ಎಲ್ಲಿದೆ ಧರ್ಮ

ಧರ್ಮಾ ಧರ್ಮಾ ಅಂತಾರೋ ಎಲ್ಲಿದೆ ಧರ್ಮಾ ತೋರಿಸರೋ ||ಪ||
ನಮ್ಮದು ಧರ್ಮಾ ನಿಮ್ಮದು ಧರ್ಮಾ ಅವರದು ಧರ್ಮಾ ಅಂತಾರೆ
ಜನಗಳ ನಡುವೆ ಗೋಡೆಗಳೆಬ್ಬಿಸಿ ಆಗಸ ಕಾಣದೆ ನಿಂತಾರೆ ||೧||

ಕೊಂಬಿ ರೆಂಬಿಗಳ ಜೋತು ಬಿದ್ದು ಅವುಗಳೆ ಮರ ಮರ ಅಂತಾರೆ
ಬೊಡ್ಡೆಗೆ ಕೊಡಲಿ ಹಾಕುತಲಿದ್ದು ಕೊಂಬೆ ಚಿಗುರಿದವು ಅಂತಾರೆ ||೨||

ನೆಲದಲಿ ಹುಟ್ಟಿದ ಗಿಡಗಳ ಕಿತ್ತುತ ಅಂತರ ಬೆಂತರ ಬೆಳೆಸ್ಯಾರೆ
ಮಣ್ಣೂ ನೀರೂ ತುಳಿದೂ ಹಳಿದೂ ರೊಕ್ಕದಿ ಗಿಡಗಳ ಇಳಿಸ್ಯಾರೆ ||೩||

ಜೀವನ ಮೂಲದಿ ಹೊಮ್ಮಿದ ನಾದದ ಕೋಗಿಲೆ ಕೊರಳನು ಹಿಚಿಕ್ಯಾರೆ
ಸಮಗ್ರ ಬದುಕಿನ ಸುರ ಸಂಗೀತದ ತಂತು ತಂತುಗಳ ತಿರಿಚ್ಯಾರೆ ||೪||

ಬಯಲು ಆಲಯದ ಹಿಡಿಯದ ಲೀಲೆಯ ಗೂಡುಗಳಲಿ ಹಿಡಿದಿಟ್ಟಾರೆ
ಆಕಾರಿಲ್ಲದ ಅಗಮ್ಯ ಗೂಢಕೆ ತೋಚಿದ ಆಕೃತಿ ಕೊಟ್ಟಾರೆ ||೫||

ಹಾಲೂ ಇಲ್ಲಾ ಬಟ್ಟಲು ಇಲ್ಲಾ ಗೊಟಕ್ಕು ಪೂಜೆಯ ಮಾಡ್ಯಾರೆ
ವೇಷ ಮೋಸಗಳ ಕಳ್ಳ ಬಸಿರುಗಳು ಉಬ್ಬಿದ ಅಬ್ಬರ ಮೆರೆಸ್ಯಾರೆ ||೬||

ಝಣ ಝಣ ರೊಕ್ಕದ ಗಂಟೆ ಭೇರಿಗಳ ನಾದದ ಕೇಳುವ ಧರ್ಮಗಳು
ಹಸಿದ ಕೂಸುಗಳ ನೊಂದ ಜೀವಿಗಳ ಕೂಗು ಕೇಳದಾ ಕಿವುಡುಗಳು ||೭||

ಬಣ್ಣ ಬಟ್ಟೆಗಳು ಮಹಲು ಮೆರಗುಗಳು ಮಾತ್ರ ಕಾಣುವವು ಅವುಗಳಿಗೆ
ಹರಕು ಬಟ್ಟೆಗಳು ದುಡಿವ ರಟ್ಟೆಗಳು ಕಾಣದ ಕುರುಡಿದೆ ಅವುಗಳಿಗೆ ||೮||

***

ನಾಮಾ ವಿಭೂತಿಗಳಲ್ಲಿ ಇರುವುದೇ
ಜನಿವಾರ ಜುಟ್ಟುಗಳಲಿದೆಯೇ?
ಗುಡಿಗೋಪುರದಲಿ ಬಸದಿಯಲಿರುವುದೆ
ಮಸೀದಿ ಗೋಡೆಗಳೊಳಗಿದೆಯೇ? ||೯||

ಗುಡಿಗಳ ಒಳಗಿನ ಕಲ್ಲು ಲೋಹಗಳ
ವಿಧ ವಿಧ ವಿಗ್ರಹಗಳಲಿದೆಯೇ?
ನಾಮ ಪಠಣದಲಿ ಜಪಮಾಲೆಗಳಲಿ
ಯಜ್ಞ ಯಾಗಗಳಲಡಗಿದೆಯೇ? ||೧೦||

ಮಡಿಮೈಲಿಗೆಯಲಿ ವ್ರತನೇಮಗಳಲಿ
ಮೂಡ ಭಕ್ತಿಯಲಿ ಕುಳಿತಿದೆಯೇ?
ಊಹಾ ಮೃಗಜಲ ಪುರಾಣ ಕತೆಗಳ
ಶಾಸ್ತ್ರಗಳಡವಿಗಳೊಳಗಿದೆಯೇ? ||೧೧||

ಮಠಗಳ ಸಿಂಹಾಸನಗಳ ಮೇಲೆ
ಛತ್ರ ಚವರಿಗಳ ತಂಪಿನಲಿ
ಪಲ್ಲಕ್ಕಿಗಳಲಿ ಅಟ್ಟಹಾಸದಲಿ
ಮೆರೆಯುತಲಿದೆಯೇ ಸೊಂಪಿನಲಿ? ||೧೨||

****

ಎಲ್ಲಿದೆ ಧರ್ಮಾ ಯಾವುದು ಧರ್ಮಾ
ಏನದು ಧರ್ಮಾ ತೋರಿಸಿರೊ
ಬೆಳಕನು ಹರಡಲು ಹುಟ್ಟಿದ ಧರ್ಮವು
ಕತ್ತಲೆಯನೆ ಹಬ್ಬಿಸದಿರಲಿ ||೧೩||

ಜ್ಞಾನ ದೀವಿಗೆಯು ಮೌಢ್ಯ ಕಂದಕದಿ
ಉಸಿರು ಕಟ್ಟದೆಯೆ ಬದುಕಿರಲಿ
ಮಾನವರೆಲ್ಲರ ಕೂಡಿಸುವ ಬದಲು
ಭೇದಿಸಿ ಕೊಲ್ಲದ ಹಾಗಿರಲಿ
ಮಾನವತೆಯ ಆ ಮೂಲ ಬೇರಿನಲಿ
ತನ್ನಯ ಸಾರವ ಹೀರಿರಲಿ ||೧೪||
********

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಭಾ ಪ್ರವಾಸ
Next post ಫ್ರಿಜ್ ನ ಒಳ ಹೊರಗು

ಸಣ್ಣ ಕತೆ

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

  • ವಿಷಚಕ್ರ

    "ಚಂದ್ರು, ಒಳಗೆ ಬಾಮ್ಮ. ಮಳೆ ಬರುತ್ತೆ." ತಾಯಿ ಕೂಗಿದುದನ್ನು ಕೇಳಿ ಚಂದ್ರು ನಕ್ಕ. ಒಳಕ್ಕೆ ಬರುವುದಿರಲಿ, ಪಕ್ಕದ ಮನೆಯ ಹುಡುಗಿ ವೇದಳೊಂದಿಗೆ ಆಡುತ್ತಿದ್ದುದನ್ನು ನಿಲ್ಲಿಸಲೂ ಇಲ್ಲ. "ನೋಡೇ-ನಾನು… Read more…

  • ತಿಥಿ

    "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…

  • ಅಹಮ್ ಬ್ರಹ್ಮಾಸ್ಮಿ

    ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…