ರಂಗಣ್ಣನ ಕನಸಿನ ದಿನಗಳು – ೩೦

ರಂಗಣ್ಣನ ಕನಸಿನ ದಿನಗಳು – ೩೦

ತಿಮ್ಮರಾಯಪ್ಪನ ಮೆಚ್ಚಿಕೆ

ರಂಗಣ್ಣ ಬೆಂಗಳೂರನ್ನು ತಲುಪಿದ್ದಾಯಿತು; ಮನೆಯನ್ನು ಸೇರಿದ್ದಾಯಿತು. ರೈಲ್ ಸ್ಟೇಷನ್ನಿಗೆ ಗೋಪಾಲನೂ ಶಂಕರಪ್ಪ ನೂ ಬಂದಿದ್ದುದರಿಂದ ಹೆಚ್ಚು ತೊಂದರೆಯನ್ನು ಪಡದೆ, ಹೆಚ್ಚು ಗಾಡಿಗಳನ್ನು ಮಾತ್ರ ಮಾಡಿಕೊಂಡು ಮನೆಯನ್ನು ಸೇರಿದನು. ಮಾರನೆಯ ದಿನ ಶಂಕರಪ್ಪನಿಗೆ ಬಹಳವಾಗಿ ಸಮಾಧಾನ ಮಾಡಬೇಕಾಯಿತು. ಅವನು, `ಸ್ವಾಮಿ! ನನ್ನ ಜೀವಮಾನದಲ್ಲಿ ಅಂಥ ಸುಖ ಸಂತೋಷದ ದಿನಗಳನ್ನು ಮತ್ತೆ ನಾನು ಕಾಣುವುದಿಲ್ಲ. ನಾನೂ ಹಲವು ಅಪರಾಧಗಳನ್ನು ಮಾಡಿದೆ. ತಾವು ಒಳ್ಳೆಯ ಮಾತಿನಲ್ಲಿಯೇ ಬುದ್ದಿ ಹೇಳಿ ತಿದ್ದಿ ನಡೆಸಿ ಕೂ೦ಡುಬ೦ದಿರಿ. ಊಟದ ಹೊತ್ತಿನಲ್ಲಿ ಪಕ್ಕದಲ್ಲಿಯೇ ಮಣೆಹಾಕಿಸಿ ಕೂಡಿಸಿಕೊಂಡು ಸ್ನೇಹಿತನಂತೆ ಉಪಚಾರ ಮಾಡುತ್ತ ಆದರಿಸಿದಿರಿ. ನಾನು ಸಲಿಗೆಯಿಂದ ಏನಾದರೂ ಹೆಚ್ಚು ಕಡಮೆ ನಡೆದುಕೊಂಡಿದ್ದರೆ ಮನ್ನಿಸಬೇಕು’ ಎಂದು ಹೇಳಿದನು. ರಂಗಣ್ಣ ಯಥೋಚಿತವಾಗಿ ಅವನಿಗೆ ಉತ್ತರ ಹೇಳಿ ಗೋಪಾಲನ ಕೈಗೆ ಐದು ರುಪಾಯಿಗಳನ್ನು ಇನಾಮಾಗಿ ಕೊಟ್ಟನು. ಅವರಿಬ್ಬರ ರೈಲು ಖರ್ಚಿಗೆ ಬೇರೆ ಹಣವನ್ನೂ ಕೊಟ್ಟು ಕಳಿಸಿದನು.

ಭಾನುವಾರ ಬೆಳಗ್ಗೆ ಹತ್ತು ಗಂಟೆಗೆ ತಿಮ್ಮರಾಯಪ್ಪ ತನ್ನ ಹೆಂಡತಿ ಮತ್ತು ಮಕ್ಕಳೊಡನೆ ರಂಗಣ್ಣನ ಮನೆಗೆ ಬಂದನು. ಆ ದಿನ ಅವರಿಗೆ ಭೋಜನ ರಂಗಣ್ಣನ ಮನೆಯಲ್ಲೇ ಏರ್ಪಾಟಾಗಿತ್ತು. ರಂಗಣ್ಣನು ಬಹಳ ಸಂತೋಷದಿಂದಲೂ ಸಂಭ್ರಮದಿಂದಲೂ ಅವರನ್ನೆಲ್ಲ ಸ್ವಾಗತಿಸಿದನು. ರಂಗಣ್ಣನ ಹೆಂಡತಿ ತಿಮ್ಮರಾಯಪ್ಪನ ಹೆಂಡತಿಯನ್ನು ಕರೆದುಕೊಂಡು ಒಳ ಕೊಟಡಿಗೆ ಹೋದಳು. ಸ್ವಲ್ಪ ಕಾಫಿ ಸಮಾರಾಧನೆ ಆಗಿ ಆ ಬಳಿಕ ಊಟಗಳಾಗಿ ಹಾಲಿನಲ್ಲಿ ಎರಡು ಸಂಸಾರದವರೂ ಸೇರಿ ತಾಂಬೂಲವನ್ನು ಹಾಕಿಕೊಳ್ಳುತ್ತಾ ಮಾತನಾಡತೊಡಗಿದರು. ಎಲ್ಲವೂ ಜನಾರ್ದನಪುರದಲ್ಲಿ ರ೦ಗಣ್ಣ ನಡೆಸಿದ ಇನ್ಸ್ಪೆಕ್ಟರ್ ಗಿರಿಯ ಮಾತುಗಳೇ ಆಗಿದ್ದುವು. ಮಧ್ಯೆ ಮಧ್ಯೆ ತಿಮ್ಮರಾಯಪ್ಪ ತಾನು ನಡೆಸಿದ ಇನ್ಸ್ಪೆಕ್ಟರ್ ಗಿರಿಯ ಕೆಲವು ಕಥೆಗಳನ್ನೂ ಹೇಳುತ್ತಿದ್ದನು. ರಂಗಣ್ಣನು ಉಗ್ರಪ್ಪನ ವಿಚಾರವನ್ನೂ, ಅವನ ವಾದವನ್ನೂ, ಅವನಲ್ಲಾದ ಪರಿವರ್ತನೆಯನ್ನೂ , ಶಾಂತವೀರ ಸ್ವಾಮಿಯಾಗಿ ತನಗೆ ಮಾಡಿದ ಆತಿಥ್ಯವನ್ನೂ, ಕಲ್ಲೇಗೌಡ ಮತ್ತು ಕರಿಯಪ್ಪ ನವರೊಡನೆ ಆದ ಶಾಂತಿ ಸಂಧಾನವನ್ನೂ-ಎಲ್ಲವನ್ನೂ ಹೇಳಿದಾಗ ತಿಮ್ಮರಾಯಪ್ಪನು,

`ಅಯ್ಯೋ ಶಿವನೇ! ಎಂತಹ ಮಾರ್ಪಾಟು!’ ಎಂದು ಉದ್ಗಾರ ತೆಗೆದನು.

‘ನೋಡಿದೆಯಾ ತಿಮ್ಮರಾಯಪ್ಪ! ನನ್ನ ಇನ್ ಸ್ಪೆಕ್ಟರ್‌ಗಿರಿ! ಮಧ್ಯೆ ಮಧ್ಯೆ ಮನಸ್ಸಿಗೆ ಬೇಜಾರಾಗಿ ಹಾಳು ಇನ್ ಸ್ಪೆಕ್ಟರ್ ಗಿರಿ ನನಗೆ ಸಾಕಪ್ಪ! ಎಂದು ನಿನಗೆ ನಾನು ಬರೆಯುತ್ತಿದ್ದೆ, ಆದರೂ ಕೊನೆಯಲ್ಲಿ ನನಗೆ ಜನಾರ್ದನಪುರವನ್ನು ಬಿಟ್ಟು ಬರುವುದಕ್ಕೆ ಬಹಳ ವ್ಯಥೆಯಾಯಿತು. ಒಟ್ಟಿನಲ್ಲಿ ನನ್ನ ದರ್ಬಾರು ನಿನಗೆ ಮೆಚ್ಚಿಕೆಯಾಯಿತೇ?’ ಎಂದು ರಂಗಣ್ಣ ಕೇಳಿದನು.

`ಶಿವನಾಣೆ ರಂಗಣ್ಣ! ಶಿವನಾಣೆ! ನಿನಗೆ ಪ್ರಮಾಣವಾಗಿ ಹೇಳುತ್ತೇನೆ. ನಾವುಗಳೂ ಹಲವರು ಇನ್ಸ್ಪೆಕ್ಟರ್ ಗಿರಿ ಮಾಡಿದೆವು. ಹತ್ತರಲ್ಲಿ ಹನ್ನೊಂದು! ಲೆಕ್ಕವೇ ಪಕ್ಕವೇ! ನಿನ್ನ ಇನ್ ಸ್ಪೆಕ್ಟರ್ ಗಿರಿ ಒ೦ದು ಮಹಾಕಾವ್ಯ! ಚಂದ್ರಾರ್ಕವಾಗಿ ನಿಂತು ಹೋಯಿತು! ನನಗೆ ಬಹಳ ಸಂತೋಷ ರಂಗಣ್ಣ !’ ಎಂದು ಹೇಳುತ್ತಾ ತಿಮ್ಮರಾಯಪ್ಪ ರಂಗಣ್ಣನನ್ನು ಆಲಿಂಗನ ಮಾಡಿಕೊಂಡನು.

`ದೇವರೇ! ನಾನು ನೂರತೊಂಬತ್ತು ಪೌಂಡು ತೂಕ ಇಲ್ಲ! ನಾನು ಅಪ್ಪಚ್ಚಿಯಾಗಿ ಹೋಗ್ತೇನೆ! ಬಿಡು, ತಿಮ್ಮರಾಯಪ್ಪ! ಅವರಿಬ್ಬರೂ ನೋಡಿ ನಗುತ್ತಿದಾರೆ! ನನ್ನ ಇನ್ ಸ್ಪೆಕ್ಟರ್‌ಗಿರಿ ಇರಲಿ, ನಿನ್ನ ಸ್ನೇಹ ನಿಜವಾಗಿಯೂ! ಒಂದು ಮಹಾಕಾವ್ಯ! ಅದು ಆಚಂದ್ರಾರ್ಕವಾಗಿ ನಿಂತಿರುತ್ತದೆ!’ ಎಂದು ರಂಗಣ್ಣ ನಗುತ್ತಾ ಹೇಳಿದನು.
*****
ಮುಗಿಯಿತು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಿರ್‍ದಯಿಗಳು
Next post ಅಯ್ಯೋ ನಾನೇ! ಕಂಡ ಸತ್ಯವನೆ ಗ್ರಹಿಸದ

ಸಣ್ಣ ಕತೆ

  • ಕಲಾವಿದ

    "ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

  • ಪ್ರಕೃತಿಬಲ

    ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

  • ಡಿಪೋದೊಳಗಣ ಕಿಚ್ಚು…

    ಚಿತ್ರ: ವಾಲ್ಡೊಪೆಪರ್‍ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…