ಅದೊಂದು ಗಿಜಿಗಿಜಿ ಗೂಡು
ಗಲಿಬಿಲಿ, ಗದ್ದಲ, ಅವಸರ
ಧಾವಂತ ಪರಿಪರಿಯ
ಪದಗಳಿಗೂ ಮೀರಿದ ಗಡಿಬಿಡಿ
ಹತ್ತುವವರು, ಇಳಿಯುವವರು
ಮಿಸ್ಸಾದವರು, ಮಿಸ್ಸು ಮಾಡಿಕೊಂಡವರು
ತೆರೆದ ಪರದೆಯ ಮೇಲೆ ಚಿತ್ರದಂತೆ
ಪಾಪಕ್ಕೆ ಹುಟ್ಟಿದ ಪಾಪು
ಪಲ್ಲಟಗೊಂಡ ಬದುಕಿನ
ಪುಟ್ಟಮ್ಮ ಎಷ್ಟೆಲ್ಲಾ ವೈವಿಧ್ಯತೆಗಳು
ಚೆಲ್ಲು ಚೆಲ್ಲು ಗಿರಾಕಿಗಳು
ಕಿಸೆಗೆ ಕತ್ತರಿ ಬೀಳಿಸಿಕೊಂಡವರು
ಕತ್ತರಿಗೆ ಕೈಯಾದವರು
ಎಲ್ಲ ಒಂದೇ ತಟದಲ್ಲಿ
ಕಣಜದಲಿ ಕದ್ದರೆ ಕರಕರೆಯೇ ಇಲ್ಲ
ಅಲ್ಲಲ್ಲಿ ರಕ್ತಪಿಪಾಸುಗಳು
ಮಾಂಸದಂಧೆಯ ಹೈಟೆಕ್ಕು
ರಕ್ತಕೆಂಪಿನ ತುಟಿಗಳು
ಚಿಲ್ಲರೆ ವ್ಯಾಪಾರಿಗಳು
ಅಂಕುಡೊಂಕಿನ ರಸ್ತೆಯಲ್ಲಿ
ತೆವಳುವ ರೋಗಗ್ರಸ್ತ ದೇಹಗಳು
ಮುಗ್ಗರಿಸುವ ಜನ
ಎದ್ದು ನಡೆಯುವ ಜನ
ಹೆದ್ದಾರಿಗೇರದೆ
ಸಣ್ಣ ಕಾಲುದಾರಿಯಲ್ಲೇ
ಸುಖ ಕಾಣುವವರು
ಮತ್ತೆ ಮುಖ್ಯದ್ವಾರಕ್ಕೆ ಕನ್ನ ಇಡುವವರು
ಎಷ್ಟೊಂದು ಬಗೆಯ ಗಡಿಬಿಡಿ
ಬಗೆಬಗೆಯ ಪಾನೀಯ ಅಮಲು
ನಾಟಕದ ನೂರೊಂದು ಮಜಲು.
*****
Latest posts by ನಾಗರೇಖಾ ಗಾಂವಕರ (see all)
- ಕತ್ತಲ ಗೂಡಿನ ದೀಪ - February 27, 2021
- ಮಲ್ಲಿಗೆಯೆಂಬ ಪರಿಮಳ ಸಾಲೆ - February 20, 2021
- ಊರುಗೋಲಿನ ಸುತ್ತ - February 13, 2021