ನನ್ನ ಕಣ್ಣ ದರ್ಪಣದೊಳಗೆ
ಕಾಣುತಿರುವ ಇವನಾರೇ?
ಇವ ಅವನಲ್ಲ ಕಣೆ

ಮತ್ಯಾರ ಬಿಂಬವೇ ಇದು
ಬೊಗಸೆ ತುಂಬಾ
ಮೊಗೆ ಮೊಗೆದು
ಒಲವನುಣಿಸಿ
ಬಾಳ ದಿನಗಳ ಹಿಗ್ಗಿಸಿದ
ಹರ್ಷದ ವರ್ಷ
ಧಾರೆ ಹರಿಸಿದ
ಅವ ಇವನಲ್ಲ ಕಣೆ
ಬಿಕ್ಕು ಕಾಣದ ದಿನಗಳಲಿ
ಬಾನನೇರಿ ಚಂದ್ರನ ಹಿಡಿದು
ಮನದ ತುಂಬಾ ಬೆಳದಿಂಗಳ ಚೆಲ್ಲಿ
ಮತ್ತೇರಿಸಿದವ ಇವನಲ್ಲ
ನಗೆಯ ಮುತ್ತುಗಳ ಹೆಕ್ಕಿ
ಎದೆಯೊಳಗಡಗಿಸಿಕೊಂಡು
ಮುತ್ತುಗಳ ಕಾತೆ ತೆರೆದವ
ತುಂಟ ತಂಟೆಕೋರ ಇವನಲ್ಲ
ಮತ್ಯಾರೇ ಇವ?

ಸತ್ತ ಅವನ ಪ್ರೇತ
ನೆನ್ನೆಗಳಲಿ ಹೂತು
ಹೋದ ಅವ
ನನ್ನ ಪ್ರೇಮದ
ಅಮೃತವ ಹೀರಿ
ಸಿಹಿನೆನಪುಗಳ
ಅಡಿಯಿಂದ

ಎದ್ದುಬಾರನೇ
ಅಂದಿನವನಾಗನೆ?
ಹೇಳೇ ನಾ ಇನ್ನೆಷ್ಟು
ದಿನ ಕಾಯಲಿ
*****

ಶೈಲಜಾ ಹಾಸನ
Latest posts by ಶೈಲಜಾ ಹಾಸನ (see all)