ಕೆಟ್ಟ ಹುಡುಗ ಜಾನ್ ಮೆಕೆನ್ರೊ
ಬಯ್ದುಗಿಯ್ದು ಮಾಡಿದರೆ
ಎಲ್ಲಾ ಮಂದಿ ರೇಗುವವರೆ-
ವದಿಯೋಣವನ್ನ ಬನ್ರೊ!

ಅದೇ ಹುಡುಗ ಜಾನ್ ಮೆಕೆನ್ರೊ
ಆಡಲು ಮಜಬೂತು
ನೋಡುತ್ತಾರೆ ಸುಮ್ಮನೇಕೇ ಕೂತು
ಏನದ್ಭುತ ಕಣ್ರೊ!

ಕಣ್ಣ ಮುಂದೆ ಮೋಡವೊಂದು
ಎದ್ದ ಹಾಗೇನೆ ಥೇಟು
ಎಲ್ಲಿ ಚೆಂಡು ಎಲ್ಲಿ ಬ್ಯಾಟು
ಗುಡುಗು ಮಿಂಚು ಒಂದು!

ಯಾರೂ ಮುಚ್ಚಲಿಲ್ಲ ರಪ್ಪೆ
ಏನಾಗುವುದೊ ಕಾತರ
ಯಾವ ಕಡಲು ಯಾವ ತೀರ
ಮೀರಲದರ ತಪ್ಪೆ?

ನೋಡಿದವರು ನೋಡಿದಲ್ಲೆ
ಬಯಲಿನಿಂದ ಬಯಲಿಗೆ
ದಾಳಿಯಿಡುವ ಗಾಳಿ ತನಗೆ
ತಾನೆ ಕೊಡುವ ಎಲ್ಲೆ
*****

ತಿರುಮಲೇಶ್ ಕೆ ವಿ
Latest posts by ತಿರುಮಲೇಶ್ ಕೆ ವಿ (see all)