ರಂಗಣ್ಣನ ಕನಸಿನ ದಿನಗಳು – ೧೩

ರಂಗಣ್ಣನ ಕನಸಿನ ದಿನಗಳು – ೧೩

ಪ್ಲೇಗುಮಾರಿಯ ಹೊಡೆತ

ಕೆಲವು ದಿನಗಳ ತರುವಾಯ ತಿಪ್ಪೂರು ಹೋಬಳಿಯ ಪಾಠಶಾಲೆಗಳಿಂದ ಅನಿಷ್ಟ ವರ್ತಮಾನಗಳು ಬರಲಾರಂಭಿಸಿದುವು. ಹಳ್ಳಿಯಲ್ಲಿ ಪ್ಲೇಗುಮಾರಿ ಹೊಕ್ಕಿದೆ; ಒಂದೆರಡು ಸಾವುಗಳಾದುವು; ಜನರೆಲ್ಲ ಹೊಲಗಳಲ್ಲಿ ಗುಡಿಸಿಲುಗಳನ್ನು ಹಾಕಿಕೊಳ್ಳುತ್ತಿದಾರೆ; ಹುಡುಗರು ಪಾಠಶಾಲೆಗೆ ಬರುತ್ತಿಲ್ಲ- ಎಂಬುದಾಗಿ ದಿನಕ್ಕೆ ಎರಡು ಮೂರು ಹಳ್ಳಿಗಳಿಂದ ಕಾಗದಗಳು ಬರತೊಡಗಿದವು. ಕೆಲವು ಉಪಾಧ್ಯಾಯರು ಹೆದರಿಕೊಂಡು ರಜಾಗಳಿಗೆ ಬರೆದು ಹಾಕಿದರು. ರಂಗಣ್ಣನಿಗೆ ಬಹಳ ವ್ಯಸನವಾಯಿತು. ತಾನು ಉಪಾಧ್ಯಾಯರ ಸಹಕಾರದಿಂದ ಅಷ್ಟು ಮುತವರ್ಜಿ ವಹಿಸಿ ಮಾಡಿದ್ದ ಏರ್ಪಾಡುಗಳೆಲ್ಲ ಒಂದೇ ಒಂದು ಕ್ಷಣದಲ್ಲಿ ಪ್ಲೇಗಿನ ಅವಾಂತರದಿಂದ ಧ್ವಂಸವಾದುವಲ್ಲ; ಮನುಷ್ಯ ಪ್ರಯತ್ನದಲ್ಲಿ ಈಗೇನಿದೆ? ಎಂದು ನೊಂದುಕೊಂಡು ಸ್ಥಳದ ಡಾಕ್ಟರಿಗೆ ಕಾಗದ ಬರೆದನು. ವಸ್ತು ಸ್ಥಿತಿ ಏನು? ಯಾವ ಯಾವ ಹಳ್ಳಿಗಳಿಗೆ ಈ ಪಿಡುಗು ವ್ಯಾಪಿಸಿದೆ? ದಯವಿಟ್ಟು ಬೇಗ ಇನಾಕ್ಯುಲೇಷನ್ ಮಾಡಿ ಜನಗಳಿಗೆ ಧೈರ್ಯ ಹೇಳುವುದು ಎಂದು ಮುಂತಾಗಿ ಬರೆದನು. ಅವರಿಂದ ಉತ್ತರವೂ ಬಂತು. ಇಡಿಯ ಹೋಬಳಿಯಲ್ಲೇ ಪ್ಲೇಗಿನ ಸೋಂಕು ಇದೆ; ಇನಾಕ್ಯುಲೇಷನನ್ನು ಬಹು ಮಂದಿಗೆ ಮಾಡಿದ್ದಾಗಿದೆ; ಆದರೆ ಹಳ್ಳಿಯ ಜನ ಇನಾಕ್ಯುಲೇಷನ್ ಬೇಡ, ಮಾರಿಪೂಜೆ ಮಾಡಿದರೆ ಪ್ಲೇಗು ಮಾಯವಾಗುತ್ತದೆ ಎಂದು ಹಟ ಮಾಡುತ್ತಿದ್ದಾರೆ; ಕೆಲವು ಕಡೆಗಳಲ್ಲಿ ಪಾಠ ಶಾಲೆಗಳನ್ನು ಹದಿನೈದು ದಿನಗಳವರೆಗೆ ಮುಚ್ಚುವುದು ಒಳ್ಳೆಯದು; ಆ ಬಗ್ಗೆ ಉಪಾಧ್ಯಾಯರಿಗೆ ಈಗಾಗಲೆ ತಿಳಿಸಿದೆ- ಎಂದು ಉತ್ತರ ಬಂತು.

ಪ್ಲೇಗು ಜಾಡ್ಯ ತಿಪ್ಪೂರು ಹೋಬಳಿ ಮೊದಲಾದ ಕಡೆಗಳಲ್ಲಿ ಪ್ರತಿ ವರ್ಷವೂ ತಲೆಹಾಕುವುದೆಂದೂ ಆಗ ಪಾಠ ಶಾಲೆಗಳೆಲ್ಲ ಒಂದೆರಡು ತಿಂಗಳ ಕಾಲ ಸರಿಯಾಗಿ ಕೆಲಸ ಮಾಡುವುದಿಲ್ಲವೆಂದೂ ರಂಗಣ್ಣನಿಗೆ ಆಮೇಲೆ ತಿಳಿದು ಬಂತು. ಹಳ್ಳಿಗಳ ಆರೋಗ್ಯ ಸ್ಥಿತಿ ಮತ್ತು ಆರ್ಥಿಕ ಸ್ಥಿತಿ ಉತ್ತಮವಾಗದಿದ್ದರೆ ವಿದ್ಯೆ ಹರಡಲು ಅವಕಾಶವಿಲ್ಲ ಎಂಬುದೂ ಜೊತೆಯಲ್ಲೇ ಅರಿವಾಯಿತು. ಕುಂಬಾರನಿಗೆ ಒಂದು ವರುಷ, ದೊಣ್ಣೆಗೆ ಒಂದು ನಿಮಿಷ – ಎಂಬ ಗಾದೆಯಂತೆ ಆಯಿತಲ್ಲಾ ಎಂದು ನೊಂದುಕೊಂಡನು. ಪಾಠಶಾಲೆಗಳಿಗೆ ಹೊಲದಲ್ಲಿ ಗುಡಿಸಿಲುಗಳನ್ನಾದರೂ ಕಟ್ಟಿಸುವ ಏರ್‍ಪಾಡು ಮಾಡಬೇಕು ಎಂದು ತೀರ್ಮಾನಿಸಿದನು. ತಾನು ಆ ಪ್ರಾಂತ ಸರ್ಕಿಟು ಹೋಗ ಬೇಕಾಗಿದ್ದುದರಿಂದ ತಾನು ಮೊದಲು ಇನಾಕ್ಯುಲೇಷನ್ ಮಾಡಿಸಿಕೊಂಡನು. ತನ್ನ ಮನೆಯವರಿಗೂ ಮಾಡಿಸಿದನು.

ಮಾರನೆಯ ದಿನ ತಿಪ್ಪೂರಿನ ಪ್ರೈಮರಿ ಪಾಠಶಾಲೆಯಿಂದ ಕಾಗದ ಬಂತು. ಊರಲ್ಲಿ ಇಲಿಗಳು ಬೀಳುತ್ತಾ ಇವೆ. ಪಾಠಶಾಲೆಯಲ್ಲೂ ಒಂದು ಇಲಿ ಬಿತ್ತು. ಅದನ್ನು ಡಾಕ್ಟರ್ ಬಳಿಗೆ ಕೊಟ್ಟು ಕಳಿಸಿದ್ದಾಯಿತು. ಹತ್ತು ದಿನಗಳವರೆಗೆ ಸ್ಕೂಲನ್ನು ಮುಚ್ಚಬೇಕೆಂದೂ ಒಳಗೆಲ್ಲ ಡಿಸಿನ್‌ಫೆಕ್‌ಷನ್ ಮಾಡಿಸಬೇಕೆಂದೂ ಡಾಕ್ಟರು ಹೇಳಿದ್ದಾರೆ. ಸದ್ಯಕ್ಕೆ ಸ್ಕೂಲನ್ನು ಮುಚ್ಚಿದೆ. ಡಿಸಿನ್‌ಫೆಕ್ಷನ್ನಿ ಗೆ ಏರ್ಪಾಡು ಮಾಡಲಾಗುತ್ತದೆ ಎಂದು ಒಕ್ಕಣೆಯಿತ್ತು. ಆ ಕಟ್ಟಡವೇ ಕಲ್ಲೇಗೌಡರಿಗೆ ಸೇರಿದ್ದು, ಅದರ ಪ್ರಸ್ತಾಪವನ್ನು ಹಿಂದೆಯೇ ಮಾಡಿದೆ. ರಂಗಣ್ಣ ಆ ಕಾಗದವನ್ನು ಓದಿಕೊಂಡು ತಿಪ್ಪೂರು ಹೋಬಳಿಯ ಕಡೆಗೆ ಸರ್ಕಿಟು ಹೊರಟನು. ತಿಪ್ಪೂರಿನಲ್ಲಿ ಜನ ಊರನ್ನು ಖಾಲಿಮಾಡಿ ಹೊರಗಡೆ ಗುಡಿಸಿಲುಗಳನ್ನು ಹಾಕಿಕೊಂಡಿದ್ದರು. ಊರು ಬಿಕೋ ಎಂದು ಹಾಳುಬಡಿಯುತ್ತಿತ್ತು. ರಂಗಣ್ಣನು ಡಾಕ್ಟರನ್ನು ಕಂಡು ಸ್ಥಿತಿಯನ್ನು ತಿಳಿದುಕೊಂಡನು. ಅವರು ‘ಇನ್‌ಸ್ಪೆಕ್ಟರೇ! ಈಗೇಕೆ ಸರ್‍ಕೀಟು ಹೊರಟಿದ್ದೀರಿ? ಹಳ್ಳಿಗಳಲ್ಲಿ ಪ್ಲೇಗು ಸೋಂಕು; ಜನ ಇಲ್ಲ; ಸ್ಕೂಲು ಬಾಗಿಲುಗಳು ಮುಚ್ಚಿವೆ. ನೀವು ಹಾಗೆಲ್ಲ ತಿರುಗಾಡುವುದು ನಿಮಗೆ ಅಪಾಯಕರ. ಹೀಗೆಯೇ ಎರಡು ತಿಂಗಳ ಕಾಲ, ಆಮೇಲೆ ಹತೋಟಿಗೆ ಬರುತ್ತದೆ. ಅಲ್ಲಿಯ ವರೆಗೂ ಬೇರೆ ಹೋಬಳಿಗಳಲ್ಲಿ ಸರ್‍ಕಿಟು ಇಟ್ಟುಕೊಳ್ಳಿ – ಎಂದು ಬುದ್ಧಿವಾದ ಹೇಳಿದರು. ಆ ಹೊತ್ತಿಗೆ ಆ ಊರಿನ ವೈಸ್ ಪ್ರೆಸಿಡೆಂಟರು ಬಂದರು. ಅವರೂ ಸಹ ಅದೇ ಬುದ್ಧಿವಾದ ಹೇಳಿದರು. ರಂಗಣ್ಣ, ‘ಆಗಲಿ; ಈಗ ಬಂದದ್ದಾಯಿತು. ಒಂದೆರಡು ಹಳ್ಳಿ ನೋಡಿಕೊಂಡು ಹಿಂದಕ್ಕೆ ಹೋಗುತ್ತೇನೆ. ನಿಮೂರಿನ ಪ್ರೈಮರಿ ಸ್ಕೂಲ್ ಕಟ್ಟಡಕ್ಕೆ ಚೆನ್ನಾಗಿ ಡಿಸಿನ್ಫೆಕ್ಷನ್ ಮಾಡಿಸಿಕೊಡಿ ದೊಡ್ಡ ಉಪಕಾರವಾಗುತ್ತದೆ’ ಎಂದನು.

‘ಓಹೋ! ಕಲ್ಲೇಗೌಡರ ಅರಮನೆಗೋ! ಏನು ಬಾಡಿಗೆ ಕೊಡುತಿದ್ದೀರಿ?’ ಎಂದು ವೈಸ್ ಪ್ರೆಸಿಡೆಂಟ್ ನಗುತ್ತಾ ಕೇಳಿದರು.

‘ಹೌದು ಹತ್ತು ರೂಪಾಯಿ ಬಾಡಿಗೆ.’

‘ಸರಿ, ಆ ಕಟ್ಟಡಕ್ಕೆ ಡಿಸಿನ್ ಫೆಕ್ಷನ್ ಮಾಡಿಸುವ ಬದಲು ಉತ್ತ ಹೊಲಕ್ಕೆ ಮಾಡಿಸಬಹುದು! ಗೊಬ್ಬರದ ಗುಂಡಿಗೆ ಮಾಡಿಸ ಬಹುದು!’

‘ಮತ್ತೆ ಪಾಠ ಶಾಲೆ ನಡಸಬೇಕಲ್ಲ! ಆದಕ್ಕೇನು ಪರಿಹಾರ?

‘ನಿಮ್ಮ ಇಲಾಖೆಯವರು ಈ ಊರಿಗೆ ಒಂದು ಕಟ್ಟಡ ಕಟ್ಟಿಸಲಿಲ್ಲ. ನಾವೂ ಎಷ್ಟೋ ಬಾರಿ ಕೇಳಿಕೊಂಡೆವು: ಕೇಳಿದಾಗಲೆಲ್ಲ ಕಲ್ಲೇಗೌಡರ ಕಟ್ಟಡ ಇದೆಯಲ್ಲ! ಎಂದು ನನಗೆ ಸಮಾಧಾನ ಹೇಳುತ್ತಾ ಬಂದಿದ್ದಾರೆ. ಅವರಿಗೆ ಹತ್ತು ರೂಪಾಯಿ ಬಾಡಿಗೆ ತೆರುತ್ತಾ ಬಂದಿದ್ದಾರೆ.’

‘ನಮಗೇನು ಆ ಕಟ್ಟಡವೇ ಆಗಬೇಕೆಂಬ ಹಟವಿಲ್ಲ. ಬೇರೆ ಒಳ್ಳೆಯ ಕಟ್ಟಡ ಕೊಡಿಸಿ, ಅದೇ ಬಾಡಿಗೆ ಕೊಡುತ್ತೇವೆ. ಬೇಕಾದರೆ ಬಾಡಿಗೆ ಹೆಚ್ಚಾಗಿಯೇ ಕೊಡುತ್ತೇವೆ.’

‘ಕಟ್ಟಡವೇನೋ ಇದೆ. ಆದರೆ ಅದರ ಮಾಲೀಕ ಕಲ್ಲೇಗೌಡರಿಗೆ ವಿರುದ್ಧವಾಗಿ ನಿಲ್ಲುವುದಿಲ್ಲ. ನೀವೇ, ಇಲಾಖೆಯವರೇ ಈ ದೊಡ್ಡ ಊರಿಗೆ ಬೇಕಾದ ಕಟ್ಟಡ ಕಟ್ಟಿಸಬೇಕು.’

‘ಕಟ್ಟಡ ಆಗುವವರೆಗೂ ಪರಿಹಾರವೇನು? ಇನ್ನು ಒಂದು ವರ್ಷವಾದರೂ ನಮಗೆ ಅವಕಾಶ ಬೇಕಲ್ಲ.’

‘ಹೇಗೋ ಮಾಡಿಕೊಳ್ಳಬೇಕು. ಬೆಳಗಿನ ಹೊತ್ತು ಮಿಡಲ್ ಸ್ಕೂಲು ಕಟ್ಟಡದಲ್ಲಿಯೇ ಪ್ರೈಮರಿ ಸ್ಕೂಲನ್ನು ನಡೆಸಬೇಕು.’

‘ಊರಿನವರ ಆಕ್ಷೇಪಣೆಯಿಲ್ಲವೋ?’

‘ಊರಿನವರು ಎಂದರೆ ಯಾರು ಸಾರ್? ನಾನು ವೈಸ್ ಪ್ರೆಸಿಡೆಂಟ್! ನಾನು ಹೇಳುತ್ತೇನೆ : ನನ್ನ ಆಕ್ಷೇಪಣೆಯಿಲ್ಲ. ನಮ್ಮ ಊರಿನ ಕೌನ್ಸಿಲ್ಲಿನ ಆಕ್ಷೇಪಣೆ ಇಲ್ಲದಂತೆ ನಾನು ನೋಡಿಕೊಳ್ಳಬಲ್ಲೆ. ದಾರಿಯಲ್ಲಿ ಹೋಗುವವರ ಆಕ್ಷೇಪಣೆ ಕಟ್ಟಿಕೊಂಡು ನಿಮಗೇನು?’

‘ಕಲ್ಲೇಗೌಡರ ಆಕ್ಷೇಪಣೆ ಬರುವುದಿಲ್ಲವೋ?’

‘ತಮ್ಮ ಕಟ್ಟಡವನ್ನು ರಿಪೇರಿ ಮಾಡಿಸಿಕೊಡಲಿ! ಅವರಿಗೇನು ಹಣವಿಲ್ಲವೇ? ಕೈ ಕೆಳಗೆ ಆಳುಗಳಿಲ್ಲವೇ? ಮನಸ್ಸು ಮಾಡಿದರೆ ಹದಿನೈದು ದಿನಗಳಲ್ಲಿ ಸೊಗಸಾಗಿ ರಿಪೇರಿ ಮಾಡಿ ಕೊಡಬಲ್ಲರು. ಸುಮ್ಮ, ಸುಮ್ಮನೆ ಆಕ್ಷೇಪಣೆ ಮಾಡಿದರೆ ನಾವು ಕೇಳಬೇಕಲ್ಲ!’

ರಂಗಣ್ಣನಿಗೆ ಆ ಕಟ್ಟಡದ ವಿಚಾರದಲ್ಲಿ ಒಂದು ದಾರಿ ಕಂಡ ಹಾಗಾಯಿತು. ‘ಒಳ್ಳೆಯದು. ಆಲೋಚನೆ ಮಾಡುತ್ತೇನೆ’- ಎಂದು ಉತ್ತರ ಕೊಟ್ಟು ಹಳ್ಳಿಯ ಕಡೆ ಹೊರಟನು. ಮೂರು ಮೈಲಿಗಳ ದೂರ ಹೋದನಂತರ ಒಂದು ಹಳ್ಳಿ ಸಿಕ್ಕಿತು, ಜನವೇ ಇರಲಿಲ್ಲ; ಪಾಠಶಾಲೆಯ ಬಾಗಿಲು ಮುಚ್ಚಿತ್ತು. ಎಲ್ಲಿ ಹುಡುಗರ ಕಲಕಲಧ್ವನಿಯೂ ಆಟ ಪಾಟಗಳೂ ಇರುತ್ತಿದ್ದುವೋ ಅಲ್ಲಿ ನೀರವ! ಮೂದೇವಿ ಬಡಿಯುತ್ತಿತ್ತು! ಪಾಠಶಾಲೆಯ ಕೈ ತೋಟ ನೀರಿಲ್ಲದೆ ಒಣಗುತ್ತಿತ್ತು. ಪ್ರಾಣಿಗಳು ಕೂಡ ಕಣ್ಣಿಗೆ ಬೀಳಲಿಲ್ಲ. ರಂಗಣ್ಣ ನಿಟ್ಟುಸಿರು ಬಿಡುತ್ತ ಮುಂದೆ ಅರ್ಧ ಮೈಲಿ ಹೋದಮೇಲೆ ಗುಡಿಸಿಲುಗಳು ಕಂಡವು. ಅಲ್ಲಿ ಪ್ರಾಣಿಗಳ ಸಂಚಾರ, ಜನ ಸಂಚಾರ ಇತ್ತು. ಹತ್ತಿರದ ಒಂದು ಆಲದ ಮರದ ಕೆಳಗೆ ಹೋಗಿ ನಿಂತನು. ಐದು ನಿಮಿಷಗಳಲ್ಲಿ ನಾಲ್ಕಾರು ಹುಡುಗರು ಬಂದು ಸೇರಿದರು. ಇಬ್ಬರು ಓಡಿ ಹೋಗಿ ಹಿರಿಯರಿಗೆ ವರ್ತಮಾನ ಕೊಟ್ಟರು. ನಾಲ್ಕು ಜನ ಗೌಡಗಳು ಬಂದು ಕೈ ಮುಗಿದು, ‘ಅಯ್ಯೋ ಸೋಮಿ! ಯಾಕಾನ ಈ ಅಳ್ಳೀಗೆ ಬಂದ್ರೋ! ಊರಾಗೇ ಹಾದು ಬಂದ್ರಾ?’ ಎಂದು ಕೇಳಿದರು.

‘ಹೌದಪ್ಪ. ಹಳ್ಳಿಯನ್ನು ಹೊಕ್ಕೇ ಬಂದೆ, ಜನ ಯಾರೂ ಇರಲಿಲ್ಲ.’

‘ಮಾರಿಗುಡಿ ಪಕ್ಕದಾಗೇ ಹಾದು ಬಂದ್ರಾ ಸೋಮಿ?’

‘ಹೌದಪ್ಪ!’

‘ಅಯ್ಯೋ ದ್ಯಾವರಾ!’

‘ಅದೇಕಪ್ಪಾ ಹಾಗೆ ಹೇಳುತ್ತೀಯೆ? ಊರಿಗೆ ಪ್ಲೇಗು ಬಂದರೆ ಮಾರಿ ಏನು ಮಾಡುತ್ತಾಳೆ? ನೀವೆಲ್ಲ ಇನಾಕ್ಯುಲೇಷನ್ ಮಾಡಿಸಿ ಕೊಂಡಿದ್ದೀರೋ ಇಲ್ಲವೊ?’

‘ಇಲ್ಲ ಸೋಮಿ. ನಮ್ಮಲ್ಲಿ ಇಬ್ಬರು ಮಾಡಿಸಿಕೊಂಡು ಬಂದರು. ಸತ್ತೇ ಹೋದ್ರು! ಪ್ಲೇಗ್ ಚುಚ್ಚಿಸಿಕೊಂಡರೆ ಸಾಯಾಕಿಲ್ವಾ? ಏನು ಸೋಮಿ? ಆ ಡಾಕ್ಟರಪ್ಪ ಬಂದು- ಎಲ್ಲರಿಗೂ ಚುಚ್ತೇನೆ, ನೀವು ಸಾಯಾಕಿಲ್ಲಾ ಎಂದು ಸುಳ್ ಸುಳ್ ಹೇಳ್ತವ್ರೆ.’

‘ಹಾಗಲ್ಲಪ್ಪ! ನಿಮಗೆ ಆ ವಿಚಾರ ತಿಳಿಯದು. ವಿಷದಿಂದ ವಿಷ ಹೊಡೆಯೋ ತಂತ್ರ ಅದು! ನೀವೆಲ್ಲ ಇನಾಕ್ಯುಲೇಷನ್ ಮಾಡಿಸಿಕೊಳ್ಳಬೇಕು.’

‘ನಿಮ್ಗೆ ಈ ವಿಚಾರ ಗೊತ್ತಾಗಾಕಿಲ್ಲಾ, ಸುಮ್ಕಿರಿ ಸೋಮಿ! ನಮ್ಮ ಅಳ್ಳೀಲಿ ಮಾರಿಗುಡಿ ಪೂಜಾರಿ ಹನುಮಂತಯ್ಯ ಅವ್ನೆ, ಬಾಳ ಮಡಿ ಮಾಡ್ತವ್ನೆ. ತಿಂಗಳ ಹಿಂದೆ ದೂರದ ಆಳ್ಳಾಗೆ ಇಲಿ ಬಿತ್ತು ಅಂತ ವರ್ತಮಾನ ಬಂತು, ನಾವೆಲ್ಲ ಹನುಮಂತಯ್ಯನ್ಗೆ-ಮಾರಿ ಪೂಜೆ ಮಾಡಲಾ! ಕಣಿ ಏನ್ ಬರ್ತಾದೋ ಕೇಳಾಣ-ಎಂದೆವು. ಅವನು ತಾನಾ ಮಾಡಿ, ಮಡಿಯುಟ್ಟು, ಮಾರಿಗೆ ಪೂಜೆ ಮಾಡಿ, ಅಲ್ಲೇ ಬಾಗಿಲ್ತಾವ ಕುಳಿತ. ಹಚ್ಚಿದ ಊದಬತ್ತಿ ಮೂಸಿ ನೋಡ್ತಾ ನೋಡ್ತಾ ಮಾರಿ ಆವೇಶ ಆಗೋಯ್ತು! ನಾವೆಲ್ಲ ನಮಸ್ಕಾರ ಮಾಡಿ ಕೇಳಿ ಕೊಂಡೆವು ಸೋಮಿ! ಆವಾಗ, ‘ಮಕ್ಕಳಿರಾ! ಎದ್ರ ಬೇಡ್ರಿ. ನಾನಿವ್ನಿ, ಕಾಪಾಡ್ಕೊಂಡು ಬರ್ತಿವ್ನಿ, ಎರಡು ಕುರಿ, ಎರಡು ಕೋಳಿ ತಪ್ಪದೆ ನಾಳೆ ಶನಿವಾರ ಬಲಿ ಕೊಡಿ’- ಅಂತ ಧೈರ್ಯ ಹೇಳಿದ್ಳು. ಅದರಂತೆ ಮಾಡಿದೆವು. ಪುನ ಹದಿನೈದು ದಿನ ಕಳೆಯುತ್ತಲೂ ನೆರೆ ಅಳ್ಳೀಲಿ ಇಲಿ ಬಿತ್ತು ಅಂತ ವರ್ತಮಾನ ಬಂತು, ಪುನ ಹನುಮಂತಯ್ನ ಪೂಜೆಗೆ ಕೂಡಿಸಿದೆವು. ಮಾರಿ ಆವೇಶ ಆಗಿ, ‘ಮಕ್ಕಳಿರಾ! ಎದ್ರ ಬೇಡ್ರಿ, ನಾನಿವ್ನಿ. ನಾಳೆ ಒಂದು ಕೋಣ ಬಲಿ ಕೊಡ್ರಿ’ ಅಂತ ಹೇಳಿದ್ಳು. ಅದರಂತೆ ಮಾಡಿದೆವು. ಒಂದು ವಾರದ ಹಿಂದೆ ನಮ್ಮ ಅಳ್ಳೀಲೆ ಇಲಿ ಬಿತ್ತು ಸೋಮಿ ಪುನ ಹನುಮಂತಯ್ನ ಕೂಡಿಸಿದೆವು. ಮಾರಿ ಆವೇಶ ಆಗಿ, ‘ಮಕ್ಕಳಿರಾ! ಇದ್ವರ್‍ಗೂ ನಿಮ್ಮನ್ನೆಲ್ಲ ಕಾಪಾಡಿಕೊಂಡು ಬಂದಿವ್ನಿ, ಇನ್ ಮ್ಯಾಗೆ ನಿಮ್ಮ ಬುದ್ದಿ ನಿಮ್ಕೈಲಿರ್‍ಲಿ, ಬೇರೊಬ್ಬರು ಏಳ್ದಂಗೆ ಕೇಳಬೇಡ್ರಿ’ ಅಂತ ಬುದ್ದಿ ಹೇಳಿದ್ಳು. ನಾವೂನೆ ಸಭೆ ಸೇರಿ,-ಮುಂದೆ ಎಂಗಾನ ಮಾಡಾಣ? ನಮ್ ಬುದ್ದಿ ನಮ್ ಕೈಲಿರ್‍ಲಿ ಅಂತ ಮಾರಮ್ಮ ಹೇಳವ್ಳೆ- ಅಂತ ಆಲೋಚ್ನಾ ಮಾಡೋ ಹೊತ್ತಿಗೆ ಇಬ್ಬರು ತಿಪ್ಪೂರಿಗೋಗಿ ಡಾಕ್ಟರಪ್ಪನ ಮಾತು ಕೇಳಿ ಪ್ಲೇಗ್ ಚುಚ್ಚಿಸಿಕೊಂಡು ಬಂದುಬಿಟ್ರು! ತಂದುಬಿಟ್ರು ಸೋಮಿ ನಮ್ಮಳ್ಳಿಗೆ ಪ್ಲೇಗ! ಮಾರಿಗೆ ಕೋಪ ಬಂದು ಅವರನ್ನ ತಿಂದೇಬಿಟ್ಳು. ಇನ್ನು ಊರಾಗಿರೋದು ಸರಿಯಲ್ಲ, ಮಾರಿ ಕೋಪಾ ಮಾಡಿ ಕೊಂಡವಳೆ – ಅಂತ ತೀರ್ಮಾನಮಾಡಿ ಇಲ್ಲೇ ಗುಡಿಸಿಲು ಹಾಕಿಕೊಂಡೆವು. ಇಲ್ಲಿಗೆ ಬಂದ ಮ್ಯಾಗೆ ಏನ್ ಕಾಟಾನೂ ಇಲ್ಲ ಸೋಮಿ!’

ರಂಗಣ್ಣ ಅವರ ವಿಚಾರ ಸರಣಿಯನ್ನೆಲ್ಲ ಕೇಳಿ ಮರುಕಗೊಂಡು ಈ ಜನರಲ್ಲಿ ಚೆನ್ನಾಗಿ ವಿದ್ಯೆ ಹರಡಿ ತಿಳಿವಳಿಕೆ ಬಂದ ಹೊರತು ದೇಶ ಉದ್ದಾರವಾಗುವುದಿಲ್ಲ. ಏನು ಮಾಡುವುದು-ಎಂದು ನಿಟ್ಟುಸಿರುಬಿಟ್ಟನು. ಬಳಿಕ, ‘ಈ ಆಲದ ಮರ ಚೆನ್ನಾಗಿದೆ ನಿಮ್ಮ ಮಕ್ಕಳನ್ನು ಇಲ್ಲಿ ಸೇರಿಸಿ ಪಾಠಮಾಡಬಹುದು. ಮೇಷ್ಟ್ರು ಎಲ್ಲಿದ್ದಾರೋ ನೋಡಿ ಕಳಿಸಿಕೊಡುತ್ತೇನೆ. ಮಕ್ಕಳಿಗೆ ಪಾಠ ತಪ್ಪಿಸಬೇಡಿ. ಅನುಕೂಲವಾದರೆ ನೀವು ಹಾಕಿಕೊಂಡಿರುವ ಹಾಗೆ ಒಂದು ಗುಡಿಸಿಲು ಹಾಕಿ ಕೊಡಿ; ಅದರಲ್ಲೇ ಸ್ಕೂಲು ಮಾಡೋಣ’- ಎಂದು ಹೇಳಿದನು.

‘ಆಗ್ಬೋದು ಸೋಮಿ! ಆದ್ರೆ, ನೆರೆಹಳ್ಳಿ ಹುಡುಗರ್‍ನ ನಾವು ಇಲ್ಲಿ ಸೇರ್‍ಸಾಕಿಲ್ಲ. ಮತ್ತೆ ಆ ಮೇಷ್ಟ್ರು ಪ್ಲೇಗ್ ಚುಚ್ಚಿಸಿಕೊಂಡು ಬಂದ್ರೆ ನಾವು ಸೇರ್‍ಸಾಕಿಲ್ಲ!’ ಎಂದು ಗೌಡನೊಬ್ಬನು ಹೇಳಿದನು.

ಮೋಟಾರುಗಳಲ್ಲಿ ಓಡಾಡುವ ದೊಡ್ಡ ಸಾಹೇಬರುಗಳಿಗೆ ನಮ್ಮ ಹಳ್ಳಿಯ ಜನರ ಪರಿಚಯ ಎಷ್ಟರಮಟ್ಟಿಗೆ ಇದೆಯೋ ಭಗವಂತ ಬಲ್ಲ. ಅವರ ಪ್ರಪಂಚವೆಲ್ಲ : ಬೆಂಗಳೂರು ಮತ್ತು ಮೈಸೂರು ; ಅಪ್ಪಿ ತಪ್ಪಿ ಡಿಸ್ಟ್ರಿಕ್ಟ್ ಹೆಡ್ ಕ್ವಾರ್ಟರುಗಳು; ಅವುಗಳಲ್ಲಿ ಊರ ಹೊರಗಿನ ಬಂಗಲೆ; ಮಧ್ಯೆ ಮಧ್ಯೆ ಔತಣಗಳು, ಹೂವಿನಹಾರಗಳು, ಸ್ತೋತ್ರಪಾಠಗಳು,

ರಂಗಣ್ಣ ಅಲ್ಲಿಂದ ಮುಂದಕ್ಕೆ ಎರಡು ಮೈಲಿ ದೂರ ಹೋದಮೇಲೆ ಮತ್ತೊಂದು ಹಳ್ಳಿ ಸಿಕ್ಕಿತು. ಹಳ್ಳಿಗೆ ಎರಡು ಫರ್ಲಾಂಗು ದೂರದಲ್ಲಿ ಪಾಠ ಶಾಲೆಯ ಕಟ್ಟಡವಿತ್ತು. ಅಲ್ಲಲ್ಲಿ ಕೆಲವು ಗುಡಿಸಿಲುಗಳು ಇದ್ದುವು. ಪಾಠಶಾಲೆ ತೆರೆದಿತ್ತು. ಒಳಗೆ ಮೇಷ್ಟ್ರು ಮತ್ತು ನಾಲ್ಕು ಹುಡುಗರು ಇದ್ದರು. “ಹೆಚ್ಚು ಹುಡುಗರು ಏಕೆ ಬರುತ್ತಿಲ್ಲ!” ಎಂದು ರಂಗಣ್ಣ ವಿಚಾರಿಸಿದನು.

“ಭಯ, ಸ್ವಾಮಿ! ಹಳ್ಳಿಯವರು ಕಳಿಸುವುದಿಲ್ಲ. ನಾನು ಬಹಳ ಧೈರ್ಯ ಹೇಳಿ ಈ ನಾಲ್ಕು ಜನ ಹುಡುಗರನ್ನು ಕರೆದುಕೊಂಡು ಬಂದಿದ್ದೆನೆ.”

“ನಿಮ್ಮ ಕೈ ತೋಟ ಇತ್ತಲ್ಲ, ಅದೆಲ್ಲಿ? ಏನೂ ಕಾಣುವುದಿಲ್ಲವಲ್ಲ.”

ಅದರ ಗಳ ಬೊಂಬು-ಎಲ್ಲವನ್ನೂ ಹಳ್ಳಿಯವರು ಗುಡಿಸಿಲು ಹಾಕಿಕೊಳ್ಳುವುದಕ್ಕೆ ಕಿತ್ತು ಕೊಂಡು ಹೋಗಿ ಬಿಟ್ಟರು ಸ್ವಾಮಿ! ಹಿಂದೆ ಅವರೇ ತೋಟಕ್ಕೆ ಬೇಲಿ ಕಟ್ಟಿಸಿಕೊಟ್ಟಿದ್ದರು. ಮತ್ತೆ ಕಟ್ಟಿಸಿಕೊಡ್ತೇವೆ, ಎಲ್ಲಿ ಹೋಗ್ತೈತೆ – ಅಂತ ಹೇಳಿ ಎತ್ತಿ ಕೊಂಡು ಹೋಗಿಬಿಟ್ಟರು. ಬೇಲಿ ಹೋದಮೇಲೆ ದನಕರುಗಳು ಬಂದು ಇದ್ದ ಗಿಡಗಳನ್ನೆಲ್ಲ ತಿಂದುಹಾಕಿ ಬಿಟ್ಟುವು. ತೋಟ ಹೋಗಿಬಿಡ್ತು ಸ್ವಾಮಿ.

‘ನೀವೆಲ್ಲಿ ವಾಸಮಾಡುತ್ತಾ ಇದ್ದೀರಿ ಮೇಷ್ಟ್ರೆ?’

‘ಇಲ್ಲೇ ಸ್ವಾಮಿ! ನನಗೂ ಒಂದು ಗುಡಿಸಿಲನ್ನು ಅವರೇ ಹಾಕಿ ಕೊಟ್ಟಿದ್ದಾರೆ.’

‘ಇನಾಕ್ಯುಲೇಷನ್ ಮಾಡಿಸಿಕೊಂಡಿದ್ದೀರಾ ಮೇಷ್ಟ್ರೆ?’

‘ಇಲ್ಲಾ ಸ್ವಾಮಿ! ಇನಾಕ್ಯುಲೇಷನ್ ಮಾಡಿಸಿಕೊಂಡರೆ ಹಳ್ಳಿಯಲ್ಲಿ ಸೇರಿಸೋದಿಲ್ಲ.’

‘ನೀವು ಓದಿದವರಾಗಿ ತಿಳಿವಳಿಕಸ್ಥರಾಗಿ ಹಳ್ಳಿಯವರಂತೆ ನಡೆಯುತ್ತಿದ್ದೀರಲ್ಲ ಮೇಷ್ಟ್ರೆ!’

‘ಏನು ಮಾಡುವುದು ಸ್ವಾಮಿ? ಅವರ ಮಧ್ಯೆ ನಾನು ಬಾಳ ಬೇಕು; ಅವರಂತೆ ನಾನು ನಡೆಯದಿದ್ದರೆ ಇಲ್ಲಿಂದ ಓಡಿಸಿಬಿಡುತ್ತಾರೆ. ಅವರಲ್ಲಿ ಹತ್ತು ಜನ ಇನಾಕ್ಯುಲೇಷನ್ ಮಾಡಿಸಿಕೊಂಡರೆ ಆಗ ನಾನೂ ಮಾಡಿಸಿಕೊಳ್ಳಬಹುದು; ಇತರರೂ ಮಾಡಿಸಿಕೊಳ್ಳುತ್ತಾರೆ.’

‘ಒಳ್ಳೆಯದು ಮೇಷ್ಟ್ರೆ! ನೀವು ಹೇಳುವ ಬುದ್ದಿ ಹೇಳಿ. ಡಾಕ್ಟರು ಬಂದಾಗ ಸಹಾಯ ಮಾಡಿ.’

ಹೀಗೆಂದು ಹೇಳಿ ರಂಗಣ್ಣ ಹಳ್ಳಿಯನ್ನು ಬಿಟ್ಟು ದೊಡ್ಡರಸ್ತೆ ಸೇರಲು ಹೊರಟನು. ಒಂದು ಮೈಲಿಯ ದೂರ ಬೈಸ್ಕಲ್ ತುಳಿದ ಮೇಲೆ ದಾರಿ ಬಹಳ ಒರಟಾಗುತ್ತ ಬಂದಿತು. ಹಳ್ಳಕೊಳ್ಳಗಳು, ಕಲ್ಲುಗುಂಡುಗಳು, ಈಚೆ ಆಚೆ ಮುಳ್ಳು ಪೊದರುಗಳು ಸಂಧಿಸಿದುವು. ಬೈಸ್ಕಲ್ಲಿಂದ ಇಳಿಯಬೇಕಾಗಿ ಬಂತು. ಅದನ್ನು ತಳ್ಳಿ ಕೊಂಡು, ಪಾಠ ಶಾಲೆಗಳೆಲ್ಲ ಅನ್ಯಾಯವಾಗಿ ಮುಚ್ಚಿ ಹೋದುವಲ್ಲ ಎಂದು ಚಿಂತಿಸುತ್ತ ಆ ಕಾಡು ಹಾದಿಯಲ್ಲಿ ಹೋಗುತ್ತಿದ್ದಾಗ, ಅವನ ದೃಷ್ಟಿ ನಿಷ್ಕಾರಣವಾಗಿ ಎಡಕ್ಕೆ ತಿರುಗಿತು. ಸುಮಾರು ಇಪ್ಪತ್ತು ಅಡಿಗಳ ದೂರದಲ್ಲಿ ಐದಡಿ ಉದ್ದದ ಭಾರಿ ನಾಗರಹಾವು! ಹೆಡೆಯೆತ್ತಿ ಕೊಂಡಿದೆ! ಹುತ್ತದಿಂದ ಹೊರಕ್ಕೆ ಬಂದಿದೆ! ರಂಗಣ್ಣನ ಧೈರ್ಯವೆಲ್ಲವೂ ಕುಸಿದು ಬಿದ್ದು ಹೋಯಿತು. ಬಾಯಿಂದ ಬು ಬು ಬು ಎಂಬ ಅರ್ಥವಿಲ್ಲದ ಸ್ವರ ಹೊರಟದ್ದು ಮಾತ್ರ ಜ್ಞಾಪಕ; ಕಾಲುಗಳು ತಮ್ಮಷ್ಟಕ್ಕೆ ತಾವೇ ಎಲ್ಲಿಗೋ ದೇಹವನ್ನು ಎತ್ತಿಕೊಂಡು ಹೋದ ಭಾವನೆ ಮಾತ್ರ ಜ್ಞಾಪಕ. ಆಮೇಲೆ ಪ್ರಜ್ಞೆ ಸಂಪೂರ್ಣವಾಗಿ ಹೋಗಿ ಬಿಟ್ಟಿತು.

ರಂಗಣ್ಣನಿಗೆ ಎಷ್ಟು ಹೊತ್ತಿನಮೇಲೆ ಎಚ್ಚರವಾಯಿತೋ ತಿಳಿಯದು. ಬಹುಶಃ ಅರ್ಧ ಗಂಟೆ ಅವನು ಜ್ಞಾನ ತಪ್ಪಿದ್ದಿರಬಹುದು. ಪ್ರಜ್ಞೆ ಬಂದು ಕಣ್ಣು ಬಿಟ್ಟಾಗ ತಾನು ನೆಲದ ಮೇಲೆ ಬಿದ್ದಿದ್ದುದೂ ಸ್ವಲ್ಪ ದೂರದಲ್ಲಿ ಬೈಸ್ಕಲ್ಲು ಮುಳ್ಳು ಬೇಲಿಮೇಲೆ ಬಿದ್ದಿದ್ದುದೂ ಕಂಡು ಬಂತು. ಸ್ವಲ್ಪ ದೂರದಲ್ಲಿ ಇಬ್ಬರು ಗೌಡರು ನಿಂತಿದ್ದರು.

‘ಮಾರಿ ಹೊಡೆದ್ ಬಿಟ್ಟವಳೆ ಕಾಣಪ್ಪ!’ ಎಂದು ಒಬ್ಬ ಆಡಿದು ಕೇಳಿಸಿತು. ‘ಪಾಣ ಐತೆ ಕಾಣಪ್ಪ! ಗಡ್ಡೆ ಗಿಡ್ಡೆ ಎದ್ದೈತೋ ಏನೋ!’ ಎಂದು ಇನ್ನೊಬ್ಬ ಹೇಳಿದ್ದೂ ಕೇಳಿಸಿತು. ರಂಗಣ್ಣ ಕಷ್ಟ ಪಟ್ಟು ಕೊಂಡು ಎದ್ದನು. ರುಮಾಲು ಎಲ್ಲೋ ದೂರದಲ್ಲಿ ಬಿದ್ದಿತ್ತು. ಸುತ್ತಲೂ ಭಯದಿಂದ ನೋಡಿದನು; ಕಾಲಿಗೇನಾದರೂ ಸುತ್ತಿಕೊಂಡಿದೆಯೇನೋ ಎಂದು ನೋಡಿದನು. ಏನೂ ಕಾಣಲಿಲ್ಲ. ಹತ್ತಿರ ಹುತ್ತವೂ ಕಾಣಲಿಲ್ಲ. ತನ್ನ ಕೈ ಕಾಲು ತರಚಿಹೋಗಿತ್ತು, ಮುಖಕ್ಕೆ ಸಹ ಸ್ವಲ್ಪ ಏಟು ಬಿದ್ದಿತ್ತು. ಸ್ವಲ್ಪ ಸುಧಾರಿಸಿಕೊಂಡು ರುಮಾಲನ್ನು ಕೈಗೆ ತೆಗೆದುಕೊಂಡಾಗ ಗೌಡನೊಬ್ಬನು – ‘ಎಲಾ, ನಮ್ಮಿನ್ಚ್ ಪೆಟ್ರು ಕಾಣಪ್ಪಾ! ಅಯ್ಯೋ ದ್ಯಾವ್ರೇ! ಯಾಕಾನಾ ಬಂದ್ರೋ’ – ಎಂದು ಉದ್ಗಾರ ತೆಗೆದನು. ಮತ್ತೊಬ್ಬನು ಹಾಗೆಯೇ ನೋಡಿ, ‘ಏನಾಯ್ತು ಸೋಮಿ ? ಬೈಸ್ಕಲ್ಲಿಂದ ಬಿದ್ರಾ?’ ಎಂದು ಕೇಳಿದನು. ರಂಗಣ್ಣನಿಗೆ ಇನ್ನೂ ಮಾತು ತೊದಲುತ್ತಲೇ ಇತ್ತು, ಕಾಲುಗಳಲ್ಲಿ ನಡುಕವೂ ಇತ್ತು. ಆದರೆ ಆ ನಿರ್ಜನ ಪ್ರದೇಶದಲ್ಲಿ ಆ ಇಬ್ಬರು ಗೌಡರನ್ನು ನೋಡಿ ಸ್ವಲ್ಪ ಧೈರ್ಯ ಬಂತು. ಆಗ ನಡೆದ ವಿಷಯವನ್ನು ತಿಳಿಸಿದನು. ಗೌಡನೊಬ್ಬನು ‘ಅದ್ಯಾಕೆ ಸೋಮಿ ಅಂಗ್ ಎದ್ರೋದು? ಅದೇನ್ ಮಾಡ್ತೈತೆ! ನಮ್ಮ ಹೊಲದಾಗೆ ಗದ್ಯಾಗೆ ದಿನಾಲೂ ಓಡಾಡತಾವೆ. ಇಲಿಪಲಿ ತಿನ್ಕೊಂಡು ತನ್‌ ಪಾಡ್ಗೆ ತಾನಿರ್‍ತೈತೆ. ಅದರ ತಂಟೆಗೆ ನಾವು ಹೋಗದಿದ್ರೆ ಅದೂ ನಮ್ಮ ತಂಟೆಗೆ ಬರಾಕಿಲ್ಲ!’ ಎಂದು ಹೇಳಿದನು.

ಎರಡನೆಯವನು, ‘ಒಬ್ಬೊಬ್ಬರೇ ಇಂಗೆಲ್ಲ ಕಾಡದಾರಿಲಿ ಒಡ್ಯಾಡಬ್ಯಾಡಿ ಸೋಮಿ! ಗರಚಾರ ಎಂಗಿರ್‍ತೈತೋ ಏನೋ! ಈಗ ನಡೀರಲಾ ಮತ್ತೆ. ನಿಮ್ಮನ್ನ ದೊಡ್ಡ ರಸ್ತೆ ಸೇರ್‍ಸಿಬಿಟ್ ಬರ್‍ತೇವಿ. ಕಾಲಬಂಡಿ ತೆಕೊಳ್ರಿ ಕೈಗ’ ಎಂದು ಹೇಳಿದನು.

ರಂಗಣ್ಣ ತನ್ನ ಉಡುಪುಗಳನ್ನು ಕೊಡವಿಕೊಂಡು, ಕೈವಸ್ತ್ರದಿಂದ ಮುಖವನ್ನೂ ಷರಾಯಿ ಮತ್ತು ಅಂಗಿಗಳನ್ನೂ ಒರಸಿಕೊಂಡು, ರುಮಾಲನ್ನು ಹಾಕಿಕೊಂಡು, ಬೈಸ್ಕಲ್ಲನ್ನು ತಳ್ಳಿ ಕೊಂಡು ಹೊರಟನು. ಕೈ ದೊಣ್ಣೆಗಳನ್ನು ಹಿಡಿದಿದ್ದ ಆ ರೈತರು ಮುಂದೆ ನಡೆಯುತ್ತ ಹೊರಟರು. ಪ್ಲೇಗು ಹರಡಿರುವುದು, ಜನ ಅಲ್ಲಲ್ಲಿ ಸಾಯುತ್ತಿರುವುದು, ಇನಾಕ್ಯುಲೇಷನ್ ಮಾಡಿಸಿಕೊಳ್ಳುವ ವಿಚಾರ – ಇವುಗಳನ್ನೆಲ್ಲ ಮಾತನಾಡುತ್ತ ರಂಗಣ್ಣ ತನ್ನ ಕೈಲಾದಷ್ಟು ತಿಳುವಳಿಕೆಯನ್ನು ಅವರಿಗೆ ಕೊಟ್ಟನು. ‘ನೀವೆಲ್ಲ ಪಟ್ಟಣದ ಜನ ಸೋಮಿ ! ನೀವ್ ಎಂಗ್ ಮಾಡಿದ್ರೂನೂವೆ ತಡೀತೈತೆ. ನಮ್ಮ ಅಳ್ಯಾಗೆ ಒರಟು ಜನ! ಅಯ್ ಸ್ಕೂಲ್ ಓದೋ ಹೈಕ್ಲು ನಾಲ್ಕು ಜನ ನಮ್ಮಲ್ಲೂ ಆದ್ರೆ ಅಳ್ಳೀ ಜನ ಎಷ್ಟೋ ಸುದಾರಸ್ಯಾರು’ ಎಂದು ಗೌಡನೊಬ್ಬನು ಹೇಳಿದನು. ದೊಡ್ಡ ರಸ್ತೆ ಸೇರಿದಮೇಲೆ ಅವರು ಕೈ ಮುಗಿದು, ‘ರಸ್ತೆ ಸಲೀಸೈತೆ, ಹತ್ತಿ ಕೊಳ್ರಿ ಸೋಮಿ ಗಾಡೀನಾ’ ಎಂದು ಹೇಳಿ ವಾಪಸು ಹೊರಟರು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮೊದಲ ಪಾಠ
Next post ನಾಳೆ ಎಂಬುದು ಹಾಳು ಕಾಣಿರೊ

ಸಣ್ಣ ಕತೆ

 • ದೇವರು

  ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…

 • ಆಮಿಷ

  ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…

 • ತಿಥಿ

  "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…

 • ಕರೀಮನ ಪಿಟೀಲು

  ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…

 • ವಿರೇಚನೆ

  ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…

cheap jordans|wholesale air max|wholesale jordans|wholesale jewelry|wholesale jerseys