ಉತ್ತರಣ – ೧೨

ಉತ್ತರಣ – ೧೨

ಕರಗಿದ ಕಾರ್‍ಮೋಡ

ಅನುರಾಧ ಶಂಕರರಿಗೆ ಡಿಲ್ಲಿಯಿಂದ ಹೈದರಾಬಾದಿಗೆ ವರ್ಗವಾದ ಸಮಯದಲ್ಲಿ ಅಚಲನೂ ಒಂದು ತಿಂಗಳ ರಜೆಯಲ್ಲಿ ಊರಿಗೆ ಬಂದಿಳಿದ. ಅನುರಾಧಳೂ ಹೈದರಾಬಾದಿಗೆ ಹೋಗುವ ಮೊದಲು ತಾಯಿ ಮನೆಗೆ ಬಂದಳು.

ಈಗಿನ ಅಚಲನ ಚೆಲುವೇ ಬೇರೆ. ಹುಡುಗ ಹೋಗಿ ಗಂಡಸಾಗಿದ್ದಾನೆ. ಉತ್ತರದ ಹವೆಯಲ್ಲಿ ಅವನ ಬಣ್ಣವೇ ಬದಲಾಯಿಸಿದೆ. ಹುರುಪು ಮೈ ಮುಖದಲ್ಲೆಲ್ಲಾ ಹರಿದಾಡುತ್ತಿದೆ. ಚಿಗುರು ಮೀಸೆಯ ಹಿಂದೆ ಇಣುಕುತ್ತಿರುವ ಆ ತುಂಟ ನಗು ಸ್ವಂತ ತಂದೆ ತಾಯಿಯನ್ನೇ ಬೆರಗುಗೊಳಿಸುವಂತಿದೆ. ಕೇವಲ ಇಪ್ಪತ್ಮೂರರ ಹುಡುಗ ಅಚಲ, ಆದರೆ ದೇಹದ ಚೌಕಟ್ಟಿನಲ್ಲಾಗಲೀ, ಅವನು ರೂಢಿಸಿಕೊಂಡ ಪ್ರೌಢಿಮೆಯಲ್ಲಾಗಲೀ ಹುಡುಗತನದ ಸೋಂಕಿಲ್ಲ. ಹಿಂದಿನ ಮಕ್ಕಳಾಟಿಕೆಯೆಲ್ಲಾ ಮಾಯವಾಗಿದೆ. ಇವನ ಚಿಲುವಿನೆದುರು ಬೇರಾರೂ ಇಲ್ಲ. ಅವನ ಎತ್ತರದ ನಿಲುವು, ಚೆಲುವು, ಗಂಭೀರ ನಡಿಗೆ, ಹಿಮಾಚ್ಛಾದಿತ ಹಿಮಾಲಯದ ನೆನಪನ್ನೇ ಹುಟ್ಟಿಸುವಂತಿತ್ತು.

ತಾಯಿಯನ್ನು ಚಿಕ್ಕಮಕ್ಕಳಂತೇ ಎತ್ತಿಕೊಂಡು ಮನೆ ತುಂಬಾ ಸುತ್ತಾಡಿಸಿ, “ಅಮ್ಮಾ, ನೋಡಿ ಈಗ ಹೇಗಿದ್ದಾನೆ ನಿಮ್ಮ ಮಗ! ಈಗಲೂ ಅಳುಬರುವುದೇ ನನ್ನನ್ನು ನೋಡಿ?” ಎಂದು ತುಂಟತನದಿಂದ ಕೇಳಿದಾಗ ಯಾವ ತಾಯಿಯ ಹೃದಯವಾದರೂ ತುಂಬಬೇಕು. ಮಕ್ಕಳ ಪ್ರೀತಿಗಿಂತ ಮಿಗಿಲಾದ ಕೊಡುಗೆ ತಾಯಿಗೇನಿದೆ? ಮಗನ ಮಾತಿನಿಂದ ಸುಶೀಲಮ್ಮ ಮಾತು ಮರೆತು ಮೂಕರಾಗಿದ್ದರು. ನಿನ್ನೆ ಮೊನ್ನೆ ತನಕ ತನ್ನ ಮಡಿಲಲ್ಲಿ ಆಡಿದ ಹುಡುಗ, ಸೆರಗು ಹಿಡಿದು ಸುತ್ತಾಡಿದ ಹುಡುಗ! ಈ ನನ್ನನ್ನೇ ಎತ್ತಿಕೊಂಡು ತಿರುಗಾಡುವನಲ್ಲ ಎಂದು ಬೆರಗಾಗಿದ್ದರು.

ಅಚಲ ಮನೆಯಲ್ಲಿ ಕಳೆದ ಆ ಒಂದು ತಿಂಗಳಲ್ಲಿ ಅಲ್ಲಿ ಸಂತಸದ ಹೊಳೆಯೇ ಹರಿಯಿತೆನ್ನಬೇಕು. ಅವನು ಮಾಡಿದ ಗಲಾಟೆ, ನಕ್ಕ ನಗು ಮನೆ ತುಂಬಾ ಹರಡಿ ಪ್ರತಿಧ್ವನಿಸಿತ್ತು. ನಿರುಪಮಾ ಕಾಲೇಜು ಮುಗಿದ ಸಂತಸದ ಜತೆಗೆ ಅಣ್ಣನೊಡನೆ ಹಾಯಾಗಿ ದಿನ ಕಳೆದಳು. ಅಚಲ ರಜೆಯಲ್ಲಿರುವಾಗಲೇ ಶ್ರೀಕಾಂತ ಅಮೇರಿಕಾದಿಂದ ಮರಳಿದವನು ಪೂರ್ಣಿಮಾಳನ್ನು ಕರೆದೊಯ್ಯಲು ಬಂದುದು. ಅಚಲ ಹೋದ ಮೇಲೆಯೇ ಹೈದರಾಬಾದಿಗೆ ಹೋಗುವುದೆಂದು ಅನುರಾಧ ಗಂಡನನ್ನು ಕಳುಹಿಸಿ ಮಗುವಿನೊಡನೆ ಹಿಂದುಳಿದಿದ್ದಳು. ಹಾಗಾಗಿ ಮನೆತುಂಬಾ ಜನರು; ಗಲಾಟೆ; ಗಜಿಬಿಜಿ! ಆದರೆ ಆ ಗಲಾಟೆಯಲ್ಲಿ ಇದ್ದ ತೃಪ್ತಿ ಸುಶೀಲಮ್ಮನಿಗೆ ಜೀವನವಿಡೀ ಸಿಕ್ಕಿರಲಿಲ್ಲ.

ಅಚಲ ಹೊರಟು ಹೋದ ಬೆನ್ನಿಗೇ ಪೂರ್ಣಿಮಾ ಗಂಡನೊಡನೆ ಹೊರಟು ನಿಂತಳು. ಮೊದಲ ಬಾರಿಗೆ ಅವಳ ಪ್ರಯಾಣ. ಅವಳಿಗೂ ತಂದೆ ತಾಯಿಯರನ್ನು ಬಿಟ್ಟು ಹೋಗುವುದು ಪ್ರಯಾಸವೇ. ಅವರ ಕಷ್ಟದ ದಿನಗಳಲ್ಲಿ ಅವಳೇ ಅವರಿಗೆ ಆಧಾರವಾಗಿದ್ದವಳು. ಈಗ ಅವರ ದಿನಗಳು ಸೊಗಸಾಗುತ್ತಿವೆ. ತನ್ನ ಕರ್ತವ್ಯವೂ ಮುಗಿಯುತ್ತಾ ಬಂತು. ತನ್ನ ಸ್ಥಾನವಿನ್ನು ಬೇರೆಡೆ. ಅಲ್ಲಿ ತಾನು ಹೋಗಲೇ ಬೇಕು.

ಶ್ರೀಕಾಂತ ಪೂರ್ಣಿಮಾ ಹೋದ ಮೇಲೆ ಮನೆಯಲ್ಲಿನ ಜನರಹಿತ ಮೌನ ಕಂಡು ಅನುರಾಧಳನ್ನು ರಾಮಕೃಷ್ಣಯ್ಯನವರೇ ಒಂದು ನಾಲ್ಕು ದಿನ ಹೆಚ್ಚಿಗೆ ನಿಲ್ಲಿಸಿಕೊಂಡರು. ಏನಾದರೂ, ಮದುವೆಯಾದ ಮೇಲೆ ಹೆಣ್ಣು ಮಕ್ಕಳು ಪರರ ಮನೆಯ ಸೊತ್ತು. ಅನುರಾಧಳೂ ಹೊರಟು ಹೋದ ಮೇಲೆ ಮನೆಯಲ್ಲಿ ಸೂಜಿ ಬಿದ್ದರೂ ಗುಯ್ಯೆನ್ನುವಂಥಾ ವಾತಾವರಣದ ಸೃಷ್ಟಿಯಾಯಿತು.

ರಾಮಕೃಷ್ಣಯ್ಯನವರು ಕೆಲಸ ಬಿಟ್ಟಿದ್ದುದರಿಂದ ಆರಾಮವಾಗಿರುತ್ತಿದ್ದರು. ಆರೋಗ್ಯವೂ ಸ್ವಲ್ಪ ಸುಧಾರಿಸಿತ್ತು. ಸುಶೀಲಮ್ಮನಿಗೆ ಮನೆಯಲ್ಲಿ ಜನ ಕಮ್ಮಿಯಾಗಿ ಮಾಡಲು ಕೆಲಸಗಳೇ ಇರುತ್ತಿರಲಿಲ್ಲ. ನಿರುಪಮಳಿಗೆ ತಿನ್ನುವುದರಲ್ಲಿ ಹೆಚ್ಚಿನ ಆಸೆಯೇನೂ ಇಲ್ಲ. ಮತ್ತೆ ಯಾರಿಗಾಗಿ ಮಾಡಬೇಕು? ಸುಶೀಲಮ್ಮ ತಮ್ಮ ಬಿಡು ಸಮಯವನ್ನೆಲ್ಲಾ ಧರ್ಮಗ್ರಂಥಗಳನ್ನು ಓದುವುದರಲ್ಲಿ ತೊಡಗಿಸಿದರು. ಮನಸ್ಸಿಗೆ ಧೈರ್ಯ, ಶಾಂತಿ ಕೊಡುವ ಗ್ರಂಥಗಳೇ ಅವರಿಗೆ ಪ್ರಿಯವಾದವು.

ನೀರಸ ದಿನಗಳೂ ತಮ್ಮ ಓಟವನ್ನೇನೂ ಕಡಿಮೆ ಮಾಡೋದಿಲ್ಲ. ದಿನಗಳು ನಿರ್‍ವಿಕಾರವಾಗಿ, ತಮ್ಮ ಗರ್‍ಭದಲ್ಲಿ ಜನರ ನಗು, ನಲಿವುಗಳನ್ನು, ನೋವು, ಅಳಲುಗಳನ್ನು ತುಂಬಿಸಿಕೊಂಡು ಉರುಳುತ್ತವೆ. ಅವಕ್ಕೆ ಜನರ ಭಾವನೆಗಳ ಗೊಡವೆಯಿಲ್ಲ. ತನ್ನ ಓಟ ಮಾತ್ರ ಅವುಗಳ ಗುರಿ. ತಮ್ಮ ವೇಗದಲ್ಲಿ ಒಂದು ಚೂರೂ ವ್ಯತ್ಯಾಸವಾಗದಂತೆ ದಿನಗಳು ಉರುಳುತ್ತವೆ. ಅದರ ಜತೆ ನಮಗೆ ದಿನ ಬೆಳಗಾಗುತ್ತದೆ. ನಾವು ಸಾವಿಗೆ ಹತ್ತಿರವಾಗುತ್ತಾ ಬರುತ್ತೇವೆ.

ಅಚಲ ಕೆಲಸಕ್ಕೆ ಸೇರಿ ಮೂರು ನಾಲ್ಕು ವರುಷಗಳೇ ಉರುಳಿದವು. ಪ್ರತಿ ವರುಷವೂ ಒಂದು ತಿಂಗಳ ರಜದಲ್ಲಿ ಅಚಲ ತಪ್ಪದೇ ಬರುತ್ತಿದ್ದ ಜತೆಯಲ್ಲಿ ನಗು ನಲಿವು ಹೊತ್ತು ತರುತ್ತಿದ್ದ. ಜತೆಗೆ ಮನೆಯಲ್ಲಿ ಸಂತಸದ ಪ್ರವಾಹವನ್ನೇ ಹರಿಸುತ್ತಿದ್ದ. ಅವನು ಬಂದಾಗಲೆಲ್ಲಾ ಸ್ವಲ್ಪ ದಿನಕ್ಕಾದರೂ ಅನುರಾಧ, ಪೂರ್ಣಿಮಾರ ಸಂಸಾರ ಬಂದು ಸೇರುತ್ತಿತ್ತು. ಆ ಸಮಯದಲ್ಲಿ ವರುಷ ಇಡೀ ಮೌನವಾಗಿದ್ದ ಮನೆ ಜಾಗ್ರತವಾಗುತ್ತಿತ್ತು. ಆಗಿನ ಗಲಾಟೆ, ಗೌಜಿ ಇಡೀ ವರುಷಕ್ಕೇ ಸಾಕು! ಅಚಲನ ನೌಕರಿಯ ಬಗೆಗಿದ್ದ ಭೂತ ಭಯ ಈಗ ಎಲ್ಲರನ್ನು ಬಿಟ್ಟು ತೊಲಗಿತ್ತು.

ಅಚಲನೆಂದರೆ ಮನೆಯಲ್ಲಿ ಎಲ್ಲರಿಗೂ ಪ್ರಾಣ! ಅವನಿಗೂ ಅಷ್ಟೇ. ತಂದೆ ತಾಯಿಯರನ್ನು ಸುಖವಾಗಿ ಇಡುವುದೇ ಅವನ ಜೀವನದ ಧ್ಯೇಯವಾಗಿತ್ತು. ಆನಂದ ಮದುವೆ ಸಮಯದಲ್ಲಿ ಸಿಟ್ಟು ಮಾಡಿಕೊಂಡು ಹೋದವನು ಈಚೆಕಡೆ ತಲೆಹಾಕುವುದನ್ನೇ ಬಿಟ್ಟಿದ್ದ. ಆ ನೋವನ್ನು ಅಚಲ ಮರೆಸಿದ್ದ. ಅಪ್ಪಿ ತಪ್ಪಿಯೂ ಅಲ್ಲಿ ಆನಂದನ ಪ್ರಸ್ತಾಪ ಬರುತ್ತಿರಲಿಲ್ಲ.

ಇದರ ಮಧ್ಯೆ ಅಚಲನಿಗೆ ನೆಂಟಸ್ತಿಕೆ ಬರಲು ಮೊದಲಾಗಿತ್ತು. ನಿರುಪಮಾಳಿಗೂ ಗಂಡು ಹುಡುಕುತ್ತಿದ್ದರು. ಅವರಿಬ್ಬರ ಮದುವೆ ಒಟ್ಟಾಗಿ ಮುಗಿಸುವ ಆತುರ ಎಲ್ಲರಿಗೂ ಇತ್ತು.

ಆದರೆ ಅಚಲನಿಗರಿವಾಗದಂತೇ ಅವನ ಹೃದಯದ ಸೂಕ್ಷ್ಮ ತಂತು ಒಂದರ ಮೇಲೆ ನಿರುಪಮಾಳ ಗೆಳತಿ ಪ್ರೇರಣಾ ನಾದವೆಬ್ಬಿಸುತ್ತಿದ್ದಳು. ಪ್ರೇರಣಾ ಆ ಮನೆಗೆ ಹೊಸಬಳೇನಲ್ಲ. ಚಿಕ್ಕಂದಿನಿಂದಲೂ ಆ ಮನೆಯಲ್ಲಿ ಓಡಾಡಿದವಳೇ. ಹಾಗಾಗಿ ಮೊದಲಿನಿಂದಲೂ ಆಕೆಗೆ ಅಚಲನೆಂದರೆ ವಿಪರೀತ ಸಲುಗೆಯೂ ಇತ್ತು. ಮನೆಯಲ್ಲಿ ಯಾರಿಗೂ ಅವಳು ಹೊರಗಿನವಳೆಂದು ಅನಿಸುತ್ತಿರಲಿಲ್ಲ. ಮನೆಯವರಲ್ಲಿ ಒಬ್ಬಳಾಗಿಯೇ ಇದ್ದಳು. ಮೊದಲೆಲ್ಲಾ ಗೆಳತಿಯ ಅಣ್ಣನೆಂಬ ಸಲುಗೆಯಿದ್ದರೂ ಇತ್ತೀಚೆಗೆ ಆ ಸಲುಗೆ ಬೇರೆಯೇ ರೂಪ ಪಡೆಯಲು ಶುರುಮಾಡಿತ್ತು, ಅಚಲನಿಗೂ ಪ್ರೇರಣಾಳೆಂದರೆ ಒಂದು ಬೇರೆಯೇ ರೀತಿಯ ಆಕರ್ಷಣೆ ಇದೆಯೆಂಬ ಅರಿವು ಮನೆಯವರಿಗೆಲ್ಲರಿಗೂ ಬಂದಿತ್ತು. ಅಚಲನೇನಾದರೂ ಬಾಯಿಬಿಟ್ಟು ಅವಳನ್ನು ಮದುವೆಯಾಗುವೆನೆಂದರೆ ತಡೆಯುವವರು ಯಾರೂ ಇರಲಿಲ್ಲ. ತಡೆಯುವಂಥಾ ಯಾವ ಕೊರತೆಯೂ ಪ್ರೇರಣಾಳಲ್ಲಿಲ್ಲ. ಎಲ್ಲಾ ವಿಚಾರದಲ್ಲೂ ಅವಳು ಅಚಲನಿಗೆ ಸರಿಸಾಟಿಯೆ. ಯಾವುದರಲ್ಲೂ ಕಡಿಮೆಯೆನಿಸುವವಳಲ್ಲ.

ಇಬ್ಬರಲ್ಲೂ ಅವರಿಬ್ಬರಿಗೂ ಅಗೋಚರವಾಗಿರುವಂತೆ ಪ್ರೀತಿ ಬೆಳೆಯುತ್ತಿದ್ದರೂ, ಇಬ್ಬರೂ ಬಾಯಿ ಬಿಟ್ಟಿರಲಿಲ್ಲ. ಅಲ್ಲದೇ ಯಾರೂ ಯಾವತ್ತೂ ಅವರೊಡನೆ ಆ ಪ್ರಸ್ತಾಪ ಎತ್ತಿರಲೂ ಇಲ್ಲ. ಸುಶೀಲಮ್ಮನಿಗೆ ಪ್ರೇರಣಾಳೆಂದರೆ ಮನೆ ಮಗಳಂತೇ ಪ್ರೀತಿ. ಹಾಗಾಗಿ ಆಗಾಗ ಬಂದು ಹೋಗಿ ಮಾಡುತ್ತಿದ್ದರೂ, ಆ ವಿಚಾರದಲ್ಲಿ ಯಾರೂ ಎಂದೂ ತಲೆ ಕೆಡಿಸಿಕೊಂಡಿರಲಿಲ್ಲ. ನಿರುಪಮಾ ಮಾತ್ರ ಇಬ್ಬರನ್ನೂ ಅರಿತಂತೆ ಗುಟ್ಟಾಗಿ ಒಮ್ಮೊಮ್ಮೆ ತಮಾಷೆ ಮಾಡುತ್ತಿದ್ದಳು “ನನಗೆ ಮನೆಯಲ್ಲಿ ಒಬ್ಬಳೇ ಬೇಜಾರು. ನೀನೂ ಅಲ್ಲಿಗೆ ಬಂದು ಬಿಡು, ಅಚ್ಚಣ್ಣ ಹೂಂ ಅಂದಾಗ ಮದುವೆ ಶಾಸ್ತ್ರ ಮುಗಿಸಿಬಿಡಬಹುದು.”

ಪ್ರೇರಣಾ ಇದಕ್ಕೆಲ್ಲಾ ಹಾಂ ಹೂಂ ಅನ್ನುತ್ತಿರಲಿಲ್ಲ. ನಗುತ್ತಾ ಸುಮ್ಮನಿರುತ್ತಿದ್ದಳು. ಅವಳಿಗೆ ಅಚಲನ ಮನಸ್ಸು ಗೊತ್ತಿಲ್ಲ. ತಾನಾಗಿ ಪ್ರಕಟಿಸಲು ಸಾಧ್ಯವಾಗದ ಮಾತು. ಆತ್ಮೀಯಳಾದರೂ ನಿರುಪಮಾಳೊಡನೆ ಈ ಕುರಿತೆಂದೂ ಬಾಯಿಬಿಟ್ಟಿಲ್ಲ. ಹಾಗಿರುವಾಗ ಮೌನ ನಿರೀಕ್ಷೆಯೇ ಅವಳಿಗೆ ಸರಿಯಾದದ್ದು. ಆದರೆ ಅಚಲನ ಮೂರ್ತಿ ಅವಳ ಹೃದಯದಲ್ಲಿ ಪ್ರತಿಷ್ಠಾಪಿತವಾಗಿತ್ತು.

ಮದುವೆಯೊಂದು ಜನುಮ ಜನುಮದ ಋಣಾನುಬಂಧ. ಎಲ್ಲೆಲ್ಲಿದ್ದವರು ಒಟ್ಟಾಗುತ್ತಾರೆ, ಒಂದಾಗುತ್ತಾರೆ. ಒಟ್ಟಾಗಬೇಕೆನ್ನುವವರು ಅಗಲುತ್ತಾರೆ. ಒಂದುಗೂಡಿಸುವ, ಅಗಲಿಸುವ, ತಮಾಷೆಯಾಟ ಆ ಪರಮಾತ್ಮ ಮಾಡುತ್ತಲೇ ಇರುತ್ತಾನೆಂದರೂ ಸುಳ್ಳಲ್ಲ. ಬೆಕ್ಕಿಗೆ ಚೆಲ್ಲಾಟ, ಇಲಿಗೆ ಪ್ರಾಣಸಂಕಟ! ಆಡಿಸುವ ಕೈಗೆ ಅದರ ಗೊಡವೆ ಇದ್ದರೆ ತಾನೆ?

ಅಚಲ ವಾಯುದಳಕ್ಕೆ ಸೇರುವುದೆಂದಾಗ ಮನೆಯವರಷ್ಟೇ ದುಃಖ ಪಟ್ಟವಳು ಪ್ರೇರಣಾ, ಆದರೆ ಬಹಿರಂಗವಾಗಿಯಲ್ಲ. ಎರಡು ಮೂರು ಸಲ ರಜೆಯಲ್ಲಿ ಬಂದಾಗಲೂ ಅಚಲ ಯೋಚಿಸುತ್ತಿದ್ದ. ಇನ್ನೊಮ್ಮೆ ರಜೆಯಲ್ಲಿ ಬಂದಾಗ ಪ್ರೇರಣಾಳೊಡನೆ ಕೇಳಿಯೇ ಬಿಡಬೇಕು. ಅವಳು ಒಪ್ಪಿದರೆ ತಂದೆ ತಾಯಿಯೊಡನೆ ಹೇಳಿ ಮದುವೆಯಾಗಬೇಕು. ಅದರ ಮೊದಲು ನಿರುಪಮಾಳ ಮದುವೆಯನ್ನು ಮುಗಿಸಬೇಕು. ನಿರುಪಮಾ ಮನೆ ಬಿಟ್ಟ ಮೇಲೆ ಪ್ರೇರಣಾಳೇ ತಂದೆ ತಾಯಿಗೆ ಜತೆಯಾಗಬೇಕು. ಇವನ್ನೆಲ್ಲಾ ಅವಳಿಗೆ ಮದುವೆಯಾಗೋ ಮೊದಲೇ ತಿಳಿಸಿ ಹೇಳಬೇಕು. ನನಗಿಂತಲೂ ಆತ್ಮೀಯವಾಗಿ ಅವಳು ತಂದೆ ತಾಯಿಯನ್ನು ನೋಡಿಕೊಳ್ಳಬೇಕು. ಪ್ರತಿ ಸಲವೂ ಈ ಸಲ ಕೇಳುವುದು ಬೇಡ, ಇನ್ನೊಮ್ಮೆ ಕೇಳುವಾ ಎಂದು ಮುಂದೂಡುತ್ತಿದ್ದರೂ ಅದರ ಮಧ್ಯೆ ಎಲ್ಲಾದರೂ ಅವಳಿಗೆ ಮದುವೆಯಾದರೆ ಎಂಬ ಯೋಚನೆ ಕಾಡಿದಾಗ ಅವನ ಹೃದಯದಲ್ಲಿ ನೋವು ಕಾಣಿಸಿಕೊಳ್ಳುತ್ತಿತ್ತು. ಆಗಲೂ ಅವನು ಯೋಚಿಸುತ್ತಿದ್ದ. ಅವಳ ಕಣ್ಣಲ್ಲಿ ತಾನು ಗುರುತಿಸಿರುವ ಪ್ರೀತಿಯ ಸೆಲೆ ಸುಳ್ಳಾದರೆ ತಾನೇ ಅವಳು ಬೇರೆಯವರನ್ನು ಮದುವೆಯಾಗಲು ಒಪ್ಪುವುದು? ನಾನೇ ಅವಳ ಮನಸ್ಸಲ್ಲಿ ಇದ್ದರೆ ಬೇರೆ ಮದುವೆ ಹೇಗಾಗುತ್ತಾಳೆ? ನೋಡೋಣ, ನನ್ನ ಹಣೆಯಲ್ಲಿ ಅವಳೇ ಎಂದು ಬರೆದಿದ್ದರೆ ತಪ್ಪಿಸುವವರು ಯಾರು? ಈಗೇಕೆ ತಲೆ ಕೆಡಿಸಿಕೊಳ್ಳಬೇಕು. ಹಾಗೆ ಬೇರೆ ಮದುವೆಯೇನಾದರೂ ಆದರೆ ಈ ಸುದ್ದಿಯನ್ನೂ ಅಲ್ಲಿಗೇ ಬಿಟ್ಟರಾಯಿತು, ಎಂದು ಎಣಿಸುತ್ತಾ ರಜೆ ಮುಗಿದಾಗ ಪೆಟ್ಟಿಗೆ ಕಟ್ಟುತ್ತಿದ್ದ.

ಆದರೆ ಅಚಲ ಎರಡು ಮೂರು ಸಲ ರಜೆಯಲ್ಲಿ ಬರುವಾಗಲೂ ಪ್ರೇರಣಾ ಮದುವೆಯೇ ಆಗಿರಲಿಲ್ಲ. ಬೇಕೆಂದೇ ನಿರುಪಮಾಳನ್ನು ಕೆದಕಿದಾಗ ಅವಳು. ಅವಳಿಗೆ ನಿಶ್ಚಯವಾಗಿದೆ, ಹುಡುಗನಿನ್ನೂ ಮದುವೆಯಾಗಲು ತಯಾರಾಗಿಲ್ಲವಂತೆ ಎನ್ನುತ್ತಿದ್ದಳು. ಪ್ರೇರಣಾ ತನಗೆ ಕಾದು ಕುಳಿತಿರುವಳೆಂಬ ಭಾವನೆ ಅಚಲನಲ್ಲಿ ಬಲವಾದಾಗ ಒಮ್ಮೆ ಅವನು ಯಾರೂ ಬಳಿಯಲ್ಲಿಲ್ಲದ ಸಮಯ ನೋಡಿ ವಿಷಯ ಪ್ರಸ್ತಾಪಿಸುತ್ತಾನೆ. ಪ್ರೇರಣಾ, ಯೋಚಿಸಿದ್ದ ಯಾಚಿಸಿದ್ದ ಕ್ಷಣವಾದರೂ ಅಚಲನ ಯಾವ ಪೀಠಿಕೆಯಿಂದಲೂ ಕೂಡಿರದ ಪ್ರಶ್ನೆ ಅವಳನ್ನು ತಬ್ಬಿಬ್ಬಾಗಿಸಿತ್ತು. ಅಚಲ ಯಾವ ನಾಟಕೀಯತೆಯೂ ಇಲ್ಲದೇ “ಪ್ರೇರಣಾ, ನನ್ನ ಜೀವನ ಎಷ್ಟು ಅಪಾಯದ್ದು ಎಂದು ನಿನಗೆ ಗೊತ್ತು. ಹಾಗಿದ್ದರೂ ನೀನು ನನ್ನನ್ನು ಪ್ರೀತಿಸುತ್ತೀ ಎಂದು ನನ್ನ ಹೃದಯಕ್ಕೆ ಅರಿವಾಗಿದೆ. ನಿನಗೆ ನನ್ನ ಜೀವನದಲ್ಲಿ ಒಂದಾಗುವಷ್ಟು ಧೈರ್ಯವಿದೆಯೆಂದು ನಾನು ಭಾವಿಸಲೇ?”

ಅಚಲನ ಮಾತು ಕೇಳಿ ಒಂದು ಕ್ಷಣ ಮೂಕಳಾಗಿದ್ದರೂ ಸಂತಸದಿಂದ ಅದುರುವ ತುಟಿಗಳೊಡನೆ ಪ್ರೇರಣಾ ನಿರ್ಭಯವಾಗಿ ಉತ್ತರಿಸುತ್ತಾಳೆ. “ನಾನು ನಿಮ್ಮ ಈ ಮಾತುಗಳಿಗಾಗಿ ಮೂರು ವರುಷದಿಂದ ಚಾತಕ ಪಕ್ಷಿಯಂತೆ ಕಾಯ್ತಿದ್ದೇನೆ. ನಿಮ್ಮನ್ನು ನನ್ನಿಂದ ಅಗಲಿಸೋದು ಯಾರಿಂದಲೂ ಸಾಧ್ಯವಿಲ್ಲ. ನಿಮ್ಮ ಕೆಲಸ ಕೆಲವೊಮ್ಮೆ ಮೃತ್ಯುವಿನೊಡನೆ ಸೆಣಸಾಟದ್ದು ಎಂದು ನನಗರಿವಿದೆ. ಏನಿದ್ದರೂ ನಾನು ಮದುವೆಯಾಗೋದು ನಿಮ್ಮನ್ನೇ” ಎಂದವಳೇ ಉತ್ತರಕ್ಕೂ ಕಾಯದೇ ಪ್ರೇರಣಾ ನಿರುಪಮಾಳನ್ನರಿಸಿಕೊಂಡು ಒಳಕ್ಕೋಡಿದ್ದಳು. ಈ ಮಾತನ್ನು ಕೇಳಿದ ಅಚಲ ಬಿಡಿ ಬಿಡಿಯಾಗಿ ಚದುರಿ ಹಕ್ಕಿಯಂತೆ ಹಾರಾಡಿದ ಅನುಭವದಿಂದ ಹುಚ್ಚನಂತಾಗಿದ್ದ. ಇಷ್ಟು ದಿನದ ಬೇಕು ಬೇಡಗಳ ತಕ್ಕಡಿ ಒಮ್ಮೆಲೇ ತಟಸ್ಥವಾಗಿತ್ತು.

ಅಚಲನ ನಿರ್ಧಾರ ದೃಢವಾಯಿತು. ತನ್ನ ಜೀವನದಲ್ಲಿ ಹುಡುಗಿಯೊಬ್ಬಳ ಪ್ರವೇಶವಿದ್ದರೆ ಅದು ಪ್ರೇರಣಾ ಮಾತ್ರ!! ಈ ಸಲ ಅಮ್ಮನ ಹತ್ತಿರ ಹೇಳಬೇಕು. ಇನ್ನೊಮ್ಮೆ ನಾನು ರಜೆಯಲ್ಲಿ ಬರುವಾಗ ಮದುವೆಯ ತಯಾರಿಯೆಲ್ಲಾ ಮಾಡಿಟ್ಟರೆ ಬಂದ ಕೂಡಲೇ ಮದುವೆ. ಆಮೇಲೆ ಹತ್ತು ದಿನ ಎಲ್ಲಾದರೂ ತಿರುಗಾಡಿ ಬರಬೇಕು. ನನ್ನ ಮದುವೆಯ ಜತೆ ನಿರುಪಮಾಳದ್ದೂ ಆಗಬೇಕು.

ಅಚಲ ನಿರ್ಧರಿಸಿದ ಮೇಲೆ ಹೇಳಲು ತಡ ಮಾಡಲಿಲ್ಲ. ತಾಯಿ ತಂದೆಯ ಹತ್ತಿರ ನೇರವಾಗಿಯೇ ಪ್ರಸ್ತಾಪಿಸಿದಾಗ ಚಿಕ್ಕ ಮಕ್ಕಳಂತೆ ಹರ್ಷ ಘೋಷಿಸಿದವಳು ನಿರುಪಮ, ಪ್ರೇರಣಾಳೆಂದರೆ ಅವಳ ಜೀವ, ಅಕ್ಕಂದಿರು ದೂರಾದ ಮೇಲೆ ಅವಳಿನ್ನೂ ಹತ್ತಿರವಾಗಿದ್ದಳು. ಸುಶೀಲಮ್ಮನಿಗೂ ಇದರಿಂದ ಯಾವ ರೀತಿಯಲ್ಲೂ ಕೆಡುಕೆನಿಸಲಿಲ್ಲ. ಯಾರಾದರೂ ಸೊಸೆಯಾಗಿ ಸ್ವೀಕರಿಸಲು ಯೋಗ್ಯ ಹೆಣ್ಣು ಮಗಳು ಪ್ರೇರಣಾ. ಎಲ್ಲೂ ಕುಂದಿಲ್ಲ. ಅಚಲನ ಆಯ್ಕೆಯಲ್ಲಿ ತಂದೆ ತಾಯಿ ಇಬ್ಬರಿಗೂ ತೃಪ್ತಿ. ಸುಶೀಲಮ್ಮನಿಗೆ ಹೇಳಿ ಮಾಡಿಸಿದ ಸೊಸೆ, ಕನಸಲ್ಲಿ ಮೂಡಿದ ಮೂರ್ತಿ ಜೀವಂತವಾದಂತೆ ಇದ್ದಳು. ಅಕ್ಕಂದಿರಿಗೆ ಸುದ್ದಿ ತಲಪಿದಾಗ ಇಬ್ಬರೂ ಖುಷಿ ಪಟ್ಟಿದ್ದರು. ಯಾರ ವಿರೋಧವೂ ಇದಕ್ಕಿಲ್ಲ. ಪ್ರೇರಣಾಳ ತಂದೆ ತಾಯಿಗೂ ಇದರಲ್ಲಿ ತೃಪ್ತಿಯೆ. ನೋಡಿದ ಹುಡುಗ, ಅಚಲನಂತಹ ಅಳಿಯ ಸಾವಿರಕ್ಕೊಬ್ಬ ಎಂಬುದು ಅವರಿಗೂ ತಿಳಿದ ಸಂಗತಿ. ಮದುವೆ ಒಂದು ವರುಷ ದೂರಾದಾಗ ಮಾತ್ರ ಅವರಿಗೆ ಬೇಸರವೆನಿಸಿತ್ತು.
*****
ಮುಂದುವರೆಯುವುದು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸೋಲು ಗೆಲವು
Next post ಇದನ್ನೆಲ್ಲ ಕಂಡು ಸಾಯುವುದೆ ಮೇಲೆನಿಸುವುದು !

ಸಣ್ಣ ಕತೆ

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

  • ಗದ್ದೆ

    ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…

  • ಕೆಂಪು ಲುಂಗಿ

    ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…