ಅಯ್ಯೋ ನಾನೇ! ಕಂಡ ಸತ್ಯವನೆ ಗ್ರಹಿಸದ
ಎಂಥ ಕಣ್ಣನು ಒಲವು ನನ್ನ ಮುಖಕಿರಿಸಿತು
ಗ್ರಹಿಸದಿದ್ದರೆ ಇರಲಿ ಕಂಡದ್ದ ತಪ್ಪಾಗಿ
ವ್ಯಾಖ್ಯಾನಿಸುವ ನನ್ನ ಅರಿವೇನಾಯಿತು?
ಕಣ್ಣು ಕಂಡದ್ದು ಚೆಲುವಾಗಿದ್ದ ಪಕ್ಷಕ್ಕೆ
ಹಾಗಿಲ್ಲ ಎನುವ ಲೋಕದ ಮಾತಿಗೇನರ್‍ಥ?
ಅರ್ಥವಿದ್ದಲ್ಲಿ ಪ್ರೀತಿಯ ಕಣ್ಣು ಲೋಕಕ್ಕೆ
ಉಳಿದ ಕಣ್ಣಂತಲ್ಲ; ನಿಜವಾಗಿ ಇದು ಸತ್ಯ
ಕಾದು ಕಂಬನಿ ತುಂಬಿ ನೊಂದ ಪ್ರೀತಿಯ ಕಣ್ಣು
ಬೇರೆ ಜನಗಳ ಕಣ್ಣಿನಂತೆ ಖಂಡಿತ ಅಲ್ಲ
ನನಗೆ ನಿಜ ಕಾಣದ್ದರಲ್ಲಿ ಸೋಜಿಗವೇನು?
ಮರೆ ಸರಿವ ತನಕ ರವಿ ಕೂಡ ಕಾಣುವುದಿಲ್ಲ
ವಂಚಿಸುವೆ ಒಲವೆ ಕಣ್ಣಲ್ಲಿ ಕಂಬನಿ ತರಿಸಿ
ಇಲ್ಲದಿರೆ ನಿನ್ನ ತಪ್ಪೆಲ್ಲ ಕಂಡೀತೆನಿಸಿ
*****
ಮೂಲ: ವಿಲಿಯಂ ಷೇಕ್ಸ್‌ಪಿಯರ್
Sonnet 148
O me! What eyes hath love put in my head