ಭ್ರಮಣ – ೧೧

ಭ್ರಮಣ – ೧೧

ಮರುದಿನ ಸಿದ್ಧಾನಾಯಕ್‌ ತಾನಾಗೇ ತನ್ನ ಲಾಟರಿ ಅಂಗಡಿಯನ್ನು ಮುಚ್ಚಿಬಿಟ್ಟ. ತೇಜಾ ತನ್ನೊಡನೆ ರೌಡಿಯಂತೆ ವರ್ತಿಸಿದ್ದ ಘಟನೆಯನ್ನು ಅವನು ಮರೆಯುವುದು ಅಸಾಧ್ಯವಾಗಿತ್ತು. ಅಂತಹ ಅವಮಾನಕ್ಕೆ ಅವನು ಈ ಮೊದಲೆಂದೂ ಗುರಿಯಾಗಿರಲಿಲ್ಲ. ಅದು ಮತ್ತು ತನ್ನ ರಾಮನಗರಕ್ಕೆ ಬಂಧಿಯಂತೆ ಕರೆದೊಯ್ದದ್ದು, ತನ್ನ ಮನೆ ಎದುರೇ ಹಳ್ಳಿಯ ಜನರೆದುರು ಪಟ್ಟಣದಿಂದ ಬಂದ ಹಿರಿಯ ಪೋಲಿಸ್ ಅಧಿಕಾರಿಯಿಂದ ತನಗೆ ಛೀಮಾರಿ ಹಾಕಿಸಿದ್ದು ಅವನಲ್ಲಿ ಆರಲಾಗದ ಉರಿಯಂತೆ ಉರಿಯುತ್ತಿದ್ದವು. ಉರಿಯುತ್ತಿರುವ ಬೆಂಕಿಯ ಮೇಲೆ ಪೆಟ್ರೋಲ್ ಹಾಕಿದಂತೆ ಬೆಳೆಯುತ್ತಿರುವ ತೇಜಾನ ಜನಪ್ರಿಯತೆ. ಕೇವಲ ಒಂದೆರಡು ದಿನದಲ್ಲಿ ತೇಜಾ ಇಷ್ಟು ಜನಪ್ರಿಯ ಹೇಗಾದ ಎಂಬುದರ ಬಗ್ಗೆ ಬಹಳ ಯೋಚಿಸಿದ ಸಿದ್ಧಾನಾಯಕ್. ಅದಕ್ಕವನಿಗೆ ಸರಿಯಾದ ಉತ್ತರ ಸಿಗಲಿಲ್ಲ. ಅಸೂಯೆ ಹೆಚ್ಚಾಯಿತಷ್ಟೆ. ಸಮಯ ಸಾಧಿಸಿ ಅವನ ಮೇಲೆ ಸೇಡು ತೀರಿಸಿಕೊಳ್ಳಬೇಕೆಂಬ ಯೋಚನೆ ಬೃಹದಾಕಾರ ತಾಳಿತ್ತು. ಯಾವಾಗಲೂ ತನ್ನ ಬದುಕಿನ ಖಳನಾಯಕನಂತೆ ತೇಜಾ ಅವನ ಮನವನ್ನು ಹಿಂಸಿಸುತ್ತಲೇ ಇದ್ದ.

ತೇಜಾನಿಗೆ ಅದ್ಯಾವುದರ ಚಿಂತೆಯೂ ಇರಲಿಲ್ಲ. ಕಲ್ಯಾಣಿಯೇ ಅವನ ಮೈಮನವನ್ನೆಲ್ಲಾ ಆಕ್ರಮಿಸಿಬಿಟ್ಟಿದ್ದಳು. ಮದುವೆಯಾದ ದಿನದಿಂದಲೇ ಮಡದಿಯಿಂದ ದೂರವಿರುವುದೇ ಇದೆಂತಹ ಅನ್ಯಾಯ ಎಂದು ತನಗೆ ತಾನೆ ಹೇಳಿಕೊಂಡು ಮನಸಿನಲ್ಲಿ ನಕ್ಕಿದ್ದ. ಯೋಚನೆ ಗಂಭೀರವಾದಾಗ ಏನೇ ಆಗಲಿ ತಾವು ಲೋಕದ ಎಲ್ಲಾ ಯೋಚನೆಗಳನ್ನು ಬಿಟ್ಟು, ತಮ್ಮದೇ ಆದ ಮನೆಯಲ್ಲಿ ಸಾಮಾನ್ಯರಂತೆ ಸಂಸಾರ ಆರಂಭಿಸಬೇಕು. ಅವಳೊಡನೆ ತಾನು ಊರೆಲ್ಲಾ ಸುತ್ತಾಡಬೇಕು, ತಾವು ತಮ್ಮ ವೈಯಕ್ತಿಕ ವಿಷಯಗಳನ್ನು ಯಾರ ಯೋಚನೆ, ಭಯವೂ ಇಲ್ಲದೇ ಮಾತಾಡುತ್ತಾ ಕೂಡಬೇಕು ಎನಿಸಲಾರಂಭಿಸಿತು. ಅದು ಸಾಧಿಸುವುದು ಹೇಗೆ ಎಂಬ ಕಡೆ ತನ್ನ ಯೋಚನೆಯನ್ನು ಹರಿಯಬಿಟ್ಟ. ಅದಕ್ಕೆ ಅಡ್ಡ ಗೋಡೆಗಳೇ ಎದುರಾಗುತ್ತಿದ್ದವು ಯಾವ ಪರಿಹಾರಮಾರ್ಗವೂ ಕಾಣಿಸುತ್ತಿರಲಿಲ್ಲ.

ಕೆಲಸಕ್ಕೆ ಸರಿಯಾದ ಸಮಯಕ್ಕೆ ಬಂದರು ಎಸ್.ಐ. ಮತ್ತು ಎಚ್.ಸಿ. ಅಂದು ಲಾಟರಿಯ ಅಂಗಡಿಯನ್ನು ತೆಗೆದಿಲ್ಲವೆಂಬ ಮಾಹಿತಿಯನ್ನು ಅವರೇ ನೀಡಿದರು ತೇಜಾನೂ ಅದರ ಬಗ್ಗೆ ಯೋಚಿಸುವ ಸ್ಥಿತಿಯಲ್ಲಿ ಇರಲಿಲ್ಲ. ಯಾರು ಎಲ್ಲಿ ಹಾಳಾಗಿ ಹೋದರೆ ತನಗೇನು ಎಂಬಂತಿತ್ತವನ ಮನಸ್ಥಿತಿ. ಅಂದು ತಾನು ಕಲ್ಯಾಣಿಯನ್ನು, ತನ್ನ ಪತ್ನಿಯನ್ನು ಕಾಣದಿದ್ದರೆ ತನಗೇನಾಗಿ ಹೋಗುವುದೋ ಎಂಬ ಬಹು ಅಸಹಜ ಭಯ ಹುಟ್ಟಿತವನಲ್ಲಿ.

ಬೆಟ್ಟದ ಕೆಳಗೆ, ದಟ್ಟ ಕಾಡಿನ ನಡುವೆ ಒಂದು ಕಡೆ ಮೇಲಿನಿಂದ ಹರಿದು ಕೆಳಗೆ ಜಲಪಾತದಂತೆ ಬೀಳುತ್ತಿದ್ದ ನೀರು ಒಂದು ಹೊಂಡದಲ್ಲಿ ತುಂಬಿ ಹಾಗೇ ಮುಂದೆ ಹರಿದುಹೋಗುತ್ತಿತ್ತು. ಎಂತಹವನನ್ನೇ ಆಗಲಿ ಕಟ್ಟಿ ಹಿಡಿಯುವಂತಹ ಆ ದೃಶ್ಯ ಕಲ್ಯಾಣಿಯ ಮೇಲೆ ಯಾವ ಪ್ರಭಾವವನ್ನೂ ಬೀರುತ್ತಿರಲಿಲ್ಲ. ವಿರಹವೇದನೆ ಅವಳನ್ನು ಆವರಿಸಿಬಿಟ್ಟಿತ್ತು. ಒಮ್ಮಿಂದೊಮ್ಮೆಲೆ ತನ್ನ ಬದುಕಿನಲ್ಲಿ ಇಂತಹ ಬದಲಾವಣೆಯಾಗಬಹುದೆಂದು ಅವಳು ಊಹಿಸಿರಲಿಲ್ಲ ಅದೇ ಯೋಚನೆಯಲ್ಲಿ ಬೇಡವಾದದ್ದನ್ನು ಕಳಚಿ ಆದಷ್ಟು ಕಡಿಮೆ ಬಟ್ಟೆಯಲ್ಲಿ ಹೊಂಡದಲ್ಲಿ ಇಳಿದಳು. ಚಳಿ, ತಣ್ಣನೆಯ ನೀರು ಅವಳಲ್ಲಿ ನಡುಕ ಹುಟ್ಟಿಸಲಿಲ್ಲ. ಸ್ನಾನ ಮಾಡಲಾರಂಭಿಸಿದ ಅವಳು ದೇಹದ ಪ್ರತಿ ಭಾಗವನ್ನೂ ಸ್ವಚ್ಛಗೊಳಿಸಿಕೊಳ್ಳುವ ಕ್ರಿಯೆ ಆರಂಭಿಸಿದಳು. ಕೈಗಳು ಬತ್ತಲು ದೇಹವನ್ನು ಉಜ್ಜಿಕೊಳ್ಳುತ್ತಿದ್ದಾಗ ತನ್ನ ಪ್ರತಿ ಅಂಗವು ಈಗ ಸಾರ್ಥಕತೆ ಪಡೆದಿದೆ ಎನಿಸಿತು. ಬರೀ ಅನಿಸಿಕೆಯಿಂದಲೇ ಪುಳಕಿತಗೊಂಡಿತವಳ ದೇಹ, ಅಲ್ಲಿಂದಲೇ ಎದ್ದು ತೇಜಾನ ಬಳಿ ಓಡಿಹೋಗಬೇಕೆನಿಸಿತು. ಮೇಲಿನಿಂದ ಬೀಳುತ್ತಿರವ ತಣ್ಣನೆಯ ನೀರಿನ ಕೆಳಗೆ ತಲೆಯನ್ನು ಹಿಡಿದಳು. ಆದರೂ ತೇಜಾನ ನೆನಪು ಅವಳಿಂದ ದೂರವಾಗಲಿಲ್ಲ.

ಅವನು ಎಷ್ಟು ಬುದ್ಧಿವಂತ, ಅದಕ್ಕೆ ತಕ್ಕಂತಹ ಕಂಠ. ಅವನು ತನ್ನ ವಾದವನ್ನು ಮಂಡಿಸುವ ರೀತಿ ಎಂತಹವರನ್ನೇ ಆಗಲಿ ಮರುಳು ಮಾಡಿಬಿಡಬಹುದು. ಎಂತಹ ಹೆಣ್ಣನ್ನೇ ಆಗಲಿ ಆಕರ್ಷಿಸುವ ಅಂಗಸೌಷ್ಟವ. ಮುಖದಲ್ಲಿ ಎದ್ದು ಕಾಣುವ ಮೂಗು ಅದಕ್ಕೆ ತನ್ನದೇ ಆಕರ್ಷಣೆಯನ್ನು ಕೊಟ್ಟಿತ್ತು. ಅಷ್ಟಾದರೂ ಅವನು ಈವರೆಗೆ ಬ್ರಹ್ಮಚಾರಿಯಾಗಿದ್ದ ಎಂದರೆ ಆಶ್ಚರ್ಯ. ಯಾವ ಹೆಣ್ಣೂ ಅವನನ್ನು ಆಕರ್ಷಿಸಿರಲಿಕ್ಕಿಲ್ಲವೇ! ತಾನು ಅವನಲ್ಲಿ ಏನು ಕಂಡೆ ಎಂಬ ಪ್ರಶ್ನೆಯನ್ನು ಹಾಕಿಕೊಂಡಳು. ಅವನ ಅಂಗಸೌಷ್ಟವಕ್ಕೆ, ಮುಖದಾಕರ್ಷಣೆಗಂತೂ ತಾನು ಮಾರುಹೋಗಿಲ್ಲ. ಸಾಂಸ್ಕೃತಿಕ ಕಾರ್ಯಕ್ರಮ ನಡೆಸುತ್ತಿದ್ದಾಗಲೇ ಅವನ ಮಾತಿನ ಚಾತುರ್ಯ, ತಾನು ಇನ್ಸ್‌ಪೆಕ್ಟರನಾದರೂ ಅದು ಏನೂ ಇಲ್ಲವೆಂಬಂತೆ ವರ್ತಿಸುತ್ತಿದ್ದ ರೀತಿಯನ್ನು ಮೆಚ್ಚಿಕೊಂಡಿದ್ದಳು. ನಾಯಕ ನಡೆಸುತ್ತಿದ್ದ ಸಾರಾಯಿ ಖಾನೆಯಲ್ಲಿ ಅವನು ವರ್ತಿಸಿದ ರೀತಿ, ನಾಯಕನೊಡನೆ ಅವನು ನಿಷ್ಟಾವಂತ, ಯಾರಿಗೂ ಹೆದರದ ಪೋಲೀಸ್ ಅಧಿಕಾರಿಯಂತೆ ಮಾತಾಡಿದ ವಿವರವನ್ನು ಕೂಡಾ ಕೇಳಿದ್ದಳವಳು. ಅದು ಅವಳಲ್ಲಿ ಅಚ್ಚರಿ ಹುಟ್ಟಿಸಿತ್ತು. ಈವರೆಗೂ ಯಾರೂ ಬಂಡೇರಹಳ್ಳಿಯಲ್ಲಿ ನಾಯಕನೊಡನೆ ಆ ರೀತಿ ವರ್ತಿಸಿದ್ದನ್ನವಳು ನೋಡಿರಲಿಲ್ಲ. ಎಲ್ಲಕ್ಕಿಂತ ಮಿಗಿಲಾಗಿ ಆಯುಧದೊಡನೆ ಬಂದಿಯಾದ ನಾಗೇಶನಿಗೆ ತನ್ನಿಂದಾದಷ್ಟು ಚಿಕಿತ್ಸೆ ಒದಗಿಸಿ ಆಯುಧ ಸಹಿತ ಬಿಟ್ಟುಬಿಟ್ಟದ್ದು ಅವಳಲ್ಲಿ ಅಚ್ಚರಿ ಹುಟ್ಟಿಸಿ, ಈ ಇನ್ಸ್‌ಪೆಕ್ಟರನ ಮನದಲ್ಲೇನಿದೆ ಎಂಬುವುದನ್ನು ಅರಿಯಲು ಕರೆಸಿದ್ದಳು. ಅದು ಈ ರೀತಿ ಮದುವೆಯಲ್ಲಿ ಮಾರ್ಪಟಾಗಬಹುದೆಂದು ಅವನು ಬಂದಾಗಲೂ ಊಹಿಸುವುದು ಕಷ್ಟವಾಗಿತ್ತು.

ಸ್ನಾನ ಮುಗಿಸಿ ದಡಕ್ಕೆ ಬಂದು ಮೈ ಒರೆಸಿಕೊಳ್ಳುತ್ತಿದ್ದಾಗ ಚಳಿ ತನ್ನ ಇರುವನ್ನು ಅವಳಿಗೆ ತೋರಿಸಿಕೊಟ್ಟಿತು. ಲಗುಬಗೆಯಿಂದ ಬಟ್ಟೆ ಧರಿಸಿ ತನ್ನ ವಾಸಸ್ಥಾನದ ಬಂಡೆಗಳ ಕಡೆ ಏರತೊಡಗಿದಳು. ದೇಹದ ತೀವ್ರಗತಿಯ ಚಲನ ಅವಳಿಂದ ಮತ್ತೆ ಚಳಿಯನ್ನು ದೂರ ಓಡಿಸುವಲ್ಲಿ ಸಫಲವಾಯಿತು.

ಅವಳ ಸಹಚರರೆಲ್ಲರೂ ಅವಳಿಗಾಗಿ ಕಾದು ನಿಂತಿದ್ದರು. ಅವರ ಮುಖದಲ್ಲಿ ಯಾವ ರೀತಿಯ ಬದಲಾವಣೆಯೂ ಕಾಣಲಿಲ್ಲ. ಇಂದಲ್ಲ ನಾಳೆ ಇವರಿಗೆ ತನ್ನ ಮದುವೆಯ ವಿಷಯ ಹೇಳಲೇಬೇಕಾಗುತ್ತದೆ ಎಂದುಕೊಂಡ ಕಲ್ಯಾಣಿ ಕೇಳಿದಳು

“ಏನು ವಿಶೇಷ?”

“ಬಂಡೇರಹಳ್ಳಿಯವರು ಹಣ ಕೊಟ್ಟಿದ್ದಾರೆ. ತಾತನೇ ಅದನ್ನು ಕೊಟ್ಟ”

ಬರೀ ಬಂಡೇರಹಳ್ಳಿಯವರೇ ಅಲ್ಲ, ಆಸುಪಾಸಿನ ಹಳ್ಳಿಯವರು ಕೂಡ ತಮ್ಮಿಂದಾದಷ್ಟು ಹಣ ಶೇಖರಿಸಿ ಒಬ್ಬ ನಂಬಿಕಸ್ಥ ಹಳ್ಳಿಯ ಹಿರಿಯನ ಕೈಯಲ್ಲಿ ಅದನ್ನು ಕೊಡುತ್ತಿದ್ದರು. ಆತನ ಮೂಲಕ ಅದು ಕಲ್ಯಾಣಿಗೆ ಸೇರುತ್ತಿತ್ತು. ಹೀಗೆ ಹಣ ಕೊಡಬೇಕೆಂಬ ನಿಯಮವನ್ನು ಯಾರೂ ನಿಯಮಿಸಿರಲಿಲ್ಲ. ಕಲ್ಲಕ್ಕ ಯಾರ ಬಳಿಯಿಂದಲೂ ಹಣ ಸುಲಿದು ಬದುಕುವವಳಲ್ಲವೆಂದು ತಿಳಿದ ಮೇಲೆ ಹಳ್ಳಿಗರೇ ತಮ್ಮ ತಮ್ಮಲ್ಲಿ ಮಾತಾಡಿಕೊಂಡು ಹುಟ್ಟಿಸಿದ ಪದ್ಧತಿ ಇದು. ಅದಕ್ಕೆ ಮೊದಲು ವಿರೋಧ ತೋರಿದಳು ಕಲ್ಯಾಣಿ. ಆದರೆ ಆ ಹಳ್ಳಿಗರು ತಾವು ತಮ್ಮ ಸ್ವಾರ್ಥಕ್ಕಾಗಿ ಈ ಕೆಲಸ ಮಾಡುತ್ತಿದ್ದೇವೆಂದು, ಕಲ್ಯಾಣಿ ಎಷ್ಟು ಕಾಲ ಬದುಕಿದ್ದರೆ ಅಷ್ಟು ದಿನ ತಾವು ಸುಖವಾಗಿ ಇರಬಹುದೆಂದು ವಾದಿಸಿದ್ದರವರು. ಕಲ್ಯಾಣಿಗೂ ತನ್ನ ದಳದ ಕಾರ್ಯ ಕಲಾಪ ನಡೆಸಲು ಹಣ ಬೇಕು. ಅದಕ್ಕೆ ಒಪ್ಪಿಕೊಂಡಿದ್ದಳವಳು.

ಹಾಗೆಯೇ ಊರುಗಳಲ್ಲಿ ಅವಳಿಂದ ಪ್ರಭಾವಿತರಾದ ಧನವಂತರೂ ಇದ್ದರು. ಸರಕಾರದಲ್ಲಿ ಕಾಲಾನುಕಾಲದಿಂದ ಕೊಳೆಯುತ್ತಾ ಬಿದ್ದ ಅವರ ನ್ಯಾಯೋಚಿತ ಕೆಲಸಗಳನ್ನು ಅವಳು ನೋಡುನೋಡುತ್ತಿದ್ದಂತೆ ಮಾಡಿಸಿ ಕೊಟ್ಟಿದ್ದಳು. ಆವರೆಗೆ ಆ ಕೆಲಸಕ್ಕಾಗಿ ಅವರು ಹೇರಳ ಹಣವನ್ನು ಲಂಚದ ರೂಪದಲ್ಲಿ ಕೊಟ್ಟಿದ್ದರು. ಆ ಹಣವನ್ನೂ ಆಯಾ ಅಧಿಕಾರಿಯರು ಹಿಂತಿರುಗಿಸುಂತೆ ಮಾಡಿದ್ದಳು. ತಮ್ಮ ಈ ಜನ್ಮದಲ್ಲಿ ಆಗುವುದಿಲ್ಲ ಎಂದು ಕೈ ಚಲ್ಲಿ ಕುಳಿತ ಅವರುಗಳ ಪಾಲಿಗೂ ದೇವತೆಯಾಗಿದ್ದಳು ಕಲ್ಯಾಣಿ. ಕೇಳದೆಯೇ ಅವರಿಂದಲೂ ದೇಣಿಗೆ ಬರುತ್ತಿತ್ತು. ಮೊದಲು ಕ್ರೂರಿಗಳಾಗಿ ಬಡರೈತರ ರಕ್ತ ಹೀರುತ್ತಿದ್ದ ಕೆಲ ಭೂಮಾಲಿಕರೂ ಈಗ ಸರಿದಾರಿಗೆ ಬಂದು ಅವಳ ವ್ಯಕ್ತಿತ್ವಕ್ಕೆ ಮಾರು ಹೋಗಿದ್ದರು. ಅವರಿಂದಲೂ ಹಣ ಬರುತ್ತಿತ್ತು. ಇಷ್ಟೆಲ್ಲಾ ಆದರೂ ತಾನು ಎಷ್ಟು ಪ್ರಸಿದ್ಧಳೆಂಬುವುದು ಕಲ್ಯಾಣಿಗೇ ಗೊತ್ತಿರಲಿಲ್ಲ.

ಪಟ್ಟಣದಲ್ಲೂ ಅವಳ ಬಗ್ಗೆ ಹಲವಾರು ದಂತಕಥೆಗಳು ಹರಡಿಕೊಂಡಿದ್ದವು. ಯಾರೂ ಅವಳನ್ನು ನೋಡದಿದ್ದರೂ ಆ ದಂತಕಥೆ ಮತ್ತು ಪತ್ರಿಕೆಗಳಲ್ಲಿ ಬರುವ ಸುದ್ದಿಯನ್ನು ಓದುತ್ತಿದ್ದ ರಾಜ್ಯದ ಎಲ್ಲ ಕಡೆಗಳಲ್ಲೂ ಅವಳ ಅಭಿಮಾನಿಯರಿದ್ದರು. ಆದರೆ ಪೋಲಿಸರ ಭಯದಿಂದ ಅದನ್ನವರು ಬಾಯಿಬಿಚ್ಚಿ ಹೇಳುತ್ತಿರಲಿಲ್ಲ. ಇಡೀ ರಾಜ್ಯದಲ್ಲೇ ಕಲ್ಯಾಣಿ ಹೆಸರು ಮಾಡಿರುವ ವಿಷಯ ಸರಕಾರಕ್ಕೆ ಹೇಗೆ ಗೊತ್ತಿರಲಿಲ್ಲವೋ ಹಾಗೆಯೇ ಅದು ಪೋಲಿಸಿನವರಿಗೂ ಗೊತ್ತಿರಲಿಲ್ಲ.

“ಇನ್ನೇನು ಬಂಡೇರಹಳ್ಳಿಯಲ್ಲಿನ ಬದಲಾವಣೆ” ತೇಜಾನ ಬಗ್ಗೆ ಯೋಚಿಸುತ್ತಾ ಮಾತಾಡಿದಳು ಕಲ್ಯಾಣಿ.

“ಸ್ಕ್ವಾಡಿನ ಮುಖ್ಯಸ್ಥರು ನಿನ್ನೆ ಸಂಜೆ ಬಂದು ರಾತ್ರಿ ಹನ್ನೊಂದಕ್ಕೆ ಹೋದರಂತೆ. ಹಳ್ಳಿಯವರೆಲ್ಲಾ ಅವರಿಗೆ ಭವ್ಯಸ್ವಾಗತ ನೀಡಿದರಂತೆ. ಅವರು ನಾಯಕ್‌ನನ್ನು ಹೆದರಿಸಿ ಹೋಗಿದ್ದಾರೆ. ಅವನು ಇವತ್ತು ತನ್ನ ಲಾಟರಿ ಅಂಗಡಿಯನ್ನು ತೆಗೆದಿಲ್ಲ. ನಿಗದಿತ ಸಮಯದನಂತರ ಸರಾಯಿಯೂ ಎಲ್ಲೂ ಕಳ್ಳತನದಿಂದಲೂ ಮಾರಾಟವಾಗುತ್ತಿಲ್ಲವಂತೆ” ವರದಿಗಾರ ವರದಿ ಒಪ್ಪಿಸುವಂತೆ ಹೇಳಿದ ಹರಿ.

“ಈ ಇನ್ಸ್‌ಪೆಕ್ಟರ್ ಒಳ್ಳೆಯ ಕೆಲಸಗಳು ಮಾಡುತ್ತಿದ್ದಂತೆ ಕಾಣುತ್ತದೆ” ತನ್ನದೇ ಯೋಚನೆಯಲ್ಲಿ ತೊಡಗಿದಂತೆ ಹೇಳಿದಳು ಕಲ್ಯಾಣಿ.

“ನಾನೀವರೆಗೂ ಎಲ್ಲೂ ಪೋಲೀಸನವರನ್ನು ಇಷ್ಟು ಹಚ್ಚಿಕೊಂಡ ಹಳ್ಳಿಗರನ್ನು ನೋಡಿಲ್ಲ. ಪೋಲೀಸಿನವರು ರಾಕ್ಷಸರಲ್ಲ. ತಮ್ಮ ಆತ್ಮಬಂಧುಗಳಂತೆ ವರ್ತಿಸುತ್ತಿದ್ದಾರೆ ಜನ. ಈ ಇನ್ಸ್‌ಪೆಕ್ಟರ್ ಉತೇಜ್ ಏನು ಮಾಯಾಮಂತ್ರ ಮಾಡಿದ್ದಾನೋ ಆ ದೇವರಿಗೆ ಗೊತ್ತು” ತನಗಿನ್ನೂ ಅದನ್ನು ನಂಬಲಾಗುತ್ತಿಲ್ಲ ಎಂಬಂತೆ ಹೇಳಿದ ಶಂಕರ್

“ಎಲ್ಲರೂ ಮನುಷ್ಯರೇ ಅವರಲ್ಲಿ ಮೇಲುಕೀಳಿಲ್ಲ ಎಂಬುವುದನ್ನು ಅವನು ಚೆನ್ನಾಗಿ ಅರಿತಿದ್ದಾನೆ. ಬಡಬಗ್ಗರ ಬಗ್ಗೆ ನಮಗಿರುವಂತಹ ಕಾಳಜಿ ಅವನಿಗೂ ಇದೆ. ಅಹಂಕಾರಿ ಧನವಂತರನ್ನು ಹೇಗೆ ಸದೆಬಡಿಯಬೇಕೆಂಬುವುದೂ ಅವನಿಗೆ ಗೊತ್ತಿದೆ. ಅದಕ್ಕೆ ಜನ ಅವನನ್ನು ಅಷ್ಟು ಮೆಚ್ಚಿಕೊಳ್ಳುತ್ತಿದ್ದಾರೆ…. ಮಲ್ಲಪ್ಪ ನೀ ಹೋದ ಕೆಲಸವೇನಾಯಿತು?” ತೇಜಾನ ಪ್ರಶಂಸೆ ಮುಗಿಸಿ ಮಲ್ಲಪ್ಪನ ಕಡೆ ತಿರುಗಿದಳು ಕಲ್ಯಾಣಿ.

“ಚೌಧರಿಯವರ ದಳ ಎಲ್ಲಿ ತಿರುಗುತ್ತಿದೆಯೋ ಇನ್ನೂ ಗೊತ್ತಾಗಿಲ್ಲ” ಹೇಳಿದ ಮಲ್ಲಪ್ಪ.

“ಸದ್ಯಕ್ಕೆ ನಮಗೆ ಪೋಲಿಸರ ಭಯವಿಲ್ಲ. ಚೌದರಿ ಮತ್ತವನ ದಳದವರನ್ನು ನಾವು ಆದಷ್ಟು ಬೇಗ ಹುಡುಕಿ ಮುಗಿಸಬೇಕು. ಯಾವ ಯಾವ ಊರುಗಳಲ್ಲಿ ದರೋಡೆ ನಡೆಯುತ್ತಿದೆಯೋ ನೋಡಿ ಏನಾದರೂ ಸುಳಿವು ಸಿಗಬಹುದು. ನಾಗೇಶ ನೀನು ಹರಿಯೊಡನೆಯೇ ಇರು ಅವನನ್ನು ನಿನ್ನ ಗುರು ಎಂದುಕೊ ಆಗ ಎಲ್ಲವನ್ನೂ ಬೇಗ ಬೇಗ ಕಲಿಯಬಲ್ಲೆ. ಶಂಕರ ನೀನು ಇನ್ಸ್‌ಪೆಕ್ಟರ್‌ನಿಗೆ ರಾತ್ರಿ ಎಂಟು ಗಂಟೆಗೆ ದೇವನಹಳ್ಳಿಯ ಪಟವಾರಿಯವರ ಮನೆಗೆ ಬರಲು ಹೇಳು”

“ಸರಿ ಅಕ್ಕ” ಎಂದ ಶಂಕರ

ನಾಗೇಶನ ಕಡೆ ತಿರುಗಿ ಮತ್ತೆ ಒತ್ತಿ ಕೇಳಿದಳು ಕಲ್ಯಾಣಿ.

“ನಾ ಹೇಳಿದ್ದು ನಿನಗೆ ಅರ್ಥವಾಯಿತೇ ನಾಗೇಶ್”

“ಅರ್ಥವಾಯಿತಕ್ಕ” ನನ್ನ ದನಿಯಲ್ಲಿ ಹೇಳಿದ ನಾಗೇಶ.

“ಹೋಗಿ ಯಾರ್‍ಯಾರಿಗೆ ಎಷ್ಟೆಷ್ಟು ಹಣ ಬೇಕೋ ಹರಿ ಬಳಿಯಿಂದ ತೆಗೆದುಕೊಳ್ಳಿ”

ಎಂದ ಕಲ್ಯಾಣಿ ಮಾತು ಮುಗಿದಂತೆ ಹಿಂದೆ ಗುಹೆಯಲ್ಲಿನ ಆಯುಧ ಭಂಡಾರವನ್ನು ಪರೀಕ್ಷಿಸಲು ಹೋದಳು.
* * *

ಮುಂದಿದ್ದ ಟೇಬಲ್ಲಿನ ಮೇಲೆ ಕಾಲು ಚಾಚಿ ಆರಾಮವಾಗಿ ಕುಳಿತಿದ್ದ ತೇಜನ್ನೂ ತನ್ನ ವೈವಾಹಿಕ ಜೀವನದ ಭವಿಷ್ಯದ ಬಗೆಯೇ ಯೋಚಿಸುತ್ತಿದ್ದ. ಎಲ್ಲಾ ಅಂಧಕಾರಮಯವಾಗಿಯೇ ಕಾಣುತ್ತಿತ್ತು. ಎಲ್ಲೂ ಬೆಳಕಿನ ಲಕ್ಷಣವಿಲ್ಲ. ಕಲ್ಯಾಣಿಯೊಡನೆ ಮಾತಾಡುತ್ತಾ ಕುಳಿತರೆ ಯಾವುದಾದರೂ ಮಾರ್ಗ ಕಾಣಬಹುದೇನೋ ಎಂದುಕೊಳ್ಳುತ್ತಿದ್ದಾಗ ಪೇದೆ ಬಂದು ಅವನನ್ನು ಇಬ್ಬರು ಯುವಕರು ಕಾಣಲು ಬಂದಿದ್ದಾರೆಂದು ಹೇಳಿದ. ಟೇಬಲ್ಲಿನ ಮೇಲಿನಿಂದ ಕಾಲನ್ನು ತೆಗೆಯುತ್ತಾ ಅವರನ್ನು ಕಳುಹಿಸುವಂತೆ ಹೇಳಿದ ತೇಜಾ.

ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಎಲ್ಲರಿಗಿಂತ ಮುಂದಾಗಿ ಕೆಲಸ ಮಾಡಿದ ಯುವಕರು. ಅವರನ್ನು ಕೂಡುವಂತೆ ಹೇಳಿದ ತೇಜ. ಕೂಡುತ್ತಾ ಸ್ವಲ್ಪ ಕಾಳಜಿಯ ದನಿಯಲ್ಲಿ ಕೇಳಿದ ಒಬ್ಬ ಯುವಕ.

“ಏನು ಸರ್! ಏನಯಿತು! ಹೀಗ್ಯಾಕಿದ್ದೀರಿ?”

ತನ್ನ ವಿರಹವೇದನೆ ಅಷ್ಟು ಅಚ್ಚು ಒತ್ತಿದಂತೆ ಮುಖದಲ್ಲಿ ಕಂಡು ಬರುತ್ತಿದೆಯೇ ಎಂದುಕೊಳ್ಳುತ್ತಾ ಮುಗಳ್ನಕ್ಕು ಹೇಳಿದ ತೇಜ.

“ಏನೂ ಆಗಿಲ್ಲ! ಬೇಜಾರು ಅಷ್ಟೆ”

“ಮದುವೆ ಮಾಡಿಕೊಂಡುಬಿಡಿ ಸರ್! ಬೇಜಾರಾಗುವುದು ತಾನಾಗೆ ಹೊರಟು ಹೋಗುತ್ತದೆ.” ಕೂಡಲೇ ಹೇಳಿದ ಮತ್ತೊಬ್ಬ ಯುವಕ. ಹಾಗೆ ಮಾತಾಡಬಾರದೆಂಬಂತೆ ಅವನ ಸ್ನೇಹಿತ ಸಿಟ್ಟಿನಿಂದ ನೋಡಿದ.

“ಹೌದು ಮದುವೆ ಮಾಡಿಕೊಂಡರೆ ಬೇಜಾರು ಹೋಗಬಹುದು. ಅದಕ್ಕೆ ನಿಮ್ಮ ಸಹಾಯ ಬೇಕು” ಹುಡುಗಾಟಿಕೆಯ ದನಿಯಲ್ಲಿ ಆ ಕ್ಷಣ ಬಾಯಿಗೆ ಬಂದದ್ದನ್ನು ಹೇಳಿದ ತೇಜ.

“ನಮ್ಮ ಸಹಾಯ?” ಹೆಚ್ಚು ಕಡಿಮೆ ಆ ಇಬ್ಬರೂ ಒಂದೇ ದನಿಯಲ್ಲಿ ಹೇಳಿದರು. ಜೋರಾಗಿ ನಕ್ಕು ನಗು ನಿಂತ ಮೇಲೆ ಹೇಳಿದ ತೇಜ.

“ಹುಡುಗಾಟಕ್ಕೆ ಹೇಳಿದೆ… ಹೇಳಿ ಏನು ವಿಶೇಷ”

ಸರಿಯಾಗಿ ಕುಳಿತರು ಇಬ್ಬರು ಯುವಕರು, ಒಬ್ಬ ಗಂಭೀರ ದನಿಯಲ್ಲಿ ಹೇಳಿದ

“ನಾವು ನಿಮ್ಮ ಅನುಮತಿ ಇಲ್ಲದೇ ಉತ್ತೇಜ್ ಯುವಕರ ಸಂಘ ಎಂಬ ಹೆಸರಿನ ಒಂದು ಸಂಘವನ್ನು ಸ್ಥಾಪಿಸಿದ್ದೇವೆ ಸರ್. ಅದಕ್ಕೆ ನೀವೇ ಅಧ್ಯಕ್ಷರು”

ಅದನ್ನು ಕೇಳಿ ಅಚ್ಚರಿಯ ಪರಮಾವಧಿಗೆ ಮುಟ್ಟಿದ ತೇಜ, ಕೂಡಲೇ ಏನು ಹೇಳಬೇಕೋ ತೋಚಲಿಲ್ಲ. ಕಲ್ಯಾಣಿ ಆ ಹೊತ್ತಿಗಾದರೂ ಅವನ ಮನದಿಂದ ದೂರವಾದಳು. ಅವನ ಮುಖಭಾವ ಮೌನ ಕಂಡು ಮತ್ತೊಬ್ಬ ಯುವಕ ಕೇಳಿದ

“ಯಾಕೆ ಸರ್! ಇದು ನಿಮಗೆ ಇಷ್ಟವಾಗಿಲ್ಲವೇ?”

“ನನ್ನ ಹೆಸರು ಯಾಕೆ? ನಾನು ಪೊಲಿಸ್ ಖಾತೆಯವನು ಇಂತದೆಲ್ಲಾ ಮಾಡಬಾರದು”

ಇನ್ನೂ ಅಚ್ಚರಿಯಿಂದ ಹೊರಬರದವನಂತೆ ಹೇಳಿದ ತೇಜ.

“ಯಾಕೆ ಮಾಡಬಾರದು ಸರ್! ರಾಮನಗರದ ಎಸ್.ಐ. ಸಾಹೇಬರು ಎರಡು ಸಂಘಗಳ ಅಧ್ಯಕ್ಷರಾಗಿದ್ದಾರೆ. ಅಂತಹದರಲ್ಲಿ ನೀವು ಅದನ್ನೇ ಮಾಡಿದರೆ ಯಾಕೆ ತಪ್ಪು. ಅಂತಹದೇನಾದರೂ ಕಾನೂನಿದೆಯೇ ಸರ್” ಭಾವುಕ ದನಿಯಲ್ಲಿ ಹೇಳಿದ ಮತ್ತೊಬ್ಬ ಯುವಕ. ಅವರಿಗೆ ಏನು ಹೇಳಬೇಕೆಂಬುವುದು ತೋಚಲಿಲ್ಲ ತೇಜನಿಗೆ. ಈ ಸಂಘ ಹುಟ್ಟಿಕೊಂಡು ತನ್ನ ಹೆಸರಿನಲ್ಲಿ ಚಟುವಟಿಕೆಗಳು ಆರಂಭವಾದರೆ ರಾಜಕೀಯ ನಾಯಕರು ನನ್ನ ಮೇಲೆ ಉರಿದುಬೀಳುವುದು ಸಹಜ. ಆದ್ದರಿಂದ ತನ್ನ ವರ್ಗಾವಣೆಯಾಗಬಹುದು. ಏನೇ ಆಗಲಿ ಕಲ್ಯಾಣಿಯಿಂದ ದೂರವಿರುವುದು ಅಸಾಧ್ಯ. ತನ್ನ ಮನದ ತಳಮಳವನ್ನು ತೂರಗೊಡದೇ ಹೇಳಿದ

“ನನ್ನ ಹೆಸರಿನಲ್ಲಿ ಸಂಘವ್ಯಾಕೆ. ಇದೇ ಊರ ಹಿರಿಯರ ಯಾರದಾದರೂ ಹೆಸರನ್ನಿಡಿ. ಗುಂಡು ತಾತ ಇದ್ದಾರೆ ಅವರ ಹೆಸರು ಇಡಬಹುದು, ಇಲ್ಲದಿದ್ದರೆ ಬಂಡೇರಹಳ್ಳಿಯ ಯುವಕರ ಸಂಘ ಎಂದು ಹೆಸರಿಡಿ….”

“ಹೇಗೂ ಕೆಳಗೆ ಊರ ಹೆಸರು ಬರುತ್ತದೆ ಸರ್! ನೀವು ನಮಗೆ ಸ್ಫೂರ್ತಿ ನೀಡಿದವರು ಅದಕ್ಕೆ ನಿಮ್ಮ ಹೆಸರು ಇಡುತ್ತೇವೆ” ಖಚಿತ ದನಿಯಲ್ಲಿ ಹೇಳಿದ ಮತ್ತೊಬ್ಬ ಯುವಕ. ಯೋಚನೆಯಲ್ಲಿ ತೊಡಗಿದ ತೇಜ. ಸ್ವಲ್ಪ ಹೊತ್ತು ಮೌನವಾವರಿಸಿತು. ಯಾವುದೋ ನಿರ್ಣಯಕ್ಕೆ ಬಂದಂತೆ ಹೇಳಿದ.

“ನೀವು ಒಂದು ಅರ್ಧ ಗಂಟೆ ಬಿಟ್ಟು ಬನ್ನಿ ಹೇಳುತ್ತೇನೆ”

“ಸರಿ ಸರ್! ಸರಿಯಾಗಿ ಅರ್ಧ ಗಂಟೆಯ ಬಳಿಕ ಬರುತ್ತೇವೆ” ಎಂದ ಒಬ್ಬ. ಇಬ್ಬರೂ ಹೊರಹೋದ ಮೇಲೆ ಫೋನಿನ ರಿಸೀವರ್ ಎತ್ತಿಕೊಂಡು ಸ್ಕ್ವಾಡಿನ ಮುಖ್ಯಸ್ಥರ ನಂಬರ್ ಅದುಮಿದ. ಬಂಡೇರಹಳ್ಳಿಯಲ್ಲಿಯೂ ಎಸ್.ಟಿ.ಡಿ. ಸೌಕರ್ಯ ಬಂದಿರುವುದು ಪುಣ್ಯವೆನಿಸಿತ್ತು. ಅತ್ತಕಡೆಯಿಂದ ಅವರ ದನಿ ಕೇಳಿಬರುತ್ತಲೇ ಹೇಳಿದ

“ನಾನು ಸರ್ ತೇಜಾ! ಇಲ್ಲೊಂದು ಸಮಸ್ಯೆಯಲ್ಲಿ ಸಿಕ್ಕಿಕೊಂಡಿದ್ದೇನೆ”

“ಎಂತಹ ಸಮಸ್ಯೆ?” ಪ್ರಶ್ನಿಸಿದರವರು

“ಇಲ್ಲಿನ ಯುವಕರು ನನ್ನ ಹೆಸರಿನಲ್ಲಿ ಒಂದು ಸಾಂಸ್ಕೃತಿಕ ಸಂಘ ತೆಗೆಯುವೆವು ಎಂದು ಹಟ ಹಿಡಿದಿದ್ದಾರೆ. ಅದರಿಂದ…”

“ಗೋ ಅಹೆಡ್! ಬಂಡೇರಹಳ್ಳಿಗೆ ಒಳಿತಾಗುವುದನ್ನು ಏನೇನು ಮಾಡಬಹುದೋ ಮಾಡು. ನಾನಾಗಲೇ ಸಿ.ಎಂ. ಸಾಹೇಬರಿಗೆ ಎಲ್ಲಾ ವಿವರಿಸಿದ್ದೇನೆ. ಇನ್ನು ಆ ನಾಯಕನೂ ಬಾಲ ಆಡಿಸುವುದಿಲ್ಲ. ನನಗಿನ್ನೂ ರಿಟೈರ್ ಆಗಲು ಮೂರು ತಿಂಗಳುಗಳು ಮಾತ್ರ ಮಿಕ್ಕಿವೆ. ಆವರೆಗೆ ಏನು ಬೇಕಾದರೂ ಮಾಡು ನಾನಿದ್ದೇನೆ ನಿನ್ನ ರಕ್ಷಿಸಲು ಅವನ ಮಾತನ್ನು ಅರ್ಧಕ್ಕೆ ತಡೆದು ಉತ್ಸಾಹದ ದನಿಯಲ್ಲಿ ಹೇಳಿದರು ಸ್ಕ್ವಾಡಿನ ಮುಖ್ಯಸ್ಥ ಶ್ರೀವಾಸ್ತವ.

“ಥ್ಯಾಂಕ್ಯೂ ವೆರಿಮಚ್” ಆನಂದ ತಾಳಲಾರದೇ ಉದ್ಗರಿಸಿದ ತೇಜಾ.

“ಯು ಆರ್ ವೆಲ್‌ಕಮ್! ನಾ ಹೇಳಿದ್ದು ಮರೆಯಬೇಡ ಡೋಂಟ್ ಕಿಲ್‌ಹರ್”

ಎಂದ ಅವರು ಸಂಪರ್ಕ ಮುರಿದರು. ಈ ಸ್ಕ್ವಾಡಿನ ಮುಖ್ಯಸ್ಥರಿಗೆ ಯಾರ ಭಯವೂ ಇಲ್ಲ. ತಾವು ಮಾತಾಡಿಕೊಂಡದ್ದನ್ನು ಯಾವುದಾದರೂ ಆಪರೇಟರ್ ಕೇಳಿಸಿಕೊಂಡರೆ! ಅದು ಸಾಧ್ಯವಿಲ್ಲವೇನೋ ಯಾಕೆಂದರೆ ಅದು ಕ್ರಾಂತಿಕಾರಿಯರನ್ನು ನಿರ್ಮೂಲಿಸುವ ಪ್ರತ್ಯೇಕ ವಿಭಾಗ, ಅವರ ಮುಖ್ಯಸ್ಥರು ಫೋನಿನಲ್ಲಿ ಮಾತಾಡುವುದನ್ನು ಬೇರಾರೂ ಕೇಳಿಸಿಕೊಳ್ಳುವುದು ಅಸಾಧ್ಯ. ಬಹುಶಃ ಕೇಳಿಸಿಕೊಂಡರೂ ಭಯಪಡುವವರಲ್ಲ ಸ್ಕ್ವಾಡಿನ ಮುಖ್ಯಸ್ಥರು.

‘ಏನು ಬೇಕಾದರೂ ಮಾಡು’ ಎಂಬ ಅವರ ಮಾತೇ ತೇಜಾನಲ್ಲಿ ಎಲ್ಲಿಲ್ಲದ ಉತ್ಸಾಹಾನಂದವನ್ನು ತುಂಬಿತ್ತು. ಅಂತೂ ಸಿ.ಎಂ. ಸಾಹೇಬರಿಗೆ ಎಲ್ಲವನ್ನೂ ವಿವರಿಸಿ ಅವರನ್ನು ಒಪ್ಪಿಸಿದ್ದಾರೆ. ಅದೇ ದೊಡ್ಡ ಮಾತು. ಹಳ್ಳಿಯ ಯುವಕರನ್ನು ಅವರು ಕಟ್ಟಲಿರುವ ಸಂಘವನ್ನು ಆಗಲೇ ಮರೆತುಬಿಟ್ಟಿದ್ದ ತೇಜಾ, ಕಲ್ಯಾಣಿಯನ್ನು ಕಾಣುವ ತಹತಹಿಕೆ ಮತ್ತೆ ಅವನಲ್ಲಿ ಹುಟ್ಟಿಕೊಂಡಿತ್ತು. ಅವಳ ಯೋಚನೆಯಲ್ಲಿಯೇ ಲೊಲೂಪನಾದಾಗ ಯುವಕರಿಬ್ಬರು ಬಂದರು ಹೆಚ್ಚು ಮಾತಿಗೆ ಅವಕಾಶ ಕೊಡದೇ ತನ್ನ ಒಪ್ಪಿಗೆ ಸೂಚಿಸಿ, ಮುಂದಿನ ಕಾರ್ಯಕ್ರಮಗಳು ಹಮ್ಮಿಕೊಳ್ಳುವ ಮುನ್ನ ಒಮ್ಮೆ ಎಲ್ಲರೂ ಕುಳಿತು ಮಾತಾಡುವ ಎಂದು ಹೇಳಿ ಕಳಿಸಿಬಿಟ್ಟ.

ತನ್ನನ್ನು ತಕ್ಷಣ ಕಾಣಬೇಕಾದರೆ ಏನು ಮಾಡಬೇಕೆಂಬುವುದನ್ನು ಹೇಳಿದ್ದಳು ಕಲ್ಯಾಣಿ. ಅದನ್ನೀಗ ಉಪಯೋಗಿಸಲೇ ಎಂಬ ಯೋಚನೆ ಬಂದಾಗ ಅಷ್ಟು ಅವಸರ ಬೇಡ. ಅದೂ ಅಲ್ಲದೇ ತಾನು ಯಾವುದಾದೂರ ಕೆಲಸದ ಮೇಲೆ ಹೋದರೆ ಬರುವುದು ಎಷ್ಟು ಹೊತ್ತಾಗುತ್ತದೆಂಬುವುದು ತನಗೇ ಗೊತ್ತಿಲ್ಲವೆಂದು ಹೇಳಿದ್ದಳು ಕಲ್ಯಾಣಿ.

ಅವಳಿಗೂ ತನ್ನನ್ನು ಕಾಣಬೇಕೆಂಬ ಹಂಬಲ ಹುಟ್ಟುತ್ತಿರಲಿಕ್ಕಿಲ್ಲವೇ! ಅಥವಾ ಯಾರಾದಾದರೂ ಕೊಲೆಯ ಯೋಜನೆ ಹಾಕುತ್ತಾ ಕುಳಿತಿರಬಹುದೇ ಎಂದುಕೊಳ್ಳುತ್ತಾ ಮನೆಗೆ ಹೋಗಲು ಎದ್ದ.

ತೇಜಾ ನಾಲ್ಕು ಹೆಜ್ಜೆ ಮುಂದೆ ಹೋಗುವುದರಲ್ಲಿ ಒಬ್ಬ ಕೆಂಪು ರುಮಾಲನ್ನು ಸುತ್ತಿದ ವ್ಯಕ್ತಿ ಎದುರಿನಿಂದ ಬರುತ್ತಿರುವುದು ಕಂಡಿತು. ಅವನನ್ನೆಲ್ಲೋ ನೋಡಿದ್ದೇನೆಂದುಕೊಳ್ಳುತ್ತಿರುವಾಗಲೇ ಹತ್ತಿರ ಬಂದ ಆ ವ್ಯಕ್ತಿ ಮಲ್ಲನೆಯ ದನಿಯಲ್ಲಿ ಹೇಳಿದ

“ಕಾಳಿ! ಅಕ್ಕ ರಾತ್ರಿ ಎಂಟಕ್ಕೆ ದೇವನಹಳ್ಳಿಯ ಪಟ್‌ವಾರಿಯವರ ಮನೆಗೆ ಬರಲು ಹೇಳಿದ್ದಾರೆ”

ತಾನು ಏನೂ ಹೇಳಲೇ ಇಲ್ಲವೇನೋ ಎಂಬಂತೆ ಆ ವ್ಯಕ್ತಿ ತನ್ನದೇ ಗತಿಯಲ್ಲಿ ನಡೆಯುತ್ತಾ ಮುಂದೆ ಹೊರಟುಹೋದ. ದೇವನಹಳ್ಳಿ, ಪಟ್‌ವಾರಿ ಯವರ ಮನೆಗ್ಯಾಕೆ. ಅವರು, ಇವಳ ಹಿತೈಷಿಯಂದೇ ಎಷ್ಟೇ ಹಿತೈಷಿ, ಸಹಾನುಭೂತಿಪರರಾದರೂ ಇಂತಹ ಅಪಾಯವನ್ನು ಯಾರೂ ಬಯಸುವುದಿಲ್ಲ. ತಾನು ಅಲ್ಲಿ ಹೋಗಿ ಅವಳನ್ನು ಭೇಟಿಯಾಗುವುದು ಸರಿಯೇ ಎಂಬ ಯೋಚನೆ ಹಾದಾಗ ಅದನ್ನು ತಕ್ಷಣ ತಳ್ಳಿಹಾಕಿದ. ಕಲ್ಯಾಣಿಯ ಪ್ರೇಮಪಾಶದಲ್ಲಿ ಸಿಲುಕಿ ಅವಳನ್ನು ತಮ್ಮದೇ ವಿಚಿತ್ರ ರೀತಿಯಲ್ಲಿ ಮದುವೆಯಾದಾಗಿನಿಂದ ಅವಳ ವಿನಹ ಲೋಕದ ಬೇರಾವ ಸಂಗತಿಯೂ ಮುಖ್ಯವಾಗಿರಲಿಲ್ಲ ತೇಜಾನಿಗೆ. ಸಮಯ ಯಾವಾಗ ಸರಿಯುವುದೊ ಯಾವಾಗ ಎಂಟಾಗುವುದೋ ಎಂದು ಕಾಯ ತೊಡಗಿದ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಾನೊಂದೆ ನಿಂತಿರುವೆ
Next post ಹೆಣ್ಣು ಜೀವ

ಸಣ್ಣ ಕತೆ

 • ಗೋಪಿ

  ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

 • ಸಂಶೋಧನೆ

  ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

 • ಗೃಹವ್ಯವಸ್ಥೆ

  ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…

 • ಮಿಂಚಿನ ದೀಪ

  ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… Read more…

 • ಎರಡು ಮದುವೆಗಳು

  ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

cheap jordans|wholesale air max|wholesale jordans|wholesale jewelry|wholesale jerseys