ಪ್ರಿಯ ಸಖಿ,
ಇವನು ಐದು ವರ್ಷಗಳ ತನ್ನ ವಿದೇಶ ವಾಸ ಮುಗಿಸಿ ಈಗಷ್ಟೇ ತನ್ನ ಮಾತೃಭೂಮಿಗೆ ಕಾಲಿಡುತ್ತಿದ್ದಾನೆ. ಈಗ ಇವನಿಗೆ ಇಲ್ಲಿಯದೆಲ್ಲವೂ ಕೆಟ್ಟದಾಗಿ, ಅಸಹ್ಯವಾಗಿ, ಕೀಳಾಗಿ ಕಾಣುತ್ತಿದೆ.

ಗಳಿಗೆಗೊಂದು ಬಾರೀ ವಿದೇಶೀಯರ ಶುಚಿತ್ವ, ಅಲ್ಲಿನ ರಸ್ತೆಗಳು, ಅವರ ಶಿಸ್ತು, ಶ್ರೀಮಂತಿಕೆ, ವೈಭೋಗ, ಕರ್ತವ್ಯಪಾಲನೆ, ಸ್ಯಾಂಡ್ವಿಚ್, ಪಿಜ್ಜಾ……….. ಇತ್ಯಾದಿ ಇತ್ಯಾದಿ ಕುರಿತು ಭಾಷಣ ಬಿಗಿಯುತ್ತಾನೆ. ಹೌದು ಅವನು ಹೇಳುವುದೆಲ್ಲ ನಿಜವೇ ಇರಬಹುದು. ಹಾಗೇ ಇಲ್ಲಿನ ಈ ಅವ್ಯವಸ್ಥೆ ಅಶಿಸ್ತು, ಕೊಳಕು, ಭ್ರಷ್ಟತೆ, ಲಂಚಗುಳಿತನ…. ಇತ್ಯಾದಿ ಎಲ್ಲವೂ ನಿಜವೇ ಸಖಿ. ಆದರೆ ಈ ಎಲ್ಲಾ ಕೊಳಕಿನ ಬಗೆಗೆ ಮೋರೆ ಸಿಂಡರಿಸುವ ಇವನು ಮಾಡುವುದೇನು ಗೊತ್ತೇ? ಅದನ್ನು ಹೇಗೆ ಸರಿಪಡಿಸಲಿ ಎಂದು ಯೋಚಿಸುವುದಿಲ್ಲ. ದಾರಿಗಳನ್ನು ಹುಡುಕುವುದಿಲ್ಲ. ಭೂಲೋಕದ ಸ್ವರ್ಗವೆಂದು ಇವನು ನಂಬಿರುವ ವಿದೇಶಕ್ಕೆ (ಹೆಚ್ಚಿನಂಶ ಅಮೇರಿಕಾ) ಹೇಗೂ ದಾರಿ ತೆರೆದಿದೆ. ಪಕ್ಕಕ್ಕೆ ರೆಕ್ಕೆ ಕಟ್ಟಿಕೊಂಡು ಹಾರಿದರಾಯ್ತು. ಮೈ ಮುರಿದು ದುಡಿಸಿಕೊಂಡರೂ, ಕೈತುಂಬ ಮಿಕ್ಕುವಷ್ಟು ಹಣ ಸಿಕ್ಕುತ್ತದೆ. ಎಲ್ಲವೂ ವ್ಯವಸ್ಥಿತವಾಗಿ ತಯಾರಾಗಿ ನಿಂತಿರುವಾಗ ನಾವದನ್ನು ಅನುಭವಿಸಿದರಾಯ್ತು. ಇಲ್ಲಿನ ಈ ಎಲ್ಲಾ ಅವ್ಯವಸ್ಥೆ ನಡುವೆ ಏಕೆ ಹೆಣಗಬೇಕು? ಹಣ ಮಾಡಿಕೊಂಡು ವಾಪಸ್ ಬಂದರೂ ಆಯ್ತು. ಇಲ್ಲದಿದ್ದರೆ ಅಲ್ಲಿನದೇ ಸಿಟಿಜನ್ಶಿಪ್ ಪಡೆದು ಅಲ್ಲೇ ನೆಲೆಯೂರಿದರೂ ಆಯ್ತು. ಇಲ್ಲಿದ್ದರೂ ಅಲ್ಲಿದ್ದರೂ ಇವನಿಗೆ ಭಾರತದೊಂದಿಗಿನ ಭಾವನಾತ್ಮಕ ನಂಟು ಪೂರ್ತಿ ಕಡಿದುಕೊಂಡಂತೆಯೇ!  ಇವನು ಇಲ್ಲಿದ್ದರೂ ಮಾನಸಿಕವಾಗಿ ವಿದೇಶದಲ್ಲೇ ಇರುತ್ತಾನೆ. ಅಲ್ಲಿದ್ದು ಅವನು ಭಾರತೀಯರಂತೆ ಜೀವನ ನಡೆಸಿದರೂ ಎಂದಿಗೂ ಅಲ್ಲಿನವನಂತೂ ಆಗುವುದು ಸಾಧ್ಯವಿಲ್ಲ. ಇಲ್ಲಿನವನೂ ಆಗುವುದಿಲ್ಲವೆಂಬುದೂ ಅಷ್ಟೇ ಸತ್ಯ.

ಬಡವಳೆಂದು, ಕೊಳಕಳೆಂದು, ಬುದ್ದಿ ತಿಳಿಯದವಳೆಂದು, ವಿವೇಕವಿಲ್ಲದವಳೆಂದು ಯಾರಾದರೂ ತನ್ನ ತಾಯಿಯನ್ನು ಬದಲಾಯಿಸಿಕೊಳ್ಳಲು ಸಾಧ್ಯವೇ? ಅವಳನ್ನು ಬಿಟ್ಟು ಇನ್ಯಾವುದೋ ಶ್ರೀಮಂತ, ಶುಚಿಯಾದ, ವಿವೇಕಿ ಹೆಂಗಸನ್ನು ನಮ್ಮ ಅಮ್ಮನನ್ನಾಗಿ ಮಾಡಿಕೊಳ್ಳಲು ಸಾಧ್ಯವೇ?

ಪ್ರಿಯ ಸಖಿ, ದೇಶವನ್ನುವುದು ನಮ್ಮ ತಾಯಿಯಂತೆ. ಅವಳನ್ನು ಹೇಗೆ ಬವಲಿಸಲು ಸಾಧ್ಯ? ಅದಕ್ಕೆಂದೇ ಎಲ್ಲ ಅನಿಷ್ಟಗಳ ನಡುವೆಯೂ ಅವಳನ್ನು ಪ್ರೀತಿಸಲು ಸಾಧ್ಯ. ಒಪ್ಪಿಕೊಳ್ಳಲು ಸಾಧ್ಯ. ಹಾಗೇ ಅವಳ ಎಲ್ಲ ಋಣಾತ್ಮಕ ಅಂಶಗಳಿಗೂ ಹೊಂದಿಕೊಳ್ಳುವುದು ಅಥವಾ ತಿದ್ದುವುದೂ ನಮ್ಮಿಂದಲೇ ಸಾಧ್ಯ. ಪಲಾಯನ ಇದಕ್ಕೆ ಉತ್ತರವಲ್ಲ ಅಲ್ಲವೇ?
*****