಗೆ ಹೇಳಿ ಆನಂತರ ಶಬರಿಗೆ “ಬ್ಯಾಗ್ ಅಡುಗೆ ಮಾಡವ್ವ. ಆಮ್ಕಾಕ್‌ ಮಾತಾಡದಿದ್ದೇ ಐತೆ” ಎಂದ.

ಶಬರಿ ಹೆಚ್ಚು ಮಾತಾಡದೆ ಅಡುಗೆ ಮಡಲು ಹೋದಳು.
ಒಲೆ ಹಚ್ಚಿ ಬೆಂಕಿಯ ಬೆಳಕಲ್ಲಿ ಕೂತಳು.
ಮುಖದ ಮೇಲೆ ಬಂಕಿಯಲೆಗಳ ಬೀಸಣಿಗೆ.
ಮನಸಲಿ ನಿಖರವಾಗದ ಭಾವ ನಡಿಗೆ.

ಇಲ್ಲಿ ತಿಮ್ಮರಾಯಿ ತನ್ನ ಮತ್ತು ಹಟ್ಟಿಯ ಅನೇಕ ವಿಷಯಗಳನ್ನು ಸೂರ್ಯನಿಗೆ ಹೇಳತೂಡಗಿದ. ಯಾವುದೇ ಬದಲಾವಣೆಯಿಲ್ಲದೆ ನಂಬಿಕಗಳ ಮೇಲೆ ನಡೆಯುವ ಬದುಕು. ಹೊಟ್ಟೆಪಾಡಿಗಾಗಿ ದುಡಿಮೆ. ಪ್ರಶ್ನೆಗಳಿದ್ದರೂ ಎದ್ದು ನಿಲ್ಲದ ಅಸಹಾಯಕತೆ. ಹೀಗಾಗಿ ಇಲ್ಲಿ ಉತ್ತರ ಹುಡುಕುವ ಪ್ರಶ್ರಯೇ ಇಲ್ಲ. ಹಿಂದೆ ಇದ್ದದ್ದೇ ಇಂದು. ಮುಂದು. ಎಂದೆಂದು. ಊರ ಒಡೆಯರ ಒಡನಾಟದಲ್ಲಿ ಅಷ್ಟಿಷ್ಟು ಹೂರಜಗತ್ತು ನೋಡಿದವನೆಂದರೆ ಪೂಜಾರಪ್ಪ ಒಬ್ಬನೆ. ಊರ ಒಡೆಯರ ಪರವಾಗಿ ಇಲ್ಲಿನ ಕಾವಲುಗಾರ. ಇಲ್ಲಿನವರಿಗೆ ವಕ್ತಾರ- ಇದಿಷ್ಟು ಇಲ್ಲಿನ ಬದುಕಿನ ಸಾರ ಅಂತ ತಿಮ್ಮರಾಯಿ ತನ್ನದೇ ರೀತಿಯಲ್ಲಿ ವರ್‍ಣಿಸಿದ. ನಡನಡುವೆ ಪ್ರಶ್ನೆಗಳನ್ನು ಹಾಕುತ್ತ, ಕೆದಕುತ್ತ, ಸೂರ್ಯ ಸ್ಪಷ್ಟ ಚಿತ್ರವೂಂದನ್ನು ಪಡದ.

ಈ ವೇಳಗೆ ಅಡುಗೆ ಮುಗಿದಿತ್ತು. ಶಬರಿ “ಉಂಬಾಕ್ ಬರ್ರಿ” ಎಂದಳು. ಗಂಗಳಗಳಲ್ಲಿ ಮುದ್ದೆ, ಸೂಪ್ಪಿನ ಸಾರು ಹಾಕಿ ತಂದಿಟ್ಟಳು. ಗಂಗಳಗಳನ್ನು ನೋಡಿದ ತಿಮ್ಮರಾಯಿ “ಈ ಗಂಗಳಾನು ಇರ್‍ಲಿಲ್ಲಪ್ಪ ನಮ್ ಮನ್ಯಾಗೆ. ಮದ್ವೆ ಬಂತಲ್ಲ. ಅವಾಗ ಚಂದ್ರಾನೇ ಬಲವಂತ ಮಾಡಿ ತಂದ್ಕೂಟಿದ್ದ” ಎಂದ.

ಶಬರಿಗೆ ಮತ್ತ ಮತ್ತೆ ಚಂದ್ರನ ನೆನಪು ರಾಚುವಂಥ ಮಾತುಕತ. ಹೀಗಾಗಿ ಆಕೆ ಮಾತು ತಿರುಗಿಸಲು “ನೀವು ಇದ್ಯಾವಂತ್ರು, ಮುದ್ದೆ ಸೂಪ್ಪಿನ್ ಸಾರು ಇಡುಸ್ತೈತೊ ಇಲ್ವೊ” ಎಂದು ಕೇಳಿದಳು.

“ನಂಗೆಲ್ಲ ಹಿಡ್ಸುತ್ತೆ. ಹೊಲದಾಗಿರೊ ಸೂಪ್ಪು ತಿಂದು ಬದ್ಕೋಕು ಸಿದ್ಧ ನಾನು. ಎಷ್ಟೋ ದಿನ ಬೆಟ್ಟ ಗುಡ್ಡ ಅಲೀತಾ ಸಿಕ್ಕಿದ್ದೇ ಸಿರಿ ಅಂದ್ಕೊಂಡ್ ತಿಂದಿದ್ದೀನಿ” ಎಂದು ಸೂರ್ಯ ಉತ್ಸಾಹದಲ್ಲಿ ಹೇಳಿದ. ಶಬರಿಯ ಮರುಪ್ರಶ್ನೆಯನ್ನು ಆತ ನಿರೀಕ್ಷಿಸಿರಲಿಲ್ಲ.

“ಬೆಟ್ಟ ಗುಡ್ಡ ಯಾಕ್‌ ಅಲೀತಾ ಇದ್ರಿ? ಅಲ್ಲೇನ್ ಕೆಲ್ಸ ನಿಮ್ಗೆ?”- ಶಬರಿಯ ಪ್ರಶ್ನೆ. ಸೂರ್ಯನಿಗೆ ತಕ್ಷಣ ಏನು ಸಮಜಾಯಿಷಿ ನೀಡಬೇಕೆಂದು ತೋರದ “ಅದೂ… ಅದೂ…” ಎಂದು ತಡವರಿಸಿ ಆಮೇಲೆ “ಆದು ಯಾಕೆ ಗೊತ್ತ? ನಾನು ಒಂಥರಾ ಬುಡಕಟ್ಟಿನೋನೇ. ನೀವಾದ್ರು ಒಂದ್‌ ಕಡೆ ನೆಲೆ ಕಂಡ್ಕೂಂಡಿದ್ದೀರಿ. ನಾನಾದ್ರೆ ಅಲೆಮಾರಿ ಬುಡಕಟ್ಟು” ಎಂದು ಇಲ್ಲದ ನಗೆಯಲ್ಲಿ ಮಾತು ತೇಲಿಸಿದ.

“ಅಲೆಮಾರಿ ಅಂದ್ರೆ.. ಒಂದ್ ಕಡೆ ಇದ್ದು ಗೊತ್ತೇ ಇಲ್ಲ ಅಂಗಾರೆ”- ಮತ್ತೆ ಶಬರಿ ಕೇಳಿದಳು.

ಆಗ ತಿಮ್ಮರಾಯಿ “ಅಯಪ್ಪಂಗೆ ಒಸಿ ಊಟ ಮಾಡಾಕಾನ ಬಿಡವ್ವ. ಆಮ್ಯಾಕೆಲ್ಲ ಕೀಳಿದ್ರಾತು” ಎಂದ.

ಶಬರಿ ಸುಮ್ಮನಾದಳು.

ಸೂರ್ಯ ಊಟ ಮಾಡುತ್ತ ಯೋಚಿಸಿದ- ತನ್ನ ಆಗಮನದ ಉದ್ದೇಶವನ್ನು ಈಗಲೇ ಸ್ಪಷ್ಟಪಡಿಸಬೇಕು. ಅನುಮಾನಾನ ಬೆಳಯೋಕೆ ಬಿಡೋದು ಯಾವಾಗ್ಲು ಒಳ್ಳೆಯದಲ್ಲ. ಇಷ್ಟಕ್ಕೂ ಈಗ ಸಂದರ್ಭ ಹದವಾಗುತ್ತಿದೆ.

ಊಟವಾದ ಮೇಲೆ ಇನ್ನೇನು ನಡದೀತೊ ಎಂಬಂತೆ ಹುಚ್ಚೀರ ಕೂತೇ ಇದ್ದ. ಶಬರಿ ಇನ್ನೇನು ಕೇಳುವಳೊ ಸೂರ್ಯ ಏನೇನು ಹೇಳುವನೊ, ಈ ಹೊಸ ಮನುಷ್ಯ ಒಂದು ಥರಾ ಖುಷಿ ಕೂಡ್ತಿದಾನೆ- ಎಂದು ಉತ್ಸಾಹದಲ್ಲಿದ್ದ.

ಸೂರ್ಯ ಯಾರಿಗೂ ಕಾಯದೆ ತಾನೇ ಮಾತಿಗೆ ಮುಂದಾದ.

“ನೋಡಿ, ನಾನಿಲ್ಲಿಗೆ ಚಂದ್ರನ ಆಸೆ ಈಡೇರ್‍ಸೋಕ್ ಬಂದಿದ್ದೀನಿ. ಚಂದ್ರನ ಪರಿಚಯ ತೀರ ಇತ್ತೀಚೆಗೆ ಆಗಿದ್ದು ಅನ್ನೋದ್‌ ನಿಜ. ಆದ್ರೆ ಕಲವೇ ದಿನ್ದಲ್ಲಿಆತ ನನಗೆ ತುಂಬಾ ಇಷ್ಟವಾದ. ಆಗಾಗ್ಗೆ ಶಬರಿ ವಿಷಯ ಹೇಳ್ತಾ ಇದ್ದ.”- ಹೀಗೆ ಸೂರ್ಯ ಮಾತು ಶುರು ಮಾಡಿದಾಗ ಭಾವುಕ ವಾತಾವರಣ ಉಂಟಾಯಿತು- “ಚಂದ್ರನಿಗೆ ಬುಡಕಟ್ಟಿನವರಿಗೆ ವಿದ್ಯೆ ಕಲುಸ್ಬೇಕು. ಬಡತನ ಹೋಗಲಾಡುಸ್ಬೇಕು. ಸ್ವಾಭಿಮಾನ ಅಂತ ಏನೇನೊ ಕನಸುಗಳಿದ್ದವು. ಇಂಥ ಕನಸು ಕಾಣೋಕೆ ನಮ್‌ ಸಂಘ ಕಾರಣ ಆಗಿತು” ಎಂದು ಸೂರ್ಯ ಹೇಳಿ ಕ್ಷಣಕಾಲ ಸುಮ್ಮನಾದ.

ಯಾರೂ ಮಾತಾಡಲಿಲ್ಲ.
ಕಡಗ ತಾನೆ ಹೇಳತೂಡಗಿದ:

“ನಾವು ಯುವಕರು ಸೇರಿ ಒಂದು ಸಂಘ ಮಾಡ್ಕೂಂಡಿದ್ದೀವೆ. ಸಮಾನತೆ ಇರ್‍ಬೇಕು ಅನ್ನೋದು ನಮ್ಮ ಆದರ್ಶ. ಸಮಾನತೆ ಅಂದ್ರೆ ಅರ್‍ಥ ಆಯ್ತ? ಈಗ ನೋಡಿ, ಬಡವ- ಬಲ್ಲಿದ ಅಂತ ವ್ಯತ್ಯಾಸ ಇರಬಾರದು. ಸಾಹುಕಾರ್ರು, ಜಮೀನ್ದಾರ್ರು, ಒಡೆಯರು ಎಲ್ಲಾರೂ ಇದಾರಲ್ಲ ಇವ್ರು ಬಡವರನ್ನ, ನಿಮ್ಮಂಥ ಬುಡಕಟ್ಟಿನೋರ್‍ನ ಗುಲಾಮರಂತೆ ನೋಡ್‌ಬಾರ್‍ದು. ಜಾತಿ ಹೆಸರು ತೆಗ್ದು ಕೆಳಜಾತಿ ಜನರನ್ನು, ಹಿಂದುಳಿದೋರ್‍ನ ತುಳೀಬಾರ್‍ದು. ಹೀಗೆ ಒಬ್ಬರಿಗೊಬ್ಬರು ಗೌರವ ಕೊಡೋದು, ಎಲ್ಲರಿಗೂ ಅನ್ನ, ಬಟ್ಟೆ, ಮನೆ ಒದ್ಗೊ ಹಾಗ್‌ ಮಾಡೋದು ಬಹಳ ಮುಖ್ಯ. ಇದನ್ನು ಸಮಾನತೆ ಅಂತೀವಿ. ಅದಕ್ಕಾಗಿ ನಿಮ್ಮಂತೋರಲ್ಲಿ ಎಚ್ಚರ ಮೂಡ್‌ಬೇಕು.”

ಸುರ್ಯ ಒಂದು ಪುಟ್ಟ ಭಾಷಣಾನೇ ಮಾಡಿದ.

ಆದರೂ ಅವರ್‍ಯಾರೂ ಪ್ರತಿಕ್ರಿಯಿಸಲಿಲ್ಲ. ಮತ್ತೆ ಚಂದ್ರನ ಹಸರು ತಗೆದ.

“ಹೀಗೆಲ್ಲ ಮಾಡ್‌ಬೇಕು ಅನ್ನೋದು ಚಂದ್ರನ ಕನಸಾಗಿತ್ತು. ಆ ಕನಸು ನನಸಾಗಬೇಕು. ಅದಕ್ಕಾಗಿ ನಾನಿಲ್ಲಗ್ ಬಂದೆ.”

“ನಮಿಗ್ ಕನಸೇ ಬೀಳಾಕಿಲ್ಲ”- ಎಂದು ತಿಮ್ಮರಾಯಿ ಪ್ರತಿಕ್ರಿಯಿಸಿದ.

“ನಮಗೆಂದೂ ಒಳ್ಳೇದಾಗಲ್ಲ, ನಮ್ಮದಿಷ್ಟೇ ಬದುಕು, ಅಂದ್ಕೂಂಡ್ರೆ ಹಾಗಾಗುತ್ತೆ. ನೀನೇ ಹೇಳ್ತಾ ಇದ್ಯಲ್ಲ ತಿಮ್ಮರಾಯಿ-ಒಳ್ಳೆ ದಿನಕ್ಕೆ ಶಬರಿ ಥರಾ ಕಾಯಬೇಕು ಅಂತ?”- ಸೂರ್ಯ ಕೆದಕಿದ.

“ಅದೇನೊ ಸರ್‍ಯಪ್ಪ, ನಾವಂದ್ಕಂಡಂಗೇ ಒಳ್ಳೇದಾಗ್ಬೇಕಲ್ಲ?”

“ಒಳ್ಳೇದಾಗಲ್ಲ ಅಂತ ಏನೂ ಮಾಡ್ದೆ ಇದ್ರೆ ಒಳ್ಳೇದ್ ಹೇಗ್ ಆಗುತ್ತೆ. ಸುಮ್ನೆ ಇದ್ರೆ ಏನೂ ಆಗಲ್ಲ”- ಸೂರ್ಯ ಸ್ಪಷ್ಟಪಡಿಸಿದ.

ಸರೋವರದಲ್ಲಿ ಕಲ್ಲು ಒಗೆದ ಅನುಭವ.
ಆಲೆಗಳ ಕೋಲಾಹಲ.
ಹೂ ದಳಗಳು ಉದುರುವಂಥ ಬಿಸಿಗಾಳಿ.
ಶಬರಿ ಚಡಪಡಿಸುತ್ತಲೇ ಕೇಳಿದಳು-
“ಅಂಗಾರಿವಾಗೇನ್‌ ಮಾಡ್ಬೇಕು ಅಂಬ್ತೀರ?”

“ಮೊದ್ಲು ನೀವೆಲ್ಲ ವಿದ್ಯೆ ಕಲೀಬೇಕು, ನಿಮ್ ನಿಮ್ ಕೆಲ್ಸ ಮಾಡಿದ್ ಮ್ಯಾಲೆ ರಾತ್ರಿ ಹೊತ್ತು ನಾನೂ ನನ್ನ ಗೆಳಯರು ನಿಮಿಗೆ ವಿದ್ಯೆ ಕಲುಸ್ತೀವಿ. ಓದು ಬರಹ ಬಂದ್ರೆ ಅದರ ಜೊತೇನೆ ಉಳಿದ ಕೆಲ್ಸ ಮಾಡ್‌ಬಹುದು”- ಸೂರ್ಯ ವಿವರಿಸಿದ.

“ಉಳಿದ ಕೆಲ್ಸ ಅಂದ್ರೆ ಮುಂದೆ ನಿಮ್‌ ಒಳ್ಳೇದಕ್ಕೆ ಏನೇನ್ ಬೇಕೊ ಅದನ್‌ ಮಾಡಾದು ಅಂತ.”
“ಅದ್ಸರಿ. ನೀವಿಂಗೆಲ್ಲ ಏನೇನೊ ಮಾಡಾದ್ಕೆ ಊರು ಒಡೇರ್ ಒಪ್ಪಬೇಕಲ್ಲ?”
“ಎಲ್ಲಾದ್ಕು ಒಡೇರ್ ಅಪ್ಪಣೆ ಕೇಳಾದೆ ಸರ್‍ಯಲ್ಲ ಕಣಜ್ಜ.”
“ಅಂಗಾರಿಲ್ಲೇನೂ ಆಗಾಕಿಲ್ಲ ಬಿಡು.”
“ಹಾಗಂದ್ರೆ ಹೇಗಜ್ಜ. ಈಗ ನೋಡು, ನಾವು ಮಾಡೊ ಎಷ್ಟೋ ಕೆಲ್ಸಗಳು ಸರ್‍ಕಾರ್‍ದೋರ್‍ಗು ಸರಿಬರೊಲ್ಲ. ಆಗ ಪೋಲಿಸ್ನೋರ್‍ನ ಛೂ ಬಿಡ್ತಾರೆ ನಮ್ ಮೇಲೆ. ಹಗಂತ ನಾವ್ ಸುಮ್ನೆ ಇದ್ರೆ ಬಡವರ ಕಷ್ಟ ಕೇಳೋರ್ ಯಾರು? ನೀನೇ ಹೇಳು.”

“ಅದೆಲ್ಲ ಸರ್‍ಯಪ್ಪ. ಆದ್ರೆ ಒಂದೋಗಿನ್ನೊಂದಾಗಾದು ಸರ್ ಬರಲ್ಲ ಆಟೇ?” ಇಲ್ಲೀವರೆಗೆ ಸುಮ್ಮನಿದ್ದ ಶಬರಿ ಮಾತನಾಡಿದಳು-

“ಒಂದೋಗಿನ್ನೊಂದಾಗ್ತೈತೆ ಅಂಬ್ತ ಬುದ್ದಿ ಕಲ್ಯಾದು ಬ್ಯಾಡ ಅಂದ್ರೆ ಯೆಂಗಪ್ಪ? ಬರೀ ಊರ್‍ನಾರೇ ಅದನ್‌ ಕಲೀಬೇಕೇನು? ನಮ್ಮ ಹಟ್ಟಿ ಮಕ್ಕಳೇನ್ ಪಾಪ ಮಾಡವ್ರ? ನಾವೇನ್‌ ಪಾಪ ಮಾಡಿದ್ದೀವ?”

“ಪುಣ್ಣೇವ್ ಮಾಡಿದ್ರೆ ಇಲ್ ಯಾಕ್ ವುಟ್‌ತಿದ್ವಿ” ಸುಮ್ಮಿರವ್ವ ನೀನು” – ತಿಮ್ಮರಾಯಿ ಗದರಿದ.

“ನಿಂದೊಳ್ಳ ಕತೆಯಾತಲ್ಲ; ನಾನ್ಯಾಕ್ ಸುಮ್ಕಿರ್‍ಲಿ. ಈಗ್‌ ನೀನೇ ಯೇಳು. ಆ ಸ್ರೀರಾಮ್ ದ್ಯಾವ್ರು ಬರೀ ಅರಮನೇನಾಗೆ ಇದ್ನ? ಕಾಡ್‌ನಾಗಿರಾ ಸ್ಯಬರಿತಾವ ಬರ್‍ಲಿಲ್ವ? ಅಂಗೇ ಇದ್ದೇ ಬುದ್ದೀನೂ ನಮ್ತಾವ್ ಬರ್‍ಬೇಕು ತಿಳೀತಾ?”- ಎಂದು ಶಬರಿ ಕಟುವಾಗಿ, ದಿಟ್ಟವಾಗಿ ಹೇಳಿದಾಗ ತಿಮ್ಮರಾಯಿಯ ಬಾಯಿ ಕಟ್ಟಿತು. ಕಡಗೆ ಒಂದು ಮಾತು ಹೇಳಿದ- “ನಮ್ ಸ್ಯಬರವ್ವ ಚಂದ್ರನ್ನಂತೂ ಕಳ್ಕಂಡ್ಳು. ಅವ್ನ್ ಯಸ್ರಿನಾಗೇನಾರ ಮಾಡ್ತೀನಿ ಅಂಬ್ತ ನೀನ್ ಯೇಳಿರೆ ನಾನ್ಯಾಕಪ್ಪ ಅಡ್ಡ ಬರ್‍ಲಿ. ಅದ್ರೆ ಯಾವ್ದುಕ್ಕು ಪೂಜಾರಪ್ಪನ್‌ ಒಂದ್‌ ಮಾತು ಕೇಳ್ಬೇಕು ನೋಡು.”

“ನೀವಂಗಂತೀರ ಅಂತ ಮೂದ್ಲೇ ಗೊತಿತ್ತು”- ಸೂರ್ಯ ನಸುನಗುತ್ತ ಹೇಳಿದ. ಎಲ್ಲರೂ ಸುಮ್ಮನೆ ನೋಡಿದರು.

“ಪೂಜಾರಪ್ಪ ಹೇಳ್ದೆ ದೇವರು ವರ ಕೊಡಲ್ವಲ್ಲ. ಅದಕ್ ಹಾಗಂದೆ” ಎಂದು ಸೂರ್ಯ ನಿರಾಳವಾಗಿ ನಕ್ಕಾಗ ಎಲ್ಲರೂ ನಕ್ಕರು.

ಆನಂತರ ಅದೂ ಇದೂ ಮಾತಾಡುತ್ತ ಕೂತರು. ಸೂರ್ಯ ಸಾಕಷ್ಟು ಲೋಕಾಭಿರಾಮವಾಗಿ ಮಾತಾಡಿದ.

ಮಲಗಿದ ಮೇಲೆ ಶಬರಿಗೆ ನಿದ್ದೆ ಬರಲಲ್ಲ.

ಚಂದ್ರ-ಸೂರ್ಯರ ಆಕಾಶವೊಂದು ಕನ್ನಡಿ
ಅದರಲ್ಲಿ ಭೂಮಿಯ ಬಿಂಬ ಕಂಡೀತೆ?
ಭೂಮಿ ಮೇಲಿರುವ ತನ್ನ ರೂಪ ಮೂಡೀತೆ?
ಅದರ ಬದಲು ಭೂಮಿಯ ಕನ್ನಡಿಯಾದರೆ.
ಅದರಲ್ಲಿ ಚಂದ್ರ ಸೂರ್ಯರ ಬಿಂಬ-ಬೆಳಕು.
ಇದು ಸಮೀಪದ ಸತ್ಯ, ಸಂತೋಷದ ಸತ್ಯ.

ಶಬರಿ ನಕ್ಕಳು.
ಎದ್ದು ಬಂದು ಕದ್ದು ನೋಡಿದಳು.
ಸೂರ್ಯ ನಿದ್ದೆ ಮಾಡುತ್ತಿರಲಿಲ್ಲ.
ಪುಸ್ತಕವೊಂದನ್ನು ಓದುತ್ತ ಕೂತಿದ್ದ.
ಶಬರಿ ಕುಡಿಕೆಯಲ್ಲಿ ನೀರು ತುಂಬಿಕೂಂಡು ಸೂರ್ಯನ ಬಳಿಗೆ ಬಂದಳು.

“ನೀವೆದ್ದೇ ಇವ್ರಿ. ಅದ್ಕೆ ಕುಡ್ಯಾಕ್ ನೀರ್ ಬೇಕೇನೊ ಅಂಬ್ತ ತಂದೆ.”

“ಕೊಡು ಇಲ್ಲಿ” ಎಂದು ಕುಡಿಕೆಯನ್ನು ಈಸಿಕೊಂಡ. “ನಿದ್ದೆ ಬರ್‍ಲಿಲ್ವ?” ಎಂದು ಕೇಳಿದ.

“ನೀವು ಆಟೆಲ್ಲ ಯೇಳಿದ್‌ ಮ್ಯಾಗೆ ನಿದ್ದೆ ಎಂಗ್‌ ಬಂದಾತು. ಸುಮ್ಕೆ ನಿಂತಿದ್‌ ನೀರಿಗೆ ಕಲ್‌ ಒಗೆದಂಗಾಗೈತೆ”- ಎಂದಳು ಶಬರಿ.

“ಹಾಗಾದ್ರೆ ನನ್ ಗುರಿ ಸರ್‍ಯಾಗಿದ್ಯೆ”

“ಅಂಗಂದ್ರೆ ನಂಗಿಂಗ್‌ ಕಷ್ಟ ಕೂಡಾಕೇ ಆಟೆಲ್ಲ ಯೇಳಿದ್ರಾ?

“ಛೆ! ಛೆ! ಹಾಗಲ್ಲ ಶಬರಿ; ಏನಾದ್ರು ಹೊಸವಿಷ್ಯ ಗೊತ್ತಾದಾಗ ಮನಸ್ನಲ್ಲಿ ಸರ್‍ಯೊ ತಪ್ಪೊ ಅಂತ ಯೋಚ್ನೆ ಬರ್‍ಬೇಕು. ನಿನ್ನ ಮನಸ್ಗೆ. ಈಗ, ಈ ವಿಷ್ಯ ಹೊಕ್ಕಿದೆ. ಅದು ಸರಿ ಅಲ್ವ?”

ಶಬರಿ ಹೌದೆಂಬಂತೆ ಸುಮ್ಮನಾದಳು. ಅನಂತರ ಹೇಳಿದಳು.

“ನಮ್ಮನ್ಯಾಗೆ ಈಟೊತ್ ದೀಪ ಉರ್‍ದಿದ್ದೇ ಇಲ್ಲ.”
“ಹಾಗಾದ್ರೆ ದೀಪ ಆರ್‍ಸಿ ಮಲಗ್ಲಾ?”
“ಅಂಗಲ್ಲ; ಇಂಗೆಲ್ಲ ಪುಸ್ಕ ಗಿಸ್ಕ ಓದಾರ್ ಯಾರವ್ರೆ ನಮ್ ಮನ್ಯಾಗೆ. ಅದಕ್ಕಾಗಂದೆ.”

“ನೀನೇ ಹೀಗ್‌ ಓದೋ ಥರಾ ಆಗ್ಬೇಕು. ಚಂದ್ರ ಇದ್ದಿದ್ರೆ ನಿನಗೆ ಓದು ಬರಹ ಕಲುಸ್ತಾ ಇದ್ದ.”

“ಯಾಕೆ? ಸೂರ್ಯ ಕಲುಸ್ಬಾರ್‍ದ?”

-ಶಬರಿ ತನಗೇ ಗೊತ್ತಿಲ್ಲದಂತೆ ಕೇಳಿಬಿಟ್ಟಳು.

ಸೂರ್ಯ ನಸುನಕ್ಕು ಹೇಳಿದ- “ಅದುಕ್ಕೇಂತ್ಲೆ ಬಂದಿದ್ದೀನಲ್ಲ”?
ಶಬರಿ ನಿಂತೇ ಇದ್ದಳು.

ಇಷ್ಟು ಬೇಗ ಸಲಿಗೆ ಬೆಳೆದೀತೆಂದು ಸೂರ್ಯ ಭಾವಿಸಿರಲಿಲ್ಲ. ಅನುಮಾನಕ್ಕೆ ಆಸ್ಪದವಿಲ್ಲದಂತೆ ಮೊದಲ ದಿನವೇ ಸಾಕಷ್ಟು ವಿಷಯ ಹೇಳಿದ್ದು ಒಳ್ಳೆಯದಾಯಿತೆಂದು ಕೊಂಡ. ಮುಂದಿನ ಕಾರ್ಯಾಚರಣೆಗೆ ಶಬರಿಯೇ ಕೇಂದ್ರ ಶಕ್ತಿಯಾಗಬೇಕೆಂದು ಚಿಂತಿಸಿದ. ಈಕೆಯ ಮೂಲಕ ತನ್ನ ಅಪೇಕ್ಷಿತ ಕ್ರಿಯೆಗೆ ಪ್ರಾರಂಭಿಕ ಗಟ್ಟಿನೆಲೆ ಓದಗಿಸಬಹುದೆಂದುಕೊಂಡ.

ಸೂರ್ಯ ತನ್ನೊಳಗೆ ತಾನು ಚಿಂತಿಸುತ್ತಿರುವುದನ್ನು ನೋಡಿದ ಶಬರಿ “ಬತ್ತೀನಿ. ನಿಮ್‌ ಪಾಡಿಗೆ ನೀವ್ ಓದ್ಕಳ್ಳಿ ಪಾಪ!” ಎಂದು ಹೇಳಿ ಹೊರಟಳು.

ತಿಳಿಗೊಂಡ ಕೂಳ.
ಕೊಳವೇ ಕನ್ನಡಿ.
ಮುಖ ಬಿಂಬದಲ್ಲೇ ಮುನ್ನುಡಿ.
ಶಬರಿ ನಿದ್ದೆ ಮಾಡಿದಳು.
*****