ಅಭಾ ಪ್ರವಾಸ

 

ಸೌದಿ ಅರೇಬಿಯ ಅಂದತಕ್ಷಣ ‘ಮರುಭೂಮಿಯ ದೇಶ’ ಎಂಬ ವಿಚಾರ ಬಂದು ಹೋಗುವದರಲ್ಲಿ ಸಂಶಯವಿಲ್ಲ. ಅದರೆ ಪೂರ್ತಿಯಾಗಿ ಮರುಭೂಮಿಯ ದೇಶ-ಉಷ್ಣಹವೆ ಎಂದು ತಿಳಿದುಕೊಳ್ಳುವದು ತಪ್ಪು ಎನ್ನುವ ಅಭಿಪ್ರಾಯ ನಾವು ಸೌದಿ ಅರೇಬಿಯಾದ ದಕ್ಷಿಣದ ಪಶ್ಚಿಮಭಾಗದ ಕಡೆಗೆ ಪ್ರವಾಸ ಕೈಕೊಂಡ ಮೆಆಲೆ, ಕಣ್ಣಾರೆ ನೋಡಿ ಹವಾಗುಣ ಅನುಭವಿಸಿದ ಮೇಲೆ ಅರಿವಾಗಿ ಮನಸ್ಸಿನಲ್ಲಿ ಬಹಳ ದಿನಗಳಿಂದ ಕೂಡಿಬಿದ್ದ ಮರುಭೂಮಿಯ ವಿಚಾರವನ್ನು ತಳ್ಳಿಹಾಕಬೇಕಾಯಿತು.

ಜೆಡ್ಡಾದಲ್ಲಿ ಇದ್ದು 8 ವರ್ಷಗಳು ಕಳೆದುಹೋಗಿದ್ದರೂ ನಾವೆಲ್ಲೂ ದೂರ ಪ್ರವಾಸ ಹೋಗುವ ಪ್ರಯತ್ನ ಮಾಡಿರಲಿಲ್ಲ. ‘ಹೀಗೆ ಮರುಭೂಮಿ-ಬಿಸಿಲು ಒಣಗುಡ್ಡಗಳು ಏನು ನೋಡುವದು’ಎನ್ನುತ್ತ ಹೋದರಾಯ್ತು ಎಂದು ಮುಂದೆ ಮುಂದೆ
ಹಾಕುತ್ತೆಲೇ ಸಮಯ ಹೋಗಿತ್ತು. ಅದರೆ ಇಲ್ಲಿಗೆ ಬಂದ ಮೊದಲ ವರ್ಷದಲ್ಲಿ ಒಂದು ಸಲ ಟೈಫ್ ಎನ್ನುವ ತಂಪು ಪ್ರದೇಶಕ್ಕೆ ಹೋಗಿ ಬಂದಿದ್ದೆವು. ಅಗೆಲ್ಲ ರಸ್ತೆ ಗಳನ್ನು ಇನ್ನು ನಿರ್ಮಿಸುತ್ತಿದ್ದರು.

“ಮುಂದಿನ ವರ್ಷಇಂಡಿಯಾಕ್ಕೆ ಹೋಗಿ ಬಿಟ್ಟರಾಯ್ತು. ಸಾಕು, ಎಷ್ಟು ವರ್ಷಗಳೆಂದು ಇಲ್ಲೇ ಕಳೆಯುವದು? ಎಲ್ಲ ರೀತಿಯಿಂದ ಅನುಕೂಲ-ಐಶಾರಾಮಗಳಿದ್ಧರೂ ಕೊನೆಗೊಮ್ಮೆಯಾದರೂ ಹೋಗಿ ನಮ್ಮ ಊರಲ್ಲಿ ನೆಲಸಬೇಕಲ್ಲ’ ಎಂದು ಆಗೀಗ ಸಾಕಷ್ಟು ಸಲ ಚರ್ಚೆ ಮಾಡುತ್ತಿದ್ದೆವು. ಹೀಗಾಗಿ ಇರುವ ಕೊನೆಯ ಒಂದು ವರ್ಷದಲ್ಲಿ ಸೌದಿ ಅರೇಬಿಯದ ಬೇರೆ ಬೇರೆ ಸ್ಥಳಗಳನ್ನು ನೋಡಬೇಕೆನ್ನುವ ವಿಚಾರ ಮಾಡತೊಡಗಿದವು. ಇದಕ್ಕೆಲ್ಡ ಅನುಕೂಲ- ವಾಗುವಂತ ಮಕ್ಕಳ ಸ್ಕೂಲ್‌ಗೆ ರಜೆ, ಗುತ್ತಿಯವರ ಆಫೀಸಿಗೆ ರಜೆ ನೋಡಿ ಹೊಂದಿಸಿಕೊಂಡು ಮಾರ್ಚ ಕೊನೆಯ ವಾರದಲ್ಲಿ (1988) ಹೊರಡಲನುವಾದೆವು. ಗುತ್ತಿಯವರು ಸಾಹಸ ಪ್ರವೃತ್ತಿಯವರಾದುದರಿಂದ ಕಾರಿನಿಂದಲೇ ಬೆಟ್ಟಗಳು-ಕೊಳ್ಳಗಳು-ಮರುಭೂಮಿಯ ವಿಚಿತ್ರ ದೃಶ್ಯಗಳು ನಮಗೆ ಮನಸ್ಲಿಗೆ ಬಂದಹಾಗೆ ಇಳಿಯುತ್ತ ನೋಡುತ್ತ ಖುಷಿಪಡುತ್ತ ಹೋದರಾಯಿತೆಂದು ಹುರುಪಾದರು.

ಸುಮಾರು 8 ವರ್ಷಗಳಿಂದ ಇದೇ ಕ್ಯಾಂಪನಲ್ಲಿ ನಮಗೆ ಪರಿಚಿತರಿದ್ದ ಒಂದು ಕೇರಳದ ಕುಟುಂಬದವರಿಗೂ ‘ಹೋಗೋಣ’ ಎಂದಾಗ ‘ಮರುಭೂಮಿಯಲ್ಲಿ ಏನು ಕಾರು ಹೊಡೆಯುತ್ತ ಹೋಗವದು?’ ಎಂದು ಬರಲು ಒಪ್ಪಲಿಲ್ಲ ನಮಗಿದೊಂದು ಸಾಹಸದ ಪ್ರವಾಸ ಎಂದು ಹೊರಡಲು ಕಾತರಗೊಂಡೆವು.

ಸೌದಿ ಅರೇಬಿಯದಲ್ಲಿ ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ಹೋಗಬೇಕಾದರೆ (ರಸ್ತೆ ಮೂಲಕ) ಸರಕಾರಿ ಪ್ರವಾಸ ಪತ್ರ ಹೊಂದಿರಬೇಕಾಗುತ್ತದೆ. 1986ರ ಮೊದಲು ಇಂತಹ ಯಾವ ರೀತಿಯ ಬಂಧನ ಇರಲಿಲ್ಲ. ಲಕ್ಷಾನುಗಟ್ಟಲೆ ವಿದೇಶಿಯರು ಈ ದೇಶದಲ್ಲಿ ಕೆಲಸ ಮಾಡುತ್ತಿರುವದರಿದ ‘ಗೂಢಚಾರ ವ್ಯವವಹಾರ,
ಕಳ್ಳ ಸಾಗಾಣಿಕೆ, ಗಡಿ-ಪಾರುಮಾಡುವಿಕೆ ಮುಂತಾದವುಗಳಾಗತೊಡಗಿದ್ದರಿಂದ ಸಾರಿಗೆ ಸಂಸ್ಥೆಯವರು ಅದಷ್ಟು ಲಕ್ಷ್ಯವಹಿಸಲೇಬೇಕಾಯಿತು. ಈ ಪರಿಣಾಮವಾಗಿ ಈಗ ಪ್ರತಿಯೊಬ್ಬನೂ ಪ್ರವಾಸಿಯೇ ಇರಲಿ, ಉದ್ಯೋಗಕ್ಕೆಂದು ಬೇರೆ ಬೇರೆ ಊರುಗಳಿಗೆ ಹೋಗುವ ಉದ್ಯೋಗಿಯೇ ಇರಲಿ ಮುಖ್ಯವಾಗಿ ಪ್ರವಾಸ ಪತ್ರವನ್ನು ಜೊತೆಗೆ ಯಾವತ್ತು ಇಟ್ಟುಕೊಂಡು ಅಡ್ಡಾಡಬೇಕಾಗುವದು.

ಸೌದಿ ಅರೇಬಿಯಕ್ಕೆ ಬರುವ ಯಾವುದೇ ವಿದೇಶಿಗನು ಇಲ್ಲಿ ಕೆಲಸಕ್ಕೆ ಉಳಿದರೆ ತಕ್ಷಣ ‘ಅಕಾಮಾ’ (ಸ್ಥಳೀಯ ಅನುಮತಿ ಪತ್ರ್ಪ) ಪಡೆಯಬೇಕಾಗುವದು. ಪತ್ರ ಯಾವತ್ತೂ ಹೊರಗೆ ಹೊರಟರೆ ಜೊತೆಯಲ್ಲಿ ಇರಲೇಬೇಕು. ಯಾವ ಸಮಯದಲ್ಲಿ ಪೋಲಿಸರು ಚೆಕ್ ಮಾಡುತ್ತಾರೆ ಹೇಳಲು ಬರುವಂತಿಲ್ಲ. ಅಕಸ್ಮಿಕ ಅಕಾಮಾ ಇಲ್ಲದೆ ಯಾವುದಾದರೂ ವ್ಯಕ್ತಿ ಪೋಲಿಸರಿಗೆ ಸಿಕ್ಕಿಬಿದ್ದರೆ ಅವರ ಪರಿಸ್ಥಿತಿ ಗಂಭೀರ. ದಿನಾಲೂ ಅಕಾಮಾ ಪರಿಶೀಲಿಸುತ್ತಾರಂತಲ್ಲ; ಆದರೂ ಹುಷಾರಾಗಿರಬೇಕಷ್ಟೆ. ಒಂದು ವಿಚಿತ್ರ ವೆಂದರೆ ಹತ್ತು ವರ್ಷಗಳಿಂದ ನಾವಿಲ್ಲಿ ಕಾರಿನಲ್ಲಿ ಸಾಕಷ್ಟು ಅಡ್ಡಾಡಿದರೂ ಒಮ್ಮೆಯೂ ಯಾರೂ ಕೇಳಲಿಲ್ಲ. ಇದೇ ತರಹ ಯುರೋಪು, ಅಮೇರಿಕೆಯಲ್ಲೂ ಸ್ಥಳೀಯ ಅನುಮತಿ ಪತ್ರ್ತ ಯಾವತ್ತೂ ಇಟ್ಟುಕೊಂಡಿರಬೇಕಾಗುವದು.

ನಮ್ಮ ಪ್ರಪಾಸ ಅನುಮತಿ ಪತ್ರ 2 ದಿನಗಳಲ್ಲಿ ಬಂದಿತು. ಗುರುವಾರ-ಶುಕ್ರವಾರ ಇಲ್ಲಿ ರಜೆ-ನಮ್ಮ ಕಡೆಗೆ ಶನಿವಾರ, ರವಿವಾರ ಇದ್ದಂತೆ. ಗುರುವಾರ ಬೆಳಿಗ್ಗೆ 7 ಗಂಟೆಯ ಒಳಗಾಗಿಯೇ ಹೊರಡಬೇಕೆಂದು ನಿಶ್ಚಯಮಾಡಿಕೊಂಡಿದ್ದುದ- ರಿಂದ ಬೇಗ ಎದ್ದು ತಯಾರಾದೆವು. ಸೂಪರ್ ಕೂಲರ್ ಬಾಕ್ಸದಲ್ಲಿ ತಿಂಡಿ-ಊಟ-ತಂಫು ಪಾನೀಯಗಳು ಹಣ್ಣು, ನೀರು, ಎಲ್ಲ ಇಟ್ಟು ಮೇಲೊಂದು ಕೆಳಗೊಂದು, ಇನ್ನೆರಡು ಎಕ್ಸ್‌‌ಟ್ರಾ ಐಸ್ ಬಾಕ್ಸ್‌ಸಗಳಿಟ್ಟು ಪ್ಯಾಕ್ ಮಾಡಿದೆವು. ಈ ಕೂಲರ್ ಬಾಕ್ಸ್ ದಲ್ಲಿಯ ಸಾಮಾನುಗಳೆಲ್ಲ ಇಡೀ ದಿನ Fresh ಆಗಿಯೇ ಉಳಿಯುತ್ತವೆ. ಮಿನಿ ಫ್ರಿಜ್‌ದಂತೆ ಅಂದರೂ ಪರವಾಗಿಲ್ಲ. ಪ್ರವಾಸಿಗರಿಗೆ “ಇಂತಹ ಬಾಕ್ಸ್‌ಗಳು ಬಹಳ ಉಪಯೋಗವಾಗುತ್ತವೆ. ತಂಪು ಪ್ರದೇಶಕ್ಕೆ ಹೊರಡುತ್ತಿ- ರುವದರಿಂದ ಬೆಚ್ಚನೆಯ ಬಟ್ಟೆಗಳನ್ನು ನಾವು ಸೂಟ್‌ ಕೇಸ್‌ಗೆ ಹಾಕುತ್ತಿದ್ದರೆ ಮಕ್ಕಳು ಕಾರಿನಲ್ಲಿ ಅಡಲಿಕ್ಕಿಂದು ಲೀಯೋಟಾಯ್ಸ್ ಸೆಟ್‌ಗಳು, Barbie dolls, walkman, ಬಾಯಾಡಿಸಲು ಚುಯಿಂಗಮ್, ಚಾಕಲೇಟ್‌ಗಳು ತುಂಬಿಕೊಂಡು ಕುಳಿತರು. ಬೆಳೆಗೆ ಹೊರಡಬೇಕೆಂದರೂ ನಮ್ಮ ಕ್ಯಾಂಪಿನ ಗೇಟ್ ಬಿಟ್ಟು ಹೊರಬೀಳಬೇಕಾದರೆ ಆಗಲೇ 8 ಗಂಟೆ ದಾಟಿತ್ತು.

ಜೆಡ್ಡಾ ಪೂರ್ವ ಭಾಗದ ಹೆದ್ದಾರಿಯಿಂದ ನಮ್ಮ ಪ್ರವಾಸ ಸುರುವಾಯಿತು. ಈ ಭಾಗ Frankincence Route ಎಂದೂ ಹೇಳುತ್ತಾರೆ. ಅಂದರೆ ಗುಗ್ಗಳದ ಸುವಾಸನೆ ಅಥವಾ ಸುಗಂಧದ್ರವ್ಯಗಳಿಂದ ಹೊರಡುವ ಪರಿಮಳದ ಹಾದಿ ಎಂದೆನ್ನ ಬಹುದು. ಮೊದಲಿನ ಕಾಲದಲ್ಲಿ (40-50 ವರ್ಪಗಳ ಹಿಂದಷ್ಟೇ) ಮಸಾಲೆ ಸಾಮಾನುಗಳು -ಸುಗಂಧ ದ್ರವ್ಯಗಳು ಒಂಟೆಗಳ ಮೇಲಿಂದ ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಾಗಿಸುತ್ತಿದ್ದರು. ಆವಾಗೆಲ್ಲ ಬಹುಶಃ ಅ ರಸ್ತೆಗಳು ಸುಗಂಧ ದ್ರವ್ಯಗಳ ಪರಿಮಳದಿಂದ ಕೂಡಿರಲೂಬಹುದು.

ಜೆಡ್ಡಾದಿಂದ ಮುಂದಿನ 45ಕಿ.ಮೀ. ಅಂತರದಲ್ಲಿ ‘ಮಕ್ಕಾ’ ಬರುವದು. ಟೈಫ್, ಬಹಾ-ಅಭಾ ಮುಂತಾದ ಕಡೆಗೆ ಹೋಗಬೇಕಿದ್ದರೆ ಮಕ್ಕಾ ದಾಟಿಯೇ ಹೋಗಬೇಕು. ಮುಸ್ಲಂಯೇತರರಿಗೆ ಅಲ್ಲಿ ಪ್ರವೇಶವಿಲ್ಲ. ಅದಕ್ಕೆಂದೇ ಮಕ್ಕಾ ಬರುತ್ತಿದ್ದಂತೆಯೇ 15-20 ಕಿ.ಮೀ. ಮೊದಲೇ ಬೋರ್ಡ್ ಹಾಕಿದ್ದಾರೆ. ಮುಸ್ಲೀಂರು ನೇರವಾಗಿ ಮಕ್ಕಾ ಒಳಹೊಕ್ಕು ದಾಟಿ ಮುಂದಿನ ಹಾದಿ ಹಿಡಿದು ಹೋಗಬಹುದು. ಆದರೆ ಬೇರೆಯವರು ಮಕ್ಕಾದಿಂದ ಹೊರಗಿರುವ ಸುಮಾರು 15 ಕಿ.ಮೀ. ದೂರದಲ್ಲಿಯ ರಸ್ತೆ ಹಿಡಿದು ಮುಂದುವರೆಯಬೇಕು, ಸುತ್ತಾಕಿ ಹೋಗುವದರಿಂದ ಅರ್ಧತಾಸು ಹೆಚ್ಚು ಸಮಯ
ಹೋಗುತ್ತದೆ. ರಸ್ತೆಗಳು ಅಗಲವಾಗಿದ್ದು ನೀಟಾಗಿರುವದರಿಂದ ಡೈವಿಂಗ್ ತೊಂದರೆ ಯಾಗುವದಿಲ್ಲ. ಸುಮಾರು 7 ವರ್ಷಗಳ ಹಿಂದೊಮ್ಮೆ ಹೋದಾಗ ಅತೀ ಕಚ್ಚಾ ರಸ್ತೆ ಇದ್ದು ಸಮಯ ಬಹಳ ತೆಗೆದುಕೊಂಡಿತ್ತು. ಆದರೆ ಅಂದಿಗೂ, ಇಂದಿಗೂ ರಸ್ತೆಗಳಲ್ಲಿ ಅಜಗಜಾಂತರ ವ್ಯತ್ಯಾಸ. ಅಂದು ಕಚ್ಚಾ ರಸ್ತೆಗಳಿದ್ದರೆ ಇಂದು ಸುಸಜ್ಜತ ಹೆದ್ದಾರಿಗಳು,
ರಸ್ತೆಗಳ ಪಕ್ಕದಲ್ಲಿ ಅಲ್ಲಲ್ಲಿ ಯುರೋಪಿನ ತರಹ ಪೋನ್‌ಗಳ ವ್ಯವಸ್ಥೆ ಮಾಡಿದ್ದಾರೆ. ರಸ್ತೆಯಲ್ಲಿ ಪ್ರವಾಸಿಗರು ಯಾವುದೇ ತೊಂದರೆಯಲ್ಲಿ ಸಿಲುಕಿದರೆ ಅಲ್ಲಿಂದ ಗೊತ್ತಿದ್ದ ಯಾವುದೇ ಪೋಲಿಸ್ ಸ್ಟೇಷನ್‌ಗೇ ಪೋನ್ ಮಾಡಬಹುದು. ಅವರು ಇಂಟರ್ ಪೋನ್ ಕನೆಕ್ಷನ್ ಮುಖಾಂತರ ಹತ್ತಿರದ ಪೋಲಿಸ್ ಸ್ಟೇಷನ್‌ಕ್ಕಾಗಲೀ ಅಥವಾ ಹೆದ್ದಾರಿ ಪೋಲಿಸ್‌- ರಿಗಾಗಲೀ ತಿಳಿಸಿ ಸಹಾಯ ಒದಗಿಸುವವರು.

ನಮ್ಮ ನೇರ ಪ್ರವಾಸ ಟೈಪ್ ಕಡೆಗೆ. ರಸ್ತೆಯಲ್ಲಿ ಯಾವತ್ತೂ ಸಾರಿಗೆಗಳಿರುವದರಿಂದ ಬೆಟ್ಟಗಳ ಸಂದು ಗೊಂದಗಳಲ್ಲಿಂದ ಹಾಯ್ದು ಹೋಗುವಾಗಲೂ ಅಂತಹ ಹೆದರಿಕೆ ಯೇನಾಗುವುದಿಲ್ಲ. ಸಮುದ್ರ ಪಾತಳಿಯಿಂದ ಮೇಲೆರುತ್ತಿದ್ದಂತೆ ಇಲ್ಲಿ ಭಯಂಕರ ಬೆಟ್ಟಗಳು ಒಮ್ಮಿಂದೊಮ್ಮೆಲೆ ಬೇರೆಯೇ ದೃಶ್ಯ ಕಾಣಿಸಲು ಶುರುವಾಗುವದು. ಬೆಟ್ಟದ ದಂಡೆಗುಂಟ ಇಳಿಜಾರು ಕೊಳ್ಳಗಳು ಅಲ್ಲಲ್ಲಿ ಗುಂಪಾಗಿ ಚಿತ್ರಿಸಿದಂತಿರುವ ಸಣ್ಣ ಸಣ್ಣ ಮನೆಗಳ ಮೇಲೆ ಬಿಸಿಲಿನ ಝಳ ಓಡುತ್ತಿರುವ ಬಿಸಲ್ಲುದುರೆ. ಒಟ್ಬಾರೆ ಹೇಳಬೇಕೆಂದರೆ ಏನೋ ಒಂಥರಾ ಸುಳಿವು ತಿಳಿಯದಂತಹ ದೃಶ್ಯ ಅಂದರೂ ಅಡ್ಡೀ ಇಲ್ಲ.

ಹಿಂದೆ ಎಂದೂ ನೋಡಲಾರದಂತಹ ಭಯಂಕರ ಪಡಿಗಲ್ಲುಗಳು, ಬೆಟ್ಟಗಳನ್ನು ಜೀವನದಲ್ಲಿ ಮರೆಯಲಾರದಂತಹ ದೃಶ್ಯಗಳನ್ನು, ಸ್ಮೃತಿ ಪಟಲದಲ್ಲಿ ಕ್ಯಾಮರೀಕರಿಸಿ ಕೊಂಡೆ. ಜ್ವಾಲಾಮುಖಿಯಿಂದ ನಿರ್ಮಿತವಾದ ಬೆಟ್ಟಗಳು, ಸಣ್ಣ ಸಣ್ಣ ದಿನ್ನೆಗಳೂ-ಪರಮಾಶ್ಚರ್ಯ ಉಂಟು ಮಾಡಿದವು. ನೆಲದೊಳಗಿನ ಲಾವಾ ಕುದಿಯುವಾಗ ಮೇಲೆ ಗುಳ್ಳೆ ಗುಳ್ಳೆ- ಗಳಂತೆ ಬಂದು ಸಮಾನ ಎತ್ತರದಲ್ಲಿ ಹರಡಿರುವ ಕಲ್ಲಿನ ಗುಂಪುಗಳು ತ್ರಿಕೋನದಂತಿವೆ. ಈ ಲಾವಾದಿಂದ ನಿರ್ಮಿತ ಈ ದಿನ್ನೆಗಳನ್ನು ನೋಡುವಾಗ ನಿನ್ನೆ’ ಮೊನ್ನೆಯೇ ಜ್ವಾಲಾಮುಖಿ ಸ್ಫೋಟ ಆಗಿದೆಯೇನೋ ಅನ್ನುವಷ್ಟರ ಮಟ್ಟಿಗೆ ಇನ್ನೂ ಹೊಸತನ ಎದ್ದು ಕಾಣುವದು. ಆದರೆ ಅವು ಆಗಲೇ ಸಾವಿರಾರು ವರ್ಷಗಳ ಹಿಂದೆಯೇ ಆಗಿಹೋದವುಗಳು.

ಮುಂದೆ ನಾವು ಎಷ್ಟೋ ದೂರದ ಪ್ರವಾಸದಲ್ಲಿ ವಿಚಿತ್ರ ವಿಚಿತ್ರ ಬೆಟ್ಟಗಳ ದೈತ್ಯಾಕಾರಗಳನ್ನು ನೋಡಿದೆವು. ಅವೆಲ್ಲ ಸಾವಿರ ಸಾವಿರ ವರ್ಷಗಳ ಹಿಂದೆ ಜ್ವಾಲಾಮುಖಿಯ ಬಾಯಿಂದ ಉಗುಳಿದ ಲಾವಗಳು-ಕಲ್ಲುಗಳು, ಪಡಿಗಲ್ಲುಗಳು-
ಚಿಪ್ಪುಗಳು ಈವರೆಗೂ ಹಾಗೇ ಹರವಿಕೊಂಡು ಬಿದ್ದಿವೆ. ಕೆಲವೆಡೆಗೆ ಲಾವಾ ಒಂದರ ಹಿಂದೊಂದು ಮತ್ತೊಂದರಂತೆ ಪದರುಗಳಾಗಿಯೂ ಕಾಣುತ್ತವೆ. ಭೂಶಾಸ್ತ್ರಜ್ಞರು ಇದೆಲ್ಲ ಅಭ್ಯಸಿಸುತಿದ್ದಾರೆ. ಇದರಿಂದ ಜ್ವಾಲಾಮುಖಿ ಸ್ಪೋಟ ಯಾವ ಯಾವ ಅಥವಾ ಎಷ್ಟು ವರ್ಷಗಳ ಹಿಂದೆ ಆಗಿದೆ ಎಂದು ತಿಳಿಯಲು ಅನುಕೂಲ. ಕೆಲವೆಡೆಗೆ ಹಳದಿ ಮಿಶ್ರಿತ ಕಲ್ಲುಗಳು, ಬೂದಿ ಮಿಶ್ರಿತ ಕಲ್ಲು, ಮಣ್ಣುಗಳಿದ್ದರೆ ಕೆಲವೆಡೆಗೆ ಇಂದೇ ಈಗಲೇ ಯಾರೋ ಡಾಂಬರ್  ಸುರುವಿ- ದ್ದಾರೇನೋ ಅನ್ನೋ ಅಷ್ಟರಮಟ್ಟಿಗೆ ಕಪ್ಪು ಕಲ್ಲಿನ ಬೆಟ್ಟಗಳು ಮಿಂಚುತ್ತಿವೆ. ಸಾವಿರಾರು ವರ್ಷಗಳ ಬಿಸಿಲಿನ ಹೊಡೆತಕ್ಕೋ ಅಥವಾ ಲಾವಾರಸದಲ್ಲಿಯ ಕೆಲವು ಖನಿಜಪದಾರ್ಥಗಳಿಂದಲೂ ಈ ಬಣ್ಣ ಬಂದಿರ ಬೇಕೇನೋ ಅನಿಸುವದು.

ಸುಮಾರು 25-30-50 ಸಾವಿರ ವರ್ಷಗಳ ಮೊದಲು ಈ ಸೌದಿ ಅರೇಬಿಯ ಹಾಗೂ ಸುತ್ತಮುತ್ತಲಿನ ಇತರ ಅರೇಬಿಯ ದೇಶಗಳು ಫಲವತ್ತಾಗಿದ್ದು-ಹಚ್ಚು ಹಸಿರಾಗಿದ್ದು- ಗಿಡಮರ ಗುಡ್ಡಗಾಡುಗಳಿಂದ ತುಂಬಿಕೊಂಡಿತ್ತಂತೆ. ಕಾಲಕ್ರಮೇಣ ನಿಸರ್ಗದ ಪ್ರಕೋಪಕ್ಕೆ ಸಿಕ್ಕು ಜ್ವಾಲಾಮುಖಿಗಳಾಗಿ ಭೂಮಿಸಿಡಿದು ಮೇಲಿನ ಫಲವತ್ತತೆ ಕೆಳಗೆ; ಕೆಳಗಿನ ಭಯಂಕರ ಲಾವಾ ಮೇಲೆ ಬಂದಿದೆ ಎಂದು ಗುತ್ತಿಯವರು ಹೇಳುತ್ತಿದ್ದರು. ಅಂತೆಯೇ ಅಂದು ಭೂಮಿಯೊಳಗೆ ಅಡಗಿಹೋದ ಫಲವತ್ತತೆಯು ಇಂದು ಭೂ ತಳದಲ್ಲಿ ಕಚ್ಚಾ ಎಣ್ಣೆಯಾಗಿ ಹೊರಬೀಳುತ್ತಿದೆ. ಜೊತೆಗೆ ಅದರ ಗ್ಯಾಸನ
ಪ್ರಮಾಣವೂ ವಿಪರೀತ ಬರುತ್ತಿದೆ ಎಂದೂ ಹೇಳುತ್ತಾರೆ.

ಇಲ್ಲಿ ನನಗದೆಷ್ಟೋ ದೃಶ್ಯಗಳು ನೆನಪಾಗುತ್ತವೆ. ರಾತ್ರಿ ಸಮಯದಲ್ಲಿ ನಾವದೆಷ್ಟೋ ಸಲ ವಿಮಾನದಿಂದ ಪ್ರಯಾಣಿಸುವಾಗ ಮೇಲಿನಿಂದ ಕೆಳಗೆ ನೋಡುವ ದೃಶ್ಯಗಳು ನೆನಪಿನಲ್ಲಿ ಅಚ್ಚೊತ್ತಿಬಿಟ್ಟಿವೆ. ಕಾರಣ, ಈ ವಿಶಾಲ ದಿಗಂಬರ ಮರುಭೂಮಿ ಯಲ್ಲಿ ಅಲ್ಲಲ್ಲಿ ಎಣ್ಣೆ ಬಾವಿಗಳು ಹೊತ್ತಿ ಉರಿಯುವದಷ್ಟು ನೋಡುವದೊಂದು ವಿಚಿತ್ರ
ಅನುಭವ. ಎಣ್ಣೆ ಬಾವಿಗಳು ಇದ್ದಲ್ಲೆಲ್ಲ ಈ ದೃಶ್ಯಗಳು ಸರ್ವೆಸಾಮಾನ್ಯ. ಕೊಳ್ಳವೆಗಳ ಮೂಲಕ ಎಣ್ಣೆಯನ್ನು ದೊಡ್ಡ ದೊಡ್ಡ ಎಂಜಿನ್‌ಗಳು ಎಳೆದುಕೊಳ್ಳುತ್ತಲೇ ಇರುತ್ತವೆ. ಎಣ್ಣೆಯ ಜೊತೆಗೆ ಬರುವ ಭಾರೀ ಪ್ರಮಾಣದ ಅನಿಲ ಎಷ್ಟೊಂದು ಸಂಗ್ರಹ ಮಾಡಿಯಾರು, ಅದಕ್ಕೆ ಮೇಲೀರುವ ಗ್ಯಾಸ್‌ಕ್ಕೆ ಕಡ್ಡಿಕೊರೆದುಬಿಟ್ಟಿರುತ್ತಾರೆ. ಅದು ತನ್ನ ತಾನೇ ಹಗಲಿರುಳೂ ಹೊತ್ತಿ ಧಗಧಗಿಸುತ್ತಲೇಇರುತ್ತದೆ. ಇದನ್ನು ನೋಡುವಾಗ ನಮ್ಮ ಕಡೆಯ ಅಡುಗೆ ಅನಿಲಕ್ಕೆ ಪರಿದಾಡುವ ಬಹಳ ಸಲ ನೆನಪಾಗಿ ಹೋಗುತ್ತಿತ್ತು. ಇಲ್ಲಿ ಗ್ಯಾನ್ ಧಗಿಸುವದೇನು; ಅಲ್ಲಿ ಅದೇ ಗ್ಯಾಸಗೇ ಹರಿದಾಡುವ
ದೇನು, ಎಷ್ಟೊಂದು ವಿಪರೀತ ಎಂದು ನಿಟ್ಟುಸಿರು ಬಂದರೂ ವಿಮಾನದ ಸೀಟಿಗೆ ಹಿಂದೂರಗದೇ ಮತ್ತೆ ಮತ್ತೆ ನೋಡಬೇಕೆನಿಸುತ್ತಿತ್ತು…. ಇದಿರಲಿ.

ನಿಸರ್ಗ ನಿರ್ಮಿತ ವಿಚಿತ್ರ ದೃಶ್ಯಗಳ ಲಾವಾ ದಿನ್ನೆಗಳ ಮೇಲೆಲ್ಲ ಅಡ್ಡಾಡುತ್ತ ಖುಷಿ ಪಟ್ಟೆವು. ರಸ್ತೆಯಲ್ಲಿ ನಡುವೆ ಕೆಲವೆಡೆ ಕೆಲಸಗಳು ನಡೆದಿದ್ದರಿಂದ ಒಂದೆರಡು ಕಡೆಗೆ ಸುತ್ತಿ ಬಳಸಿ ಹೋಗಿ ಟೈಪ್ ತಲುಪಬೇಕಾದರೆ ಮಧ್ಯಾಹ್ನ 12 ಗಂಟೆ ದಾಟಿ ಹೋಗಿತ್ತು.

ಜೆಡ್ಡಾದಿಂದ ಸುಮಾರು 200 ಕಿ.ಮೀ.ಗಳಷ್ಟು ದೂರದಲ್ಲಿ ಈ ತಂಪು ಪ್ರದೇಶ ಅರೇಬಿಯದ ಬೇಸಿಗೆಯ ರಾಜಧಾನಿ. ಸಮುದ್ರ ಮಟ್ಟದಿಂದ 1500 ಮೀಟರುಗಳಷ್ಟು ಎತ್ತರದಲ್ಲಿದ್ದು ಹೆಜಾಜ್ ಪರ್ವತ ಶ್ರೇಣಿಗಳಿಂದ ಕೂಡಿದೆ. ಆಂತೆಯೇ
ಹವೆ ಯಾವತ್ತೂ ತಂಪು. ಬಿಸಿಲು ಧಗಯಿಂದ ಬೇಸತ್ತು ಜನ ಇಲ್ಲಿ ಅರಾಮವಾಗಿ ಧಗೆ ನಿವಾರಿಸಿಕೊಳ್ಳಲು ಸುತ್ತು ಕಡೆಯಿಂದೆಲ್ಡ ಬರುತ್ತಾರೆ. ಬೇಸಿಗೆಯಲ್ಲಿ ರಾಜ-ರಾಜನ ಪರಿವಾರ ಮಂತ್ರಿ-ಮಂಡಲ ಎಲ್ಲಾ ಟೈಪ್‌ಗೆ ಬಂದು ವಾಸಿಸುತ್ತಾರೆ. ಈ ಸಮಯದಲ್ಲಿ ಇಲ್ಲಿಂದಲೇ ಎಲ್ಲ ರಾಜಕೀಯ ಕಾರುಭಾರಗಳು ನಡೆಸುವ ಮಾಡಿಕೊಂಡಿರುವರು. ಇಲ್ಲಿಂದ ದೇಶದ ಎಲ್ಲ ಮುಖ್ಯ ಭಾಗಗಳ ವಿಮಾನ ಹಾಗೂ ರಸ್ತೆ ಸಾರಿಗೆಸಂಪರ್ಕದ ವ್ಯವಸ್ಥೆಗಳನ್ನು ಇತ್ತೀಚೆಗೆ ಮಾಡಿಕೊಂಡಿದ್ದಾರೆ.

ಚೆಡ್ಡಾದಿಂದ ಕೇವಲ 2 1/2 ತಾಸಿನ ಹಾದಿ. ಬೇಸಿಗೆಯಲ್ಲಿ ಇಲ್ಲೆಲ್ಲ ಹೋಟಲ್ಗಳು ಮೊಟೆಲ್ಗಳು ತುಂಬಿರುತ್ತವೆ. ಮೊದಲೇ ಸ್ಥಳ ಕಾಯ್ದಿರಿಸದಿದ್ದರೆ ಇಲ್ಲಿ ತೊಂದರೆ. ನಗರದ ಹೊರವಲಯದಲ್ಲಿ 20 ಕಿ.ಮೀ.ಗಳಷ್ಟು ದೂರ ಹೋದರೆ ಒಳ್ಳೆ ಪ್ರಶಾಂತ ವಿಶಾಲವಾದ ಸ್ಥಳವಿದೆ. ಸುತ್ತೆಲ್ಲ ಹಸಿರು ಗಿಡಗಂಟೆಗಳು, ತಂಪಾದ ಹವೆ. ಪ್ರವಾಸಿಗರಿಗೆ ಹಿತಕರವೆನಿಸುವದು. ಇತ್ತೀಚೆಗೆ ದೊಡ್ಡ ಪ್ರಮಾಣದಲ್ಲಿ ಶಾಪಿಂಗ್ ಕಾಂಪ್ಲೆಕ್ಸ್‌ಗಳು ಬಂದು ಜಗತ್ತಿನ ಎಲ್ಲ ಸಾಮಾನುಗಳು ದೊರೆಯುವಂತೆ ಆಗಿದೆ. ಹೆಚ್ಚಾಗಿ ಎಲ್ಲಿ ನೋಡಿದಲ್ಲೆಲ್ಲ ಬಣ್ಣ ಬಣ್ಣದ ಕಾರ್ಪೆಟ್‌ಗಳು-ಸುವಾಸಿ ದ್ರವ್ಯಗಳ ಅಂಗಡಿಗಳೇ ಕಾಣಿಸುವವು.

ನಗರ ಮಧ್ಯದಲ್ಲಿನ ರಾಜನ ಅರಮನೆ ಸುಂದರವಾದುದು. ಅಲ್ಲಲ್ಲಿ ನಿಲ್ಲಿಸಿರುವ ಸುಂದರವಾದ ಸ್ಮಾರಕಗಳಿಂದ ಊರಿನ ಸೌಂದರ್ಯ ಇನ್ನೂ ಹೆಚ್ಚುತ್ತದೆ. ಸುಮಾರು ಇಲ್ಲಿ 200ಕ್ಕೂ ಮೇಲ್ಪಟ್ಟು ಉದ್ಯಾನಗಳಿವೆ. ಪ್ರವಾಸಿಕೇಂದ್ರ-ತಂಗುದಾಣವೆಂದು ಸುಧಾರಣೆ ದಿನದಿನಕ್ಕೆ ಹೆಚ್ಚುತ್ತಿದೆ. ತೈಲಾಗಾರದಿಂದ ಹಣ ಸಾಕಷ್ಟು ಬಿದ್ದಿದ್ದರೆ ಸಲಹೆ-ಸೂಚನೆ ಕೊಡುವ ವಿದೇಶಿಗರು ಸಾಕಷ್ಟು. ವಿದೇಶಿ ಕಾಂಟ್ರಾಕ್ಟರುಗಳು ಶೀಘ್ರದಲ್ಲಿ ಕೆಲಸ ಮಾಡಿಯೂ ಕೊಡುತ್ತಾರೆ. ಹೀಗೆ ಅರಬರಿಗೆ ಬೆಕೆಂದಿದೆದಿಲ್ಲ (ಎಣ್ಣೆಹಣ ದಿಂದ) ಸಿಗುತ್ತಿದೆ.

ನಾವು ಮೊದಲು ಒಂದು ಸಲ ಇಲ್ಲಿ ಬಂದು ಹೋದುದರಿಂದ ಈ ಸಲ ಹೆಚ್ಚು ಸಮಯ ಕಳೆಯಲಿಲ್ಲ. ಕಾರಿನಲ್ಲಿ ಒಂದರ್ಧ ತಾಸು ಸುತ್ತಾಕಿದರೆ ಸಾಕು. ಊರು ಮುಗಿಯುತ್ತದೆ. ಮುಖ್ಯ ವಿಷಯಗಳೂ ಅಂತೆಯೇ ನಾವು ಸಮಯ
ಕಳೆಯದೇ ಒಂದು ಗಾರ್ಡನ್‌ದಲ್ಲಿ ಊಟ ಮಾಡಿ ಅರಾಮ ತೆಗೆದುಕೊಂಡು ಮತ್ತೆ ಪ್ರವಾಸ ಮುಂದುವರೆಸಿದವು.

‘ಟೈಪ್‌’ ದಿಂದ ‘ಬಹಾ’ ಸುಮಾರು ನಾಲ್ಕು ತಾಸಿನ ಹಾದಿ. ಇಲ್ಲಿ ನೇರಹಾದಿ ಇಲ್ಲ, ಬೆಟ್ಟ ಸುತ್ತಿ ಬಳಸಿಹೋಗಬೇಕು. ಹಸಿರು ದೃಶ್ಯ ಎಲ್ಲಿ ಯೂ ಇಲ್ಲ. ಎಷ್ಟು ದೂರ ದೃಷ್ಟಿ ಹೋಗುವದೋ ಅದೆಲ್ಲ, ಕರಿಯ ಪಡಿಗಲ್ಲುಗಳ ಬೆಟ್ಟ. ಲಾವಾದಿಂದಾದ ಕೊರಕಲು ಗಳು, ಕೊಳ್ಳಗಳು, ಅಷ್ಟಿಷ್ಟು ಉಸುಕು ಭೂಮಿ. ದೈತ್ಯಾಕಾರದ ಒಣಬೆಟ್ಟ-ಕೊರಕಲು
ಗಳನ್ನು ನೋಡುವಾಗ ಅಷ್ಟೇ ಅಲ್ಲ, ಅವುಗಳ ಮೇಲಿಂದ ತೂರಿಬರುವ ಬಿಸಿಲಿನ ಝಳ ಅನುಭವಿಸುವಾಗ ಭಾವನೆಗಳು ಒಮ್ಮೊಮ್ಮೆ ಕಠೋರವಾದಂತೆನಿಸುವವು. ‘ಸೂಕ್ಷ್ಮ ಹೃದಯದ ನಿಸರ್ಗ ಪ್ರಿಯರಿಗೆ ಇಂತಹ ದೃಶ್ಯ ಸಹಿಸುವದು ಕಠಿಣ. ಬಹಳ ದಿನ ಮರುಭೂಮಿಯಲ್ಲಿರುವ ಜನರಿಗೆ ಮನಸು ಕೂಡಾ ಮರುಭೂಮಿಯಂತೆ ಬರಡಾಗಿದೆಯೇನೋ ಅನಿಸುವದು. ಅಲ್ಲಿಯ ಜನರ ಚಲನವಲನ ನೋಡಿದ ಮೇಲೆ. ಯಾಕೆಂದರೆ ಈ ಗುಡ್ಡಾಗಾಡಿನ ಜನ (ಇವರಿಗೆ ಇಲ್ಲಿ ಬುಡ್ವಿನ್ ಎಂದು ಕರೆಯುತ್ತಾರೆ) ಒಂಥರಾ ತಮ್ಮಷ್ಟಕ್ಕೆ ತಾವೆ ಇರುತ್ತಾರೆ, ಹೆಚ್ಚು ಮಾತುಗಳಿಲ್ಲ. ಹೆಚ್ಚಿನ ಕೆಲಸಗಳೂ ಇಲ್ಲ. ಕಾರಿನಲ್ಲಿ ಹೋಗಿ ಕುರಿಕಾಯುವದು, ಮರಳಿ ಬಂದು ಯಾವುದಾದರೂ ಹೊಲಸು ದಿಂಬಿಗೆ (ಲೋಡ್) ಆಧಾರಾಗಿ ಕುಳಿತು ಹುಕ್ಕಾ ಸೇದುವದು. ಹೆಂಗಸರಂತೂ ಕಾಣುವದೇ ಇಲ್ಲ ಅದೇನು ಒಳಗೆ ಮಡುತ್ತಾರೋ ಏನೋ! ಮರುಭೂಮಿಯ ಜನರಿಗೆ ಮರ ಹಿಡಿದಿದೆಯೇನೋ ಅನ್ನುವಂತೆ ಇರುತ್ತಾರೆ. ಯುರೋಪಿನ ಎಲ್ಲ ಭಾಗಗಳಲ್ಲಿ ಹಸಿರು, ಹೂವುಗಳಿಂದ ತುಂಬಿದ ತಂಷಾದ-ಇಂಪಾದ ನಿಸರ್ಗ ದೃಶ್ಯ ನೋಡುವಾಗ ಬೇಸರ ಅನಿಸುವದೇ ಇಲ್ಲ. ಹಸಿರು ಹೂವುಗಳು ದಿನದಿನಕ್ಕೆ ದಳವರಳಿಸಿದಂತೆ ಹೃದಯಾಂತರಾಳದಿಂದ ಮೃದು ಭಾವನೆಗಳು ಕವಲೊಡೆಯುತ್ತವೆ. ಅಲ್ಲಿಯ ಸಮಾಜ ಚಟುವಟಿಕೆಯಿಂದ ಇರುವದು ನೋಡುವಾಗ ನೋಡುವವರಿಗೂ ಚಟುವಟಿಕೆಯ ಭಾವನೆಗಳು ಬರುತ್ತವೆ. ಅಲ್ಲಿಯದಕ್ಕೂ ಇಲ್ಲಿಯದಕ್ಕೂ ಎಲ್ಲದರಲ್ಲಿಯೂ 180 ಡಿಗ್ರಿ ವಿರುದ್ಧ ಎಂದು ಒಂದೇ ಮಾತಿನಲ್ಲಿ ಹೇಳಿದೆರೆ ಸರಿ ಯೇನೋ ಅನಿಸುವದು . ಇರಲಿ.

ನಾಲ್ಕು ತಾಸಿನ ಬೆಟ್ಟ ಕಣಿವೆ ಕೊಳ್ಳಗಳ ಮಾರ್ಗದಾಟಿ ‘ಬಹಾ’ ಗಿಡಗಂಟಿಗಳು ಕಾಣಲು ಶುರು ಅಗುವವು. ನೀರಿಲ್ಲದೆ ಮರಳುಗಾಡಿನಲ್ಲಿ ಬೆಳೆಯುವ ಕ್ಯಾಕ್ಟಸ್‌ಗಳು ಹಾಗೂ ಸಣ್ಣಗೊಂಚಲಿನ ಹೂವುಗಳು ಮನಸ್ಸಿಗೆ ಒಂದಿಷ್ಟು ನೆಮ್ಮದಿ ಕೊಡುತ್ತವೆ.

ನಾವು ಸ್ವಲ್ಪ ಸುಸ್ತಾದುದರಿಂದ ಕಾರು ಒಂದೆಡೆ ನಿಲ್ಲಿಸಿ ಮಿನಿ ಫ್ರಿಡ್ಜ್‌ದಲ್ಲಿಯ ತಂಪು ನೀರಿನಿಂದ ಮುಖ ತೊಳೆದು- ಕೊಂಡು ಕೋಲಾಗಳನ್ನು ಕುಡಿದು ಅಷ್ಟಿಷ್ಟು ಫೋಟೋಗಳನ್ನು ತೆಗೆದುಕೊಂಡು ಹೊರಟೆವು. ತಂಪಾದ ಸುಳಿಗಾಳಿ- ಯಿಂದ ಮನಸ್ಸಿಗೆ ನೆಮ್ಮದಿ ಅನಿಸತೊಡಗಿತು.

‘ಬಹಾ’ ನೋಟದಲ್ಲಿ ಹಳ್ಳಿಯಂತಿದ್ದರೂ ಅಲ್ಲಲ್ಲಿ ಸಾಕಷ್ಟು ಸುಧಾರಣೆ ಯಾಗಿದೆ. ಈ ಊರು ಎತ್ತರದ ಗುಡ್ಡದ ಮೇಲಿದೆ. ಊರು ಹೊರಗಿನ ಪ್ರಶಾಂತ ಸ್ಥಳದಲ್ಲಿ ಗುಡ್ಡಕ್ಕೆ ಹೊಂದಿಕೊಂಡೇ ಕಿಂಗ್ ಪಹಾದ ಹಾಸ್ಪಿಟಲ್ ವಿಶಾಲವಾಗಿದೆ. ಸುತ್ತಮುತ್ತಲಿನ ಸಣ್ಣ-ಪುಟ್ಟ ನೂರಾರು ಹಳ್ಳಿಗಳಿಗೆ ಇದೊಂದೇ ದೊಡ್ಡ ಆಸ್ಪತ್ರೆ. ಈ ಹಾಸ್ಪಿಟಲ್‌ದಲ್ಲಿ ನಮ್ಮ  ಬೆಳಗಾವಿಯವರೇ ಅದ ಶ್ರೀ ಶಿವಾನಂದ ಗಿರೆಣ್ಣರವರ ಡಾಕ್ಟರ ಇದ್ದಾರೆ. ಇವರು ಬೆಳಗಾವಿಯವರೇ ಇದ್ದರೂ ನಮ್ಮ-ಅವರ ಪರಿಚಯ ವಾದದ್ದು ಅಲ್‌ಕೋಬರ್‌ದಲ್ಲಿರುವ ಶ್ರೀ ಶಿವನಂಜಪ್ಪನವರ ಮುಖಾಂತರ. ಶ್ರೀ ಗಿರಣ್ಣರವರು ಮಕ್ಕಳು ಹಾಗೂ ಶ್ರೀಮತಿ ಬಾಂಬೆಯಿಂದ ಇಲ್ಲಿಗೆ ಬಂದು ಮುಂದೆ ಬಹಾಕ್ಕೆ ಹೋಗಬೇಕಾದುದರಿಂದ ಜೆಡ್ಡಾಕ್ಕೆ ಬಂದಿದ್ದರು ಆಗ ಅವರ-ನಮ್ಮ ಪರಿಚಯ ಸಾಕಷ್ಟಾಯಿತು. ಈ ನಡುವ ಪೋನ್ ಮುಖಾಂತರ ಮಾತಾಡುವಾಗ ಮನೆಯವರೇ ಒಬ್ಬರು ಅನ್ನುವಷ್ಟು ಪರಿಚಯವಾಗಿತ್ತು. ಹೀಗಾಗಿ ಬಹಾಕ್ಕೆ ಬರಲು ಆಮಂತ್ರಣವೂ ಬಂದಿತ್ತು. ಒಟ್ಟಾಗೆ ಎಲ್ಲಾ ಅನುಕೂಲ ಒದಗಿ ಬಂದಿತ್ತು.

ನಾವು ಫೋನ್ ಮುಖಾಂತರ ಬರುವದು ಅವರಿಗೆ ತಿಳಿಸಿದ್ದೆವು. ಸಂಜೆ ಅವರ ಆಸ್ಪತ್ರೆ ತಲುಪಿದಾಗ 6  ,ಗಂಟೆಯಾಗಿತ್ತು ಆ ಸಮಯದಲ್ಲಿ ಅವರು ಅವರೇಷನ್ ನಡೆದಿದೆ. ಕೀ ತೆಗೆದುಕೊಂಡು ಮನೆಗೆ ಹೋಗಿರಿ’ ಎ೧ದರು ನಾವು ಹಾಗೇ ಮಾಡಿದೆವು. ಮನೆಗೆ ಹೋಗಿ 15-20 ನಿಮಿಷ ಆರಾಮ ತೆಗೆದುಕೊಳುವದರಲ್ಲಿ ಡಾಕ್ಟರ ಗಿರಣ್ಣವರ
ಮನೆಗೆ ಬಂದರು. ಗುಡ್ಡಗಾಡಿನ ಬುಡ್ವಿನ್ ಕಾರು ಡೈವ್ ಮಾಡುವಾಗ ಕಾರು ಒಂಟೆಗೋ, ಒಂಟೆ ಕಾರಿಗೋ ಡಿಕ್ಕಿಹೊಡದಿದ್ದವಂತೆ. ಹೀಗಾಗಿ ಕಾಲು ಮುರಿದು ಕೊಂಡ ಮನುಷ್ಯನ ಅಪರೇಷನ್ ಇತ್ತಂತೆ.

ಗುಡ್ಡಗಾಡಿನ ಪ್ರವಾಸದ ಅನುಭವಗಳು ಮಾತಾಡುತ್ತ ಸಂಜೆ ಚಹಾ ಮುಗಿಸಿ ತಮ್ಮ ಕ್ಯಾಂಪ್ ತೋರಿಸಲು ಹೊರಗೆ ಕರೆದುಕೊಂಡು ಹೋದರು. ಹೊರಗೆ ಹಿತಕರ ವಾದ ಹವೆ. (16 ಡಿಗ್ರಿ ಸಿ) ಎಷ್ಟೋ ಜನ ಸ್ವೆಟರ್‌ಗಳು ಹಾಕಿಕೊಂಡು ಓಡಾಡುತ್ತಿದ್ದರು. ನಮಗೂ ಕೂಡಾ ಚಳಿ ಅನಿಸಿತು. ಅನಿಸಿದರೂ ಅರೇಬಿಯದ ತಂಪು ಹವೆ ಅನುಭವಿಸಬೇಕಿತ್ತು. ಹೀಗಾಗಿ ಹಾಗೆಯೇಹೋಗಿದ್ದೆವು. ಕ್ಯಾಂಪ್‌ನ ಎಲ್ಲ ಮನೆಗಳು ಹಂತ ಹಂತವಾಗಿ ಇಳಿಜಾರಿನಲ್ಲಿ ಇವೆ. ಪ್ರತಿಯೊಂದು ಮನೆಯ ಮುಂದೆ ಸುಂದರ ಹೂ-ಗಿಡ ಬಳ್ಳಿಗಳು ಸಮೃದ್ಧವಾಗಿ ಹರಡಿರುವದರಿಂದ ಸುಂದರ ಸ್ವಚ್ಛ ತಾಜಾ ವಾತವರಣ.

ಇಲ್ಲಿಯ ಪಹದ್ ಹಾಸ್ಪಿಟಲ್‌ದಲ್ಲಿ 480ಕ್ಕೂ ಹೆಚ್ಚು ಡಾಕ್ಟರರಿದ್ದು ಇದರಲ್ಲಿ 4 ಜನ ಲೇಡಿ ಡಾಕ್ಟರುಗಳು ಭಾರತೀಯರು ಎಂದು ಹೇಳಿದರು. ಉಳಿದ ಬೇರೆಬೇರೆ ಭಾರತೀಯ ಡಾಕ್ಟರರ ಪರಿಚಯ ಹೇಳಿದರು. ಕೆಲವರ ಪರಿಚಯವೂ ಮಾಡಿ
ಕೊಟ್ಟರು. ನಾವಿರುವ ಏರ್‌ಪೋರ್ಟ್ ಕ್ಯಾಂಪ್‌ನಂತೆಯೇ ಇಲ್ಲಿಯೂ ಮಾರುಕಟ್ಟೆ ಸಂಕೀರ್ಣ, ಸ್ವಿಮಿಂಗ್‌ಪೂಲ್, ಟೆನಿಸ್ ಕೋರ್ಟ್ ಮುಂತಾದವುಗಳಿವೆ. ಹಾಸ್ಪಿಟಲ್ ದೊಡ್ಡದಿದೆ. ಸುಮಾರು 2 ಕಿ.ಮೀ. ಅಡ್ಡಾಡುವದರಲ್ಲಿ ಚಳಿ ಅನಿಸತೊಡಗಿತು. ಹಸಿವೆಯೂ ಶುರುವಾಯಿತು. ಮನೆಗೆ ಬಂದನಂತರ ನಾವೂ ಅವರೂ ಅಡುಗೆ ಮನೆಸೇರಿ
ಬಿಸಿ ಬಿಸಿ ಅಡುಗೆ ಮಾಡಿದೆವು. ಶ್ರೀ ಗಿರಣಣವರ ಸ್ನೇಹಿತರಾದ ಡಾ. ಶೆಟ್ಟಿಯವರೂ ಬಂದಿದ್ದರು. ಹೀಗಾಗಿ ಸಾಕಷ್ಟು ಹೊತ್ತು ಮಾತಾಡುತ್ತ ಊಟ ಮಾಡಿದೆವು. ಮಕ್ಕಳು ಸುಸ್ತಾದುದರಿಂದ ಬೇಗ ಮಲಗಿದರು. ಶ್ರೀಮತಿ ಗಿರೆಣ್ಣವರ ಹಾಗೂ ಅವರ ಮಕ್ಕಳು ರಜೆಗೆ ಬೆಂಗಳೂರಿಗೆ ಹೋಗಿದ್ದರಿಂದ ನಮ್ಮ ಹುಡುಗರೂ ಕಂಪನಿ ಇಲ್ಲದೆ ಮಲಗಿ ಬಿಟ್ಟರು.

ಬೆಳಿಗ್ಗೆ ಎದ್ದು ನಾವು ತಯಾರಾಗುತ್ತಿದ್ದಂತೆಯೇ ಉಡುಪಿ ಹೋಟೆಲ್ ನಲ್ಲಿಯ ಉಪ್ಪಿಟ್ಟಿನ ವಾಸನೆ ಘಮಿಸಿತು. ಗಿರೆಣ್ಣವರು ಇದರಲ್ಲಿಯೂ ಎಕ್ಸ್‌ಪರ್ಟ್ ಎಂದು ತಿಳಿದು ಬಹಳ ಅಶ್ಚರ್ಯವಾಯಿತು. Boiled Egg ಮಾಡಿಟ್ಟು ಹಾಲು
ಕಾಯಿಸಿಯೂ ಇಟ್ಟದ್ದರು. ನಾವು ಸ್ನಾನ ಮಾಡಿ ಬಟ್ಟೆ ಬರೆ ಹೊಂದಿಸಿಟ್ಟು ಕೆಳಗಿಳಿದು ಬರುವಷ್ಟರಲ್ಲಿಯೇ ಹುಡುಗರಿಗೆ ತಿಂಡಿಕೊಟ್ಟು ಮಾತು ಹಚ್ಚಿದ್ದರು. ಅವರ ಸೌಹಾರ್ದತೆಗೂ ಮಕ್ಕಳು ಹೊಂದಿಕೊಂಡಿದ್ದರು. ತಿಂಡಿ ಅಡುಗೆ ಮಾಡಿಕೊಳ್ಳುವಲ್ಲಿ ತುಂಬಾ ತಾಳ್ಮೆ ಇದೆಯೆಂದು ಅವರ ಅಡುಗೆ ಮನೆಯ ಅಚ್ಚುಕಟ್ಟುತನ ಹಾಗೂ ಚಟುವಟಿಕೆಯಿಂದ ತಿಳಿದುಬಂದಿತು. ದೊಡ್ಡ ಕಂಟುಂಬ ಈ ಮನೆಯಲ್ಲಿ ವಾಸಿಸುತ್ತಿದೆ ಯೇನೋ ಅನ್ನೊ ತರಹ ಫ್ರಿಡ್ಜ್ ಕಪಾಟುಗಳಲ್ಲಿ ಸೂಪರ್ ಮಾರ್ಕೆಟ್ ಬಂದಿಳಿದಂತಿತು.

ಸುಮಾರು 10 ಗಂಟೆಗೆ ‘ಬಹಾ’ ಸುತ್ತಾಕಲು ಹೊರಟೆವು. ‘ಅಲ್‌ಬಹಾ’ ಎಂದೇ ಸೌದಿಗಳು ಉಚ್ಚರಿಸುತ್ತಾರೆ. ಇದು ಸೌದಿ ಅರೇಬಿಯದ ಸಣ್ಣ ಪ್ರಾಂತ. ಟೈಪ್ ಮತ್ತು ಅಭಾ ಪಟ್ಟಣಗಳ ನಡುವಿನ ಪ್ರಸಿದ್ಧ ಊರು ಎಂದು ಹೇಳಬಹುದು. ಸುಮಾರು 900 ಅತಿ ಸಣ್ಣ ಸಣ್ಣ ಹಳ್ಳಿಗಳನ್ನು ಹೊಂದಿ ತನ್ನದೇ ಅದ ಒಂದು ಸ್ವಂತಿಕೆ ಉಳಿಸಿ ಕೊಂಡಿರುವ ಭಾಗ ಇದು. ಇಲ್ಲಿ ಸುತ್ತೆಲ್ಲ ನೋಡುವಾಗ ಈ ಗ್ರಾಮೀಣ ಜನರು ತಮ್ಮ ಇದ್ದ ಒಳಭೂಮಿಯಲ್ಲಿಯೇ ಬೇಸಾಯ ಮಾಡಿಕೊಂಡು ಒಂಟೆ- ಕುರಿಗಳನ್ನು ಸಾಕಿಕೊಂಡು ತಮ್ಮ ಅಜ್ಜ ಮುತ್ತಜ್ಜರಂತೆ ಕುಟುಂಬ ನಡೆಸುವ ಜೀವಿಗಳಿವರು
ಅನಿಸಿತು. ‘ಬಹಾ’ ಊರು ಚಿಕ್ಕದು. ಅದರೂ ಬೇಕಿದ್ದ ಎಲ್ಲ ಸಾಮಾನುಗಳೂ ಸಿಗುತ್ತವೆ. ದೊಡ್ಡ ಸೂಪರ್ ಮಾರ್ಕೆಟ್‌ಗಳಲ್ಲಿ ವಿಶೇಷವಾಗಿ ಬೆಲೆಯುಳ್ಳ ಸಾಮಾನುಗಳಿಗೆ (ಎಲೆಕ್ಟ್ರಿಕ್, ಎಲೆಕ್ಟ್ರಾನಿಕ್ಸ್ ಚಿನ್ನ, ಬಟ್ಟೆ ಮುಂತಾದವುಗಳು) ಜೆಡ್ಡಾಕ್ಕೆ ಬರುತ್ತಾರೆ. ತಿಂಗಳ ಕೊನೆಗೆ ಹಣ ಬಂದ ತಕ್ಷಣ 3-4 ಜನ ಕಾರಿನಿಂದ ಬಂದು ಷಾಷಿಂಗ್ ಮಾಡುತ್ತಾರೆ.

ಊರ ಹೊರಗಡೆ ಎತ್ತರದ ಬೆಟ್ಟ, ಬೆಟ್ಟದ ಮೇಲೊಂದು ಮೊಟೆಲ್. ಹೆಸರು- ‘Sasco Motel’. ಹಿಮ ಪ್ರದೇಶದಲ್ಲಿರುವ ‘ಇಗ್ಲೂ (Iglo) ಮನೆ ಗಳಂತೆ ಗುಂಡುಗುಂಡಾಗಿ ಕಾಣುವ ಈ ದೃಶ್ಯ ದೂರಿಂದ ಬಹಳ ಸುಂದರವಾಗಿ ಕಾಣುವದು. ಈ ಮೊಟೆಲ್‌ದ ಇಗ್ಲೂ.ಕೋಣೆಯ ಕಿಟಕಿಗಳು ಹೆಚ್ಚು ಹೊರಗಡೆ ಇರುವದರಿಂದ
ದೂರದಿಂದ ನೋಡುವಾಗ ಬೆಟ್ಟದ ಮೇಲೆ ಯಾವದೋ ಜಾತಿಯ ದೊಡ್ಡ ಪಕ್ಲಿಗಳು ಕುಳಿತು ಕಿಟಕಿಯಂತೆ ಕಾಣುವ ಕಣ್ಣುಗಳಿಂದ. ಇಳಿಜಾರಿನ ಕಣಿವೆ, ಕೊಳ್ಳ ನೋಡುತ್ತ ಕುಳಿತಿರುವಂತೆ ಭಾಸವಾಗುವುದು. ಟೈಫ್‌ಗಿಂತಲೂ ಇದು ಎತ್ತರವಾದ ಸ್ಥಳ. ಬೆಟ್ಟದ ಮೇಲೆ ಸುತ್ತಿ ಬಳಸಿ ಹೋಗಬೇಕು. ತಿಹಾಮಾ ಬೆಟ್ಟದ ಶ್ರೇಣಿಗಳ ಸುಂದರ ದ್ಭಶ್ಯಾವಳಿ
ನೋಡಲು ವಿಶಾಲವಾದ ಕಟ್ಟೆ ಇದೆ. ಅಲ್ಲಿಂದ ಕೆಳಗೆ ನೋಡಿದರೆ ಕಾಣುವ ದ್ಭಶ್ಯ ಭಯಾನಕವೆನಿಸಿದರೂ ಅಲ್ಲೊಂದು ರುದ್ರರಮಣೀಯತೆ ಎದ್ದು ಕಾಣುವದು. ಬೆಟ್ಟದ ಬದಿಯಲ್ಲಿ ಹಾಯ್ದುಹೋಗುವ ರಸ್ತೆಗಳು, ಅಲ್ಲಲ್ಲಿ ಕಟ್ಟಿದ ಸೇತುವೆಗಳು, ಸುರಂಗ ಮಾರ್ಗಗಳು, ಆಚೆಗೆ ಬಿಸಲಿನ ಬಿಸಿಲ್ಲುದುರೆ ಎಲ್ಲಾ ಒಂದರ ಹಿಂದೊಂದು ರಮ್ಯ ಚಿತ್ರಗಳು.

ಇಲ್ಲಿಯ ಹವಾಮಾನಕ್ಕೆ ಅಷ್ಟಿಷ್ಟು ಹಸಿರು ಹೂವುಗಳು ಆಕರ್ಷಣೀಯವೆನಿಸಿದವು. ಶರದೃತುವಿನಲ್ಲಿ ಇಲ್ಲಿ ಮಳೆ ಅತಿಯಾಗುವದಂತೆ. ಆದರೂ ಆಗಾಗ ತುಂತುರಗಳು ಬರುತ್ತಲೇ ಇರುತ್ತವೆ. ತುಂತುರ ಮಳೆಯಿಂದ ಗುಡ್ಡು ಗಾಡುಗಳ ಕೊಳ್ಳಗಳ ಹಸಿರು ಕಾಯ್ದುಕೊಂಡಿವೆ. ಬೆಟ್ಟದ ಹೂಗಳಂತೂ ಅರೋಗ್ಯವಾಗಿದ್ದು ಬಣ್ಣ ಬಣ್ಣಗಳಿಂದ ಆಕರ್ಶಿಸುತ್ತವೆ. ಹೀಗಾಗಿ ಇಲ್ಲಿ ವಿಶಿಷ್ಟ ಬಗೆಯ ಸೌಂದರ್ಯ ಇದೆ. ನಾವಂತೂ ಆಗಾಗ ಅಲ್ಲಲ್ಲಿ ಕಾರು ನಿಲ್ಲಿಸಿ ಮರು ಭೂಮಿಯ ಗಿಡ, ಹೂಗಳನ್ನು, ಕ್ಯಾಕ್ಟಸ್‌ಗಳನ್ನು ಕೊಯ್ದದ್ದೇ ಕೊಯ್ದುದ್ದು.

ಬಹಾ ಸುತ್ತ ಮುತ್ತ ಎಲ್ಲೂ ಫ್ಯಾಕ್ಟರಿಗಳಿಲ್ಲ. ಹೀಗಾಗಿ ಅಶುದ್ಧ ಹವೆ ಅನ್ನುವದೇ ಇಲ್ಲ. ಬೆಟ್ಟದ ಮೇಲಿಂದ ತೀಡಿ ಬರುವ ತಂಗಾಳಿ ಬಯಲು ಸೀಮೆಯಿಂದ ಹೋದ ನಮಗೆ ಸ್ವಾಗತಿಸಿದಂತೆನಿಸಿತು. ಸಂಜೆ ಬೆಚ್ಚನೆಯ ಬಟ್ಟೆ ಇಲ್ಲದೆ
ಹೊರಬೀಳುವಂತಿಲ್ಲ.

ಮುಂದೆ ನಾವು ‘ಅಭಾ’ ಎನ್ನುವ ಊರಿಗೆ ಹೋಗಬೇಕಾದುದರಿಂದ ಮನೆಗೆ ಮರಳಿದೆವು. ನಾವು ನಮ್ಮ ಬ್ಯಾಗುಗಳೊಂದಿಗೆ ತಯಾರಾಗುವಷ್ಟರಲ್ಲಿ ಡಾಕ್ಲರು ಊಟಕ್ಕೆ ತಯಾರಿಮಾಡಿದ್ದರು. ನಮ್ಮ ಕಡೆಯ ಹಪ್ಪಳ, ಸಂಡಿಗೆ, ಉಪ್ಪಿನಕಾಯಿ, ಚಟ್ನಿ-ಬೀನ್ಸ್ ತರಕಾರಿ-ಮೊಸರು-ಮಜ್ಜಿಗೆ-ಸಲಡ್ ಜೊತೆಗೆ ಸ್ಥಳೀಯವಾಗಿ ಸಿಗುವ ರೋಟಿ ಕೋಬ್ಸ್‌ಗಳಿಂದ ಓಳ್ಳೆಯ ಪರೋಟಾ ತರಹ ಮಾಡಿ ಊಟಕ್ಕೆ ಬಡಿಸಿದರು. ನಂತರ ನಮ್ಮ ಊಟದ ಡಬ್ಬಾ (Box)ಕೂಡಾ ತುಂಬಿ ಕೊಡುವಲ್ಲಿ ತಮ್ಮಲ್ಲಿರುವ ತಂಪು ಪಾನೀಯಗಳನ್ನು ನಮ್ಮ ಸಣ್ಣ ಫ್ರೀಜ್‌ದಲ್ಲಿಡಲು ಸಹಕರಿಸಿದರು, ಅವರ ತಾಳ್ಮೆ ಸೌಹಾರ್ದತೆ ಆತ್ಮೀಯತೆಗೆ ನಾವೆಲ್ಲ ಮೆಚ್ಚಿಕೊಳ್ಳಲೇಬೇಕಾಯ್ತು.

ಮಧ್ಯಾನ್ವ ನಮ್ಮ ಪ್ರವಾಸ ಅಭಾದೆಡೆಗೆ ಸುರುವಾಯಿತು. ಇಲ್ಲಿಯೂ ಕೂಡಾ ಸುತ್ತಿ ಬಳಸಿರುವ ರಸ್ತೆಗಳು-ಬೆಟ್ಟಗಳು-ಕೊರಕಲಗಳು ಮತ್ತೆ ಶುರುವಾದವು. ಗುಡ್ಡಗಾಡಿನ ಜನರಿಗೆ ಬಿಸಿಲು ಹತ್ತುವದೇ ಇಲ್ಲವೆಂದು ಕಾಣಿಸುತ್ತದೆ. ಗುಡ್ಡದ ಬದುವಿನಲ್ಲಿ ಕುರಿಕಾಯುತ್ತ ತಿರುಗುವ ಹೆಂಗಸರೂ ಗಂಡಸರೂ ಅರಾಮವಾಗಿ ಅಡ್ಡಾಡುತ್ತಿರುತ್ತಾರೆ.

ಅಲ್‌ಬಹಾದಿಂದ ಅಭಾದ ಕಡೆಯ ಜನಜೀವನವೇ ಒಂದು ವೈಶಿಷ್ಯದಿಂದ ಕೂಡಿದೆ. ಈ ಕಡೆಯ ಗುಡ್ಡಗಾಡಿನ ಜನರಿಗೆಲ್ಲ ಬುಡ್‌ವಿನ್‌ಗಳೆಂದೇ ಹೆಸರು. ಹಾದಿಗುಂಟ ನೂರಾರು ಸಣ್ಣ ಸಣ್ಣ ಹಳ್ಳಿಗಳು ಕಾಣುತ್ತವೆ, ಒಳಗೆ ಹೋದಂತೆಲ್ಲ ಅವರದೇ ಅದ ವಿಶಿಷ್ಟ ಮನೆಗಳು- ಪದ್ಧತಿ-ಬಟ್ಟೆ-ಕೈಗಾರಿಕೆ ವಿಧವಿಧವಾಗಿ ಕಾಣುವವು. ಈ ಕಾರಣ
ದಿಂದ ಇಲ್ಲಿ ಬುಡ್ವಿನ್ ಜನಜೀವನ ಪರಿಚಯಿಸುವದು ಒಳ್ಳೆಯದು.

ಬೆಟ್ಟದ ಬದುವು ಹಾಗೂ ಮರಳುಗಾಡಿನಲ್ಲಿ ವಾಸಿಸುವ ಇಲ್ಲಿನ ಜನರಿಗೆ “ಬುಡ್‌ವಿನ್”ಗಳೆಂದು ಹೆಸರು. ನಮ್ಮ ಕಡೆಗೆ ಲಮಾಣಿಗರು. ಅದಿವಾಸಿಗಳು. ಕೊರವರು ಅನ್ನೊ ಒಂದೊಂದು ಗುಂಪಿನ ತರಹ. ಇವರು ಯಾವತ್ತೂ ಕುರಿ ಒಂಟೆಗಳನ್ನು ಕಟ್ಟಿ ಕೊಂಡು ಅಡ್ಡಾಡುವ ಜನಾಂಗ. ಇದ್ದಷ್ಟು ಅಷ್ಟಿಷ್ಟು ವ್ಯಾಪಾರ ಮಾಡುತ್ತ ಶಹರದ ಜನರಿಗೂ ಬೇಕಾಗಿದ್ದವರು. ಹೀಗಾಗಿ ನೂರಾರು ವರ್ಷಗಳಿಂದ ಆ ಬೆಟ್ಟಕ್ಕೊಬ್ಬ ಈ ಬೆಟ್ಟಕ್ಕೊಬ್ಬ ಮತ್ತೊಂದು ಬೆಟ್ಟಕ್ಕೊಬ್ಬ ಹಿರಿಯ ಎಂದು ತಮ್ಮ ತಮ್ಮ ಭಾಗದ ಗುಡ್ಡ ಗಾಡಿನಲ್ಲಿ ಮೆರೆದ ಜನ ಇವರು. ಹೀಗಿದ್ದಾಗ ಪಕ್ಷ ಪಂಗಡಗಳು ಸಹಜವಾಗಿಯೇ
ಕಟ್ಟಿಕೊಂಡು ಹತ್ತಿರದ ಓಯಾಸಿಸ್ಗಳ ಹತ್ತಿರ ವಾಸಿಸತೊಡಗಿದರು. ಪಕ್ಷದ ಪ್ರಬಲತೆಗೆ ಬುದ್ಧಿಮತ್ತೆ ಉಪಯೋಗಿಸುವ ದಕ್ಕಿಂತ ಶಕ್ತಿ ಪ್ರಯೋಜನ ಹೆಚ್ಚುಬೇಕಾಗುತ್ತಿತ್ತು. ಹೀಗಾಗಿ ತಮ್ಮ ಭಧ್ರತೆಗೆಂದು ಪೂರ್ವ ಆಫ್ರಿಕದ ಸೋಮಾಲಿಗಳನ್ನು ಗುಲಾಮರುಗಳೆಂದು ಕರೆದುಕೊಂಡು ಬಂದರು. ಒಳಗೊಳಗೇ ಕಾದಾಟವೊ, ಒಬ್ಬರಮೇಲೆ ಒಬ್ಬರು ಪ್ರಭಾವ ಬೀರುವ ಪ್ರಬಲ ಹೋರಾಟಗಳು ಸಾಕಷ್ಟು ಅಗತ್ತಲೇ ಇದ್ದವು. 1930ರ ಹೊತ್ತಿಗೆ ಅಬ್ದುಲ್ ಅಜೀಜ ಪ್ರಬಲ ವ್ಯಕ್ತಿಯಾಗಿ ರಾಜನಾದಾಗ ತನ್ನ ದೇಶದ ಪ್ರಜೆಗಳಿಗೆ ಶಾಂತಿ ನಿರ್ಮಿಸುವಲ್ಲಿ ಬುಡ್‌ವಿನ್ ಜನರಿಗೆ ಸಹಕರಿಸುವಲ್ಲಿ ಹೆಸರು ಗಳಿಸಿಕೊಂಡ.

ಇಂದಿನಂತೆ ಅಂದು ಕಾರು ಟ್ರಕುಗಳು ಇರಲಿಲ್ಲ ಬೆಟ್ಟ-ಕೊಳ್ಳ-ಕಂದರ.ಮರುಭೂಮಿಯಲ್ಲಿ ಅಡ್ಡಾಡಬೇಕಾದರೆ ಅವರಿಗೆ ಸಹಾಯಕವಾಗುವವು ಒಂಟೆಗಳು. ಒಂಟೆಗಳೇ ಅವರ ಜೀವನಾಧಾರ ಅವುಗಳ ಪಾಲನೆ-ಪೋಷಣೆಯಲ್ಲಿ, ಕುರಿಕಾಯು ವಿಕೆಯಲ್ಲಿ ಅವರು ಸಮಯ ಕಳೆಯುತ್ತಿದ್ದರು, ಒಂದು ಕುಟುಂಬ 40-50 ಒಂಟೆಗಳ ಮಾಲೀಕರು, ಈ ಗುಡ್ಡಗಾಡಿನ ಬುಡ್‌ವಿನ್ ಜನಾಂಗಗಳಿಗೆ ಶೇಖ ಪ್ರಮುಖ ವ್ಯಕ್ತಿ. ತನ್ನ ಧ್ಯೆರ್ಯಸ್ಥೈರ್ಯಗಳಿಗೆ ಹೊಂದಿಕೆಯಾಗುವಂತೆ ಜನರನ್ನು ಆರಿಸಿಕೊಂಡು ಮೆರೆಯುತ್ತಿದ್ದ. ಆದರೆ ಇತ್ತೀಚಿನ ವರ್ಷಗಳಲ್ಲಿ ಶೇಖರು ಗುಡ್ಡಗಾಡಿನ ವ್ಯವಹಾರ ಹೆಚ್ಚು ಕಡಿಮೆ ಬಿಟ್ಟು ಸರಕಾರದೊಂದಿಗೆ ಸಂಪರ್ಕಗಳಿಟ್ಟುಕೊಂಡು ತೈಲಭಾವಿಗಳ ವಿಷಯವಾಗಿ ಅವುಗಳ ಪೈಪಲೈನ್‌ ವಿಷಯವಾಗಿಯೋ, ಪಟ್ಟಣದಲ್ಲಿ ಅಂಗಡಿ ಹಾಕುವ ದಾಗಲೀ, ಮನೆಕಟ್ಟಕೊಳ್ಳುವ ಹಾಗೂ ನೌಕರಿ ಲೈಸನ್ಸು ಮುಂತಾದ ವಿಷಯ ಗಳಲ್ಲಿಯೇ ತಲೆಹಾಕತೊಡಗಿದ್ದಾರೆ.

ತ್ಯೆಲಾಗಾರದಿಂದ ಇವರ ದೈವ ಒಮ್ಮಿಂದೊಮ್ಮೆಲೇ ತಿರುಗಿಬಿಟ್ಟಿದೆ. ಕುರಿ ಕಾಯುವ ವನಿಗೂ, ಒಂಟೆ ಮೇಯಿಸುವವನಿಗೂ ಈಗ ಕಾರಿಲ್ಲದೇ ನಡೆಯುವದಿಲ್ಲ. ಕಾರು ಬೇಕೇ ಬೇಕು. ತ್ವರಿತಗತಿಯಿಂದ ಇವರೂ ಬದಲಾಗುತ್ತಿದ್ದಾರೆ. ಗುಡ್ಡಗಾಡಿನಲ್ಲಿ ಒಂಟೆ ಓಡಿಸುವದನ್ನು-ಒಂಟೆ ಮೇಲೆ ವ್ಯಾಪಾರ ವ್ಯವಹಾರ ಮಾಡುವದನ್ನು ಬದಿಗಿಟ್ಟು ಈಗ ಒಳ್ಳೆ ಮರ್ಸಿಡಿಸ್ ಬೆಂಜ್ ಟ್ರಕ್‌ಗಳು, ಜಪನೀಸ್ ಪಿಕ್ಅಪ್‌ಗಳು ಓಡಾಡಿಸುತ್ತಿದ್ದಾರೆ. ಮರಳುಗಾಡಿನ ಮಣ್ಣಿನ ಮನೆಗಳೋ ಅಥವಾ ಡೇರೆಹೊಡೆದ ಮನೆಗಳಿಂದಲೋ ಸರಿದು ನಗರದೆಡೆಗೆ ಬಂದು ಕಾಂಕ್ರೀಟ್ ಮನೆಗಳಲ್ಲಿ ವಾಸಿಸತೊಡಗಿದ್ದಾರೆ. ನಗರದಲ್ಲಿ ಸಿಗುವ ಚಿಕ್ಕಪುಟ್ಟ ಕೆಲಸಗಳನ್ನು ಮಾಡಿಕೊಂಡು ತಮ್ಮ ಹಾಗೂ ಮಕ್ಕಳ ಜೀವನದ
ರೂಪರೇಶೆಗಳನ್ನು ಬದಲಿಸಿಕೊಳ್ಳುತ್ತಿದ್ದಾರೆ. ಇವರಿಗೆ ಸರಕಾರ ಕೂಡಾ ಎಲ್ಲಾ ರೀತಿಯಿಂದಲೂ ನೆರವು ನೀಡುತ್ತಿದೆ. ಅದರೆ ಎಷ್ಟೋ ಸಂಪ್ರದಾಯಿ ಬುಡ್‌ವಿನ್‌ಗಳು ತಮ್ಮ ಹಿರಿಯರ ಸ್ಥಳ, ಪದ್ಧತಿ ಬಿಟ್ಟುಕೊಡಲು ಒಪ್ಪುತ್ತಿಲ್ಲ. ಅವರಿನ್ನೂ ತಮ್ಮ ಸಂಪ್ರದಾಯ ಮುಂದುವರೆಸಿಕೊಂಡು ನಡೆದಿದ್ದಾರೆ.

ಈ ಕಡೆಯ ಹೆಂಗಸರು ನೋಟದಲ್ಲಿ ಒರಟರಂತೆ ಕಂಡರೂ ಶೃಂಗಾರ ಪ್ರಿಯರು, ಬಣ್ಣ ಬಣ್ಣದ ಬಟ್ಟೆಗಳ ತೊಟ್ಟು ಇವರಲ್ಲೂ ಸೂಕ್ಷ್ಮ ಕರಕೌಶಲಗಳಿಂದ ಕೂಡಿದ ಬೆಳ್ಳಿ ಅಭರಣಗಳು ಕುತ್ತಿಗೆ-ಕೈ ತುಂಬಿಕೊಂಡಿರುತ್ತವೆ. ತಲೆಯ ಮೇಲೆ ಮಾತ್ರ ಯಾವತ್ತೂ ಉದ್ದನೆಯ ಕರಿಯ ಬಟ್ಟೆಯಿಂದ ಕೂದಲು ಮುಚ್ಚಿಕೊಂಡಿರುತ್ತಾರೆ. ಆಭರಣಗಳು, ಕಾಡಿಗೆ,  ಸುವಾಸಿ ದ್ರವ್ಯಗಳು ಇವು ಇವರ ಪ್ರಿಯವಾದ ವಸ್ತುಗಳು.

ಕುರಿ ಒಂಟೆಗಳೊಂದಿಗೆ ಇವರ ಜೀವನ ನಡೆಯುತ್ತಿರುವದರಿಂದ ಇವುಗಳ ಚರ್ಮದಿಂದ ಅನೇಕ ಕೈಗಾರಿಕೆ ಮಾಡಿಕೊಂಡಿದ್ದಾರೆ. ಉದಾಹರಣೆಗೆ ಚರ್ಮದ ಬೆಲ್ಟ್ಫ್ಮಾಡುವದಾಗಲಿ, ಚರ್ಮದ ನೀರಿನ ಚೀಲಗಳು, ಸಾಮಾನಿನ ಚೀಲಗಳು ಮುಂತಾದವುಗಳ ತಯಾರಿಸಿ, ಮಾರಾಟದಲ್ಲಿ ತೊಡಗಿರುತ್ತಾರೆ

ಅರೇಬಿಯನ್ ಒಂಟೆಗಳು ನೀರಿಲ್ಲದೆ ಸಾಕಷ್ಟು ದಿನಗಳಿರಬಲ್ಲವು. ಇವು ಸುಮಾರು 25 ಗ್ಯಾಲನ್‌ಗಳಷ್ಟು ನೀರು ಒಮ್ಮೆಯೇ ಕುಡಿಯುವವಂತೆ. ಹೆಣ್ಣು ಒಂಟೆಯ ಹಾಲು ತುಂಬಾ ಸಿಹಿಯಂತೆ. ಹಾದಿಗುಂಟ ನಾವು ಹೆಚ್ಚಾಗಿ ಬಿಳಿಯ ಒಂಟೆಗಳನ್ನುನೋಡಿದೆವು. ಇಂತಹ ಕೆಟ್ಟ ಬಿಸಿಲು ಹೊಡೆಯುತ್ತಿದ್ದರೂ ಅವು ಕಪ್ಟಾಗದೇ ಬಿಳಿ ಯಾಗಿಯೇ ಇವೆ. ಗಂಡಸರಿಗೆ ಒಂಟೆಯ ಜವಾಬ್ದಾರಿ ಹೆಚ್ಚು. ಇನ್ನೊಂದು ವಿಶೇಷ ವೆಂದರೆ ಅತಿಥಿ ಸತ್ಕಾರದಲ್ಲಿಯಾಗಲೀ ಅಥವಾ ಅವರ ಧಾರ್ಮಿಕ ಹಬ್ಬಗಳಲ್ಲಾಗಲೀ ಒಂಟೆಗಳನ್ನು ಬಲಿಕೊಟ್ಟು ಅಥವಾ ತಾವೇ ಅವನ್ನು ಬಲಿಮಾಡಿ ಅದರ ಹೊಟ್ಟೆಯೊಳಗೆ ಕಿಲೋಕಿಲೋಗಳಷ್ಟು ಅನ್ನಹಾಕಿ ಸುಟ್ಟೋ ಕುದಿಸಿಯೋ ಉಣಬಡಿಸುವರು. ದೊಡ್ಡ ಒಂಟೆಯ ಹೊಟ್ಟೆಯನ್ನೇ ಅಗಲವಾದ ಪಾತ್ರೆಯಲ್ಲಿಟ್ಟು ಸುತ್ತೆಲ್ಲ ಜನ ಕುಳಿತು, ಅದರ ಮಾಂಸ ಹರಿದು ತಿನ್ನುವ ದೃಶ್ಯ ನಮಗೆ ನೋಡಲಸಾಧ್ಯ .

‘ಬಹಾ’ ದಿಂದ ‘ಅಭಾ’ ಹಾದಿ ತುಂಬಾ ತಿರುವು ಮುರುವು. ಗುಡ್ಡಗಳನ್ನು ಪ್ರದಕ್ಲಿಣೆ ಹಾಕುತ್ತಿದ್ದೆವೇನೋ ಅನ್ನೊ ಅನುಭವ. ರಸ್ತೆಗಳು, ಒಳ್ಳೆಯದಾಗಿದ್ದರೂ ಹೋಗು ಬರುವರಿಗೆ ಒಂದೇ ದಾರಿ. ಯಾವತ್ತೂ 40 ಕಿ.ಮಾ. ವೇಗದಲ್ಲಷ್ಟೇ ಹೋಗಬೇಕು. ಕಾರಿನ ಎಡಗಡೆ ಕೆಳಗೆ ಇಳಜಾರು ಕೊರಕಲು ಪ್ರಪಾತಗಳು, ಬಲಗಡೆ ಮೇಲ್ಗಡೆ
ಒಂದಕ್ಕಿಂತ ಒಂದು ಪ್ರತಿಸ್ಪರ್ಧಿಸುವಂತ ದೈತ್ಯಾಕಾರವಾಗಿ ನಿಂತ ಬೆಟ್ಟಗಳು, ಮೋಟಾರ್ ರಸ್ತೆಗಾಗಿ ಗುಡ್ಡಗಳನ್ನು ಒಡೆದೊಡೆದು ಮಾಡಿರುವ ರಸ್ತೆಗಳಿವು. ಸಣ್ಣಹಾದಿಯ ಎಡ ಬಲದ ಬೆಟ್ಟದ ಕಲ್ಲುಗಳು ಗಾಳಿಯ ಹೊಡೆತಕ್ಕಾಗಲೀ, ಅದುರುವಿಕೆಯಿಂದಾಗಲೀ ಕಲ್ಲುಗಳು ಬೀಳಬಾರದೆಂದು ಅವಕ್ಕೆಲ್ಲ ಅಲ್ಲಲ್ಲಿ ಒಳ್ಳೆಯ ಕಬ್ಬಿಣದ ಸರಪಳಿಯ ಜಾಳಿಗೆಯಿಂದ ಭಧ್ರಪಡಿಸಿದ್ದಾರೆ. ಕೆಲವು ಕಡೆ ಬೋರ್ಡುಗಳನ್ನು ಹಾಕಿ ಎಚ್ಚರಿಕೆ ಕೊಟ್ಟಿದ್ದಾರೆ- ‘ಕಲ್ಲುಗಳು ಬೀಳಬಹುದು ಹುಷಾರಾಗಿರಿ’ ಎಂದು.

ಈ ಬಹಾ – ಅಭಾಗಳ ನಡುವೆ ಎತ್ತರೆತ್ತರದ ದಿನ್ನೆಗಳ ಮೇಲೆ ಕಾಣುವ ನೂರಾರು ವೀಕ್ಷಣಾ ಗೋಪುರಗಳು ವಿಶೇಷತೆಯಿಂದ ಕೂಡಿವೆ. ಅದೇ ಗುಡ್ಡಗಾಡು ಜನರು ಆ ಗುಡ್ಡಕ್ಕೊಂದು ವೀಕ್ಷಣಗೋಪುರ ಕಟ್ಟಿಕೊಂಡು ದೂರದ ವೈರಿಗಳನ್ನು ನೋಡಿದರೆ; ಅವರೊಂದು ಕಟ್ಟಿಕೊಂಡು ಇನ್ನೊಂದು ವಿರೋಧಿ ಗುಂಪನ್ನು ನೋಡುತ್ತಿದ್ದರು. ಹೀಗಾಗಿ ಎಲ್ಲೆಂದರಲ್ಲಿ ಇವು ಈ ಭಾಗದಲ್ಲಿ ಬಹಳ ಇವೆ. ಸುಮಾರು 350 ವರ್ಷಗಳಷ್ಟು ಹಿಂದೆಯೇ ಇವು ಕಟ್ಟಲ್ಪಟ್ಟಿವೆ. ಸ್ಥಳೀಯ ಕಲ್ಲು ಮಣ್ಣಿನಿಂದ ಕಟ್ಟಿ ಸುತ್ತೆಲ್ಲ ಬಿಳಿಯ ಸುಣ್ಣ ಬಳೆದಿದ್ದಾರೆ. ಸುಮಾರು 2000 ವರ್ಷಗಳಷ್ಟು ಹಳೆಯ ಇತಿಹಾಸ ಇಲ್ಲಿ ಸುತ್ತೆಲ್ಲ ಹರಡಿದೆ. ಪ್ರಾಚ್ಯಶಾಸ್ತ್ರಜ್ಞರೇನಾದರೂ ಹೆಚ್ಚಿನ ಸಂಶೋಧನೆ ನಡೆಸಿದರೆ ಇನ್ನೂ ಸಾಕಷ್ಟು ಐತಿಹಾಸಿಕ ಸಾಕ್ಷ್ಯಗಳು ಸಿಗಬಹುದು. ಅದರೆ ಈಗ ರಾಜರಿಗೆ ಹಳೆಯದರ ಬಗ್ಗೆ ತಲೆಕೆಡಿಕೊಳ್ಳುವಷ್ಟು ಸಮಯ ಇಲ್ಲ. ಈಗ ದೊಡ್ಡ
ದೊಡ್ಡ ಪಟ್ಟಣಗಳನ್ನು ಬೆಳೆಸುವದು, ಔದ್ಯೋಗಿಕ ಬೆಳವಣಿಗೆ ನಡೆದಿದೆ. ಮುಂದುವರೆದ ದೇಶಗಳ ನಕಲು ಎಲ್ಲಾ ಮಾಡಿ ಮುಗಿದ ನಂತರ ನಿಧಾನವಾಗಿ ಇಂತಹದರ ಕಡೆ ಹೊರಳಬಹುದೇನೋ.

ಸಾಕಷ್ಟು ಸಲ ಕಾರಿನಿಂದ ಹತ್ತಿಳಿದು ಆರಾಮ ತೆಗೆದುಕೊಳ್ಳುತ್ತ ಕೋಲ್ಡ್‌ ಡ್ರಿಂಕ್ಸ್ ಕುಡಿಯುತ್ತ-ಮಾತಾಡುತ್ತ ಹರಟೆ ಹೊಡೆಯುತ್ತಿದ್ದರೂ 6 ತಾಸಿನ ಪ್ರಯಾಣದಲ್ಲಿ ನನಗೆ ಮಾತ್ರ ಸುತ್ತಾಗಿತ್ತು. ಗುತ್ತಿಯವರೂ-ಮಕ್ಕಳೂ ಸಾಕಷ್ಟು
ಹುರುಪಿನಲ್ಲಿಯೇ ಇದ್ದರು. ಅಭಾ ಸಮೀಪಿಸುತ್ತಿದ್ದಂತೆಯೇ ದಟ್ಬಾದ ಹಸಿರಿನ ನೆಲ ನೋಡಿ ನೆಮ್ಮೆದಿಯೆನಿಸ ತೊಡಗಿತು. ರಾತ್ರಿ ಊರು ವಿದ್ಯುದ್ದೀಪಗಳಿಂದ- ಉದ್ಯಾನಗಳಿಂದ ಕಂಗೊಳಿಸುತ್ತಿತ್ತು. ಅದರೆ ಪ್ರವಾಸದ ದಣಿವಿನಿಂದ ಹೆಚ್ಚೇನೂ ನೋಡುವದು ಬೇಕಾಗಿರಲಿಲ್ಲ. ಹೋಟೆಲ್‌ಗೆ ಹೋದವರೇ ‘ಉಸ್ಸಪ್ಪಾ’ ಎಂದುಕೊಂಡೆವು.

‘ಅಭಾ’ ಊರು ಸಮತಟ್ಬಾದ ನೆಲದ ಮೇಲಿಲ್ಲ. ರಸ್ತೆಗಳೂ ಹೇಳಿಕೊಳ್ಳುವಂತಹ ಅಗಲವಾದವುಗಳೇನಲ್ಲ. ತೆಗ್ಗು ದಿನ್ನೆಗಳಿಂದ ಕೂಡಿದ ಬೆಟ್ಟದ ಮೇಲ್ಗಡೆಯೇ ಮಣ್ಣಿನ ಮನೆಗಳು. ಆದರೆ ಸುಂದರ ಹಸಿರು-ಹೂವುಗಳಿಂದ ಕೂಡಿದ ಯಾವತ್ತೂ ತಂಪಾದ ಹವೆಯಿಂದ ಇರುವ ಇದು ‘ಅಸೀರ್’ ಪ್ಪದೇಶದ (ದಕ್ಷಿಣ ಪೂರ್ವಭಾಗ) ಒಂದು ಭಾಗ. ಸೌದಿ ಅರೇಬಿಯದಲ್ಲೂ ಹಿಮ ಬೀಳುವ ಪ್ರದೇಶ ಇದೆ ಅಂದರೆ ಯಾರೂ ನಂಬುವದಿಲ್ಲ. ಆದರೆ ಇದು ನಿಜ. ಆ  ಹಿಮಾಚ್ಛಾದಿತವಾಗುವ ಪ್ರದೇಶವೇ ‘ಅಸೀರ್’ ದ ‘ಅಭಾ’. ಸೌಧಿ ಅರೇಬಿಯದ ಅತೀ ಎತ್ತರದ ಪ್ರದೇಶ. ಸಮುದ್ರ
ಸಮಪಾತಳಿಯಿಂದ (ಜೆಡ್ಡಾ) 10,000 ವೂಟ್ ಅಥವಾ 3048 ಮೀಟರ್‌ಗಳಷ್ಟು ಎತ್ತರದ ಮೇಲಿದೆ ಈ ಅಭಾ. ನಾವು ಮಾರ್ಚ್ ಕೊನೆಗೆ ಹೋದುದರಿಂದ ಆಗೇನು ಹಿಮ ಬೀಳುತ್ತಿರಲಿಲ್ಲ. ಆದರೆ ಹವಾಮಾನ ಮಾತ್ರ 10 ಡಿಗ್ರಿ ಸೆಲ್ಸಿಯಸ್ ಇತ್ತು ಬೆಚ್ಚನೆಯ ಅರಿವೆ ಹಾಕಿಕೊಂಡೇ ಹೊರಗೆ ಹೋಗಿದ್ದೆವು. ಊರ ಮಧ್ಯದಲ್ಲಿ ಹಳೆ ಹೊಸ ಮನೆಗಳು, ಅಂಗಡಿಗಳು ಸಾಕಷ್ಟು. ಸುಮಾರು 300 ವರ್ಷಗಳಷ್ಟು ಹಿಂದಿನಿಂವಲೇ ಇಲ್ಲಿ ದಟ್ಟ ವಸತಿ ಬೆಳೆದಿದೆ. ಇಲ್ಲೆಲ್ಲ ಅಷ್ಟಿಷ್ಟು ಫಲವತ್ತಾದ ಮಣ್ಣಿರುವದರಿಂದ ಬೆಳೆಮಾಡಿಕೊಂಡಿದ್ದಾರೆ. ಅದರೆ ಹೇಳಿಕೊಳ್ಳುವಂತಹ ಔದ್ಯೋಗಿಕ ಬೆಳವಣಿಗೆ
ಇಲ್ಲಿಲ್ಲ. ಇದ್ದದ್ದರಲ್ಲಿಯೇ ಅಷ್ಟಿಷ್ಟು ವ್ಯವಸ್ಥೆ ಮಾಡಿಕೊಂಡು ನವ್ಯತೆಗೆ ಹೊಂದುವಂತೆ ಒಂದಿಷ್ಟು ಶಾಪಿಂಗ್ ಕಾಂಪ್ಲೆಕ್ಸ್‌ಗಳು ಬಂದಿವೆ. ಇತ್ತೀಚೆಗಷ್ಟೇ ಇಂಜಿನಿಯರಿಂಗ್, ಮೆಡಿಕಲ್ ಕಾಲೇಜಗಳ ಕಟ್ಟಡಗಳ ನಿರ್ಮಾಣ ನಡೆದಿದೆ. ವಿಮಾನ ನಿಲ್ದಾಣ ಮಾಡಿದ್ದಾರೆ. ಇವೆಲ್ಲ ಕೇವಲ 10-15 ವರ್ಷಗಳಲ್ಲಿ ಆದವು. ಇಲ್ಲೆಲ್ಲ ಮಣ್ಣಿನ ಮನೆಗಳೇ ಹೆಚ್ಚು. ಈ ಮಣ್ಣಿನ ಗೋಡೆಗಳು ದಪ್ಪಾಗಿದ್ದು ಬೇಸಿಗೆಯಲ್ಲಿ ತಂಪು ಚಳಿಗಾಲದಲ್ಲಿ ಬೆಚ್ಚಗೆ ಇರುತ್ತವೆ. ಕೆಲವೆಡೆಗೆ ಈ ಮಣ್ಣಿನ ಮನೆಗಳಿಗೆ, ಗೋಡೆಗಳಿಗೆ ಅಗಲವಾದ ಚಿಪ್ಪುಗಳು ಹಚ್ಚಿರುತ್ತಾರೆ. ಈ ಚಿಪ್ಪುಗಳನ್ನು ನಮ್ಮನಕಡೆಯ ಹಂಚಿನಂತೆ ಇಳಿಜಾರಾಗಿ ಹಚ್ಚಿ ಮಳೆ ಬಂದರೆ ನೀರು ಹರಿದು ಹೋಗಲು ಮತ್ತು ಬಿಸಿಲಿದ್ದರೆ ಗೋಡೆಗೆ ನೆರಳು ಕೊಡಲು ಈ ತರಹದ ವ್ಯವಸ್ಥೆ ಮಾಡಿಕೊಂಡಿರುತ್ತಾರೆ.

ಇತ್ತೀಚಿನ ಕೆಲವೇವರ್ಷಗಳಲ್ಲಿ ಅಭಾ ತುಂಬಾ ಬದಲಾವಣೆಯಾಗಿದೆ ಎಂದು ಸ್ಥಳೀಯರು ಹೇಳುತ್ತಾರೆ. ತಂಪಾದ ಹವೆ., ಹಸಿರು ಪ್ರದೇಶವೆಂದು ಪ್ರವಾಸಿ ಇಲಾಖೆ ಯವರು ಸಾಕಷ್ಟು ಸುಧಾರಣೆ ಮಾಡುತ್ತಿದ್ದಾರೆ. ಔದ್ಯೋಗಿಕ ಕೇಂದ್ರವೆಂದು ಸಮೀಪದ “ಖಮೀಷ್ ಮುಷಾಯತ್” ಊರಿಗೆ ಬಿಟ್ಟುಕೊಟ್ಟು ಇದು ಕೇವಲ ಪ್ರವಾಸಿ ಸ್ಥಳವೆಂದು ಬೇರ್ಪಡಿಸಿಕೊಂಡಿದ್ದಾರೆ. ಅಂತೆಯೇ ಅಭಾದಲ್ಲಿ ಸಾಕಷ್ಟು ಹೋಟೆಲ್‌ಗಳು, ರೆಸ್ಟೋರೆಂಟ್‌ಗಳಿವೆ.

ಊರು ಹೊರಗಡೆ ಸುಮಾರು 15 ಕಿಮೀ ಅಂತರದಲ್ಲಿ ಒಳ್ಳೇ ಇಂಟರ್‌ ಕಾಂಟಿನೆಂಟಲ್ ಹೋಟೆಲ್ ಇದೆ. ಸುಂದರವಾದುದು. ಒಂದು ದಿನಕ್ಕೆ ಡಬಲ್ ಬೆಡ್‌ಗೆ 3000 ರೂ. ಒಂದು ಊಟಕ್ಕೆ 300 ರೂ. ಬೇಡವಿದ್ದರೆ ಬೇಕಾದ ಕೆಲವೇ ತಿಂಡಿಗಳನ್ನು ಬೇರೆಯಾಗಿ ತರಿಸಿ ಊಟ ಮಾಡಬಹುದು. ಬಫೆ ಇಡುವ ವ್ಯವಸ್ಥೆ ಅಚ್ಚುಕಟ್ಟಾದುದು. ನೂರಾರು ತರಹದ ತಿನಿಸುಗಳು, ಬೇಕಿದ್ದದ್ದೂ-ಬೇಡಾದದ್ದೂ ಎಲ್ಲಾ ಇರುತ್ತದೆ.,ಉದಾ-ಕಾಯಿಪಲ್ಲೆ ದಿನಸಿಗಳು ಒಂದೆರಡಿದ್ದು ಮಾಂಸಾಹಾರವೇ ಜಾಸ್ತಿ. ಅದರೆ ಸುತ್ತಮುತ್ತಲಿನ ಜನರ ಮುಂದೆ ಮುಖ ಸೊಟ್ಟಮಾಡಿಕೊಂಡು ಮೂಗು ಮುಚ್ಚಿಕೊಳ್ಳುವಂತಿಲ್ಲ. ಸುಮ್ಮನೆ ದಾಟಿದೆವು. ಮುಂದೆ ಒಳ್ಳೊಳ್ಳೆಯ ಐಸ್‌ಕ್ರೀಮ್‌ಗಳು, ಫ್ರೂಟ್ಸ್ ಸಲಡ್‌ಗಳು,  ವೆಜಿಟೇಬಲ್ ಸಲಾಡ್‌ಗಳು ಆಸೆ ಹುಟ್ಟಿ ಸುತ್ತವೆ. ನಮಗೆ ಬೇಕಿದ್ದದ್ದು ಬೇರೆಯಾಗಿಯೇ ತರಿಸಿಕೊಂಡು ಊಟಮಾಡಿದೆವು. ಹುಡುಗರು ಒಳ್ಳೆಯ ಐಸ್‌ಕ್ರೀಮ್‌ನ ಸ್ವಾದ ಸುಖ ಸವಿದರು. ಹೋಟೆಲ್ ಒಳಗಡೆ ನೂರಾರು ಅನುಕೂಲತೆಗಳು, ಹೊರಗಡೆ ಸುಂದರವಾದ ತಂಪಾದ ಹವೆ. ಅಲ್ಲಿ ಹೋದಾಗ ರೊಕ್ಕ ಖರ್ಜದರೂ ಇರಲಿಕ್ಕೆ ಏನೂ ಅಡ್ಡಿ ಇಲ್ಲ ಅನಿಸಿತು.

‘ಅಭಾ’ದಲ್ಲಿ ಮುಖ್ಯವಾಗಿ ನೋಡಲೇಬೇಕಾದುದು ಅಸೀದ್ ನ್ಯಾಷನಲ್‌ ಪಾರ್ಕ್. ಅಭಾದಿಂದ ಸುಮಾರು 25 ಕಿ.ಮೀ. ದೂರದಲ್ಲಿರುವ ‘ಅಲ್‌ಸೂದ್’ ಎಷ್ಟುವ ಸ್ಥಳವೇ ಸೌದಿ ಅರೇಬಿಯದ ಅತೀ ಎತ್ತರ ಸ್ಥಳ. ಬೆಳಿಗ್ಗೆ 9 ಗಂಟೆಗೆ ನಾವು ಆ ಕಡೆಗೆ ಹೋದೆವು. ಅಲ್‌ಸೂದ್‌ದ ನ್ಯಾಷನಲ್‌ಪಾರ್ಕ್‌ನಲ್ಲಿ ನಾವು ಹೋಗಿಳಿದಾಗ ಜನ ಕೂಡ ಹೆಚ್ಚಿರಲಿಲ್ಲ. ನವಿರಾಗಿ ಚಳಿಕೊರೆಯುತ್ತಿತ್ತು.

ಸುಮಾರು 4,50,000 ಹೆಕ್ಟದ್ ಅಥವಾ 1.11 ಮಿಲಿಯ ಎಕರೆಗಳ ವಿಶಾಲವಾದ ಗಾರ್ಡನ್ ಬೆರೆ ಎಲ್ಲೂ ನೊಡಲಿಕ್ಕೆ ಸಿಗುವದಿಲ್ಲ. ಅಮೆರಿಕನ್ ನ್ಯಾಷನಲ್ ಪಾರ್ಕ್‌ ಸರ್ವಿಸ್‌ದವರು ಇಲ್ಲಿ ಬಂದು ನಕ್ಷೆ ಹಾಕಿ ಕೊಟ್ಟಿದ್ದಾರೆ. ಇದರಲ್ಲಿ 5 ಭಾಗಗಳಿವೆ. ಪ್ರವಾಸಿಗಳು ವಸತಿಗಾಗಿ ಬಂದರೆ ಅವರು ಗುಡಿಸಲು tent ಹಾಕಿಕೊಂಡು ಸ್ಟೌವ್‌ ಇಟ್ಟುಕೊಂಡು ಆರಾಮವಾಗಿ ರಜೆ ಕಳೆಯುತ್ತಾರೆ. ಮತ್ತೊಂದೆಡೆ .ಐತಿಹಾಸಿಕ ಬೌಗೋಳಿಕ ಅಥವಾ ಪುರಾತನ ವ್ಯಾಪಾರಿ ಮಾರ್ಗಗಳನ್ನು ನೋಡುವ ಸ್ಥಳ ಇನ್ನೊಂದೆಡೆ ನಿಸರ್ಗರಮಣೀಯತೆ ವೀಕ್ಷಿಸಲು, ಮತ್ತೊಂದಡೆ ಪಕ್ಷಿ ಸಂಕುಲ
ನಿಸರ್ಗರಮಣೀಯತೆ ನೋಡಲು ಹೀಗೆ ಬೇರೇ ಬೇರೆಯಾಗಿ ಎಲ್ಲ ವ್ಯವಸ್ಥೆ ಮಾಡಿದ್ದಾರೆ. ಕಾರು ಪಾರ್ಕ ಮಾಡಿ ಟೆಂಟ್ ಹಾಕಿಕೊಂಡು ಇರುವವರಿಗೆ ಅವರಿಗೆ ಅನುಕೂಲವಾಗುವಂತೆ ಟಾಯಿಲೆಟ್, ನೀರಿನ ವ್ಯವಸ್ಥೆ ಎಲ್ಲ ಇದೆ. ನಾವು ಇವನ್ನೆಲ್ಲ ನೋಡಿಕೊಂಡು ಐತಿಹಾಸಿಕ ಸ್ಥಳ ನೋಡುವೆಡೆಗೆ ಬಂದೆವು. ಒಂದಕ್ಕಿಂತ ಮತ್ತೊಂದು ಬೆಟ್ಟಗಳು ಕಣ್ಣು ಹರಿಸುವಷ್ಟು ದೂರದವರೆಗೂ ಹರಡಿವೆ. ಯಾವುದೋ ಶಿಕ್ಷೆಗೆ ಗುರಿಯಾಗಿ ಬಿಸಿಲಿಗೆ ಕಟ್ಟಿಹಾಕಿ ದಂತೆನಿಸುತ್ತವೆ. ಅವುಗಳ ಮೇಲಿಂದ ಓಡುವ ಬಿಸಿ‌ಲ್ಲುದುರೆಗಳನ್ನು ನೋಡುವಾಗ ಬೆಟ್ಟಗಳು ನೀರಿಗಾಗಿ ಹಪಹಪಿಸುತ್ತಿವೆಯೇನೋ
ಅನಿಸುತ್ತದೆ. ಕಣಿವೆಗಳಲ್ಲಿಯ ಅಂಕು ಡೊಂಕಾದ ರಸ್ತೆಗಳು ಬರಿಗಣ್ಣಿನಿಂದ ನೋಡುವಾಗ ಅರಬ್ಬೀ ಲಿಪಿಯಲ್ಲಿ ರುಜು ಮಾಡಿದಂತೆನಿಸುವದು. ಅಲ್ಲಿ ನಿಂತು ಕೂಲಂಕಷವಾಗಿ ನೋಡಲು ಎರಡು ದುರ್ಬಿನ್‌ಗಳನ್ನು ಹಾಕಿದ್ದಾರೆ. ಯಾರು ಬೇಕಾದರೂ ಯಾವಾಗ ಬೇಕಾದದೂ ನೋಡಬಹುದು ದುರ್ಬನ್‌ಗಳಿಗೆ ಹೊಂದಿಕೊಂಡಿರುವ ಬೋರ್ಡಗಳಲ್ಲಿ
ಬೆಟ್ಟದ ಕಣಿವೆಮಾರ್ಗಗಳು ಯಾವವು, ಏನು, ಹೇಗಿವೆ ಅವುಗಳ ವಿವರ ಎಲ್ಲ ಇದೆ. ದುರ್ಬನ್ ಮೂಲಕ ನಾವು ಪ್ರಪಾತದ ಮಾರ್ಗಗಳ ದೃಶ್ಯಗಳು ಸಾವಧಾನವಾಗಿ ನೋಡಿದಾಗ ನಂಬಲಾರದಷ್ಟು ವಿಷಯಗಳು ತಿಳಿದುಬಂದವು. ದುರ್ಬೀನ್‌ನಿಂದ ಕಾಣುವ ರಸ್ತೆಗಳು ಒಂದು ಇತಿಹಾಸವನ್ನೇ ಹೊರಹಾಕುವ ಸಾಮರ್ಥ್ಯ ಹೊಂದಿವೆ. ನೂರಾರು
ವರ್ಷಗಳಿಂದ ಅಲ್ಲಿಯೂ ಸಂಸೃತಿ ಇತ್ತು ಅನ್ನುವದಕ್ಕೆ ಸಾಕ್ಷಿಯಾಗಿ ಈಗಲೂ ಕಣಿವೆಯ ಪ್ರಪಾತಗಳಲ್ಲಿ ಮಣ್ಣಿನ ಮನೆಗಳು ಕಾಣುವವು. ಮಳೆಯಾಗಿ ನೀರು ಹರಿದುಹೋಗದಿರಲೆಂದು ಮಾಡಿಕೊಂಡ ಕೆಲವು ಸಣ್ಣ ಹೊಲಗಳು ಕಾಣಿಸುವವು. ದುರ್ಬಿನ್ ಮುಖಾಂತರ ನಡೆದು ಬರುತ್ತಿರುವ ವ್ಯಾಪಾರಿ ಮಾರ್ಗಗಳು ಒಂಟೆಗಳ ಮೇಲೆ ಸಾಮಾನು- ಗಳ ಗಂಟು ಮೂಟೆ ಹೊರೆಸಿ ತಾವೂ ಕುಳಿತು ನಿಧಾನವಾಗಿ ಗುಂವು ಗುಂಪಾಗಿ ಹೋಗುತ್ತಿರುವ ಅರೇಬಿಯನ್ ವ್ಯಾಪಾರಿಗರ ಚಿತ್ರ ಈ ಠಸ್ತೆಗಳಲ್ಲಿ ಊಹಿಸಿಕೊಂಡೆ. ಈಗ ಆ ರಸ್ತೆಗಳಗುಂಟ ಸಣ್ಣ ಪುಟ್ಟ ಫ್ಯಾಕ್ಟರಿಗಳೇನೋ ಇವೆ. ಹೊಗೆ ಕೊಳವೆಯಿಂದ ಹೊರಬೀಳುತ್ತಿದೆ. ಹೊರಗಡೆ ಸಾಮಾನು ತುಂಬಿಕೊಳ್ಳುವ ಟ್ರಕ್‌ದಂತಿರುವ ಪಿಕ್ಅಪ್‌ಗಳು ಸಾಲಾಗಿ ನಿಂತಿದ್ದು ಜನ ಓಡಾಡುತ್ತಿದ್ದರು. ಅದೊಂದು ‘ವಾಡಿಹಳಿ’ ಎನ್ನುವ ಸಣ್ಣ ಊರು. ‘

ಈ ಪಾರ್ಕ್‌ದಲ್ಲಿ ಸಾಕಷ್ಟು ತರಹದ ಗಿಡಗಂಟೆಗಳು, ಹೂ ಬಳ್ಳಿಗಳು, ಕಾಣಸಿಗುವವು. ನಮ್ಮ ಕಡೆಯ ಪಾರ್ಕ್‌ದಲ್ಲಿ- ಯಂತೆ ಸೂಕ್ಷ್ಮವಾದ ಗಿಡಬಳ್ಳಿಗಳಿಲ್ಲ. ಇವು ಮರುಭೂಮಿಯಿ ಗಿಡ-ಬಳ್ಳಿ ಹೂವುಗಳು. ಇಲ್ಲಿ ಚಳಿಗಾಲದಲ್ಲಿ ಹಿಮ ಬೀಳುವದರಿಂದ ಆಗೀಗ ಅಷ್ಟಿಷ್ಟು ಮಳೆಯಾಗುವದರಿಂದ ಹಸಿರು-ಹೂವು ಹೊಂದಿಕೊಂಡು ಈ ಭಾಗವೆಲ್ಲ ಸುಂದರವಾಗಿ ಕಾಣುವದು.

ಇಲ್ಲಿ ಮರೆಯದೇ ನೋಡುವಂತಹ ಇನ್ನೊಂದು ಸ್ಥಳ ಹದ್ದುಗಳ ಅಥವಾ ಗಿಡಗಗಳ ಕಣಿವೆ. ನ್ಯಾಷನಲ್ ಪಾರ್ಕಿದಿಂದ ಮರಳಿಬರುವಾಗ ಅಲ್ಲಿಯೇ ಇರುವ ಅಂಕುಡೊಂಕಾದ ರಸ್ತೆಗಳಿಂದ ಒಳಗಡೆ ಹೋದರೆ ಅಲ್ಲಿ ಬೋರ್ಡ್‌ ಕಾಣುವದು.
ಹಾಗೇ ಮುಂದೆ 4-5 ಕಿ.ಮೀ. ಒಳಗೆ ಹೋಗಬೇಕು. ಕೆಲವು ಸಮಯದಲ್ಲಿ ಅಲ್ಲಿ ಒಳಗೆ ಹೋಗುವದು ನಿಷೇಧವಿರುತ್ತದೆ. ಅಂದರೆ ವಿ.ಐ.ಪಿ.ಗಳು ಗಿಡಗಳ ಹಿಡಿಯುವ, ಆಡುವ, ತರಬೇತಿ ಕೇಂದ್ರ ಇದೆ. ಅವರಿದ್ದಾಗ ಅವರ ತರಬೇತಿ ನಡೆದಾಗ ಅಲ್ಲಿ ಯಾರೂ ಹೋಗುವಂತಿಲ್ಲ. ನಾವು ಹೋದಾಗ ಅಂತಹ ಯಾವ ಅವರ ಕಾರ್ಯಕ್ರಮಗಳೂ ಇರಲಿಲ್ಲ. ಅರಾಮವಾಗಿ ಒಳಗೆ ಹೋದೆವು.

ಅರ್ಧ ಕಿ.ಮೀ. ದಲ್ಲಿಯೇ ಆಳವಾದ ಕಣವೆಗಳು, ಕಂದರಗಳು. ಜನರು ಯಾರೂ ಇರಲಿಲ್ಲ. ತಲೆಯ ಮೇಲೆಯೇ ದೊಡ್ಡ ದೊಡ್ಡ ರಣಹದ್ದುಗಳು ಓಡಾಡುತ್ತಿದ್ದಂತೆ ಈ ಕಣಿವೆಗಳೊಳಗಿಂದ ಬರುವ ಪಕ್ಷಿಗಳ ಚಿಲಿಪಿಲಿನಾದ ಅತಿ ಸ್ಪಷ್ಟ. ಅಷ್ಟೇ ಇಂಪು. ಸುಮಾರು 300 ಜಾತಿಯ ಪಕ್ಷಿಗಳಿವೆಯಂದು ಬೋರ್ಡ್‌ದಲ್ಲಿ ಓದಿದೆವು . ಸಾಕಷ್ಟು ಬಗೆಯ ಬಣ್ಣ ಬಣ್ಣದ ಪಕ್ಷಿಗಳೂ ಕಂಡವು. ಅದರೆ ಹೆಚ್ಚಾಗಿ ಗಿಡಗಳಲ್ಲಿ ಹದ್ದುಗಳದೇ ಸಾಮ್ರಾಜ್ಯ. ಈ ಕಣಿವೆಗಳೊಳಗೆ ಪ್ರಮುಖವಾಗಿ ಎರಡು
ಜಾತಿಯ ಪಕ್ಷಿಗಳು ಹಾರಾಡುವದು ಕಾಣುತ್ತೇವೆ. ಅವು ಇಷ್ಟು ವಿಚಿತ್ರವೆಂದರೆ ಸಿಂಹದ ದೇಹದಂತೆ ಎದೆ ವಿಶಾಲ, ಕಾಲ ದಪ್ಪಾಗಿದ್ದು ಹದ್ದಿನಂತೆ ಕೊಕ್ಕೆ ರಕ್ಕೆಗಳಿ ರುತ್ತವೆ. ಒಂಥರಾ ಕಾಲ್ಪನಿಕ ಪಕ್ಷಿಯಂತೆನಿಸಿತು. ಆದರೆ ಅಷ್ಟೇ ನಿಜ ಇಲ್ಲಿದೆ. ಇನ್ನೊಂದಕ್ಕೆ ಕಪ್ಪು ಪತಂಗ ಎಂದೇ ಹೆಸರು. ನೋಟದಲ್ಲಿ ಪೂರ್ತಿ ಕಪ್ಪಾಗಿದ್ದು ಬಹಳ ಮೇಲೆ ಮೇಲಕ್ಕೆ ಹಾರುತ್ತಿರುತ್ತವೆ.

ಇಕ್ಕಟ್ಬಾದ ಕಣಿವೆಯೊಳಗಿನಿಂದ ತೂರಿ ಬರುವ ಸುಂಯ್‌ಗಾಳಿಯಿಂದ ಈ ಪಕ್ಷಿಗಳು ನಿರಾತಂಕವಾಗಿ ಎರಡು ತಾಸುಗಳವರೆಗೆ ಹಾರಾಡುತ್ತವೆ. ಅವು ಶಕ್ತಿ ಉಪಯೋಗಿಸುವುದೇ ಬೇಡ. ಪಕ್ಕಗಳನ್ನು ಸ್ವಲ್ಫ ಗಾಳಿಗನುಗುಣವಾಗಿ ಹೊಂದಿಸಿಕೊಂಡರೆ ಸಾಕು. ಈ ಗಾಳಿಯೇ ನಿಧಾನವಾಗಿ ಅವುಗಳಷ್ಟು ತೂಗಾಡಿಸುತ್ತದೆ. ಕಂದರದ  ಗಿಡಗಂಟೆಗಳಲ್ಲಿರುವ ಹಲ್ಲಿ ಇತರ ಕೀಟಗಳಷ್ಟು ಹಿಡಿಯುವಲ್ಲಿ ಅವು ಅತಿ ಚಾಣಾಕ್ಷ. ಬೈನಾಕ್ಯುಲರ್ ಮುಖಾಂತರ ಅವುಗಳ ಗೂಡು ಒಳಗಿನ ಸಂಸಾರ ಎಲ್ಲ ನೋಡಲು ತುಂಬಾಸುಂದರವನಿಸುವದು. ಸ್ವಲ್ಫ ಹೊತ್ತಿನಲ್ಲಿ ಹದ್ದುಗಳು ಬೇಟೆಯಾಡುವದು ಕಿರಿಚಾಡುವದು ಮಾಡತೊಡಗಿದವು. ಈ ಪ್ರಶಾಂತ ವಾತಾವರಣದಲ್ಲಿ ಭಯಾನಕವೆನಿಸಿದರೂ ನಿಜವಾಗಿಯೂ ಖುಷಿಪಟ್ಟೆವು. ನಮ್ಮ ಹುಡುಗರಂತೂ ಅಲ್ಲಿಂದ ಹೊರಡಲಿಕ್ಕೇ ತಯಾರಿಲ್ಲ. ಟಿ.ವಿ. ಯಲ್ಲಿ ಬರುವ ಇಂಗ್ಲೀಷ್ ಕಾರ್ಟೂನ್ ಚಿತ್ರಗಳಲ್ಲಿ ದೊಡ್ಡ ರಣಹದ್ದು, ಮಾತು ಕೇಳದ ಹುಡುಗರನ್ನು ಎತ್ತಿಕೊಂಡು ಹೋಗಿ ಆಳವಾದ ಪ್ರಪಾತದಲ್ಲಿ ಚೆಲ್ಲಿದ್ದು ನೆನಪಿಸಿಕೊಂಡು ಮಗ ಅಂತೂ ನನ್ನ ಪೂರ್ತಿಯಾಗಿ ಗಟ್ಟಿ ಹಿಡಿದುಕೊಂಡುಬಿಟ್ಟಿದ್ದ. ಕಾರು ಶುರುಮಾಡಿದರೂ ಹುಡುಗರಿಗೆ ಭಯಾನಕತೆ ಅನಿಸುತ್ತಿದ್ದರೂ ಇನ್ನೆಷ್ಟು ನೋಡುವ ಆಸೆ. ಮತ್ತೆ ಸ್ವಲ್ಫ ಹೊತ್ತು ಈ ವಿಚಿತ್ರ ವಿಹಂಗಮ ನೋಟ ನೋಡಿ ಅಲ್ಲಿಂದ ಹೊರಬಂದೆವು.

ಈ ದೇಶದ ಒಂದು ಬಿಗಿ ಪದ್ಧತಿ ಏನೆಂದರೆ ಸಾರ್ವಜನಿಕವಾಗಿ ಎಲ್ಲಿಯೂ ಫೋಟೋ ತೆಗೆದುಕೊಳ್ಳಕೂಡದು. ತೆಗೆಯುವಾಗ ಆಕಸ್ಮಿಕ ಏನಾದರೂ ಸಿಕ್ಕುಬಿದ್ದರೆ ಕ್ಯಾಮರಾ ಹೋಗುವದರ ಜೊತೆಗೆ ಒಂದಿಷ್ಟು ದಂಡ ಕೂಡ ಕೊಡಬೇಕಾಗುವದು. ನಾವು ಹುಷಾರಾಗಿದ್ದುಕೊಂಡೇ ಅಲ್ಲಲ್ಲಿ ಪೋಟೋಗಳು ಹಾಗೂ ವಿಡಿಯೋ ಕ್ಯಾಮರಾದಿಂದಲೂ ಚಿತ್ರಿಸಿಕೊಂಡೆವು.

ಫೋಟೋ ನಿಷೇದಕ್ಕೂ ಇಲ್ಲಿ ಸಾಕಷ್ಟು ಕಾರಣಗಳಿವೆ. ಸುತ್ತಲಿನ ಗಲ್ಫ್ ದೇಶಗಳಲ್ಲೆಲ್ಲ ಯುದ್ದಗಳು ನಡೆದಿದ್ದು ಈಗ ಸರ್ವಸಾಮಾನ್ಯವಾಗಿ ಎಲ್ರಿಗೂ ಗೊತ್ತಿರುವ ವಿಷಯವೇ ಆಗಿದೆ. ಅದಕ್ಕೆ ಗೂಢಚಾರರೇನಾದರೂ ಪೋಟೊ ತೆಗೆದುಕೊಂಡು ಪ್ರಮುಖ ಸ್ಥಳಗಳ ಚಿತ್ರ ಶತೃಗಳಿಗೆ ಒದಗಿಸಿ ಮುಂದೆ ಸಮಸ್ಯೆಗಳಾಗಬಹುದೆಂಬ ಸಂಶಯ ಅವರಿಗೆ ಇದ್ದೆ ಇದೆ.

ಪಾರ್ಕುಗಳು-ಕಣಿವೆಗಳೆಂದು ಅಡ್ಡಾಡಿ ಎಲ್ಲರಿಗೂ ಸುಸ್ತು ಹೊಡೆದು ಹಸಿವೆಯಾಗಿತ್ತು. ಮಧ್ಯಾನ್ಹ ಇಂಟರ್‌-ಕಾಂಟಿನೆಂಟಲ್  ಹೊಟೆಲ್‌ಗೆ ಬಂದು ಓಳ್ಳೆಯ ಊಟ ಮಾಡಿದೆವು.

ಅಭಾವ ಸುತ್ತಮುತ್ತಲಿನ ಪ್ರದೇಶ ಕಲ್ಲು-ಉಸುಕು-ಮಣ್ಣು ಮಿಶ್ರಿತಗಳಿಂದ ಕೂಡಿದ್ದರೂ ಅದರ ಸೌಂದರ್ಯವೇ ಬೇರೆ. ಪ್ರತಿವರ್ಷ2-3 ದಿವಸ ಅಷ್ಟೇ; ಸುರಿಯುವ ಧಾರಾಕಾರ ಮಳೆಯಿಂದ ಕಣಿವೆಗಳೆಲ್ಲ ತುಂಬಿ ಹರಿದು ಹೋಗಿ ಬಿಡುತ್ತವೆ. ಉಸುಕು-ಕಲ್ಲುಗಳಿಂದ ಈ ಕಣಿವೆ ನೆಲ ತುಂಬಿರುವದರಿಂದ ನೀರು ನೆಲದೊಳಗೆ ಇಂಗುವದೇ ಇಲ್ಲ. ಹೀಗಾಗಿ ವಾತಾವರಣ ಮತ್ತೆ ಒಣ. ಸ್ವಲ್ಪ ಎತ್ತರ ಪ್ರದೇಶಗಳಲ್ಲಿ ಅಲ್ಲಲ್ಲಿ ಫಲವತ್ತಾದ ನೆಲ ಇದೆ. ಮಳೆಯಾದಾಗ ಇಳಿಜಾರು
ಪ್ರದೇಶದ ಫಲವತ್ತಾದ ಮಣ್ಣು ಕೊರೆದು ಹೋಗದಂತೆ ಕಲ್ಲಿನ ಒಡ್ಡುಗಳನ್ನು ಸ್ತರ ಸ್ತರವಾಗಿ ಕಟ್ಟಿ ಮಣ್ಣು ಭದ್ರವಾಗಿ ಕಾಯ್ದುಕೊಂಡಿದ್ದಾರೆ. ಅಲ್ಲಲ್ಲಿ ಗೋದಿ ಬೆಳೆ-ಗೋವಿನ ಜೋಳ, ಕಲ್ಲಂಗಡಿ ಹಣ್ಣುಗಳು ಅಷ್ಟಿಷ್ಟು ಕಾಯಿಪಲ್ಲೆ ಕಾಣುವದು.

ಇತ್ತೀಚೆಗೆ ಸರಕಾರದವರು ಅಮೂಲ್ಯ ನೀರು ಕಾಯ್ದುಕೊಳ್ಳಲು ಡ್ಯಾಮ್ ಗಳನ್ನು ಅಲ್ಲಲ್ಲಿ ಕಟ್ಟುವ ಯೋಜನೆ ಹಾಕಿಕೊಳ್ಳುತ್ತಿದ್ದಾರೆ. ನಮ್ಮ ಕಡೆಯಂತೆಯೇ ಭೂಮಿಗಳನ್ನು ಎತ್ತುಗಳಿಂದ ಸಾಗುವಳಿ ಮಾಡುವದು, ಕೈಗಳಿಂದಲೇ ಬೆಳೆ ಕೊಯ್ಯುವದು ಕಾಣಿಸುತ್ತವೆ. 7-8 ವರ್ಷಗಳಿಂದೀಚೆಗೆ ಸೌದಿ ಸರ್ಕಾರ ರೈತರಿಗೆ ಒಳ್ಳೊಳ್ಳೆಯ ಮಶಿನರಿ ಸಾಮಾನುಗಳು-ಗೊಬ್ಬರ ಕಾಳು ಪುಕ್ಕಟೆಯಾಗಿ ಒದಗಿಸಿ ಹೆಚ್ಚೆಚ್ಚು ಬೆಳೆಯಲು ಸಹಾಯ ಮಾಡುತ್ತಿದ್ದಾರೆ. ಈಗ ಸಾಕಷ್ಟು ಗೋದಿ ಬೆಳೆಯುತ್ತಿದ್ದಾರೆ.

ನಮ್ಮಲ್ಲಿಯಂತೆಯೇ ಇಲ್ಲಿಯೂ ಹಳ್ಳಿಜೀವನ. ಹಳ್ಳಿಗರು ಪರಿಶ್ರಮಿಗರು. ಪಟ್ಟಣದ ಅರಬರು ಶ್ರೀಮಂತರು, ಮೆರೆಯುವವರು, ಆಲಸಿಗಳು. ಈ ಹಳ್ಳಿಗರು ಮನೆ ಆಕಳು-ಎತ್ತು-ಕರಿ-ಕೋಳಿ-ಒಂಟೆ ಎಂದು ಸಮಾಧಾನವಾಗಿರುವ ಜನ. ಈ ಕಡೆಯ ಅಥವಾ ಇಳಿಜಾರು ಪ್ರದೇಶದ ಹಳ್ಳಿಯ ಗುಂಪು ಜನಾಂಗದವರಿಗೆ ಅಲೆಮಾರಿಗಳು (Nomads) ಎನ್ನುವರು. ಬುಡ್‌ವಿನ್ ಜನಾಂಗದಂತೆಯೇ ಇವರು. ಹೆಂಗಸರು ಹ್ಯಾಟ್ (ದಕ್ಷಿಣ ಅಮೇರಿಕನ್ನರು ಉಪಯೋಗಿಸುವ ತರಹ) ಹಾಕಿಕೊಂಡು ಕುರಿ ಕಾಯುವದು ಇಲ್ಲಿ ಸಾಮಾನ್ಯ. ಪೋಟೊಗೆ ಎಂದೂ ಮುಖ ತೋರಿಸುವದಿಲ್ಲ. ಪೋಟೋ ತೆಗೆದುಕೊಳ್ಳುತ್ತೇವೆ ಅಂದರೆ ಸಿಟ್ಟು ಮಾಡುತ್ತಾರೆ. ಗಂಡಸರು ಉದ್ದಾದ ನಿಲುವಂಗಿ ಹಾಕಿಕೊಂಡು ಸೊಂಟಕ್ಕೆ ದಪ್ಪ್ತಚರ್ಮದ ಬೆಲ್ಟ್‌ಹಾಕಿ ಅದರೊಳಗೆ ಚೂಪಾದ ಕತ್ತಿ ಸಿಗಿಸಿಕೊಂಡಿರುತ್ತಾರೆ. ಸುತ್ತಲಿನ ಕಂದರದ ಚಿರತೆ-ನರಿಗಳಿಂದ ಸುರಕ್ಷಿಸಿಕೊಳ್ಳಲು ಇದು ನೆರವು. ಆದರೆ ಈ ತರಹದ ಪೂರ್ತಿಡ್ರೆಸ್ಸ್ (ಸೊಂಟಕ್ಕೆ ಕತ್ತಿ ಇರುವ) ಉಪಯೋಗ ಇರಲಿ ಬಿಡಲಿ, ಅಭಾದಲ್ಲಾಗಲೀ, ಜೆಡ್ಡಾದಲ್ಲಾಗಲೀ ಅಲ್ಲಲ್ಲಿ ಬಹಳ ನೋಡುತ್ತೇವೆ.

‘ಅಭಾ’ವದಿಂದ ಸುಮಾರು 35 ಕಿ.ಮೀ. ಅಂತರದಲ್ಲಿ “ಖಮಿಸ್ ಮುಷಾಯಿತ್” ಎನ್ನುವ ಊರು. ವಿಶಾಲ ರಸ್ತೆ-ಹನಗಳ ಅತಿಯಾದ ಓಡಾಟಗಳಿಂದ ಇದೇನು ಸಣ್ಣ ಊರು ಅನಿಸಲಿಲ್ಲ. ಹೌದು, ಅದು ದೊಡ್ಡ ಊರು ಮಿಲಿಟರಿ ಸ್ಥಳವಾಗಿ ಅರಿಸಿಕೊಂಡಿ ದ್ಧಾರೆ. ಮಿಲಿಟರಿ ಸೈನಿಕರ ಟೈನಿಂಗ್ ಸ್ಕೂಲ್ ಇದೆ. ಅಭಾದಲ್ಲಿ ಔದ್ಯೋಗಿಕ ಬೆಳವಣಿಗೆಗೆ
ಅಸ್ಪದ ಕೊಡದೇ ತನ್ನದೇ ಒಂದು ಸಂಸ್ಕೃತಿ ಇಟ್ಟುಕೊಂಡು ನೆರೆಯ-ಪಟ್ಟಣ ಖಮಿಸ್‌ಗೆ ಔದ್ಯೋಗಿಕ ಬೆಳವಣಿಗೆಗೆ ಬಿಟ್ಟುಕೊಟ್ಟಿದೆ. ಅಂತೆಯೇ ಖುಮಿಸ್ ತಲುಪುವವರೆಗೆ ಸುಮಾರು 20-25 ಕಿ.ಮೀ.ಗಳಷ್ಟು ಸುತ್ತೆಲ್ಲ ಚಿಕ್ಕಪುಟ್ಟ  ಫ್ಯಾಕ್ಟರಿಗಳು ಕಾಣಿಸುತ್ತವೆ. ಇವುಗಳೂ ಹೆಚ್ಚಾಗಿ ವಾಹನಗಳಿಗೆ ಸಂಬಂಧಿಸಿದ ಫ್ಯಾಕ್ಟರಿಗಳೆಂದರೂ ಅಡ್ಡಿ ಇಲ್ಲ.

‘ಖಮಿಸ್’ ಊರು ಸಮನೆಲದ ಮೇಲಿದೆ. ದೃಷ್ಟಿದೂರವದವರೆಗೆ ಸುಂದರವಾದ ಮನೆಗಳು, ಗಾರ್ಡ್‌ನ್‌ಗಳು ಕಾಣುವವು 85ರಿಂದ ಈಚೆಗಷ್ಟೇ ಊರಿನೊಳಗೆಲ್ಲ ಸಾಕಷ್ಟು ಸುಧಾರಿಸಿ ಅಲ್ಲಲ್ಲಿ ಸ್ಮಾರಕಗಳು ಇಟ್ಟಿದ್ಧಾರೆ. ನೀರಿನ ಕಾರಂಜಿಗಳು ಬುಡ್‌ವಿನ್ ವಾಸಿಸುವ ಮನೆ ಭಾವಿ (ನೀರು ಎತ್ತುವ) ಇನ್ನಿತರ ಕೆಲವು ಅರೇಬಿಯದ ಹಳೆಯ ತಮ್ಮದೇ ಆದ ಸಾಂಸ್ಕೃತಿಕ ಅಂಶಗಳಷ್ಟು ಎತ್ತಿ ವಿವಿಧ ವಿನ್ಯಾಸಗಳಲ್ಲಿ ಸೆರೆಹಿಡಿದಿಟ್ಟಿದ್ದಾರೆ.

ಊರ ಮಧ್ಯದಲ್ಲಿ ಗದ್ದಲ ಜಾಸ್ತಿ. ನೂರಾರು ಸಣ್ಣ ದೊಡ್ಡ ಅಂಗಡಿಗಳಿವೆ.  ಕೇರಳಿಗರು ಎಲ್ಲದರಲ್ಲೂ ಜಾಣರು. ಗಲ್ಫ್ ತುಂಬೆಲ್ಲ ಅವರವೇ ಸೀರೆ ಅಂಗಡಿಗಳು. ಇನ್ನಿತರ ಭಾರತೀಯ ದಿನಸಿಗಳು, ಅಂಗಡಿಗಳನ್ನು, ಇಟ್ಟುಕೊಂಡವರೂ ಅವರೇ ಅವರೇ ಅಂದರೆ ಸ್ವತಃ ಅವರದೇ ಆಂಗಡಿಗಳಲ್ಲ; ಯಾವನಾದರೂ ಶ್ರೀಮಂತ ಅರಬ್ಬಿ ಒಂದಿಷ್ಟು ಹಣ-ಸ್ಥಳ ಕೊಟ್ಟು 4-5 ಕೇರಳಿಗಳಿಗೆ ಅಂಗಡಿ ತೆಗೆದುಕೊಳ್ಳಲಿಕ್ಕೆ ಹೇಳಿ ಅವರ ಹಣಕಾಸಿನ ವ್ಯವಸ್ಥೆ ತನ್ನ ಅಧೀನದಲ್ಲಿಟ್ಟು- ಕೊಂಡು ಇವರಿಗೆ ಇಂತಿಷ್ಟು. ಹಣ ಎಂದು ಹೊಂದಿಸಿಕೊಂಡು ಒಂದು ತಿಳುವಳಿಕೆಯ ಮೇಲೆ ಶುರು ಮಾಡಿರುತ್ತಾರೆ.
ಕೇರಳಿಗರು ಬಹಳ ವಿಶ್ವಾಸದಿಂದ ಅವರೊಂದಿಗೆ ಹೊಂದಿಕೊಂಡು ಹೋಗುತ್ತಾರೆ, ನಮ್ಮ ಕರ್ನಾಟಕದ ಜನ ಅಲಸಿಗಳೋ ಅಥವಾ ಒಣ ಸ್ವಾಭಿಮಾನಿಗಳೋ ಎನೋ; ಎಲ್ಲಿಯೂ ಇಂತಹ ಕೆಲಸದಲ್ಲಿ ಮುಂದಾದದು ಇಲ್ಲಿ ಕಾಣಿಸಲೇ ಇಲ್ಲ.

ಕೆಲವೆಡೆ ಒಳ್ಳೊಳ್ಳೆ ಷಾಪಿಂಗ ಕಾಂಪ್ಲೆಕ್ಸ್‌ಗಳಿವೆ. ಇನ್ನೂ ಕೆಲವೆಡೆ ಹಾಗೆ ಕೊಡಕೊಳ್ಳುವ ವ್ಯವಹಾರ ನಡೆಸಿರುತ್ತಾರೆ. ಖಮೀಸ್‌ದ ಸುತ್ತಲಿನ ಹಳ್ಳಿಗರು ಕೊಡಕೊಳ್ಳುವ ವ್ಯವವಹಾರದಲ್ಲಿ ಮಗ್ನರಾಗಿರುವದು ಇಲ್ಲಿ ಸಾಮಾನ್ಯ. ಹಳ್ಳಿ
ಗಳಲ್ಲಿ ತಾವು ಮಾಡಿದ ಬಿದರಿನ ಬುಟ್ಟಿ ಟೊಪ್ಪಿಗೆ, ಚಾಕು ಮುಂತಾದವು ತುಂಬಿಕೊಂಡು ಬಂದು ಇಲ್ಲಿ ಮಾರಿ ತಮಗೆ ಬೇಕಾದ, ಇತ್ತೀಚಿಗೆ ಇಲ್ಲೆಲ್ಡ ಸಿಗುವ ಫ್ಯಾನ್ಸಿಗಳನ್ನು ಒಯ್ಯುತ್ತಾರೆ. ನಮ್ಮ ಕಡೆಯ ಹಳ್ಳಿಯಂತೆಯೇ ಇಲ್ಲಿಯೂ ಕೂಡಾ
ಕಾಳು ಕಡಿ ಮಾರಿ ಚರುಮುರಿ, ಭಜಿ, ಎಣ್ಣೆ, ಬಾಳೆಹಣ್ಣು, ಒಯ್ಯುವಂತೆ. ಇಲ್ಲಿಯ ಹಳ್ಳಿಯ ಜನರಿಗೆ ಹೊರಜಗತ್ತಿನ ಸಂಪರ್ಕ ಹೋಗಲಿ ತಮ್ಮ ನೆರೆಯ ದೊಡ್ಡ ಊರುಗಳಲ್ಲಿ ಏನೇನು ನಡೆಯುತ್ತಿದೆ ಅನ್ನುವ ವಿಚಾರವೇ ತಿಳಿದಿಲ್ಲ. ಇವರಲ್ಲಿ ಒಂಟೆ ಓಡಿಸುವವರೇ ಹೆಚ್ಚು. ಇತ್ತೀಚಿಗಷ್ಟೇ ಪಿಕ್ಅಪಗಳು ಟೆಂಪೊಗಳು ಓಡಿಸುತ್ತಿದ್ದಾರೆ. ಸರ್ಕಾರದವರು
ಇತ್ತೀಜಿಗೆ ಖಮೀಸದ ಸುತ್ತೆಲ್ಲ ಸುಮಾರು 400-500 ಫ್ಯಾಕ್ಟರಿಗಳು ಬರುವಂತೆ ಪ್ಲ್ಯಾನ್‌ ಹಾಕುತ್ತಿದ್ದಾರೆ.

ಅಭಾ, ಖಮೀಸ್ ಮಧ್ಯದಲ್ಲಿಯೇ ‘ಹಾಜ್ಲಾ’ ಎನ್ನುವಲ್ಲಿ ವಿಮಾನ ನಿಲ್ದಾಣವಿದೆ. ಇಲ್ಲಿಂದ ಜೆಡ್ಡಾ, ರಿಯಾದಕ್ಕೆ ಸಾಕಷ್ಟು ವಿಮಾನಗಳ ಇದೆ. ಅಂತೆಯೇ ಬೇಸಿಗೆಯ ರಜೆಯಲ್ಲಿ ಇಲ್ಲಿರುವ ಹೋಟೆಲ್‌ಗಳು, ವಿಮಾನಗಳು ಪೂರ್ತಿ ಬುಕ್ ಆಗಿರುತ್ತವಂತೆ. ಒಟ್ಬಾರೆ ಖಮಿನ್ ಮುಷಯತ್‌ನಲ್ಲಿ ಕಾರಿನಿಂದ 2-3 ರೌಂಡ್ ಹೊಡೆದರೆ ಸಾಕು 1-2 ತಾಸಿಲ್ಲ. ಮರುದಿನ ಬೆಳಿಗ್ಗೆ ಬೇಗನೆ ಎದ್ದು ಚೆಡ್ಡಾಕ್ಕೆ ಹೊರಡಬೇಕಾದ್ದರಿಂದ ಸಂಜೆ ಬೇಗನೆ ಖಮೀಸ್‌ದಿಂದ ಮರಳಿದೆವು. ಸಂಜೆ- ರಾತ್ರಿ ಸುಮಾರು 9ಕ್ಕೆ ಅಭಾದ ಒಂದು ದೊಡ್ಡ ಷಾಪಿಂಗ್ ಕಾಂಪ್ಲೆಕ್ಸ್ ಒಳಗೆ ಹೊಕ್ಕು ಸುತ್ತಾಡಿ ನೋಡಿ ಸ್ಥಳೀಯ ಕೆಲವು ಪ್ರಸಿದ್ಧ ಸಾಮಾನುಗಳಾದ ಬಿದಿರಿನ ಅರೇಬಿಯನ್ ಹ್ಯಾಟ್, ಬಿದಿರಿನ ಬುಟ್ಟಿ ಬೆಲ್ಟ್ ಸಮೇತ ಇರುವ ಬಂಗಾರ ಬಣ್ಣದ ಕತ್ತಿ (ಸಣ್ಣ ಚಾಕು) ಅದು ಇದು ಕೊಂಡು ಕಾರಿಗೆ ಹಾಕಿ ಒಂದಿಷ್ಟು ತಿಂಡಿ ತಿನಿಸುಗಳನ್ನು ತುಂಬಿಕೊಂಡು ಹೋಟೆಲ್ ಸೇರಿದಾಗ ರಾತ್ರಿ 10 ಹೊಡೆಯಿತು.

ಮರುದಿನ ಬೆಳಿಗ್ಗೆ 6 ಗಂಟೆಗೆಯೇ ಹೊರಡಬೇಕೆಂದರೂ 8 ಗಂಟೆ ಆಯಿತು. ಮತ್ತೊಂದು ಸಲ ನಕಾಶದಿಂದ ಹಾದಿ ನೋಡಿಕೊಂಡು – ಓದಿಕೊಂಡು ಹೊರಟೆವು. ಮಕ್ಕಳಿಬ್ಬರಿಗೂ ಹೊರಡುವದು ಬೇಡವಾಗಿತ್ತು. ಇನ್ನೂ ಆರಾಮವಾಗಿ ತಿರುಗಾಡುವ ಆಸೆ ಅವರದು. ಅದರೆ ಗುತ್ತಿಯವರಿಗೆ ರಜೆ ಇರಲಿಲ್ಲ, ಮೇಲಾಗಿ ಹೆಚ್ಚಾಗಿ ಎಲ್ಲಾ ನೋಡಿದ್ದೂ ಆಗಿತ್ತು. ನಾವು ಬರುವಾಗ ಬಂದ ಹಾದಿಯಿಂದಲೇ ಮತ್ತೆ ಮರಳಿ ಹೋಗುವ ವಿಚಾರ ಮಾಡಲಿಲ್ಲ. ಅದು ಗುಡ್ಡೆ ಸುತ್ತಿ ಬಳಸಿ ಮೇಲೆ ಬಂದದ್ದಾಗಿತ್ತು. ಜೆಡ್ಡಾ ಸಮುದ್ರ್ಭ ಸಮಾಪಾತಳಿಯಲ್ಲಿದೆ. ಅಲ್ಲಿಂದ ಅಗಲೇ ಗುಡ್ಡ ಸುತ್ತುತ್ತ, ಏರುತ್ತ ಸೌದಿ ಅರೇಬಿಯದ ಅತೀ ಎತ್ತರದ ಸ್ಥಳವಾದ ಇಲ್ಲಿಗೆ ಬಂದಿದ್ದೆವು (10,000 ಫೂಟ್ ಅಥವಾ 3048 ಮೀಟರ್ ಎತ್ತರದ ಮೇಲೆ) ಇನ್ನು ಸ್ವಲ್ಪ ಷಾರ್ಟ್ ಕಟ್ ಮಾಡಿಕೊಂಡು ಬೇರೆ ಹಾದಿ ಮೂಲಕ ಇನ್ನಿತರ ಬೇರೆ ಬೇರೆ ಊರು ನೋಡುತ್ತೆ ಹೋದರಾಯ್ತೆಂದು ವಿಚಾರ ಮಾಡಿ ಹೊರಟೆವು.

ಅಭಾದಿಂದ ಸುಮಾರು 60 ಕಿ.ಮೀ. ದೂರದಲ್ಲಿ ‘ಮುಹಾಯಿಲ್’ ಎನ್ನುವ ಊರು ಅಲ್ಲಿಂದ ಪಶ್ಚಿಮಾಭಿಮುಖವಾಗಿ ಕಣಿವೆಮಾರ್ಗ ಇಳಿದು ಸಮುದ್ರ ದಂಡೆಗುಂಟ ಹೋದರೆ ಜೆಡ್ಡಾ ಬೇಗ ತಲುಪಬಹುದೆನ್ನುವ ವಿಚಾರ. ನಾವು ಆ ಹೆಸರಿನ ಬೋರ್ಡ್ ಕಾಣಿಸುವ ವರೆಗೆ ನೇರವಾಗಿ ಹೋದರಾಯ್ತೆಂದು ಹೊರಟೆವು. ಎಷ್ಟೋ ದೂರ ಹೋದರೂ ಕಾಣಿಸಲೇ ಇಲ್ಲ. ಈ ನಡುವೆ ಸಾಕಷ್ಟು ಅರೇಬಿಕ್ ಲಿಪಿಯುಳ್ಳ ಬೋರ್ಡ್‌‌ಗಳು ಮಾತ್ರ ಇದ್ದವು. ಸಂಶಯ ಬಂದು ಸಮೀಪದ ವರ್ಕ್‌ಷಾಪ್‌ದಲ್ಲಿ ಗುತ್ತಿಯವರು ವಿಚಾರಿಸಿದಾಗ ಅಗಲೇ ಆ ಊರು ದಾಟಿ 60 ಮೈಲು ಹೆಚ್ಚು ಬಂದುದಾಗಿ ತಿಳಿಸಿ ಮತ್ತೊಂದು ಸಲ ಸರಿಯಾಗಿ ಹೇಳಿದರು. ಅಲ್ಲಿಂದ ಮತ್ತೆ ಮರಳಿ ಬರುವಾಗ ಗುಡ್ಡದ ಓರೆಗುಂಟ ವಿಚಿತ್ರವಾದ ಕೆಂಪು ಮಂಗಗಳು ಕಂಡವು. ಕಾರು ನಿಂತರೆ ಅವಕ್ಕೆ ಗೊತ್ತು ತಿನ್ನಲು ಏನಾದರೂ ಸಿಕ್ಕೇ ಸಿಗುತ್ತದೆ ಎಂದು. ಬ್ರೆಡ್ ತುಣುಕುಗಳು ಕೊಟ್ಟಾಗ ಅವಕ್ಕೆ ಖುಷಿಯಾಯಿತು. ಈ ಭಾಗದಲ್ಲಿ ನೀಲಿ ಹಳದಿ ಮಿಶ್ರಿತ ಸ್ವಲ್ಪ ಉದ್ದ ಚುಂಚಿರುವ
ಗುಬ್ಬಿ ಜಾತಿಯ ಪಕ್ಷಿಗಳು ಹೆಚ್ಚು ಮುಳ್ಳಿನ ಕ್ಯಾಕ್ಟಸ್ ಗಿಡಗಳಲ್ಲಿ ಅದೇನು ತಿನ್ನುತ್ತವೆಯೋ ಏನೋ, ಬಂದ ಹಾದಿಯಲ್ಲಿಯೇ ಮತ್ತೆ ಗುಡ್ಡ ಸುತ್ತಿ ಸುತ್ತಿ ಮಹಾಯಿಲ್‌ಗೆ ಬಂದೆವು. ಅತೀ ಮುಖ್ಯವಾದ ಸ್ಥಳದಲ್ಲಿಯೇ ಇಂಗ್ಲೀಷ್‌ನಲ್ಲಿ ಬೋರ್ಡ್ ಇಲ್ಲದ್ದು ಬೇಸರವಾಯಿತು.

ಇಲ್ಲಿಂದ 10-12 ಕಿ.ಮೀ.ಗಳಷ್ಟು ಪಶ್ಚಿಮಾಭಿಮುಖವಾಗಿ ಹೋದನಂತರ ಶುರುವಾಗುವದು ಕಣಿವೆ ಮಾರ್ಗ. ಈ ಕಡೆಗೆ “ಶಾರ್ ಕಣಿವೆ ಮಾರ್ಗ (Shaar valley)’ ಬಹಳ ಪ್ರಸಿದ್ಧಿಯಾದುದು. ಗುಡ್ಡೆ ಇಳಿಯುವದಕ್ಕಿಂತ ಇಲ್ಲಿ ನೇರವಾಗಿ ಇಳಿಜಾರುಗಳಿವೆ. ಬಹಳ ವ್ಯವಸ್ಥಿತವಾಗಿ ಹಾದಿಯನ್ನು ಮಾಡಿದ್ದಾರೆ. ದೊಡ್ಡ ಬೆಟ್ಟಗಳನ್ನು ಒಡೆದು ಅಚ್ಚುಕಟ್ಬಾಗಿ ಸುರಂಗಮಾರ್ಗಗಳುಮಾಡಿದ್ದಾರೆ. ಈ ಬೆಟ್ಟದಿಂದ ಮತ್ತೊಂದು ಬೆಟ್ಟಕ್ಕೆ ರಸ್ತೆ ಕೂಡಿಸಲು ಸುಮಾರು 4-5-6 ಕಿ.ಮೀ.ಗಳಷ್ಟು ವರೆಗೆ ಬ್ರಿಡ್ಜ್‌ಗಳನ್ನು ಕಟ್ಟಿದ್ದಾರೆ. ಇಕ್ಕಾಟ್ಬಾದ ಮಾರ್ಗವಿದ್ದರೂ ಎರಡೂ ಕಡೆಗೆ ಹೋಗಿ ಬರುವ ವಾಹನಗಳ ಸೌಲಭ್ಯ ಮಾಡಲಾಗಿದೆ. ಕೆಲವೊಂದು ದೈತ್ಯಾಕಾರದ ಬೆಟ್ಟಗಳಲ್ಲಿಯೇ ಸುರಂಗ ಮಾರ್ಗದೊಳಗಿಂದ ದಾಟುವಾಗ (6.7.ಕಿ.ಮೀಗಳಷ್ಟು ದೂರ) ಒಳಗೆಲ್ಲಾ ತುಂಬಾ ಕತ್ತಲ. ಕಾರಿನೊಳಗೆ ಕುಳಿತ ನಾವು ಯಾರೂ ಒಬ್ಬರಿಗೊಬ್ಬರು ಕಾಣುವುದಿಲ್ಲ. ಹೋಗು-ಬರುವ ಎರಡೂ ಕಡೆಯ ಕಾರಿನ ಸಾಲಿನವರು ಪೂರ್ತಿ ಕಾರಿನ ಲೈಟ್ ಮಂದವಾಗಿಟ್ಟು ನಡೆದುಹೋದಷ್ಟೇ ನಿಧಾನವಾಗಿ ಚಲಿಸುತ್ತಾರೆ. ಇಂಥಲ್ಲೇ ನಾದರೂ ವಾಹನಗಳು ಕೈಕೊಟ್ಟರೆ ಮುಗಿದೇಹೋಯಿತು. ಅಂತೆಯೇ ಸುರಂಗ ಮಾರ್ಗಗಳ ಎರಡೂ ದಂಡೆಗೂ ಪ್ರವೇಶವಾಗುವದಕ್ಕಿಂತ ಮೊದಲು ಏನಾದರೂ ಸಂಶಯ ಇದ್ದರೆ ಪಕ್ಕಕ್ಕೆ ಸರಿಸಿ ಸರಿಪಡಿಸಿಕೊಂಡು ಹೋಗಲು ವಿಶಾಲವಾದ ಸ್ಥಳ ಮಾಡಿದ್ದಾರೆ.

ಈ ಮಾರ್ಗಗಳು ನೇರವಾಗಿದ್ದರೆ ಮಾತು ಬೇರೆ-ಪೂರ್ತಿ ಇಳಿಜಾರು. ಒಂದೊಂದು ಸುರಂಗ ದಾಟುವಾಗ ನನಗಂತೂ ಹೆದರಿಕೆಯಾಗಿ ಬೆವರು ಬರುತ್ತಿತ್ತು. ಹಿಂದೆ ಹೊರಳಿ ನೋಡಿದರೆ ಬೆಟ್ಟದ ಮೇಲೆ ನಿಧಾನವಾಗಿ ಏರಿಳಿಯುತ್ತಿರುವ ವಾಹನಗಳು; ಪಕ್ಕದ ಕಡೆಯಿಂದ ನೋಡಿದರೆ ಆಳವಾದ ಪ್ರಪಾತಗಳು ಕಬಳಿಸಲು ಬಾಯಿ ತೆಗೆದುಕೊಂಡು ನಿಂತಂತೆ, ತಲೆ-ಕಣ್ಣು ಸುತ್ತಿದಂತೆ ಅನುಭವವಾಗತೊಡಗಿದಾಗ ಸುಮ್ಮನೆ ಮುಂದೆ ನೇರ ದೃಷ್ಟಿ ಇಷ್ಟುಕೊಂಡು ಕುಳಿತುಕೊಂಡೆ- ಮಗ ಸುಸ್ತು ಹೊಡೆಯತೊಡಗಿದ. ಅದರೆ ಅಪ್ಪ-ಮಗಳು ಚೂಯಿಂಗ್‌ಗಮ್ ಕಚ್ಚುತ್ತ ಹಾಡುತ್ತ ಎಲ್ಲ ದೃಶ್ಯ ನೋಡುತ್ತ ಖುಷಿಪಡುತ್ತಿ ದ್ದ ರು. ಅಲ್ಲಲ್ಲಿ ಕೆಲವೊಂದು ಮುಂದ ಜಜ್ಜಿದ ವಾಹನಗಳನ್ನು ಎತ್ತರದ ದೊಡ್ಡ ದೊಡ್ಡ ಬಂಡೆಗಲ್ಲುಗಳ ಮೇಲೆ ನಿಲ್ಲಿಸಿದ್ದರು. – ‘ಪ್ರವಾಸಿಗರೇ ಯಾತ್ರಿಕರೇ, ಎಚ್ಚರ’ ಎಂದು (ನಿವೇನಾದರೂ ಕಾಳಜಿಬಿಟ್ಟು ಗಾಡಿ ಚಲಾಯಿಸುತ್ತಿದ್ದರೆ ನಿಮಗೂ ಇದೇ ಗತಿ’) – ಎನ್ನೊ ಅರ್ಥದಲ್ಲಿ. ಪರದೇಶದ ಈ ಕಣಿವೆಯೊಳಗೆ ಅಕಸಸ್ಮಿಕ ನಾವು ಬಿದ್ದುಹೋದರೆ ಎನ್ನುವ ಒಂದು ಕೆಟ್ಟ ವಿಚಾರಬಂದು A/C ಕಾರಿನಲ್ಲಿಯೂ ನಾನು ಕಂಪಿಸಿದಾಗ ಬೆವರು ಬೆನ್ನುಕಾವಲಿಯಲ್ಲಿ ಸುರಿಯುತ್ತಿತ್ತು.

ನಿಜವಾಗಿಯೂ ವಿದೇಶಿ ನಿರ್ಮಾಣ ಕಂಪನಿಗಳು ಇಲ್ಲಿ ಅತೀ ಸಾಹಸದ ಕೆಲಸ ಮಾಡಿದೆ. ಬೆಟ್ಟದ ಓರಗುಂಟ ಸಾಗುತ್ತಿರುವ ಈ ರಸ್ತೆಗಳಲ್ಲಿ ಬ್ರಿಡ್ಜ್‌ಗಳ ನಿರ್ಮಾಣ ನಿಪುಣತೆಯೇ ಒಂದು ವಿಶೇಷ ರೀತಿ ಇದೆನಿಸುತ್ತ ದೆ. ಮಳೆ ರಭಸಕ್ಕೆ ಬೆಟ್ಟ-ಗುಡ್ಡ ಗಳು ಅದುರಿ ಕಲ್ಲು-ಹರಳುಗಳು ರಸ್ತೆಗೆ ಬರಬಾರದೆಂದು ಕೆಲವೊಂದು ಕಡೆಗೆ ಬೆಟ್ಟದ ತುದಿಯವರೆಗೆ ಕಾಂಕ್ರಿಟ್ ಹಾಕಿದ್ದಾರೆ. ಕೆಲವೊಂದು ಕಡೆಗೆ ಒಳ್ಳೆ ಕಬ್ಬಿಣದ ಜಾಳಿಗೆಗಳಿಂದ ಭದ್ರಪಡಿಸಿದ್ದಾರೆ. ಇನ್ನೂ ಕೆಲವು ಕಡೆಗೆ ಕಲ್ಲಿನ ಒಡ್ಡಗಳನ್ನು ಕಟ್ಟದ್ದಾರೆ. ಒಟ್ಬಾರೆ ಇದೊಂದು ಚಾಲೆಂಜಿಂಗ್ ಕೆಲಸ ಮಾಡಿರುವರೆನಿಸುತ್ತದೆ. ಸುಮಾರು 25-30 ಕಿ.ಮೀ.ಗಳಷ್ಟೆ ರಸ್ತೆ ಇರಬಹುದು. ಆದರೆ ಅಷ್ಟು ಇಳಿಜಾರು ಇಳಿದು ಬರಲಿಕ್ಕೆ ಎರಡು ತಾಸುಗಳಾದರೂ ತೆಗೆದುಕೊಂಡಿತ್ತು.

ಆಳವಾದ ಕೊರಕಲುವಾಡಿಗಳು(ನೀರಿನ ರಭಸಕ್ಕೆ ಕೊಚ್ಚಿ ಕೊಚ್ಚಿ ನೈಸರ್ಗಿಕವಾಗಿ ಆಗಿರುವ ನೀರಿನ ಹರಿಗಳು) ಒಂದು ಬದಿಗೆ. ಮತ್ತೊಂದು ಬದಿಗೆ ಒಂದಕ್ಕಿಂತ ಮತ್ತೊಂದು ಸ್ಪರ್ಧಿಸಲು ನಿಂತಂತಿರುವ ಎತ್ತರೆತ್ತರದ ಬೆಟ್ಟಗಳು.
ಈ ನಡುವೆ ಅನಾದಿ ಕಾಲದಿಂದಲೂ ವಾಡಿಗಳ ಅಕ್ಕಪಕ್ಕದಲ್ಲಿ ಬೀಡುಬಿಟ್ಟು ವಾಸಿಸುವ ಜನರು ತಮ್ಮ ಒಂಟೆ, ಕತ್ತೆಗಳ ಮೇಲೆ ಅಲೆದಾಡಿದ ವ್ಯಾಪಾರಿ ಮಾರ್ಗಗಳು ನೀಟಾಗಿ ಕಾಣುತ್ತವೆ. ಅಂಕುಡೊಂಕಾಗಿ ಗೆರೆಗಳೆಳೆದಂತೆ.

ಹೀಗೆ ಇವನ್ನೆಲ್ಲ ನೋಡುತ್ತ ನಾವು ಇಳಿದ ಈ ‘ಶಾರ್ ಕಣಿವೆ’ ಇಳಿಜಾರು ನೋಟವನ್ನು ಜೀವನದಲ್ಲೇ ಮರೆಯಲಾಗದಂತೆ ಮನಸ್ಸಿನಲ್ಲಿ ಕ್ಯಾಮರೀಕರಿಸಿ ಕೊಂಡಿದ್ದೇವೆ. ಎಷ್ಟೊಂದು ಖುಷಿಯೋ ಅಷ್ಟೊಂದು ಹೆದರಿಕೆಯ ಅನುಭವಗಳ ಚಿತ್ರಗಳು ಅವು.

ಮುಂದಿನ ರಸ್ತೆಯಲ್ಲಿ ಸುತ್ತು ಬಳಸುಗಳಿದ್ದರೂ ಅಷ್ಟಿಷ್ಟು ಸರಳವಾದ ರಸ್ತೆಗಳವು. ಆಗಲೇ 300 ಮೀಟರುಗಳನ್ನು ಎತ್ತರದಿಂದ ಇಳಿದಿದ್ದೆವು. ಪ್ರಪಾತ ದಾಳಕ್ಕಿಳಿದು ಕಣಿವೆಯೊಳಗೆ ಹೊರಟಾಗ ಹೊರಗಿನ ಅಮೋಘ. ಎತ್ತ ನೋಡಿದತ್ತೆಲ್ಲ ಪಡಿ ಪಡಿ ಕಲ್ಲಿನ ಬೆಟ್ಟಗಳು. ಅವೆಲ್ಲ ಸಾವಿರಾರು ವರ್ಷಗಳಿಂದ ಬಿಸಿಲಿನ ಹೊಡೆತ ತಿಂದು ತಿಂದು ಕರಿ ಕಲ್ಲುಗಳಾಗಿವೆ. ನೀರು ಕುಡಿಯಲೆಂದು ದಂಡೆಗೆ ಕಾರು ನಿಲ್ಲಿಸಿ ಸ್ವಲ್ಫ ಹೊರಗಿಳಿದಾಗ ಬಿಸಿಲಿನ ಝಳ ತಡೆಯಲಸಾಧ್ಯ. ಏರ್ ಕಂಡೀಶನ್ ಕಾರಿನಲ್ಲಿ ನಮಗಿಷ್ಟೊತ್ತಿನವರೆಗೆ ಏನೂ ಅನಿಸಿರಲಿಲ್ಲ. ಆಗಲೇ ಇಲ್ಲಿ 45 ಡಿಗ್ರಿ ಬಿಸಿಲಿನ
ಧಗೆ ಹೊಡೆಯತೊಡಗಿತ್ತು. ಕೇವಲ ಎರಡು ತಾಸುಗಳ ಹಿಂದೆ ಅಭಾದ ಎತ್ತರದ ತುದಿಯ ಮೆಆಲೆ 9-10 ಡಿಗ್ರಿ ಬಿಸಿಯ ತಂಪಾದ ತೆರೆಗಳು ಅನುಭವಿಸಿದ ನಮಗೆ ‘ಇದೆಂಥ ಅಭಾಸ’ ಅನಿಸಿತು. ಎಷ್ಟೊಂದು ವಿಚಿತ್ರ ಜಗತ್ತು ಇದು. ಇಲ್ಲಿ ತಂಪಿಗೂ ಧಗೆಗೂ ಇರುವ ಸ್ಥಳದ ಅಂತರ ಎಷ್ಟೊಂದು ಕಡಿಮೆ.

ಹತ್ತಿರ ಇರುವ ಪೆಟ್ರೋಲ್ ಸ್ಟೇಷನ್ ಕಡೆಗ ಹೋಗಿ ಪೆಟ್ರೋಲ್ ತುಂಬಿಸಿ ಕೊಂಡು ಅಲ್ಲೇ ಇರುವ ಸಣ್ಣ ಅಂಗಡಿಯಿಂದ ತಂಪಾದ ಮಜ್ಜಿಗೆ, ಕ್ಯಾಂಡಿಗಳು ತೆಗೆದುಕೊಂಡೆವು: ಮಜ್ಜಗೆ ಇಂತಹ ಒಳ ಮರುಭೂಮಿಯಲ್ಲೆಲ್ಲಿ ಎಂದು ಅನಿಸ-
ಬಹುದು. ಹೌದು ಉರಿಬಿಸಿಲಿನ ಝಳದ ಮರುಭೂಮಿಯಲ್ಲಿಯೂ ತಂಪಾದ ಗಟ್ಟಿ ಮಜ್ಜಿಗೆ ಸಿಗುತ್ತವೆ. ಸೌದಿಯಲ್ಲೂ ಡೇರಿಗಳಿವೆ. ಇಲ್ಲಿಂದ ತಾಜಾ ತಯಾರಿಸಿದ ಮಜ್ಜಿಗೆಗೆ ಇಲ್ಲಿ ‘ಲಾಬಾನ್ ‘ ಎಂದು ಕರೆಯುತ್ತಾರೆ. ಏರ್‌ಟೈಟ್‌(Air tight)ದಲ್ಲಿ ಹಾಕಿ ಸುಮಾರು 3 ತಿಂಗಳವರೆಗೆ ಇಡುವಷ್ಟು ವ್ಯವಸ್ಥೆ ಮಾಡಿರುತ್ತಾರೆ. ಹೀಗಾಗಿ ಹೆದ್ದಾರಿ ಗುಂಟ ಇರುವ ಎಲ್ಲ ಅಂಗಡಿಗಳಲ್ಲಿ ಹೆಚ್ಚಾಗಿ ಪೆಟ್ರೋಲ್ ಸ್ಟೇಷನ್ ಗಳಿರುವ ಒಂದೆಡೆ ಸಣ್ಣ-ದೊಡ್ಡ ಅಂಗಡಿಗಳಿದ್ದು ಅಲ್ಲಿ  ರೆಫ್ರಿಜ್‌ರೇಟ್‌ದಲ್ಲಿಟ್ಟ ತಂಪಾದ ಮಜ್ಜಗೆ ಹಾಗೂ ಉಳಿದ ಸಾಫ್ಟ್‌ ಡ್ರಿಂಕ್ಸ್ ಕೋಲಾಗಳೆಲ್ಲ ಸಿಗುತ್ತವೆ.

ಮುಂದೆ ಇನ್ನೊಂದು ತಾಸು ಪ್ರವಾಸ ಮಾಡಿ ಒಂದು ಸಣ್ಣ ಹಳ್ಳಿಯನ್ನು ಪ್ರವೇಶಿಸುವದಕ್ಕಿಂತ ಮೊದಲು ಒಂದು ಗಿಡದ ಬುಡಕ್ಕೆ ಕಾರು ನಿಲ್ಲಿಸಿ ಮಧ್ಯಾನ್ಹದ ಊಟ (ಬ್ರೆಡ್, ಸ್ಯಾಂಡವಿಚ್, ಹಣ್ಣುಗಳು-ಕೇಕ್ ತಿಂದು ಕೋಲ್ಡ್‌ಡ್ರಿಂಕ್ಸ್ ಕುಡಿದು) ಕೇವಲ ಅರ್ಧತಾಸಿನಲ್ಲಿ ಮುಗಿಸಿ ಮತ್ತೆ ಹೊರಟೆವು. ಆಗಲೇ ನಾವು ಬೆಟ್ಟ ಸಾಕಷ್ಟು ಇಳಿದಿದ್ದವು.

ಆಗಲೇ ಅಲ್ಲಲ್ಲಿ ಖರ್ಜೂರಿನ ಗಿಡಗಳು ಗುಂಪುಗುಂಪುಗಳು ಕಾಣಲು ಸುರುವಾದವು. ಖರ್ಜೂರಿನ ಗಿಡ ನೋಟದಲ್ಲಿ ನಮ್ಮ ತೆಂಗು-ಅಡಿಕೆ ಗಿಡಗಳಂತೆಯೇ ಇರುತ್ತವೆ. ರಸ್ತೆಯ ಎಲ್ಲಾ ಉದ್ದದವರೆಗೆ ಪಕ್ಕದಲ್ಲಿ ಈ ದೃಶ್ಯ ಸುಂದರವೆನಿಸುತ್ತ ದೆ. ಫೋಟೋ ಹಾಗೂ ವಿಡಿಯೋದಿಂದ ಚಿತ್ರಿಸಿಕೊಳ್ಳುತ್ತ ನಾವು ಸ್ವಲ್ಪ ಸುತ್ತಾಡಿದೆವು. ಹಸಿರಿದ್ದೆಡೆಗೆ “ಓಯಸಿಸ್” ಇರಬೇಕೆಂದು ನಮ್ಮ ಅನಿಸಿಕೆಯಾದುದರಿಂದ ಸುತ್ತೆಲ್ಲ ಅಡ್ಡಾಡಿದೆವು.

ಓಯಾಸಿಸ್ ಖರ್ಜೂರ ಗಿಡಗಳು:-

ಓಯಾಸಿಸ್‌ಗಳಿದ್ದಲ್ಲಿ ಜನಜೀವನ; ಜನಜೀವನ ಇದ್ದಲ್ಲಿ ವ್ಯವಹಾರ. ಅಂತೆಯೇ ಮರುಭೂಮಿಯಲ್ಲಿ ಅಲ್ಲಲ್ಲಿ ಕಾಯುವ ಓಯಾಸಿಸ್‌ಗಳು-ಸುತ್ತೆಲ್ಲ ಬೆಳೆದ ಜನವಸತಿ ಕಾಣಸಿಗುವದು. ಮರುಭೂಮಿಯಲ್ಲಿ ಓಯಾಸಿಸ್ ಹೇಗೆ ಇರುತ್ತವೆ. ಎನ್ನುವ ಶಾಲೆಯಲ್ಲಿ ಓದುವಾಗಿನ ಕಲ್ಪನೆ ವಿಚಿತ್ರವಾದುದು. ಅದನ್ನು ನೋಡುವ ಅವಕಾಶ ದೊರೆತಾಗ ಅನಂದಾಶ್ಚರ್ಯಗಳಾಗುತ್ತದೆ. ಎತ್ತ ನೋಡಿದತ್ತೆಲ್ಲ ಉಸುಕಿನ ದಿನ್ನೆಗಳು. ಆದರೂ ಅಂತಹ ದಿನ್ನೆಗಳಲ್ಲಿಯೇ ಸ್ವಲ್ಪ ಗಟ್ಟಿ ಇರುವ, ಕಲ್ಲಿನ ನೆಲದಕಡೆಗೆ ಎಷ್ಟೋ ಗ್ರಾಮೀಣ ಮನೆಗಳಿವೆ. ಕುರಿ, ಒಂಟೆಗಳು ಕಾಣಿಸುವವು. ಇವಕ್ಕೆಲ್ಲ ನೀರಿನ ಸರಬರಾಜು ಇರಲೇಬೇಕಲ್ಲವೆ ? ಮರ ಭೂಮಿಯಲ್ಲಿ ಅಲ್ಲಲ್ಲಿ ಹಸಿರುನಿಸದ ನೆಲ ನೋಡುವಾಗ ಅಲ್ಲೆಲ್ಲ ನೀರು ಸಣ್ಣಾಗಿ ಜಿನುಗುತ್ತಿರುತ್ತದೆ. ಗುಳ್ಳೆ ಗುಳ್ಳೆಗಳಾಗಿ ನೀರು ಹೊರಬರುತ್ತಿರುವದು. ಸಣ್ಣಾಗಿ ಹರಿಯುತ್ತ ಎಷ್ಟೋ ದೂರಗಳವರೆಗೆ ಸಾಗಿರುತ್ತದೆ. ಅಂತೆಯೇ ಇವರು ನೀರು ಜಿನುಗುವ ಅಥವಾ ಚೆಲುಮೆಯಂತೆ ಪುಟಿಯುವ ಕಡೆಗಳೆಲ್ಲೆಲ್ಲ ಆಳವಾಗಿ ತಗ್ಗು ತೋಡಿ ಬಾವಿಯಂತೆ ಮಾಡಿರುತ್ತಾರೆ. ಈ ಓಯಾಸಿಸ್ ಬಾವಿಗಳು ನೋಡಲು ನಮ್ಮ ಕಡೆಯಂತೆಯೇ ಇರುತ್ತವೆ. ಆಳವಾದ ಬಾವಿಗಳಿದ್ದು ಸುತ್ತೆಲ್ಲ ಕಲ್ಲಿನ ಕಟ್ಟೆ ಕಟ್ಟಿ ನೀರು ಎಳೆದುಕೊಳ್ಳಲು ಬಾವಿಗೆ ಗಡಗಡಿ ಹಾಕಿಕೊಂಡಿರುತ್ತಾರೆ. ಗ್ರಾಮಕ್ಕೆಲ್ಲ ಒಂದೇ ಓಯಾಸಿಸ್ ಬಾವಿ. ಈ ಓಯಾಸಿಸ್ ಸುತ್ತ ಇತ್ತೀಚೆಗೆಲ್ಲ ಕಲ್ಲಿನ-ಮಣ್ಣಿನ ಹೌದುಗಳನ್ನು (ಸಂಪು) ಕಟ್ಟಿ ನೀರು ಎಳೆದು ತುಂಬಿರುತ್ತಾರೆ. ಪ್ರಾಣಿಗಳಿಗೆಲ್ಲ ಅನುಕೂಲ.

ಇನ್ನೊಂದು ರೀತಿಯ ಓಯಾಸಿಸ್‌ಗಳೆಂದರೆ ಸ್ವಲ್ಪ ಗಟ್ಟಿ ನೆಲದಲ್ಲಿ ಕಲ್ಲು ಮಣ್ಣುಗಳಿರುವಲ್ಲಿ ಸಣ್ಣಾಗಿ ನೀರು ಜಿನಗುತ್ತ ಅಲ್ಲಿಯೇ ಮಡುವಾಗಿರುತ್ತದೆ, ಅದರ ಸುತ್ತೆಲ್ಲ ಹುಲ್ಲುಗಡ್ಡೆಗಳು, ಮರುಭೂಮಿಯ ಕ್ಯಾಕ್ಟಸ್‌ಗಳು ಕಾಣಸಿಗುವವು. ಆಲ್ಲಿ
ಹರಯುವ ಓಯಾಸಿಸ್‌ಗಳ ಸೌಂದರ್ಯವೇ ಬೇರೆ. ಅ ನೀರು ಅತೀ ಬಿಸಿಲಿನ ಕಿರಣಕ್ಕೆ ಸ್ಪಟಿಕದ ತರಹ ಹೊಳೆಯು- ತ್ತಿದ್ದವು. ನಾವು ನೋಡುವಾಗ ಅಲ್ಲಿ ಕೊಕ್ಕರೆ ಪಕ್ಷಿಗಳು 4-5 ಅಲ್ಲೆಲ್ಲ ಓಡಾಡಿಕೊಂಡು ಸಂತೋಷಪಡುತ್ತಿದ್ದವು. ಅವು ವಲಸೆ ಪಕ್ಷಿಗಳಿರಬೇಕೆನಿಸಿತು.

ಒಂಟೆಗಳು ನೀರಿರುವಲ್ಲಿಯೇ ಸುಳಿದಾಡುತ್ತವೆ. ಇತ್ತೀಚೆಗೆ ಜನ ವಸತಿ ಐಶಾರಾಮದ ಪಟ್ಟಣಕ್ಕೆ ಸರಿಯುತ್ತಿರುವದ- ರಿಂದ ಅವೂ ಅಷ್ಟೊಂದು ಕಾಣಿಸುತ್ತಿಲ್ಲ. ಓಯಾಸಿಸ್, ವಸತಿ ಗೃಹಗಳು ನಮ್ಮ ಹಳ್ಳಿಗಳಂತೆಯೇ ಮಣ್ಣಿನ ಮನೆಗಳು, ಕುರಿ ಒಂಟೆಗಳು, ನ್ಯೆಸರ್ಗಕ ಸೌಂದರ್ಯದಿಂದ ಫೋಟೋ ಹಿಡಿದುಕೊಳ್ಳುವಂತಿರುತ್ತದೆ.

ಸೌದಿ ಅರೇಬಿಯದಲ್ಲಿ ವರ್ಷಕ್ಕೆ ಸುಮಾರು 15 ಇಂಚುಗಳಷ್ಟು ಮಳೆಯಾಗುತ್ತದೆ. ವರ್ಷದಲ್ಲಿ ಒಂದು ದಿನವೋ ಎರಡು ದಿನವೋೊ ಅಷ್ಟೇ. ಇಷ್ಟೆ ಕಡಿಮೆ ಮಳೆ ಇದ್ದರೂ ಒಳ ಪ್ರದೇಶಗಳಲ್ಲಿ ನೀರಿನ ಸಂಗ್ರಹ ನೆಲದೊಡಲಲ್ಲಿ ತುಂಬಿ ನಿಂತಿದೆ. ಅಂತೆಯೇ ಇಂದು ಕೂಡಾ ಅಲ್ಲಿಯ ಗುಡ್ಡಗಾಡಿನ ಬುಡಡ್‌ವಿನ್ ಜನರು ಮರುಭೂಮಿಯಲ್ಲಿ ನೀರಿನ ತೊರೆಗಳಿವೆಯೆಂದು ನಂಬುತ್ತಾರೆ. ಅದರ ಬಗ್ಗೆ ಸಾಕಷ್ಟು ನಂಬಿಕೆಗಳು ಅವರಲ್ಲಿವೆ. ಒಂದು ಕಡೆಗೆ ಆಕಸ್ಮಿಕವಾಗಿ ಈ ತೊರೆಗಳೇನಾದರೂ ಬತ್ತಿಹೋದರೆ ವಿಚಿತ್ರ್ತ ರೀತಿಯಿಂದ ಎಷ್ಟೋ ಮೈಲಿಗಳಂತರದಲ್ಲಿ ಮತ್ತೊಂದು ಹುಟ್ಟಿಯೇ
ಇರುತ್ತದೆ ಎಂದು, ಹಾಗೂ ತಾವು ವಾಸಿಸುವಲ್ಲಿ ಓಯಾಸಿಸ್‌ಗೆ ಕಟ್ಟಿಕೊಂಡಿರುವ ಬಾವಿಗಳಲ್ಲಿ ದೇಶದ ಯಾವುದೇ ಭಾಗದಲ್ಲಿ ಮಳೆಯಾದರೂ ಈ ಬಾವಿಗಳು ತಮ್ಮ ನೀರಿನ ಸಮಪಾತಳಿ ಕಾಯ್ದುಕೊಂಡಿರುತ್ತವೆ ಎಂದೂ ಹೇಳುತ್ತಾರೆ.

ಕೃಷಿ:-

“ಅಲ್ ಹಸಾ” ಎನ್ನುವದು ಸೌದಿಯಲ್ಲಿಯೇ ಅತೀ ದೊಡ್ಡ ಓಯಾಸಿಸ್ ಎನ್ನ ಬಹುದು. ಅದರ ಸುತ್ತ ಮುತ್ತ 1952ರಿಂದ ಸುಮಾರು 30,000 ಎಕರೆಗಳಷ್ಟು ಕೃಷಿಯ ಕ್ರಾಂತಿಯನ್ನೇ ಮಾಡಿದ್ದಾರೆ. ಸೌದಿ ಅರೇಬಿಯದ ಇತಿಹಾಸದಲ್ಲಿಯೇ
ಈ ಸ್ಥಳ ಹಸಿರು ನಾಡಿನ ಪ್ರದೇಶವೆಂದು ಹೆಸರು ಪಡೆದಿದೆ. ಇಲ್ಲಿ ಇತರ ಹಣ್ಣು.ಕಾಯಿಪಲ್ಲೆಗಳ ಜೊತೆಗೆ ಖರ್ಜೂರ ಬೆಳೆಯುವದೇ ಮುಖ್ಯ ವ್ಯವಸಾಯ ಮಾಡಿಕೊಂಡಿದ್ದಾರೆ. ಸುಮಾರು 3 ಲಕ್ಷಕ್ಕೂ ಮೇಲ್ಪಟ್ಟು ಒಳ್ಳೆ ಜಾತಿಯಾದ
ಖರ್ಜೂರ ಗಿಡಗಳಿವೆ. ಹೀಗಾಗಿ 5 ಟನ್‌ಕ್ಕಿಂತಲೂ ಹೆಚ್ಚು ಖರ್ಜೂರ ಕೇವಲ ಇಲ್ಲಿಂದಲೇ (ಅಲ್‌ಹಸಾ) ಪರದೇಶಗಳಿಗೆ ನಿರ್ಯಾತ ಮಾಡುತ್ತಾರೆ. ಒಳ್ಳೇ ನೀರಿನ ಅನುಕೂಲತೆ ಇಲ್ಲಿರುವದರಿಂದಲೇ ಸುಮಾರು 7000 ವರ್ಷಗಳ ಮೊದಲು ಜನಸಂಖ್ಯೆ ದಟ್ಟವಾಗಿತ್ತೆಂದು ತಿಳಿದು ಬರುತ್ತದೆ.

ಇಂದಿನ ವಿಜ್ಞಾನ ಯುಗದಲ್ಲಿ ಅಮೇರಿಕದ ಭೂಗರ್ಭಶಾಸ್ತ್ರಜ್ಞರು ಇಂಜಿನೀಯರರು ಒಳ್ಳೊಳ್ಳೆಯ ಮಶಿನರಿಗಳ ಸಹಾಯದಿಂದ ನೀರಿನ ನೆಲೆಗಳನ್ನು ಹುಡುಕಿ ಅಲ್ಲಿ ಸಾಕಷ್ಟು ಆಳವಾಗಿ ಬಾವಿಗಳನ್ನು ತೋಡಿಸಿ ನೀರೆತ್ತಿ ಕಾಂಕ್ರೀಟ್ ಕಾಲುವೆಗಳ ಮುಖಾಂತರ ನೂರಾರು ಮೈಲು ದೂರದವರೆಗೆ ಹರಿಸಿ ಬೇಕಾದ ಹಣ್ಣು – ತರಕಾರಿ ಬೆಳೆದು ಕೊಳ್ಳುವಲ್ಲಿ ಸಫಲರಾಗುವಂತೆ ಮಾಡುತ್ತಿದ್ದಾರೆ.

1940ರಲ್ಲಿ ಅಮೇರಿಕನ್ನರ ಸಹಾಯದಿಂದ ಮೊದಲು ಬಾವಿತೋಡಿಸಿದ್ದು ‘ರಿಯಾದ್’ ಹತ್ತಿರ. ಅದು ಸುಮಾರು 375 ಪೊಟ್‌ಗಳಷ್ಟು ಆಳ 90 ಪೂಟ್‌ಗಳಷ್ಟು ಅಗಲ ಹೊಂದಿದೆ. ಹೀಗಾಗಿ ಅಲ್ಲಿಯ ಅಂದಿನ ರಾಜ ಅಬ್ದುಲ್ ಅಜೀಚ್ ಬಹಳೇ
ಖುಷಿಪಟ್ಟು ರಿಯಾದ್‌ದಿಂದ 85 ಕಿ.ಮೀ. ಸಮೀಪದ “ಅಲ್‌ಕರ್ಜ್” ಎನ್ನುವಲ್ಲಿ ಒಳ್ಳೇ ಕೃಷಿಯೋಜನೆ ಕೈಗೆತ್ತಿಕೊಳ್ಳಲು ಪ್ರೋತ್ಸಾಹಿಸಿದನು. ಅಲ್ಲಿಯೂ ಸಾಕಷ್ಟು ಓಯಾಸಿಸ್‌ಗಳು ಜೊತೆಗೆ ನೀರಿನಿಂದ ತುಂಬಿದ ಬಾವಿಗಳು, ಒಳ್ಳೆ ಮಣ್ಣು ಇರುವದರಿಂದ ಇಂದು ಸೌದಿ ಅರೇಬಿಯಾ ಒಳ್ಳೆ ತೋಟಗಾರಿಗೆ ಹೆಸರು ಗಳಿಸಿಕೊಂಡಿದೆ. ಅಲ್ಲಿ ಬಟಾಣಿ, ಟೊಮ್ಯಾಟೋ, ಉಳ್ಳಗಡ್ಡಿ-ಬದನಕಾಯಿ-ಕ್ಯಾರೆಟ್- ಬೀಟ್ ಸಾಕಷ್ಟು ಬೆಳೆಸುವದರೊಂದಗೆ 20,000 ಖರ್ಜೂರ ಗಿಡಗಳೂ ಇವೆ. ಈ ತೋಟಗಾರಿಕೆಯ ಜೊತೆಗೆ ಒಳ್ಳೆ ಜಾತಿಯ 600 ಅಕಳುಗಳು 200ಕ್ಕೂ ಮೇಲ್ಪಟ್ಟು ರಾಜಮನೆತನದ ಕುದುರೆಗಳೂ ಸಾಕಿದ್ದಾರೆ. ಅವಕ್ಕೆಂದೇ ಅಲ್ಲಿ ಗೋದಿ, ಸುಡಾನ್ ಹುಲ್ಲು ಸಾಕಷ್ಟು ಬೆಳೆಸುತ್ತಾರೆ.

ಹೀಗಾಗಿ ಜಿನುಗುತ್ತಿರುವ ಓಯಾಸಿಸ್‌ದ ನಮ್ಮ ಮೊದಲಿನ ಕಲ್ಪನೆ ಎಲ್ಲಾ ಇಲ್ಲಿ ನೋಡಿದ ಮೇಲೆ ತಲೆಕೆಳಗಾಗುತ್ತದೆ. ವ್ಯವಸ್ಥಿತ ಮಶಿನರಿಯುಗ, ವಿಜ್ಞಾನ ಯುಗದಲ್ಲಿ ತಲೆಕೆಳಗಾಗಲೂಬಹುದು- ಮೇಲಾಗಲೂಬಹುದು. ಒಂದು ಮಾತು ಇಲ್ಲಿ ನಿಜ. ಕಲ್ಲು ಮಡ್ಡಿ-ಉಸುಕಿನ ಮರುಭೂಮಿಯಿಂದ ನೀರು ಹೊರತೆಗೆಯಬೇಕಾದರೆ ವಿಜ್ಞಾನದ ಜೊತೆಗೆ ಹಣಕಾಸಿನ ವ್ಯವಸ್ಥೆಯೂ ಬೇಕಾಗುತ್ತದೆ. ಇವರಲ್ಲಿ ಹಣ ಸಾಕಷ್ಟಿದೆ. ಕಲ್ಲುಮಡ್ಡಿ-ಉಸುಕಿನ ಮಾಳುಗಳನ್ನೇ ಒಂದು ಕಡೆಯಿಂದ ಎತ್ತಿ ಇನ್ನೊಂದು ಕಡೆಗೆ ಸಾಕಷ್ಟು ಮ್ಶೆಲುಗಳಂತರಕ್ಕೆ ಸಾಗಿಸುವ ಹಣದ ಶಕ್ತಿ ಇವರಿಗೆ ಇದೆ.

ಓಯಾಸಿಸ್ಗಳ ಸುತ್ತೆಲ್ಲ ಸಾಕಷ್ಟು ಗುಂಪುಗುಂಪಾಗಿ ಖರ್ಜೂರ ಗಿಡಗಳು ಕಾಣುತ್ತವೆ. ಒಳ್ಳೆ ವ್ಯವಸಾಯಗಾರರಂತೂ ಸುತ್ತೆಲಿನ 50 ಎಕರೆಗಳಷ್ಟು ಖರ್ಜೂರಿನ ಗಾರ್ಡನ್‌ಗಳು ಬೆಳೆಸಿಯೇ ಇರುತ್ತಾರೆ. ನಮ್ಮ ಕಡೆ ಮಾವಿನ ತೆಂಗಿನ ತೋಪುಗಳು ಹೇಗೋ ಹಾಗೆ ಇಲ್ಲಿ ಖರ್ಜೂರಿನ ತೋಪುಗಳು.

ಖರ್ಜುರ :- ಖರ್ಜೂರ ಅಂದ ತಕ್ಷಣ ನಮ್ಮ ಕಡೆಗೆ ಶಿವರಾತ್ರಿಗೋ ಅಥವಾ ಇತರ ಉಪವಾಸದ ದಿನಗಳಲ್ಲೋ ತಿನ್ನುವ ಹಣ್ಣು ಎಂದು ಕಲ್ಪನೆಗೆ ಬರುತ್ತದೆ. ಬೆಲೆ ಹೆಚ್ಚು ಅನ್ನುವ ಕಾರಣದಿಂದ ಮೇಲಿಂದ ಮೇಲೆ ಸಾಮಾನ್ಯರು ಕೊಂಡು ತಿನ್ನಲಿಕ್ಕಾಗದ್ದಕ್ಕೆ ಉಪವಾಸದ ದಿನ ಒಂದು ನೆಪಮಾಡಿಕೊಂಡು ಸ್ವಲ್ಪ ಹಣ ಕೈ ಬಿಟ್ಟು ಖರ್ಚುಮಾಡಿ ತರುತ್ತಾರೆ. ಖರ್ಜೂರ ತಿನ್ನುವಾಗ ಅವುಗಳ ಗಿಡ ತೆಂಗಿನ ಗಿಡದ ಹಾಗೆ ಅಥವಾ ಅಡಿಕೆಗಿಡದ ಹಾಗೆ ಇರುತ್ತವೆ ಎಂದು ಕೇಳುತ್ತಿದ್ದೆವು. ಅದರೆ ಇಲ್ಲಿ ಬಂದು ಗಿಡಗಳ ಗುಂಪು ನೋಡಿದ ಮೇಲೆ ಎತ್ತರದಲ್ಲಿ ಅಡಿಕೆ ಗಿಡದಂತೆ ಹೋಲಿಸಿದರೆ, ಎಲೆಗಳಲ್ಲಿ ಸಿಂಧಿಗಿಡದಂತೆ ಕಾಣಿಸುವದು. ಏನೇ ಅಗಲಿ, ಸಮೀಪದ ಹೊಂದಾಣಿಕೆಯಲ್ಲಿ ಸಹೋದರ ವರ್ಗದಂತೆ ಎಂದು ಹೇಳಬಹುದು. ಇಲ್ಲಿ ಬಂದ ಮೇಲೆ, ಸಾಕಷ್ಟು ಹಣ್ಣು ತಿಂದ ಮೇಲೆ-ಗಿಡಗಳಷ್ಟು ನೋಡಿದ ಮೇಲೆ ಒಂದಿಷ್ಟಾದರೂ ಇದರ ಬಗೆಗೆ ಪಂಚಯಿಸಿಕೊಳ್ಳ ಬೇಕೆನಿಸಿತು.

ಉಷ್ಣವಲಯದ ಉಸುಕು ಪ್ರದೇಶಗಳಲ್ಲಿ ಅಥವಾ ಮರುಭೂಮಿಯಲ್ಲಿ ಬೆಳೆಯುವ ತೆಂಗಿನಗಿಡದಂತೆ ಕಂಡು ಅಡಿಕೆ ಕಾಯಿಯಂತೆ ಗೊಂಚಲು ಗೊಂಚಲು ತುಂಬಿಕೊಂಡ ಸಿಹಿ ಹಣ್ಣಿನ ಗಿಡಗಳೇ ಖರ್ಜೂರ ಗಿಡಗಳು. ಅರೇಬಿಯದ ದ್ವೀಪಕಲ್ಪವೇ ಇದರ ಮೂಲ ಎಂದು ಹೇಳಲಾಗುವದು. ಇಲ್ಲಿಂದ ಮುಂದೆ ಹವಾಮಾನಕ್ಕನು ಗುಣವಾಗಿ ಅಲ್ಲಲ್ಲಿ ಹರಡಿ ವ್ಯವಸಾಯ ಶುರುಮಾಡಿಕೊಂಡರೆಂದು ಹೇಳಬಹುದು. ಉದಾಹರಣೆಗೆ- ಫರ್ಸಿಯದ ದಕ್ಷಿಣ ಭಾಗಕ್ಕೆ, ಉತ್ತರ ಭಾರತದ ಪೂರ್ವಕ್ಕೆ, ಉತ್ತರ ಆಫ್ರಿಕಾಕ್ಕೆ ಜೊತೆಗೆ ಸ್ಪೈನ್ ಹಾಗೂ ಇನ್ನಿತರ ಯುರೋಪ್ ಛಾಗಗಳಲ್ಲಿ ಹರಡಿವೆ. ಸುಮಾರು 7-8 ಶತಮಾನದ ನಡುವೆ ಯುರೋಪದಲ್ಲಿ ಈ ಖರ್ಜೂರ ಗಿಡಗಳನ್ನು ಹಚ್ಚಲಾಯಿತೆಂದು ತಿಳಿದುಬರುವದು.

ಅದರೆ ಪ್ರಮುಖವಾಗಿ ಖರ್ಜೂರ ಗಿಡಗಳು ದೊಡ್ಡ ಪ್ರಮಾಣದಲ್ಲಿ ಬೆಳೆಯುವ ದೇಶಗಳೆಂದರೆ ಕೊಲ್ಲಿದೇಶಗಳು ಮತ್ತು ಉತ್ತರ ಅಪ್ರಿಕಾ. ಲಕ್ಷಾನುಗಟ್ಟಲೇ ಗಿಡಗಳನ್ನು ಹೊಂದಿದ ಈ ದೇಶಗಳು ಅದೂ ಒಂದು ಹಣಕಾಸಿನ ಬೆಳೆ ಎಂದು ಲಕ್ಷ್ಯಕೊಟ್ಟು ಕಾಪಾಡಿಕೊಂಡು ಪ್ರಮುಖ ಉದ್ಯೋಗ ಮಾಡಿಕೊಂಡಿದ್ದಾರೆ.

ಓಯಾಸಿಸ್ ಸಹಾಯದಿಂದ ಸಾಕಷ್ಟು ಖರ್ಜೂರ ಬೆಳೆದು ನಿರ್ಯಾತ ಮಾಡುವಲ್ಲಿ ಮುಂದಾಗಿದ್ದಾರೆ. ಸ್ಥಳೀಯ ಮಾರುಕಟ್ಟೆಯಲ್ಲಿ ಅತೀ ಸೋವಿಯಿಂದ ಸಿಗುತ್ತವೆ. ಸಾಕಷ್ಟು ತಿನ್ನಬಹುದು. (ನಮ್ಮ ಕಡೆಗೆ ಬಾಳೆಹಣ್ಣು, ಬಿಸ್ಕಟ್ಟು
ಯಾವತ್ತೂ ಮನೆಯಲ್ಲಿ ಇಟ್ಟಂತೆ ಇಲ್ಲಿ ಖರ್ಜೂರ, ಬದಾಮ್, ಪಿಸ್ತಾ, ಗೋಡಂಬಿ, ಕೋಲ್ಡ್‌ಡ್ರಿಂಕ್ಸ್, ಖಾಯಂ ಇರುತ್ತವೆ).

ಸೌದಿ ಅರೇಬಿಯದ ಹೆಜಾಜ್, ನಾಜಡ್, ಹಸಾ, ಅಸೀರ್ ಪ್ರದೇಶಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಈ ಗಿಡಗಳು ನೋಡಲು ಸಿಗುತ್ತವೆ. ಇತ್ತೀಚೆಗೆ ನೀರಿನ ಸಂಗ್ರಹ ಸಾಕಾಷ್ಟಾಗುತ್ತಿರುವ ಕಡಗೆ ಡ್ಯಾಂಗಳನ್ನು ಕಟ್ಟಿಕೊಂಡು ದೊಡ್ಡ ಪ್ರಮಾಣದಲ್ಲಿ ನೀರಾವರಿ ಸಹಾಯದಿಂದ ಖರ್ಜೂರದ ಗಿಡಗಳನ್ನು ಬೆಳಸುತ್ತಿದ್ದಾರೆ.

ಈ ಗಿಡಗಳನ್ನು ಬೆಳೆಸುವದೆಂದರೆ ಇಲ್ಲಿ ಇವರಿಗೆ ಬಹಳ ಸರಳ ಕೆಲಸ. ದಿನಾಲೂ ನೀರು ಹಾಕಬೇಕೆಂದಿಲ್ಲ ಬಿಸಿಲಿಗೆ ಎಲೆಯೆ ಗರಿಗಳು ಸುಡುತ್ತವೆ ಎಂದಿಲ್ಲ. ಕಸ ಕಿತ್ತಲು ಮಡಿಮಾಡಲು ಕೆಲಸಗಾರರು ಬಹಳ ಬೇಕೆಂತಲೂ ಇಲ್ಲ. ಉಸುಕು ಭೂಮಿಯ ಉಷ್ಣಹವೆ ಇದ್ದು ನೆಲದಾಳದಲ್ಲಿ ಎಲ್ಲಾದರೊ ಸ್ವಲ್ಪ ತಂಪು ಇದ್ದರೆ (ಓಯಾಸಿನ್ ಸುತ್ತಮುತ್ತ) ಮುಗಿಯಿತು. ಅಂತೆಯೇ ಓಯಾಸಿನ್ ಸುತ್ತ ಮುತ್ತಲಿನ ಕುಟುಂಬದ ಜನರೇ ಸುಲಭವಾಗಿ ಈ ಬೇಸಾಯ ಮಾಡಿಕೊಳ್ಳುತ್ತಾರೆ.

ಈ ಗಿಡಗಳಲ್ಲಿ ಹೂವು-ಕಾಯಿ ಆಗುವದು ಬಲುಚೆಂದ. ಮೊದಲು ಗೊನೆಗಳು ಹೊರ ಬೀಳುತ್ತವೆ. ನಿಧಾನವಾಗಿ ಅವಕ್ಕೆಲ್ಲ ಹೂವು ಬಿಡುತ್ತವೆ. ನೋಡುತ್ತಿದಂತೆಯೇ ಬೇಗನೆ ಸಣ್ಣ ಕಾಯಿಗಳು; ನಂತರ ಅವು ದೊಡ್ಡವಾಗಿ ಗೊಂಚಲುಗಳು ತುಂಬಿಕೊಳ್ಳುತ್ತವೆ. ಗುಲಾಬಿ-ಕೆಂಪು ಬಣ್ಣದ ಗೊಂಚಲುಗಳು ಬಹಳ ಆಕರ್ಷಕ. ಕಾಯಿಯಿಂದ
ಹಣ್ಣಿಗೆ ಪರಿವರ್ತನವಾಗುವಾಗಿನ ರುಚಿ ಹೇಳತೀರದಷ್ಟು. ಸಿಹಿಯೂ ಹೆಚ್ಚಿಲ್ಲ, ಒಗರೂ ಇರುವುದಿಲ್ಲ. ಒಂದು ತರಹ ಹದಮಾಡಿದಂಥ ರುಚಿ. ಬಲಿತ ಮಾವಿನಕಾಯಿ ಹಣ್ಣಾಗುವ ಸಮಯಕ್ಕೆ ತಿನ್ನುವದು ಹೇಗೋ ಹಾಗೆ ಹೆಚ್ಚು ಹುಳಿ ಇಲ್ಲ; ಸಿಹಿ ಇಲ್ಲ. ಪೂರ್ತಿ ಹಣ್ಣಾಗುವವರೆಗೆ ಗಿಡದಲ್ಲಿಯೇ ಬಿಟ್ಟಿರುತ್ತಾರೆ. ಇಲ್ಲಿನ ಬಸುರಿಯರಿಗೆ ಇದನ್ನು ತಿನ್ನುವ ಬಯಕೆಯಾಗುತ್ತದೋ ಏನೋ.

ಹಣ್ಣಾಗಿ ಒಂದೊಂದೇ ಕೆಳಗೆ ಬೀಳಲು ಶುರುವಾದಂತೆ ಹರಿತಾದ ಕುಡುಗೋಲು ಹಿಡಿದುಕೊಂಡು ಹಗ್ಗದ ಸಹಾಯದಿಂದ ಮೇಲೇರಿ ಗೊಂಚಲು ಗೊಂಚಲು ತೆಗೆದು ಬಗಲಬುಟ್ಟಿಗೆ ಹಾಕುತ್ತಾರೆ. ಒಂದೊಂದು ಸಲ ಕೆಳಗಡೆ ದೊಡ್ಡ ದೊಡ್ಡ ಅರಿವೆಗಳನ್ನು ಹಾಸಿ, ಮೇಲಿಂದ ಹಣ್ಣುಗಳನ್ನು ಒಗೆಯುತ್ತಾರೆ. ನಂತರ ಹಣ್ಣು-ಕಾಯಿ ಹೇಗೆ ಬೇಕೋ
ಹಾಗೆಲ್ಲ ವಿಂಗಡನೆಮಾಡಿ ಬುಟ್ಟಿ ತುಂಬುವರು. ನಂತರ ,ಇವು ಪೇಟೆಗೆ ಬರುತ್ತವೆ.

ನಮ್ಮಲ್ಲಿರುವಂತೆ ಇಲ್ಲಿಯೂ ಗ್ರಾಮೀಣ ಬಡ ಜನರಿದ್ದಾರೆ. ತಮ್ಮಲ್ಲಿಯ 10-20 ಗಿಡಗಳಿಂದಾದ ಈ ಖರ್ಜೂರ ಹಣ್ಣು-ಕಾಯಿಗಳನ್ನು ಸಮೀಪದ ಸಂತೆ ಊರಿಗೆ ಹೋಗಿ ಮಾರಿ ತಮಗೆ ಬೇಕಾದ ಸಾಮಾನುಗಳನ್ನು ಕೊಂಡು ಕೊಳ್ಳುವರು.
ಹೀಗೆ ಮಾರುವ ಸಣ್ಣ ಸಣ್ಣ ಮಾರಾಟಗಾರರಿಂದ ಪಟ್ಟಣ ವ್ಯಾಪಾರಿಗಳು ಬಂದು ತೆಗೆದುಕೊಳ್ಳುತ್ತಾರೆ. ಟ್ರಕ್ ತುಂಬಿಸುವದು, ಹಣ ಎಣಿಸುವದು, ಪಟ್ಟಣಗಳಿಗೆ ಕಳಿಸುವುದು. ಇದೂ ಒಂದು ಉದ್ಯೋವೇ ಸರಿ.

ಇತ್ತೀಚಿನ 5-6 ವರ್ಷಗಳಲ್ಲಿ ಮಶಿನರಿಗಳ ಮೂಲಕ ಹಣ್ಣು ಕಾಯಿ ಬೇರ್ಪಡಿಸುವದು, ಕೆಟ್ಟಿದ್ದರೆ ತೆಗೆಯುವದು ನಡೆದಿದೆ. ಮಣ್ಣು ಉಸುಕುಗಳು ಹತ್ತಿದ್ದರೆ ದೊಡ್ಡ ದೊಡ್ಡ ಬ್ಯಾರಲ್‌ಗಳಿಗೆ ಹಾಕುತ್ತಾರೆ. ಆಟೋಮೇಟಿಕ್ ನೀರಿನ ಬ್ಯಾರಲ್ ಕೂಡ ತಿರುಗುತ್ತದೆ. ಅದರೊಳಗಿನ ಹಣ್ಣುಗಳೆಲ್ಲ ನೀರಿನಿಂದ ತೊಳೆಯಲ್ಫಟ್ಟು ಮುಂದೆ ದೊಡ್ಡ ತಟ್ಟೆಯಲ್ಲಿ ಬರುತ್ತವೆ. ಅವಷ್ಟು ವಿದ್ಯುತ್ತಿನ ಬಿಸಿ ಗಾಳಿಯಿಂದ ಒಣಗಿಸಿ ಮುಂದಿನ ದೊಡ್ಡ ಬ್ಯಾರಲ್‌ನಲ್ಲಿ ಸಕ್ಕರೆ ರಸ ಇನ್ನಿತರ ಸಾಮಗ್ರಿಗಳಲ್ಲಿ ಮುಳುಗಿಸಿ ಅರ್ಧಗಂಟೆವರೆಗೆ ಬ್ಯಾರಲ್ ತಿರಗಿಸುವದು. ನಂತರ ಅವೆಲ್ಲ ಬಿಡಿ ಬಿಡಿಯಾಗಿ ರಸಾಯನ ಗಟ್ಟಿಯಾಗಿ ಅಂಟಿಕೊಂಡ ನಂತರ ಮಶೀನ್ ತನ್ನಷ್ಟಕ್ಕೆ ನಿಲ್ಲುವುದು. ನಂತರ ಮುಂದೆ ಬಂದು ದೊಡ್ಡ ಟ್ರೇದಲ್ಲಿ ಸುರಿಯುತ್ತಿದ್ದಂತೆ ಪ್ಯಾಕೇಟ್ ಪಾಕೀಟುಗಳು. ದೊಡ್ಡ ದೊಡ್ಡ ಡಬ್ಬಗಳು ತುಂಬುವವು. ಹಾಗೇ ಪಾಕೀಟುಗಳು ಮುಂದೆ ಬರುತ್ತಿದ್ದಂತೆ ಸೀಲ್ ಆಗಿ ಕಂಪನಿ ಹೆಸರು ಹೊಡೆದುಕೊಂಡು ಹೊರಬೀಳುತ್ತವೆ. ನಂತರ ಲೋಕಲ್ ಮತ್ತು  ಎಕ್ಸ್‌ಪೊರ್ಟ್‌ ವಿಭಾಗಗಳಿಗೆ ಈ ಪಾಕೀಟುಗಳು ಹೋಗಿಬಿಡುವವು.

ಈ ಖರ್ಜೂರ ಗಿಡಗಳಲ್ಲಿ ಎರಡು ವರ್ಗಗಳಿವೆ. ಒಂದು ಒಳ್ಳೆಯ ಜಾತಿ ಹಣ್ಣು ಸಾಕಷ್ಟು ಸಿಹಿ ಇದ್ದು ಸಾಕಷ್ಟು ಗೊಂಚಲಗಳು ಬಿಡುತ್ತವೆ. ಮತ್ತೊಂದು ಸಾಧಾರಣವಾಗಿದ್ದು ಎಲ್ಲವೂ ಅಷ್ಟಕ್ಕಷ್ಟೇ ಹೊಂದಿರುತ್ತದೆ. ಇವುಗಳ ಜೊತೆಗೆ
ನೂರಾರು ಜಾತಿಯ ಖರ್ಜೂರ ಗಿಡಗಳಪು ಕಾಣಸಿಗುವವು. ಮುಖ್ಯವಾಗಿ ಹಣಕಾಸಿನಿಂದ ಪ್ರಸಿದ್ಧ ಪಡೆದ ಕೆಲವು ಜಾತಿಗಳೆಂದರೆ ಹದ್ರಾವಿ-ಹಲಾವಿ. ಹಸ್ತಾವಿ-ಹುಷಾಖಿಸಿ-ಖುಲಸ್- ರುಜೈಜ್, ಸಾಯಿರ್ ಮತ್ತು ಝಂಡಿ ಎನ್ನುವ ಅರೇಬಿಕ್ ಹೆಸರು ಹೊಂದಿರುವ ಖರ್ಜೂರ ಹಣ್ಣುಗಳು. ಇವೆಲ್ಲ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಾಣಸಿಗುವ ಒಳ್ಳೆ ಜಾತಿಯ ಹಣ್ಣುಗಳು.

ಇತ್ತೀಚಿನ 10 ವರ್ಷಗಳಲ್ಲಿ ಕೃಷಿಗೆ ಮಹತ್ವಕೊಟ್ಟು ಒಳ್ಳೇ ಜಾತಿಯ ಗಿಡಗಳೆನ್ನೇ ಹಚ್ಚಿ ಬೆಳೆತೆಗೆದುಕೊಳ್ಳುತ್ತಿದ್ದಾರೆ. 1930ರ ತೈಲ ಆಗರಕ್ಕಿಂತ ಮೊದಲು ಈ ವ್ಯಾಪಾರವೇ ಮುಖ್ಯ ಆದಾಯವಾಗಿತ್ತು. ಸಧ್ಯದ ಪ್ರಕಾರ ಸೌದಿ ಅರೇಬಿಯದಲ್ಲಿ ಸುಮಾರು 80 ಲಕ್ಷ ಖರ್ಜೂರ ಗಿಡಗಳಿವೆಯೆಂದು ಕೃಷಿ ಅಧಿಕಾರಿಗಳು ಅಂದಾಜು ಲೆಕ್ಕ
ಕೊಡುತ್ತಾರೆ.

ಒಟ್ಬಾರೆ ಈ ಓಯಾಸಿಸ್ ಸುತ್ತಮುತ್ತಲಿನ ಅಥವಾ ಖರ್ಜೂರ ಗಿಡಗಳಿರು ವಲ್ಲಿ ಬೆಳೆದಿರುವ ಜನವಸತಿಯ ಮುಖ್ಯ ಕಸುಬೆಂದರೆ ಈ ಗರಿಗಳಿಂದ ಸುಂದರ ಕರ ಕುಶಲದ ಕೆಲಸ ಮಾಡುವದು. ಈ ಗರಿಗಳಿಂದ ಬುಟ್ಟಿಗಳು, ಚಾಪೆ, ಅಗಲವಾದ ಟೊಪ್ಪಿಗೆ, ಪರ್ಸ್ ಇತ್ಯಾದಿ ನಮ್ಮ ಕಡೆಯ ಬಿದಿರಿನ ಬುಟ್ಟಿ-ಚಾಪೆಯಂತೆಯೇ ಕಾಣುವವು.

ಸರಿ ನಮ್ಮ ಪ್ರವಾಸದ ಹಾದಿಗೆ ಬರುತ್ತೇವೆ. ಮುಂದೆ ಬರುವದಿನ್ನೆಲ್ಲ ಸಮನಾದ ನೆಲ, ಎಲ್ಲೂ ತಗ್ಗುದಿನ್ನೆಗಳಿಲ್ಲ. ಕಾರು ಕೇವಲ 40-50 ಮೈಲು ವೇಗದಲ್ಲಿ ಅಷ್ಟೇ ಹೊಡೆಯಬೇಕೆಂದಿಲ್ಲ 120 ಕಿ.ಮೀ. ವೇಗದಲ್ಲೂ ಹೊಡೆಯ ಬಹುದು. ಅಂತೆಯೇ ಅಗಲವಾದ ರಸಸ್ತೆ ಎದುರಿಗೆ ದೃಷ್ಟಿ ಸಾಕಷ್ಟು ದೂರ ಹೋಗುವವರೆಗೆ ಇರುವ ನೀಟಾದ ರಸ್ತೆ ನೋಡಿ, ಗುತ್ತಿಯವರು 120 ದಾಟಿ 160-170 ಕಿ.ಮೀ. ವೇಗದಲ್ಲಿ ಹೊಡೆಯತೊಡಗಿದರು. ನನಗಂತೂ ಹೆದರಿಕೆ. ಹಿಂದೆಂದೂ ಇಷ್ಟು ವೇಗದಲ್ಲಿ ಹೊಡೆದಿಲ್ಲ, ಬಹುಶಃ ಮುಂದೆ ಕೂಡಾ ಇಷ್ಟು ಒಳ್ಳೆಯ ನೇರವಾದ ರಸ್ತೆಗಳು ಸಿಗದೇ ಹೊಡೆಯಲಾರೆನೆವನೋ ಎಂದು ಹೇಳಿ, ವಿಮಾನ ಮೇಲೀರುವ ವೇಗ ಕೂಡಾ ಇಷ್ಟು ಇರುತ್ತದೆಯೆಂದು ಸ್ವಲ್ಪ ಹೆಚ್ಹಿನ ಧ್ಯೆರ್ಯಮಾಡಿಕೊಂಡರೂ ನಾನು ಪೂರ್ತಿ ತಣ್ಣಗಾಗಿಹೋಗಿದ್ದೆ.

ಸ್ವಲ್ಪ ಹೊತ್ತಿನಲ್ಲಿಯೇ ಕೆಂಪು ಸಮುದ್ರ ಕಾಣಲು ಸುರುವಾಯಿತು. ಅಗಲೇ ಸಮುದ್ರ ಸಮಪಾತಳಿಗೆ ಬಂದಿದ್ದೆವು. ದೂರದ ಅಂಚಿನಲ್ಲಿ ವ್ಯಾಪಾರಿ ಹಡಗುಗಳು ಓಡಾಡುತ್ತಿದ್ದವು. ಈ ಕೆಂಪು ಸಮುದ್ರ ‘ಸೌದಿ ಅರೇಬಿಯ’ ಹಾಗೂ ‘ಎಮನ್’ ದೇಶಗಳ ದಂಟೆಗುಂಟ ಇರುವದರಿಂದ ಇಲ್ಲಿ ಸಾಕಷ್ಟು ವ್ಯಾಪಾರ ವ್ಯವಹಾರಗಳು ನಡೆದಿರುತ್ತವೆ. ‘ಅಭಾ’ದಿಂದ ಕೆಲವೇ ಮೈಲುಗಳಷ್ಟು ದಕ್ಷಿಣ ಭಾಗದ ಕಣಿವೆಯೊಳಗಿಂದ ಇಳಿದು ಹೋದರೆ ‘ಎಮನ್’ ದೇಶ ಸಿಗುವದು.

ಮಗ ಒಂದೇ ಸವನೇ ವಾಂತಿ ಮಾಡಿಕೊಂಡು ಹೊಡೆಯುತ್ತಿದ್ದ. ರಸ್ತೆ ಪಕ್ಕದಲ್ಲಿ ಸ್ವಲ್ಪ ಒಳಗಡೆ ಕಾಣಿಸಿದ ಒಂದು ದೊಡ್ಡ ಮುಳ್ಳಿನ ಗಿಡ (ಕ್ಯಾಕ್ಟಸ್) ನೋಡಿ ಸ್ವಲ್ಪ ನೆರಳಿಗೆ ನಿಲ್ಲಿಸಿ ಆರಾಮ ತೆಗದುಕೊಂಡರಾಯಿತೆಂದು ಗುತ್ತಿಯವರು ಕಾರು ಉಸುಕಿನಲ್ಲಿಯೇ ಜೋರಾಗಿ ಓಡಿಸಿ ಗಿಡದ ಕೆಳಗೆ ನಿಲ್ಲಿಸಿದರು. ಕಾರಿನಿಂದಿಳಿದು ಹೊರಗಡೆ ಹೆಜ್ಜೆ ಇಟ್ಟಾಗ ಬಿಸಿ ಗಾಳಿಯ ದಳ್ಳುರಿ ಅವರಿಸಿತು.

ನಾವೆಲ್ಲ ಅರ್ಧತಾಸು ಅಲ್ಲಿಯೇ ಸುತ್ತಮುತ್ತೆಲ್ಲ ಅಡ್ಡಾಡಿ ಕೇಕ್ ತಿಂದು, ಕೋಲ್ಡ್‌ಡ್ರಿಂಕ್ಸ್ ಕುಡಿದದ್ದಾಯ್ತು, ಉಸುಕು ತೂರಾಡಿದ್ದಾಯ್ತು, ಉಸುಕಿನಲ್ಲಿ ಸಿಕ್ಕ ಬಣ್ಣ ಬಣ್ಣದ ಹರಳುಗಳಷ್ಟು ಹುಡುಗರು ಸಂಗ್ರಹಿಸಿದರು. ಎಲ್ಲರೂ ಕಾರು
ಏರಿದ್ದಾಯ್ತು, ಇನ್ನೇನು ಹೊರಡಬೇಕೆಂದು ಕಾರು ಶುರುಮಾಡಿದರೆ ಕಾರು ಮುಂದೆ ಸರಿಯಲೇ ಇಲ್ಲ. ಗಾಲಿಗಳು ಆಗಲೇ ಸಾಕಷ್ಟು ಉಸುಕಿನ ಒಳಗೆ ಹೂತುಕೊಂಡು ಬಿಟ್ಟದ್ದವು. ಪ್ರಯತ್ನಿಸಿದರೂ ಒಂದಿಂಚೂ ಸರಿಯಲಿಲ್ಲ. ಮುಖ್ಯ ರಸ್ತೆಯಿಂದ ಸುಮಾರು 50-60 ಹಜ್ಜಿಗಳಷ್ಟು ಒಳಗಡೆ ಈ ಅವಾಂತರದಲ್ಲಿ ಸಿಕ್ಕಿಹಾಕಿಕೊಂಡೆವು.

ಮರುಭೂಬಮಿಯಲ್ಲಿ ಕಲ್ಲುಗಳಿರುವದಿಲ್ಲ ಅಷ್ಟಿಷ್ಟು ಸಣ್ಣ ಚಿಪ್ಪು, ರಸ್ತೆ ಬದಿಗೆ ಬಿದ್ದಿರುವ ಪ್ಲಾಯ್‌ವುಡ್ ತುಣುಕುಗಳು ಆರಿಸಿತಂದು ಗಾಲಿಯ ಕೆಳಗೆ ಹಾಕಿ ಓಡಿಸಬೇಕೆಂದರೂ ಪ್ರಯೋಜನವಾಗಲಿಲ್ಲ. ನಾವು-ಹುಡುಗರು ಗುದ್ದಾಡುವಡು ನೋಡಿ ಒಬ್ಬ ಸೌದಿ ಗ್ರಾಮೀಣಯುವಕ ಪಿಕ್ಅಪ್ ಓಡಿಸಿಕೊಂಡು ಸಹಾಯಕ್ಕೆ ಬಂದ. ಉಸುಕಿನಲ್ಲಿ ಸಿಕ್ಕು ಬಿದ್ದ ವಾಹನಗಳನ್ನು ಹೇಗೆ ಹೋರಹಾಕಬೇಕೆನ್ನುವದು ಅವನಿಗೆ ಗೊತ್ತಿರಬೇಕು. (ಮರುಭೂಮಿಯ ಅನುಭವ) ಪಾಪ ಅವನ ಬಲಗಾಲಿನ ಪಾದ ( ಕುಂಟ) ಪೂರ್ತಿ ಹೊರಳಿತ್ತು. ಇಳಿದು ಬಂದು ಏನೇನೋ ಮಾತಾಡಿದ ನಮಗೇನೂ
ತಿಳಿಯಲಿಲ್ಡ. ಕೊನೆಗೆ ತಾನೇ ಕಾರಿನ ಕೀ ಬೇಕೆಂದು ಕೈ ಮೂಲಕ ಹೇಳಿ ಕಾರು ಹೊರಗೆ ತೆಗೆಯುವದಾಗಿ- ಎಲ್ಲಾ ಮೂಕ ಸನ್ನೆಯ ಮುಖಾಂತರ ಏನೇನನ್ನೊ ಹೇಳುತ್ತ ಕಾರು ಸುರುಮಾಡಿದ. ಕಾರು ಹಿಂದೆ ಮುಂದೆ ಸಾಕಷ್ಟು ಸಲ ಮಾಡುತ್ತ ಉಸುಕಿನಿಂದ ಗಾಲಿ ಜರಿದು ಅಲ್ಲೇ ತಿರುಗದಂತೆ ಉಸುಕನ್ನು ಗಟ್ಟಿ ಮಾಡುತ್ತ ನಿಧಾನವಾಗಿ ಒಂದೊಂದೆ ಹೆಜ್ಜೆ ಮುಂದೆ ಸರಿಸುತ್ತ ರಸ್ತೆಗೆ ತಂದು ಹಚ್ಚಿದ. ನಮಗೆ ಬಹಳ ಖುಷಿಯಾಯಿತು. ಅವನಿಗೆ ಒಂದಕ್ಷರವೂ ಇಂಗ್ಲೀಷ್ ಗೊತ್ತಿರಲಿಲ್ಲ. ಏನೇನೋ ಹೇಳುತ್ತಲೇ ಇದ್ದ, ಕಾರಿನ ಕಡೆಗೆ ಕೈ ಮಾಡಿ. ಬಹುಶಃ ಮರುಭೂಮಿ ಗಳಲ್ಲಿ ಕಾರು ಸಿಕ್ಕು ಬಿದ್ದರೆ ಹೇಗೆ ತೆಗೆಯಬೇಕೆನ್ನುವ ಸಲಹೆಗಳೋ ಏನೋ ಅವನ ಈ ಕೃತಜ್ಞತೆಗೆ ನಾವು ಶುಕ್ರನ್ ಎಂದು 5-10 ಸಲ ಹೇಳಿದರೆ ಅವನಿಗೆ ಅದೆಷ್ಟೋ ಖುಷಿಯಾಯಿತು. ಕೊನೆಗೆ ನಮ್ಮಲ್ಲಿದ್ದ ಕೇಕ್ ಕೋಲಾಗಳನ್ನು ಕೊಟ್ಬಾಗ ಸಂಕೋಚ
ದಿಂದ ತೆಗೆದುಕೊಂಡು ಹೋದ. ಅರಬರು ಎಂದಾಕ್ಷಣ ಕೆಟ್ಟ ಜನ ಎಂಬ ಭಾವನೆ ಸಾಮಾನ್ಯವಾಗಿ ಎಲ್ಲರಿಗೂ ಇದೆ. ಅದರೆ ಅದು ತಪ್ಪು ಎನ್ನುವ ಅನಿಸಿಕೆ ನಾವಿದ್ದ 15 ವರ್ಷಗಳ ಅನುಭವದಲ್ಲಿ ಗೊತ್ತಾಗಿದೆ. ಒಳ್ಳೆಯವರು ಕೆಟ್ಟವರು ಎಲ್ಲ ಕಡೆಗೂ ಇರುವವರೇ , ನಾವು ಕೆಟ್ಟವರಾದರೆ ಅಂಥವರೇ ಸಿಗುತ್ತಾರೆ. ನಾವು ಒಳ್ಳೆಯವರಾದರೆ ಅಂಥವರೂ ಸಿಗುತ್ತಾರೆ. ಯಾವುದೋ ಎಲ್ಲಿಯವೊ ಘಟನೆಗಳನ್ನು ಓದಿ, ಕೇಳಿ ಅವರಿಗೆ ರಿಮಾರ್ಕ್ ಕೊಡುವದು ಸರಿಯಲ್ಲ. ಅವರು ಇಸ್ಲಾಮಿಕ್ ಚೌಕಟ್ಟನಲ್ಲಿರುವದ ರಿಂದ ಸ್ವಲ್ಫ ಏನಾದರೂ ತಪ್ಪಾದರೆ ಬೆಳಕಿಗೆ ಬರುತ್ತದೆ. ಅದರೆ ನಮ್ಮಲ್ಲಿ ಏನೆಲ್ಲ
ಬಹಿರಂಗವಾಗಿ ಮಾಡಿದರೂ ಮುಚ್ಚಿ ಹೋಗುತ್ತೆದೆ. ಇವಕ್ಕೆಲ್ಲ ಅನೇಕ ಕಾರಣಗಳೂ ಇವೆ. ಇಂದಿನ ರಾಜಕೀಯ ಅರ್ಥೈಯಿಸಿ ಕೊಂಡರೆ ಎಲ್ಲವೂ ತಾನಾಗಿಯೇ ಗೊತ್ತಾಗುತ್ತದೆ. ಹೆಚ್ಚಿನ ಚರ್ಚೆ ಇಲ್ಲಿ ಬೇಡ

ಅಂದಹಾಗೆ ನಾವು ಮತ್ತೆ ಕಾರು ಶುರುಮಾಡಿ ಹೊರಡಲನುವಾಗುವಾಗ ಸಮಯ ನೋಡುತ್ತೇವೆ ಆಗಲೇ 5 ಗಂಟೆ. ಈ 50-60 ಹೆಜ್ಜೆ ಅಂತರ ಕಾರು ಹೊಡೆಯುವಲ್ಲಿಯೇ ಸಮಯ ಹೋಗಿತ್ತು.

ಸಂಜೆ ಆರು ಗಂಟೆಯ ಸುಮಾರಿಗೆ ಮಕ್ಕಾ ಹೊರವಲಯದಿಂದ ದಾಟಿ ಜೆಡ್ಡಾ ಸಮೀಪಿಸಿದಾಗ ಮನಸ್ಸಿಗೆ ನೆಮ್ಮದಿಯಾಯ್ತು. ಆಗಲೇ ಎಲ್ಲಾ ಕಡೆಗೆ ಅಟೋಮೆಟಿಕ್ ಲೈಟ್‌ಗಳು, ಬೆಳಗತೊಡಗಿದ್ದವು. ದೂರದ ಮಸೀದೆಗಳ ಮೇಲಿಂದ ‘ಅಲ್ಲಾ ಹೋ ಅಕ್ಬರ್‌’ ಕೇಳಿಸತೊಡಗಿತು. ಸುಮಾರು ಒಂದು ತಾಸಿನ ಜೆಡ್ಡಾ ಗಜಿಬಿಜಿ ರಸ್ತೆ ದಾಟಿ ನಮ್ಮ ಕ್ಯಾಪಸ್‌ಗೆ ಬಂದಾಗ ಸಂಜೆ ಏಳೂವರೆ ದಾಟಿತ್ತು.

***

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಂಡೆಕೋಲಿನ ಪಾತಾಳ ಬಾಂಜಾರ
Next post ಎಲ್ಲಿದೆ ಧರ್ಮ

ಸಣ್ಣ ಕತೆ

 • ಆವರ್ತನೆ

  ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…

 • ನಿರೀಕ್ಷೆ

  ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

 • ಆನುಗೋಲು

  ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

 • ಆ ರಾತ್ರಿ

  ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…

 • ಯಿದು ನಿಜದಿ ಕತೀ…

  ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…