ಊರಿಗೆ ಬಂದ ಶವಪೆಟ್ಟಿಗೆಯೊಳಗಿನ
ಅವನ ಚಿರನಿದ್ರೆ ಏನೆಲ್ಲ ಹೇಳುತಿದೆ
ಇವರೆಲ್ಲ ಅಳುತ್ತಿದ್ದಾರೆ.
ದೇಶಭಕ್ತ ಇವ ನಮ್ಮ ಹುಡುಗ
ಜೈಕಾರ ಹಾಕುತ ಮನೆಯ ಬೆಳಕು ನುಂಗಿದ
ಕಾರ್ಗಿಲ್ ಕರಿಕತ್ತಲೆಗೆ ನೆರಳುತಿರುವರು.

ಕಟ್ಟುಮಸ್ತಾದ ಹುಡುಗ ಹೊಳೆವ ಕಣ್ಣು
ಗುಂಗುರು ಕೂದಲು, ನೇರ ಮೂಗು
ಹೇಳಿ ಕೇಳಿ ಇಪ್ಪತ್ತೆರಡರ ಹರೆಯ ಅಷ್ಟೆ.
ಕಿತ್ತು ತಿನ್ನುವ ಬಡತನ
ಮನೆ ತುಂಬ ಮಕ್ಕಳಲಿ ಬೆಳೆದವ
ಕಿಚ್ಚು ರೊಚ್ಚಿನೊಳಗೆ ಹೊಸ ಬದುಕಿಗೆ ಹುಡುಕಾಟ
ಸಿಕ್ಕದ್ದು ಗಡಿಕಾಯುವ ಕೆಲಸ.

ದೇಶಭಕ್ತಿ-ಅಭಿಮಾನವೆಲ್ಲ
ಗಡಿ ಗುಂಪಿನೊಳಗೇ ಬೆಳೆಸಿಕೊಂಡಿದ್ದ.
ಮನೆ ಮಂದಿಯ ಪ್ರೀತಿ ಕೂಡಾ
ಅಲ್ಲೆ ನೆನೆಪಿಸಿಕೊಂಡು ಮಡವುಗಟ್ಟಿದ್ದ.
ಇಲ್ಲಿ ಇದ್ದಾಗಿನ ಸಿಟ್ಟು ಸೆಡವುಗಳನೆಲ್ಲ
ಅಲ್ಲಿ ಇಳಿಸಿಕೊಂಡು
ಉಳಿದೆಲ್ಲ ಜವಾಬ್ದಾರಿ
ನನಗಿರಲೆಂದು ಪತ್ರಬರೆದಿದ್ದ.

ದುರ್ದಿನದೊಂದು ದಿನ ಸಿಡಿಯಿತು
ವೈರಿಗಳ ಕಿಡಿ
ಧಗಧಗನೆ ಹೊತ್ತಿ ಉರಿಯಿತು
ಯೋಧರ ಎದೆ
ಕತ್ತಲು ಕಗ್ಗತ್ತಲಿಗಂಜದೆ
ಮಂಜು ಚಳಿ ಮಳೆಗೆ ಹೆದರದೆ
ಹಸಿವು ಪ್ರಾಣದ ಹಂಗು ತೊರೆದು
ಗುಂಡು ಮದ್ದುಗಳ ನಡುವೆ
ಹೋರಾಡಿದ್ದೇನು
ಉಸಿರು ಉಸಿರಿಗೆ ಪ್ರೀತಿಸಿದ್ದೇನು ದೇಶ.

ವೈರಿಗಳ ಸದ್ದಡಗಿಸುತ ನೆಲತಟ್ಟಿ
ಮಾತೃವಂದನೆ ಮಾಡಿ
ಮುಖಾಮುಖಿ ಕೊರಳಿಗೆ ಕೊರಳುಕೊಟ್ಟು
ದೇಶಭಕ್ತಿ ರಕ್ತ ಪತಾಕೆಗೆ ಹಾರಿಸಿ
ಹೋದ, ಅವ ದೂರ ಹೊರಟೇ ಹೋದ.
ಅವ ನಮ್ಮವ ನಿಮ್ಮವ ಎಲ್ಲರವ
ವೀರಕುಮಾರ, ಮನೆಯಮಗನವ.
*****

ಲತಾ ಗುತ್ತಿ
Latest posts by ಲತಾ ಗುತ್ತಿ (see all)