ಅಶ್ಲೀಲ ಅಂಬೋದು ಡ್ರೆಸ್‍ನಾಗಲ್ಲ ಇರೋದು

ಬೆಂಗಳೂರು ಇಸ್ವ ಇದ್ಯಾನಿಲಯದಾಗೆ ಪಾಠ ಮಾಡೋ ಹಳೆ ತಲೆಗಳೆಲ್ಲ ತಕರಾರು ತೆಗದವ್ರೆ. ಹುಡ್ಗೀರು ಅರೆಬೆತ್ತಲೆ ಡ್ರೆಸ್ ಹಾಕ್ಕಂಡು ಬಂದು ನಮ್ಮ ಎದುರ್ನಾಗೆ ಕುಂತ್ರೆ ನಾವಾರ ಪಾಠ ಮಾಡೋದೆಂಗೆ? ಅವರ ಮೈಸಿರಿಯ ನೋಡಿಯೂ ನೋಡದಂತಿರಲಾರದೆ; ನೋಡಿ ಆನಂದಿಸಲಾರದೆ, ಸಹಿಸಲೂ ಆಗದೆ ಚಪಲಗಳಿಂದ ತಮ್ಮನ್ನು ರಕ್ಷಿಸಿಕೊಳ್ಳೋದು ಹೆಂಗೆ ಅಂತ ಹಲುಬ್ಲಿಕತ್ತಾರೆ. ಬಿಂದಾಸ್ ಹುಡ್ಗೀರ ಡ್ರೆಸ್ ಹೆಂಗಿರಬೇಕು. ಎಷ್ಟು ಉದ್ದ ಎಷ್ಟು ಅಗಲ ಎಷ್ಟು ಸಡಿಲ ಎಷ್ಟು ಬಿಗಿತ ಎಷ್ಟು ಗುತ್ತ ಯಾವ ಬಣ್ದ ಡಿಸೈನ್ ಕ್ಲಾತಾದ್ರೆ ತಾವು ತಾಮಸಿಗರಾಗದೆ ಉಳಿದೇವೆಂಬ ತೀರ್ಮಾನಕ್ಕೆ ಬಂದವರೆ, ಡ್ರೆಸ್ ಕೋಡ್ ಜಾರಿಗೆ ತರಲು ನಿರ್ಧರಿಸಿದ್ದಾರೆಂಬ ದುರ್ವಾರ್ತೆ ಎಲ್ಲೆಡೆ ಹಬ್ಬೇತಿ. ಇದರಿಂದ ಹುಡ್ಗೀರು ಕಂಗಾಲಾದ್ರೆ ಹುಡ್ರು ಅಂಗಾರಾಗವೆ. ಮುದಿ ಮೇಷ್ಟ್ರುಗಳನ್ನು ಕ್ಯಾಂಪಾಸು ಕ್ಯಾಂಟೀನು ಕಾರ್ನರ್ಗಳಲ್ಲಿ ಶಪಿಸ್ತಾ ಓಡಾಡ್ಲಿಕತ್ತವೆ. ಇಂತ ನಿಯಮ ಜಾರಿಗೆ ತಂದಿದ್ದೇ ಆದಲ್ಲಿ ಮೀಸಲಾತಿ ವಿರೋಧಿ ಚಳುವಳಿಗಿಂತ ಅಗ್ದಿ ಭಯಂಕರ ಚಳುವಳಿ ಮಾಡ್ತೀವಿ ಅಂತ ಕೆಲವು ಕಂಟೋನ್ಮೆಂಟ್ ಹುಡ್ಗೀರು ಹಾರಾಡ್ಲಿಕತ್ತಾರ್ರ. ಹಲವು ಗಂಡೆದೆ ಹುಡ್ಗೀರು ನಮ್ಮನ್ನು ಹಿಂಗೆಲ್ಲಾ ಸತಾಯಿಸಿದ್ರೆ ಬೆತ್ತಲೆ ಚಳುವಳಿಗೂ ತಯಾರ್ ಎಂದು ಗುಟುರು ಹಾಕ್ದ ಸುದ್ಧಿ ನಂಬಲನರ್ಹ ಮೂಲದಿಂದ ಸುದ್ದಿಯಾಗೇತಿ. ಧಿರಿಸು ಹಾಕಾದ್ರಾಗೆ ಶೀಲ ಅಶ್ಲೀಲ ಹ್ಯಾಂಗ್ರಿ ಗುರುತಿಸ್ತಿರಾ? ಬೇಲೂರು ಹಳೆಬೀಡ್ದಾಗಿರೋ ಶಿಲ್ಪಗಳ ಉಬ್ಬುತಗ್ಗು ನೋಡಿ ಮೆಚ್ಚೋ ನೀವು ಅದನ್ನ ಅಶ್ಲೀಲ ಅಂತಿರೇನು? ಶಿವನು ಪಾರ್ವತಿನಾ ತೊಡಿಮ್ಯಾಗೆ
ಕುಂಡ್ರಿಸಿಕ್ಯಾಂಡು ಎದೆಮ್ಯಾಗೆ ಕೈ ಹಾಕವ್ನೆ. ಶಿವನ ಸೊಂಟದ ಮೇಲಾಗ್ಲಿ ಪಾರ್ವತಿ ಸೊಂಟದ ಮೇಲೆ ಬಟ್ಟೆ ಎಲ್ಲಿ ಐತಿ? ಶ್ರೀ ಕೃಷ್ಣನೂ ಅರೆಬೆತ್ಲೆನೆಯಾ. ಇವರ್ನೆಲ್ಲಾ ನೋಡಿ ಭಯ ಭಕ್ತಿಯಿಂದ ಕೈ ಮುಗಿದು ಕಾಯಿ ಬಡಿತೀರಾ? ಗೊಮ್ಮಟೇಶನ್ನ ನೋಡಿ ನಾಚಿದ್ದುಂಟಾ? ಅಕ್ಕಮಾದೇವಿ ಕೊದಲ್ನಾಗೆ ತನ್ನ ಶರೀರ ಅಷ್ಟೊ ಇಷ್ಟೊ, ಮುಚ್ಚಿ ಕೊಂಡಿದ್ಲಂತೆ! ಆದ್ರೂ ಯಾವನಾರ ಶರಣ ಆಕಿ ಬಗ್ಗೆ ಜೊಲ್ಲು ಸುರಿಸಿದ ಸ್ಟೋರಿ ಕೇಳಿರೇನು? ಜೈನಮುನಿಗಳು ಬೆತ್ಲ ಬರೋವಾಗ ಹೆಂಗಸರೂವೆ ನಿರ್ವಿಕಾರವಾಗಿ ನೋಡಲ್ವೇನು? ತಲೆ ಸಮ ಇರೋ ಯಾರೂ ಇಂಥದ್ದರ ಬಗ್ಗೆ ತಲೆ ಕೆಡಿಸಿಕ್ಯಂಬಲ್ರಿ. ಅಶ್ಲೀಲ ಅಂಬೋದು ಡ್ರೆಸ್‍ನಾಗಲ್ಲ ಇರೋದು. ನೋಡೋ ದೃಷ್ಟಿನಾಗ, ಕಾಮದ ಕಣ್ಣಿನಾಗ ಅಂತೆಲ್ಲಾ ವಾದಕ್ಕಿಳಿದಿರೋ ಹುಡ್ಗೀರ್ಗೆ ಏನು ಉತ್ತರ ಹೇಳಾದು?

ಅಲ್ಲ ಕಣ್ಲಾ, ಹುಡ್ಗೀರು ತುಂಡು ಲಂಗ ಹಾಕ್ಕಂಡು ಟೈಟ್ ನೆಟ್ ಬನಿಯನ್ ಇಕ್ಕಂಡು ಹೊಕ್ಕಳ ಬಿಟ್ಕಂಡು ಎದೆ ಸೆಟೆಸ್ಕಂಡು ಕುಂತ್ರೆ ನಾವಾರ ಹ್ಯಾಂಗ್ರ ನೋಡದಂಗೆ ಲೆಕ್ಚರ್ ಕೊಡ್ಲಿಕ್ ಸಾಧ್ಯ? ಹೆಣ್ಣಿನ ಅನಾಟಮಿ ಬಗ್ಗೆ ನೆಟ್ಟಗೆ ಅರೀದ ಎಳ್ ಹುಡ್ರು ತಡ್ಕೊಂಡಾರು ನಮ್ಮಂತ ಎಕ್ಸ್‍ಪೀರಿಯನ್ಸ್‍ಗಳ ಪಾಡೆಂಗ್ರಿ? ಜೊತೆಗೆ ವಯಸ್ಸಾದ ಪ್ರೊಫೆಸರ್ಸೂ ನಮ್ಮಲ್ಲವ್ರೆ. ಅವರ ಕೈಲಿ ಎಂತದೂ ಕಿಸಿಯಲಾಗದಿದ್ದರೂ ಚಪಲ ಚೆನ್ನಿಗರಾಯರಾದ ಇವರು ಏನಾರ ತಂಟೆ ಮಾಡ್ಕೊಂಡ್ರೆ ಮೇಷ್ಟ್ರು ಕುಲಕ್ಕೇ ಕಳಂಕ ತಟ್ಟೋದಿಲ್ವೇನ್ರಿ? ಇತ್ತೀಚೆಗೆ ಅಪ್ರಾಪ್ತ ಹೆಣ್ಣು ಮಕ್ಕಳನ್ನು ಕಾಮತೃಷೆಗೆ ಬಳಸಿಕೂಂಡ ಪ್ರೈಮರಿ ಮಿಡ್ಲ್ ಸ್ಕೂಲು ಮಾಸ್ತರ ಕಥೆ ವ್ಯಥೆ ಪೇಪರ್ನಾಗೆ ಕ್ರೈಂ ಸ್ಟೋರಿ ಆಗಿಲ್ಲೇನ್ರಿ? ಇಂಥದ್ರಾಗೆ ಪಡ್ಡೆ ಹುಡ್ಗೀರ “ಫ್ರೀ ಷೋ”ಗಳ್ನ ನೋಡ್ತಾ ನಾವಾರ ಏಗೋದು ಹ್ಯಾಂಗ್ರಿ. ಉಪ್ಪು ಹುಳಿ ತಿಂದ ಜೀವ ಹೆಣ್ಣು ಜೀವ ಕಂಡ ತಕ್ಷಣವೆ ಪೆಕರನಂಗೆ ಆಡ್ದೆ ಇದ್ದುತಾ? ಹಿಂಗಂತ ಕಾಲೇಜು ಮೇಷ್ಟ್ರುಗಳು ಒಂದೇ ಸಮನೆ ಹಪಹಪಿಸ್ಲಿಕತ್ತವೆ. ಇವರ ಆಲಾಪ್ನೆ ಕೇಳೇ ಇಸ್ವ‌ಇದ್ಯಾಲಯದೋರು ಡ್ರೆಸ್ ಕೋಡ್ ತರ್ಲಿಕ್ಕೆ ಮುಂದಾಗವರಂತೆ. ಹರೇದ ಹುಡ್ಗೀರು ಈಗ ಏನೇನು ಬಟ್ಟೆಬರಿ ತೊಡ್ತಾ ಆವೆ. ಕೋಡ್ ಪ್ರಕಾರ ಏನ್ ತೊಟ್ಟರೆ ಕಣ್ಣಿಗೆ ಹಿತ, ಮನಸ್ಸಿಗೆ ಮುದ ಅಂತ ಮೀಟಿಂಗ್ ನಡೆಸಲಿಕತ್ತಾರಂತ್ರಿ. ಆದರೆ ನಮ್ಮ ಹುಡ್ಗೀರ ಗೋಳೇ ಬ್ಯಾರೆ ಐತ್ರಿ. ಹುಟ್ಟಿದಾಗ ಅಪ್ಪ ಅಮ್ಮ ಹಾಕಿದ ಡ್ರೆಸ್ನೇ ಹಾಕ್ಕತೀವಿ. ಆಮ್ಯಾಲೆ ಇಷ್ಟವಿರ್ಲಿ ಬಿಡ್ಲಿ ಯಾವ ಶಾಲೆ ಕಾನ್ವೆಂಟ್ನಾಗೆ ಓತ್ತಿವೋ ಆ ಶಾಲೆ ಪ್ರಿನ್ಸಿ ಆರ್ಡರ್ ಮಾಡಿದ ಕಲರ್ ಯೊನಿಫಾರಂ ಹಾಕ್ಕತೀವಿ. ಕಲಕಲರ್ ಡ್ರೆಸ್ ಹಾಕ್ಕಂಡು ಕಲರ್ಪುಲ್ಲಾಗಿ ಕಾಲೇಜಿಗಾರ ಬರೋಣ ಅಂದ್ರೆ ಡ್ರೆಸ್ ಕೋಡ್ ತರ್ತಾರಂತೆ. ಇವರಜ್ಜಿ ಪಿಂಡ ಅಂತ ಸಿಡಿಮಿಡಿಗುಟ್ಲಿಕತ್ತಾರ್ರಿ. ಹುಡ್ರು ಹುಡ್ಗೀರು ಬ್ಯಾರ್ ಬ್ಯಾರೆ ಯಾಕ್ರಿ ಕುಂಡ್ರಬೇಕು? ಜೋಡಿ ಕುಂತ್ರೆ ಇವರಪ್ಪನ ಗಂಟು ಹೋದಾತಾ? ಹುಡ್ಗೀರು ಪ್ರಶ್ನೆ ಹಾಕ್ತವೆ. ಅಲ್ರಿ, ಜೀನ್ಸ್ ಹಾಕಿ ತುಂಡು ರವಿಕೆ ತೊಟ್ಕಂಬಂದ ಹುಡ್ಗಿ ಪಕ್ಕ ಕುಂತ ಹುಡ್ಗ ದೃಶ್ಯ ವೈಭವ ನೋಡಾದ್‍ಬಿಟ್ಟು ಭರತೇಶವೈಭವ ಕೇಳ್ಯಾನೇನ್ರಿ? ಇಂತಿಪ್ಪ ಸೀಥ್ರೂ ಹುಡ್ಗೇರ‍ನ ಆರಾದ್ನೆ ಮಾಡೋದು ಬಿಟ್ಟು ವಡ್ಡಾರಾದ್ನೆ ಓದಾನ್ಯೆ? ಪೆಂಡಿಲಮ್ ಟೆಸ್ಟ್ ಮಾಡಾನ್ಯೆ ಜಿರ್ಲಿಕಪ್ಪೆ ಕುಯ್ದಾನ್ನ್ಯೇ ಅಂಬೋದು ಗುರುವರ್ಯರ ಕುಕ್ಕುಲಾತಿ. ಇದ್ನೆಲ್ಲಾ ಮೂಲಕಾರಣ ಮಮ್ಮಿ ಡ್ಯಾಡಿಗಳು ಕೊಟ್ಟ ಸ್ವಾತಂತ್ರ್ಯ ಕಣ್ರಿ. ಅವರಿಗಾನ ಗ್ಯಾನ ಬ್ಯಾಡ್ವ? ಒಂದೊಂದು ಹುದ್ದೆಗೂ ಯೂನಿಫಾರಂ ಇಲ್ವಾ? ಪೋಲೀಸು ಕಾರ್ಮಿಕ ಡ್ರೈವರ್ರು ಗಾರ್ಡ್ಗಳಿಗೆ ಕಾಕಿ, ಪೊಲಿಟೀಶಿಯನ್ಸ್‍ಗೆ ಖಾದಿ ಪಕೀರರಿಗೆ ಹಸಿರುವಸ್ತ್ರ, ಫಾದರ್ಗಳಿಗೆ ಬಿಳಿ ವಸ್ತ್ರ, ಮಹಾಸ್ವಾಮಿಗಳಿಗೆ ಕಾವಿ, ಡಾಕ್ಟರ್ಸ್‍ಗೆ ಬಿಳಿಕೋಟು, ಲಾಯರ‍ಸ್ಗೆ ಕರಿ ಕೋಟು ಅಂಬೋದು ರೂಲ್ಸೇ ಆಗೇತಿ. ಅಟ್ ದಿ ಸೇಮ್ ಕಾಲೇಜ್ ಹೈಕಳಿಗೆ ಯಾಕೆ ಯೊನಿಪಾರಂ ತರಬಾರ್ದು ಅಂಬೋದು ಯೂನಿವರ್ಸಿಟಿನೋರ ಚಿಂತೆ. ಮೊದ್ಲು ಎಲ್ಡು ಜಡೆ ಹುಡ್ಗೀರ್ಗೆ ಬಾಬ್ ಕಟ್ ಹುಡ್ಗೀರ್ನ ಕಂಡ್ರೆ ದಿಗಿಲಾಗೋದು. ಈಗಂತೂ ಹುಡ್ಗೀರು ಶಾಂಪು ಹಚ್ಕಂಡು ಕೂದ್ಲು ಬೆನ್ನಮ್ಯಾಗೆ ಹರವಿಕೊಂಡು ಊರ ಮಾರಮ್ಮನಂಗೆ ಬತ್ತಾ ಆವೆ. ಹಿಂದೆ ಚೊಡಿದಾರ್ನಾಗೆ ಬರೋಳ್ನ ಹುಡ್ಗೀರೇ ಗುಂಪಿಂದ ದೂರ ಇಡೋರು. ಈಗ ಎಲ್ಲಾ ಚೂಡಿಗಳೇ! ಆದ್ರೆ ಮಿಡಿಗಳಾಗಿ ಬಂದರೇನ್ರಿ ಗತಿ? ಲೋವೆಸ್ಟ್ ಸ್ಪಗಟಿ ಹಿಪ್‍ಸ್ಟರ್ಸ್ ಬೂಟ್ ಕಟ್ಸ್ ಕೆಪ್ರಿ, ಜೀನ್ಸ್ ಮೇಲೆ ತೂತು ತೂತಾದ ಟಾಪ್ ನೇತು ಹಾಕ್ಕಂಡು ಬರ್ಲಿಕತ್ತಾರಲಲ್ರಿ. ಹುಡ್ಗೀರ ಟಾಪ್ ಮೇಲೇರುತ್ತಿದ್ದಂಗೆ ಬಾಟಮ್ ಧಿರಿಸೊ ಮೇಲೇರೋದ್ರಾಗೆ ಕಾಂಪಿಟೇನ್ನೆಗೆ ನಿಂತದೆ ಅಂತ ನಾವು ಅಂದ್ವೋ; ಫಿಟ್ಟಾಗಿ ಸೀರೆ ಸುತ್ತಿ ಬ್ರಾನಷ್ಟೆ ಇರೋ ಬ್ಲೌಸ್ ತೊಟ್ಟು ಬಂದ್ರೆ ಅದಕ್ಕಿಂತ ಸೆಕ್ಸಿಡ್ರೆಸ್‍ವುಂಟಾ ಸಾರ್ ಅಂತಾರೆ ಮಾಡರನ್ ಗರಲ್ಸು. ‘ಮಾಮಾಮ ಮಜಾ ಮಾಡು ಕ್ಲಾಸಲ್ಲಿ ಲಕ್ಚರು ಬೋರಾದ್ರೆ ಪಿಕ್ಚರು. ಊರ್ಮೇಲೆ ಊರುಬಿದ್ದರು ಗೋಲಿ ಮಾರೋ’ ಅಂತ ಸಿನಿಮಾ ಸಾಹಿತಿ ಉಪದೇಶ ಕೇಳ್ತಾ ಹಿರೋ ಹಿರೋಯಿನ್ ಗಳ ಮುದ್ದಾಟ ಗುದ್ದಾಟ ಉರುಳು ಸೇವೆ ನೋಡ್ತಾ ಥೇಟ್ರಲ್ಲಿ ಸೀಟಿ ಹೊಡ್ದು ಮೆಚ್ಚಿಕೊಳ್ಳೋ ನೀವು, ನಮ್ಮನ್ನು ಮಾತ್ರ ಯಾಕೆ ಮುಚ್ಕೋ ಅಂತೀರ್ರಿ? ನಾವ್ ಹೆಂಗೆ ಬೇಕಾರ ಬಿಚ್ಕೊಂಡು ಬರ್ತೀವಿ. ನೀವು ಮನಸ್ಸನ್ನು ಸ್ವಚ್ಚ ಇಟ್ಕಳ್ರಿ ಸರಾ. ಅಕ್ಕಮಾದೇವಿ ಅನುಭವ ಮಂಟಪ್ಪಾಗೆ ಎಂಟ್ರಿ ಕೊಟ್ಟಾಗ ಶರಣರೂ ನಿಮ್ಮಂಗೆ ಹುಚ್ಚು ಮಳ್ಳಗಳಂಗೆ ಆಡಿದ್ವೇನು? ಪುಲ್‍ಸೈಜ್ ಬಟ್ಟೆ ತೊಟ್ಕೊಂಡು ಬಾ ಅಂದರೇನು? ಹೇರ್ಸ್‍ಕವರ್ ಡ್ರೆಸ್ನಾಗೇ ಆಕೇನ ವೆಲ್ಕಂ ಮಾಡ್ಲಿಲ್ಲೇನು? ನೀವೂ ಹಂಗೆ ಶರಣರಾಗೋಕೇನ್ ಧಾಡಿ? ಕೊ-ಸ್ಟಡಿ ಮಾಡ್ತಾ ಕಾಲೇಜ್ ಟೈಂ ಇಡೀ ಜೊತೇನಾಗಿರೋ ಸುತ್ತಾಡೋ ಹುಡ್ರೇ ಕೂಶ್ಚನ್ ಮಾಡ್ತಿಲ್ಲ. ಒಂದುಗಂಟೆ ಲೆಕ್ಚರ್ ಬಿಗಿದು ಹೋಗೋ ನಿಮಗ್ಯಾಕ್ರಿ ಈ ಉಸಾಬರಿ ಅಂತಾವೆ ಬಿಂದಾಸ್ ಹುಡ್ಗೀರು. ಇದು ನಮ್ಮ ಸಂಸ್ಕೃತಿ ಅಲ್ಲ ಅಂತ ಗೊಣಗಿದ್ರೆ ಬೇಲೂರು ಹಳೆಬೀಡು ಬೆಳಗೋಳ ಅಜಂತ ಎಲ್ಲೋರ ನಮ್ಮ ದೇವಸ್ಥಾನದ ಮ್ಯಾಗಿರೋ ಶಿಲ್ಪಗಳಿಗೆ ಮೊದ್ಲು ಯೂನಿಫಾರಂ ತೊಡ್ಸಿ ಆಮೇಲೆ ನಾವೂ ತೊಟ್ಕಂಡೇವು ಅಂತ ಮೂಗು ಮುರಿಲಿಕತ್ತವೆ …… ಮುಂದ ?
*****
( ದಿ. ೧೫-೦೬-೨೦೦೬)

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮೀರಬಾರದಲ್ಲ ಹೊತ್ತು
Next post ಅಸ್ಮಿತೆ

ಸಣ್ಣ ಕತೆ

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…

  • ಉಪ್ಪು

    ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…

  • ಮುಗ್ಧ

    ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…

cheap jordans|wholesale air max|wholesale jordans|wholesale jewelry|wholesale jerseys