ವಿಜಯ ವಿಲಾಸ – ಚತುರ್ಥ ತರಂಗ

ವಿಜಯ ವಿಲಾಸ – ಚತುರ್ಥ ತರಂಗ

ಇತ್ತಲಾ ವಿಜಯನು ರತ್ನ ಬಾಣದೊಡನೆ ಹಾರಿಹೋದ ಹದ್ದನ್ನು ಹುಡುಕಿಕೊಂಡು ಹೊರಟು, ಅದರ ಮೈಯಿಂದ ತೊಟ್ಟಿಕ್ಕಿದ್ದ ರಕ್ತದ ಗುರುತುಗಳನ್ನು ಅನುಸರಿಸಿ ಅದು ಹೋದ ಮಾರ್ಗವನ್ನು ಹಿಡಿದು ಬಹು ದೂರ ಹೋದನು. ಆದರೂ ಹದ್ದಿನ ನೆಲೆಯು ಮಾತ್ರ ತಿಳಿಯಲೇ ಇಲ್ಲ. ಹೀಗೆ ಅರಣ್ಯದಲ್ಲಿ ಬಹುದೂರ ಪ್ರಯಾಣಮಾಡಿ ಮಧ್ಯಾಹ್ನಾಯಾಸವನ್ನು ಕಳೆಯಲು ವಿಶ್ರಮಿಸಿಕೊಳ್ಳಬೇಕೆಂದು ಒಂದು ವಟವೃಕ್ಷದ ಬಳಿಗೆ ಬಂದನು. ಅಷ್ಟರಲ್ಲಿಯೇ, ಆಜಾನುಬಾಹುಗಳಾಗಿಯೂ, ಭಯಂಕರಾಕಾರರಾಗಿಯೂ ಇದ್ದ ಇಬ್ಬರು ಪುರುಷರು, ರೆಕ್ಕೆಗಳುಳ್ಳ ಒಂದು ದಿವ್ಯವಾದ ಕುದುರೆಯ ತಲೆಯನ್ನೊಬ್ಬನೂ, ಬಾಲವನ್ನೊಬ್ಬನೂ ಹಿಡಿದೆಳೆಯುತ್ತ, ಜಗಳವಾಡುತ್ತ ಸ್ವಲ್ಪ ದೂರದಲ್ಲಿ ಬರುತ್ತಿರುವುದನ್ನು ಕಂಡನು. ಈ ಸಮಯದಲ್ಲಿ ತಾನು ಇವರೊಡನೆ ಮಾತನಾಡಿ ತನ್ನ ಕಾರ್ಯಕ್ಕೆ ಸೌಕರ್ಯವನ್ನು ಕಲ್ಪಿಸಿಕೊಳ್ಳಲು ಸಾಧ್ಯವಾದೀತೇ ಎಂದಾಲೋಚಿಸುತ್ತ ಮುಂದೆ ಬೇಗನೆ ಬಂದು ಇಬ್ಬರಿಗೂ ಕೈಮುಗಿದು, “ಮಹಾಪುರುಷರಿರಾ! ನಿಮ್ಮಿಬ್ಬರನ್ನೂ ನೋಡಿದರೆ ಅದ್ಭುತ ಸಾಹಸಿಗಳಾದ ಮಹಾನುಭಾವರಂತೆ ಕಾಣುವಿರಿ. ನೀವುಗಳು ಈ ರೀತಿಯಾಗಿ ಈ ಕುದುರೆಯನ್ನು ಹಿಡಿದೆಳೆದಾಡುತ್ತ ಬರಲು ಕಾರಣವೇನು? ದಯೆಯಿಟ್ಟು ತಿಳಿಸಿದರೆ ನಿಮ್ಮ ಜಗಳವನ್ನು ಸಾಧ್ಯವಾದರೆ ನಾನು ನ್ಯಾಯವಾಗಿ ತೀರಿಸುವೆನು” ಎಂದನು. ವಿಜಯನ ಗಂಭೀರಾಕಾರದಿಂದಲೂ, ನಯವಾದ ಭಾಷಣದಿಂದಲೂ ಇವನನ್ನು ನೋಡಿದೊಡನೆಯೇ ಆ ಪುರುಷರಿಬ್ಬರಿಗೂ ಇವನಲ್ಲಿ ಪ್ರೀತಿ ಗೌರವಗಳುಂಟಾದುವು. ಅದರಿಂದ ಇವನ ಮಾತಿಗೆ ಸಂತೋಷದಿಂದ ಸಮ್ಮತಿಸಿ, ಅವರಲ್ಲಿ ಒಬ್ಬನು ತಮ್ಮ ಜಗಳದ ವೃತ್ತಾಂತವನ್ನು ಈ ರೀತಿಯಾಗಿ ಹೇಳಿದನು. “ಎಲೈ ಸೌಮ್ಯಾಕಾರನೇ! ನಾವು ಇಲ್ಲಿಗೆ ಹತ್ತು ಯೋಜನ ದೂರದಲ್ಲಿರುವ ಕ್ರೌಂಚ ದ್ವೀಪದಲ್ಲಿ ವಾಸಿಸುವ ಕುಂಭ ನಿಕುಂಭರೆಂಬ ರಾಕ್ಷಸರು. ನಾವಿಬ್ಬರೂ ಮಲಯಪರ್ವತ ಪ್ರಾಂತ್ಯದಲ್ಲಿ ಪರಮಶಿವನನ್ನು ಕುರಿತು ಉಗ್ರತಪಸ್ಸನ್ನಾಚರಿಸಿದೆವು. ನಮ್ಮ ತಪಸ್ಸಿಗೆ ಮೆಚ್ಚಿ ಶಂಕರನು ವಾಯು ವೇಗವುಳ್ಳ ಕಾಮಗಾಮಿಯಾದ ಈ ಅಶ್ವವನ್ನು ನಮ್ಮ ವಶಕ್ಕೆ ಕೊಟ್ಟು ಇದನ್ನು ಹತ್ತಿ ಯಾವ ಸ್ಥಳಕ್ಕೆ ಹೋಗಬೇಕೆಂದು ಬಯಸಿದರೆ ಆ ಸ್ಥಳಕ್ಕೆ ಕರೆದುಕೊಂಡು ಹೋಗುವುದು. ನಿಮ್ಮಿಬ್ಬರಲ್ಲಿ ಯಾವನು ಹೆಚ್ಚು ಬಲ ಶಾಲಿಯೋ ಅವನು ಇದನ್ನು ತೆಗೆದುಕೊಳ್ಳಬಹುದು” ಎಂದು ಹೇಳಿ ಅಂತರ್ಧಾನನಾದನು. ಇದರಿಂದ ನಾವುಗಳು ಇದನ್ನು ಈ ರೀತಿಯಾಗಿ ಹಿಡಿದುಕೊಂಡಿದ್ದೇವೆ ಎಂದನು. ಅದಕ್ಕೆ ವಿಜಯನು ಮನಸ್ಸಿನಲ್ಲಿ ತಮ್ಮ ತಂದೆಯ ತಪಸ್ಸಿನ ಕಥೆಯನ್ನು ಸ್ಮರಿಸಿಕೊಂಡು ಲೋಕರಕ್ಷಕನಾದ ಶಂಕರನು ದುಷ್ಟ ಶಿಕ್ಷಣಾರ್ಥವಾಗಿ ಇಂತಹ ವರಗಳನ್ನು ಕರುಣಿಸುವನೆಂದಾಲೋಚಿಸಿ ಅವರನ್ನು ಕುರಿತು, “ಅಯ್ಯಾ! ಮಹಾ ತಪಸ್ವಿಗಳಾಗಿ ಮಹಾದೇವನ ಅನುಗ್ರಹಕ್ಕೆ ಪಾತ್ರರಾಗಿರುವ ನಿಮಗೆ ಅಲ್ಪನಾದ ನಾನು ಏನನ್ನು ಹೇಳುವುದಕ್ಕೂ ಶಕ್ತನಲ್ಲ. ಆದರೂ ನಾನು ಹೇಳುವಂತೆ ನೀವು ನಡೆದರೆ ನಿಮ್ಮ ಜಗಳವು ಕ್ಷಿಪ್ರದಲ್ಲಿಯೇ ಪರ್‍ಯವಸಾನ ಹೊಂದುವುದು. ಹೇಗೆಂದರೆ, ನೀವಿಬ್ಬರೂ ಈ ಕುದುರೆಯನ್ನು ಇಲ್ಲಿ ನಿಲ್ಲಿಸಿ, ಇಲ್ಲಿಗೆ ಸುಮಾರು ಇನ್ನೂ ರು ಗಜಗಳ ದೂರದಲ್ಲಿ ಕಾಣುವ ಆ ವಟವೃಕ್ಷವನ್ನು ಮುಟ್ಟಿ ಮತ್ತೆ ಓಡಿ ಬನ್ನಿ, ಯಾರು ಮೊದಲು ಬರುವಿರೋ ಅವರೇ ಹೆಚ್ಚು ಶಕ್ತಿವಂತರೆಂದು ವ್ಯಕ್ತವಾಗುವುದರಿಂದ ಅವರೇ ಆ ಕುದುರೆಯನ್ನೇರಿ ಹೊರಟು ಹೋಗಿರಿ. ಇದರಿಂದ ನಿಮ್ಮ ಬಲವೂ ವ್ಯಕ್ತವಾದಂತಾಗುವುದು. ಸುಲಭವಾಗಿ ವ್ಯಾಜ್ಯವೂ ತೀರ್ಮಾನವಾಗುವುದು” ಎಂದನು. ಮದಾಂಧರಾದ ರಾಕ್ಷಸರಿಬ್ಬರೂ ಆಗಬಹುದೆಂದು ಬಹಳ ಸಂತೋಷದಿಂದ ಸಮ್ಮತಿಸಿ, ಕುದುರೆಯನ್ನು ವಿಜಯನ ಬಳಿಯಲ್ಲಿ ನಿಲ್ಲಿಸಿ, ತಾವಿಬ್ಬರೂ ದೂರದಲ್ಲಿರುವ ವಟವೃಕ್ಷದ ಬಳಿಗೆ ಓಡಿಹೋದರು. ಅವರು ಹಿಂದುಮುಖನಾಗಿ ಓಡುತ್ತ ಆ ವೃಕ್ಷದಬಳಿ ಸೇರುವಷ್ಟರಲ್ಲಿ ವಿಜಯನು ಕುದುರೆಯನ್ನೇರಿ, ರತ್ನ ಬಾಣ ವಿರುವ ಕಡೆಗೆ ನನ್ನನ್ನು ಕರೆದುಕೊಂಡು ಹೋಗು” ಎಂದನು. ಆ ಕ್ಷಣವೇ ಕುದುರೆಯು ಆಕಾಶಕ್ಕೇರಿ ವಾಯುವೇಗದಿಂದ ರತ್ನ ದ್ವೀಪದ ಮಾರ್ಗವಾಗಿ ಹೊರಟಿತು. ವಟವೃಕ್ಷದ ಬಳಿಯನ್ನು ಸೇರಿ ಕುಂಭ ನಿಕುಂಭರಿಬ್ಬರೂ ಹಿಂದಿರುಗಿ ನೋಡಿ, ಕುಂಭಗಳಂತಿದ್ದ ತಮ್ಮ ಹೊಟ್ಟೆಗಳನ್ನು ಚೆಚ್ಚಿಕೊಂಡು, “ಅಯ್ಯಯ್ಯೋ! ದುಷ್ಟನು ಎಂತಹ ಮೋಸ ಮಾಡಿದನು! ಅಯ್ಯೋ! ಇಬ್ಬರ ಜಗಳವು ಮೂರನೆಯವನಿಗೆ ಲಾಭವಾಯಿತಲ್ಲಾ!” ಎಂದು ದುಃಖಿಸುತ್ತ, ತಮ್ಮ ಅವಜ್ಞತೆಗಾಗಿ ಪಶ್ಚಾತ್ತಾಪಪಡುತ್ತ ವ್ಯಥೆಯಿಂದ ಜೋಲು ಮುಖಗಳನ್ನು ಹಾಕಿಕೊಂಡು ತಮ್ಮ ನಗರವನ್ನು ಕುರಿತು ಪ್ರಯಾಣಮಾಡಿದರು.

ವಿಜಯನು ದಿವ್ಯಾಶ್ವದ ಮೇಲೆ ವಾಯುವೇಗದಿಂದ ಪ್ರಯಾಣ ಮಾಡಿ ಸಂಧ್ಯಾಕಾಲಕ್ಕೆ ಆಗ್ನಿಶಿಖ ರಾಕ್ಷಸೇಂದ್ರನ ರಾಜಧಾನಿಯಾದ ರತ್ನಾವತಿಯ ಪ್ರಾಂತವನ್ನು ಸೇರಿ ನಗರದ ಹೊರಭಾಗದಲ್ಲಿ ಬಂದಿಳಿದನು. ಅನಂತರ ಕುದುರೆಯನ್ನು ಒಂದು ಪೊದರಿನ ಮರೆಯಲ್ಲಿ ಒಂದು ಮರಕ್ಕೆ ಕಟ್ಟಿಹಾಕಿ, ಅಲ್ಲಿಯೇ ಯಾರೂ ಕಾಣದಂತೆ ಸ್ವಲ್ಪ ಹೊತ್ತು ವಿಶ್ರಮಿಸಿ ಕೊಂಡಿದ್ದು ಕತ್ತಲಾದ ಒಡನೆಯೆ ಮೆಲ್ಲನೆ ನಗರವನ್ನು ಪ್ರವೇಶಿಸಿ, ಅರಮನೆಯ ಮಾರ್ಗವಾಗಿ ಹೋಗುತ್ತಿದ್ದನು. ಅಷ್ಟರಲ್ಲಿಯೇ ಪದ್ಧತಿಯಂತೆ ಅರಮನೆಗೆ ಪುಷ್ಪಮಾಲೆಗಳನ್ನೂ, ಸುಗಂಧಲೇಪನಗಳನ್ನೂ ಅಣಿಮಾಡಿ ಕೊಂಡು ಹೋಗುತ್ತಿದ್ದ ಸರೋಜಿನಿ ಎಂಬ ಮಾಲೆಗಾತಿಯು ಇವನಿಗೆ ಗೋಚರಳಾದಳು. ಇವಳ ಸಹಾಯದಿಂದ ಈ ನಗರದ ವಿಚಾರಗಳನ್ನು ತಿಳಿದು ತನ್ನ ಕಾರ್ಯಸಾಧನೆಗೆ ಪ್ರಯತ್ನ ಮಾಡಬೇಕೆಂದುದ್ದೇಶಿಸಿ ವಿಜಯನು ಆಕೆಯ ಬಳಿಗೆ ಬಂದನು. ದಿವ್ಯವಸ್ತ್ರಾಭರಣ ಭೂಷಿತನಾಗಿ ನವಮನ್ಮಥನಂತೆ ಪ್ರಕಾಶಿಸುತ್ತಿದ್ದ ಇವನನ್ನು ನೋಡಿ ಸರೋಜಿನಿಯು ಆಶ್ಚರ್ಯಪರವಶಳಾಗಿ ಅವನನ್ನು ಕುರಿತು, “ಎಲೈ ಸುಕುಮಾರನೇ! ನೀನು ಯಾರು? ಹೊಸಬನಂತೆ ಕಾಣುವೆ? ನೀನು ಇಲ್ಲಿಗೆ ಬರಲೇನು ಕಾರಣ? ನೀನೇನು ಗಂಧರ್ವನೋ ; ಕಿನ್ನರನೋ? ಅಥವಾ ದಿಕ್ಪಾಲಕರಲ್ಲಿ ಒಬ್ಬನೋ ಯಾರು?” ಎಂದು ಪ್ರಶ್ನೆ ಮಾಡಿದಳು. ಆಗ ವಿಜಯನು ಆಕೆಗೆ ನಮಸ್ಕರಿಸಿ, “ತಾಯಿ! ನಾನು ಗಂಧರ್ವನೂ ಅಲ್ಲ, ಕಿನ್ನರನೂ ಅಲ್ಲ. ದಿಕ್ಪಾಲಕನೂ ಅಲ್ಲ. ನಾನೊಬ್ಬ ರಾಜಪುತ್ರನು. ಬೇಟೆಯಾಡುತ್ತ ಮಾರ್ಗತಪ್ಪಿ ಇಲ್ಲಿಗೆ ಬಂದಿರುವೆನು. ನಿನ್ನನ್ನು ನೋಡಿದರೆ ಬಹಳ ದಯಾವತಿಯಂತೆ ಕಾಣುವೆ. ಆದುದರಿಂದ ನನಗೆ ಈ ನಗರದಲ್ಲಿ ನಿಲ್ಲಲು ಒಂದೆರಡು ದಿನಗಳು ಆಶ್ರಯವನ್ನು ಕೊಟ್ಟು, ಈ ನಗರದಲ್ಲಿನ ವಿಶೇಷಗಳನ್ನು ತಿಳಿದುಕೊಳ್ಳಲು ಅವಕಾಶವನ್ನುಂಟುಮಾಡಿ ಕೊಡಬೇಕಾಗಿ ಬೇಡುತ್ತೇನೆ. ಇದೋ ನಿನ್ನ ಉಪಕಾರಕ್ಕಾಗಿ ಮೊದಲು ಈ ರತ್ನ ವಲಯವನ್ನು ತೆಗೆದುಕೋ” ಎಂದು ಹೇಳಿ ತನ್ನ ಕೈಯ್ಯಲ್ಲಿದ್ದ ರತ್ನ ವಲಯವನ್ನು ಅವಳಿಗೆ ಕೊಟ್ಟನು. ಮಾಲೆಗಾತಿಯು ಅತ್ಯಂತ ಸಂತೋಷದಿಂದ “ಅಯ್ಯಾ! ನಿನ್ನ ವೃತ್ತಾಂತವನ್ನು ಕೇಳಿ ಸಂತೋಷವಾಯಿತು. ಈ ನಗರವು ರತ್ನ ದ್ವೀಪಕ್ಕೆ ರಾಜಧಾನಿಯಾದ ರತ್ನಾವತಿಯು. ಇಲ್ಲಿಗೆ ಮಹಾ ಮಾಯಾವಿಯೂ ಕಾಮರೂಪಿಯೂ ಕ್ರೂರಶಾಸನನೂ ಆದ ಅಗ್ನಿಶಿಖನೆಂಬ ರಾಕ್ಷಸೇಂದ್ರನು ರಾಜನಾಗಿರುವನು. ಆತನು ಅಂತರಿಕ್ಷ ಮಾರ್ಗದಲ್ಲಿ ಗೃಧ್ರರೂಪದಿಂದ ಬರುತ್ತಿರುವಾಗ ಯಾರೋ ಹೊಡೆದ ಒಂದು ರತ್ನ ಖಚಿತವಾದ ಬಾಣವು ದೇಹದಲ್ಲಿ ನಟ್ಟು ಕೊಂಡು ಕೀಳಲು ಬಾರದೆ ಇದೆ. ಈ ಬಾಧೆಯಿಂದ ಆತನು ಬಹಳವಾಗಿ ನರಳುತ್ತಿರುವನು. ವೈದ್ಯರು ಚಿಕಿತ್ಸೆ ಮಾಡುತ್ತಿರುವರು. ಆತನು ಬಹಳ ದಿನಗಳ ಹಿಂದೆ ಯಾವುದೋ ದೇಶದಿಂದ ಹೊತ್ತು ತಂದಿರುವ ಚಂದ್ರಲೇಖೆ ಎಂಬ ರಾಜಪುತ್ರಿಯು ಬಾಲ್ಯದಿಂದಲೂ ಆತನ ಬಳಿಯಲ್ಲಿಯೇ ಬೆಳೆದು, ಆತನನ್ನೇ ತಂದೆಯೆಂದು ಭಾವಿಸಿಕೊಂಡು ಉಪಚರಿಸುತ್ತಿರುವಳು. ಆಕೆಯ ಸೌಂದರ್ಯವನ್ನು ನಾನು ಅಷ್ಟಿಷ್ಟೆಂದು ಬಣ್ಣಿಸಲಾರೆನು. ಆಕೆಯೊಬ್ಬಳು ಬಳಿಗೆ ಹೋದರೆ ಸೌಮ್ಯನಾಗಿ ಮಾತನಾಡುವನು, ಇತರರು ಹೋದರೆ ಬಾಧೆಯ ಕೋಪದಿಂದ ಅವರ ಮೇಲೆ ರೇಗಿರೇಗಿ ಬೀಳುವನು. ಹೀಗೆ ಮಿತಿಮೀರಿದ ಬಾಧೆಯಿಂದ ಅಗ್ನಿಶಿಖನು ನರಳುತ್ತಿರುವನು. ಆತನ ಅರಮನೆಯೂ ವೈಭವವೊ ನೀನು ನೋಡತಕ್ಕುವಾಗಿರುವುವು” ಎಂದಳು. ರತ್ನ ಬಾಣವು ರಾಕ್ಷಸೇಂದ್ರನ ದೇಹದಲ್ಲಿ ನೆಟ್ಟಿರುವದೆಂಬ ವಾರ್ತೆಯನ್ನು ತಿಳಿದೊಡನೆಯೇ ಬಹಳ ಸಂತೋಷಪಟ್ಟು ವಿಜಯನು ಹೇಗಾದರೂ ತನ್ನ ಕಾರ್ಯವನ್ನು ಸಾಧಿಸಿಕೊಂಡೇ ಹೋಗಬೇಕೆಂದು ಮನಸ್ಸಿನಲ್ಲಿ ನಿರ್ಧರಿಸಿಕೊಂಡು ಮಾಲೆಗಾತಿಯನ್ನು ನೋಡಿ, “ತಾಯಿ! ನಿನ್ನಿಂದ ಈ ವಿಚಾರಗಳನ್ನು ತಿಳಿದು ಬಹಳ ಸಂತೋಷವಾಯಿತು. ನೀನು ಯಾರು? ನಿನ್ನ ವೃತ್ತಾಂತವೇನು? ದಯೆಯಿಟ್ಟು ತಿಳಿಸಬೇಕು” ಎಂದು ಕೇಳಲು ಆಕೆಯು “ಅಯ್ಯಾ! ನಾನು ಅರಮನೆಗೆ ಸುಗಂಧದ್ರವ್ಯಗಳನ್ನೂ ಪುಷ್ಪಮಾಲಿಕೆಗಳನ್ನೂ ಒದಗಿಸಿ ಕೊಡುವ ಸೈರಂದ್ರಿಯು. ಪದ್ಧತಿಯಂತೆ ಈ ದಿನ ರಾಜಪುತ್ರಿಗಾಗಿ ಮಾಲೆಗಳನ್ನೂ, ಅನುಲೇಪನಗಳನ್ನೂ ತೆಗೆದುಕೊಂಡು ಹೋಗುತ್ತಿರುವೆನು” ಎಂದಳು. ಅದಕ್ಕೆ ವಿಜಯನು, “ತಾಯಿ! ನೀನು ನನಗೆ ದೊರೆತುದು ಮಹಾನಿಧಿಯು ದೊರೆತಂತಾಯಿತು. ಹಾಗೆಯೇ ಅರಮನೆಯಲ್ಲಿ ನನಗೆ ಯಾರನ್ನಾದರೂ ಪರಿಚಯಮಾಡಿಸುವುದರಲ್ಲಿ ಆಕ್ಷೇಪಣೆಯುಂಟೇ?” ಎಂದನು. ಅದಕ್ಕೆ ಆ ಸೈರಂದ್ರಿಯು, “ರಾಜಕುಮಾರಾ! ನಿನ್ನಂತಹ ರಾಜಪುತ್ರನ ಪರಿಚಯವನ್ನು ಅರಮನೆಯ ಜನರಿಗೆ ಮಾಡಿಸುವುದರಲ್ಲಿ ಆತಂಕವೇನು? ನಾಳಿನದಿನ ಪ್ರಯತ್ನಿಸಿ ನೋಡುವೆನು. ಈಗ ಬಾ ನಮ್ಮ ಮನೆಗೆ ಹೋಗೋಣ” ಎಂದು ಹೇಳಿ ಅವನನ್ನು ಕರೆದುಕೊಂಡು ತನ್ನ ಮನೆಗೆ ಹಿಂದಿರುಗಿ ಬಂದು ಆತನಿಗೆ ವಿಶ್ರಮಿಸಿಕೊಳ್ಳುವಂತೆ ಹೇಳಿ ತಾನು ಅರಮನೆಗೆ ಹೋದಳು,

ಮಾಲೆಗಾತಿಯು ಕಾಲಕ್ಕೆ ಬರಲಿಲ್ಲವೆಂದು ಅರಮನೆಯಲ್ಲಿ ರಾಜಪುತ್ರಿಯು ನಿರೀಕ್ಷಿಸಿಕೊಂಡಿರುವ ಸಮಯಕ್ಕೆ ಸರೋಜಿನಿಯು ಗಂಧ ಪುಷ್ಪಾದಿಗಳೊಡನೆ ಅಂತಃಪುರವನ್ನು ತಲಪಿದಳು. ಆಗ ರಾಜಪುತ್ರಿಯು ಈ ದಿನ ವಿಳಂಬವಾದುದಕ್ಕೆ ಕಾರಣವೇನೆಂದು ಕೇಳಲು, ಸರೋಜಿನಿಯು ವೇದವತೀ ನಗರದ ರಾಜಕುಮಾರನು ಮಾರ್ಗತಪ್ಪಿ ಬಂದು ತನ್ನ ಮನೆಯಲ್ಲಿ ಇಳಿದಿರುವನೆಂತಲೂ, ಆತನು ಮಾರ್ಗದಲ್ಲಿ ತನ್ನನ್ನು ಸಂಧಿಸಿ ಮಾತನಾಡುತ್ತಿದ್ದ ಕಾರಣ ತಾನು ಬ್ರುವುದು ವಿಳಂಬವಾಯಿತೆಂತಲೂ ಆತನ ವೃತ್ತಾಂತವನ್ನು ವಿವರಿಸಿ ಹೇಳಿ, ಕ್ಷಮಿಸಬೇಕಾಗಿ ಬೇಡಿಕೊಂಡಳು. ರಾಜಕುಮಾರಿಯು ವೇದವತೀನಗರವೆಂದೊಡನೆಯೇ ಸಂತೋಷಪಟ್ಟು, “ಅಮ್ಮಾ! ವೇದವತೀನಗರದ ರಾಜನ ತಂಗಿಯೇ ನಮ್ಮ ತಾಯಿಯೆಂತಲೂ, ನಮ್ಮ ಜನಕ ತಂದೆಯು ಅಗ್ನಿಶಿಖ ರಾಕ್ಷಸೇಂದ್ರನೊಡನೆ ಯುದ್ಧ ಮಾಡಿ ಮೃತನಾಗಲು, ನನ್ನನ್ನು ಒಬ್ಬ ದಾದಿಯ ವಶದಲ್ಲಿ ಬಿಟ್ಟು ನಮ್ಮ ತಾಯಿಯು ಅಗ್ನಿ ಪ್ರವೇಶಮಾಡಿದಳೆಂತಲೂ, ಆಗ ಈತನು, ಶಿಶುವಾಗಿದ್ದ ನನ್ನನ್ನು ಬಲಾತ್ಕಾರದಿಂದ ಆ ದಾದಿಯ ಕೈಯಿಂದ ಕಿತ್ತು ತೆಗೆದುಕೊಂಡು ಬಂದನೆಂತಲೂ ನಮ್ಮ ವೃದ್ದ ಪರಿಚಾರಿಣಿಯರಲ್ಲಿ ಒಬ್ಬಳಾದ ಶಾಂತಮತಿಯು ಹೇಳುತ್ತಿದ್ದಳು. ನೀನು ಹೇಳುವ ರಾಜಕುಮಾರನ ವಿಷಯವನ್ನು ಕೇಳಿದರೆ ಆತನು ನಮ್ಮ ಸೋದರಮಾವನ ಮಗನೆಂದು ತೋರುವುದು. ಹೇಗಾದರೂ ನೀನು ನನಗೆ ಆತನ ದರ್ಶನವನ್ನು ಮಾಡಿಸಬೇಕು” ಎಂದು ಬಹಳವಾಗಿ ಬೇಡಿಕೊಂಡಳು. ಸರೋಜಿನಿಯು ಸಂತೋಷಪಟ್ಟು, “ನೀನು ಚಿಂತಿಸಬೇಡ, ನಾಳಿನದಿನ ಸಂಧ್ಯಾಕಾಲಕ್ಕೆ ನೀನು ಉದ್ಯಾನದಲ್ಲಿರುವೆಯಷ್ಟೆ! ಅಲ್ಲಿಗೆ ನಾನು ಆತನನ್ನು ಕರೆತರುವೆನು” ಎಂದಳು. ಆಗ ರಾಜಪುತ್ರಿಯು ದೈವಾನುಗ್ರಹದಿಂದ ತನಗೆ ಬಂಧವಿಮೋಚನೆಯ ಕಾಲವು ಸಮೀಪಿಸಿತೆಂದಾಲೋಚಿಸಿ ಆ ವಾರ್ತೆಯನ್ನು ಹೇಳಿದ ಸೈರಂಧಿಗೆ ಪಾರಿತೋಷಿಕವನ್ನು ಕೊಟ್ಟು ಕಳುಹಿಸಿದಳು.

ಸರೋಜಿನಿಯು ಮನೆಗೆ ಬಂದು ಅರಮನೆಯಲ್ಲಿ ನಡೆದ ವೃತ್ತಾಂತವೆಲ್ಲವನ್ನೂ ವಿಜಯನಿಗೆ ತಿಳಿಸಿ, “ನಾಳಿನದಿನ ಸಂಧ್ಯಾಕಾಲದಲ್ಲಿ ನೀನು ರಾಜ ಪುತ್ರಿಯಾದ ಚಂದ್ರಲೇಖೆಯನ್ನು ಕಾಣಬೇಕು” ಎಂದು ಹೇಳಿದಳು. ಅದನ್ನು ಕೇಳಿದೊಡನೆಯೇ ವಿಜಯನು ಪರಮಾನಂದಭರಿತನಾಗಿ ಆ ರಾತ್ರಿಯನ್ನು ಕುತೂಹಲದಿಂದ ತನ್ನ ವಿಜಯಾಲೋಚನಗಳಿಂದಲೇ ಕಳೆದನು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಶೂನ್ಯದ ಮೋಹ
Next post ಕಾಡಿನಲ್ಲಿ….

ಸಣ್ಣ ಕತೆ

 • ಇನ್ನೊಬ್ಬ

  ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…

 • ಧರ್ಮಸಂಸ್ಥಾಪನಾರ್ಥಾಯ

  ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

 • ತ್ರಿಪಾದ

  ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

 • ನಿರೀಕ್ಷೆ

  ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

 • ಒಂದು ಹಿಡಿ ಪ್ರೀತಿ

  ತೆಂಗಿನ ತೋಟದಲ್ಲಿ ಬಾಗಿಕೊಂಡು ಹಣ್ಣಾಗಿ ಉದುರಿದ ಅಡಕೆಗಳನ್ನು ಒಂದೊಂದಾಗಿ ಹೆಕ್ಕಿ, ಸನಿಹದಲ್ಲಿದ್ದ ಪ್ಲಾಸ್ಟಿಕ್ ಚೀಲಕ್ಕೆ ತುಂಬಿಸುತ್ತಿದ್ದಂತೆ ಪಕ್ಕದಲ್ಲಿ ಸರಕ್ಕನೆ ಹರಿದು ಹೋದ ಕೇರೆ ಹಾವಿನಿಂದಾಗಿ ಒಮ್ಮೆ ವಿಚಲಿತರಾದರು… Read more…