ನಾನವಳ ಇನ್ನಿಲ್ಲದಂತೆ ಪ್ರೀತಿಸಿ ಕೂಡ
ನೀ ಪಡೆದೆ ಅವಳ ಎನ್ನುವುದಲ್ಲ ನನ್ನ ವ್ಯಥೆ ;
ನನ್ನೆದೆಯ ಒಂದೆ ಸಮ ಕೊರೆಯುತ್ತಿರುವ ಗೂಢ
ಅವಳು ನಿನ್ನನು ಪಡೆದುಕೊಂಡಳೆನ್ನುವ ಚಿಂತೆ.
ಪ್ರಿಯ ವಂಚಕರೆ ನಿಮ್ಮ ಕ್ಷಮಿಸುವೆನು ನಾ ಹೀಗೆ :
ನನ್ನ ಪ್ರೇಯಸಿಯೆಂದೆ ನೀನವಳ ಒಲಿದದ್ದು,
ಪ್ರಿಯೆ ಕೂಡ ದೂರ ಸರಿದದ್ದು ಈ ನನಗಾಗೆ,
ನನಗಾಗಿಯೇ ಅವಳು ನಿನ್ನ ತಾಳಿರುವುದೂ.
ನನಗೆ ನೀನಿಲ್ಲ ಆದರು ಪ್ರಿಯೆಗೆ ಲಾಭ ಅದು
ಗೆಳೆಯ ಪಡೆದನು ಅವಳ ಕಳೆದುಕೊಂಡರು ನಾನು.
ನನಗಿಲ್ಲ ಒಬ್ಬರೂ, ಸೇರಿ ನೀವಿಬ್ಬರೂ
ಹೇರಿದಿರಿ ನನ್ನ ತಲೆಮೇಲೊಂದು ಬಂಡೆಯನು.
ಇದು ಕೂಡ ಹಿತವೆ, ಸ್ನೇಹಿತ ನಾನು ಬೇರೆಯೇ?
ಎಂಥ ಸವಿ ಹೆಮ್ಮೆ, ಪ್ರಿಯೆ ಒಲಿದದ್ದು ನನ್ನನೇ !
*****
ಮೂಲ: ವಿಲಿಯಂ ಷೇಕ್ಸ್‌ಪಿಯರ್
Sonnet 42
That thou hast her it is not all my grief